ನೀನು ನಾನು ಇಬ್ಬರೂ ಸೇರಿ

 

 

 

ಸತ್ಯಮಂಗಲ ಮಹಾದೇವ

 

 

 

 

ನೀನು ಹಿಮಬಿಂದು
ನಿನ್ನ ಹೊಂದಲಾರದ ಎಲೆ ನಾನು
ಇಬ್ಬರೂ ಸೇರಿ
ಪುರಾಣಗಳ ಕಟ್ಟಳೆ ಒಡೆದು
ನೋಟದಲಿ ಮಿಡಿವ ಪ್ರೀತಿಯ ಚುಂಬಿಸೋಣ

ನೀನು ಮಿಸುಗುಡುವ ಗರಿಯ ಜೀವ ಸೆಲೆ
ನಿರ್ವಾತ ನಾನು
ಇಬ್ಬರೂ ಸೇರಿ
ಜಗಕೆ ತ್ರಾಣವಾಗುವ ಧಾನ್ಯಗಳ ಮೊಳೆಸೋಣ

ನೀನು ಭಾಷೆ ತುಂಡರಿಸಲಾಗದ ಭಾವದ ಗೊಂಚಲು
ಬೆಚ್ಚನೆಯ ನೆನಪುಗಳಲ್ಲಿ ಸಿಂಗರಗೊಂಡ
ಚಿತ್ತಾರದ ಶಬ್ದ ನಾನು
ಇಬ್ಬರೂ ಸೇರಿ
ಯಾರುಬೇಕಾದರೂ ಅಳಿಸಿ ಬರೆವ ಜೀವಾಕ್ಷರಗಳಾಗೋಣ

ನೀನು ಪರುಷಮಣಿ
ಸಮುದ್ರದ ಚೆಲ್ಲಾಟಕೆ ಚೆಲ್ಲಿಹೋದ ಕಲ್ಲಿನ ಹರಳುನಾನು
ಇಬ್ಬರೂ ಸೇರಿ
ಭೂಮಿ ತೂಕದ ಕಳೆಗಟ್ಟುವ ಉತ್ಸವಗಳ ತಣಿಸೋಣ

ನೀನು ಅಚ್ಚರಿ
ಮೀರಲಾಗದ ಕೆಸರಿನ ಉಸುಕು ನಾನು
ಇಬ್ಬರೂ ಸೇರಿ
ಹಸಿದ ಕಂಗಳು ಕಾಣುವ ಸತ್ಯಕ್ಕೆ ದಾರಿಗಳಾಗೋಣ
ನಮ್ಮ ಬೆನ್ನಿನ ಮೇಲೆ ಸತ್ಯ ದಾಟಿದ ನೆನಪಿಗೆ
ಸಾಕ್ಷಿಯಾಗೋಣ

ನೀನು ಗುಡಿಯೊಳಿರುವ ದೇವ ಶಿಲೆ
ಆಲಯದ ಕಟ್ಟೆ ಹತ್ತಿಸದವರ ಕಣ್ಣಿನ ಕಸ ನಾನು
ಇಬ್ಬರೂ ಸೇರಿ
ಬಯಲಲಿ ನಗುವ ಬೇಲಿಯ ಹೂವ ನಗಿಸೋಣ

ಕಸರಿನಲಿ ನಗುವ ಕಮಲದ ಚೆಲುವು ನೀನು
ಗೊಬ್ಬರದ ಮೇಲೆ ನಗುವ ಕುಂಬಳದ ಕುಡಿ ನಾನು
ಇಬ್ಬರೂ ಸೇರಿ
ಕುಲವಿಲ್ಲದ ನೆಲೆಯ ಜೀವದ ಹಾಡನು
ಹಂಗಿಲ್ಲದ ಬೀದಿಯಲಿ ಹಾಡೋಣ
ನಗುವ ಮೊಗ್ಗುಗಳಿಗೆ ಅರಳುವ ಕಾಲವಾಗಿ ಕಾಯೋಣ

 

5 Responses

 1. ಸತ್ಯಮಂಗಲ ಮಹಾದೇವ says:

  ಧನ್ಯವಾದಗಳು ಸರ್

 2. Lalitha siddabasavayya says:

  ವಾಹ್ !!!

 3. ದೊಡ್ಡಕಲ್ಲಹಳ್ಳಿ ನಾರಾಯಣಪ್ಪ says:

  ಸತ್ಯ ಮಂಗಲ ಮಹದೇವ ಅವರ ಕವಿತೆ
  ಇಷ್ಟವಾಯಿತು

Leave a Reply

%d bloggers like this: