ಹಿಂದೆಲ್ಲ ಹೀಗಿರಲಿಲ್ಲ..

ರೇಣುಕಾ ರಮಾನಂದ / ಅಂಕೋಲಾ

ಮಟಮಟ ಮಧ್ಯಾಹ್ನ
ಬಿಕೋ ಎಂಬ ಸಂಜೆ
ಇನ್ನೂ ಬೆಳಕಾಗದ ಬೆಳ್ಳಂಬೆಳಗು
ಹೀಗೆ ಹೊತ್ತಿನ ಗೊತ್ತಿಲ್ಲದೇ
ಪುಟ್ಟಿ ತುಂಬ ಸಗಣಿ
ಬೇಲೆಗೆ ಬಂದು ಬೀಳುವ ಸೌದೆ
ಸುರಗೀ ಮರದಡಿಗೆ ಉದುರಿದ ಕಾಯಿ
ಹೆಕ್ಕುವಾಗಲೆಲ್ಲ
ಎಮ್ಮೆ ಮೇಯಿಸಲು
ಕಬ್ಬಿನ ಗದ್ದೆಗೆ ನೀರು ಬಿಡಲು
ಹೋಗುವಾಗಲೆಲ್ಲ
ಬತ್ತಲೆ ದೇಹ ಎಂಬುದು
ಐನು ಸಂಗತಿಯಾಗಿರಲಿಲ್ಲ
ಬಟ್ಟೆ ತೊಟ್ಟೇ ಎಲ್ಲಿಗಾದರೂ ಹೋಗಬೇಕೆಂಬ
ಫರ್ಮಾನು ಇರಲಿಲ್ಲ
ಹಾಗಾಗಿ
ಹಿಂದೆಲ್ಲ ಹೀಗಿರಲಿಲ್ಲ

ಮೊಲೆ ಮೂಡಿ ಬಂದ ನಾಲ್ಕೈದು
ವರುಷ ಊರಲ್ಯಾರೂ ರವಿಕೆ
ತೊಡುತ್ತಿರಲಿಲ್ಲ
ಅವ್ವನ ಹಳೆಯ ಸೀರೆಯ ಸಮಾ ಮೂರು
ತುಂಡು ನಾವು ಮೂರು ಹೆಣ್ಣುಗಳ
ಸೊಂಟಕ್ಕೇ ಸಾಲುತ್ತಿರಲಿಲ್ಲ
ಇನ್ನು ತಂಗಿಯರಿಬ್ಬರು
ಬರೀ ಉಡುದಾರದಲ್ಲೇ
ದಿಗ್ದೇಶ ಸುತ್ತುತ್ತಿದ್ದರು
ಸಂಪಿಗೆ ಮರದಡಿಗೆ ಬಿದ್ದ ಹೂಗಳನ್ನಾಯ್ದು
ಪೋಣಿಸಿ ಅದೇ ಬತ್ತಲೆಯಲ್ಲೇ
ನಾಲ್ಕು ರಸ್ತೆಯ ಮುರ್ಕಿಯಲ್ಲಿ ನಿಂತು
ದೊರೆಯ ಜೊತೆ ಬರೋ
ಕುದುರೆಯ ಮಡ್ಡಮ್ಮನಿಗೆ
ಒಂದಾಣೆಗೆ
ಮಾರುತ್ತಿದ್ದರು
ಅವರು ತಂದೇ ತರುವ ಉಪ್ಪು ಮೆಣಸಿಗಾಗಿ
ಮೀನು ಮಾಡಿಟ್ಟುಕೊಂಡು
ಕತ್ತಲಾದರೂ ಅವ್ವ ತೋಲ ತಪ್ಪದೇ
ಕಾಯುತ್ತಿದ್ದಳು
ಇರಲಿಲ್ಲ ಹೀಗೆಂದೂ

ಆಚೆಮನೆಯ ಸೋಮು ಈಚೆ ಮನೆಯ ಭರಮು
ಹರಿಜನ ಕೇರಿಯ ಸುಕ್ರು ಮಾಚಪ್ಪನ ಮಗ ಮಾದೂ
ನಮಗಿಂತ ಮೂರ‍್ನಾಲ್ಕೇ ವರ್ಷ ದೊಡ್ಡವರು
ಕಚ್ಚೆತುಂಡಿನಲ್ಲೇ ಹದಿನೆಂಟರ ಗಂಡಸ್ತನವನ್ನು
ಶಾಸ್ತ್ರಕ್ಕೆ ಮುಚ್ಚಿಟ್ಟುಕೊಂಡವರು
ಹೊಟ್ಟೆ ಹಸಿವೆಗೆ ಗೇರು ಹಕ್ಕಲದ ನೇರಿಳೆ ಮರ ಹತ್ತಿ
ಗಲಗಲ ಗೆಲ್ಲು ಅಲುಗಿಸಿ ಕುಣಿವಾಗ ಕಚ್ಚೆಬಿಚ್ಚಿಹೋಗಿ
ಕೆಳಗೆ ನಿಂತ ಪೋರಿಯರು
‘ಹೇ..!!ದೇವರು ಕಂಡ ‘ಎಂದು ಆರತಿ ಎತ್ತಿದಾಗಲೆಲ್ಲ
ನಾಚಿಕೊಂಡು ಹುಸಿಮುನಿಸಿನಲಿ ಚಂಡಿಕೆ ಎಳೆದು
ಬೆನ್ನಿಗೆರಡು ಗುದ್ದಿದರು
ಹೊರತು ತೆರೆದ ಎದೆಯ ಕಡೆಗೆ
ದೃಷ್ಟಿ ನಿಲ್ಲಿಸಲಿಲ್ಲ
ಅವರೆಲ್ಲ ಹೀಗಿರಲಿಲ್ಲ

ಬೆಟ್ಟಾನ ಬೆಟ್ಟ ಅದು ಚಂದಾನೆ ಬೆಟ್ಟ
ಬೆಳಗ್ಗೆದ್ದರೆ ತಂಬಿಗೆ ತಗೊಂಡು ಬೆಟ್ಟ
ಮಟ ಮಟ ಮಧ್ಯಾಹ್ನ ಹೊಲದ ಕಳೆಕೀಳಲು ಹಾಸಿ
ಹೋಗುವ ಹಾದಿಯೂ ಬೆಟ್ಟ
ಸಂಜೆ ದರಕು ಹೊತ್ತು ಬರುವಾಗ ಚಿನ್ನದಂತಹ
ಎಳೆಬಿಸಿಲ ರಂಗು ಕುಣಿಸುವ ಬೆಟ್ಟ
ಹಾವೂ ಪಾವೂ ಹೊರತಾದರೆ ಇನ್ಯಾತರದೂ
ಭಯವೇ ಇಲ್ಲದ ಬೆಟ್ಟ
ಅವ್ವನಂತಹ ಬೆಟ್ಟ
ಅಕ್ಕನಂತಹ ಬೆಟ್ಟ
ನಿನ್ನೆ ಎಳೆಮುಗುದೆಯೊಬ್ಬಳನ್ನು
ಪಕ್ಕದ ನಗರದ ಹಾದಿಬೀದಿಯಲ್ಲೇ ಬೇಟೆಯಾಡಿ
ಕತ್ತು ಹಿಸುಕಿ ಕೊಂದರಂತೆ – ಸುದ್ದಿಕೇಳಿ
ಬೆದರಿಕೊಂಡಿದೆ ಬೆಟ್ಟ
ಗಡಗಡನೆ ನಡುಗಿ “ಉಚ್ಚೆ ಬಂದಂತಾಗಿದೆ
ದಮ್ಮಯ್ಯ ಬಿಟ್ಟು ಹೋಗಬೇಡಿ” ಎಂದು
ಗೋಗರೆದಿದೆ ಬೆಟ್ಟ
ದೇವರಾಣೆಗೂ
ಈವರೆಗೆ ಹೀಗಾದುದಿಲ್ಲ
ಬೆಟ್ಟ ಹೆದರಿಕೊಂಡದ್ದು ಇತಿಹಾಸದಲ್ಲೇ ಇಲ್ಲ
ಆಗುವುದೆಲ್ಲ ಒಳ್ಳೆಯದಕ್ಕಲ್ಲ

ಅಶಕ್ಯವೆಂದು ತಳ್ಳಿಹಾಕುವಂತಹುಗಳೆಲ್ಲ
ಈಗೀಗ
ನಿಂತ ಮೆಟ್ಟಿನಲ್ಲೇ ಶಕ್ಯವಾಗುತ್ತಿವೆಯಲ್ಲ
ನಮಗೆಲ್ಲ ಗೊತ್ತಿರುವಂತೆ
ಹಿಂದೆಲ್ಲ ಹೀಗಿರಲಿಲ್ಲ
ಇರಲಿಲ್ಲ ಹೀಗೆಲ್ಲ

8 Responses

 1. ರಘುನಾಥ says:

  ನಿಜ ಆದರೆ ಅಪವಾದ

 2. Anasuya M R says:

  ತುಂಬಾ ಇಷ್ಟವಾಯಿತು

 3. Bhanukiran says:

  nimma e padya sari sumaaru varushagala hindia nenapugalige rappane esedu bittitu..vandanegalu

 4. Vasudev nadig says:

  ಮುಗ್ಧತೆ ಮತ್ತು ನಿರ್ಮಲ ಮನಸು
  ಅತಿನಾಗರಿಕತೆ ಮತ್ತು ವಿಕೃತ ಮನಸು
  ಎರಡರ ಮುಖಾಮುಖಿಯನು ಮತ್ತೆ ಅದೇ ನಿಮ್ಮದೇ ಆದ ಜೀವಂತ ಸಂಗತಿಗಳ ನಿರೂಪಿಸಿದ್ದು ಬಹಳ ಕಲಕುತ್ತದೆ.ಕವಿತೆ ಪದೇ ಪದೇ ಕೇಳುವ ಮನಸಾಕ್ಷಿಯ ಪ್ರಶ್ನೆ ಎದುರು ನಾಗರಿಕ ಸಮಾಜ ತಲೆ ತಗ್ಗಿಸೇ ನಿಂತಿದೆ

Leave a Reply

%d bloggers like this: