ಕೂಗಿದೆದೆಗೆ ಬಿತ್ತು ಕಲ್ಲಿನೇಟು….

 

 

 

 

ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.

 

 

 

 

ಎಂದೋ ನೆಟ್ಟ ಮರದಡಿ ಜೀವಿಸುತ್ತಲೇ ಇದ್ದೇವೆ
ರೆಂಬೆಕೊಂಬೆಗಳಿಗೆ ಜೋತುಬಿದ್ದು ಜೀಕುತ್ತಲೇ
ಚಿಗುರುತ್ತಲೂ ಕೂಡಾ…
ಸುತ್ತೆಲ್ಲ ಬಿಳಲುಗಳೇ ಹಬ್ಬಿವೆ
ಮರವನ್ನೇ ಮಾತನಾಡಿಸುತ್ತಿದ್ದೇವೆ
ನಾವೀಗ.

ಹೌದು! ಅದು ಅಷ್ಟೇ ಇರಬೇಕು
ಇಷ್ಟೇ ದೊಡ್ಡದು, ಮತ್ತು ಚಿಕ್ಕದು
ಅಷ್ಟೇ ಅಲ್ಲ, ಹೀಗೆ ಇರಬೇಕು ಕೂಡಾ…
ಎಡವಿಬಿದ್ದ ಅದೆಷ್ಟೋ ಗಾಯದ ಕುರುಹುಗಳಿದ್ದರೂ
ಕಾಯದ ರೂಪ ಕೊಡಲೇಬೇಕಿದೆ
ನಾವೀಗ.

ಮೂಲೆ ಮೂಲೆಗೂ ಸೂತ್ರಹಾಕಿ
ಸಂಧಿಸದ ಸಂಧಿಗಳೇ ಇಲ್ಲ
ನೇರನೋಟದ ನೇತ್ರಗಳಲಿ ರಕ್ತ
ಚಿಮ್ಮಿದರೂ ಚಿಮ್ಮಲಿ
ಇರುವಿಕೆಯ ಕುರಿತು ವಿಶಾಲವಾದ ಹೆಮ್ಮೆಯಿದೆ
ಕಟ್ಟಿದ ಗಂಟು ಬಿಚ್ವಿದರೇ ಸಾಕು
ಸಾವಿರಾರು ವರ್ಷಗಳೇ
ಇತಿಹಾಸವೀಗ.

ಕೂಗುವ ಬಾಯಿಗೆ ಶಕುನದ ಘಾಟು
ಕೂಗಿದೆದೆಗೆ ಬಿತ್ತು ಯಾರೋ ಬೀಸಿದ
ಮೊನಚು ಕಲ್ಲಿನೇಟು
ಮಂತ್ರ, ಶ್ಲೋಕ, ಪೂಜೆ, ಪುನಸ್ಕಾರಗಳ
ಹಂಗಿಲ್ಲದೇ ಬದುಕುವ
ಹಕ್ಕಿಗೂಡಿಗಿಂದು ಅಂತ್ಯ ಸಂಸ್ಕಾರ
ಭಲೇ! ಭಲೇ! ಸಾಕ್ಷರ
ದಕ್ಕಿತು ಕಲಿತ ಅಕ್ಷರಗಳಿಗೂ ಸಾರ್ಥಕತೆಯೀಗ.

ಇಲ್ಲಿಗೆ ಎಲ್ಲವೂ ಮುಗಿಯಿತು
ನನ್ನ ಕವಿತೆಯೂ ಕೂಡಾ…
ಈಗ ಹೇಳಬೇಕಿರುವುದಿಷ್ಟೇ ನಿಜ..! ಹೇಳಬೇಕೆಂದರೆ,
ಕೇಳಿದಿರಲ್ಲ ಅದೆಲ್ಲವೂ ನಿಜ
ಈ ಕವಿತೆ ನನ್ನದಲ್ಲ.

1 Response

  1. ಡಾ. ಶಿವಾನಂದ ಕುಬಸದ says:

    ಚೆನ್ನಾಗಿದೆ…

Leave a Reply

%d bloggers like this: