ಪುಸ್ತಕವಾಗಿ ಬಂತು ‘ರಾಮಾ ರಾಮಾ ರೇ’

 

 

 

ವಿ ಚಲಪತಿ

 

 

 

 

 

ಬೆಂಗಳೂರಿನ ಸೃಷ್ಟಿ ದೃಶ್ಯಕಲಾ ಅಕಾಡೆಮಿಯಲ್ಲಿ ಸಿನಿಮಾ ನಿರ್ದೇಶನ ತರಭೇತಿಗೆಂದು ಸೇರಿದಾಗ ಅಲ್ಲಿನ ಗುರುಗಳಾದ ಶಶಿಕಾಂತ್ ಯಡಹಳ್ಳಿಯವರು ಮೊದಲ ದಿನವೇ ರಾಮಾ ರಾಮಾ ರೇ ಕನ್ನಡ ಸಿನಿಮಾ ರಿಲೀಸ್ ಆಗಿದೆ ಬೆಂಗಳೂರು ಸಿನಿಮಾ ಉತ್ಸವದಲ್ಲಿ ಕೂಡ ಪ್ರದರ್ಶನ ಆಗ್ತಿದೆ ನೋಡಿ ಚೆನ್ನಾಗಿದೆ ಎಂದರೂ ಸಮಯದ ಅಭಾವದಿಂದ ಆ ದಿನ ಸಿನಿಮಾ ವೀಕ್ಷಿಸಲು ಸಾಧ್ಯ ಆಗಲಿಲ್ಲ.

ಆಮೇಲೆ ತರಗತಿಯಲ್ಲಿ ಈ ಸಿನಿಮಾ ಕುರಿತು ಅನೇಕ ಬಾರಿ ಪ್ರಸ್ತಾಪ ಆಗಿತ್ತು, ಯಾವಾಗಾದ್ರೂ ಈ ಸಿನಿಮಾ ನೋಡ್ಬೇಕು ಅಂತ ಮನಸ್ಸಲ್ಲಿ ಕಾಡ್ತಾನೇ ಇತ್ತು, ಅದು ಸಾಧ್ಯ ಆಗಿದ್ದು ತಿರುಪತಿಗೆ ಹೋಗಬೇಕಾದರೆ, ಬಸ್ಸಲ್ಲಿ ಟೈಂ ಪಾಸ್ ಆಗ್ಲೀ ಅಂತ ಯಾವುದೋ ಒಂದು ವೆಬ್ ಸೈಟ್ ಇಂದ ರಾಮಾ ರಾಮಾ ರೇ ಸಿನಿಮಾನ ಡೌನ್ಲೋಡ್ ಮಾಡಿ ನೋಡೋಕೆ ಶುರು ಮಾಡಿದೆ, ಮುಗಿದದ್ದು ತಿರುಪತಿಗೆ ತಲುಪಿದಾಗ, ಏನೋ ಒಂಥರಾ ಭಾವ, ಅರೇ! ಚೆನ್ನಾಗಿದೆ, ಬರೇ ಒಂದೇ ತೆರನಾದ ಸಿನಿಮಾ, ರಿಮೇಕ್ ಸಿನಿಮಾಗಳನ್ನೇ ನೋಡಿ ಬೇಸತ್ತವರಿಗೆ ಒಂದು ವಿಭಿನ್ನ ಸಿನಿಮಾ, ಭಿನ್ನ ಮನಸ್ಸುಗಳುಳ್ಳ ಕಥಾಲೋಕದ ಹೂರಣವಾಗಿತ್ತು. ಇದು ಕನ್ನಡ ಸಿನಿಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದು ಅತಿಶಯೋಕ್ತಿಯಲ್ಲ, ಒಳ್ಳೆಯ ಕಥಾಹಂದರವುಳ್ಳ ಸಿನಿಮಾವನ್ನು  ಜನ ಆದರಿಸುತ್ತಾರೆ ಎಂಬುದಕ್ಕೆ ಮತ್ತೊಂದು ನಿದರ್ಶನವಾಯ್ತು.

ಸರಿ ಸಿನಿಮಾ ನೋಡಿದ್ದಾಯ್ತು, ಮನಸ್ಸಿಗೆ ಒಳ್ಳೆ ಸಿನಿಮಾ ನೋಡ್ದೆ ಅನಿಸ್ತು, ಥಿಯೇಟರ್ ನಲ್ಲಿ ಸಿನಿಮಾ ನೋಡಲಾಗಲಿಲ್ಲ ಅನ್ನೋ ಕೊರಗು ಇನ್ನೂ ಇದೆ. ಇದ್ದಕಿದ್ದಂತೆ ಒಂದು ದಿನ ಪೇಸ್ ಬುಕ್ ನಲ್ಲಿ ರಾಮಾ ರಾಮಾ ರೇ….ಸಿನಿಮಾದ ಕಥೆಯನ್ನು ಪುಸ್ತಕ ರೂಪದಲ್ಲಿ ತರ್ತಾ ಇರೋ ಬಗ್ಗೆ  ಟ್ರೈಲರ್ ನೋಡ್ದೆ,  ವಿಭಿನ್ನ ಯೋಚನೆ ಅಲ್ದೇ ಅದೊಂದು ಒಳ್ಳೆ ಯೋಜನೆ ಎಂಬುದು ಮನಸ್ಸಿಗೆ ತುಂಬಾ ಸಂತೋಷದ ವಿಷಯ, ಅಂತರ್ಜಾಲದಲ್ಲಿ ಮುಳುಗಿರುವ ಯುವ ಸಮೂಹಕ್ಕೆ ಹಾಗೂ ನನಗೂ ಅಚ್ಚರಿ ಹೊತ್ತು ತಂದ ಸಂಗತಿ ಏಕೆಂದರೆ ಪುಸ್ತಕವನ್ನು ಕೊಳ್ಳಲೇಬೇಕು ಅನ್ನೋ ಮನಸ್ಥಿತಿಗೆ ನನ್ನನ್ನು ಒಗ್ಗಿಸಿದ್ದು ಆ ಟ್ರೈಲರ್.

ಆನಂತರ ಪುಸ್ತಕ ಬಿಡುಗಡೆ ಆದ ತಕ್ಷಣ ಟೋಟಲ್ ಕನ್ನಡ ಎಂಬ ಪುಸ್ತಕ ಮಾರಾಟ ಅಂತರ್ಜಾಲ ತಾಣದಲ್ಲಿ ಪುಸ್ತಕ  ಕೊಂಡು ಓದಲು ಶುರು ಮಾಡಿದಾಗ ಕಾಡಿದ್ದು ಮುಖಪುಟದ ಮೇಲೆ ಅಚ್ಚಾದ ಸಾಲು ‘ಪಟ್ಟ ಪಾಡೆಲ್ಲವೂ ಹುಟ್ಟು ಹಾಡಾಗುತ’ ಪುಸ್ತಕ ಪೂರ್ತಿ ಓದೋ ಮುಂಚೇನೇ ಆ ಸಾಲಿನ ಒಳಾರ್ಥ ನನಗೆ ಗೊತ್ತಾಗಿ ಹೋಯ್ತು, ನಿರ್ದೇಶಕರಾದ ಡಿ ಸತ್ಯಪ್ರಕಾಶ್ ಹಾಗೂ ಅವರ ತಂಡ ಪಟ್ಟ ಪಾಡೆಲ್ಲವೂ ಖಂಡಿತ ಒಂದು ಅದ್ಭುತ ಹಾಡಾಗಿ ಹೊರಹೊಮ್ಮಿದೆ  ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ನಾನು ಥಿಯೇಟರ್ ನಲ್ಲಿ ಸಿನಿಮಾ ನೋಡೋಕಾಗ್ಲಿಲ್ಲ ಎಂಬ ಕೊರಗು ಮಾಗಿದ್ದು ಪುಸ್ತಕವನ್ನು ಓದಿದಾಗಲೇ ಇದಕ್ಕೆ ಖಂಡಿತ ಧನ್ಯವಾದ ಹೇಳಬೇಕಾಗಿರೋದು ಡಾ ಸಿದ್ಧಲಿಂಗಯ್ಯ ಕಂಬಾಳು ಅವರಿಗೆ ಮನಸ್ಸಿಗೆ ನಾಟೋ ತರಹ ಸಿನಿಮಾ ಸಂಭಾಷಣೆ ಬರೆದಿದ್ದಕ್ಕಾಗಿ ಹಾಗೂ ಪುಸ್ತಕವನ್ನು   ಸಿನಿಮಾಸಕ್ತರಿಗೆ ಒಂದು ಗೈಡ್ ತರ ಹೊರತಂದಿದ್ದಕ್ಕಾಗಿ. ಸಿನಿಮಾ ನೋಡೋವಾಗ ಹೇಗೇ ಕಣ್ಣಿರು ಮೂಡಿಸುತ್ತೋ, ಪುಸ್ತಕ ಓದೋವಾಗ ಕೂಡ ಅದೇ ಭಾವವನ್ನು ಕಣ್ಣಲ್ಲಿ ತರಿಸುತ್ತೆ. ಸಿನಮಾ ತಂಡದವರು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ ಸಿನಿಮಾನುಭವವನ್ನು ಪುಸ್ತಕ ರೂಪದಲ್ಲಿ ಹೊರತರದೇ ಇದ್ದಿದ್ದರೆ ಎಷ್ಟೊಂದು ಮಿಸ್ ಮಾಡ್ತಾ ಇದೀವಿ ಅನ್ನೋದು  ಊಹಾತೀತ.

ನನ್ನ ಪ್ರಕಾರ ಜನರ ಮನಸ್ಸಿನಲ್ಲಿ ಇನ್ನೂ ಆ ಸಿನಿಮಾ ಓಡ್ತಾ ಇದೇ ಅಂದ್ರೆ ಅದಕ್ಕೆ ಕಾರಣ  ಚಿತ್ರತಂಡದವರು ಸಿನಿಮಾ ಪ್ಯಾಷನ್ ನಿಂದ ಇಷ್ಟ ಪಟ್ಟು ಚಿತ್ರಕತೆಯನ್ನೇ ನಂಬಿ ಸಿನಿಮಾ ಮಾಡಿದ ರೀತಿ, ಭಿನ್ನ ಕೋನಗಳಿಂದ ಯೋಚಿಸಿ ಯೋಜಿಸಿ ಕಥೆಯನ್ನು ಹೆಣೆದ ರೀತಿ, ಎಲ್ಲಾ ಪಾತ್ರಗಳಿಗೂ ತನ್ನದೇ ಆದ ವಿಶಿಷ್ಟತೆ ನೀಡಿದ್ದು, ನೀವೇ ಯೋಚಿಸಿ ಎಲ್ಲಾ ಆ್ಯಂಗಲ್ ಗಳಿಂದಲೂ ಲವರ್ ಬಾಯ್ ತರ ಕಾಣ್ಸೋ ನಟರಾಜ್ ಅವರಿಗೆ ವಿಚಿತ್ರ ಕೇಶವಿನ್ಯಾಸಗಳನ್ನೊಳಗೊಂಡ ಕೈದಿಯಾಗಿ ಪಾತ್ರ ಕೊಟ್ಟಿದ್ದು, ನೋಡೋಕೆ ಒಂಥರಾ! (ಚೆನ್ನಾಗೇ ಇದ್ದಾರೆ) ಸ್ವಲ್ಪ ಕಳ್ಳನ ತರಾನೇ ಕಾಣ್ಸೋ ಧರ್ಮಣ್ಣನಿಗೆ ಲವರ್ ಬಾಯ್ ಪಾತ್ರ ನೀಡಿರೋದು, ಜಯರಾಮಣ್ಣನವರ ಅಭಿನಯ ವರ್ಣನಾತೀತ, ಮಠ ಅವರ ಬುಳುಕು ಬುಳುಕು ಪಾತ್ರ, ಇನ್ನೂ ಅನೇಕ ಪಾತ್ರಗಳು ಸಿನಿಮಾಗೆ ನ್ಯಾಯ ಒದಗಿಸಿದ್ದರಿಂದಾನೇ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದಲ್ಲದೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡದ್ದು.

ಪುಸ್ತಕದ ಪುಟಗಳನ್ನು ಹೊರಳಿಸಿದಾಗ ಅಣ್ಣ  ಇದು ನಿಮ್ಮ ಕನಸು ಎಂಬ ಸಾಲು ಇದನ್ನ ಚಿತ್ರದ ಪಾತ್ರಧಾರಿಯಾದ ರಾಮಯ್ಯ ನವರಿಗೆ ಅಂಕಿತ ಮಾಡಿದ್ದು ಏಕೆ ಎಂಬುದು ಓದಿದಾಗಲೇ ಅರಿವಾಗಿದ್ದು, ಚಿತ್ರತಂಡಕ್ಕೆ ಎಷ್ಟೋ ವಿಷಯಗಳಲ್ಲಿ ಆಧಾರವಾಗಿದ್ದ ಜಯರಾಮಣ್ಣ ಸಿನಿಮಾ ಚಿತ್ರೀಕರಣ ಹಂತದ ಸಂದರ್ಭದಲ್ಲಿ ತೀರಿಕೊಂಡದ್ದು ತುಂಬಲಾರದ ನಷ್ಟ, ಪಾಸಿದಾರನ ಪಾತ್ರಕ್ಕೆ ಜೀವ ತುಂಬಿದ್ದ ರಾಮಯ್ಯನವರ ಮರಣ ಚಿತ್ರತಂಡದವರನ್ನು ಎಷ್ಟು ಕಾಡಿರಬೇಕು? ಎಲ್ಲೆಗಳನ್ನೆಲ್ಲಾ ಮೀರಿ ಡಿ ಸತ್ಯಪ್ರಕಾಶರವರು ಸಂಗೀತ ನಿರ್ದೇಶಕನಾಗಿ ಜಯರಾಮಣ್ಣನವರ ಮಗನಾದ ವಾಸುಕಿ ವೈಭವ್ ರವರನನ್ನು ಆಯ್ಕೆ ಮಾಡಿಕೊಂಡಾಗಿಂದ ಚಿತ್ರದ ಬಹುಮುಖ್ಯ ಭಾಗವಾಗಿದ್ದ ವಾಸುಕಿ ಅವರಿಗೆ ಎಷ್ಟು ಕಾಡಿದ್ದಿರಬಹುದು?

ಚಿತ್ರಕ್ಕೋಸ್ಕರ ನಾಲ್ಕು ವರ್ಷ ಚಿತ್ರತಂಡ ಪಟ್ಟ ಪಾಡು ಬಾಹುಬಲಿ ಸಿನಿಮಾಕ್ಕಿಂತ ಕಡಿಮೆಯೇನಲ್ಲ, ಅಲ್ಲಿ ಪ್ರತಿಭೆಯ ಜೊತೆ ದುಡ್ಡಿನ ಹೊಳೆ ಇತ್ತು, ಇಲ್ಲಿ ಪ್ರತಿಭೆಯ ಜೊತೆ ಸಹಕಾರ ಮನೋಭಾವ ಇತ್ತು.

ಪುಸ್ತಕದ ಪೀಠಿಕೆ, ಮೊದಲ ನುಡಿ, ಸಿನಿಮಾದ ಸ್ಥೂಲ ಪರಿಚಯ, ನಿರ್ಮಾಪಕರ ಹುಡುಕಾಟ, ನಾವ್ ನಾವೇ, ಲೊಕೇಷನ್ ಹುಡುಕಾಟಕ್ಕೆ ೧೨,೫೦೦ ಪ್ರಯಾಣ, ಜೀಪ್, ತದ್ರೂಪಿ ಅನ್ವೇಷಣೆ (ನಿಜವಾಗ್ಲೂ ಪುಸ್ತಕ ಓದೋವರೆಗೂ ಡ್ಯೂಪ್ ಪಾತ್ರದ ನಟನೆ  ಬಗ್ಗೆ ಗೊತ್ತಾಗ್ಲೇ ಇಲ್ಲ), ಚಿತ್ರೀಕರಣದ ಸವಾಲುಗಳು, ಸಂಗೀತ, ಡಬ್ಬಿಂಗ್- ಮಿಕ್ಸಿಂಗ್, ಚಿತ್ರದ ಪ್ರಚಾರ, ಬಿಡುಗಡೆ ಬಗ್ಗೆ ಸಿನಿಮಾದ ಮಿಕ್ಕೆಲ್ಲಾ ವಿಷಯಗಳ ಬಗ್ಗೆ ಈ ಪುಸ್ತಕ ರೋಚಕ ವಿಷಯಗಳನ್ನು ಹೊತ್ತು ತಂದಿದೆ, ಸಿನಿಮಾ ರಂಗದಲ್ಲಿ ಕಲಿಯಬೇಕೆನ್ನುವರಿಗೆ ಒಂದು ಗೈಡ್, ರಾಮಾ ರಾಮಾ ರೇ…ಸಿನಿಮಾ ನೋಡಿ ನಿಮ್ಮ ಅಮೂಲ್ಯ ಸಮಯಕ್ಕೆ ಒಂದು ಅರ್ಥ ನೀಡುತ್ತೆ, ಪುಸ್ತಕ ಕೊಂಡು ಓದಿ ನಿಮ್ಮ ಮನಸ್ಸಿಗೆ ಆನಂದ ನೀಡುತ್ತೆ, ನನಗಂತೂ ರಾಮಾ ರಾಮಾ ರೇ..ಸಿನಿಮಾ ಹಾಗೂ ಪುಸ್ತಕ absolute treat.

2 Responses

  1. Manohar Gowda says:

    Nice Article Chalpati Carryon

  2. Tq ಮನೋಹರ್

Leave a Reply

%d bloggers like this: