ಕ್ಷುಲ್ಲಕ ವಸ್ತುಗಳು : ಕಲಿಗಣನಾಥ ಗುಡದೂರು

 

 

 

ಕಲಿಗಣನಾಥ ಗುಡದೂರು

 

 

 

 

 

ತುಂಡು ಕಾಗದ

ನನಗೊತ್ತು. ಅಡ್ಡಾದಿಡ್ಡಿಯಾಗಿ ಹರಿದ ನನ್ನ ಮೈ ಕಂಡು ನಗುವಿರಿ. ಹೀಗೆ ಕಾಣಬೇಕೆಂಬ ಬಯಕೆಯಿರಲಿಲ್ಲ. ಯಾರದೊ ತಪ್ಪಿಗೆ ತಪ್ಪದ ಅವಮಾನ. ಪೂರ್ಣವಾಗಿದ್ದಾಗಲೂ ನೋಡಿದ್ದೀರಿ. ಅಂಗೈಯಲ್ಲಿ ನಾಜೂಕಿನಿಂದ ಹಿಡಿದು ಕೆಲಕಾಲ ಓದಿದಂತೆ ಮಾಡಿ, ಅಂಡು ಸುಡದಿರಲೆಂದು ಕೆಳಗೆ ಹಾಸಿಕೊಂಡಿರಿ. ಮುಂದೇನಾಯ್ತು ನಿಮಗೂ ಗೊತ್ತು. ನನ್ನ ಮೇಲೆ ಕುಳಿತಾಗ ನಾನೆಷ್ಟು ಹಿಂಸೆ ಪಟ್ಟೆನೊ? ಕ್ಷಣಕ್ಕೊಮ್ಮೆ ಅಂಡು ಸರಿಸುತ್ತಾ ಮೈಯ ಮೂಳೆ ಪುಡಿ-ಪುಡಿಯಾಗುವಂತೆ ಹಿಚುಕಿದಿರಿ. ಮಣಭಾರ ಸಹಿಸಿಯೂ ಕೆಲ ನಿಮಿಷಗಳಲ್ಲೆ ಮೈ, ಮುಖ ಎಲ್ಲಾ ಸುಕ್ಕುಗಟ್ಟಿ ಮುಪ್ಪು ಆವರಿಸಿದರೂ ಅದ್ಹೇಗೊ ಬದುಕಿದೆನಲ್ಲ. ನಿಮ್ಮಲ್ಲ್ಲಿ ಮೈಥುನದ ನಂತರದ ಖುಷಿ ಅಡರಿತ್ತು. ಮುಟ್ಟಿದರೆ ಮಾಸುತ್ತದೆ ಎಂಬಂತಿದ್ದ ಪ್ಯಾಂಟ್, ಗರಿ ಗರಿ ದೋತರಕ್ಕೆ ಕಿಂಚಿತ್ತೂ ಕಸ-ಕಡ್ಡಿ ಹತ್ತದಿದ್ದರೂ ಅದ್ಯಾಕೆ ಎದ್ದಾಗ ಜಾಡಿಸಿಕೊಂಡಿರಿ. ಪುಕ್ಕಟೆ ಸೇವೆಮಾಡಿದರೂ ಅಪಮಾನಮಾಡಿದಿರಿ ಎಂದು ನಿಮಗನ್ನಿಸಲಿಲ್ಲ.

ಎಲ್ಲಾ ಮನುಷ್ಯರದೂ ಇದೇ ಹಣೆಬರೆಹ. ದ್ವಂದ್ವ ನೀತಿ, ನಿಲುವು ಮತ್ತು ನಿಯಮ. ನನ್ನ ಮೈಯ ಯಾವ ಭಾಗದಲ್ಲಿ ಕುಳಿತಿದ್ದಿರಿ ಎಂಬುದು ನೆನಪಿರಲಿಕ್ಕಿಲ್ಲ. ಅಷ್ಟು ಸೂಕ್ಷ್ಮನೋಟ ನಿಮ್ಮದಾಗಿದ್ದರೆ ನಿಮ್ಮ ಕಣ್ಣಿಗೆ ನಿಮ್ಮವರಷ್ಟೆ ಅಲ್ಲದೆ ಬೇರೆ ಯಾರೂ ಕಾಣುತ್ತಿರಲಿಲ್ಲವೇಕೆ? ಬಲು ಕೆಟ್ಟಿನಿಸಿತು ನೀವು ಎದ್ದು ಹೋದ ಮೇಲೆ. ಬಾಸ್‍ಗೆ ಹೆಲ್ಪ್ ಮಾಡಿಯೂ ತಾನೇ ‘ಥ್ಯಾಂಕ್ಯೂ ಸರ್’ಎಂದು ವಿನಮ್ರನಾಗಿ ತನ್ನತನ ಮರೆತು ಹೇಳುವ ಕ್ಲರ್ಕ್ ಅಥವಾ ಜವಾನನ ಪಾಡು ನನ್ನದಾಯಿತು. ‘ಇರಲಿ ಬಿಡು…’ ಅಂತ ನಿಟ್ಟುಸಿರುಬಿಟ್ಟೆ.  ಅಂಡು ಸೀದಾ ಕುಳಿತಿದ್ದು ನಿಮ್ಮ ಪಕ್ಷದ ಮುಖಂಡನÀ ಭಾವಚಿತ್ರದ ಮೇಲೆ. ಆತ ಘೋಷಿಸಿದ ಭರಪೂರ ಭರವಸೆಗಳ ಮೇಲೆ. ಜಾತಿ, ಧರ್ಮದ ಹೆಸರಿನಲ್ಲಿ ಮನುಷ್ಯರ ಮಧ್ಯೆ ದ್ವೇಷದ ಕಿಚ್ಚು ಹೊತ್ತಿಸುವ, ಗುಡಿ ಗುಂಡಾರ ಮಸೀದಿ ಚರ್ಚುಗಳ ಹೆಸರಲ್ಲಿ ಜನರಿಗೆ ಮಂಕುಬೂದಿ ಎರಚುವ ಪಕ್ಷದ ನಾಯಕ. ಮಿಗಿಲಾಗಿ ಈ ರಾಜ್ಯದ ಮುಖ್ಯಮಂತ್ರಿ. 60 ವರ್ಷಗಳಲ್ಲಿ ಆಗದಷ್ಟು ಅಭಿವೃದ್ಧಿಯನ್ನು ವರ್ಷೊಪ್ಪತ್ತಿನಲ್ಲಿ ಸಾಧಿಸಿ ತೋರಿಸಿದ ಸಿದ್ದಲಿಂಗಪ್ಪನವರ ಅಂದ ಚೆಂದದ ಫೋಟೊದ ಮೇಲೆಯೇ ನೀವು ಕುಳಿತಿದ್ದು. ಸ್ವಲ್ಪ ಖುಷಿಯೆನಿಸಿತು.

ಎಷ್ಟು ಸೊಕ್ಕು, ದರ್ಪ ನಿಮ್ಮ ಮುಖಂಡರಿಗೆ! ತಮ್ಮಂತೆಯೇ ಇರುವ ಎಲುಬುಗೂಡಿನ ಮಂದಿಗೆ ಕಿಲುಬು ಕಾಸು ಕಿಮ್ಮತ್ತು ಕೊಡಲ್ಲ. ಅವರದು ಬರೀ ಕೆಸರೆರಚಾಟ. ನಿಮ್ಮಂತೆಯೇ ಕೂಗುವ, ಚೀರುವ, ಬಾಯಿ ಬಾಯಿ ಬಡಿದುಕೊಳ್ಳುವ ಸಿದ್ದಲಿಂಗಪ್ಪನ ಮೇಲೆ ಕುಳಿತು ಅವನನ್ನು ಹೀಗಾದರೂ ಮೆತ್ತಗೆ ಮಾಡಿದ್ದಕ್ಕೆ ನನ್ನಂತಾ ಕ್ಷುಲ್ಲಕ ವಸ್ತುಗಳ ಕಡೆಯಿಂದ ಕೃತಜ್ಞತೆಗಳು. ಹಿಂಬದಿ ಪುಟದಲ್ಲಿ ಈ ಊರಿನ ಜನ ಕುಡಿಯುವ ನೀರು, ರಸ್ತೆ, ಚರಂಡಿ, ಉದ್ಯೋಗ, ಸಮರ್ಪಕ ಕರೆಂಟ್‍ಗಾಗಿ ಒತ್ತಾಯಿಸಿ ಮಾಡಿದ ಚಳವಳಿಯ ಸುದ್ದಿ ಮತ್ತು ಫೋಟೊ ಇತ್ತು. ಅದನ್ನು ಕೆಳಗೆ ಹಾಕಿಕೊಂಡು ಕುಳಿತಿದ್ದುದಕ್ಕೆ ಖೇದವೆನಿಸಿತು. ಇದ್ದುದನ್ನು ಇದ್ದ ಹಾಗೆ ಹೇಳೊದೆ ನನ್ನ ಜಾಯಮಾನ. ನಿಮ್ಮ ಹಾಗೆ ನನಗೆ ಹಿಂದೆ ಮುಂದೆ ಮಾತನಾಡಲು, ಚಾಡಿ-ಚೂಡಿ ಹೇಳಲು ಬರೊಲ್ಲ. ತಪ್ಪು-ಒಪ್ಪುಗಳನ್ನು ಹಾಗೆ ಬಾಯಿಮುಚ್ಚಿಕೊಂಡು ಹೊಟ್ಟೆಯಲ್ಲಿ ಹಾಕಿಕೊಳ್ಳಬೇಕೆಂದರೆ ನನಗೆಲ್ಲಿದೆ ಹೊಟ್ಟೆ?

ಮುದುಡಿ ಸುಕ್ಕುಗಟ್ಟಿ ಮೇಲೇಳಲೂ ಆಗದೆ ದಣಿವಾರಿಸಿಕೊಳ್ಳಬೇಕೆಂದೆನಾದರೂ ಅದೆಲ್ಲಿತ್ತೊ ಬಿರುಗಾಳಿ ರೊಂಯನೆ ಬೀಸಿತು. ಆಕಾಶದಿಂದ ಸೀದಾ ಭೂಮಿಗೆ ಬಿದ್ದ ಅನುಭವ. ಮನೆ ಮುಂದಿನ ರಸ್ತೆಯ ಬದಿಯಲ್ಲೆ ಆ ಎರಡ್ಮೂರು ವರ್ಷದ ಹುಡುಗ ಥೇಟ್ ಬಾಹುಬಲಿಯಾಗಿ ತುದಿಗುಂಡಿಲೆ ಕುಳಿತಿದ್ದ. ಪ್ರತಿಕ್ಷಣವೂ ತಿಣುಕುತ್ತಿದ್ದ. ‘ಯವ್ವಾ’ ಅಂತ ಅದೆಷ್ಟು ಕರ್ಕಶವಾಗಿ ಕೂಗಿದ. ಅವನ ದನಿಗೆ ಬೆಚ್ಚಿ ಬಿದ್ದು ಉರುಳುರುಳಿ ಬಿದ್ದೆ. ಆ ಹುಡುಗನ ತಾಯಿ ಬಂದವಳೆ ಅಷ್ಟು ಇಷ್ಟು ಒಂದು ಆಕಾರದ ನನ್ನ ಮೇಲೆ ಕಾಲಿಟ್ಟು ಕೈಗೆ ಬಂದಷ್ಟು ಪರ್ರಂತ ಹರಿದುಕೊಂಡು ಬಿಟ್ಟಳು. ಅಂಗೈಗಿಂತ ಚೂರು ದೊಡ್ಡದಿದ್ದ ನನ್ನ ಜೀವದ ತುಣುಕನ್ನು ಮತ್ತೆ ಮತ್ತೆ ಚೂರು ಚೂರು ಮಾಡಿದಳು. ಯಾರ ಬಳಿ ಹೇಳಿಕೊಳ್ಳಬೇಕು? ಕಾಲಿಗೆ ಸ್ವಲ್ಪ ಮುಳ್ಳೊ, ಹರಳೊ ಚುಚ್ಚಿದರೆ, ‘ಯಪ್ಪೊ-ಯವ್ವೊ’ ಅಂತ ಚೀರುವ ಜನ ನನ್ನ ದೇಹವನ್ನೆ ಹೀಗೆ ತುಂಡು-ತುಂಡು ಮಾಡುವಾಗ ಒಂಚೂರಾದ್ರೂ ಅವರ ಜೀವ ಚುರ್ರೆನ್ನುವುದಿಲ್ಲವಲ್ಲ. ಪುಟ್ಟ ಬಾಹುಬಲಿಯನ್ನು ನೈಂಟಿ ಡಿಗ್ರಿ ಕೋನದಲ್ಲಿ ಬಗ್ಗಿಸಿ ನನ್ನ ಜೀವದ ತುಂಡುಗಳಿಂದ ಚೂರು ಚೂರೆ ಹೇಸಿಗೆ ತಿಕ್ಕಿ ಒರೆಸಿ ಅಲ್ಲೆ ಬೀಸಾಡಿದಳು. ಪಾಪ ತುಂಡುಗಳು ನನ್ನ ತುಂಡಾದ ದೇಹದ ಮೇಲೆ ದಬಾದಬಾ ಬಿದ್ದು ಮೈಗೆ ಹತ್ತಿದ್ದ ಹೇಸಿಗೆಯಿಂದ ಮುಖಕಿವುಚಿದವು. ಒಂದೆರಡು ನಿಮಿಷವಾದರೂ ನನ್ನ ಜೀವದ ತುಂಡುಗಳನ್ನು ಎದೆಗವಚಿಕೊಂಡು ಬಿಕ್ಕಿ ಬಿಕ್ಕಿ ಅತ್ತಾದರೂ ಸಂತೈಸಬೇಕೆಂದೆ. ಸಂಬಳದ ಜೊತೆಗೆ ಸಿಂಬುಳದಂತಾ ಗಿಂಬಳಕ್ಕಾಗಿ ಆಕಾಶದಗಲ ಬಾಯಿತೆರೆಯುವ ಸರ್ಕಾರಿ ಅಧಿಕಾರಿ ಎಂಬಂತಿದ್ದ ವಿಚಿತ್ರ ಸವುಂಡು ಮಾಡುತ್ತಾ   ಹಂದಿಗಳೆರಡು ಹೇಸಿಗೆ ಮೆತ್ತಿದ್ದ ನನ್ನ ಜೀವದ ತುಣುಕುಗಳ ಮೇಲೆ ನಾಲಿಗೆಯಾಡಿಸಲು ತೊಡರುಗಾಲುಗಳಿಂದ ಓಡುತ್ತಾ ಬಂದವು. ಪೋಲಿಸರನ್ನೂ ಮೀರಿಸುವಂತಿದ್ದ ನಾಯಿಗಳೆರಡು ಕಾಗದದ ತುಂಡು ಜೀವಗಳಿಗೆ ಹತ್ತಿದ ಹೇಸಿಗೆ ನೆಕ್ಕಲು ಮೂತಿಯಿಂದ ಬಿಡಿಸಿಕೊಳ್ಳುತ್ತಿದ್ದ ಹಂದಿಗಳನ್ನು ಅಂಜಿಸಿದವು.

ನಾಲ್ಕಾರು ತುಂಡು ಜೀವಗಳು ಹಂದಿ ನಾಯಿಗಳಿಂದ ರಕ್ಷಿಸೆಂದು ನನ್ನ ಅಂಗಲಾಚಿದವು. ನಾನ್ಹೇಗೆ ಮೇಲೇಳಬೇಕು. ಹಂದಿ-ನಾಯಿಗಳ ಚೂಪಾದ ಉಗುರುಗಳುಳ್ಳ ಕಾಲುಗಳು ನಾನು ಬಿಡಿಸಿಕೊಳ್ಳಲು ಸರಿದಾಡಿದಂತೆ ಈಗಾಗಲೇ ಗಾಯಗೊಂಡ ಮೈಮೇಲೆ ಮತ್ತೆ ಮತ್ತೆ ಚಾಕು, ಚೂರಿಯಿಂದ ಇರಿದಂತೆನಿಸುತ್ತಿತ್ತು. ಹಂದಿ ನಾಯಿಗಳು ಮರೆಯಾಗುತ್ತಿದ್ದಂತೆ ಅದೆಲ್ಲಿತ್ತೊ ಬಿಳಿಕಾಲರಿನ ಅಧಿಕಾರಿಯೆಂಬಂತಿದ್ದ ಕತ್ತೆ ಬಲು ಗತ್ತಿನಿಂದ ಸಮೀಪಿಸಿದಾಗಲೇ ಕಣ್ಣು ತುಂಬಿಬಂದವು. ನನಗೀಗ ಉಳಿಗಾಲವಿಲ್ಲವೆಂದು ಗಾಳಿಯಾದರೂ ಬೀಸಿದರೆ ಗಾಯಗೊಂಡಿದ್ದರೂ ಪರ್ವಾಗಿಲ್ಲ, ಹೇಗೊ ಬದುಕಬಹುದು. ಗಾಳಿ ಬೀಸೆಂದು ಮನುಷ್ಯರಂತೆ ಕಲ್ಲು, ಕಟ್ಟಿಗೆ, ಮಣ್ಣಿನಲ್ಲಿ ಅರಳಿದ ಅಸಹಾಯಕ ದೇವರನ್ನೆ ಮನದಲ್ಲೆ ಬೇಡಿಕೊಂಡೆ. ಮನುಷ್ಯರ ಮಾತನ್ನೆ ಕೇಳದ ದೇವರು ನನ್ನಂತಾ ಯಕಃಶ್ಚಿತ್ ಪೇಪರ್ ಅದೂ ತುಂಡಾದ ಪೇಪರ್ ಮಾತು ಕೇಳುತ್ತಾನೇನು? ಹೀಗೆ ವಿಚಾರ ಮಾಡುತ್ತಿದ್ದ ನಾನು ಕತ್ತೆಯ ಬ್ರಹ್ಮಾಂಡದಂತಾ ಬಾಯಿಯಲ್ಲಿ ನೆನೆಯುತ್ತಿದ್ದುದೇ ತಿಳಿಯಲಿಲ್ಲ. ಕತ್ತೆಗೆ ವಾಂತಿಯಾಗಿ ಹೊರಗೆಬಿದ್ದರೆ ಚೆನ್ನ. ಅದೆಷ್ಟು ಹಸಿದಿತ್ತು ಎಂಬಂತೆ ಕತ್ತೆ ಈಟಗಲ ಬಾಯಿ ತೆರೆದು ಒಂದೇ ಸಲಕ್ಕೆ ನುಂಗಿಬಿಟ್ಟಿತು. ಹೊಟ್ಟೆಯಲ್ಲಿ ಮಾಂಸದ ಮುದ್ದೆಯಂತಾಗಿದ್ದರೂ ಹೊರಬರಬೇಕು, ರೂಪ ಬದಲಿಸಿಕೊಂಡಾದರೂ! ಲದ್ದೆಯ ರೂಪದಲ್ಲಾದರೂ ಹೊರಬರಲು ಕಾಯುತ್ತಿದ್ದೆ!

