ನನಗೆ ಕೈಕಾಲು ತಣ್ಣಗಾಯ್ತು..

 

 

 

ಪ್ರೀತಿ ನಾಗರಾಜ್

 

 

 

 

 

ಜಯಶ್ರೀ ಮೇಡಂ ಅವರ ಬಗ್ಗೆ ಹುಚ್ಚು ಸುದ್ದಿ ಹಬ್ಬಿದ ಮೊನ್ನೆಯ ದಿನ ಅವರು ಎಡಿಎ ರಂಗಮಂದಿರದಲ್ಲಿ ’ಕರಿಮಾಯಿ’ ನಾಟಕದ ಭರ್ಜರಿ ಪ್ರದರ್ಶನ ಕೊಡುತ್ತಾ ಹಾಯಾಗಿ ರಂಗದ ಮೇಲೆ ತಲ್ಲೀನರಾಗಿದ್ದರು.

ನಾನು ಮುಂಬೈಯಲ್ಲಿದ್ದೆ.

ಮದುವೆಗೆ ಹೋಗಲು ತಯಾರಾಗುತ್ತಿದ್ದೆ. ನನ್ನ ತಮ್ಮ ಪ್ರಕಾಶ (Prakash Doddagoudar) ಫೋನ್ ಮಾಡಿ ಈ ಥರ ಒಂದು ಸುದ್ದಿ ಇದೆ ಎಂದು ಧಾವಂತದಿಂದ ಹೇಳಿದ.

ನನಗೆ ಕೈಕಾಲು ತಣ್ಣಗಾಯ್ತು. ಒಂದು ನಿಮಿಷ ತಲೆ ಗಿರ್ರ್ ಅಂತು. ಆನಂದರಾಜು ಸರ್, ಸುಶ್ಮಾ ಕಣ್ಣ ಮುಂದೆ ಬಂದರು. ಯಾರಿಗೂ ಫೋನ್ ಮಾಡಲು ಧೈರ್ಯ ಸಾಲಲಿಲ್ಲ. ಇಂಟರ್ನೆಟ್ ಆನ್ ಮಾಡಿ ಸಂದೇಶಗಳನ್ನು ನೋಡಿದೆ. ಇದೊಂದು ಗಾಳಿ ಸುದ್ದಿ ಅಂತ ಖಚಿತವಾಯ್ತು. ತಮ್ಮನಿಗೆ ತಿಳಿಸಿ ನಿರಾಳವಾಗಿ ಮದುವೆಗೆ ಹೋದೆ. ಭರ್ಜರಿ ಊಟ ಆಯಿತು.

ಅತ್ತ ಕರಿಮಾಯಿ ನಾಟಕ ಚೆಂದಾಗಿ ಆಯಿತು ಅಂತ ತಿಳಿಯಿತು. ಮಾರನೇ ಬೆಳಗ್ಗೆ ಆನಂದರಾಜು ಸರ್ ಫೋನ್ ಮಾಡಿದರು. ಇಂಥಾ ಕೆಟ್ಟ ಮನಸ್ಸಿನ ಜನರ ಬಗ್ಗೆ ಬೇಸರ ಮಾಡಿಕೊಂಡರು.

“ಮೇಡಂ ಇಲ್ಲೇ ಇದ್ದಾರೆ ನೋಡು…” ಅಂತ ಅವರ ಕೈಗೆ ಪೋನ್ ಕೊಟ್ಟರು.

ಮೇಡಂ: “ಹಲೋ…ಬದುಕಿದ್ದೀನಿ ಕಣವ…”

ನಾನು: “ನಿಮಗೆ ತಮಾಷೆ…”

ಮೇಡಂ: “ವೂ ಮತ್ತೆ. ಇನ್ನೇನ್ ಮಾಡನ ಹೇಳು… ನೀನು ನಿಜ ಅಂದ್ಕಂಡ್ಯಾ”

ನಾನು: “ಯೋಚನೆ ಮಾಡಕ್ಕೆ ಸಾಧ್ಯ ಆದರೆ ತಾನೆ? ಕೈಕಾಲೆಲ್ಲಾ ಥಣ್ಣಗಾಯ್ತು…”

ಮೇಡಂ: “ಹಹಹಹಹ… ಸರಿ ಸರಿ…”

ನಾನು: “ಆಮೇಲೆ ಯಾರ್ಗೋ ಫೋನ್ ಮಾಡಿ ಕಾರ್ಡ್ ಮಾಡ್ಸಕ್ಕೆ ಕೊಟ್ಟೆ. ಈವತ್ತು ಡೆಲಿವರಿ ಕೊಡ್ತನೆ. ಈಗ ಏನ್ ಮಾಡದು? ಕಾರ್ಡ್ ವೇಸ್ಟ್ ಆಯ್ತಲ್ಲ..(ಹಹಹಹಹಹ) ನೀವ್ ನೋಡಿದ್ರೆ ಭರ್ಜರಿ ಶೋ ಕೊಟ್ಟಿದೀರಿ!”

ಮೇಡಂ: “ಹೌದು. ನಾಟ್ಕ ಚೆನ್ನಾಗಾಯ್ತು. ಕಾರ್ಡ್ ಇನ್ನೇನ್ ಮಾಡ್ತಿಯ. ಎಲ್ರುಗೂ ಕೊಟ್ಟಿರು. ಡೇಟ್ ಆಮೇಲೆ ಹೇಳ್ತಿನಿ ಅಂತ ಹೇಳು. ಹೆಗ್ಗಣ!!”ಇಬ್ರೂಊಊಊ ಫ಼ುಲ್ಲು ಹಹಹಹಹಹಹಹ ಅಂದ್ವಿ.

ಹೀಗೊಂದು ಭಯಾನಕ ಗಾಳಿಸುದ್ದಿಯ ಅಂತ್ಯ ನಗುವಿನೊಂದಿಗೆ ಆಯ್ತು.

ನೀವು ನೂರ್ಕಾಲ ಇರಬೇಕು. ನಲವತ್ತರ ಸಂಭ್ರಮ ನಿಮ್ಮ ಕರಿಮಾಯಿಗೆ. ಅವಳಿಗೆ ದೇವಿ ಈಗಷ್ಟೇ ಮೈದುಂಬಿದ್ದಾಳೆ. ನಡೆಯಬೇಕಾದ ದಾರಿ ಇನ್ನೂ ಬಹಳ ಇದೆ.

Leave a Reply