‘ಕಾವ್ಯಮನೆ’ಯ ಅಪ್ಪ ಬರಲಿಲ್ಲ..

 ಕಾವ್ಯ ಮನೆ ಪ್ರಕಾಶನ, ಕಲಬುರಗಿ – 2017
ಕಥೆಗಾರರಿಂದಲೇ ಕಥಾಸ್ಪರ್ಧೆ – 2017ರ ಫಲಿತಾಂಶ

ಕನ್ನಡದ ಕಥೆಗಾರರಾದ ಕೇಶವ ಮಳಗಿ, ಬಾಳಾಸಾಹೇಬ ಲೋಕಾಪುರ, ಚೀಮನಹಳ್ಳಿ ರಮೇಶಬಾಬು ಅವರು ಸೇರಿ ‘ಕಾವ್ಯ ಮನೆ’ ಮೂಲಕ ಮಾಡಿದ ಈ ವಿಭಿನ್ನ ಪ್ರಯತ್ನದ ಸ್ಪರ್ಧೆಗೆ 350ಕ್ಕಿಂತಲೂ ಹೆಚ್ಚು ಕಥೆಗಳು ಬಂದಿದ್ದವು,

ಅಂತಿಮವಾಗಿ ಬಾಳಾಸಾಹೇಬ ಲೋಕಾಪುರವರು ಆಯ್ಕೆ ಮಾಡಿ ಫಲಿತಾಂಶ ನೀಡಿದ್ದಾರೆ.

ಈ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಎಲ್ಲಾ ಕಥೆಗಳನ್ನೂ ಅವಧಿಯಲ್ಲಿ ಪ್ರಕಟಿಸಲಾಗುವುದು 

ಇಲ್ಲಿರುವುದು ಸ್ಪರ್ಧೆಯಲ್ಲಿ ಮೂರನೆಯ ಬಹುಮಾನ ಪಡೆದ ಕಥೆ 

ಅಪ್ಪ ಬರಲಿಲ್ಲ ಮೌನದಂಚಿನ ಮುಸುಕು ಆರಿರಲಿಲ್ಲ

-ಪರಮೇಶ್ವರ ಕೆ.ಎನ್

ತೀರಿದ ಅಪ್ಪನ ದುಃಖ ಒತ್ತರಿಸಿಕೊಂಡಿತ್ತು. ಒಳಗಿಂದ ಹೊರಹೆಜ್ಜೆ ಇರಿಸಿದ ಇಂಬಿಮಾವ ‘ಬೆಳಗತ್ ಎದ್ದ್ ಮೊಗೈಲ್ ಹಿಡ್ಕಂಡ್ ಕೂಕಂಡ್ರಿ ಅಂದ್ರೆ ಮ್ಯಾಲ್ ಯೆಳುದಿಲ್ಲ’ ಎಂದು ಗಕ್ಕನೆ ತಿರುಗಿ ‘ಪೀಯ್ಕ್’ ಎಂದು ಬಿಟ್ಟದ್ದಕ್ಕೆ ಹುಡುಗರು ‘ಗೊಕ್’ ಎಂದರು. ‘ಯಂತ ಕಿಸಿತ್ತ್, ದೇವ್ರ್ ಕೊಟ್ ಪೀಪೀ, ತಡುಕಾತ್ತಾ?’ ಎಂದು ಹೊರನಡೆದ.

ಪಾಕ ತುಂಬಿದ ಪರಿಮಳಕ್ಕೆ ಮೂಗುಮುಚ್ಚಿದ ಅಕ್ಕನ ಮಗಳು ಪ್ರೇಕ್ಷ ಒಳಗೋಡಿದಳು. ಮಗಳು ಮಾನ್ವಿ ಹುಳುಕು ಹಲ್ಲಿನ ಬಾಯಿ ತೆರೆದಳು. ಉಸಿರು ಜಾರಿದ ಅಪ್ಪನಿಗೆ ಮೂರುದಿನ. ಹೊತ್ತು  ಮೂಡಿದ ಸೂರ್ಯ ಹತ್ತಾಳು ಬಂದಿದ್ದ. ‘ಬಿಸ್ಲೇರುರೊಳ್ಗ್ ಯಡಿ ಹಾಕ್’ ಎಂದು ಕೊರಗತ್ತೆ ಗಡಿಬಿಡಿಸಿದಳು. ಕಾವು ಏರದ ನೀರು ಸ್ನಾನದ ಮೈಗಳಿಗೆಲ್ಲಾ ಮೆತ್ತಿಕೊಂಡಿತು. ‘ಅಪ್ಪಯ್ನಿಗ್ ಯಡಿ ಹಾಕ್ಕ್, ಹೋಗ್ ಮಗ ಸಾನು ಮಾಡ್ಕಂಡ್ ಬಾ’ ಎಂದು ನಾಗತ್ತೆಯ ರಾಗಯಾನ. ನನಗೋ ನಗೆನಾಚಿಕೆಗಳ ದಿಗಿಲು. ಅಪ್ಪ ಉಣ್ಣುತ್ತಾರೆಂಬ ಕಾಗೆಕೂಗು, ಅಪ್ಪ ಕಾಗೆಯಾದದ್ದು, ಕಾಗೆ ಕಾಂವ್ ಕಾಂವ್ ಎಂದದ್ದು, ಕಾಂವ್ ಎಂದದ್ದಕ್ಕೆ ಅಕ್ಕ ‘ಅಪ್ಪೈ ಬಂದ್ರು ಕಾಣಿ’ ಎಂದು ಹನಿಯ ಕಣ್ಣೀರು ಕೆಳಗೆ ಹಾಕಿದ್ದು, ಅಪ್ಪನಿಲ್ಲದ ಯಡೆಯ ವಡೆ-ಪಾಯಸವೆಲ್ಲಾ ಹದಗೊಂಡದ್ದು ಎಲ್ಲವೂ ನನಗೆ ಉತ್ತರವಿಲ್ಲದ ಪ್ರಶ್ನೆಗಳ ಕಾಲಿಹಾಳೆ.   ‘ಯಲ್ಲ ಯೇಳಿನಿ, ಕಾಗಿ ಕೂಗುಕ್ ಸುರುಮಾಡಿತ್, ನಿಮ್ಮ್ ಅಪ್ಪಯ್ಯ ಹಸ್ವಾರೆ ತಡ್ಕಂಬರಲ್ಲ, ಬ್ಯಾಗ್ ಹ್ವಾಪೋ ಬನಿ’ ಎಂದು ನಾಗತ್ತೆ ಗೊಣಗಿದಳು.

ದೊನ್ನೆ-ನೀರಕೈಗಳೆಲ್ಲವೂ ತನಿಗೊಂಡವು. ದಿನವೂ ಬೈಯ್ಯುವ ಕಾಗೆಗೆ ಇಂದು ರಾಜಮರ್ಯಾದೆ. ‘ಕಾಂವ್-ಕಾಂವ್’ ಒಂದರ ಜೊತೆ ಇನ್ನೊಂದು. ಇದಕ್ಕೂ ಒಂದು ಕತೆ ಹುಟ್ಟಿಕೊಂಡಿತು. ‘ಅಪ್ಪೈನ್ ಜೊತಿಲ್ ಅಮ್ಮ್ನು ಬಂದಿದಾಳ್ ಕಾಂಬ್ರಲೆ, ಆಸಿ ಇದ್ದ್ ಸಾಯುಕಾಗ ಅಂತ್ರು, ಇಬ್ರಿಗೂ ಬದ್ಕು ಆಸಿ ಇದ್ದಿತಾ ಕಾಂತ್, ಅದ್ಕೆ ಇಬ್ರೂ ಬಂದಿರ್’ ಎಂದು ಕೊರಗತ್ತೆಯ ಪುರಾಣ. ಅನ್ನಸಾರಿನ ಎಡೆಗೆ ತುಳಸಿ ಎರೆದು ಇತ್ತ ಸಾಗಿದರೂ ಕಾಗೆ ಸುತಾರಾಂ ಸುಳಿಯಲಿಲ್ಲ.

ಹಗಲು ಮೂಡಿದ ದಿನವೆಲ್ಲ ‘ಈ ಬೇವರ್ಸಿ ಕಾಕಿಗ್ ಬ್ಯಾರೆ ಕೆಲ್ಸಿಲ್ಲ್, ಹೆಕ್ಕತಿಂಬ್ದು ಬಂದ್ಕಂಡ್ ಕಾಂವ್ ಕಾಂವ್ ಅಂತತ್’ ಎಂದು ಕಲ್ಲು ಹೊಡೆದ ಕಾಗೆ ಇಂದು ಹತ್ತಿರ ಸುಳಿವುದಾದರೂ ಹೇಗೆ? ನಾಗತ್ತೆಯಂತೂ ಕಾಗೆಗೆ ಕೂಗಿದ್ದೇ ಕೂಗಿದ್ದು. ಕೊನೆಕೊನೆಗೆ ಕಾಗೆಗೂ ಅತ್ತೆಗೂ ವ್ಯತ್ಯಾಸ ತಿಳಿಯಲಿಲ್ಲ. ಮುಟ್ಟದ ಕಾಗೆಯನ್ನು ಬಿಟ್ಟುಹೊಡೆದು ಹಿಂದಿರುಗಿಯಾಯಿತು. ಗುನುಗು ಮಾತಿನ ತಾಳತಂತುಗಳು ಅಲ್ಲಲ್ಲಿ.

ಅದುಮಿಟ್ಟು ಕದಹಾಕಿದ ಮಾತುಗಳೆಲ್ಲಾ ಕಳಚಿಕೊಳ್ಳದೆ ಹೊರಳಾಡುತ್ತಿದ್ದವು. ಗುದುಮಿ ಅದುಮಿದರೂ ಮಾತಿನ ಬೀಗ ಉಣುಚಲಿಲ್ಲ. ಒತ್ತರಿಸಿ ಬಂದ ಹಸಿರು ನೆನಪಿನ ಅಪ್ಪ ಕಣ್ಣಾಲಿಯೊಳಗೆಲ್ಲೋ ಜಿನುಗುತ್ತಿದ್ದ. ಸದಾ ಶ್ವೇತಧಾರಿ, ಬಡತನದ ಕೆಂಡವನ್ನು ಕರಗಿಸಿ ಮೇಲೆದ್ದವ, ಕುಡಿತೆ ಕೂಳಿಗೆ ಅದೆಷ್ಟೋ ಮನೆಯ ಮೆಟ್ಟಿಲು ಸವೆಸಿದವ, ಮಕ್ಕಳನ್ನೇ ಆಸ್ತಿಯಾಗಿ ಬೆಳೆಸಿದ ಇವ ನೋಟುಗಳ ಗರಿಗರಿಯ ಗಮೆಸಿದವ, ಜೇಬಿನಂಚಿಗೆ ಸಾವಿರದ ನೋಟು ತುರುಕಿ ಕೆಲವೊಮ್ಮ ಮೆರೆದವ, ಕಿಡಿಗೊಂಡ ಬೀಡಿಗೆ ಚಿಟಿಕೆ ಹೊಡೆದು ಹುಟ್ಟು ಕಲಾವಿದನಾದ ಅಪ್ಪ ಯಕ್ಷಗಾನದ ತುಣುಕು ಹಾರಿಸುತ್ತಿದ್ದ. ಇವ ಹೀಗೆ, ಒಮ್ಮೆ ಭೀಮ, ಮತ್ತೊಮ್ಮೆ ಧರ್ಮರಾಯ, ಮಗದೊಮ್ಮೆ ಭೀಷ್ಮ ಮುಂದುವರೆದು ದುರ್ಯೋಧನನಾದದ್ದು ಇದೆ. ಐವತ್ತರ ಆಸುಪಾಸಿನ ಕುಡಿತಕ್ಕೆ ಇವ ಮನೆಯಲ್ಲಿ ದಿನವೂ ಕುರುಕ್ಷೇತ್ರ ಮಾಡಿದವ, ಈಗೀಗ ಎಪ್ಪತ್ತು ದಾಟಿದ ಮೇಲೆ ಕೃಷ್ಣಸಂಧಾನ, ದುರ್ಯೋಧನ ವಿಲಾಪಕ್ಕೆ ಸಾಕುಮಾಡಿದ್ದ. ಸಣ್ಣವನಿದ್ದಾಗ ನನಗೆ ಅಪ್ಪ ಕುಡಿದರೆ ಬಲು ಹಿಗ್ಗು. ಮತ್ತೇರಿದ ಇವನ ಕಿಸೆಗೆ ಕತ್ತರಿಹಾಕಿ ಹತ್ತಿಪ್ಪತ್ತರ ನೋಟಿನ ತಿಂಡಿ ತಿನ್ನುತ್ತಿದ್ದೆ.

ಅದಕ್ಕಾಗಿಯೇ ಶಾಲೆಯಲ್ಲಿ ನಾನೇ ಲೀಡರ್. ಕಿಚ್ಚು ನಂದಿದರೂ ಹೊಗೆಯ ಹುಮ್ಮಸ್ಸಿಗೇನು ಕಡಿಮೆ. ಮಂಚಕಿಲ್ಲದ ಅಪ್ಪ, ಮೌನತಾಳಿದ ಕೋಣೆ. ಜೀವ ತಳೆಯದ ಪಂಚೆ, ನೇತುಬಿಗಿದ ಅಂಗಿಗಳ ಕಂತೆ. ಮುಂಡು ಬೀಡಿಗಳ ಮೂಲೆ, ಹೋದ ಮಳೆಗಾಲದ ಉಲ್ಲನ್ ಸ್ವೆಟರ್, ಕಾಲಿ ಪೊಟ್ಟಣಗಳ ಗಾಲಿಯಾಟ, ವೇಷ್ಟಿಪಂಚೆಗಳ ವೇಣುನಾದ, ಬಾಚಣಿಗೆ ಕನ್ನಡಕಕ್ಕೂ ಗೂಡು ಸೇರಿದ ಕೋಪ, ಹೊರಕೂತ ಲೂನಾರ್ಸಿಗೂ ‘ಜರಕ್’ ಎನ್ನುವ ಯೌವ್ವನದಾಸೆ. ಆದರೆ ಅಪ್ಪನಿಲ್ಲದ ಅಂತರಂಗದ ತುಡಿತ ನುಣಿಚಿಕೊಳ್ಳಲಾಗದೆ ನನ್ನೊಳಗೆ ತಾಳಹಾಕುತ್ತಿತ್ತು. ಕಪ್ಪು ಜಾರಿದ, ಹೊತ್ತು ತೋರಿದ ಸೂರ್ಯ ಮಾತ್ರ ಕಾಗೆರೆಕ್ಕೆಗೆ ಎಡೆಯ ತೋರಲಿಲ್ಲ.

ಸರಿದ ನಾಲ್ಕು ರಾತ್ರಿಗಳ ಮೇಲೆ ಐದರ ಬೆಳಗು. ಕೊರಗತ್ತೆಯ ಪಾಕದ ನಾಲ್ಕು ತರ ಸಿದ್ಧ. ಕದ್ದುಕೂಗಿದ ಕಾಗೆ ಯಾರೆಂಬ ಅನುಮಾನ. ಪಲ್ಯ, ಪಾಯಸ, ಪಾಪದುಂಡೆಗಳಿಗೆಲ್ಲ ಪಾರುಪತ್ಯ. ಎಡೆಯ ತೆರೆದಿಟ್ಟ ಇಂಬಿಮಾವ. ನೀರೆರೆದ ಹಲವು ಮನಸುಗಳ ಮಾರುತಯಾನ. ಕಾಗೆಯ ಕಾಂವ್ ಕಾಂವ್. ‘ಮಕ್ಳೇ, ಯಲ್ಲಾ ಇತ್ಲಾಗ್ ಬನಿ, ಅಪ್ಪೈ ಬಂದ್ರು, ಇದ್ ಮಂಡ್ ಕಾಕಿ, ಮನ್ಸ್ರೇ ಸೈ, ಎಲ್ಲರು ಹೇಳ್ಕಣಿ ಬಂದ್ ಮುಟ್ಟೂಕ್ ಹೇಳಿ, ಅವ್ರಿಗ್ ಯಂತಕೋ ಬೇಜಾರಾಯ್ತಕಾಂತ್, ಅದ್ಕೆ ಮುಟ್ಟುದಿಲ್ಲ, ತಪ್ಪಾಯ್ತ್ ಅಂದ್ ಹೇಳ್ಕಣಿ’ ಎಂದು ಕೊರಗತ್ತೆ ಅಂತರಂಗ ತೆರೆದಿಟ್ಟಳು.

ಹತ್ತು ತರ ಕರೆದರು ಕ್ಯಾರೇ ಎನ್ನದ ಕಾಗೆ. ಮತ್ತೆ ಅದೆ ರಾಗ. ‘ಕಾಂವ್ ಕಾಂವ್’ ಮುಂದೆಬಂದ ಇಂಬಿಮಾವ ‘ಬೀಡಿ ಅಂದ್ರೆ ಅವ್ರಿಗ್ ಪಂಚ್‍ಪಿರಾಣ’ ಎಂದು ಕಟ್ಟುಬೀಡಿಯ ಎಡೆ ಸೇರಿಸಿದ. ಮನಸ್ಸಲ್ಲೇ ನನಗೆ ಪ್ರಶ್ನೆ. ಬೆಂಕಿ ಇಲ್ಲದೆ ಅಪ್ಪ ಬೀಡಿ ಸೇದುವುದಾದರೂ ಹೇಗೆ? ಪಟ್ಟ ಪಾಡುಗಳೆಲ್ಲಾ ಫಲವು ಸಿಕ್ಕದೆ, ನೀರೊಳಗಿನ ಹೋಮದಂತೆ ಮುಖತಿರುಗಿಸಿದ ಮನಸುಗಳ ಕಾಗೆ ಮೋರೆ.ಅಪ್ಪ ಎಂದರೆ ಹಲವು ಪಾತ್ರದ ಒಂದುಜೀವ. ಕೆಲವೊಮ್ಮೆ ಬರ್ಲು ಹುಡಿಮಾಡುತ್ತಿದ್ದ ಇವ ಪ್ರೀತಿಯ ಹೊಳೆಯನ್ನೂ ಹರಿಸುತ್ತಿದ್ದ.

ಬಾಸುಂಡೆ ಮೂಡಿದ ಬೆನ್ನಿಗೆ ಎಣ್ಣೆ ಉದ್ದುವವ ಇವನೆ. ಮುದ್ದುಮಾಡಿ ಕ್ವಾಟರಿಗೆ ನೋಟುಕೊಟ್ಟು ಅಂಗಡಿಗೆ ಅಟ್ಟುತ್ತಿದ್ದ. ಉಳಿದ ಚಿಲ್ಲರೆಯ ಗಮ್ಮತ್ತು ನನಗೇನು ಕಮ್ಮಿ. ಕೆಂಪು ರಸಗುಲ್ಲದ ಸವಿಗೆ ಕಪ್ಪುಬಾಸುಂಡೆ ಸಮನಾದೀತೆ? ಹೊಡೆತದ ನೆನಪಾರಿ ಮತ್ತೆ ತುಂಟನಾದಾಗ ‘ಮರ್ಯಾದಿ ಇಲ್ದಿದ್ ಇದ್’ ಎಂದು ಗುಡುಗುತ್ತಿದ್ದ. ‘ಕ್ರಿಯಾಬ್ರಷ್ಟ ನೀನ್’ ಎಂದು ಅಣ್ಣನಿಗೆ ಹೋದ ಚೌತಿಯಲ್ಲಿಯ ಅಪ್ಪನ ಬೈಗುಳ ಬಹಳದಿನ ಹಾಗೇ ನೆನಪಿತ್ತು. ಅಣ್ಣನ ಮಗ ರಾಘು ವರ್ಷದವರೆಗೂ ಈ ಬೈಗುಳವ ಅನುಕರಿಸುತ್ತಿದ್ದ. ಮೊಮ್ಮಕ್ಕಳ ಜೊತೆ ಅಪ್ಪನದು ಸಣ್ಣ ತುಂಟಾಟ. ಏನಾದರೂ ಹೇಳಿ ಕೆಣಕುತ್ತಿದ್ದ.

ಅಂಜಲಿಗೋ ದಿನವೂ ಇವನ ಜೊತೆ ಮಾತಿನಿದಿರಾಟ. ಸಂಜೆ ಏಳಕೆ ಊಟ ಹಾಕದಿದ್ದರೆ ರಂಪಾಟ ಇದ್ದದ್ದೆ. ಒಳಗೆ ಸೇರುವ ಬಾಟಲಿಗೂ ಹೊತ್ತುಮೀರಿದ ತುಡಿತ. ಮಾತಿಗೆ ಬಿಡಿ, ಅಪ್ಪ ಸೋತವನೇ ಅಲ್ಲ. ಲಕ್ಷಲಕ್ಷದ ಲೆಕ್ಕವನ್ನ ಕಾಗದವೆ ಇಲ್ಲದೆ ಕೂಡುತಿದ್ದ, ಕಳೆಯುತಿದ್ದ. ಹಲವು ಪಂಡಿತರಿಗೂ ನೀರು ಬರಿಸಿದ ಅಪ್ಪ ಕಲಿತದ್ದು ಬರೀ ನಾಲ್ಕನೆಯ ಇಯತ್ತೆ. ನನಗೆ ಆಗಾಗ ಅನ್ನಿಸುತ್ತಿತ್ತು, ಇವ ಪದವಿ ಓದಿಗೆ ಕಡಿಮೆ ಇದ್ದವನಲ್ಲ. ಬಲು ಪುಂಡನಾಗಿಹ ಅಪ್ಪ ಕಾಲೇಜು ಸೇರದ್ದು ಒಳ್ಳೆಯದೋ, ಕೆಟ್ಟದ್ದೋ ಲೆಕ್ಕಹಾಕಲಾಗದ್ದು ಈಗ. ಮಾತಿಗೆ ಮರಳು ಮಾಡುವ ಇವಗೆ ಅದೆಷ್ಟು ಹುಡುಗಿಯರು ಗಾಳ ಹಾಕುತಿದ್ದರೊ? ಆದರೂ ಇವನೇನು ಕಡಿಮೆಯಿದ್ದವನಲ್ಲ. ಆ ಕತೆ ಬೇಡಬಿಡಿ ಈಗ. ನನ್ನ ಜಾತಕವೂ ಜಾಲಾಡಲು ಶುರುವಾಗುತ್ತದೆ. ಎಷ್ಟಾದರೂ ಅಪ್ಪನ ಮಗನಲ್ಲವಾ? ಉಂಡ ಹುಳಿ ಉಪ್ಪಿನ ಜೀವಕ್ಕೆ ಪಣಕುತನ ಹೊಸತೆ?

ಹೀಗೆಯೇ ಒಂಬತ್ತು ತುಂಬಿದ ಯಡೆಗೆ ತರತರದ ಹತ್ತರ ಸಂಭ್ರಮ. ‘ಸೂತ್ಕ ಕಳ್ಕಂಡ್ ಪಂಚ್‍ಗವಿ ಹಾಯ್ಕಣಿ, ಅಪ್ಪೈನಿಗ್ ಸ್ವರ್ಗು ಸಿಕ್ಲಿ ಅಂದ್ ಎಲ್ಲರೂ ಬೇಡ್ಕಣಿ. ಅಂತೂ ಒಳ್ಳೇ ಸಾವ್ ಪಡ್ಕಂಡ್ರ್, ಸುಖುಕ್ ಸೇರ್ಕಂಡ್ರ್’ ಎಂದು ಕೊರಗತ್ತೆಯ ಮಾಮೂಲಿರಾಗ. ಇಂಬಿಮಾವನ ಅದೇ ದೊನ್ನೆ, ಎಲೆ, ಎಳನೀರು, ಕಟ್ಟುಬೀಡಿಯ ಕಂತೆ. ನನಗಂತೂ ಮೆದುಳಿಗಂಟಿದ ಉತ್ತರಿಸಲಾಗದ ಪ್ರಶ್ನೆಗಳ ಸಾಲುಸಾಲು. ಮನುಷ್ಯ ಕಾಗೆಯಾದ ಕತೆ, ಸತ್ತಮೇಲಾದರೂ ಕಾಗೆಯಾದನಲ್ಲ. ‘ಕಾಗೆ ಒಂದಗುಳ ಕಂಡರೆ ಕೂಗಿ ಕರೆವುದು ತನ್ನ ಬಳಗವ’ ದಾಸ ಹೇಳುವ ಮಾತು. ಪ್ರಾಣಿ-ಪಕ್ಷಿಗಳು ಕಲಿಸುವ ಪಾಠಕ್ಕೆ ನಾವೆಲ್ಲ ತಾಳಗಳು. ನನಗಿನ್ನೂ ನೆನಪಿದೆ. ಅಣ್ಣನಮಗ ವೆಂಕಟೇಶ ಸತ್ತಾಗ ನಮ್ಮನೆಯ ರಾಕಿ ನಾಯಿ ಮೂರುದಿನ ಊಟ ಬಿಟ್ಟದ್ದು, ಸಮಾಧಿಯಲ್ಲಿ ಹೊರಳಾಡಿದ್ದು.

ಆಗಲೇ ಮಾವ ಹೇಳಿದ ಮಾತು ‘ನಿಯತ್ತಿಗೆ ಇನ್ನೊಂದು ಹೆಸ್ರೇ ನಾಯಿ’. ನೆನಪಾಯ್ತು, ವಿಜ್ಞಾನ ಶಿಕ್ಷಕರ ಆಗಿನ ಪಾಠ. ‘ಪ್ರಾಣಿಗಳೂ ಹೃದಯ ಸಂವಾದ ಮಾಡುತ್ತವೆ’ ಆಗಿನ ಪಾಠಕ್ಕೆ ನನಗಾದ ಈಗಿನ ಜ್ಞಾನೋದಯ. ‘ಎಲ್ಲರೂ ಒಂದೊಂದ್ ಹಿಡ್ಕಣಿ, ಹ್ವಾಪೊ, ಹೊತ್ತಾಯ್ತ್, ದೂಪದ್ ಗಿಂಡ್ಗಿ ಮರಿಬ್ಯಾಡಿ’ ಎಂದು ಮಾವನ ಎಳೆನೀರು ಹೊರಟಿತು. ಕಡೆಯಲ್ಲಿ ಸಿಕ್ಕ ನೀರ ತಂಬಿಗೆಗೆ ತುಳಸಿ ಸೇರಿಸಿ ನಾನೂ ಅವರನ್ನ ಹಿಂಬಾಲಿಸಿದೆ. ಪಲ್ಲೆ, ಪಾಯಸ, ಅನ್ನಸಾರಿನ ಎಡೆಯ ಮೇಲೆ ತರತರದ ಸಾಲುಸಾಲು. ಕರೆದರೂ ಕೇಳದ ಕಾಗೆ ಅಪ್ಪನಿಗೆ ತೋರದ ಕನಿಕರ. ಹೊರಬಂದ ನಾಗತ್ತೆಯ ಅಂತರಾಳ ‘ಅವ್ರಿಗ್ ಎಣ್ಣೀ ಅಂದ್ರ್ ಸೈ, ಅದುನ್ನಾರೂ ಒಂಚೂರ್ ಇಡ್ಕಿತ್ತ್, ಯಾರಾರೂ ತಬನಿ’ ಎಂದು ತನ್ನ ಮನದಾಳವನ್ನು ಬಿಚ್ಚಿಟ್ಟಳು. ಓಡಿದ ಅಣ್ಣ ದೊನ್ನೆಗೆ ಎಣ್ಣೆ ಒಗೆದು ಹಿಂದಿರುಗಿದ.

ಕಾಗೆ ಮೂಸದ ಎಡೆಯ ಎಣ್ಣೆಗೆ ಬರಿದೆ ಮಾತಿನ ಉತ್ತರ. ಕಣ್ಣಿನಂಚಿಗೆ ಹನಿದು ನೀರಿನ ಸಿಂಚನ. ದುಃಖ ವತ್ತರಿಸಿ ಅಳುವ ಅಕ್ಕಗೆ ಹಲವು ಸೀರೆಗಳ ಸಮಾಧಾನ. ಅಣ್ಣನ ಮಗಳು ಅಂಜಲಿಯ ಹಗಲು ವೇಷದ ಕಣ್ಣೀರು. ಎಡೆಯ ವಡೆ ತಿನ್ನದ ಅಪ್ಪನ ಕಾಗೆ ಬರಿದೆ ‘ಕಾಂವ್ ಕಾಂವ್’ಗುಟ್ಟಿತು. ಆದರೂ ಒಂದು ಸಮಾಧಾನ. ಸತ್ತವರು ಕಾಗೆಯಾಗುವುದಾದರೆ ಕೆಲವರನ್ನಾದರೂ ಕುಕ್ಕುತ್ತಿದ್ದರಲ್ಲವೇ?

ಉರಿಯು ನೆಂಗದ ಅಪ್ಪನ ಅಡಿಗೆ ನಡೆಯುತ್ತಲೇ ಇತ್ತು. ನೆನಪು ಕೆಣಕುವ ಅಪ್ಪ ಹತ್ತಾರು ಹಳೆಯ ಸುದ್ದಿಗೆ ಜೀವ  ತುಂಬುತಿದ್ದ. ಇವನ ಜೀವನವೇ ಒಂದು ವಿಚಿತ್ರ ಕೂಡ. ಅವ್ವ ತೀರಿದ ಮೇಲೆ ಅಪ್ಪ ಕೆಲವೊಮ್ಮೆ ಮೂಕನಾಗುತ್ತಿದ್ದ. ಜಗಳಗಂಟಿಯ ಅಪ್ಪನಿಗೆ ಅವ್ವ ಕಾಣದಾಗಲೆಲ್ಲಾ ಪ್ರೀತಿ ಹುಡುಕುತ್ತಿತ್ತು. ಅವ್ವನೂ ಸಂಸಾರಕ್ಕೆ ಜೀವತೆತ್ತವಳು. ಲಕ್ಷ ಗಳಿಸಿದ ಅಪ್ಪ ಸೋತು ಸುಣ್ಣವಾದಾಗಲೂ ಮಗುವಂತೆ ಸಾಕಿದವಳು. ಸಾಲಕೊಟ್ಟವರು ಚಿನ್ನ, ಬೆಳ್ಳಿಯ ಜೊತೆ ಪಾತ್ರೆಪಗಡೆಯ ಬರಿದು ಮಾಡಿದರೂ ಅವ್ವ ಬೇಸರಿಸಲಿಲ್ಲ. ಬದುಕಿ ಬಾಳಿದರೆ ನಾಳೆ ಇರುವುದು ನಮಗಾಗಿ ಎಂದು ಅಪ್ಪನ ಎದೆಯ ತಟ್ಟಿದಳು.

ಕೂಲಿಕೆಲಸದ ಚೂರು ಕಾಸಿನಲ್ಲೆ ಸಂಸಾರ ಬೆಳೆಸಿ ಹರುಷ ಕಂಡವಳು ಅವ್ವ. ಗಂಡನೆಂದರೆ ಜೀವಹರಿಸಿದ ಈಕೆ ತರುವ ಅಕ್ಕಿಬೇಳೆಯ ಜೊತೆ ಬೀಡಿಕಟ್ಟನು ಮರೆಯಲಿಲ್ಲ. ಹಳೆಯ ಕತೆಗಳ ಅಪ್ಪ ಅವ್ವನ ಪುಟದ ಓಟದ ನಡಿಗೆ ಬೆವರ ಬದುಕಿನ ಬಯಲಚಿತ್ರ. ಇಬ್ಬರೂ ಹೀಗೆ ಬದುಕ ಕೊಟ್ಟವರು, ನೆತ್ತರ ಕೆಳಗಿಕ್ಕಿದವರು, ಕೈತುತ್ತ ಉಣಿಸಿದವರು, ಕಣಗಿದೆದೆಯಲಿ ಕೆತ್ತನೆಯ ಕೆತ್ತಿದವರು.ಹದಿನಾರರ ಅಪ್ಪನಿಗೆ ಹತ್ತಾರು ಜೀವಗಳ ನೆತ್ತರಯಾನ.

ಹೆಸರು ಅಪ್ಪನದಾದರೂ ರಾಶಿಕೋಳಿಗೆ ಪಲ್ಲೆಯಾಯಿತು. ಕಡಿದ ಕುರಿಗಳ ಅಂಬೆ ರಾಗ. ‘ಅಪ್ಪ ಬಾರಿ ಒಳ್ಳೆರಿದ್ದಿರ್, ಇಷ್ಟ್ ಬ್ಯಾಗ್ ಸಾವ್ ಬಪ್ಪ್‍ಕಾಗಿದ್ದಿತ್, ಒಳ್ಳೇರಿಗ್ ಕಾಲ್ವೆಲ್ಲಿತ್ತ್.’ ಸತ್ತ ಅಪ್ಪನಿಗೆ ಎಲ್ಲರ ಸಂಭೋದನೆ. ಜಗಿದ ಮೂಳೆಗೆ ಲೆಕ್ಕ ಸಿಕ್ಕದೆ ಕರ್ಮಕಾರ್ಯವು ಬರಿದಾಯಿತು. ಅಲ್ಲಲ್ಲಿ ಅಣ್ಣಕೊಟ್ಟ ನೀರುಸೇರದ ನೈಂಟಿ ಕೆಲಸಮಾಡಿತ್ತು. ಅಮಲುಏರಿದ ಮಾತಿಗೇನೂ ಬರವಿರಲಿಲ್ಲ. ಏನು ಬೇಡಿದರೂ ಯಮನ ಗಾಡಿ ಕೆಟ್ಟು ನಿಲ್ಲುವುದಿದೆಯಾ? ನಾಳೆ ಯಾರಾದರೇನಂತೆ, ಮೂಕ ಕುರಿಯೂ ಯಮನ ಗಾಡಿಗೆ ಪಯಣಿಗನೆ. ಅವ್ವ ಅಪ್ಪನ ಫೋಟೋದೆದುರಿನ ಕತ್ತಲೆಗೆ ಸೆಡ್ಡು ಹೊಡೆದ ದೀಪ ಗಾಳಿಯಂಚಿಗೆ ತೊನೆದಾಡುತ್ತಿತ್ತು.

ಅಪ್ಪನಿಲ್ಲದ ಕಪ್ಪುಕೋಣೆಯ ರಾಶಿನೆನಪಿನ ತೊತ್ತಿಗನು ನಾನಾದೆ. ರೆಪ್ಪೆ ಮುಚ್ಚಿದರೂ ಜೋಂಪು ಹತ್ತದ ನಿದ್ದೆ. ಅದೇ ಶ್ವೇತವಸ್ತ್ರದ ಅಪ್ಪ, ಅದೇ ಕಾಗೆ, ಅದೇ ಎಡೆ, ಅದೇ ಅವ್ವ. ಕನಸ ಮೂಡಿಸಿದ ಅಪ್ಪನಿಗೆ ಒತ್ತಿಬಂದ ನೆನಪ ಪದಪುಂಜ ಸಾಲುಸಾಲು. ‘ಹುತ್ತಗಟ್ಟಿದ ಚಿತ್ತ’ ಬರೆಯಲೇ ಬೇಕು ಅಪ್ಪನಿಗೊಂದು ಪತ್ರ.ನೆನಪಿನಾಳದ ಅಪ್ಪ.. .. .. ..ಹೇಗಿದ್ದಿ? ಪ್ರಯಾಣ ಆಯಾಸವಾಯಿತಾ? ಅವ್ವ ಸಿಕ್ಕಳಾ? ಏಳು ಮಾಗಿಯ ಮೇಲೆ ನಿನ್ನ ಸೇರಿದ ಆನಂದ ಅವ್ವನಿಗಾಗಿರಬೇಕು ಅಲ್ಲವಾ? ಹೊರಡುವ ಸಾಸಿವೆಯಷ್ಟು ಸಡಗರವೂ ನಿನಗಿರಲಿಲ್ಲ, ಕೊನೆಗೂ ಬದುಕುವ ನಿನ್ನ ಒತ್ತಿದಾಸೆಗೆ ಉತ್ತರ ಸಿಗಲಿಲ್ಲ. ಕರುಳ ಮುಟ್ಟಿದ ಬೇನೆ ರೆಪ್ಪೆ ಮುಚ್ಚಿಸುವ ಹಟ ತೊಟ್ಟಿತು. ಚಳಿಯ ತಾಳದ ನಿನಗೆ ದೊಡ್ಡಣ್ಣ ಅಗ್ನಿ ಮುಟ್ಟಿಸಿದ. ಕಾವೇರಿ ಧಾರೆಗೆರೆದ ಅಕ್ಕ ಎಚ್ಚರದ ಇಚ್ಛೆ ತಪ್ಪಿದಳು.

ಒತ್ತರಿಸಿ ಬಂದ ದುಃಖಕ್ಕೆ ವಿರಾಮ ಹಾಕದೆ ನಾನೂ ಅತ್ತುಬಿಟ್ಟೆ. ತಂಪು ನೆಲದಂಚಿನ ಬಿಳಿಯ ಪಂಚೆಯು ನಿನ್ನ ಹೊದ್ದಿತ್ತು. ಸದಾ ಬೆಚ್ಚಗಿರುತ್ತಿದ್ದ ನಿನಗೆ ಅದೇಕೆ ಆ ಶಿಕ್ಷೆ ಗೊತ್ತಿಲ್ಲ. ಬಿ.ಪಿ., ಶುಗರ್ ಹೇಗಿದೆ? ಇಲ್ಲಿನ ಗುಳಿಗೆಗಳಿಗೆಲ್ಲಾ ಬಿಡುವು ಪಡೆದ ಆತಂಕ. ಆಗಿನ ಅವ್ವನ ಟಾನಿಕ್ಕನ್ನು ಅಣ್ಣ ಹಾಳುಬಾವಿಗೆ ಎಸೆದುಬಿಟ್ಟ. ಮೆಡಿಕಲ್ಲು ಹತ್ತಿರ ಇದೆಯ ತಿಳಿಸು. ಇಲ್ಲವಾದರೆ ಗುಳಿಗೆ ಕಳಿಸುತ್ತೇನೆ.

ಅವ್ವನಿಗೂ ಹೇಳು, ಜೀವದ ಬಗ್ಗೆ ನಿಗಾ ಇರಲಿ. ಅಜ್ಜಿ-ಅಜ್ಜ ಏನು ಮಾಡುತ್ತಾರೆ? ಅಜ್ಜನ ಕಡ್ಡಿತಂಬಾಕಿಗೆ ಕಹಿ ಮುಟ್ಟಿದೆಯಾ? ಮಡಚಿಟ್ಟ ಬಟ್ಟೆಗಳಿಗೆ ಟ್ರಂಕು ಬೇಕಾ? ಯಾವುದಕ್ಕೂ ಜರೂರು ತಿಳಿಸು.ಹೊದೆತವಿಲ್ಲದ ಚಳಿಯ ಮಾಗಿಯ ತುಂತುರೆ? ಹಾಸು ಹಾಸದ ಬೆನ್ನುಬಿರಿದ ನೋವೆ? ಬರಿದು ವಸ್ತ್ರದ ಬಸವಳಿದ ಆಸರೆ? ಹಗ್ಗಹರಿದ ನ್ಯಾಲೆಯ ಬಿಸಿಲ ಬದುಕೇ? ಪಟ್ಟೆ ಸೀರೆಯ ಅವ್ವನಿಗೆ ಹಣಿಗೆಯಿಲ್ಲದ ತುರುಬೆ? ಮಾಗಿಯ ಮಲ್ಲಿಗೆಯ ಗಿಡ ಹೂವ್ ಸೂಸಿದೆಯಾ? ನಿನಗೆ ಬೀಡಿ ಬಯಕೆಂiÀi ಕತೆಯೇನು? ಮಾವ ಯಡೆಗಿಟ್ಟ ಬೀಡಿ ಹೊಗೆಹಾರಿಸಿದೆಯಾ? ಕೃಷ್ಣ-ಕಂಸನ ಕತೆಗೇನು ನೀನು ಕಡಿಮೆಯಿಲ್ಲ. ಏನೇ ಹೇಳು ನಿನ್ನ ಮೇಲೆ ನನಗ್ಯಾಕೋ ಹತ್ತಾರು ನೆನಪ ಮೆಲುಕು. ನನಗೂ ಹುಮ್ಮಸ್ಸು ಬಂದಿದ್ದು ನಿನ್ನಿಂದಲೆ. ನೀನು ಬಿಸಾಡಿದ ಮುಂಡುಬೀಡಿಯಲ್ಲೂ ಹೊಗೆಬರಿಸಿದ ಗಂಡಸು ನಾನು. ಬಾಟಲಿಯ ತೂರಿನ ಹನಿಯನ್ನೆ ಗಂಟಲಿಗೆ ಬಿಟ್ಟುಕೊಂಡು ರುಚಿಯ ನೋಡಿದ್ದೆ.

ಗಂಟಲು ಕಸೆದು ಕೆಮ್ಮುವಾಗಲೆ ತಾನಾಗಿಯೇ ಬಂದ ವಾಂತಿ ಮತ್ತೆ ಚಟಮಾಡದಂತೆ ಎಚ್ಚರ ನೀಡಿತ್ತು. ಹೆಂಗಸರ ಭುಜಮುಟ್ಟಿ ಮಾತು ಹೊರಗೆಸೆದ ನಿನ್ನಂತೆಯೇ ನನಗೂ ಮೀಸೆಚಿಗುರಿದ ಹುಡುಗಾಟಿಕೆ. ನಿನಗೂ ಸಣ್ಣ ತುಂಟತನ ಇತ್ತು ಎಂದು ಇಂಬಿಮಾವ ಏನೋ ಹೇಳಹೊರಟಾಗ ‘ನೀವೇನ್ ಕಮ್ಮ್ಯಾ, ದಿನಾಲೂ ಮೂರ್ ಮೈಲಿ ನ್ಯಡ್ಕಂಡ್ ಅವ್ಳ್ ಮನಿಗ್ ಹೊಯ್ ಬತ್ತಿದ್ದಿರಿ’ ಎಂದು ಕೊರಗತ್ತೆ ಗದರಿದಾಗ ಮಾವನ ಪುಂಗಿ ಬಂದಾಯಿತು.

ಇರಲಿಬಿಡು, ನೆನಪುಗಳು ಹೀಗೆ, ಕಣ್ಣಾಲಿಗಳ ಹನಿಯೊಡೆಸುತ್ತವೆ. ಹೆತ್ತ ಋಣಗಳೇ ಹಾಗೆ ಕಳಚಲಾಗದ ಕರಡಿಗೆಯ ಮುಚ್ಚಳದಂತೆ. ಮನೆಯ ಸೂರಿಗೆ ಸೋಗೆ ಹೊದೆಸಿದೆಯಾ? ಅವ್ವನಿಗೆ ಬೈಯ್ಯದಿರು ಮಾತುಮಾತಿಗೆ. ಬೆಚ್ಚಗಿರಿ ನೀವು ರೋಗದ ಎಚ್ಚರದ ಜೊತೆ. ಗುಳಿಗೆ ಮದ್ದನು ಮರೆಯದಿರು ಮತ್ತೆ. ವೈದ್ಯರು ಸಿಕ್ಕರಾ? ಬೇನೆಕರುಳಿಗೆ ಕಡೆಯ ತೋರು. ಅವ್ವನಿಗೆ ಕಿಮೋ ಕೊಡಿಸಿದೆಯಾ? ಅಪ್ಪಾ, ನಿನಗೊಂದು ವಿಷಯ ಮರೆತಿದ್ದೆ, ಆದ್ರೆ ಮಳೆಗೆ ಮೀನು ಹತ್ತಿದ್ದು. ನಿನ್ನ ನೆನಪಾಯ್ತು. ವಾರಗಟ್ಟಲೆ ಗೌಲುಗಸಿಯ ದರ್ಬಾರು. ತತ್ತಿದೋಸೆಯ ಹುರಿದು, ಕರಿಮೀನು ಸುಟ್ಟು ವಾಕರಿಕೆ ಬರುವ ತನಕ ವಗೆದದ್ದೆ. ನೀನು ನೈಂಟಿಗೆ ನೀರು ಸೇರಿಸಿ ತತ್ತಿದೋಸೆಗೆ ಜೀವತುಂಬಿದ್ದು ನನಗಿನ್ನೂ ನೆನಪಿದೆ. ಅಲ್ಲೇನಾದ್ರೂ ಮೀನು-ಮಾಂಸ ಸಿಗ್ತದಾ? ಬ್ಯಾಟೆ ಮಾಡಿ ಸುಂಟ್ಗ ಜಗ್ದ್ಯಾ? ಕುಡಿಯೋದು ಕಡಿಮೆ ಮಾಡು. ಸುಡುವ ಬೀಡಿಗೆ ಹೊಗೆಯಾಗದಿರು ಮತ್ತೆಮತ್ತೆ. ಕಮಲಿ ದನ ಕರು ಹಾಕಿದೆ.

ತೋಟಕ್ಕ್ ಔಷ್ದಿ ಹೋಡ್ದಾತ್. ಮನೆಯ ಎದುರಿನ ಅಮಟೆ ಚಿಗುರು ಬಿಟ್ಟಿದೆ, ನುಗ್ಗೆ ಹೂವು ಮಿಡಿಯಾಗುತ್ತಿವೆ. ಈ ವರ್ಷವೂ ಮಳೆ ಕಡಿಮೆ. ಬರೀ ಬಿಸಿಲು. ಬೇಸಿಗೆಯಲ್ಲಿ ಮದುವೆಯಾದ ಅಣ್ಣನ ಮಗಳು ಅಮೇರಿಕಾಕ್ಕೆ ಹೋದಳು. ನೀನಿಟ್ಟ ದುಡ್ಡು ಪೆಟ್ಟಿಗೆಯಲ್ಲಿ ಭದ್ರವಾಗಿದೆ. ನಿನ್ನ ಅಂಗಿಯನ್ನೆಲ್ಲ ಸದಣ್ಣ ಹಾಕಿ ಹರಿಯುತ್ತಿದ್ದಾನೆ. ನಿಮಗಿಬ್ಬರಿಗೂ ಇಟ್ಟ ದೀಪ ಉಯ್ಯಾಲೆಯಾಗಿ ಉರಿಯುತ್ತಿದೆ. ಇನ್ನು ವಿಷಯ ಬಹಳವಿದೆ. ಮುಂದಿನ ಪತ್ರದಲ್ಲಿ ಬರೆಯುತ್ತೇನೆ. ನೀನು ಸೋಮಾರಿಯಾಗಿ ಮಲಗಬೇಡ. ಬೇಗ ಉತ್ತರಿಸು.

ಇಂತಿ ನಿನ್ನ ಮಗಕನಸ ನಿದ್ದೆಯ ತರದಿ ಎದ್ದ ಎಚ್ಚರ. ಎದೆಯ ಡವಡವ. ಮೋಡದಂಚಿನ ಮಳೆಯ ತುಂತುರು. ಬೆಚ್ಚ ತಣ್ಣನ ಕನವರಿಕೆ. ಬೆಳಗ ಸೂರ್ಯನ ಬೆಳಕ ಮೊರೆತ. ‘ಇದು ಬರಿ ಬೆಳಗಲ್ಲೋ ಅಣ್ಣ’

ಹಲವು ಕತ್ತಲಿಗೆ ಬೆಳಗು ಕಂಡರೂ ಪತ್ರ ಉತ್ತರವ ಪಡೆಯಲಿಲ್ಲ. ತಂತಿಹರಿದ ಅಪ್ಪನೂರಿನ ದೂರವಾಣಿ. ಅವ್ವನಿಗೆ ಏನೂ ಹೇಳುವಂತಿಲ್ಲ. ತನ್ನ ಹೆಸರಿನ ಮೂರು ಅಕ್ಷರವನ್ನ ಹೇಗೋ ಕಲಿತಿದ್ದಳು. ಅಂಚೆಯವ ಅಬಚೂರಿನ ಬೂಬಣ್ಣನ ತರ ಅವನೇ ಓದಿ ಹರಿದನೋ ಪತ್ರವನ್ನ? ಅಂಚೆ ವಿಳಾಸದ ಬೀದಿ ಬದಲಾಯಿತಾ? ಪತ್ರ ಬದಿಗೊತ್ತಿದ ಅಪ್ಪ ಬೀಡಿ ಹಚ್ಚಿದನಾ? ಪತ್ರ ಬಂದರೆ ಉತ್ತರ ಬಹಳವಿದೆ.

ಅವ್ವಅಪ್ಪನಿಗೆ ನನ್ನ ಕೋರಿಕೆಯೊಂದೇ. ಹಾಗೇ ಬರುವುದಾದರೆ ಬನ್ನಿ, ಆದರೆ ದಿನವೂ ಇವರೆಲ್ಲಾ ತೆಗಳುವ ಕಾಗೆಯ ತರದಲ್ಲಿ ಬರುವುದು ಬೇಡ. ದನವಾಗಿ, ಕರುವಾಗಿ, ಗಿಳಿಯಾಗಿ, ನವಿಲಾಗಿ ಏನಾಗದಿದ್ದರೂ ಕೊನೆಗೆ ಗುಬ್ಬಚ್ಚಿಯಾದರೂ ಸಾಕು. ಕೆಲವು ದಿನಗಳ ಹಿಂದೆ ಬೆಳಗಿನ ಹೊತ್ತಿನಲ್ಲಿ ಕಾಗೆ ಕೂಗಿದ್ದಕ್ಕೆ ಅತ್ತಿಗೆಯೆಂದಳು ‘ಈ ಹಡ್ಬಿ ಕಾಕಿ ಕೂಗ್ತಂದ್ರೆ ಏನಾರೂ ಗಿರಾಚಾರ ಇದ್ದದ್ದೇ.’ ನನಗೆ ಈಗ ಅದು ನೆನಪಾಗಿ ಅತ್ತುಬಿಟ್ಟೆ, ಇರಲಿಬಿಡು.

ನೀನು ಹೊದೆಯುವ ಕೌದಿಯನ್ನ ಅಕ್ಕ ತೊಳೆದು ಹಾಕಿದ್ದಾಳೆ, ಅವ್ವನ ಪಟ್ಟೆಸೀರೆ ಮಡಿಕೆಯಾಗಿ ಟ್ರಂಕು ಸೇರಿದೆ, ಹೊಗೆಯಾಡದ ರಾಜೇಶ್ ಬೀಡಿ ಪೆಟ್ಟಿಗೆಗೆ ಹೋಯ್ತು, ಅವ್ವನ ಹರಳೆಣ್ಣೆ ಬಾಟಲಿಯ ಬಾಯಿತೆರೆವವರೆ ಇಲ್ಲ, ಸುಡದ ಒಣಮೀನು ಬುರುಬುಗಟ್ಟಿದೆ. ಚಟ್ಲಿಚಟ್ನಿಯ ಕುಚ್ಗಿ ಗಂಜಿಯೂ ಮಂಗಮಾಯವಾಗಿದೆ.

ಹಿಲಿಗಿಟ್ಟ ಹ್ಯಾಟೆ ಒಂಬತ್ತು ಮರಿ ಒಡೆಸಿತು, ರಾಣಿ ನಾಯಿಯ ಮೂರು ಮರಿ ಮಾರಿಯಾಯಿತು, ರಾಕಿಗೆ ಯಾರೋ ವಿಷ ಹಾಕಿ ಕೊಂದುಬಿಟ್ಟರು, ಇನ್ನೂ ವಿಷಯವಿದೆ ಹೇಳುವುದು, ಬೇಗ ಬರೆ ನಿನ್ನ ಉತ್ತರ. ಕಾದು ಕೆಟ್ಟಿದೆ ಮನಸು ಕವಲು ಹಾದಿಯ ತೆರದಿ. ಅಪ್ಪ ಬರೆಯದ ಪತ್ರ ಪ್ರಶ್ನೆ ಕೆಣಕಿತ್ತು. ಮತ್ತೆ ಕೂಗಿದ ಮನೆಯೆದುರ ಕಾಗೆ ಅದೇ ರಾಗ ‘ಕಾಂವ್..ಕಾಂವ್..’ ಅಪ್ಪನೋ ಅವ್ವನೋ ಎಂಬ ಆತಂಕ.

ಮರಕೆ ಅಂಟಿದ ಕಾಗೆ ಕೂಗುತಿದೆ ಹಾಗೆ. ರಾಗ ಬತ್ತದ ಧ್ವನಿಯು ದಿನವು ಹೀಗೆ. ಕಾದು ಕುಳಿತಿಹ ನಾನು ಆಗುತಿಹೆ ಇದರ ಹಾಗೆ.

2 comments

  1. ತೀರಾ ನಿರಾಸೆಯಾಯಿತು. ಸಾಹಿತ್ಯದ ಬಗ್ಗೆ ಹೋಗಲಿ ಭಾಷೆಯ ಬಗ್ಗೆಯೂ ತಿಳುವಳಿಕೆಯಿಲ್ಲದ ಕತೆಗಾರ ಮತ್ತು ತೀರ್ಪುಗಾರರು. ಏನೋ ಹೊಸದರ ಬಗ್ಗೆ ತಮಗೆ ತೀರಾ ಆಸಕ್ತಿಯಿದೆಯೆಂದು ತೋರಿಸಿಕೊಳ್ಳುವ ಆತುರದಲ್ಲಿ ಎಡವಿದ್ದಾರೆ ಎನ್ನಿಸುವಂತಿದೆ ಕತೆ.

Leave a Reply