ಬಾಗಿನ ಅರ್ಪಿಸುವ ಮುನ್ನ…

 

ಕನ್ನಡ ಸಾಹಿತ್ಯ ಲೋಕಕ್ಕೆ ಹೈದ್ರಾಬಾದ್ ಕರ್ನಾಟಕದ ಬನಿಯನ್ನು ಪರಿಚಯಿಸಿದ ಕಲಿಗಣನಾಥ ಗುಡದೂರ ಅವರು ಈಗ ‘ಬಿಸಿಲ ಬಾಗಿನ’ ನೀಡಿದ್ದಾರೆ. ತಮ್ಮ ನಾಲ್ಕು ಮಹತ್ವದ ಸಂಕಲನಗಳನ್ನು ಒಟ್ಟುಗೂಡಿಸಿ ಕೊಟ್ಟಿದ್ದಾರೆ

ಇದರಿಂದ ಕಲಿಗಣನಾಥ ಹೇಗೆ ನಮಗೆ ಧಕ್ಕುತ್ತಾರೋ ಅದಕ್ಕೂ ಮಿಗಿಲಾಗಿ ಹೈದ್ರಾಬಾದ್ ಕರ್ನಾಟಕದ ಕರುಳು ಹಿಂಡುವ ನೋವು ಒಳಗಿಳಿಯುತ್ತದೆ

ಕೃತಿಯ ಲೇಖಕರ ಮಾತು ಇಲ್ಲಿದೆ.

ಅದಕ್ಕಿಂತಲೂ ಮಿಗಿಲಾಗಿ ಇನ್ನೊಬ್ಬ ಕಥೆಗಾರ ‘ರೊಟ್ಟಿ ಮುಟಗಿ’ಯ ಟಿ ಎಸ್ ಗೊರವರ ಅವರ ತಾಯಿ ಪುಸ್ತಕ ಓದುತ್ತಿರುವ ಅಪರೂಪದ ಫೋಟೋಗಳು ಇವೆ.

ಇಷ್ಟೊಂದು ಕತೆಗಳನ್ನು ಬರೆದಿದ್ದೇನೆಯೇ ಎಂಬುದನ್ನು ಕೇಳಿಕೊಂಡರೆ ಎಂಥದೋ ಅಚ್ಚರಿ, ಆತಂಕ. ಕಳೆದ ಇಪ್ಪತ್ತು ವರ್ಷಗಳಿಂದಲೂ ಕತೆಗಳನ್ನು ಬರೆಯುತ್ತಿರುವೆ. ಈವರೆಗೆ ನಾಲ್ಕು ಕಥಾ ಸಂಕಲನಗಳು ಪ್ರಕಟವಾಗಿವೆ. ನನ್ನನ್ನು ಕನ್ನಡ ಸಾಹಿತ್ಯಾಸಕ್ತರು ಪ್ರೀತಿಯಿಂದ ಹಾರೈಸಿದ್ದಾರೆ. ನನ್ನ ನಾಲ್ಕು ಕಥಾ ಸಂಕಲನಗಳ ಪ್ರತಿಗಳು ಎಲ್ಲೂ ಲಭ್ಯವಿಲ್ಲದೇ ಇರುವುದರಿಂದ ಎಲ್ಲ ಕತೆಗಳನ್ನು ಒಟ್ಟಿಗೆ ಸೇರಿಸಿ ತನ್ನಿ ಎಂದು ಸಲಹೆ ನೀಡಿದವರು ಸಹ ಕತೆಗಾರ ಟಿ.ಎಸ್.ಗೊರವರ ಅವರು. ಈ ಕಾರ್ಯಕ್ಕೆ ಮುಹೂರ್ತ ಇಟ್ಟವರು ಇನ್ನೊಬ್ಬ ಕತೆಗಾರ ಮಿತ್ರ ಮಂಜುನಾಥ್ ಲತಾ ಅವರು. ಇವರಿಬ್ಬರ ಒತ್ತಾಸೆ ಇಲ್ಲದಿದ್ದರೆ ‘ಬಿಸಿಲ ಬಾಗಿನ’ದ ರೂಪದಲ್ಲಿ ಒಟ್ಟು ಕತೆಗಳ ಸಂಕಲನ ಪ್ರಕಟಗೊಳ್ಳುತ್ತಿರಲಿಲ್ಲವೇನೋ?

ಈ ಸಂಕಲನದ ಕತೆಗಳ ಬಗ್ಗೆ ಮೊದಲಿಗೇ ಹೇಳಬೇಕಾದ ಮಾತೆಂದರೆ, ಲೇಖಕ ತನಗೆ ತಾನೇ ಹೇಳಿಕೊಂಡ, ಇನ್ನೂ ಹೇಳಿಕೊಳ್ಳುತ್ತಿರುವಂತೆ ಅನಿಸುವ ಕತೆಗಳು ಇಲ್ಲಿವೆ. ಸೃಜನಶೀಲ ಬರಹಗಾರನ ಜೀವನದಲ್ಲಿ ಇದೊಂದು ಅಪೂರ್ವ ಹಂತ. ಓದುಗರಿಗೆ, ಲೋಕಕ್ಕೆ, ಸಮಕಾಲೀನರಿಗೆ ಬರೆಯುವುದು ಎಂದಿಗೂ ಇದ್ದದ್ದೇ. ಕತೆಗಾರ ಕತೆಗಳನ್ನು ತನಗೆ ತಾನೇ ಹೇಳಿಕೊಳ್ಳುವುದಕ್ಕೆ ಇರುವ ಕಾರಣಗಳು ಪ್ರತಿಯೊಬ್ಬ ಲೇಖಕನ ಸಂದರ್ಭದಲ್ಲೂ ಭಿನ್ನ. ಕತೆಗಾರ ತನಗೆ ತಾನೇ ಕತೆ ಹೇಳಿಕೊಂಡರೆ ಸತ್ಯಕ್ಕೆ ಹತ್ತಿರವಾದ ಕೆಲವು ಕಾರಣಗಳನ್ನಾದರೂ ತಿಳಿಯಲು ನೆರವಾಗುತ್ತದೆ ಎಂಬುದು ನನ್ನ ನಂಬಿಕೆ.

ಲೋಕದ ಕನ್ನಡಿಯಲ್ಲಿ ತನ್ನನ್ನು ಕಾಣುವುದು-ಪರಿಶೀಲಿಸಿಕೊಳ್ಳುವುದು, ತನ್ನ ಕನ್ನಡಿಯಲ್ಲಿ ಲೋಕವನ್ನು ಕಾಣುವುದು-ಪರಿಶೀಲಿಸುವುದು; ಈ ಎರಡು ರೀತಿಯ ನೋಡುವಿಕೆ ಬೇರೆ ಬೇರೆಯಲ್ಲ ಎನ್ನುವಂತೆ ಇಲ್ಲಿಯ ಕತೆಗಳಿವೆ. ಇಂತಹ ನೋಡುವಿಕೆ ಒಂದು ರೀತಿಯ ತಹತಹವನ್ನು ಒಳಗುದಿಯನ್ನು ಬರವಣಿಗೆಗೆ ನೀಡುತ್ತದೆ ಎಂದು ನಂಬಿದ್ದೇನೆ. ನನ್ನ ಊರಿನಲ್ಲಿ ನಾನು ಕಂಡ ನೋವು-ನಲಿವು, ಹೋರಾಟ, ಸಂಕಟ ಎಲ್ಲವನ್ನೂ ಕತೆಗಳನ್ನಾಗಿ ಇಲ್ಲಿ ದಾಖಲಿಸಿದ್ದೇನೆ.

ಎಂದಿನಂತೆ ನನ್ನ ಬರವಣಿಗೆಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಎಲ್ಲಾ ಹಿರಿಯರು ಹಾಗೂ ಸ್ನೇಹಿತರನ್ನು ಸ್ಮರಿಸುತ್ತೇನೆ. ಹಾಗೆಯೇ ನನ್ನ ನಾಲ್ಕು ಕಥಾ ಸಂಕಲನಗಳನ್ನು ಪ್ರಕಟಿಸಿರುವ ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ, ಸಂಸ್ಕøತಿ ಪ್ರಕಾಶನದ ಸಿ.ಮಂಜುನಾಥ ಹಾಗೂ ಕಲಬುರಗಿಯ ಕನ್ನಡ ನಾಡು ಪ್ರಕಾಶನದ ಅಪ್ಪಾರಾವ್ ಅಕ್ಕೋಣಿ ಹಾಗೂ ಅವರ ಬಳಗಕ್ಕೆ, ಈ ಸಮಗ್ರ ಕಥಾ ಸಂಕಲನವನ್ನು ಪ್ರಕಟಿಸುತ್ತಿರುವ ಮೈಸೂರಿನ ಅಂಬಾರಿ ಪ್ರಕಾಶಕನದ ಪ್ರಕಾಶಕರನ್ನು ಸದಾ ನೆನೆಯುವೆ. ತಂದೆ, ತಾಯಿ, ಅಕ್ಕ, ತಂಗಿ, ತಮ್ಮಂದಿರು, ಸಂಗಾತಿ ಉಮಾ, ಮಕ್ಕಳಾದ ಸಿರಿ, ಭೂಮಿಯ ಸಹಕಾರ, ಸಹನೆ ಮರೆಯಲಾಗದು. ಇಲ್ಲಿನ ಕತೆಗಳಿಗೆ ಮುಖಾಮುಖಿಯಾಗಿರುವ ನಿಮ್ಮನ್ನು ನನ್ನ ಕತೆಗಳಂತೆಯೇ ಗೌರವಿಸುವೆ.

-ಕಲಿಗಣನಾಥ ಗುಡದೂರು

ನನ್ನ ಸಹ ಲೇಖಕರು ಹಾಗೂ ಸೋದರರಾದ ಟಿ.ಎಸ್.ಗೊರವರ ಹಾಗೂ ಕಳಕೇಶ ಗೊರವರ ಅವರ ತಾಯಿ ಶರಣಮ್ಮ ಅವರು ನನ್ನ “ಬಿಸಿಲ ಬಾಗಿನ” ಕಥಾ ಸಂಕಲನವನ್ನು ತನ್ನ ಪಾಡಿಗೆ ತಾನು ಓದುತ್ತಿದ್ದಾಗ ಸಿಕ್ಕ ಚಿತ್ರಗಳು.

ಗೊರವರ ಸೋದರರು ವಾಟ್ಸ್ ಆ್ಯಪ್ ಮೂಲಕ ಈ ಚಿತ್ರಗಳನ್ನು ನನಗೆ ಕಳಿಸಿದ್ದಾರೆ.

ನನ್ನ ಇದುವರೆಗಿನ 36 ಕಥೆಗಳನ್ನು ಒಳಗೊಂಡ ಕಥಾ ಸಂಕಲನ “ಬಿಸಿಲ ಬಾಗಿನ” ವನ್ನು ತಮ್ಮ ಓದಿನ ಮನೆ ಹಾಗೂ ಮನಕ್ಕೆ ಅರ್ಪಿಸಿಕೊಳ್ಳಲು ಈ. ಮೂಲಕ ಪ್ರೀತಿಯ ಕೋರಿಕೆ. ಕನ್ನಡ ಪುಸ್ತಕ ಸಂಸ್ಕೃತಿ ಉಳಿಸಿ, ಬೆಳೆಸಲು ಇದು ನನ್ನ ಅರಿಕೆ.
ಮೈಸೂರಿನ ರೂಪ ಪ್ರಕಾಶನದ ಪ್ತಕಾಶಕರಾದ ಯು.ಮಹೇಶ ಅವರ ಬ್ಯಾಂಕ್ ಖಾತೆಗೆ 300 ರೂ. (ರಿಜಿಸ್ಟರ್ ಅಂಚೆ ಅಥವಾ ಕೋರಿಯರ್ ವೆಚ್ಚ ಸೇರಿ) ಕಳಿಸಿದರೆ ನಿಮ್ಮ ಮನೆ ಬಾಗಿಲಿಗೇ “ಬಿಸಿಲ ಬಾಗಿನ” ತಲುಪಲಿದೆ.
ಬ್ಯಾಂಕ್ ಖಾತೆಯ ವಿವರ ಹೀಗಿದೆ.

Canara bank
current a/c no
1512201000539
ROOPA PRAKASHANA
IFSC–CNRB0001512
KUVEMPU NAGARA BRANCH MYSURU

Leave a Reply