ಪಾರ್ವತಿಯವರ ಕವಿತೆಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಓದಿ ರುಚಿ ಹತ್ತಿಸಿಕೊಳ್ಳಿ. ಅದಾಗಲೇ ಹತ್ತಿದ್ದರೆ ಹೆಚ್ಚಿಸಿಕೊಳ್ಳಿ..

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ.

ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ

ಆ ಕವಿ ‘ಪೊಯೆಟ್ ಆ ದಿ ವೀಕ್’ ಕೂಡಾ

ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ ಹೋಗಿದ್ದೇವೆ.

ಅವರು ಕವಿತೆಯನ್ನು ಓದಿ ಅದರ ಸ್ಪರ್ಶಕ್ಕೆ ಮನಸೋತ ಬಗೆಯನ್ನು ಬಿಚ್ಚಿಡುತ್ತಾರೆ.

ಕಳೆದ ವಾರ ಹಾಗೆ  ‘ಪೊಯೆಟ್ ಆ ದಿ ವೀಕ್’ ಆದವರು ಪಾರ್ವತಿ ಹಾರೀತ

ಅವರ ಕವಿತೆಗಳು ಇಲ್ಲಿವೆ.

ಈಗ ಅದಕ್ಕೆ ವಿನಯ್ ಕುಮಾರ್ ಎಂ ಜಿ ಅವರು ಪ್ರತಿಕ್ರಿಯಿಸಿದ ರೀತಿಯನ್ನು ನೋಡಿ

——————————————————————————————————————————————————————-

ವಿನಯ್ ಕುಮಾರ್ ಎಂ. ಜಿ
ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್ ಎಂ. ಎ. ಪದವಿ ಪಡೆದಿರುವ ವಿನಯ್ ಕುಮಾರ್ ಸಾಹಿತ್ಯ, ಚಳವಳಿ, ಸಿನಿಮಾ ಗುಂಗು ಹತ್ತಿಸಿಕೊಂಡವರು. ‘ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ..’ ಎನ್ನುವ ಸಿನಿಮಾ ವಿಶ್ಲೇಷಣೆ ಪುಸ್ತಕ ಹೊರತಂದಿದ್ದಾರೆ.

ಕೆಲ ಸಿನಿಮಾಗಳಲ್ಲಿ ಕೆಲಸ ಮಾಡಿ ಇದೀಗ ತಮ್ಮದೇ ಚಿತ್ರ ಆರಂಭಿಸುವ ಸಿದ್ಧತೆಯಲ್ಲಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಕಳೆದ ಹದಿನಾಲ್ಕು ತಿಂಗಳುಗಳಿಂದ ಊರೂರು ತಿರುಗಿ ಸಂಶೋಧನೆ ನಡೆಸುತ್ತಾ ಕಾದಂಬರಿ ಬರೆಯುತ್ತಿದ್ದಾರೆ. ವಿಶೇಷವೆಂದರೆ ಕಾದಂಬರಿ ಬರವಣಿಗೆಗೆ ಕ್ರೌಡ್‍ಫಂಡಿಂಗ್ ಸ್ಪಾನ್ಸರ್‍ಶಿಪ್ ಪಡೆಯುವ ಯೋಜನೆ ರೂಪಿಸಿದ್ದಾರೆ. 

——————————————————————————————————————————————————————–

ಸುಮ್ಮನೆ ಬಿಟ್ಟುಬಿಡಬೇಕಾದ ಕವಿತೆಗಳು

ವಿನಯ್ ಕುಮಾರ್ ಎಂ. ಜಿ

ನನಗೆ ಫ್ರಾಸ್ಟ್, ಏಲಿಯಟ್ ನೇರ ಪರಿಚಯವಿಲ್ಲ, ಆದರೆ ಅವರ ಕಾವ್ಯ ಗೊತ್ತು. ಹಾಗೆಯೇ ಪಾರ್ವತಿ ಹಾರೀತ. ಈಗಷ್ಟೇ ಕಾವ್ಯದ ಮೂಲಕ ಪರಿಚಯವಾಗಿದ್ದಾರೆ ನನಗೆ. ಪ್ರಾಮಾಣಿಕವಾಗಿ ಹೇಳುತ್ತೇನೆ, ಮೊದಲ ಓದಿಗೆ ನನಗೇನೂ ಅನಿಸಲೇ ಇಲ್ಲ. ಮತ್ತೆ ಓದಿದೆ. ಮತ್ತೆ, ಮತ್ತೆ, ಮತ್ತೆ.

ಈ ಐದು ಪದ್ಯಗಳು ಸುಮಾರು ಮೂರು ತಾಸು ಆಟವಾಡಿಸಿ ಕಡೆಗೆ ಕೈಗೆ ಸಿಕ್ಕವು. ಈಗ, ನನ್ನೊಳಗೆ ಶಾಶ್ವತವಾಗಿ ಉಳಕೊಳ್ಳುವ ತವಕದಲ್ಲಿವೆ.
ಏಕೆ ಹಾಗೆ?

ಮೊದಲಿಗೆ ಕವಯಿತ್ರಿಯ ಜಗತ್ತು ಯಾವುದು ಎಂದು ನೀವು ಗುರುತಿಸಿ, ಎಲ್ಲೆ ಹಾಕುವುದು ಸಾಧ್ಯವಾಗುವುದೇ ಇಲ್ಲ. ಯಾವುದಾದರೂ ವಾಸನೆ ಹಿಡಿದು ಕಟ್ಟಿಹಾಕೋಣವೆಂದರೆ ಮೂಗಿಗೆ ಕೆಲಸವೇ ಸಿಗುವುದಿಲ್ಲ. ಏನನ್ನುತ್ತೀರಿ ಇಂತಹ ಕವಯಿತ್ರಿಯನ್ನು? ಮಹಿಳಾ ಜಗತ್ತಿನ ಶಕ್ತ ಬರಹಗಾರ್ತಿಯೆನ್ನುತ್ತೀರೋ? ಸಂಸಾರದ ಆಳ ತಿಳಿವನ್ನು ಹೊಂದಿದ್ದಾರೆ ಎನ್ನುತ್ತೀರೋ? ಅಥವಾ ಅಮ್ಮನ ಪ್ರೀತಿಯ ಮಗಳು ಎಂದು ಕರೆಯುವಿರೋ? ಹಣೆಪಟ್ಟಿ ಹಚ್ಚುವುದು ನನಗಂತೂ ಸಾಧ್ಯವಿಲ್ಲ. .

ಕವಿತೆಯೆಂದರೆ ಘೋಷಣೆ, ನಿವೇದನೆ, ಉಪಮೆ-ಕ್ಲಿಷ್ಟ ಪದಬಳಕೆಯ ಪ್ರಯೋಗಶಾಲೆ ಎನ್ನುವ ಭ್ರಮೆಯಲ್ಲಿ ಬಿದ್ದಿರುವ ಅಸಂಖ್ಯಾತ ದನಿಗಳ ನಡುವೆ ಪಾರ್ವತಿ ಮಾತಾಡುವ ದನಿ ಬದಲಾಯಿಸುತ್ತ, ಕನಸಿನಲ್ಲಿ ಸಿಕ್ಕವಳನ್ನು ಭೇಟಿಯಾಗುತ್ತಾ, ಸವೆದು ಹೋಗುವ ಬಳಪದ ಚೂರುಗಳನ್ನೂ ಲೆಕ್ಕವಿಡುತ್ತಾ ನಿರಾಡಂಬರವಾಗಿ, ಆರಾಮಾಗಿ ಸಾಗಿದ್ದಾರೆ. ಇಂತಹ ಕವಯಿತ್ರಿಯನ್ನು ಇನ್ನಷ್ಟು ಬರೆಯಲು ಬಿಟ್ಟು ಸುಮ್ಮನಾಗಬೇಕು.

ಹಾಗಿದ್ದರೆ ಈ ಕವಿತೆಗಳ ಪಾಡೇನು?

ಕವಿತೆ ಬೆಚ್ಚಗಿನ ಕಾಫಿಯಂತೆ ಎಂಬುದು ನನ್ನ ಅನುಭವ. ನೀವು ಯಾವ ಹೊತ್ತಿನಲ್ಲಿ ಕುಳಿತು ಕುಡಿಯುತ್ತೀರ, ಆಗಿನ ಹವಾಮಾನ ಎಂತಹುದು, ಆ ದಿನದ ಎಷ್ಟನೇ ಕಾಫಿಯದು, ಜತೆಯಲ್ಲಿ ಯಾರಿದ್ದಾರೆ -ಮುಂತಾದ ಅಂಶಗಳಿಂದಾಗಿ ಒಂದೇ ಕಾಫಿ ಭಿನ್ನವಾದ ರುಚಿಯನ್ನು, ತೃಪ್ತಿಯನ್ನೂ ಒದಗಿಸುತ್ತದೆ. ಒಂದು ಕವಿತೆ ಸಹ ಓದುಗನೊಳಗೆ ಇಳಿವಾಗ ಅವನು ಎಲ್ಲಿ ನಿಂತು, ಹೇಗೆ ನಿಂತು, ಯಾವ ಘಳಿಗೆಯಲ್ಲಿ ಅದನ್ನು ಸ್ವೀಕರಿಸುತ್ತಿದ್ದಾನೆ ಎಂಬುದರ ಮೇಲೆ ತನ್ನ ಪರಿಣಾಮವನ್ನು ಬದಲಿಸುತ್ತಾ ಸಾಗುತ್ತದೆ. ಆದ್ದರಿಂದ ಪಾರ್ವತಿಯವರ ಕವಿತೆಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಓದಿ ರುಚಿ ಹತ್ತಿಸಿಕೊಳ್ಳಿ.

ಅದಾಗಲೇ ಹತ್ತಿದ್ದರೆ ಹೆಚ್ಚಿಸಿಕೊಳ್ಳಿ ಎಂದಷ್ಟೇ ಹೇಳಿ, ನಿಮ್ಮ ಜಗತ್ತನ್ನು ಇನ್ನಷ್ಟು ವಿಸ್ತರಿಸಿಕೊಳ್ಳಿ. ಇಲ್ಲವೇ ಈ ವಿಷಯದ ಮೇಲೆ ಕವಿತೆ ಬರೆದರೆ ಉಪಯೋಗವಾಗಬಹುದು, ವ್ಯಾಕರಣ ಹೀಗಿದ್ದರೆ ಚೆಂದ ಎನ್ನುವ ಯಾವ ಪುಕ್ಕಟೆ ಸಲಹೆಯನ್ನೂ ಕವಯಿತ್ರಿಗೆ ನೀಡದೆ, ಇನ್ನೊಮ್ಮೆ ಮೊದಲಿನಿಂದ ಕವಿತೆ ಓದಲು ಶುರು ಮಾಡುತ್ತೇನೆ.

 

Leave a Reply