ಹೆಜ್ಜೆಯ ಕಾಲಿಗೆ ಗೆಜ್ಜೆ

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಈಗ ಪ್ರಕಟವಾಗಿರುವ ಡಾ ಲಕ್ಷ್ಮಣ್ ವಿ ಎ ಅವರ ಕವಿತೆಗಳ ಬಗ್ಗೆ

ಟಿಪ್ಪಣಿ ಬರೆಯಲಿರುವವರು ಶ್ರೀನಿವಾಸ ಜೋಕಟ್ಟೆ. ಕಾದು ಓದಿ

 

“ಅಪ್ಪನ ಕಷ್ಟಗಳು,ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ಬಂದು ,ಮತ್ತೆ ಹೆಗಲಿಗೆ ಬಂದೂಕು ಧರಿಸಿ ಡ್ಯೂಟಿಗೆ ನಿಲ್ಲುವ ಅಣ್ಣ ನನಗೆ ಯಾವೊತ್ತೂ ಕಾಡುವ ಸಂಗತಿಗಳು. ರೈತನ ಮಗನಾಗಿರುವುದಕ್ಕೆ ಹೆಮ್ಮೆಯಿದೆ.ಯೋಧನ ಕುಟುಂಬ ವಾಗಿರುವುಕ್ಕೂ ,ಆದರೂ ಈ ಗಡಿಗಳು ಅಳಿಸಿ ಹೋಗಲಿ” ಎನ್ನುವ ಕಳಕಳಿಯ ಕವಿ ಡಾ.ಲಕ್ಷ್ಮಣ್ ವೃತ್ತಿಯಲ್ಲಿ ಆಯುರ್ವೇದ ವೈದ್ಯರು.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮೋಳೆ ಎಂಬ ಗ್ರಾಮದವರು.

“ಸ್ವಲ ಓಡುತ್ತ ,ಕೊಂಚ ಸಾವರಿಸಿಕೊಳ್ಳುತ್ತ ,ಎಡವದಂತೆ ಎಚ್ಚರವಹಿಸುತ್ತ ,ಎಡವಿಬಿದ್ದರೂ ಮತ್ತೆ ಹೊಸಹುರುಪಿನೊಂದಿಗೆ ಮೈ ಕೊಡವಿಕೊಂಡೇಳುತ್ತ ,ಹಾಡು ಹೇಳುತ್ತ ,ಇನ್ನೊಬ್ಬರ ನೋವ ಹಾಡು ನಮ್ಮೆದೆಗಿಳಿಸಿಕೊಂಡು ಒಂದು ಹನಿ ಕಣ್ಣೀರಾಗುತ್ತ ,ಗೋಡೆಗಳ ಕೆಡುವುತ್ತ ,ಬೇಲಿಯ ಮೇಲಿನ ಹೂ ಗಿಡಕೆ ನೀರೆರೆಯುತ್ತ ,…ಎಲ್ಲರೆದೆಯಲ್ಲೊಂದು ಹೂವು ಅರಳಿಸೋಣ ಬನ್ನಿ” ಎಂದು ಕರೆವ ಲಕ್ಷ್ಮಣ್ ಅರಳಿಸಿದ ಕವಿತೆಗಳ ಹೂಗುಚ್ಚ ಇಲ್ಲಿದೆ..

ಹೆಜ್ಜೆ ಯ ಕಾಲಿಗೆ ಗೆಜ್ಜೆ

ತೀರದಲಿ
ಒಂಟಿ ನಾವೆಯ ಬಿಟ್ಟು
ಎಲ್ಲೊ ನಡೆದು ಹೋಗಿದ್ದಾನೆ
ನಾವಿಕ
ಕಾಯಬೇಕು
ಉಬ್ಬರವಿಳಿಯುವತನಕ
ಪೊರೆ ಬಂದ ಹಾವಿನಂತಹ ನದಿ
ಬಳಸಿದೆ ಬೆಟ್ಟ ಕಣಿವೆ
ವರುಷಕ್ಕೊಂದೆರಡು ನೆರೆ ಹೀಗೆ
ತೊಳೆಯುತ್ತದೆ ಮರಳು  ಎರೆಯ  ಮಣ್ಣು ಕಪ್ಪೆ ಚಿಪ್ಪು  ತರಗೆಲೆ ಎರಡೂ ಬದಿ.
ಕಡಲಿಗೆ ತಂದು
ಎಸೆಯುತ್ತದೆ ನಿನ್ನ ಹೆಜ್ಜೆ ಗುರುತಗಳ ಸಮೇತ

ಪೊರೆ ಬಿಟ್ಟ ಹಾವಿನ ಕಣ್ಣಿಗೆ
ಮರುಹುಟ್ಟು
ನೆರೆ ನಿಂತ ನದಿಯ ಬದಿಯ ಮೇಲೆ
ನಿನ್ನ ಎದೆಯ ನುಣುಪಿನಂತ ಎರೆ ಮಣ್ಣು

ನಾವಿಕನ ಸುಳಿವಿಲ್ಲ  ಇನ್ನೂ
ದೇವರೆ
ಕಳುಹಿಸಿದಂತ ಒಂದು ಕಿರುತೆರೆಯ
ಮೇಲೆ ತೇಲಿ ಬರುವೆ ಇರು ಅಲ್ಲೆ

ಪ್ರತಿ ಮುಂಗಾರು  ಎದೆಯಲ್ಲೊಂದು ಹಾಡನ್ನಿಟ್ಟುಕೊಂಡೆ  ಬರುವುದು
ಈ ಸಲ ನದಿಗೆ ಹೇಳಿಕಳಿಸಿದ್ದೇನೆ ಕಡಲಿಗೆಸೆದ
ನಿನ್ನ ಹೆಜ್ಜೆ ಗುರುತವ  ಮುಂದಿನ ಬಾರಿಗೆ  ಮರೆಯದೆ  ಮರಳಿಸಲು .

ಹಾಡಿನ ಹೆಜ್ಜೆ ಕಾಲಿಗೆ  ಗೆಜ್ಜೆ ಕಟ್ಟಬೇಕು.

ಊರ ದಾರಿ

ಊರು ತಲುಪಲು ಎರಡು ದಾರಿಗಳಿವೆ
ಒಂದು ಡಾಮರು ,ತುಸು ಬೇಗ ತಲುಪುವವರಿಗೆ
ನನಗೆ ಅಂತಹ ಅವಸರವಿಲ್ಲ ;
ಬಳಸು ದಾರಿಯ ಬಳಸಿ ನಡದೆ ಹೋಗುವೆ.

ಡಾಮರು ರೋಡು ತುಸು ನಿರ್ದಯಿ
ಭೂಭಾರದ ಲೋಡು ಹೊತ್ತ ಲಾರಿಗಳು,ಬಸ್ಸು ,ಕಾರು,ಅಷ್ಟು ಸುಲಭವಾಗಿ ಇದರೆದೆಯ ಮೇಲೆ ಯಾವ  ಹೆಜ್ಜೆಗಳೂ ಮೂಡುವುದಿಲ್ಲ
ಯಾವ ನೆನಪುಗಳೂ ಇದಕಿಲ್ಲ

ಬಳಸು ದಾರಿಯ ಅಡ್ಡಾದಿಡ್ಡಿಯ ಹೆಜ್ಜೆಗಳು
ನನಗೆ ಅಚ್ಚುಮೆಚ್ಚು
ಈ ದಾರಿಯ ತುಂಬಾ  ಮಣ್ಣು,ಕಲ್ಲು ಮುಳ್ಳು
ಯಾರದೋ ಹೆಜ್ಜೆಗಳ ಮೇಲೆ ಇನ್ಯಾರದೋ
ಅಚ್ಚು
ನೆಲದಲ್ಲಿಡಗಿದವರ ಹಿರೀಕರ ನೆರಳು.
ಕಳ್ಳಿ ಸಾಲು, ಲಂಟಾನ ದ ಹೂವು

ದಾಟಲು ತುಸು ಬಾಗಿ ನಡೆಯಬೇಕು.
ನೀವು ತುಳಿದ ಹೆಜ್ಜೆ ಗುರುತಗಳು ಅಷ್ಟು ಬೇಗ ಅಳಿಯುವುದಿಲ್ಲ,ಯಾಕೆಂದರೆ ಈಗೀಗ ಈ ಬಳಸು ದಾರಿ ಯಾರೂ ಬಳಸುವುದಿಲ್ಲ.
ಗುರುತು ಕಾಯುವುದೆ ಅದರ ಗುರುತು ಅಳಿಸಲು ಇನ್ನೊಬ್ಬರ ಬರುವಿಕೆಗೆ
ಯೋಚಿಸುತ್ತೇನೆ.

ಹಾಂ! ಹೇಳಲು ಮರೆತಿದ್ದೆ ಒಂದು ಹಿರಿಹಳ್ಳ ದಾಟಬೇಕು,  ಒಂದು ಫರ್ಲಾಂಗಿನಾಚೆ ಇನ್ನೊಂದು ಕಿರಿ ಹಳ್ಳ ,ಮುಂದೆ ಮೂರು ಮೈಲಿಯಾಚೆ ಎರಡೂ ಸೇರಿ ಅಕ್ಕ ತಂಗೇರಹಳ್ಳವಾಗುವುದು.
ಮೈಯಲ್ಲಿ ಕಸುವಿದ್ದವರು ಈಜಿ ಹೋಗಬಹುದು
ಅಂಬಿಗನ ನಂಬಿ ಕುಳಿತರೆ ನೀವಿಲ್ಲಿ ಊರು ತಲುಪುವುದು ಖಾತ್ರಿಯಿಲ್ಲ
ಅವನಿಗೊ ನೊರೆಂಟು ತರಲೆ ತಾಪತ್ರಯಗಳು.

ಅಜ್ಜ ನ ಸುಕ್ಕುಗಟ್ಟಿದ ಮೈಯಂತಿರುವ
ಆಲ ,ಗಾಳಿಗೆ ಹಾರುವ ಅದರೆಲೆಯ
ಗಲ ಗಲ
ಕಣ್ಣ ಪಸೆಯಾರಿದ ಹಣ್ಣು ಹಣ್ಣು ಮುದುಕಿ
ಮೊಗದ ಮೇಲೆ
ನದಿ ಹರಿದಾಡಿದ ಕುರುಹು ಗೀರು
ಹರಪ್ಪೊ ಮೊಹಂಜಾದರೊ ನಾಗರಿಕತೆ
ಆಳಿದವರ ,ಅಳಿದವರ ಕತೆ
ಇದೇ ಈ ಮರದಡಿ ಚಿಗುರಿದ ಅವರ ಪ್ರೇಮಕತೆ

ಊರು ತುಂಬ ಬದಲಾಗಿದೆ
ಡಾಮರು ಬಂದಿದೆ
ಗಲ್ಲಿ ಗಲ್ಲಿಗೂ ನಲ್ಲಿ ಬಂದಿದೆ
ಗುಡಿಯ ಗೋಪುರಕ್ಕಿಂತ ಎತ್ತರ ಮೊಬೈಲ್ ಟವರು ಎದ್ದಿದೆ
ಗಟಾರು ಬಂದಿದೆ ,ಬೀದಿ,ಬೀದಿಗೂ ಟಾರು
ಬಂದಿದೆ
ಏನಿದ್ದರೇನು
ಊರ ದಾರಿಯಲಿ ಬಟ್ಟೆ ಕೊಳೆಯಾಗುವ
ಮಣ್ಣೇ ಇಲ್ಲದ ಮೇಲೆ ?

ಕೊನೇ ಮನೆಯ ಜಗುಲಿಯ ಮೇಲೆ
ಕುಂಡೆ ತುರಿಸುತ್ತ ಮೋಟು ಬೀಡಿ ಹಚ್ಚಿದ
ಮುದುಕ ಹಣೆಯ ಮೇಲೆ ಕೈಯಿರಸಿ
ನನ್ನೇ ದಿಟ್ಟಿಸಿ ಯಾರ ಮಗ ಯಾರ ಮಗ
ಯಾವೂರು ನಿಮ್ಮದೆನ್ನುತ್ತಾನೆ
ಒಮ್ಮೆ ಆ ಊರು,ಇನ್ನೊಮ್ಮೆ ಈ ಊರು
ಅಸಲು ನನ್ನ ಊರು ಯಾವುದು ನನಗೇ
ಗೊಂದಲವಿದೆ ಏನಂತ ಹೇಳಲಿ ?

ನನಗೆ ಅಂತಹ ಅವಸರವಿಲ್ಲ
ನಾನು ಬಳಸುದಾರಿ ಸವೆಸುತ ಮುಂದೆ
ನಡೆದಿದ್ದೇನೋ ಅಥವ ದಾರಿ ತಪ್ಪಿ ಹಿಂದೆ ಬಂದಿರುವೆನೊ ?

ಕೊನೆಯ ಪುಟ

ಹೆದ್ದಾರಿಯ ಮೈಲುಗಲ್ಲುಗಳಂತಹ
ಬಣ್ಣ ಮಾಸಿದ
ಹಳೆಯ ಪುಸ್ತಕದ ಪುಟಸಂಖ್ಯೆಗಳು
ಮೊದಲ ಪುಟದಲಿ
ಆಕಾಶ ಬಣ್ಣದ ಇಂಕಿನಲಿ
ಮೋಡಿ ಲಿಪಿಯಲಿ ಬರೆದು ಹಾರೈಸಿದ
ಪುಟ್ಟ ಹಸ್ತಾಕ್ಷರ
ಮುಟ್ಟಿದರೆ ಎಲ್ಲಿ ಮುರಿದೆ
ಹೋಗುವ ನಾಜೂಕಿನ ತರಗೆಲೆಯ
ಅಥವ ತಾಳೆಗರಿಯಂತಹ
ಚಲಾವಣೆಯಿಲ್ಲದ ಹಳೆಯ ನೋಟಿನ ಕಂತಿನ
ಕಟ್ಟು

ಗಾಳಿಯ ಉಸಿರು ಬಿದಿರು ಮೆಳೆಗಳಲ್ಲಿ ಸಿಕ್ಕು
ದೂರದಲ್ಲೆಲ್ಲೋ ಇರುವ ಗೊಲ್ಲನಿಗೆ
ಕೊಳಲು ದನಿ ಕೇಳುವಂತೆ
ಓದುತ್ತ ಹೋದಂತೆ ನಿಮಗೆ ಅರಿವಾಗುವ
ಬಗೆ ಅಚ್ಚರಿ
ಮೊದಲ ಪ್ರೇಮ ಹಸಿ ಹಸಿ ಕಾಮ
ನಂತರದ ಮಹಾಯುದ್ಧ
ದೇಶ ವಿಭಜನೆ
ಕ್ಷಾಮ ,ಊರು ನುಂಗಿದ ಪ್ಲೇಗು ಮಾರಿ
ಎಷ್ಟು ಸಹಸ್ರಮಾನದ ನಡಿಗೆಯಿದು ?
ಯಾವ ದುರ್ಗಮದ ದಾರಿ
ಎಷ್ಟು  ಕಾಡು ಕಣಿವೆ ಪ್ರಪಾತಗಳ ಏಳು ಬೀಳು

ಕಪಾಟಿನ ತುಂಬ ಓದಲಾರದ
ಪುಸ್ತಕಗಳ ಜೊತೆ ಹೇಗೋ ವೇಷಮರೆಸಿಕೊಂಡ ಹೊತ್ತಿಗೆ.,
ಇಷ್ಟು ದಿನ ಅದು ಹೇಗೆ ನನ್ನ  ಕಣ್ಣು ತಪ್ಪಿಸಿ
ಮುನಿಸಿಕೊಂಡ
ಮನೆದೇವರು
ಇದ್ದಕ್ಕಿಂದ್ದಂತೆ ಜಾತ್ರೆಯಲಿ ಭೈರಾಗಿಯಂತೆ ಎದಿರಾಗಿ

ಅಲ್ಲಲ್ಲಿ ಕಿವಿ ಮಡಚಿದ ಪುಟಗಳು
ಚುಕ್ಕೆ ಬಾಣದ ಗುರುತುಗಳು
ದಿಕ್ಕು ತಪ್ಪು ವವರ ದಾರಿ ತೋರುವ ಹೆದ್ದಾರಿಯ
ಸಂಕೇತಗಳು

ಪುಸ್ತಕದಲ್ಲಿ ಮಡಚಿಟ್ಟು ಯಾರೋ ಮರೆತಿರಬಹುದಾದ
ಒಣಗಿದ ಹೂ ಪಕಳೆಗಳು
ಯಾವ ಚೆಲವಿಯ ಮುಡಿಯದ್ದು
ಕೈ ಗಂಟಿದ ಹುಡಿ ಎಷ್ಟು   ತೊಳೆದರೂ ಹಸನಾಗುತಿಲ್ಲ‌
ಯುದ್ದ ಮತ್ತು ಪ್ರೇಮದ
ಅದ್ಧ್ಯಾಯಗಳು   ಇನ್ನೂ ಪೂರ್ತಿಯಾಗಿಲ್ಲ
ಹೀಗಾಗಿ ಕೊನೆಯ ಪುಟ ಸಂಖ್ಯೆ
ನಮೂದಾಗದೆ ಖಾಲಿಯಿದೆ
ಈ ದಾರಿ  ಎಲ್ಲಿಯೂ ಕೊನೆಯಾಗುವುದಿಲ್ಲ .

 

ಅಪ್ಪ ಮತ್ತು ಕಡಲು

ಬಯಲು ಸೀಮೆಯ ನನ್ನಪ್ಪನಿಗೆ
ಸಮುದ್ರ ವೆಂದರೆ ಎಲ್ಲಿರುತ್ತದೆ !?ಎಂದು
ಕೇಳಿ ಕುಹಕವಾಡಿದೆ
ಊರ ಸೀಮೆಯ
ದಾಟದ ನಮ್ಮಪ್ಪ ಚಣ ಯೋಚಿಸಿ
ಮೇಲೆ ಬೋಳು
ಆಕಾಶ ದಿಟ್ಟಿಸಿದ
ಅಪ್ಪನ ಕಣ್ಣಾಲಿಗಳಲ್ಲಾಗಲೇ
ಜೋಡು ನದಿ
ಸಮುದ್ರದ
ಪಹರೆಗೆ ನಿಂತಂತೆ,
ಅಪ್ಪನಿಗೆ ಬೋಳು ಆಗಸವೆಂದರೆ
ಬಲು ಬೇಜಾರು.ಈ ಸಲವೂ ಆಗಸ
ಕಪ್ಪಿಡಲಿಲ್ಲ, ಮಳೆಯಿಲ್ಲ, ಮಿಂಚಿಲ್ಲ
ಪಚ್ಚೆ, ಪೈರಲಿ ಹಸುರಿಲ್ಲ .
ಎಮ್ಮೆ ಹಸುಳಿಗೆ ಕುಡಿವ ನೀರಿಲ್ಲ
ಆ ದಿನ ಪೂರ್ಣ ಚಂದ್ರ
ಖಾಲೀ ಆಗಸ
ಹಾಲು ಬೆಳದಿಂಗಳು
ಹಾಳು ಸುರಿದಂತೆ ಲೋಕವೆಲ್ಲ
ನಮ್ಮನೆಯ ಮುದಿನಾಯಿ ಕರಿಯ
ಚುಕ್ಕಿ ಚಂದ್ರಮನ ನೋಡಿ
ಇಡೀ ಇರುಳು ಬೊಗಳಿದ್ದು ಮರೆತಿಲ್ಲ
ಹೊಟ್ಟೆ ಹಸಿದಾಗಲೆಲ್ಲ
ಅವ್ವ
ನನಗೆ ಮತ್ತು ಕರಿಯನಿಗೆ
ಚಂದ್ರನ ಚೂರು ತೋರಿಸಿ
ಮಲಗಿಸುತ್ತಿದ್ದೇಕೆಂದು ಈಗೀಗ
ಅರ್ಥ ವಾಗತೊಡಗಿದೆ.

ಅಪ್ಪ ಖಾಲೀ ಆಗಸ
ದಿಟ್ಟಿಸುತಲೇ ಒಂದು ದಿನ
ಅದರೊಳಗೊಂದಾಗಿ
ಚುಕ್ಕಿಯಾದ.
ಅಪ್ಪನ ಕಣ್ಣಾಲಿಗಳ ಜೋಡು ನದಿಗಳು
ಸಮುದ್ರ ಸೇರುವ ಮುನ್ನ ವೇ
ಬತ್ತಿ ಹೋದವು.

ಈಗ ನಾನು
ಮಲ್ಲಿಗೆ ಧ್ಯಾನದ ಕವಿ
ಈ ಚುಕ್ಕಿ, ಚಂದಿರ,
ಬೆಳದಿಂಗಳು ಖಾಲೀ ಆಗಸ…..
ದ ಕುರಿತು ‘ಬರೆ’ ಬರೆದು
ಓಹ್..!! ಹೆಸರುವಾಸಿ.

 

ಮೋಕ್ಷವ ಹುಡುಕುತ ಪ್ರೀತಿಯ ಬಂಧನದಲಿ

ಸುಜಾತಾ ಸುಜಾತಾ
ಹೊಟ್ಟೆ ಹಸಿವು ಊಟ ತಾ
ಸಾಕು ಸಾಕು  ಈ ಧ್ಯಾನ ಜ್ಞಾನ
ಬುದ್ಧನಾಗಲು ಹೊರಟವನಿಗೊಮ್ಮೆ
ನರಮಾನವನಾಗುವ ಬಯಕೆ
ಆಗಲೇ ಸಮಯ ಮೀರಿದೆ
ಶ್ರಾವಸ್ತಿ, ಬೋಧಗಯಾ,ಕಪಿಲವಸ್ತು, ಪಾಟಲೀಪುತ್ರ
ಎಲ್ಲೆಲ್ಲೂ ಅರ್ಧ ನಿಮೀಲಿತ ನೇತ್ರ
ಕಲ್ಲಿನಲ್ಲಿ, ತಾಮ್ರ, ಹಿತ್ತಾಳೆ,
ಲೋಹಗಳಲಿ ಬುದ್ಧ ನ ಚಿತ್ರ  ನಗುವ ತುಟಿಗಳಲ್ಲಿನ್ನೂಇದೆ ಎದೆ ಹಾಲ ಕಂಪು.

ಹೊತ್ತಾಯಿತು ಬಾ ಸುಜಾತಾ
ಎಲ್ಲಿ ನನ್ನ
ಪದಾತಿ ಪಾದುಕೆ ಪಲ್ಲಕಿ
ಬಿಲ್ಲು ಬಾಣ ರಥ ಸಾರೋಟು ?
ಅವನೆಲ್ಲಿ
ಕರೆಕಳಿಸು ಅವನನ್ನು ಆ ಕಲ್ಲು ಕುಟಿಗನನ್ನು
ಉಳಿ ಭೈರಿಗೆ ಸುತ್ತಿಗೆ ಸಮೇತ
ಕಲ್ಲಿನಲಿ ಕೆತ್ತಿದ ತಥಾಗತನ ಮರಳಿ
ಬಂಡೆಗಲ್ಲು ಮಾಡಲು ಹೇಳು.

ಎಲೆ ಕವಿಯೆ ಎಷ್ಟು ದಿನ ಕಾಯುವೆ ನೀನು
ಪೂರ್ಣ ಕವಿತೆಗಾಗಿ?
ಸಂಪೂರ್ಣತೆಯೆಂಬುದು ಎಲ್ಲಿಯೂ ಇಲ್ಲ
ಬುದ್ಧನಲ್ಲೂ
ಅಪೂರ್ಣತೆಯಲ್ಲೇ ಕವಿತೆಯ ಜೀವ
ಅದು ಬಂದ ದಿನ
ಈ ಜಗದ ಕವಿಗಳಿಗೆಲ್ಲ ಇಲ್ಲೇನು ಕೆಲಸ?
ಪತ್ರಿಕೆ ಅಚ್ಚಿಗೆ ಹೋಗುವ ಸಮಯ
ಶಬ್ದ ಮಿತಿ ತಲೆಯಲ್ಲಿರಲಿ
ತುಸು ಯೋಚಿಸಿ ಬರೆ.
ಹೊಸ ಕವಿತೆ ಹೊಸ ಚಿತ್ರ ಬರೆ
ಅವನ ಅರ್ಧ ನಿಮೀಲಿತ ನೇತ್ರ ತೆರೆ

ಬೆಕ್ಕಿನ ನಡಿಗೆಯ ಸುಜಾತಾ
ಬುದ್ಧನ ಹೊಟ್ಟೆ ತುಂಬಿಸುವಳೆ
ಮನದಣಿಯೆ ಕುಣಿದು
ಮತ್ತೆ ಅವನ ಹುರಿದುಂಬಿಸುವಳೆ
ಇಳಿಬಿದ್ದ ಗಲ್ಲ
ಗುಳಿಬಿದ್ದ ಕಣ್ಣು
ಎದೆತನಕ ಬೆಳೆದ ಗಡ್ಡ
ಮೂಳೆಗಂಟಿದ ತೊಗಲು
ಹಣೆಯ ಗೆರೆಗಳ ಮೇಲೆ ಯುಗ ಯುಗಾಂತರದ ದಣಿವು

ಅಸಲು ಏನನ್ನು ನೋಡುತಿವೆ
ಅರ್ಧ ನಿಮೀಲಿತ ನೇತ್ರ
ನಿನ್ನ ನಾಟಕದ ಇದು ಎಷ್ಟನೆಯ ಪಾತ್ರ
ತಡವಾಗಿ ರಂಗಮಂಚಕೆ
ಬಾರದಿರು ಬುದ್ದ
ಎಳೆಯ ಮಕ್ಕಳು ಹಸಿದು ತೂಕಡಿಸುವ ಹೊತ್ತು

ಬಾ ಸುಜಾತಾ ಬಾ
ಮೂರ್ತಿಗೆ ಮರಳಿ
ಕಲ್ಲಾಗುವ ಆಸೆಯಾಗಿದೆ

ಆ ಕಲ್ಲು ಕುಟಿಗನ ಬೇಗ ಕರೆ ತಾ

 

4 Responses

 1. Vasudev nadig says:

  ನಿಜಕೂ ಖುಷಿಯಾಯಿತು ಕನ್ನಡದ ಕಾವ್ಯ ಬನಿಗೆ ಇಂತಹ ಹೊಸ ಇಮೇಜ್ ಗಳ ಅಗತ್ಯ ಇದೆ.ಕ್ಲೀಷೆ ಗಳನು ಕಳೆದು ಕೊಳ್ಳುವುದಕೆ ಇರುವ ಏಕೈಕ ಮಾರ್ಗ ಎಂದರೆ ಭಾಷೆಯನು ಮುರಿದು ಕಟ್ಟುವುದು ಮತ್ತು ಬದುಕನು ಹೊಸ ನೋಟದಲಿ ಕಂಡರಿಸುವುದು

 2. Laxman says:

  ತುಂಬ ಧನ್ಯವಾದಗಳು ವಾಸುದೇವ ನಾಡಿಗ್ ಸರ್

 3. ರೇಣುಕಾ says:

  ಒಂದೆರಡು ಓದಿದ್ದೆ.ಇನ್ನೊಂದೆರಡು ಓದಿರಲಿಲ್ಲ..ಬಹು ಚಂದಾಗಿ ಕವಿತೆ ಬರೆಯುತ್ತೀರಿ ಲಕ್ಷ್ಮಣ್.. ಓದಿದಾಗಲೆಲ್ಲ ನನ್ನದೇ ಕವಿತೆಗಳೋ ಅನ್ನಿಸಿಬಿಡ್ತವೆ ಯಾಕೋ ಏನೋ…ಕಣ್ಣಿಗೆ ಕಟ್ಟಿದಂತೆ ಸುಲಲಿತ ಚಿತ್ರಿಸುವ ಕಲೆ ಸಿದ್ಧಿಸಿದೆ ನಿಮಗೆ

 4. Excellent Sir.
  Your poetry makes to read again and again.

Leave a Reply

%d bloggers like this: