ದೊರೆಸಾನಿಯ ರಥ ಹೊರಟಿತಲ್ಲಾ…

 

’ಕಲೆ ಬದುಕಿಗೆ ಹೊಸ ಆಯಾಮವನ್ನ ನೀಡತ್ತೆ ಮಗಳೇ, ಬರವಣಿಗೆ ನಿನ್ನದಾದರೆ ಬಣ್ಣಗಳು ನನ್ನ ಆಯ್ಕೆ’ ಎಂದಷ್ಟೇ ಹೇಳಿ ಸುಮ್ಮನಾಗಿದ್ದ ಆತ. ಒಂದು ಪ್ರಶ್ನೆ ಕೇಳಿದರೆ ನೂರು ಉತ್ತರ ನೀಡೋ ಅವ ಇಂದೇಕೋ ಮೌನವಾಗಿದ್ದು ನಂಗೇ ಆಶ್ಚರ್ಯವಾಗಿತ್ತು. ಆಗಷ್ಟೇ ಯೌವ್ವನಕ್ಕೆ ಕಾಲಿರಿಸಿದ್ದ ನಂಗೆ ಬಣ್ಣಗಳು ತೀರಾ ಅನಿಸೋವಷ್ಟು ಆಕರ್ಷಿಸಿದ್ದವು. ಬಣ್ಣಗಳ  ಬೆನ್ನು ಹತ್ತಿ ಹೊರಟ ನಂಗೆ ಏನೆಂದರೆ ಏನೂ ಸಿಕ್ಕಿರಲಿಲ್ಲ.

ಇವತ್ತು ಅಚಾನಕ್ಕಾಗಿ ಸಿಕ್ಕಿದ್ದ ಇವನನ್ನು ಕಾಡಿಸಿ ಪೀಡಿಸಿ ನನ್ನದೊಂದಿಷ್ಟು ಪ್ರಶ್ನೆಗಳಿಗೆ ಉತ್ತರ ಹುಡುಕತೊಡಗಿದ್ದೆ. ಯಾಕೋ ಏನೋ ಅವನಲ್ಲೂ ಇಂದು ಮೌನದ ಛಾಯೆ. ಅವ ಇಷ್ಟು ಮೌನವಾಗಿದ್ದ ಕಂಡು ನನ್ನಲ್ಲೇನೋ ಸಂಕಟ, ಖೇದ, ಅನುಮಾನ ಎಲ್ಲವೂ ಒಟ್ಟಿಗೇ ಮೂಡಿದ್ದವು. ಆಗ ಮಾತಿಗೆ ಕೂತಿದ್ದಳು  ಅವಳು.. ’ನಿಂಗೊತ್ತಿಲ್ಲೇನೇ ಚಿನ್ನಿ! ಇವ್ರೇನ್ ಹೆಚ್ಚು ಮಾತಡಲ್ಲ ಈಗ. ಟ್ಯಾಬ್ಲೆಟ್ಸ್ ಪವರ್ ಗೆ ಮಂಪರು ಬಂದ ಹಾಗ್ ಆಗ್ತಿರತ್ತೆ. ನೀನೇನ್ ಹೆಚ್ಚು ತಲೆಬಿಸಿ ಮಾಡ್ಬೇಡ್ವೇ’. ಮಾತು ಮುಗಿಸುವಾಗ ಅವಳ ಕಣ್ಣಲ್ಲೂ  ನೀರ ಸೆಲೆ. ಅರ್ಥವೇ ಆಗದ ಭಾವ ಹೊತ್ತು ಹೊರ ಬಂದಿದ್ದೆ ನಾ. ಬಣ್ಣಗಳ ಸೋಜಿಗವ ತಿಳಿಯ ಹೊರಟವಳಿಗೆ ಬದುಕು ಹೊಸ ಕಥೆ ಹೇಳಹೊರಟಿತ್ತು.

 

ಮೆಲ್ಲನೆ ಹಿಂದಿನ ದಿನಗಳ ನೆನಪಾವರಿಸುತ್ತಿತ್ತು.ವಯಸ್ಸು ೫-೬ ಇರಬಹುದೇನೋ.. ಆಗೆಲ್ಲಾ ಅಜ್ಜ ಅಂದ್ರೆ ಗೌರವ, ಅಜ್ಜಿ ಅಂದ್ರೆ ಪ್ರೀತಿ, ಅಮ್ಮ ಅಂದ್ರೆ ಮಮತೆ, ಅಪ್ಪ ಅಂದ್ರೆ ಭಯ. ನನ್ನೆಲ್ಲಾ ತುಂಟಾಟಗಳಿಗೆ ಜೊತೆಯಾಗ್ತಿದ್ದಿದ್ದು, ತರಲೆಗಳಿಗೆ ಸಾಥ್ ನೀಡ್ತಿದ್ದಿದ್ದು ಅವನೇ. ಅವನೆಂದರೆ ಸಲುಗೆ, ಅವನಂದ್ರೆ ಪ್ರೀತಿ, ಅವನಂದ್ರೆ ಭಯ, ಅವನೆಂದ್ರೆ ಮೋಜು-ಮಸ್ತಿ. ಹಾಂ! ಅವನೇ ನನ್ನ ಚಿಕ್ಕಪ್ಪ. ಮಾತಿಗೆ ಕೂತ್ರೆ ಸಾಕು ಅನ್ನೋಷ್ಟು ಮಾತಾಡ್ತಿದ್ದ, ಆಟಕ್ಕೆ ಅಂತ ಹೋದ್ರೆ ದಿನಗಟ್ಟಲೆ ಸುಳಿವಿರ್ತಿರ್ಲಿಲ್ಲ, ಅವನ ಕುಂಚದಲ್ಲಿ ಅರಳದ ಚಿತ್ರಗಳಿಲ್ಲ, ಅವನ ಕ್ಯಾಮರಾದ ಕಣ್ಣಿಂದ ನೋಡದ ದೃಶ್ಯವಿಲ್ಲ. ಚಿಕ್ಕಪ್ಪ ಅಂದ್ರೆ ಅಪ್ಪ,ಅಮ್ಮ,ಅಜ್ಜ,ಅಜ್ಜಿಯರ ಒಟ್ಟು ಪ್ರತಿರೂಪ. ದೊಡ್ಡ ಮನೆಯ ಮುದ್ದು ಪುಟ್ಟಿ ನಾನಾದರೆ ಈ ಮುದ್ದಿನ ಆತ್ಮೀಯ ಅವನು. ನನ್ನ ಬಾಲ್ಯವೆಲ್ಲಾ ಅವನೊಂದಿಗೆ ಕಳೆದದ್ದೇ ಹೆಚ್ಚು.

 

 

ಚಿಕ್ಕಪ್ಪನೆಂಬ ಜೀವದ ಅಸ್ತಿತ್ವವೇ ಹಾಗೇನೋ.. ಒಮ್ಮೊಮ್ಮೆ ಪ್ರೀತಿ ಕಾಳಜಿಯ ಪ್ರತಿಬಿಂಬ, ಮತ್ತೊಮ್ಮೆ ಪರಶಿವನ ರೌದ್ರಾವತಾರ. ಅವನಿಗಾಗಿಂದಲೇ ಬಣ್ಣಗಳ ಹುಚ್ಚು.. ಹುಲಿವೇಷಗಳಿಗೆಲ್ಲಾ ಜೀವ ಕೊಡುತ್ತಿದ್ದವ ಅವನೇ. ಅದೊಂದು ಅಟ್ಟದ ಮೇಲಿನ ಕೋಣೆಯಲ್ಲಿ ತನ್ನ ಹಡಪಗಳನ್ನೆಲ್ಲಾ ತುಂಬಿಸಿಕೊಂಡು ಹೇಗ್ ಹೇಗೋ ಬದುಕುತ್ತಿದ್ದವ ಅವನು. ಈ ಚಿಕ್ಕಪ್ಪ ಅಪ್ಪ, ಅಜ್ಜನ ಕಣ್ಣಲ್ಲಿ ಬೇಜವಾಬ್ದಾರೀ ಮನುಷ್ಯ(ಬಣ್ಣಗಳ ಬೆನ್ನು ಹತ್ತಿದ ಮೇಲೆ ಜವಾಬ್ದಾರಿ ಎಲ್ಲಿಂದ ಬಂದೀತು ಬಿಡಿ,ಅಮ್ಮನಿಗೆ ಮತ್ತೊಬ್ಬ ಮಗ, ಅಜ್ಜಿಗೆ ವಿವರಿಸಲಾಗದ ಭಯ ಮಿಶ್ರಿತ ಕಾಳಜಿ ಈ ಚಿಕ್ಕಪ್ಪ ಅಂದ್ರೆ!. ನಂಗೆ ಆಟ ಆಡೋಕಂತನೇ ದೇವ್ರು ನೀಡಿರೋ ಬೊಂಬೆ.

ಊರವರು ಕಂಡಂತೆ ನಾ ಚಿಕ್ಕಪ್ಪನ ಬಾಲ. ಚಿಕ್ಕಪ್ಪನ ಹೆಗಲ ಮೇಲೇರಿ ಹೊರಟರೆ ’ದೊರೆಸಾನಿಯ ರಥ ಹೊರಟಿತಲ್ಲಾ’ ಎನ್ನುವವರೇ ಎಲ್ಲರೂ.. ಚಿಕ್ಕಪ್ಪನ ಕ್ಯಾಮೆರಾ ಅಂದ್ರೆ ಅದೇನೋ ಕುತೂಹಲ ನಂಗೆ. ನನ್ನ ಬಾಲ್ಯವೆಲ್ಲಾ ಮರುಕಳಿಸುವಂತೆ ಮಾಡುವ ಆ ರಾಶಿ ರಾಶಿ ಫೋಟೋಗಳೆಲ್ಲಾ ಚಿಕ್ಕಪ್ಪನ ಕ್ಯಾಮರಾದ ಕರಾಮತ್ತು. ನೀಲಿ-ನೀಲಿ ಚಿಟ್ಟೆ, ಕಡುಗಪ್ಪು ನಾಯಿ, ಪಟ್ಟೆ-ಪಟ್ಟೆ ಬೆಕ್ಕು, ಬಿಳೀ ದಾಸಿನ ಕರು ಎಲ್ಲವೂ ಅವನ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದವುಗಳೇ..

 

 

ಅಪ್ಪನ ಕಾರ್ಯನಿಮಿತ್ತ ದೂದದೂರಿಗೆ ಬಂದಮೇಲೆ ಚಿಕ್ಕಪ್ಪ ಸ್ವಲ್ಪಸ್ವಲ್ಪವೇ ಮರೆಯಾಗತೊಡಗಿದ್ದ. ಮನೆಯ ಕಾರ್ಯ-ಕಲಾಪಗಳು ಅರ್ಥವಾಗದ ವಯಸ್ಸು ನನ್ನದಾಗಿತ್ತೇನೋ. ಚಿಕ್ಕಪ್ಪನ ಮದ್ವೆಗೆ ವಾರಗಟ್ಟಲೆ ರಜಾ ಹಾಕಿ ಹೋದ ನೆನಪು.. ಆಗ ಚಿಕ್ಕಪ್ಪನಿಗಿಂತ ಅವಳೇ ನಂಗೆ ಮುಖ್ಯವಾಗಿದ್ಲು. ಅಮ್ಮನಷ್ಟೇ ಚಂದವಿದ್ದ ಚಿಕ್ಕಮ್ಮ.. ನಂತರದ ದಿನಗಳಲ್ಲಿ ನಾ ನನ್ನದೇ ಪ್ರಪಂಚದಲ್ಲಿ ಮುಳುಗಿಹೋದೆ, ಚಿಕ್ಕಪ್ಪ ಅವನ ಬದುಕ ಧಾವಂತದಲ್ಲಿ ಕಳೆದುಹೋದ.

ಕಾಲಚಕ್ರ ಉರುಳಿದಂತೆ ಅಜ್ಜ ಅಜ್ಜಿಯರು ಇಲ್ಲವಾದರು.. ನಂಗೆ ಕಸಿನ್ಸ್ ಎಂಬ ಮತ್ತೆರಡು ಜೀವಗಳು ಜೊತೆಯಾದವು. ಚಿಕ್ಕಪ್ಪನಿಗೆ ಮಕ್ಕಳೇ ಜೀವವಾದರು.. ಆದರೂ ಈ ದೊರೆಸಾನಿಯ ಮೇಲಿನ ಒಲವು, ಕಾಳಜಿ, ಪ್ರೀತಿ ಕಡಿಮೆಯಾದಿದ್ದೇ ಇಲ್ಲ ಅವನಲ್ಲಿ.. ವರ್ಷಗಳು ಕಳೆದಂತೆ ಪ್ರಭುದ್ಧತೆಗೆ ನಿಲುಕಿದ್ದೆ ನಾ.. ಬದುಕು ವಿಸ್ತರಗೊಂಡಿತ್ತು! ಬರವಣಿಗೆ ಕೈ ಹಿಡಿದಿತ್ತು.. ಆಗೊಮ್ಮೆ ಈಗೊಮ್ಮೆ ಅಜ್ಜಿಯ ನೆನಪಾದಾಗೆಲ್ಲಾ ಚಿಕ್ಕಪ್ಪ ಕಣ್ಮುಂದೆ ಬರುತ್ತಿದ್ದ. ಯಾಕೋ ಚಿಕ್ಕಪ್ಪ ಹಾದಿ ತಪ್ಪುತ್ತಿದ್ದಾನೆಂಬ ಅಮ್ಮನ ಕಳವಳ, ಅಪ್ಪನ ಆತಂಕ ಸರಿಯೇ ಅನಿಸುತ್ತಿರಲಿಲ್ಲ ನಂಗೆ. ದೇವತೆಯಂಥಾ  ಚಿಕ್ಕಮ್ಮ, ಕಣ್ಮಣಿಯಂಥಾ ಮಕ್ಕಳು, ಚಿಕ್ಕಪ್ಪನ ಮೇಲಿದ್ದ ಎಲ್ಲ ದೂರನ್ನೂ ನಗಣ್ಯವೆನಿಸುವಂತೆ ಮಾಡಿಬಿಡುತ್ತಿದ್ದರು.