ತೂತುಬಿದ್ದ ಕಾಂಡೋಮ್

ನನ್ನ ಹಣೆಯಲ್ಲಿ ಬರೆದುಕೊಂಡಿದ್ದೇ ಇಷ್ಟು. ನನಗೆ ಇಂಥ ರೂಪವೆಂಬುದಕ್ಕೆ ಬೇಸರವಿಲ್ಲ. ಬಸ್‍ಸ್ಟ್ಯಾಂಡ್ ಸಮೀಪದ ದೊಡ್ಡ ಲಾಡ್ಜ್ ಒಂದರ ರೂಮ್‍ಬಾಯ್ ಥೇಟ್ ನನ್ನಂತೆಯೇ ಕಾಣುತ್ತಿದ್ದ. ನಿದ್ದೆಗೆಟ್ಟಿದ್ದಕ್ಕೊ ಹೊಟ್ಟೆ ತುಂಬಲಾರದ್ದಕ್ಕೊ ಮುದುಡಿದ ಮೈ, ಬಾಡಿದ ಮುಖ ಕಂಡು ಅಯ್ಯೊ ಪಾಪ ಎನಿಸಿತು. ನಿನ್ನೆ ಮಧ್ಯರಾತ್ರಿ ಕಳೆದ ಮೇಲೆ ಜೋಡಿಗಳಿಬ್ಬರು ಬಂದರಲ್ಲ. ಅವನ ಪ್ಯಾಂಟ್ ಜೇಬಿನ ಜೈಲಲ್ಲಿ ಬಂಧಿಯಾಗಿದ್ದೆ. ಹದಿನೇಳೊ, ಹದಿನೆಂಟರ ಹುಡುಗಿ ಲಾಡ್ಜ್‍ನ ಡಬಲ್ ಬೆಡ್‍ರೂಮಿನಲ್ಲಿದ್ದ ನಿಲುಗನ್ನಡಿ ಮುಂದೆ ನಿಂತು ಮುಖದಮೇಲೆ ಬಿದ್ದಿದ್ದ ಮುಂಗುರುಳ ಸರಿಸಿಕೊಂಡಾಗಲೇ ಸಾವಿರ ಚಂದಿರರ ಬೆಳುದಿಂಗಳ ಚೆಲುವು ಕನ್ನಡಿಯ ತುಂಬಿತ್ತು. ಅದ್ಹೇಗೆ ಆ ಹೂವಂತ ಪುಟ್ಟ ಯುವತಿ ಈ ಧಡೂತಿಯ ಕೈಸೆರೆಯಾದಳೊ? ಪಾಪ, ಅವಳಿಗೆ ಅದೆಲ್ಲಾ ಬೇಕಿರಲಿಲ್ಲವೇನೊ? ಅವನೊಬ್ಬನಿಗೆ ಕೇಳಲೆಂದು ಪಿಸುದನಿಯಲ್ಲಿ ಮಾತನಾಡಿದ್ದರೂ ನನಗೆ ಕೇಳಿಸದೆ ಇರಲಿಲ್ಲ. ಅವನಿಗೇನು ಇಂಥ ರಾತ್ರಿ ಮೊದಲಲ್ಲ. ಬಟ್ಟೆ ಬದಲಿಸುವುದಕ್ಕಿಂತಲೂ ಸುಲಭವಾಗಿ ಅವ ಒಮ್ಮೆ ಮುಡಿದ ಹೂವು ಬೀಸಾಡಿಬಿಡುತ್ತಾನೆ. ಕೆಲಸವಾದ ಮೇಲೆ ನನ್ನ ಕಿತ್ತು ಬೀಸಾಕುವಂತೆ. ‘ಸುಮ್ಮನೆ ಮಾತನಾಡೋಣ. ಬೇಕಾದರೆ ಮುತ್ತುಗಳ ಎಣಿಸೋಣ. ಅಪ್ಪಿಕೊಂಡು ಹಾಗೆ ಎದ್ದುಬಿಡೋಣ. ಪ್ಲೀಸ್… ಅದೆಲ್ಲಾ ಬೇಡ. ತಂದೆಯಿಲ್ಲದ ತಬ್ಬಲಿ. ಚೆಲುವೆ ತಾಯಿಗೆ ನೂರೆಂಟು ಪೀಡೆ. ಫಸ್ಟ್ ಯಿಯರ್‍ಗೆ ಅಡ್ಮಿಷನ್ ಮಾಡಿಸ್ಬೇಕು. ಮಂಕುಕವಿದ ಬುದ್ಧಿಗೆ ಏನೂ ತೋಚಲಿಲ್ಲ. ಪ್ಲೀಸ್…’ ಪುಟ್ಟ ಮಕ್ಕಳಂತೆ ಆಡಿದ್ದೆ ಆಡುತ್ತಿದ್ದಳು. ಅವಳ ಮಾತುಗಳನ್ನು ಕೇಳಿಯೂ ಕೇಳಿಸಿಕೊಳ್ಳದವನಂತೆ ದಿಂಬಿನ ಮೇಲೆ ಕುಳಿತ ಅವಳ ಬರಸೆಳೆದುಕೊಂಡ. ಜೋಲಿ ಸಾಲದ ಹುಡುಗಿ ತನ್ನ ಎಡ ಅಂಗೈಯನ್ನು ಮನಸ್ಸಿಲ್ಲದ ಮನಸ್ಸಿನಿಂದ ಪೊದೆಯಂತಿದ್ದ ಅವನ ಎದೆಮೇಲಿಟ್ಟಳು.

ಪ್ರತಿ ಕೂದಲು ಹಾವಿನ ಹಲ್ಲಿಗಿಂತ ಚೂಪು, ವಿಷಪೂರಿತ ಎನಿಸಿದವು. ‘ಸರ್, ಪ್ಲೀಸ್… ಕೇವಲ…’ ಎಂದು ತುಟಿ ಪಕಳೆಗಳ ಮೇಲೆ ಬೆರಳಿಟ್ಟು ಬೇಡಿದಳು. ಅವನಿಗೆ ಕೇಳುವುದು ಬೇಕಿರಲಿಲ್ಲ. ಹೆದರಿಕೆಯೆನಿಸಿತೊ ಪ್ಯಾಂಟ್ ಜೇಬಿಲ್ಲಿದ್ದ ನನ್ನನ್ನು ಹುಡುಗಿಗಿಂತ ತೀರಾ ಜೋರಾಗಿ ಹೊರಗೆಳೆದ. ‘ಛೀ… ಮದ್ಯದ ಗ್ಲಾಸಿಗೆ ಮುತ್ತಿಟ್ಟ ಅವನ ತುಟಿ ನನ್ನ ಮೈ ಮುಟ್ಟಿದವು. ಬಾಚಿಯಂತಾ ಹಲ್ಲುಗಳಿಂದ ನನ್ನ ವಿವಸ್ತ್ರಗೊಳಿಸಿದ. ನನ್ನ ನೋಡಿ ಅವಳು ಅದೇಕೆ ಎದೆ ಮೇಲೆ ಕೈಗಳೆರಡನ್ನು ಇಂಟು ಮಾರ್ಕಿನ ರೀತಿಯಲ್ಲಿ ಹಿಡಿದಳೊ? ತಲೆದಿಂಬನ್ನು ತನ್ನ ಕಾಲು ಕಾಣದಿರಲೆಂದು ಮುಚ್ಚಿಕೊಂಡಳು. ಅವಳ ಕಣ್ಣೆದುರಿಗೇ ನನ್ನ…..! ಪಾಪ ಹುಡುಗಿ ಕಣ್ಣು ತುಂಬಿ ಬಂದವು. ಎದೆ ಮೇಲೆ ಹಿಡಿದ ಕೈಮೇಲೆ ಮುತ್ತ ಹನಿಗಳು ಉದುರಿದವು. ನನಗೆ ಆಗಲೆ ಸಂಶಯವೊಂದು ಕಾಡತೊಡಗಿದ್ದು. ನಾನು ಗಂಡೊ? ಹೆಣ್ಣೊ? ಎರಡೊ? ಎರಡೂ ಅಲ್ಲವೊ? ನಾನಂತೂ ಗಂಡು ಅಲ್ಲ! ನನಗೆ ಬಲತ್ಕಾರ, ದೌರ್ಜನ್ಯ, ಹಿಂಸೆ, ತೀಟೆ ಇನ್ನೂ ಹತ್ತಾರು ಬಲು ದೂರ. ನನ್ನ ರೂಪ, ಆಕಾರ, ಅನುಭವಿಸುವ ನೋವು, ಸಂಕಟ ಎಲ್ಲಾ ಹೆಣ್ಣಿನಂತೆಯೇ! ನಾ ಹೆಣ್ಣಾಗಿದ್ದಕ್ಕಲ್ಲವೆ ಅವಳಿಗೆ ತಡೆಗೋಡೆಯಾಗಿದ್ದು. ಪೌರುಷಕ್ಕೆ ತಡೆಗೋಡೆ ಯಾವ ಲೆಕ್ಕ? ಅವಳ ಚೀರಾಟ ಕೇಳಿ ಮೈಯೆಲ್ಲಾ ಬೆವರೊಡೆದೆ. ಬೆಂಕಿಗೆ ಬಿದ್ದ ಪತಂಗದಂತೆ ಚಡಪಡಿಸಿದಳು. ಮೈಯೆಲ್ಲಾ ಕಣ್ಣಾಗಿ ಅತ್ತುಬಿಟ್ಟೆ. ಅವ ಎದ್ದು ಕುಳಿತು ನನ್ನ ಮೂಲೆಗೆಸೆದ. ತಣ್ಣನೆ ಐಸ್‍ಕ್ರೀಂ ತುಂಡಂತೆ ಬಿದ್ದು ಅವಳ ಮೈಚರ್ಮದಷ್ಟೇ ನುಣುಪಾದ ನೆಲದ ಮೇಲೆ ಅವಳ ನೋಡುತ್ತಾ ಮಲಗಿದೆ.

ಅವಳು ಬೋರಲು ಮಲಗಿ ಕಣ್ಣು ಅಗಲಿಸಿಕೊಂಡು ಕಣ್ಣೀರಿನಿಂದ ತಲೆದಿಂಬು ತಣ್ಣಗಾಗಿಸಿದಳು. ಒಂದು ಹೊತ್ತಿನಲ್ಲಿ ನನ್ನ ಮೇಲೆ ಯಾರೊ ಕಾಲಿಟ್ಟಾಗಲೆ ಎಚ್ಚವಾದದ್ದು. ಜೀವವೇ ಹೋಗುವಂತಾ ತುಳಿತ. ಅವನೇನು ಮನುಷ್ಯನೊ, ರಾಕ್ಷಸನೊ? ಅವನ ಬೂಟುಗಾಲಿಗೆ ಬಬಲ್‍ಗಮ್‍ನಂತೆ ಹತ್ತಿದೆ. ಕೋಣೆ ತುಂಬ ಬೂಟುಗಳು ದಢ್-ದಢ್ ಅಡ್ಡಾಡಿದಾಗ ನಾನೆಷ್ಟು ಹಿಂಸೆ ಪಟ್ಟೆನೊ? ಬಲು ಆಶ್ಚರ್ಯ! ಅವಳ ಕರೆದು ತಂದವ ಕಾಣಲಿಲ್ಲ! ಅರೆಬರೆ ಬಟ್ಟೆ, ಕೆದರಿದ ಕೂದಲುಗಳಲ್ಲಿ ‘ಹುಡುಗಿ’ ಸುಂದರ ರಂಗೋಲಿಯನ್ನು ಯಾರೊ ಪುಣ್ಯಾತ್ಮರು ಕಾಲಿನಿಂದ ಮನಸೊ ಇಚ್ಛೆ ಒರೆಸಿದಂತೆ ಕಂಡಳು. ಅವಳ ಕೂದಲು ಹಿಡಿದು ಕಾಟ್‍ನಿಂದ ದರ-ದರ ಎಳೆದ ಪಿಎಸ್‍ಐ ಬಿಲ್ಲೆಯನ್ನು ಖಾಕಿಡ್ರೆಸ್‍ಗೆ ಅಂಟಿಸಿಕೊಂಡವ, ನಾಲ್ಕಾರು ಪೊಲೀಸರ ಎದುರಿಗೆ ಹುಡುಗಿ ತುಟಿ ಸಮೀಪ ತನ್ನ ಮುಖವನ್ನು ಅದೆಷ್ಟು ಹತ್ತಿರ ಒಯ್ದ. ನಿನ್ನೆ ರಾತ್ರಿ ಅವಳನ್ನು ಕರೆದು ತಂದವನಿಗೂ ಇವನಿಗೂ ಅಷ್ಟೆನೂ ವ್ಯತ್ಯಾಸವಿರಲಿಲ್ಲ. ಅವಳನ್ನು ಅದೆಷ್ಟು ಕೆಟ್ಟ ಭಾಷೆಯಲ್ಲಿ ಬೈಯ್ದರು. ‘ಶಾಂತಂ ಪಾಪಂ…’ ಅರೆಬರೆ ಬಟ್ಟೆಯಲ್ಲಿ ಅವಳನ್ನು ಎಳೆದೊಯ್ಯುವಾಗ ಕೋಣೆಯ ಬಾಗಿಲಿನ ಮುಂಭಾಗದಲ್ಲಿ ಹಾಕಿದ್ದ ‘ವೆಲ್‍ಕಮ್’ ಹಚ್ಚೆಹಾಕಿಸಿಕೊಂಡ ಮ್ಯಾಟ್‍ಗೆ ಬೂಟುಗಾಲು ಸವರಿದಾಗ ಅವನಿಂದ ಮುಕ್ತಿಪಡೆದೆ. ರೂಮ್‍ಬಾಯ್ ಕೋಣೆಯ ಮುಂದುಗಡೆ ಹತ್ತಾರು ಜನರ ಕಾಲುಸಂಧಿಯಲ್ಲಿ ಒಂದು ಕೈಯಲ್ಲಿ ಪುಟ್ಟ ಪ್ಲ್ಯಾಸ್ಟಿಕ್ ಬಕೆಟ್, ಮತ್ತೊಂದು ಕೈಯಲ್ಲಿ ಪೊರಕೆ ಹಿಡಿದವನ ಕಾಲುಗಳುಂಟ ನೀರ ಝರಿಗಳೆರಡು ಇಳಿಯತೊಡಗಿದವು.

ಮಂದಿ ಜಾಗ ಖಾಲಿಮಾಡಿದ ಒಂದೆರಡು ನಿಮಿಷಗಳಲ್ಲಿ ರೂಮ್‍ಬಾಯ್ ಕೈಯಲ್ಲಿದ್ದ ಬಕೆಟ್‍ನಲ್ಲಿ ತುಂಬಿದ ಕಸ, ಕಡ್ಡಿ, ಧೂಳು, ಹರಿದ ನನ್ನ ಹೊದಿಕೆ, ಸಿಗರೇಟು ತುಣುಕುಗಳು, ತುಂಡಾದ ಹತ್ತಾರು ಉದ್ದನೆ ಕೂದಲುಗಳ ಮಧ್ಯೆ ಕುಳಿತಿದ್ದೆ. ಆ ದೃಶ್ಯ ಕಣ್ಣಾರೆಕಂಡು ಬೆರಗಾಗಿ ಬೆವರಿದ ನನ್ನ ಮೈ ಇನ್ನೂ ಆರಿರಲಿಲ್ಲ. ಆ ಹುಡುಗಿ ಲಾಡ್ಜ್‍ನ ಹೊರಗಿದ್ದ ಜೀಪಿನಲ್ಲಿ ಪೊಲೀಸರಿಬ್ಬರ ಮಧ್ಯೆ ತಲೆ ತಗ್ಗಿಸಿ ಮುಖಕ್ಕೆ ಎರಡೂ ಕೈಹಿಡಿದು ಕುಳಿತಿದ್ದಳು. ಕೌಂಟರ್ ಸಮೀಪ ಪಿಎಸ್‍ಐ ಮುಂದೆ ಜನಿವಾರ ಹೊರಗೆಳೆದು ಆಣೆ ಮಾಡುವಂತಿದ್ದ ಡೊಳ್ಳು ಹೊಟ್ಟೆಯ ವ್ಯಕ್ತಿಯೊಬ್ಬ ದಯನೀಯ ಸ್ಥಿತಿಯ ಮುಖವಾಡ ಧರಿಸಿದ್ದ. ತೆಳುಗುಲಾಬಿ ವರ್ಣದ ಗರಿ ಗರಿ ನೋಟುಗಳ ಕಟ್ಟನ್ನು ಪಿಎಸ್‍ಐ ಕೈಗೆ ಕೊಟ್ಟು ಅವನ ಕಾಲು ಮುಗಿಯಲು ಬಲು ಪ್ರಯಾಸದಿಂದ ಬಗ್ಗಿದ. ಜೀಪಿನಲ್ಲಿದ್ದ ಹುಡುಗಿಯ ಮುಖ ನೋಡಬೇಕೆಂದು ಹೆಜ್ಜೆಗೊಮ್ಮೆ ಮೇಲೆ ಕೆಳಗೆ ಜಂಪ್ ಮಾಡಿದರೂ ಸಾಧ್ಯವಾಗಲಿಲ್ಲ. ನಗರಸಭೆಯ ಆಡಳಿತಕ್ಕೆ ಕನ್ನಡಿ ಹಿಡಿದಂತಿದ್ದ ಗಬ್ಬುನಾರುವ, ತುಂಬಿ ತುಳುಕುವ ತೊಟ್ಟಿಗೆ ಕಸ ಎಸೆದ ಹುಡುಗ ಲಾಡ್ಜ್‍ನತ್ತ ನಡೆದ.

ಸಂಡಾಸು ಕುಳಿತ ಮರಿಸೂರ್ಯನ ತಿಕ ತೊಳೆಯುವವರೂ ಗತಿಯಿದ್ದಿಲ್ಲವೊ ಹಳದಿ ಬೆಳಕೆ ಸುತ್ತಚೆಲ್ಲಿತ್ತು. ತೆಳುಹಳದಿ ಬೆಳಕಲ್ಲಿ ಹೆಗಲ ಮೇಲೆ ಅಲ್ಲಲ್ಲಿ ಹರಿದ ಪ್ಲ್ಯಾಸ್ಟಿಕ್‍ಚೀಲ ಹಾಕಿಕೊಂಡು ತೊಟ್ಟಿಯಲ್ಲಿ ಕೈಯಾಡಿಸುತ್ತಿದ್ದ ನಾಲ್ಕು ಹುಡುಗರಲ್ಲಿ ಪುಟ್ಟ ಹುಡುಗನೊಬ್ಬನ ಕೈಗೆ ನಾನು ಸಿಕ್ಕುಬಿಟ್ಟೆ. ಸೂರ್ಯನ ಹಳದಿ ಬೆಳಕಿನಂತೆಯೇ ಗೋಚರಿಸುತ್ತಿದ್ದ ತನ್ನ ಹಲ್ಲುಗಳನು ತುಟಿ ಅಗಲಿಸಿ ಹೊರಕಾಣಿಸಿದ. ನನ್ನನ್ನು ತನ್ನ ಹೊಟ್ಟೆಯೊಳಗಿನ ಕರುಳೆಂಬಂತೆಯೇ ಜೀವದಿಂದ ಹಿಡಿದು ಉಳಿದವರಿಗೆ ತೋರಿಸಿದ. ಅವರೂ ತಮ್ಮ ಚಿಟ್ಟೆಗಳಂತಾ ಕಣ್ಣುಗಳನು ಹೊರಬಿಟ್ಟರು. ಸ್ವಲ್ಪ ದೊಡ್ಡವನಿದ್ದ ಒಬ್ಬ, ‘ಛೀ ಇದನ್ನು ಮುಟ್ಟಬಾರದು. ಹೊಲಸು ಆಗಿರುತ್ತ…’ ಎಂದು ಮುಖ ಕಿವುಚಿದ. ಸಣ್ಣ ಹುಡುಗನಿಗೆ ಅರ್ಥವಾಗಲಿಲ್ಲ. ಸಮೀಪದಲ್ಲಿ ನಳವೊಂದರಿಂದ ಬೀಳತುತ್ತಿದ್ದ ನೀರಿಗೆ ಹಿಡಿದು ಕೂಸಿಗೆ ನಾಜೂಕಿನಿಂದ ಎರೆದಂತೆ ನನ್ನ ಮೈತೊಳೆಸಿದ. ಹುಡುಗನಿಗೆ, ‘ಥ್ಯಾಂಕ್ಸ್…’ ಹೇಳುವಂತೆ ಅವನ ಅಂಗೈಗೆ ಕೆಲಕ್ಷಣ ಅಂಟಿಕೊಂಡೆ. ತೊಯ್ದ ನನ್ನನ್ನು ಹರಿದ ಅಂಗಿಗೆ ಒರೆಸಿಕೊಂಡ. ಮತ್ತೆ ಗಾಳಿಗೆ ಮೈಯೊಡ್ಡಿ ಚಳಿಯಾಗದಿರಲೆಂದೊ ಬಾಯಿಯಿಂದ ಸುತ್ತ ಬಿಸಿಗಾಳಿ ಊದಿದ. ಅದೆಷ್ಟು ಹಿತವೆನಿಸಿತು. ನನ್ನ ತುಟಿಗಳಿಗೆ ತಡಮಾಡದೆ ಮುತ್ತಿಟ್ಟ. ಬೆನ್ನಿಗಂಟಿದ ಹೊಟ್ಟೆಯನ್ನೂ ಶಕ್ತಿಮೀರಿ ಹಿಗ್ಗಿಸುತ್ತಾ, ಕುಗ್ಗಿಸುತ್ತಾ ನನಗೆ ಜೀವ ತುಂಬತೊಡಗಿದ. ಅವನ ಅಂಗೈ ದಾಟಿ ಸೂರ್ಯನಷ್ಟು ದೊಡ್ಡದಾದೆ. ಅವನ ಖುಷಿ ನೋಡಬೇಕಿತ್ತು. ಅಯ್ಯೊ ಹುಡುಗನ ಮುಖ ಏಕೆ ಸಪ್ಪಗಾಯ್ತು? ಅಳುಮೋರೆಯಿಂದ ನನ್ನ ಕಾಲು, ತಲೆಹಿಡಿದು ಮೇಲೆ ಕೆಳಗೆಮಾಡಿ ನೋಡಿದ. ನನ್ನ ಹೊಟ್ಟೆಯಲ್ಲಿ ಎಲ್ಲೊ ತೂತು ಕಂಡಿತಂತೆ! ನಾನೇನು ನನ್ನ ಕೈಯಾರೆ ಹೊಟ್ಟೆಗೆ ಚುಚ್ಚಿಕೊಂಡು ತೂತುಮಾಡಿಕೊಂಡಿದ್ದೆನೇನು? ಪಾಪ… ತಲೆಯ ಮಾಸು ಸಮೇತ ಇನ್ನೂ ಆರದ ಈ ಹುಡುಗನಿಗೇನು ತಿಳಿಯುತ್ತೆ? ಅವನು ಇದ್ದಾನಲ್ಲ ಧಡೂತಿ ವ್ಯಕ್ತಿಯ ಕೊಸರಾಟದಿಂದ ನನ್ನ ಹೊಟ್ಟೆ ಹರಿದಿರಬೇಕು. ಹುಡುಗಿಯ ಬಗ್ಗೆ ಅಯ್ಯೊ ಪಾಪ ಎನಿಸಿತು.

ಈಗ ಎಲ್ಲಿದ್ದಾಳೊ? ಹೇಗಿದ್ದಾಳೊ? ಪುಟ್ಟಹುಡುಗ ನನ್ನನ್ನು ಎಲ್ಲಿ ಬೀದಿಪಾಲು ಮಾಡುತ್ತಾನೆಂದೆ ತಿಳಿದಿದ್ದೆ. ತನ್ನಿಷ್ಟದಂತೆ ನನ್ನ ಮಡಿಸಿ ತೋರು ಬೆರಳಿಗಿ ತೊಡಿಸಿ ಬಾಯೊಳಗಿಟ್ಟು ಹೊರತೆಗೆದಾಗ, ಥೇಟ್ ಹುಣ್ಣಿಮೆಯ ಚಂದಿರನಂತೆ ನಾ ರೂಪತಳೆದೆ. ಹುಡುಗನ ಮುಖದಲ್ಲಿ ಬೆಳುದಿಂಗಳು ಚೆಲ್ಲಿತು. ಬಿಗಿಹಿಡಿದು ನನ್ನ ಮುಖವನ್ನು ತನ್ನ ಅಂಗೈಗೆ ಉಜ್ಜಿಕೊಂಡ. ಮಕ್ಕಳ ಸ್ಪರ್ಷದ ಹಿತ ಅನುಭವಿಸಿದವರಿಗೇ ಗೊತ್ತು. ಹುಡುಗ ಚಂದ್ರನಂತಿದ್ದ ನನ್ನನ್ನು ತೂತಿರೊ ಚೊಣ್ಣದ ಜೇಬಿಗೆ ತುರುಕಿದ. ಬರಡಾದ ಬದುಕೂ ಸ್ವಲ್ಪ ಮಟ್ಟಿಗೆ ಸಹ್ಯವೆನಿಸಿತು. ಅವಮಾನವೊ? ಅವಹೇಳನವೊ? ಅಸಹ್ಯವೊ? ಹೇಗಾದರೂ ಸರಿ ಬದುಕಬೇಕೆಂಬ ಕನಸು ಹೊತ್ತು ಚೊಣ್ಣದ ಕಿಂಡಿಯಲಿ ಹೊರಜಗತ್ತನು ಇಣುಕುತ್ತಾ ನಡೆದೆ…

ಮೋಟು ಬೀಡಿ

ಈಷ್ಟುದ್ದ ಇದ್ದ ನನ್ನ ಮೈಸುಟ್ಟು ಇಷ್ಟುದ್ದಮಾಡಿ ಜನ ತಿರುಗಾಡುವ ರಸ್ತೆ ಪಕ್ಕ ಎಸೆದವರ ಬಗ್ಗೆ ಸ್ವಲ್ಪ ಸಿಟ್ಟಿದೆ. ಹೊಟ್ಟೆಯೊಳಗಿನ ಸಿಟ್ಟು, ಸೆಡುವು ಬಿಟ್ಟು ನಾನೇನು ಬುದ್ಧನಂತೆ ಸನ್ಯಾಸಿಯಾಗಲು ಹೊರಟವನಲ್ಲ. ನನಗೆ ಗೊತ್ತು ಕುಷ್ಠ ಬಡಿದ ನನ್ನ ದೇಹ ಮುರುಟಿದೆ. ಅವನ ತುಟಿಗಳ ಮೇಲೆ ಅದೆಷ್ಟು ನಾಜೂಕಾಗಿ ಕುಳಿತರೂ ತನ್ನ ಎಂಜಲಿನಿಂದ ಅರ್ಧ ಮೈತೊಯ್ಯಿಸಿಬಿಟ್ಟ. ಹೆಂಡತಿಯ ಮೇಲಿನ ಸಿಟ್ಟೊ? ಮಕ್ಕಳ ಮೇಲಿನ ಸಿಟ್ಟೊ? ಕ್ಷಣಕ್ಕೊಮ್ಮೆ ಹಲ್ಲುಗಳಿಂದ ಕಚ್ಚಿ ಕಚ್ಚಿ ನನ್ನ ಹಿಂಸಿಸಿದ. ಹಿಂಸೆತಾಳದೆ ಅದೆಲ್ಲಿಂದ ಉಸುರು ಬಿಟ್ಟೆನೊ ಆಗಂತೂ ತಿಳಿಯಲಿಲ್ಲ. ಸೇದಿದಷ್ಟು ಸೇದಿ, ಕೊನೆಗೆ ಒಗೆಯುವ ಮುನ್ನ ಸುಟ್ಟದ್ದಕ್ಕೆ ನಾನೆಷ್ಟು ನೊಂದೆ. ನೋವು, ದಣಿವು ಮರೆಯಲು ನನ್ನ ಸೇದುತ್ತಾರಂತೆ. ನನ್ನ ಪಾತ್ರವೇ ನನಗೆ ಬಲು ಗೋಜಲು. ಇತ್ತೀಚೆಗೆ ನಾನೊಂದು ಥರಾ ಭಯೋತ್ಪಾದಕ. ನನ್ನಂತೆಯೇ ಇರುವ ಸಹೋದರರನ್ನು ಒಂದೆಡೆ ಕೂಡಿಸಿ ಸುತ್ತ ಹೊದಿಸಿದ ಹಾಳೆ ಮೇಲೆ ಚೇಳಿನ ಚಿತ್ರ ಅಚ್ಚಾಗಿದೆ. ‘ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ’ ಎಂದು ಬರೆದುದನ್ನು ಗಮನಿಸಿಯೂ, ತಿಳಿದೂ ನನ್ನಂಥವರನ್ನು ಬಳಸುತ್ತಾರೆ. ನನ್ನದೇನೂ ತಪ್ಪಿಲ್ಲ. ತೊಗಲಿನಷ್ಟೆ ಮೃದುವಾದ ನನ್ನನ್ನು ಕೊಳವೆಯಾಗಿಸಿ ಒಳಗೆ ಒಂಚೂರು ತಂಬಾಕುಪುಡಿ ಉದುರಿಸಿ ನನಗೊಂದು ರೂಪ ಕೊಡುವ ಕೈಗಳನ್ನೂ ದೂಷಿಸಲಾರೆ. ಸರ್ಕಾರಗಳದ್ದೂ ಅಡ್ಡಗೋಡೆ ಮೇಲೆ ದೀಪವಿಡುವಂತಾ ಕಾನೂನು. ನನ್ನ ಮಾರಾಟದಿಂದಲೇ ಬೊಕ್ಕಸಕ್ಕೆ ಸಹಸ್ರ ಕೋಟಿ ಆದಾಯ. ಬಳಸುವವರು ಬಳಲಿ ಬೆಂಡಾಗುವ ಸ್ಥಿತಿ. ಅವರ ದೇಹ ರೋಗದ ಗೂಡು. ನಾನು ಹೀಗೆ ಆದುದಕ್ಕೆ ನನ್ನ ಬಗ್ಗೆಯೇ ಹೇಸಿಕೆ. ವ್ಯರ್ಥ ಜೀವನವೆಂಬ ಜಿಗುಪ್ಸೆ.

ನೆನಪಿರಬೇಕಲ್ಲವೆ ನಿಮಗೆ. ಜಗತ್ತಿಗೇ ಮಹಾತ್ಮನೆನಿಸಿದ ಗಾಂಧಿಮುತ್ಯಾ ಬಾಲಕನಾಗಿದ್ದಾಗ ನನ್ನಂಥವನನ್ನು ಆಯಲು ಹೋಗುತ್ತಿದ್ದನಂತೆ. ಗಾಂಧಿ ತಾತನ ತುಟಿಗಳೂ ನನ್ನ ತಗುಲಿದ್ದೆ ದೊಡ್ಡ ಪವಾಡ. ತುಂಡುಬೀಡಿ ಸಿಗದೆ ಹೋದಾಗ ಬಾಲಕ ಗಾಂಧಿ ಅನುಭವಿಸಿದ ನೋವು, ಸಂಕಟ, ಕಳ್ಳನಾದ ರೀತಿ ನನಗಂತೂ ನಿನ್ನೆ ಮೊನ್ನೆಯೆಂಬಂತೆ ನೆನಪಿದೆ. ಬಲು ಕೆಟ್ಟವನೆಂಬ ಅರಿವು ಬರುತ್ತಲೆ ಗಾಂಧಿ ನನ್ನಿಂದ ದೂರವಾಗಿಬಿಟ್ಟ. ಅಂಥಾ ಮಹಾತ್ಮನ ಸನಿಹವಿದ್ದರೂ ನಾನು ಬದಲಾಗಲಿಲ್ಲ. ಮನುಷ್ಯರಾದರೆ ಎಂಥ ಮೋಸ, ವಂಚನೆ,  ಭ್ರಷ್ಟಾಚಾರ, ಸುಳ್ಳು, ಸೊಟರು ಹೇಳಿ ಒಳ್ಳೆಯವರೆಂಬಂತೆ ಕಾಣಿಸಬಹುದು. ಅಧಿಕಾರಿಗಳು, ರಾಜಕಾರಣಿಗಳು ಜನರ ಸೇವಕರು ಎಂದೇ ಹೇಳಿಕೊಂಡರೂ ಮಾಡಿದ್ದು, ಮಾಡುತ್ತಿರುವುದು ನನ್ನಂತಾ ಹುಲುಬೀಡಿಗೂ ಅರ್ಥವಾಗುತ್ತೆ. ನಾನೇ ಒಪ್ಪಿಕೊಳ್ಳುವಂತೆ ಬಲು ಕೆಟ್ಟವ. ಮಂದಿಯ ಆರೋಗ್ಯ ಹದೆಗೆಡಿಸಿ ಅವರ ಜೀವವನ್ನು ಹಿಂಡಿ ಹಿಪ್ಪೆಮಾಡುವುದಕ್ಕೆ ವ್ಯಥೆಯಿದೆ. ಎಲ್ಲಾ ನನ್ನ ಕರ್ಮವಷ್ಟೆ.

ನನಗೊಂದು ರೂಪ ಅಂತ ಕೊಡುವ ನನ್ನಂತಾ ಅಸಹಾಯಕ ಮಕ್ಕಳ ನೆನೆದು ಒಮ್ಮೊಮ್ಮೆ ‘ಅಯ್ಯೊ ಪಾಪ..’ ಎನಿಸುತ್ತೆ. ಆ ಮಕ್ಕಳು, ಆ ಜನ ಥೇಟ್ ನನ್ನಂತೆಯೇ! ಪುಡಿಗಾಸಿಗಾಗಿ, ಹೊಟ್ಟೆಪಾಡಿಗಾಗಿ ನರಕದ ಕೆಲಸದಲ್ಲಿ ಪಾಲು. ಅಷ್ಟು ಮಾಡಿದರೂ ಅವರ ಹೊಟ್ಟೆ ತುಂಬಿಸದ ಕೃತಘ್ನ. ಕಂಪೆನಿ ಅಂತ ಕಟ್ಟಿದವರ ಆಸ್ತಿ, ಅಂತಸ್ತುಗಳ ನೂರ್ಮಡಿಗೊಳಿಸವ ಹೊಣೆಗೇಡಿತನಕ್ಕೆ ಹಳಿಯುವುದು ಬಿಟ್ಟರೆ ಬೇರೆ ಗತಿಯಿಲ್ಲ. ನಿಮಗೂ ಗೊತ್ತಿರಬೇಕು. ಈ ಊರಲ್ಲಿ ಒಬ್ಬನಿದ್ದಾನೆ. ಅವನಿಗೆ ನಾನೆಷ್ಟು ಪ್ರಿಯನೆಂದರೆ, ಸಪ್ತಪದಿ ತುಳಿದು ಕೈಹಿಡಿದವಳಿಂದಲೂ ದೂರವಾಗುತ್ತೇನೆ ಆದರೆ ನನ್ನಿಂದ ಅಲ್ಲ ಎಂದೇ ಹೇಳುತ್ತಿದ್ದ. ಹಾಗೆ ಭಾವಿಸಿದ್ದಕ್ಕಲ್ಲವೇ ಅವನು ದುಡ್ಡಿದ್ದವರ ದೌರ್ಜನ್ಯಕ್ಕೆ ಬಲಿಯಾಗಿದ್ದು. ಕಟ್ಟುಬೀಡಿಯ ಆಸೆಗೆ ಮೈಕಟ್ಟು ಸಡಿಲಾಗುವಂತೆ ಬೆಳಗಿನಿಂದ ಬೈಗಿನವರೆಗೆ ಕಟ್ಟಿಗೆ ತುಂಡರಿಸುತ್ತಿದ್ದ.  ಜೀವನವನ್ನೇ ಕಟ್ಟುಬೀಡಿಗೆ, ಬೆಂಕಿ ಪೊಟ್ಟಣಕ್ಕೆ ಕಡಾಕೊಡುತ್ತಿದ್ದ. ಎಂಥಾ ಬೇಜವಾಬ್ದಾರಿ ಮನುಷ್ಯ ಹೆಂಡತಿ, ಮಕ್ಕಳನ್ನು ಭಿಕ್ಷೆಗೆ ದೂಡಿದ. ಅವರ ಕನಸ ಕನ್ನಡಿಗಳಿಗೆ ಸೇದಿದ ತುಂಡುಬೀಡಿಯ ಹೊಗೆಬಿಟ್ಟ. ಅಲ್ಲಿ ಬರುತ್ತಿದ್ದಾನಲ್ಲ ಅವನೇ ನೋಡು. ಅವನ ಕಣ್ಣಿಗೆ ನಾನೀಗ ಬೀಳಬಾರದು. ಅವನಿಗೀಗ ಕೆಲಸವಿಲ್ಲ. ಕಾರಣವಿಷ್ಟೆ ಮೈಯಲ್ಲಿ ಕಸುವಿಲ್ಲ. ಭೂಮಿಗಲ್ಲ ತನಗೇ ತಾನು ಭಾರ ಎಂಬ ಭಾವನೆ. ಅಯ್ಯೊ ಪುಟ್ಟ ಹುಡುಗ ನನ್ನ ನೋಡಿ ನಸುನಗುತ್ತಿದ್ದಾನಲ್ಲ. ನನ್ನ ವಿಚಿತ್ರ ರೂಪ ಅಲ್ಲ ಅವನಪ್ಪನ ತುಟಿಗಳ ಅಂಚಲ್ಲಿ ಕುಣಿಯೊ ಶೈಲಿ ಆಕರ್ಷಿಸಿರಬೇಕು. ಪಾಪ ಇನ್ನೂ ತಾಯಿಯ ಮೊಲೆತೊಟ್ಟು ಚೀಪಬೇಕಾದ ವಯಸ್ಸು. ಹುಡುಗನ ಕೈಗೆ ಸಿಗಬಾರದು.

ಹಾಲಕೆನೆಯಂತಾ ತುಟಿಗಳಿಗೆ ತಾಗಿ ಹಾಳುಮಾಡಬಾರದು. ಹೂಗಲ್ಲದ ಹುಡುಗನ ತುಟಿಗಳ ಸಂಧಿಯಲಿ ಜಾಗೆಪಡೆದೆ. ಹುಡುಗನ ತಾಯಿ ತುಟಿಗಳಲಿ ನನ್ನ ನೋಡಿಯೂ ಹೆಮ್ಮೆಯಿಂದ ನಗುತ್ತಿದ್ದಾಳಲ್ಲ. ಎರಡು ವರ್ಷದ ಮಗ ತನ್ನ ಕೈಹಿಡಿದವನಂತೆ ಕಾಣುತ್ತಿರಬೇಕು. ಸಮೀಪ ಬಂದ ಸಣಕಲು ದೇಹದ ಅವನು, ತಾನು ಹಾಳಾದರೂ, ಮಗುವಿನ ಬಾಯಲ್ಲಿ ನನ್ನ ಕಂಡು ಸಿಡಿಮಿಡಿಗೊಂಡ. ‘ಬುದ್ಧಿಯಿಲ್ಲದ ಜನ’ ಪಿಸಿಪಿಸಿ ವಟಗುಟ್ಟಿದ. ಕಾಲಿಗೆ ನೆಟ್ಟ ಮುಳ್ಳಿನಂತೆ ಬಾಲಕನ ಬಾಯಿಯಲ್ಲಿದ್ದ ನನ್ನನ್ನು ಸಟಕ್ಕನೆ ಕಸಿದುಕೊಂಡ. ಗಾಂಧಿ ತಾತನನ್ನೇ ಹೋಲುವಂತೆ ತುಂಡು ಬಟ್ಟೆ ಧರಿಸಿದ ಅವ ತನ್ನ ನಡುವಿಗೆ ಮಾತ್ರ ಸುತ್ತಿಕೊಂಡಿದ್ದ ದೋತರಕ್ಕೆ ನನ್ನ ತಿಕ್ಕಿಕೊಂಡ. ಕೂದಲಿಗಿಂತಲೂ ಕಪ್ಪಾದ ತುಟಿಗಳಲಿ ನನ್ನ ಸಿಕ್ಕಿಸಿಕೊಂಡ. ನನ್ನೊಳಗೆ ಇರಬಹುದಾದ ಚೂರು-ಪಾರು ಜೀವವನ್ನೂ ಹೀರಿಬಿಡಬೇಕೆಂದು ಕಡ್ಡಿಗಾಗಿ ಹುಡುಕುತ್ತಾ ನಡೆದ.

ಅಲ್ಲಿ ಕಟ್ಟೆ ಮೇಲೆ ಬೇವಿನಗಿಡದ ಕೆಳಗೆ ಕುಳಿತ ನಾಲ್ಕಾರು ಮಂದಿ ಮುಂದೆ ಹೋಗಿ ಬೆಂಕಿಕಡ್ಡಿಗಾಗಿ ಹಲ್ಲುಗಿಂಜಿದ. ಅವರೆÉಲ್ಲರಿಗೂ ಈ ಹಿಂದೆ ಪುಕ್ಕಟೆ ಕೆಲಸಮಾಡಿದ್ದು ನೆನಪಾಯಿತು. ತನಗೆ ಮಾತೇ ಬರುವುದಿಲ್ಲವೆಂಬಂತೆ ನನ್ನನ್ನು ತುಟಿಗಳಿ ಮೇಲೆ ಕೆಳಗೆ ಅಲ್ಲಾಡಿಸುತ್ತಾ ತೆಳ್ಳಗೆ ಕಡ್ಡಿಯಂಗಿದ್ದ ಕೈಯನು ಕಡ್ಡಿಗಾಗಿ ಚಾಚಿದ ಅವರಲ್ಲಿ ಒಬ್ಬ ನನ್ನ ಹಿರಿಯಣ್ಣ ಸಿಗರೇಟನ್ನು ತನ್ನೆರಡು ಬೆರಳುಗಳಲ್ಲಿ ಸ್ಟೈಲಾಗಿ ಹಿಡಿದು ಎತ್ತರದಲ್ಲಿದ್ದ ಗಿಡದ ಟೊಂಗೆಗಳನ್ನೂ ತಲುಪಲಿ ಎಂಬಂತೆ ಹೊಗೆ ಬಿಡುತ್ತಿದ್ದ. ಇವನೇನು ಆಸ್ತಿಯಲ್ಲಿ ಅರ್ಧಪಾಲು ಕೇಳಿದ್ದಾನೇನು ಎಂಬಂತೆ ಭಾವಿಸಿದನೊ? ಎಡ ಮುಂಗೈಯನ್ನು ಹಿಂದಕ್ಕೂ ಮುಂದಕ್ಕೂ ಅಲ್ಲಾಡಿಸಿದ. ಕೈ ಅಲ್ಲಾಡಿಸಿದ್ದು ತನಗಲ್ಲ ಎಂಬಂತೆ ಇವನು ನಿಂತಿದ್ದ. ಇವರಿಬ್ಬರ ಕೈಸನ್ನೆ, ಬಾಯಿಸನ್ನೆಯನ್ನೇ ಮೋಜೆಂಬಂತೆ ನೋಡುತ್ತಿದ್ದೆ. ಅವನು ಕಡ್ಡಿಕೊಡದ್ದಕ್ಕೆ ನಾನೇನು ಮಾಡಬೇಕು. ಅವನ ಮೇಲಿನ ಸಿಟ್ಟಿಗೆ ಮೊದಲೇ ಹಸಿಯಾಗಿದ್ದ ನನ್ನ ಕಚ್ಚಬೇಕೆ ಇವನು! ನನಗೇ ಬೇಡವಾದ ಹುಟ್ಟು ಪಡೆದೆ. ಈಗ ನೋಡಿದರೆ ಮಾಡದ ತಪ್ಪಿಗೆ ಎಲ್ಲಿಬೇಕಲ್ಲಿ ಕಚ್ಚಿಸಿಕೊಳ್ಳಬೇಕು. ಮನುಷ್ಯರು ತಮ್ಮಂತೆಯೇ ಇರುವ ಮನುಷ್ಯರ ಮೇಲೆ ದೌರ್ಜನ್ಯ, ಶೋಷಣೆ ಮಾಡುತ್ತಾರೆ ಅದೇನು ಮಹಾ ಎಂದ ಮೇಲೆ ನನ್ನಂತಾ ಮೋಟುಬೀಡಿ ಮೇಲೆ ಅನ್ಯಾಯ, ಹಲ್ಲೆಯಾದರೆ ಕೇಳುತ್ತಾರೇನು? ನೋವು, ಸಂಕಟವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿರುವ ತಂಬಾಕಿನಂತೆ ಕೆಟ್ಟದಾದರೂ ಒಳಗೇ ನುಂಗಿಕೊಂಡೆ. ಅವನು ಕಡ್ಡಿಕೊಡಲು ಷರತ್ತು ವಿಧಿಸಿದ. ಜನರ ತೆರಿಗೆ ಹಣದಿಂದಲೇ ಸೌಲಭ್ಯ ನೀಡಬೇಕಾದ ಅಸಹಾಯಕ ಸರ್ಕಾರಗಳು ಅರ್ಹರಿಗೆ ಸೌಲಭ್ಯನೀಡಲೂ ಹತ್ತಾರು ಷರತ್ತು ವಿಧಿಸುತ್ತಾವಲ್ಲ ಹಾಗೆ ಅನ್ನಿಸಿತು. ಇವತ್ತು ಮುನ್ಸಿಪಾಲ್ಟಿಯವರು ಮನೆಗಳ ನಳಗಳಿಗೆ ನೀರು ಬಿಟ್ಟಿಲ್ಲ. ಊರ ಹೊರಗಿನ ಬೋರ್‍ವೆಲ್‍ನಿಂದ ಎರಡು ಕೊಡ ನೀರು ತಂದರೆ ಕಾಸುಬಾಳದ ಬೆಂಕಿಕಡ್ಡಿ ಕೊಡಲು ಭರವಸೆನೀಡಿದ. ‘ನನ್ನಿಂದಾಗಲ್ಲ..’ ಅಂತ ಹೇಳಿಬಿಡು ಎಂದು ಬೇಡಿಕೊಂಡಂತೆ ಪಿಸುಗುಟ್ಟಿದೆ. ಅವನಿಗೆ ನನ್ನ ಮಾತು ಕೇಳಿಸಿತೊ ಇಲ್ಲೊ? ಹಿಂದೆ ಮುಂದೆ ನೋಡದೆ ಗೋಣು ಅಲ್ಲಾಡಿಸಿಬಿಟ್ಟ ಕೋಡಿ.

ಖಾಲಿ ಕೊಡವೇ ತನಗೆ ಭಾರವಾಗಿದೆ ಎಂಬಂತೆ ಸಣಕಲು ಮೈಯ ಈತ ಊರ ಹೊರಗಿನ ಬೋರ್‍ವೆಲ್‍ನತ್ತ ನಡೆದ. ಜನ ಕಾಲಿಗೆ ಕಾಲು ತುಳಿಯುತ್ತಿದ್ದರು. ಇರುವ ಒಂದೇ ಬೋರ್‍ವೆಲ್‍ಗೆ ನೂರಾರು ಜನ ಇರುವೆಯಂತೆ ಮುಕ್ಕಿದ್ದರು. ತನ್ನ ಸರದಿಗಾಗಿ ಕಾಯುತ್ತಿದ್ದವನ ತುಟಿಗಳು ಅಲುಗಾಡಿದಂತೆ ನಾನೂ ಮೇಲೆ ಕೆಳಗೆ ಬಾಗುತ್ತಾ ಮೈಕಲ್ ಜಾಕ್ಸನ್‍ನಂತೆ ಮೈ ಹೊರಳಿಸಿ ಆತನಿಗೆ ಶ್ರದ್ಧಾಂಜಲಿ ಅರ್ಪಿಸಿದೆ. ಅದ್ಹೇಗೊ ಒಂದು ಕೊಡ ನೀರು ಸಿಕ್ಕು ಇನ್ನೇನು ಕೊಡ ಎತ್ತಿಕೊಳ್ಳಬೇಕೆಂದು ಬಿಗಿ ಉಸಿರುಹಿಡಿದು ತುಟಿಗಳನು ಬಿಗಿಹಿಡಿದು ಸಡಿಲಿಸಿದ. ಬೋರ್‍ವೆಲ್‍ನ ಕೆಸರಿಗೆ ಜಾರಿಬಿದ್ದೆ! ಹೆಗಲಿಗೆ ಏರಿಸಿಕೊಂಡ ಕೊಡವನ್ನು ದೊಪ್ಪನೆ ಕೆಳಗೆ ಎಸೆಯಬೇಕೆಂಬ ಸಿಟ್ಟು ಬಂತು ಈತನಿಗೆ. ಮೈಯೆಗೆ ಕೆಸರು ಮೆತ್ತಿಕೊಂಡು  ಯಾರೂ ಪರಿಚಯ ಹಿಡಿಯದ ರೀತಿಯಲ್ಲಿ ಕಾಣತೊಡಗಿದೆ. ಸ್ವಲ್ಪ ಸಮಾಧಾನವೆನಿಸಿತು. ಈಗಂತೂ ಈತ ನನ್ನ ಮುಟ್ಟಲಾರ. ಆದರೆ ಕೊಡವನ್ನು ಸ್ವಲ್ಪ ದೂರದಲ್ಲಿ ಇಳಿಸಿ, ಮತ್ತೆ ನನ್ನತ್ತ ಬರಬೇಕೆ? ಜನರ ನೂಕುನುಗ್ಗಲಿನಲ್ಲಿ ಯಾರೊ ಒಬ್ಬರು ನನ್ನ ಮೇಲೆ ಕಾಲಿಟ್ಟರು. ತುಳಿತವೂ ಹಿತವೆನಿಸಿತು. ಕೆಟ್ಟ ಕೆಲಸದಿಂದ ಹೀಗಾದರೂ ಮುಕ್ತಿ ಸಿಕ್ಕಿತಲ್ಲ ಎಂಬ  ಸಮಾಧಾನದಿಂದ ಕೆಸರಲ್ಲೆ ಮುಖವಿಟ್ಟು ಮಲಗಿದೆ. ಪೆಚ್ಚುಮೋರೆ ಹಾಕಿದ ಈತ ನನಗಾಗಿ ಕೆಸರಲ್ಲೂ ಕೈಯಾಡಿಸಿದ. ಆತನಿಗೆ ಎಲ್ಲಿ ಮತ್ತೆ ಸಿಕ್ಕುಬಿಡುತ್ತೇನೆಂಬ ಭಯವಿತ್ತು. ಕೈತೊಳೆಯಲಾದರೂ ನೀರು ಬಿಡಿರೆಂದು ಗೋಗೆರೆದ. ‘ಕುಡಿಯಲು ನೀರಿಲ್ಲ, ಇನ್ನು ಇವನ ಕೈತೊಳೆಯಲು ನೀರು ಬಿಡಬೇಕಂತೆ’ ಜನ ಸಂಕಟ, ಸಿಟ್ಟಿನಿಂದ ಈತನನ್ನು ನೂಕಿದರು. ದೋತರಕ್ಕೆ ಕೆಸರು ಹತ್ತಿದ ಕೈಗಳನ್ನು ಒರೆಸಿಕೊಂಡು  ತನ್ನನ್ನು ಅವಮಾನಿಸುತ್ತಿರುವಂತೆ, ಗಹಗಹಿಸಿ ನಗುತ್ತಿರುವಂತೆ ಕಂಡ ಕೊಡದತ್ತ ಭಾರವಾದ ಹೆಜ್ಜೆ ಹಾಕುತ್ತ ನಡೆದ. ಕೆಸರÀಲ್ಲಿ ಹೂತಿದ್ದೇನೆ. ಈಗಂತೂ ಯಾರೂ ನನ್ನ ಮುಟ್ಟಲಾರರು. ಮಸಣದ ಹೂವು ನಾನು. ಕೆಸರಲ್ಲೆ ಕೊಳೆತು ಗೊಬ್ಬರವಾದರೂ ಸಸಿಯೊಂದಕ್ಕೆ ಹಿತವಾದ ಗೊಬ್ಬರವಾಗುತ್ತೇನೆಲ್ಲಾ! ಜನರ ತುಳಿತದ ಮಧ್ಯೆಯೂ ನಿದ್ದೆಗೆ ಜಾರಿದೆ. ನಾಳೆಯ ಉತ್ತಮ ಜೀವನಕ್ಕಾಗಿ ದಿನಗಳ ಎಣಿಸತೊಡಗಿದೆ.

ನಾನು, ನೀವು, ಅವರು, ಅವು

ಅವೆಷ್ಟು ಕ್ಷುಲ್ಲಕ ವಸ್ತುಗಳು ಜಗತ್ತಿನಲ್ಲಿ. ಅಲ್ಲಲ್ಲಿ ಹರಿದು ವಿಕಾರವಾದ ಬಟ್ಟೆ, ಕಸದ ತೊಟ್ಟಿ, ಅಲ್ಲಿಯೇ ಬಿದ್ದ ಅನಾಥ ಶಿಶು, ಒಡೆದ ಸೀಸೆ, ಮುರಿದ ಕಟ್ಟಿಗೆ, ಒಡೆದ ಕನ್ನಡಿ, ಪ್ಲ್ಯಾಸ್ಟಿಕ್ ಬಾಟಲಿ, ತುಕ್ಕು ಹಿಡಿದ ಕಬ್ಬಿಣದ ಸಲಾಕೆ, ಕೊಳೆತ ಕಾಯಿಪಲ್ಯೆ, ವಿರೂಪಗೊಂಡ ದೇವರ ಮೂರ್ತಿಗಳು, ಮಹಾತ್ಮರು ನಡೆದ ಹಾದಿ ಹೀಗೆ ಒಂದಾದ ನಂತರ ಒಂದು ಕಥೆ ಹೇಳಿಕೊಳ್ಳಬೇಕೆಂದು ತಹತಹಿಸಿದವು. ಕಥೆ ಹೇಳಿದರನೇ ತಪ್ತ ಮನಸುಗಳು ತಣ್ಣಗಾದವು ಎಂಬ ಅಗೋಚರ ಬಯಕೆ. ಕ್ಷುಲ್ಲಕ ವಸ್ತುಗಳ ಪಟ್ಟಿಗೆ ಸೇರಲು ಹಲವು ಸಂಗತಿಗಳು ಮೇಲಾಟ ನಡೆಸಿದವು. ಪ್ರೈಮರಿ, ಹೈಸ್ಕೂಲ್‍ನಲ್ಲಿ ಇಂಗ್ಲಿಷ್ ಮೇಸ್ಟ್ರು ಕಲಿಸಿದ ಪರ್ಸನ್ಸ್ ನೆನಪಾಗಿ ಅವೂ ಕ್ಷುಲ್ಲಕ ವಸ್ತುಗಳೇ ಎನಿಸಿದವು. ಪ್ರಥಮ ಪುರುಷ ಏಕವಚನ ‘ನಾನು’, ಬಹುವಚನ ‘ನಾವು’, ದ್ವಿತೀಯ ಪುರುಷ ಏಕವಚನ ‘ನೀನು’, ಬಹುವಚನ ‘ನೀವು’, ತೃತೀಯ ಪುರುಷ ಏಕವಚನ ‘ಅವನು, ಅವಳು, ಅದು’ ಮತ್ತು ಬಹುವಚನ ‘ಅವರು ಹಾಗೂ ಅವು’!

Leave a Reply