ಈ ದೇಶದಲ್ಲಿ ಜಾತಿಯ ಕಾರಣಕ್ಕಾಗಿಯೇ ಬಹಿಷ್ಕಾರ, ಹಲ್ಲೆ, ಪಂಕ್ತಿಭೇದ ‌ನಡೆದಂತೆ ರೇಪು, ಮರ್ಡರ್ ಗಳು ನಡೆಯುತ್ತವೆ..

ಪ್ರತಿಕ್ರಿಯೆಗಳಿಗೆ ಸ್ವಾಗತ 

avadhimag@gmail.com

 

 

 

ಎನ್ ರವಿಕುಮಾರ್ ಶಿವಮೊಗ್ಗ

 

ಹೆಣ್ಣುಮಗಳೊಬ್ಬಳ ಮೇಲಿನ ಅತ್ಯಾಚಾರ, ಹತ್ಯೆಯನ್ನು ಜಾತಿ ಕಾರಣದಿಂದ ನೋಡಬಾರದು

ಎಂದು‌ ಕೆಲವರ ಅಭಿಪ್ರಾಯಗಳನ್ನು ಸ್ವಾಗತಿಸುತ್ತಲೇ 

ಒಂದೆರೆಡು ಮಾತು.

ಸನಾತನ ಶ್ರೇಣಿಕೃತ ವ್ಯವಸ್ಥೆಯಲ್ಲಿ ಹೆಣ್ಣನ್ನು ಜಾತಿ ಆಧಾರಿತವಾಗಿ ಗುರುತಿಸಿಲ್ಲ. ಹೆಣ್ಣೇ ಒಂದು ಜಾತಿ. ಎಲ್ಲಾ ಕಾಲಕ್ಕೂ ಹೆಣ್ಣನ್ನು ಬಲಿಪೀಠದಲ್ಲೆ ಇರಿಸಲಾಗಿರುತ್ತದೆ. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರ ಸಾಲಿನಲ್ಲಿ ಹೆಣ್ಣು ಕೂಡ ಒಬ್ಬಳು. ಹಾಗಾಗಿ ಯಾವುದೇ ಜಾತಿಯ ಹೆಣ್ಣು ಮಗಳ ಮೇಲೆ ಅತ್ಯಾಚಾರ, ಹತ್ಯೆ ನಡೆದರೆ ಅದನ್ನು ಜಾತಿಯ ಆಧಾರದ ಮೇಲೆ ನೋಡಬಾರದು ನಿಜ.

ಆದರೆ ಜಾತಿಯ ಕಾರಣಕ್ಕಾಗಿಯೇ ಹೆಣ್ಣಿನ ಮೇಲಿನ ಅತ್ಯಾಚಾರ, ಕೊಲೆ ಮಾಡುವುದು ಅಸ್ಪೃಶ್ಯ ಭಾರತದ ಚರಿತ್ರೆಯೇ ಆಗಿದೆ. ದಲಿತಳು ಎಂಬ ಕಾರಣಕ್ಕಾಗಿಯೇ ಅವಳನ್ನು ಬಹಿರಂಗವಾಗಿ ವಿವಸ್ತ್ರಗೊಳಿಸಿ ಹೊಡೆದು ಮೆರವಣಿಗೆ ಮಾಡುವುದು, ದಲಿತರನ್ನು ಮುಟ್ಟಿಸಿಕೊಳ್ಳಲಾರದವರು ದಲಿತ ಹೆಣ್ಣುಮಗಳ ಅಂಗಾಂಗವನ್ನು ಮನಸ್ಸೋಃಇಚ್ಚೆ ಉಂಡು ಕೊನೆಗೆ ಕತ್ತು ಸೀಳಿಯೋ, ಕಾಡು ಮರಕ್ಕೆ ನೇಣು ಬಿಗಿದೋ ಇಲ್ಲವಾಗಿಸುವುದು ಅಸ್ಪೃಶ್ಯ ಭಾರತದ ಕಥನ.

ಕೋಮು ಗಲಭೆಗಳಲ್ಲಿ ಧರ್ಮದ ಬರ್ಬರ ದರ್ಪ ನಡೆಯುವುದು. ಹೆಣ್ಣಿನ ಹೊಟ್ಟೆ ಬಗೆದು ಭ್ರೂಣ ಕಿತ್ತು ಮೆರವಣಿಗೆ ನಡೆಸುವುದು, ಮೂಗು, ಮೊಲೆಗಳನ್ನು ಕತ್ತರಿಸುವುದರಲ್ಲಿ ವಿಜೃಂಭಿಸಿದ‌ ಚರಿತ್ರೆಯೂ ಇದೆ. ಇವೆಲ್ಲವೂ ಹೆಣ್ಣು ಎಂಬ ಕಾರಣಕ್ಕಾಗಿಯೇ ನಡೆಯುತ್ತವೆ.

ದಲಿತ, ಅಲ್ಪಸಂಖ್ಯಾತ, ಆದಿವಾಸಿ ಹೆಣ್ಣಿನ ಮೇಲೆ ಅತ್ಯಾಚಾರ, ಹತ್ಯೆಗಳು‌ನಡೆದರೆ ಈ ಸಂದರ್ಭದಲ್ಲಿ ಅದನ್ನು‌ ಜಾತಿ, ಧರ್ಮದ ಕಾರಣದಿಂದ ನೋಡಬಾರದು ಎಂಬ ಉದಾತ್ತ ಸಲಹೆಗಳು ಕೇಳಿ ಬರುತ್ತವೆ. ಇಂತಹ ಮಾತುಗಳಲ್ಲಿ ಕೆಲವೊಂದು ಮನುಷ್ಯ ಸಹಜ ಕಾರುಣ್ಯವಿರಬಹುದು. ಆದರೆ ಬಹುತೇಕ ಇಂತಹ ಬರ್ಬರ ಕೃತ್ಯಗಳ ಪ್ರಾಮುಖ್ಯತೆಯನ್ನು ನಿಸ್ತೇಜನಗೊಳಿಸುವ ಜನ್ಮಾಂತರ ದ್ವೇಷದ ಸಂಚು ಕೂಡ ಇರುತ್ತವೆ ಎಂಬುದನ್ನು ಗ್ರಹಿಸಬೇಕಾಗಿದೆ.

ನಿರ್ಭಯಾಳ ಹತ್ಯೆ ನಡೆದ ಅದೇ ವಾರದಲ್ಲಿ ಹರಿಯಾಣದಲ್ಲಿ ದಲಿತ ಅಕ್ಕ- ತಂಗಿಯರಿಬ್ಬರ ಮೇಲೆ ಅತ್ಯಾಚಾರ ನಡೆದು ಕೊಲ್ಲಲಾಯಿತು. ಆ ವಾರದಲ್ಲಿ ಭಾರತದಲ್ಲಿ ಒಟ್ಟು 17 ಜನ ದಲಿತ ಹೆಣ್ಣುಮಕ್ಕಳ ಮೇಲೆ ರೇಪ್ ಮತ್ತು ಕೊಲೆ ನಡೆದಿತ್ತು. ಭಾರತದಲ್ಲಿ ಇದೇ ಕಾಲಕ್ಕೆ ಹತ್ತಾರು ದಲಿತ ಹೆಣ್ಣು ಮಕ್ಕಳ ಮೇಲೆ ರೇಪ್ – ಮರ್ಡರ್ ನಡೆದಿದ್ದವು. ಇವ್ಯಾವು ನಿರ್ಭಯ ಪ್ರಕರಣದ ಶೇ.೩ ರಷ್ಟು ಪ್ರಚಾರ ಪಡೆಯಲಿಲ್ಲ. ಯಾವುದೋ ಒಂದು ಪತ್ರಿಕೆಯ ಮೂಲೆಯಲ್ಲಿ ಸುದ್ದಿ ಸಮಾಧಿಯಾಯಿತು.  (ದಾನಮ್ಮ ನ ಪ್ರಕರಣವನ್ನೆ ಗಮನಿಸಿ).

ಯಾಕೆ ಹೀಗೆ ಮನುಷ್ಯ ವಿಂಗಡಿಸಿ ಪ್ರತಿಕ್ರಿಯಿಸುತ್ತಾನೆ.? ಈ ದೇಶದಲ್ಲಿ ಜಾತೀಯ ಕಾರಣಕ್ಕಾಗಿಯೇ ಬಹಿಷ್ಕಾರ, ಹಲ್ಲೆಗಳು, ಪಂಕ್ತಿಭೇದಗಳು ‌ನಡೆದಂತೆ ರೇಪು, ಮರ್ಡರ್ ಗಳು ನಡೆಯುತ್ತವೆ. ಸಾಮಾಜಿಕ ಭದ್ರತೆ ಎಂಬುದು ಕೆಲವರಿಗೆ ಮಾತ್ರ ಸೀಮಿತವಾಗಿದೆ ಎಂಬುದೂ ಸತ್ಯ. ಅಲ್ಲದೆ ದಲಿತರು, ಆದಿವಾಸಿಗಳ ಮೇಲಿನ ಹತ್ಯೆಗಳನ್ನು ಅರಗಿಸಿಕೊಳ್ಳುವ ತಾಕತ್ತು ಈ ವ್ಯವಸ್ಥೆಗಿದೆ. ನಮ್ಮ‌ನ್ಯಾಯ ವ್ಯವಸ್ಥೆ ಕೂಡ ಇದೇ ಹಾದಿಯಲ್ಲಿದೆ‌. ಇಂತಹ ಸಾಮಾಜಿಕ ದುಷ್ಟ ದಾರ್ಷ್ಟ್ಯತೆಗಳೆ ದಲಿತ ಹೆಣ್ಣು ಮಕ್ಕಳ ರೇಪ್ – ಮರ್ಡರ್ ಗಳಿಗೆ ಉದ್ದೀಪನದಂತಿದೆ.

ದಾನಮ್ಮನ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ನ್ಯಾಯಕ್ಕಾಗಿ ನಡೆಯುವ ಹೋರಾಟ ನೆನಪಿಸಿಕೊಂಡರೆ ದಿಗಿಲು ಬೀಳುತ್ತದೆ. ಈ ಕೂಲಿ‌ ಕುಟುಂಬ ನ್ಯಾಯಾಲಯಕ್ಕೆ ಅಲೆದಲೆದೆ ಹೈರಾಣಾಗಿ ಬಿಡುತ್ತದೆ. ಇಂದು ವಿವಿಧ ಸಂಘಟನೆಗಳು ಬೆಂಬಲಿಸಿವೆ ನಿಜ, ಆದರೆ ಕ್ರಮೇಣ ಇಡೀ ಕುಟುಂಬ ಏಕಾಂಗಿಯಾಗಿ ಬಿಡುತ್ತದೆ. ಸಾಕ್ಷಿಗಳನ್ನು ಬೆದರಿಸಲಾಗುತ್ತದೆ, ಇಲ್ಲವೆ ಖರೀದಿಸಲಾಗುತ್ತದೆ. ಆರೋಪಿಗಳು ನಿರ್ಭಯವಾಗಿ ನಿರಪರಾಧಿಗಳಾಗಿ ಹೊರಬರುತ್ತಾರೆ. ದಾನಮ್ಮ ಮತ್ತೊಂದು ಧಾರುಣ ಘಟನೆಯಾಗಿ ಇತಿಹಾಸ ಸೇರುತ್ತದೆ.

ಖೈರ್ಲಾಂಜಿ, ಕಿಲ್ವನ್ಮಣಿ, ಸುಂದರಬನ, ಕರಂಚೇಡ, ಚುಂಡೂರು, ಕಂಬಾಲಪಲ್ಲಿ, ಮೋರಿಚ್ ಝಾನ್ಪಿ, ಜಝಾರ, ಬದನವಾಳು…..ವಿಜಯಪುರ…ಮುಂದುವರೆಯುತ್ತಲೆ ಇದೆ.

2 Responses

  1. ಸುರೇಶ ಬಿ says:

    ಇದು ನಿಜಕ್ಕೂ ವಿಷಾದದ ಸಂಗತಿ.
    ದಲಿತರು ಮತ್ತು ಕೆಳವರ್ಗದ ಮಹಿಳೆಯರ ಮೇಲಾಗುವ ದೌರ್ಜನ್ಯ ಎದುರಿಸಲು ಎಲ್ಲಾ ಪ್ರಗತಿಪರ ವೇದಿಕೆಗಳು ಸ್ವತಃ ಮುಂದಾಗಬೇಕು. ಯಾವುದೇ ದಲಿತ ಕುಟುಂಬ, ದೌರ್ಜನಕ್ಕೆ ಒಳಗಾದವರು ಹೋರಾಟದ ಹಾದಿಯಲ್ಲಿ ಒಂಟಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ.
    – ಬಿ.ಸುರೇಶ

  2. ಸಚಿನ್ ಕುಮಾರ ಹಿರೇಮಠ says:

    ಎಲ್ಲ ಹೆಣ್ಣುಕುಲದ ಸಮಸ್ಯೆಗಳು ಒಂದೇ, ಒಂದೇ ಜಾತಿಯ ಅಥವಾ ದಮನಿತ ಜಾತಿಗಳ ಹೆಣ್ಣುಗಳಷ್ಟೇ‌ ಇಂತಹ ಹೇಯ ಕೃತ್ಯಕ್ಕೆ ಬಲಿಯಾಗಿಲ್ಲ. ಇಡೀ ಮನುಕುಲ ಒಂದಾಗಿ ಪ್ರತಿಭಟಿಸಿ ಅಪರಾಧಿಗಳಿಗೆ ಶಿಕ್ಷೆ ಆಗುವಲ್ಲಿ ಶ್ರಮಿಸಬೇಕು

Leave a Reply

%d bloggers like this: