ಇಲ್ಲಿದ್ದಾರೆ ಪಾರ್ವತಿ ಹಾರೀತ: ನೋಟ ಖಂಡಿತಾ ಹರಿತ. ಕವಿತೆ ‘ಮೃದೂನಿ ಕುಸುಮಾದಪಿ’..

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಈಗ ಪ್ರಕಟವಾಗಿರುವ ಪಾರ್ವತಿ ಹಾರೀತ ಅವರ ಕವಿತೆಗಳ ಬಗ್ಗೆ

ಟಿಪ್ಪಣಿ ಬರೆಯಲಿರುವವರು ವಿನಯ್ ಕುಮಾರ್ ಕಾದು ಓದಿ

‘ಇಲ್ಲ, ನನ್ನ ಕೆಲಸವಿರುವುದು ಮಣ್ಣಿನ ಜೊತೆ’ ಎಂದು ಸೀದಾ ಕಾಂಕ್ರೀಟ್ ನಗರಿಗೆ ರಾತ್ರೋರಾತ್ರಿ ವಿದಾಯ ಹೇಳಿ ಹೊಲದ ಮಧ್ಯೆ ಮನೆ ಮಾಡಿದವರು. ಪಾರ್ವತಿ ಹಾರೀತ.

ನೋಟ ಖಂಡಿತಾ ಹರಿತ. ಕವಿತೆ ‘ಮೃದೂನಿ ಕುಸುಮಾದಪಿ’..

ಪಾರ್ವತಿ ಕೃಷಿಯ ಜೊತೆಗೆ ಕಾವ್ಯ ಕೃಷಿಗೂ ಎಂಟ್ರಿ ಕೊಟ್ಟರು. ಎರಡು ಕೃಷಿಯಲ್ಲೂ ರಾಸಾಯನಿಕ ಬಳಸುವುದಿಲ್ಲ ಎನ್ನುವುದು ಇವರ ಹೆಮ್ಮೆ. ನೆಲದೊಳಗಿನ ಸದ್ದಿಲ್ಲದ ಎರೆಹುಳು ಮಣ್ಣಿನ ಕಸುವು ಹೆಚ್ಚಿಸುವಂತೆಯೇ ಪಾರ್ವತಿ ಕವಿತೆಗಳಲ್ಲೂ ಕಳಕಳಿಯೊಂದು ಉಸಿರಾಡುತ್ತಾ ಕವಿತೆಯ ಕಸುವು ಹೆಚ್ಚಿಸುತ್ತಲೇ ಇರುತ್ತದೆ.

ಕೃಷಿ ಎನ್ನುವುದು ಕಂಪನಿಗಳ ರಾಕ್ಷಸ ಹಿಡಿತಕ್ಕೆ ಸಿಕ್ಕು ಉಸಿರು ಕಳೆದುಕೊಳ್ಳುತ್ತಿರುವಾಗ ಅದರ ವಿರುದ್ಧ ಹೋರಾಟವೋ ಎನ್ನುವಂತೆ ಅವರು ಮಣ್ಣಿಗೆ ಹೆಜ್ಜೆ ಇಟ್ಟಿದ್ದಾರೆ. ಅಂತೆಯೇ ಕವಿತೆಯೂ ಸಹಾ ಅವರಿಗೆ ಉಸಿರು ಉಳಿಸಿಕೊಳ್ಳುವ ಪ್ರಯತ್ನವೇ ಆಗಿರುವುದನ್ನು ಇಲ್ಲಿನ ಕವಿತೆಗಳು ಬಿಚ್ಚಿಡುತ್ತಿವೆ

 

ನನ್ನ ಖಾಸಗೀ ಭೇಟಿಗೆಂದು ಅವಳು
ಆಗಾಗ ಕನಸಲ್ಲಿ ಬರುತ್ತಲೇ ಇರುತ್ತಾಳೆ
ನಾನು ಗಮನಿಸದೇ ಇದ್ದುಬಿಡುತ್ತೇನೆ
ಅವಳು ಕಾದು, ಕನಲಿ ಹಿಂದಿರುಗುತ್ತಾಳೆ

ನಾನು ಅವಳನ್ನು ಮರೆತು ಬಿಡುತ್ತೇನೆ, ಮತ್ತೆ
ಬರಬಹುದೆಂಬ ಆತಂಕವನ್ನು ಆಳಕ್ಕಟ್ಟಿಬಿಡುತ್ತೇನೆ
ಕನಸಲ್ಲಿ ಅವಳು ಬರುವುದಿಲ್ಲ ಈಗೀಗ
ಮರೆತಳೆಂದೇ ನಂಬಿಬಿಡುತ್ತೇನೆ

ಅಂತದೇ ದಿನದಲ್ಲೊಮ್ಮೆ

ಅವಳು ಮತ್ತೆ  ಶಾಂತ ಮುಖಮುದ್ರೆಯೊಂದಿಗೆ
ಖಾಸಗಿ ಭೇಟಿಗಾಗಿ ಕೋರಿಕೊಳ್ಳುತ್ತಾಳೆ
ಒಮ್ಮೆಮ್ಮೆ ಆ ನೋಟ ನನ್ನನ್ನು ಕಲಕಿಬಿಡುತ್ತದೆ,
ಭೇಟಿಗೆ ಒಪ್ಪಿಕೊಂಡುಬಿಡುತ್ತೇನೆ

ಅವಳು ಹೇಳುವ ಮಾತುಗಳ ಅರಿವಿದ್ದ ನಾನು
ತಣ್ಣಗಿರಲು ನಿರ್ಧರಿಸಿ ಅವಳನ್ನೇ ನೋಡುತ್ತೇನೆ
ಅವಳು ಕಣ್ಣಮಿಟುಕಿಸದೆ ನನ್ನ ಕಣ್ಣಲ್ಲಿ ಕಣ್ಣಿಟ್ಟು
ಬಹಳ ಮುಜುಗರದಿಂದ ಹೇಳುತ್ತಾಳೆ..

“ಸಾಕಿನ್ನು, ಬಿಟ್ಟುಬಿಡು ನನ್ನನ್ನು ನನ್ನ ಪಾಡಿಗೆ
ನಿನ್ನ ಹಾದಿ ನನ್ನ ಹಾದಿ ಬೇರೆ-ಬೇರೆ
ಜೊತೆಸೇರಿಯೇ ನಡೆಯಬೇಕೆಂಬ ನಿಯಮವೇನಿಲ್ಲ”
ಮೌನವಾಗುತ್ತಾಳೆ,  ನಾನು ನಡುಗತೊಡಗುತ್ತೇನೆ..

ಅವಳು ಉತ್ತರಕ್ಕಾಗಿ ಕಾಯುತ್ತಾಳೆ
ನಾನು ಉರಿವ ಕೆಂಡವಾಗುತ್ತೇನೆ
ಅವಳು ನನ್ನನ್ನೇ ನೋಡುತ್ತಿರುತ್ತಾಳೆ, ನಾನು
ನಡುಗುವ ದನಿಯಲ್ಲಿ “ಸರಿ” ಎಂದು ಕುಸಿಯುತ್ತೇನೆ

ಅವಳು ನಿರ್ಲಿಪ್ತವಾಗಿ ನಡೆದುಬಿಡುತ್ತಾಳೆ
ಯೋಚಿಸಲಾಗದ ಸ್ಥಿತಿಯಲ್ಲಿ ನಾನಲ್ಲೇ ಬಿದ್ದಿದ್ದೇನೆ..
ಕೊನೆಗೂ ಅವಳು ಯಾರೆಂದು ತಿಳಿಯಲಾಗದೇ
ಸಾಯುವೆನೆಂಬ ಭಯದಲ್ಲಿ ಮರಗಟ್ಟಿಹೋಗಿದ್ದೇನೆ..

ಆಳದ
ಮುಜುಗರಗಳು
ಮೇಲೆ ತೇಲತೊಡಗುತ್ತವೆ
ಮನದ ಮಾತುಗಳ
ಯಾರೋ ಆಲಿಸುವಾಗ

ಹೂತಿಟ್ಟ
ಭಯಗಳೂ
ಕಂಪಿಸತೊಡಗುತ್ತವೆ
ಬಚ್ಚಿಟ್ಟ ಕನಸುಗಳು
ಚಿಗುರತೊಡಗಿದಾಗ

ಬೇಡವೆಂದೇ
ಮೂಲೆಗೊಗೆದಿದ್ದ
ಗುರಿಯೊಂದು ದಾರಿ
ಹುಡುಕ ತೊಡಗಿದಾಗ
ಗುರುತಿಲ್ಲದ ಮುಖವೊಂದು
ಹೆದರಿಸುತ್ತದೆ

ನಿರ್ಭಾವುಕವಾಗಿ
ನಡೆಯುವಾಗ
ಅಚಾನಕ್ ಸಿಕ್ಕ
ಮುಗುಳುನಗೆಯೊಂದು
ನೆನಪಿಗೆ ಬಾರದ ಶಬ್ದವಾಗಿ
ಹೃದಯ ಸ್ಥಂಭಿಸುತ್ತದೆ

ಕಾಡುವ ಮುಖವೊಂದು
ಕನಸಲ್ಲಿ ಕಂಡರೂ
ಕಮರಿಬೀಳುತ್ತದೆ ಜೀವ
ನಿದ್ದೆ ಹತ್ತದೆ
ತಳಮಳಿಸುತ್ತದೆ ಭಾವ

ಲೋಕನಿಂದಿತರ
ಲೋಕದಲ್ಲಿ ರೆಪ್ಪೆಬಡಿತಕ್ಕೊಮ್ಮೆ
ಭೂಮಿ ಕಂಪಿಸುತ್ತದೆ
ಹೆಜ್ಜೆ ಇಟ್ಟಲ್ಲಿ ಬಿರುಗಾಳಿ
ನರ್ತಿಸುತ್ತದೆ

ತುಂಬಾ ಇಷ್ಟ ಪಟ್ಟು ತೊಟ್ಟ ಒಡವೆಯೊಂದು
ಬೇಡ ಎನಿಸಿದ ಘಳಿಗೆಯಲ್ಲಿ
ಈ ಒಡವೆಯ ಒಮ್ಮೆ ನೋಡು ಎಂದ ಕೂಗು ನೀನು

ಕೇಳಿದ್ದೆಲ್ಲಾ ಸುಳ್ಳು ಎನಿಸಿ ಕಿವಿಯ ಮುಚ್ಚಿ ಕುಳಿತಾಗ
ನಸುನಕ್ಕು ಪಿಸುದನಿಯಲ್ಲಿ ‘ನಿಜವೇ?’ ಎಂದ ಸದ್ದು ನೀನು

ಮಾತುಗಳೆಲ್ಲಾ ಪೊಳ್ಳೆನಿಸಿ ಮೌನವ ಹೊದ್ದು ಕುಳಿತಾಗ
ಮೌನದ ಜೊತೆ ಕುಳಿತು ನನ್ನೊಂದು ಮಾತಿಗೆ ತಪಿಸುವ ಹೃದಯ ನೀನು

ಇದು ನನ್ನದಲ್ಲ, ನನ್ನದೇನೂ ಇಲ್ಲಾ ಎನಿಸಿದ ಘಳಿಗೆಯಲ್ಲಿ
ಇಲ್ಲಿ ಯಾವುದೂ, ಯಾರದೂ ಅಲ್ಲ ಎಂದು ನಸುನಗುವ ಕಿಡಿಗೇಡಿ ನೀನು

ನನ್ನದೊಂದು ಪುಟ್ಟ ಲೋಕದಲ್ಲಿ ತಣ್ಣಗೆ ವಿಹರಿಸುವಾಗ
ಪುಟ್ಟದೊಂದು ತಲ್ಲಣವ ಹುಟ್ಟಿಸಿ ಮೋಜು ನೋಡುವ ಮೋಸವೇ ನೀನು

ನನ್ನ ಮೇಲಿನ ಹಿಡಿತವೇ ತಪ್ಪಿ ಕಡಲಂತೆ ಮನ ಹೊಯ್ದಾಡುವಾಗ
ಹೇಗೋ ಹುಟ್ಟುಹಾಕಿ ಬದುಕ ನಡೆಸಿಬಿಡುವ
ಮಾಂತ್ರಿಕ ನೀನು

ಮುಳುಗುವ ಸೂರ್ಯನ,  ಕರಗುವ ಬಣ್ಣಗಳ
ಕಣ್ತುಂಬಿಕೊಳ್ಳುವಾಗ
ನಿನ್ನೆದೆಗೆ ಬೆನ್ನ ಒತ್ತಿ ಕುಳಿತ ಘಳಿಗೆಯೊಂದೇ ನಿತ್ಯಸತ್ಯ
ಎನಿಸಿದ ಮಾಯೆ ನೀನು

ನೀನಲ್ಲಿ ತನ್ಮಯತೆಯಿಂದ
ಕುಳಿತು ಏನನ್ನೋ ಬರೆಯುತ್ತಿದ್ದೀಯ
ನಾನಿಲ್ಲಿಂದಲೇ ನಿನ್ನ ಕಣ್ಣಲ್ಲಿ
ಮಿನುಗುವ ಚಂದ್ರ, ತಾರೆ, ಹಕ್ಕಿ,
ಗಿಡ, ಮರ, ನದಿ, ಮನೆ ಎಲ್ಲವನ್ನೂ
ಕಂಡು ಅಚ್ಚರಿಗೊಳ್ಳುತ್ತೇನೆ
ಮುಚ್ಚಟೆಯ ಮುದ್ದು ಮೂಡುತ್ತದೆ

ಬರೆದು ಮುಗಿಸಿದ ಧನ್ಯತೆಯಿಂದ
ಎದ್ದು ನನ್ನೆಡೆಗೆ ಓಡಿ ಬಂದು
ಹೆಮ್ಮೆಯಿಂದ ತೋರುತ್ತೀಯ
ನಾನೂ ಕುತೂಹಲದಿಂದ
ನೀನು ತೋರಿದ ಲೋಕದಲ್ಲಿ
ವಿಹರಿಸಿ ವಿಸ್ಮಯಗೊಳ್ಳುತ್ತೇನೆ

ಆದರೆ
ನನ್ನ ಲೋಕಕ್ಕೆ ನಿನ್ನ ಲೋಕವ
ತೋರುವ ತವಕಕ್ಕೆ ಬಲಿಯಾಗಿ
ಬಳಪ ಕಸಿದು ತಿದ್ದುತ್ತೇನೆ
ಇನ್ನಷ್ಟು ಸುಂದರ ಚಿತ್ರವನ್ನಾಗಿಸಿದ
ಭ್ರಮೆಯ ಖುಷಿಯಲ್ಲಿ
ನಿನ್ನ ಕಣ್ಣುಗಳ ನೋಡುತ್ತೇನೆ
ಅಲ್ಲಿ ಸೋತು ಕುಸಿದ ಹತಾಶೆಯ
ಕಂಡು ನಡುಗಿಬಿಡುತ್ತೇನೆ

ನನ್ನ ನಾನು ತಿದ್ದಿಕೊಳ್ಳಲಾರದ
ಅಹಮಿಗೆ ನಿನ್ನ ಖುಷಿಯ
ಬಲಿಯಾಗಿಸಿದ ಬೇಗೆಯಲ್ಲಿ ಬೇಯುತ್ತೇನೆ

ಅಮ್ಮ
ಗಡಿಬಿಡಿಯಾಗಿ ಓಡಾಡುತ್ತಿದ್ದಾಳೆ
ಅದೇನು ಅಷ್ಟು ಅವಸರವೋ ಅವಳಿಗೆ
ಪ್ರತಿದಿನದ ಪ್ರತಿ ಘಳಿಗೆಯೂ
ಯಾವುದೋ ಘನಕಾರ್ಯದ ಹಿಂದೆ ಬಿದ್ದು
ಎದ್ದಾಗಲಿಂದ ಮಲಗೋವರೆಗೂ ಮುಗಿಯುವುದಿಲ್ಲ
ಅವಳ ಅಡಾವುಡಿ

ನಾವೋ ನಿರ್ಲಿಪ್ತ ಜಂಗಮರು
ಹೊತ್ತುಹೊತ್ತಿಗಿಷ್ಟು ತಿಂದುಂಡು
ಹಾಯಾಗಿ ನೆಮ್ಮದಿಯಾಗಿ ಎಲ್ಲೆಂದರಲ್ಲಿ
ತಿರುಗಾಡುತ್ತಾ ಹೊರಳಾಡುತ್ತಾ
ಹೊತ್ತುಕಳೆದುಬಿಡುತ್ತೇವೆ
ಅವಳಿಗೇಕೀ ಸಮಾಧಾನವಿಲ್ಲವೋ ಏನೋ
ಎಂದೂ ಪ್ರಶ್ನೆಯೇ ಮಾಡಿಲ್ಲ
ಬರೀ ಅಸಮಾಧಾನವಷ್ಟೇ ಮನದಲ್ಲಿ

ಹೇಳಿದರೂ ಕೇಳುವವಳಲ್ಲ
ಅವಳಿಗೆ ಅರ್ಥವೂ ಆಗುವುದಿಲ್ಲ!
ಅದು ಹೇಗೋ ಅವಳು ಅಡಿಗೆ ಮನೆಯಲ್ಲಿ
ಒಗ್ಗರಣೆ ಹಾಕುತ್ತಿದ್ದಂತೆ
ಅಲ್ಲಿಯವರೆಗೂ ಅಡಗಿಕುಳಿತಿದ್ದ
ಹಸಿವು ತಾಂಡವವಾಡುತ್ತದೆ
ಇಷ್ಟೂ ಸಂಯಮವೇ ಇಲ್ಲದಂತೆ
ಅಮ್ಮನ ಗಡಿಬಿಡಿಯನ್ನೂ
ಮೀರಿಸಿ ಬಿಡುವಂತೆ!

ಆಗ ಅಮ್ಮ ತಣ್ಣಗೆ ಕುಳಿತು
ತನ್ನ ಸುತ್ತಾ ತಟ್ಟೆಗಳಿಟ್ಟು
ನೆಮ್ಮದಿಯಾಗಿ ಬಡಿಸುತ್ತಾಳೆ
ಏನೋ ಎಲ್ಲಿಲ್ಲದ ಸಮಾಧಾನ ಅವಳ
ಮುಖದಲ್ಲಿ ಆಗ ಕಾಣುತ್ತದೆ!
ಅವಳಿಗೆ ಹಸಿವೂ ಆಗುವುದಿಲ್ಲವೇನೋ
ಹೊತ್ತಿಗೆ ಸರಿಯಾಗಿ ಉಣ್ಣುವುದೂ ಇಲ್ಲ ಅವಳು! ಛೇ!

8 Responses

 1. Bharathi B V says:

  ಅವಧಿಯ ಈ concept ತುಂಬ ಇಷ್ಟವಾಯ್ತು!
  ಪಾರ್ವತಿ ಚೆಂದದ ಕವಿತೆಗಳು

 2. Swamy says:

  ತುಂಬಾ ಸೂಗಸಾದ ಸಾಲುಗಳು..

  ಅತ್ಯಂತ ಮನೋಜ್ಞವಾದ, ಅನುಭಾವಯುಕ್ತ ಸಂವೇದನೆ…

 3. ಬಾಗೇಪಲ್ಲಿ ಕೃಷ್ಣ ಮೊರ್ತಿ says:

  ಕವಿತೆಯ ಗಂಧ ವಿಲ್ಲದವರೂ ಓದಲು ಪ್ರಾರಂಭಿಸಿದರೆ ಸಂಪೊರ್ಣ ಓದಿಸುವಂತಿವ.

 4. ಎನ್ ಪಾರ್ವತಿ says:

  ಓಹ್! ಥ್ಯಾಂಕ್ಯು ಸರ್ 🙂

 5. vishnu bhat says:

  ಲೋಕನಿಂದಿತರ
  ಲೋಕದಲ್ಲಿ ರೆಪ್ಪೆಬಡಿತಕ್ಕೊಮ್ಮೆ
  ಭೂಮಿ ಕಂಪಿಸುತ್ತದೆ
  ಹೆಜ್ಜೆ ಇಟ್ಟಲ್ಲಿ ಬಿರುಗಾಳಿ
  ನರ್ತಿಸುತ್ತದೆ- sundara saalugalu saralavagi badukannu tereditta reethi. chennaagide.

Leave a Reply

%d bloggers like this: