ಸ್ಥನಗಳುದುರುವುದೆಂದರೆ ಅಕ್ಷಯ ಪಾತ್ರೆಯಂತಹ ಮನ ಬರಡಾಗುವುದಲ್ಲವಲ್ಲ..

 

 

ಶ್ರೀದೇವಿ ಕೆರೆಮನೆ

 

 

 

 

‘ಗಾಯಗೊಂಡ ಹೃದಯದ ಸ್ವಗತ’ ಎಂಬ ಪುಸ್ತಕ ಕೈ ಸೇರಿದಾಗ ಮನಸ್ಸು ಒಂದು ಕ್ಷಣ ತಲ್ಲಣಗೊಂಡಿತು.

ಕ್ಯಾನ್ಸರ್ ಬಗ್ಗೆ ಹೀಗೊಂದು ನೀಳ್ಗವನ ಬರೆಯಬಹುದೇ ಎಂಬ ಅಚ್ಚರಿಯಲ್ಲಿಯೇ ನಾನು ಪುಸ್ತಕ ತೆರೆದದ್ದು.

ಭಾರತಿ ಬಿ. ವಿಯವರ ‘ಸಾಸಿವೆ ತಂದವಳು’ ಓದಿದ ನಂತರ ಕ್ಯಾನ್ಸರ್ ಎಂಬ ಕಾಯಿಲೆ ನಿಭಾಯಿಸದ್ದೇನೂ ಅಲ್ಲ ಅನ್ನಿಸಿ ಒಂದಿಷ್ಟು ಸಮಾಧಾನವಾಗಿತ್ತು. ಯಾಕೆಂದರೆ ಆ ಹೊತ್ತಿಗಾಗಲೇ ಅಮ್ಮನಿಗೆ ಆಪರೇಶನ್ ಹಾಗೂ ಕಿಮೋ ಮಾಡಿಸಿ ಕಳವಳದಲ್ಲಿದ್ದೆ. ಭಾರತಿಯವರ ಪುಸ್ತಕದ ಓದಿನಿಂದ ಅಮ್ಮನೂ ಒಂದಿಷ್ಟು ಜೀವನ್ಮುಖಿಯಾಗಿದ್ದರು.

ಆದರೆ ಕ್ಯಾನ್ಸರ್ ಕುರಿತಾದ ನೀಳ್ಗವನದ ಸಂಕಲನ ಬಂದಿದ್ದು ಇದೇ ಮೊದಲು ಹಾಗೂ ಇದೊಂದು ವಿಶಿಷ್ಟ ಪ್ರಯೋಗ ಎಂತಲೇ ಹೇಳಬಹುದು. ಪ್ರತಿ ಮಹಿಳೆಯೂ ಓದಲೇ ಬೇಕಾದ ಕವಿತೆ ಇದು. ಕವಿತೆಯ ಓದಿನಿಂದ ದೂರ ಇರುವವರೂ ಗದ್ಯದ ರೀತಿಯಲ್ಲಿ ಓದಿಕೊಳ್ಳಬಹುದು. ಎಲ್ಲರಿಗೂ ಬದುಕಿನ ಬರವಸೆಯನ್ನು ಮೊಗೆಮೊಗೆದು ಕೊಡುವ ಕಾಮಧೇನುವಿನಂತೆ ನನಗೆ ಈ ಪುಸ್ತಕ ಕಾಣುತ್ತಿದೆ.

ಹೆಣ್ಣಿನ ಬದುಕನ್ನು ಇಷ್ಟು ಚಂದವಾಗಿ ಚಿತ್ರಿಸಿದ ಉದಾಹರಣೆಗಳನ್ನು ಇಷ್ಟು ಪರಣಾಮಕಾರಿಯಾಗಿ ಹೇಳಿದ ಉದಾಹರಣೆಗಳನ್ನು ಇತ್ತೀಚಿನ ದಿನಗಳಲ್ಲಿ ನೋಡಿಲ್ಲ.

ನಮ್ಮ ಮನೆಯ ಅಧಿಕೃತ ಕೋಳಿ ಕೂಗು ನಾನು
ನಾನು ಮಂಚದಿಂದ ಎದ್ದಾಗಲೇ
ನಮ್ಮ ಮನೆಗೆ ಹಗಲು ಬರುತ್ತೆ.

ನೋಡಿ ಇದು ಪ್ರತಿ ಮನೆಯಲ್ಲೂ ನಡೆಯುವ ಸಾಮಾನ್ಯ ಪ್ರಕ್ರೀಯೆ. ಆ ಮನೆಯ ಹೆಂಗಸು ಏದ್ದ ನಂತರವಷ್ಟೇ ಮನೆಯ ಉಳಿದವರಿಗೆ ಬೆಳಗಾಗಿದೆ ಎಂಬ ಸುಳಿವು ಸಿಕ್ಕುವುದು. ಹೀಗಾಗಿ ಒಂದು ಮನೆಯ ಅಧಿಕೃತ ಅಲಾರಾಂ ಎಂದರೆ ಆ ಮನೆಯ ಯಜಮಾನಿ ಮಾತ್ರ. ಈ ಯಜಮಾನಿ ಎಂಬ ಶಬ್ಧವನ್ನು ನಾನು ಉದ್ದೇಶಪೂರ್ವಕವಾಗಿ ಬಳಸುತ್ತಿದ್ದೇನೆ. ಯಾಕೆಂದರೆ ಕವನದ ಸಾಲುಗಳಲ್ಲಿಯೇ ನೋಡಿ,

ನನ್ನ ಕಾಫಿಯ ಕಪ್ ಹಬೆಯಿಂದಲೇ
ಸೂರ್ಯಕಿರಣಗಳು ಅತಿಥಿಗಳಂತೆ ಮನೆಯೊಳಗೆ ಆಗಮಿಸುತ್ತವೆ.


ನೋಡಿ, ಮನೆಯ ಯಜಮಾನಿ ಎದ್ದು ಮುಂದಿನ ಬಾಗಿಲು ತೆರೆಯಲಿಲ್ಲವೆಂದರೆ ಅಲ್ಲಿ ಸೂರ್ಯನ ಕಿರಣಗಳಿಗೂ ಒಳಬರಲು ಅವಕಾಶವಿಲ್ಲ. ಇಲ್ಲಿ ಇನ್ನೊಂದು ಒಳಾರ್ಥವನ್ನು ಗಮನಿಸಿ. ಒಂದು ಮಹಿಳೆ ಮನಸ್ಸು ಮಾಡಿದರೆ ಸೂರ್ಯಕಿರಣಗಳನ್ನೂ ತಡೆಹಿಡಿಯಬಲ್ಲಳು. ಹೀಗಾಗಿಯೇ ಹೆಣ್ಣಿನ ಮಾನಸಿಕ ನಿಗ್ರಹದ ಶಕ್ತಿಯ ಬಗ್ಗೆ ಪದೇಪದೇ ವ್ಯಾಖ್ಯಾನಗಳು ಬರುತ್ತಲೇ ಇರುವುದು.

ಅಡುಗೆ ಮನೆಯಲ್ಲಿ ಪ್ರೆಶರ್ ಕುಕ್ಕರ್ ಕೂಗಿಸಿದರೆ ಮನೆಯ ಉಳಿವರು ನಿಧಾನವಾಗಿ ಎದ್ದು ಹಲ್ಲು ತಿಕ್ಕಲು ಹೊರಡುತ್ತಾರೆ ಎನ್ನುವ ಕವಿಯತ್ರಿಯ ಮುಂದಿನ ಸಾಲುಗಳು ತುಂಬಾ ಸಶಕ್ತವಾಗಿದೆ.

ನನ್ನ ಬೆರಳ ತುದಿಯ ವಿನ್ಯಾಸದಿಂದಲೇ
ಅತ್ತೆಯವರ ಕಂಗಳ ಮೇಲೆ ಕನ್ನಡಕ
ಹತ್ತಿ ಕೂರುತ್ತದೆ.
ಮಾವನವರ ಪದ್ಮಾಸನದ ಕೈಯೊಳಗೆ
ನ್ಯೂಸ್ ಪೇಪರ್ ಸಿಕ್ಕಿ ಹಾಕಿಕೊಳ್ಳುತ್ತದೆ.

ನೋಡಿ, ಹೆಣ್ಣನ್ನು ಪಡೆಯಲಾಗದ ಅಲ್ಲಮ ಹೆಣ್ಣನ್ನು ಮಾಯೆ ಎಂದನಂತೆ. ಅಂತಹುದ್ದೇ ಒಂದು ಇಂದ್ರಜಾಲಿಕ ಸ್ಪರ್ಶ ಇಲ್ಲಿದೆ. ಹೆಣ್ಣಿನ ಕಿರು ಬೆರಳ ತುದಿಯಲ್ಲಿ ಜಗತ್ತು ಕುಣಿಯುತ್ತದೆ ಎಂದು ಅದ್ಯಾರೋ ರಸಿಕ ಕವಿ ಹೇಳಿದ್ದನ್ನು ಇಲ್ಲಿ ಕವಿಯತ್ರಿ ಹೇಗೆ ಧನಾತ್ಮಕವಾಗಿ ಹೇಳಿದ್ದಾರೆ ಎಂಬುದನ್ನು ಗಮನಿಸಿ. ಕೇವಲ ಬೇರಳ ತುದಿಯ ವಿನ್ಯಾಸವೊಂದರಿಂದಲೇ ಅತ್ತೆಯ ಕಣ್ಣಿನ ಕನ್ನಡಕ, ಮಾವನ ಕೈಯ್ಯಲ್ಲಿನ ವೃತ್ತಪತ್ರಿಕೆಗಳು ತಮ್ಮ ಸ್ವಸ್ಥಾನ ಕಂಡುಕೊಳ್ಳುವಷ್ಟು ಹಿಡಿತವಿದೆ.

ಮನೆಯವರ ಚಿಕ್ಕ ಪಟ್ಟ ತಲೆನೋವಿಗೆ, ಜ್ವರ-ಶೀತ- ಕೆಮ್ಮಿಗೆ, ಕಾಲು ಉಳುಕಿಗೆ ಕಂಗಾಲಾಗುವ ಹೆಣ್ಣು ತನಗೇನಾದರೂ ಆದರೆ ಅದನ್ನೊಂದು ಕಾಯಿಲೆ ಎಂದು ಭಾವಿಸದೇ ನಿರಾಳವಾಗಿಬಿಡುತ್ತಾಳೆ. ಮನೆಯವರ ಸಣ್ಣ ಕಾಯಿಲೆಗೂ ಆಸ್ಪತ್ರೆಗೆ ಓಡಾಡುವ ತಾಯಿಗೆ ತನ್ನ ರೋಗಕ್ಕೆ ತಾನೇ ವೈದ್ಯಳಾಗಿ ಸಂತೃಪ್ತಳಾಗುತ್ತಾಳೆ. ಹಾಗೆಂದೇ ಆಕೆಯ ರೋಗ ಹಲವಾರು ಹಂತಗಳನ್ನು ದಾಟಿದರೂ ಅರಿವಿಗೇ ಬರದಿರುವುದು ವಿಪರ್ಯಾಸ. ಮತ್ತೂ ಬೇಸರದ ಸಂಗತಿ ಎಂದರೆ ಆಕೆಯ ಅನಾರೋಗ್ಯದ ಬಗ್ಗೆ ಮನೆಯವರೂ ಅಷ್ಟೊಂದು ಗಮನ ಕೊಡದಿರುವುದು. ಇಷ್ಟೆಲ್ಲ ಆದರೂ ಹೆಣ್ಣಿಗೆ ಈ ಕಣವಿಸ್ಪೋಟ ಎನ್ನುವುದು ಈಗ ಸಾಮಾನ್ಯ ಸಂಗತಿಯಂತಾಗಿಬಿಟ್ಟಿದೆ.

ಕಣ ವಿಸ್ಪೋಟ ಮತ್ತು ಕಣಗಳ ತ್ರಿಗುಣ ಬುಹುಋಣಗಳು ಮನಸ್ಸಿನ ರಿಕ್ಟರ್‍ ಸ್ಕೇಲ್‍ನ್ನು ಛಿದ್ರಗೊಳಿಸಿದ ಪರಿಯನ್ನು ಕವಿಯತ್ರಿ ತುಂಬ ಮಾರ್ಮಿಕವಾಗಿ ವಿವರಿಸುತ್ತಾರೆ.

ಹಾಗೆ ಆ ಕಣಗಳು ದ್ವಿಗುಣ, ತ್ರಿಗುಣವಾಗುತ್ತ ಮಾನವನ ಎದೆಯ ಕಡಲಲ್ಲಿ ಎಬ್ಬಿಸುವ ಸುನಾಮಿಯ ಬಗ್ಗೆ, ಅದು ಮನಸ್ಸಿನ ರಿಕ್ಟರ್‍ಸ್ಕೇಲ್‍ನ್ನು ಛಿದ್ರಗೊಳಿಸುವ ಕುರಿತು ತೀರಾ ಮೆಲುದನಿಯಲ್ಲಿ ಹೇಳುತ್ತಾರೆ.

ರೋಹಿಣಿ ಸತ್ಯ

ರೋಹಿಣಿ ಸತ್ಯ

ಬಿ ಪಾಸಿಟಿವ್ ರಕ್ತದ ಅವರು ಎಲ್ಲವನ್ನೂ ರಚನಾತ್ಮಕವಾಗಿ, ಧನಾತ್ಮಕವಾಗಿ ಕಂಡವರು. ಆದರೆ ಬಯಾಪ್ಸಿಯ ರಿಪೋರ್ಟ್ ಮಾತ್ರ ಪಾಸಿಟಿವ್ ಬರದಿರಲಿ ಎಂದು ಬೇಡಿಕೊಳ್ಳುವ ಸಂಕಟ ನೋಡಿದಾಗ ನಿಜಕ್ಕೂ ಬದುಕು ಹೀಗೊಂದು ತಿರುವು ಪಡೆಯುವುದು ವಿಷಾದವನ್ನು ನೀಡುತ್ತದೆ.

ಇನ್ನು ಪಾಸಿಟಿವ್ ರಿಪೋಟ್ ಬಂದ ಮೇಲೆ ಮಾಡುವುದೇನಿದೆ? ಕವಿಯತ್ರಿ ತಮ್ಮ ದೇಹ ಪ್ರಿಸ್ಕ್ರಿಪ್ಷನ್‍ಗಳ ಪೈಲ್ ಆಗುವುದನ್ನು, ಪರಿಪರಿಯ ಟೆಸ್ಟ್ ಗಳ ಲ್ಯಾಬೊರೇಟರಿಯಾಗುವುದನ್ನು ಅಸಹಾಯಕತೆಯಿಂದ ನೋಡಬೇಕಾಗುತ್ತದೆ.

ಕೊಳೆತ ತರಕಾರಿಯನ್ನು ಕತ್ತರಿಸಿ ಬಿಸಾಕಿ ಹಾಕುವಂತೆ ಕತ್ತರಿಸಿ ಉಳಿದ ಭಾಗವನ್ನು ಉಳಿಸಿಕೊಳ್ಳುವುದೊಂದೇ ದಾರಿ. ಆದರೆ ಅಷ್ಟು ಸುಲಭವಾಗಿ ದೇಹದ ಒಂದು ಭಾಗವನ್ನು ಕತ್ತರಿಸಲು ಮನಸ್ಸು ಒಪ್ಪಬೇಕಲ್ಲ? ಅದರಲ್ಲೂ ಸ್ತನ ಎನ್ನುವುದು ಹೆಣ್ಣಿನ ಸೌಂದರ್ಯದ ಪ್ರತೀಕ ಎಂದೇ ಬಿಂಬಿತವಾಗಿರುವುದರಿಂದ ಸ್ತನವನ್ನು ತೆಗೆದುಹಾಕುವುದನ್ನು ಒಪ್ಪಿಕೊಳ್ಳುವುದು ಹೆಣ್ಣಿಗೆ ಅಷ್ಟೊಂದು ಸುಲಭದ ಮಾತಲ್ಲ.

ನಲವತ್ತು ವರುಷಗಳಿಂದ
ಅನವರತ ಆಜನ್ಮ
ನನ್ನ ಜೊತೆ ಸಹಜೀವನ ನಡೆಸಿ
ನನ್ನ ಪ್ರತಿ ಗಮನದಲ್ಲಿ ನನ್ನ ಸಹಚಾರಿಗಳಾಗಿರುವವು
ಅವೇ ಅಲ್ಲವೇ?

ಹೆಣ್ಣಿಗೆ ಸ್ತನ ಅನ್ನೋದು ಮೊದಲ ದಿನಗಳಲ್ಲಿ ಮುಜುಗರ ಹುಟ್ಟಿಸುವ, ಮುಚ್ಚಿಟ್ಟುಕೊಳ್ಳ ಬಯಸುವ “ಅಲ್ಲಿಯವರೆಗಿನ ನನ್ನ ನಡಿಗೆಯ ರೀತಿಯನ್ನು/ ಬದಲಾಯಿಸಿದ ಗುರುಗಳು ಸೆಟೆದು ನಿಂತು, ನಡೆವ, ಓಡುವ ದೇಹವು / ಒಳ ಒಳಗೆ ಮುದುಡುವಂತೆ ಮಾಡಿದ ಭಾರಗಳು” ಆದರೆ ನಂತರದ ದಿನಗಳಲ್ಲಿ “ ಪುಸ್ತಕಗಳಿಗೆ ಮತ್ತೊಂದು ಉದ್ದೇಶವನ್ನು ನಿರ್ದೇಶಿಸಿದ ಪೂರ್ಣ ಕಲಶಗಳು” “ಎಲ್ಲ ವಿದ್ಯಾರ್ಥಿನಿಯರಲ್ಲಿ ವಿಶೇಷ ಮಹತ್ವವನ್ನು ನೀಡಿದ ಹೃದಯ ಸೌಂದರ್ಯ ಬಿಂಬಗಳು” ನಂತರ “ಮೊದಲಿರುಳು ನನ್ನವರಿಗೆ ಅಮರತ್ವವನ್ನು ಕರುಣಿಸಿದ ಅಮೃತಭಾಂಡಗಳು”, ಕೊನೆಯಲ್ಲಿ “ಮಕ್ಕಳಿಗೆ ಜೀವಧಾರೆ ಎರೆದ ಹಾಲ್ಗಡಲು” ಹೀಗೆಲ್ಲ ವರ್ಣಿಸಿಕೊಳ್ಳುವ ಸ್ತನವನ್ನು ತೆಗೆಯುವ ಪ್ರಸ್ತಾಪ ಬಂದಾಗ ಲೇಖಕಿ ತಲ್ಲಣಗೊಳ್ಳುತ್ತಾಳೆ.

ಶಸ್ತ್ರಚಿಕಿತ್ಸಾ ಕೋಣೆ ಎಂಬುದು ಒಂದು ನಾಟಕದ ರಂಗವೇದಿಕೆಯಾಗಿ, ಕಥಾನಾಯಕಿಯಾದ ಕವಿಯತ್ರಿ ಗಾಯಗಳ ಸ್ಪೆಸಿಮನ್‍ನ್ನು ಕೂಡ ಒಂದು ಪಾತ್ರವಾಗಿಸುವ ಪರಿ ಅಚ್ಚರಿ ಹುಟ್ಟಿಸುತ್ತದೆ. ಕಿಮೊಥೆರಪಿ, ರೇಡಿಯೋಥೆರಪಿ ಮುಂತಾದ ಹತ್ತು ಹಲವಾರು ಥೆರಪಿಗಳನ್ನು ದಾಟಿಕೊಂಡು ಬಂದ ನಂತರ ಪಿಂಕ್ ರಿಬ್ಬನ್ನನ ಸಂಗಾತಿಯಾಗುವ ನೋವನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

 

ಹೆಣ್ಣೆಂದರೆ ಎದೆಯ ಮೇಲೆ ಉರಿಯುವ ಬೆಂಕಿ ಎನ್ನುವವರಿಗೆ ಹೆಣ್ಣಿನ ಎದೆಯಲ್ಲೇ ಉರಿಯುವ ಒಲೆಗಳಿರುವುದು ಅರಿವೇ ಆಗುವುದಿಲ್ಲ. ಹೀಗಾಗಿಯೇ ಹೆಣ್ಣಿನ ಭಾವಗಳು, ನೋವು ಯಾರೆಂದರೆ ಯಾರಿಗೂ ಅರ್ಥವೇ ಆಗುವುದಿಲ್ಲ. ಹೆಣ್ಣಿನ ಮನಸ್ಸಿನ ತೊಳಲಾಟವನ್ನು ಅರ್ಥಮಾಡಿಕೊಳ್ಳುವ ಗೋಜಿಗೂ ಯಾರೂ ಹೋಗುವುದಿಲ್ಲ.

ಮಹಾ ಸಂಕ್ಷೋಭಕ್ಕೆ
ಮಹಾ ವಿಪತ್ತೇ ಆಗಬೇಕಿಲ್ಲ
ಒಂದು ಕಣದ ಕಣ್ಣು ಕೆಂಪಾದರೆ ಸಾಕು
ಭೂ ಮಂಡಲದಷ್ಟು ಎಗೋನಿಗೆ
ಮಹಾಸಾಗರವೇ ಬೇಕಿಲ್ಲ
ರೆಪ್ಪೆದಾಟಿದ ಒಂದು ಕಣ್ಣ ಹನಿ ಸಾಕು

ಎನ್ನುವ ಕವಿಯತ್ರಿ ಅರ್ಬುದವನ್ನು ದೇಹ ಸಂಸ್ಕೃತಿಯಲ್ಲಿ ಹೊಸ ಹಬ್ಬದಂತೆ ಸ್ವಾಗತಿಸಲು ಹೇಳುತ್ತಾರೆ. ಹೆಣ್ತನದ ಕುರುಹುಗಳೆಂದು ಮೆರೆದ ಸಂಕೋಲೆಗಳಿಂದ ದೊರೆತ ವಿಮುಕ್ತಿ ಎಂದು ಸ್ತನಾತೀತ ದೆಸೆಯನ್ನು ಮಹಿಳಾ ಪ್ರಸ್ಥಾನದ ನವಯುಗದಂತೆ ಸಂಭ್ರಮಿಸಲು ಬಯಸುತ್ತಾರೆ.

ಕೇವಲ ಹೆಣ್ಣಾಗಿರದೇ ಮನುಷ್ಯಳಾಗಿ ಬದುಕುವ, ಲಿಂಗ ತಾರತಮ್ಯವನ್ನು ತೊಡೆದು ಹಾಕುವ ಅವಕಾಶ ನೀಡಿದ ಅರ್ಬುದವನ್ನು ಗೆಳತಿಯಂತೆ, ಆತ್ಮೀಯ ಸಂಗಾತಿಯಂತೆ ಕಾಣುತ್ತಿದ್ದಾರೆ ಎಂಬುದನ್ನಿಲ್ಲಿ ಗಮನಿಸಬೇಕು.

ಒಂದು ಕಾಯಿಲೆ ಅವರು ಜೀವನವನ್ನು ನೋಡುವ ವಿಧಾನವನ್ನೇ ಬದಲಿಸಿಬಿಟ್ಟಿದೆ. ಅದನ್ನು ಅವರು ಓದುಗರಿಗೂ ಕಟ್ಟಿಕೊಟ್ಟು ಮೃತ್ಯುವನ್ನು ಎದುರಿಸುವುದನ್ನು ಕಲಿಸಿಕೊಡುತ್ತಿದ್ದಾರೆ.

ಎಲೆಗಳುದುರುವುದೆಂದರೆ
ವಸಂತ ಸ್ಥಗಿತವಾಗುವುದಲ್ಲ
ಸ್ಥನಗಳುದುರುವುದೆಂದರೆ
ಅಕ್ಷಯ ಪಾತ್ರೆಯಂತಹ ಮನ ಬರಡಾಗುವುದಲ್ಲವಲ್ಲ
ಎಂಬ ಸಾಲು ನಮ್ಮೆಲ್ಲರದ್ದೂ ಆಗುತ್ತದೆ.

ಪ್ರತಿ ಹೆಣ್ಣಿನಲ್ಲೂ ಒಂದು ತಲೆ ಎತ್ತಿ ನಿಲ್ಲುವ ದೃಢತೆಯನ್ನು ಕಲಿಸುತ್ತದೆ. ಕಾಯಿಲೆಯಿಂದ ನರಳಿ, ಸಾವಿನೆಡೆಗೆ ಮುಖ ಮಾಡುವ ಮುಗ್ಧೆಯರಿಗೆ ಬದುಕನ್ನೆದುರಿಸುವ ಆತ್ಮಸ್ಥೈರ್ಯ ತುಂಬುತ್ತದೆ. ಮೂಲ ತೆಲುಗು ಕವಿತೆಯನ್ನು ಓದಲು ಸಾಧ್ಯವಿಲ್ಲದ ನಾನು ಈ ಅನುವಾದಿತ ನೀಳ್ಗವಿತೆಯನ್ನೇ ಮೂಲ ಕವಿತೆಯೆಂಬಷ್ಟು ತೀವ್ರವಾಗಿ ಅನುಭವಿಸಿದ್ದೇನೆ. ಕವಿತೆಯನ್ನು ಬರೆದ ಆಯಿನಪೂಡಿ ಶ್ರೀ ಲಕ್ಷ್ಮಿಯವರಿಗೂ ಅದನ್ನು ಬಣ್ಣಗೆಡಿಸದೇ ಮೂಲದಷ್ಟೇ ಪ್ರಖರವಾಗಿ, ಸಂವೇದನಾಶೀಲವಾಗಿ ಕಟ್ಟಿಕೊಟ್ಟ ರೋಹಿಣಿ ಸತ್ಯ ಅವರಿಗೂ ಅಭಿನಂದನೆ ಸಲ್ಲಿಸದೇ ಹೇಗಿರಲಿ?

 

3 Responses

  1. ಕಲಾವತಿ says:

    Really samvedanaashelavaagide

  2. ನೂತನ ದೋಶೆಟ್ಟಿ says:

    ಎಷ್ಟು ಹೊಸ… ಹಾಗೇ ತಟ್ಟುವ ಸಾಲುಗಳು..

  3. Asha Hegde says:

    ಮನಸ್ಸು ಭಾರವಾದರೂ ಎಲ್ಲೋ ಒಂದು ಸಕಾರಾತ್ಮಕ ಸ್ಪಂದನದ ಸಮಾಧಾನ

Leave a Reply

%d bloggers like this: