ಕುಂಚನೂರ ಮೀಟಿದ ತಂಬೂರಿ

 

 

 

 

ಚಲಪತಿ ಗೌಡ

 

 

 

ಮುಖತಃ ಎಂದೂ ಇವರನ್ನು ಭೇಟಿಯಾಗಿದ್ದಿಲ್ಲ, ಆದರೂ ಇವರ ಕಾವ್ಯ ಕುಸುರಿ ಬಗ್ಗೆ ಒಂದೆರಡು ಸಾಲುಗಳನ್ನು ಬರೆಯಬೇಕೆಂಬ ಆಸೆ ಇಂದಿನದಲ್ಲ ಇದಕ್ಕೆಲ್ಲಾ ಕಾರಣ ಸಾಹಿತ್ಯ.ಎಲ್ಲೆಲ್ಲೋ ಇರುವ ಮನಸ್ಸುಗಳನ್ನು ಬೆಸೆಯುವ ಶಕ್ತಿಮೂಲಗಳು ಏನೇನೋ ಇರಬಹುದು ಆ ಸಾಲಿನಲ್ಲಿ ಖಂಡಿತ ಸಾಹಿತ್ಯ ತನ್ನದೇ ಆದ ವಿಭಿನ್ನ  ಸಾಲಿನಲ್ಲಿ ತನ್ನ ಇರುವಿಕೆಯನ್ನು ಹೃನ್ಮನಗಳಲ್ಲಿ ತೋರ್ಪಡಿಸುವಂತೆ ಪ್ರೇರೇಪಿಸುತ್ತದೆ.

ಆನಂದ ಈ ಕುಂಚನೂರ ಈ ಹೆಸರು ನಾನು 2013 ರಿಂದಲೇ ಬಲ್ಲೆ, ಜೀವನ ಪ್ರಕಾಶನ ಚಿಕ್ಕಬಳ್ಳಾಪುರ ಇವರ ವತಿಯಿಂದ ನಡೆದ ರಾಜ್ಯಮಟ್ಟದ ಕವನ ಸ್ಪರ್ಧೆಯ ಕವನಗಳಿಗೆ ಸಂಕಲನ ರೂಪ ಕೊಟ್ಟಾಗ ಇವರ ಕವನಗಳು ನನ್ನನ್ನು ವಿಶೇಷವಾಗಿ ಸೆಳೆಯಲ್ಪಟ್ಟಿದ್ದವು. ಈ ಸ್ಪರ್ಧೆಯಲ್ಲಿ ನನಗೆ ಎರಡು ಬಾರಿ ಬಹುಮಾನ ಬಂದಾಗ ಆದ ಸಂತೋಷ ಅದೇ ಸ್ಪರ್ಧೆಯಲ್ಲಿನ ಇವರ ಕವನಗಳು ನನಗೆ ಖುಷಿ ನೀಡಿದ್ದವು. ಕವನ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಇವರ ಕವನ ‘ ಒಂದು ವೀರ್ಯದ ಋಣ’ ನನ್ನನ್ನು ಚಕಿತಗೊಳಿಸಿದ್ದು ಸುಳ್ಳಲ್ಲ.

ಜನ್ಮಕೊಟ್ಟವನಾಗಿ ಅಪ್ಪನಾಗದ ನಿನ್ನನ್ನು ದ್ವೇಷಿಸುತ್ತೇನೆ

ಸಾಲದ ಒಂದು ವೀರ್ಯದ ಋಣಕ್ಕೆ ಕ್ಷಮಿಸಿಬಿಡುತ್ತೇನೆ

ನಾನೂ ಮಗನಲ್ಲ ಬಿಡು

ಈ ಸಾಲುಗಳು ಸ್ವಲ್ಪ ಮಟ್ಟಿಗೆ ನನಗೂ ಹೊಂದಾಣಿಕೆಯಾಗಿದ್ದರಿಂದಲೋ ಏನೋ ಇವರ ಇತರ ಕವನಗಳನ್ನು ಓದಬೇಕು ಎಂಬ ಆಸೆ ಚಿಗುರೊಡೆದಿದ್ದು.

ವ್ಯೋಮ ತಂಬೂರಿ ನಾದ ಈ ಶೀರ್ಷಿಕೆ ಎಷ್ಟು ಚೆನ್ನಾಗಿದೆ ಅಲ್ವಾ! ಇದೇ ಹೆಸರಿನಲ್ಲಿ ಇವರ ಪುಸ್ತಕ ಬಿಡುಗಡೆಯಾಗಿರುವ ಬಗ್ಗೆ ಪೇಸ್ ಬುಕ್ ಭಗವಂತನ ಗೋಡೆಯ ದಯೆಯಿಂದ ತಿಳಿದುಕೊಂಡೆ, ಮರು ಯೋಚಿಸದೇ ಪುಸ್ತಕ ಕಳುಹಿಸಿಕೊಡಿ ಎಂದು ನನ್ನ ವಿಳಾಸದ ಜೊತೆ ಬ್ಯಾಂಕ್ ಖಾತೆ ವಿವರಗಳನ್ನ ಕಳುಹಿಸಿ ಎಂದು ಆನಂದರವರಿಗೆ ಸಂದೇಶ ಕಳುಹಿಸಿದೆ, ವಾರಕ್ಕೆಲ್ಲಾ ಪುಸ್ತಕ ಮನೆ ತಲುಪಿತು, ಹಣ ಕಳುಹಿಸಿಕೊಡಲು ಬ್ಯಾಂಕ್ ಖಾತೆ ವಿವರ ನೀಡಿ ಎಂದು ಅನೇಕ ಬಾರಿ ಸಂದೇಶ ಕಳುಹಿಸಿದರೂ  ಓದಿ ಅಭಿಪ್ರಾಯ ತಿಳಿಸಿ ಅದೇ ನನಗೆ ಸಂತೋಷ ಎಂದರು, ಈ ಕಾಲಕ್ಕೆ ನಿಮ್ಮ ಬಗ್ಗೆ ಸ್ವಲ್ಪವಾದರೂ ಬರೆದು ಪುಸ್ತಕ ಋಣ ತೀರಿಸುವ ಘಳಿಗೆ ಬಂದಿದೆ ಎಂದು ತಿಳಿದಿದ್ದೇನೆ.

ಅನ್ನದಿಂದ ಶುರುವಾಗುವ ಕವನ ಸಂಕಲನದ ಕವನಗಳೆಲ್ಲಾ ಒಂದೊಂದು ಅಣಿಮುತ್ತು ಆರಿಸಿಕೊಳ್ಳಬೇಕಾದ್ದು ನಾವೇ, ಅರಿಯಬೇಕಾದ್ದು ನಾವೇ.ವ್ಯೋಮ ತಂಬೂರಿ ನಾದ ಕವನ ಸಂಕಲನ ಅನೇಕ ಪ್ರಶಸ್ತಿಗಳನ್ನು ಪಡೆಯುತ್ತಿರುವುದು ತುಂಬಾ ಸಂತಸದ ವಿಷಯ, ನಿಮ್ಮ ಮುಂದಿನ ಕಥಾ ಸಂಕಲನ ಪಾದಗಟ್ಟಿ ಯಶಸ್ವಿಯಾಗಲಿ, ಪುಸ್ತಕಕ್ಕಾಗಿ ಕಾಯುತ್ತಿರುತ್ತೇನೆ.

Leave a Reply