ಅದೊಂದು ನಾಲ್ಕೈದು ವರ್ಷ ಎಲ್ಲ ಸಂಬಂಧಗಳಿಂದ ದೂರ ಉಳಿದಿದ್ದೆ ನಾ.. ಬದುಕು ಕಟ್ಟಿಕೊಳ್ಳುವ ಕ್ಲಿಷ್ಟಕರ ದಿನಗಳವು. ಇಂದು ಮರಳಿದ್ದೇನೆ ಮತ್ತೆ ನನ್ನೂರಿಗೆ! ಎಲ್ಲ ಭಾವ-ಬಾಂಧವ್ಯಗಳನ್ನು ಮತ್ತೆ ಹುಡುಕುವ ಸಲುವಾಗಿ. ಬಣ್ಣದ ಬಗ್ಗೆ ಕಾಡಿದ್ದ ನೂರು ಗೊಂದಲಗಳಿಗೆ ಚಿಕ್ಕಪ್ಪನಲ್ಲಿ ಉತ್ತರ ಹುಡುಕಲು ಹೊರಟರೆ ಚಿಕ್ಕಮ್ಮ ಉತ್ತರಿಸುತ್ತಾಳೆ.

ಎಲ್ಲ ಬದಲಾದಂತಿದೆ! ಅಮ್ಮನ ವಿಷಾದ, ಅಪ್ಪನ ಖೇದ ಒಂದೊಂದಾಗೇ ಅರ್ಥವಾಗುತ್ತಿದೆ.. ಬಣ್ಣಗಳ ಜೊತೆಗೆ ಶರಾಬಿನ ನಶೆಯೂ, ಧೂಮ್ರದ ಹೊಗೆಯೂ ಚಿಕ್ಕಪ್ಪನ ಸಾಂಗತ್ಯ ಬಯಸಿದ್ದವಂತೆ. ಅಲ್ಲಿಂದ ಮುಂದೆ ಅವನ ಬದುಕು ಛಿದ್ರವಾಗಿತ್ತು.. ಅಪಘಾತದ ಆಘಾತ ಅವನ್ನನ್ನು ಇನ್ನಷ್ಟು ಹಿಂಡಿ ಹಿಪ್ಪೆ ಮಾಡಿತ್ತು. ನನ್ನ ನೂರು ಪ್ರಶ್ನೆಗಳಿಗೆ ಒಂದೇ ಸಾಲಿನ ಉತ್ತರ ನೀಡಿ ಕುಳಿತ ಅವನನ್ನು ಕಂಡು ಕಣ್ಣು ತಂತಾನೇ ತೇವಗೊಂಡಿದ್ದವು. ಭಗವಂತಾ ಚಿಕ್ಕಪ್ಪನ ಬದುಕು ಸರಿ ಹೋಗಲಿ ಎಂಬ ಹಾರೈಕೆಯೊಂದಿಗೆ  ಮರಳುವ ಕ್ಷಣಗಳು ನನ್ನದಾಗಿದ್ದವು.

 

ಮೂರು ವರ್ಷವಾಯಿತು ಚಿಕ್ಕಪ್ಪ ಸಾವಿಗೆ ಶರಣಾಗಿ! ಚಿಕ್ಕಪ್ಪನನ್ನ ಕಡೆಯ ಬಾರಿಗೆ ನೋಡಿದಾಗ ಬರೆದ  ಪುಟಗಳನ್ನ ನೋಡುವುದ ಬಿಟ್ಟು ಇನ್ನೇನೂ ಮಾಡಲಾಗುತ್ತಿಲ್ಲ..  ದೊರೆಸಾನಿಯಂತೆ ನನ್ನನ್ನು ಪ್ರೀತಿಸುತ್ತಿದ್ದ ಚಿಕ್ಕಪ್ಪ, ನನ್ನ ಅಂಬಾರಿಯ ಆನೆಯಾಗಿದ್ದ ಚಿಕ್ಕಪ್ಪ, ಹಣೆಯ ಮೇಲೆ ನವಿಲು ಬಿಡಿಸಿ ರಾಜಕುಮಾರಿಯ ಫೀಲ್ ಮೂಡಿಸುತ್ತಿದ್ದ ಚಿಕ್ಕಪ್ಪ, ಕ್ಯಾಮೆರಾ ಕಣ್ಣಲ್ಲಿ ನನ್ನ ಬಾಲ್ಯವನ್ನು ಸೆರೆಹಿಡಿದು ಕೊಟ್ಟಿದ್ದ ಚಿಕ್ಕಪ್ಪ ಇನ್ನು ನೆನಪು ಮಾತ್ರ. ಕನಸಿಲ್ಲಾದರೂ ಈ ದೊರೆಸಾನೆಯ ಬಣ್ಣದ ಬದುಕಿನ ಬಗೆಗಿನ ಕುತೂಹಲವನ್ನು ತಣೀಸುತ್ತಾನೇನೋ ಕಾದು ನೋಡಬೇಕಿದೆ..

12 Responses

 1. Bhavanishankara V Thanthri. says:

  Amma altha iddale.Modale gotthidre thoristhane irlilla.

 2. ಶ್ರೀ ತಲಗೇರಿ says:

  ಬಹುಶಃ ಅನುಭವ ಯಾವತ್ತೂ ಬರಹಕ್ಕೆ ಬೇರೆಯದೇ ಬಣ್ಣವನ್ನು ಕೊಡುತ್ತದೇನೋ.. ಕೇವಲ ಅಕ್ಷರ ಮಾತ್ರ ಇದ್ದಿದ್ದರೆ ಇದು ಕೇವಲದ ಬರಹವಾಗುತ್ತಿತ್ತೇನೋ.. ಆದರಿಲ್ಲಿ ಈಗ ಗೊಂಚಲು ಗೊಂಚಲು ಪ್ರೀತಿ ಬದುಕಿನ ವೈವಿಧ್ಯಗಳನ್ನ ಹಿಡಿದು ಕೂತಿದೆ.. ಹಲವು ಬಣ್ಣ ನೀವೇ ಹೇಳಿದಂತೆ.. ದೊರೆಸಾನಿಯ ರಥಕ್ಕೆ ಯಾವತ್ತೂ ಹಾರಾಡುವ ನೆನಪುಗಳ ಬಾವುಟ ; ಅದೂ ಅವನೇ ಕಟ್ಟಿದ್ದು.. ರಥ ಈಗಷ್ಟೇ ಹೊರಟಿದೆ.. ಚೈತ್ರದ ನವ ಪಲ್ಲವ ಇದಿರಾಗಿ ಸ್ವಾಗತಿಸಲಿ ಎಲ್ಲಾ ಕಡೆ 🙂 🙂 🙂

  • ಈ ಪ್ರೀತಿಗೆ, ಪ್ರೋತ್ಸಾಹಕ್ಕೆ ಮಾತಿಲ್ಲ ನನ್ನಲ್ಲಿ! ಧನ್ಯವಾದ ಯಾವತ್ತಿಗೂ ☺

 3. Sudhira KV says:

  really heart teaching Lahari

 4. PoornimaRaj says:

  Superb, welldone…. Gud going❤

 5. Rajath Sawant says:

  Amazing article Lahari.. Descriptions in the story are captivating.. Looking forward for your next article

 6. ವಿಷ್ಣು ಭಟ್ಟ ಹೊಸ್ಮನೆ says:

  ಒಳ್ಳೆಯ ಸುಂದರ್ ಲೇಖನ..ಭಾವ-ಬಂಧದ ರಥವನ್ನು ಎದೆಯೊಳಗೆ ಅಪ್ಪಣೆಗೆ ಕಾಯದೆ ಎಳೆದಂತಿದೆ. ಚೆಂದದ ಸಾಲುಗಳು ನೈಜ ಭಾವವನ್ನು ಎದೆಯಿಂದ ಕಣ್ಣಿನ ತನಕ ತಂದು ಮುಟ್ಟಿಸಿದೆ.

 7. Savitha K V says:

  ಹಳೆಯ ನೆನಪುಗಳೆಲ್ಲ ಒತ್ತರಿಸಿ ಮನಸ್ಸು ಭಾರವಾಗಿದೆ ಚಿನ್ನಿ

Leave a Reply

%d bloggers like this: