ಪ್ರಿಯ ‘ಟೈರ್ಸಾಮಿ’ ರಮೇಶ್

 

ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿರುವ ಚೀಮನಹಳ್ಳಿ ರಮೇಶಬಾಬು ಅವರ ಕಾದಂಬರಿ ‘ಟೈರ್ಸಾಮಿ’ ಕೃತಿಗೆ ಖ್ಯಾತ ಕವಯತ್ರಿ ಪಿ ಚಂದ್ರಿಕಾ ಬರೆದ ಮುನ್ನುಡಿ ಇಲ್ಲಿದೆ-

 

ಪಿ ಚಂದ್ರಿಕಾ                

 

 

 

 

ಪ್ರಿಯ ರಮೇಶ್,

ನಿಮ್ಮ ಕಾದಂಬರಿ ‘ಟೈರ್ಸಾಮಿ’ ಬಿಡುಗಡೆಗೂ ಮುನ್ನ ನನ್ನ ಕೈಲಿದೆ. ‘ಹದ’ ಕಾದಂಬರಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದ ನನಗೆ ಈ ಕಾದಂಬರಿಯ ಬಗ್ಗೆ ವಿಶೇಷವಾದ ಕುತೂಹಲ. ಆ ಕುತೂಹಲದಿಂದಲೇ ಇದನ್ನು ಕೈಗೆತ್ತಿಕೊಂಡೆ. ‘ಹದ’ದ ಬದುಕಿನ ಸೂಕ್ಷ್ಮ ಹಾಗೂ ಇದುವರೆಗು ಅನಾವರಣಗೊಳ್ಳದ ಸಣ್ಣ ಸಣ್ಣ ವಿವರಗಳು ಓದುಗರನ್ನು ಆವರಿಸಿಕೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ. ಅಂಥಾದ್ದೆ ನಿರೀಕ್ಷೆಯಲ್ಲಿ ಈ ಕಾದಂಬರಿಯನ್ನೂ ಕೈಗೆತ್ತಿಕೊಂಡೆ, ಆದರೆ ನನ್ನ ನಿರೀಕ್ಷೆಗೆ ಹೊಸ ತಿರುವನ್ನು ಕೊಡುವ ಹಾಗೇ ಈ ಕಾದಂಬರಿ ಇದೆ. ಈ ಮಾತನ್ನು ಹೇಳುವಾಗ ನನಗೆ ತುಂಬು ದೊಡ್ಡ ಎಚ್ಚರಿಕೆ. ನಮ್ಮ ಕಾಲದ ಬಹುತೇಕ ಕಾದಂಬರಿಕಾರರು ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅದರ ವಿಸ್ತಾರ ಕೇವಲ ಇವತ್ತಿಗೆ ನಿಲ್ಲುವ ಹಾಗೇ ಮಾಡುತ್ತಾರೆ. ಅದಕ್ಕೆ ನೆನ್ನೆ ನಾಳೆಗಳ ನೆನಪುಗಳನ್ನು ಕಟ್ಟಿಕೊಳ್ಳುತ್ತಾ ವಿಸ್ಮಯದ ಅಂಚಿಗೆ ತಂದು ನಿಲ್ಲಿಸುವುದು ಸಾಧ್ಯವಾಗುತ್ತಿಲ್ಲ.

ಆದ್ದರಿಂದಲೇ ಮಹತ್ತಾದ ಆಶಯದ ಕಾದಂಬರಿಗಳು ಹುಟ್ಟುತ್ತಿಲ್ಲ. ಹುಟ್ಟುತ್ತಿಲ್ಲ ಅನ್ನುವುದು ಈ ಕಾಲದ್ದೋ ಅಥವಾ ನಮ್ಮ ಮಿತಿಗಳೋ ಅರ್ಥವಾಗುತ್ತಿಲ್ಲ. ನೆನ್ನೆಗಳ ನೆನಪಲ್ಲಿ ಇಂದನ್ನು ಕಟ್ಟಿದ ಹದದ ಬದುಕಿನ ತೀವ್ರ ಚಿತ್ರಗಳನ್ನು ಕೊಟ್ಟ ನೀವು ಸಾವನ್ನು ಕೇಂದ್ರವಾಗಿಸಿಕೊಂಡ ಹೈಲಿ ಫಿಲಾಸಫಿಕಲ್ ಎನ್ನುವ ವಿಷಯವನ್ನು ಕೈಗೆತ್ತಿಕೊಳ್ಳುತ್ತೀರ ಎನ್ನುವ ನಿರೀಕ್ಷೆಯನ್ನೂ ನಾನಂತೂ ಮಾಡಿರಲಿಲ್ಲ. ಟೈರ್ಸಾಮಿ ಕಾದಂಬರಿ ಒಂದು ದಿಕ್ಕಿಗೆ ಓಡುವ ನದಿಯಂತಲ್ಲ, ಈ ಕಥೆ ಹಲವಾರು ಹೂಗಳ ಸುಗಂಧದ ಒಟ್ಟು ಮೊತ್ತದ ಗಾಳಿ. ಹೇಳಬೇಕೆಂದರೆ ಯಾವ ದಿಕ್ಕಿನ ಗಾಳಿ ಯಾವಾಗ ದಿಕ್ಕನ್ನು ಬದಲಿಸುತ್ತದೋ ಗೊತ್ತಾಗದ ಹಾಗಿದೆ ರಚನಾಕ್ರಮ. ಕಾದಂಬರಿಯ ಒಟ್ಟಂದಕ್ಕೆ ಈ ವಿನ್ಯಾಸ ದುಡಿಯುವುದರಿಂದ ಒಟ್ಟಂದದಲ್ಲಿ ಕಾದಂಬರಿ ಕೊಡುವ ಅನುಭವ ಚೆನ್ನಾಗೇ ಇದೆ. ಒಟ್ಟು ಕಾದಂಬರಿಯ ಬಗ್ಗೆ ನನಗೆ ಆಸಕ್ತಿ ಮೂಡಿದ್ದು ಎರಡು ಕಾರಣಕ್ಕೆ ಈ ಕಾದಂಬರಿ ಮನುಷ್ಯ ಹುಟ್ಟಿದಾಗಿನಿಂದ ಇರುವ ಸಾವಿನ ಚರ್ಚೆಗಳನ್ನು ಸಮಕಾಲೀನಗೊಳಿಸುತ್ತಿದೆ ಮತ್ತು ಈ ಕಾದಂಬರಿಯ ಪಾಲಿಟಿಕ್ಸ್ ಅಂದರೆ ಧರ್ಮ, ಜಾತಿ, ಹಾಗೂ ವರ್ಗ ಸಂಘರ್ಷಗಳು ಕೆಲ ಗಾಢವಾಗಿ ಕೆಲವು ತೆಳುವಾಗಿ ಬಂಧವಾಗಿ ನೆಯ್ಗೆಯಾಗಿರುವುದು.

 

ಈ ಕಾದಂಬರಿ ವಸ್ತುಕಾಮ ಮತ್ತು ದೇಹಕಾಮಗಳ ಒಟ್ಟಂದ. ಹೆಣ್ಣಿನ ಬಯಕೆ ಗಂಡಿನ ಹುಡುಕಾಟ ಮತ್ತು ಬದುಕು ಮತ್ತು ಸಾವು ಎರಡರ ನಡುವೆ ಒಂದು ಸಂಬಂಧವನ್ನು ಸಾಧಿಸುತ್ತದೆ. ಬಯಕೆಗಳು ಬದುಕನ್ನು ಮೀರಿದವಲ್ಲ. ಅನಂತ ಸಾಧ್ಯತೆಯ ಅಪರಿಮಿತ ಸಂಗತಿಗಳಲ್ಲಿ ಬಯಕೆ ಕೂಡಾ ಹುದುಗಿದೆ. ಅನಂತ ಸಾಧ್ಯತೆ ಕನ್ನಡದ ಕಾದಂಬರಿ ಜಗತ್ತಿನಲ್ಲಿ ಬೇರೆ ಬೇರೆ ರೀತಿಗಳಲ್ಲಿ ಪ್ರಸ್ತುತವಾಗಿದೆ. ಅದು ನಮ್ಮ ಸ್ಮೃತಿಕೋಶದಲ್ಲಿ ಉಳಿದಿರುವ ನನಗೆ ಈ ಕ್ಷಣಕ್ಕೂ ಹೆಣ್ಣು ಎಂದರೆ ಶಿವರಾಮ ಕಾರಂತರ ಮರಳಿ ಮಣ್ಣಿಗೆಯಲ್ಲಿ ಮಾವುಮಿಡಿಗೆ ಕೊಂಡು ತಂದ ಉಪ್ಪು ಹಾಕುವುದೋ ಸಮುದ್ರ ನೀರನ್ನು ಕಾಯಿಸಿ ಹಾಕುವುದೋ ಎಂದು ಯೋಚಿಸುವ ಹೆಣ್ಣು ಜೀವದ ಬದುಕಿನ ಬಗೆಗಿನ ಸುಪ್ರಸನ್ನವಾದ ಪ್ರೀತಿ.  ಹೊಸ ಕಾಲ ಹುಟ್ಟು ಹಾಕುತ್ತಿರುವ ಆಸೆಗಳ ಜೊತೆಗೆ ಒಳಗೇ ತಾವು ಪಡೆಯುತ್ತಿರುವ ದೇಹ ಬಯಕೆಗಳ ಬೇರೆ ನೆಲೆಗೆ ಅರ್ಥವನ್ನು ಹುಡುಕುತ್ತಾ ಆಸೆ ಮತ್ತು ಆಸಕ್ತಿಗಳ ನಡುವೆ ಹುಟ್ಟಿಕೊಳ್ಳುವ ಅನೇಕ ಹೊಳಹುಗಳನ್ನು ಕೊಡುತ್ತಾ ನಮ್ಮ ಗ್ರಹಿಕೆಯ ಒಳ್ಳೆಯದು ಮತ್ತು ಕೆಟ್ಟದ್ದು ಎನ್ನುವ ಗಡಿಗಳನ್ನು ಅಳಿಸಿಹಾಕಿ ಸರಳಗೊಳಿಸುವ ಅಪಾಯದಿಂದ ಪಾರಾಗುತ್ತದೆ.

ಅದಮ್ಯ ಉತ್ಸಾಹದ ವ್ಯಕ್ತಿಯೊಬ್ಬ ಇದ್ದಕ್ಕಿದ್ದ ಹಾಗೆ ಜೀವನದಿಂದ ದೂರ ಸರಿಯುವ ಕ್ಷಣದಲ್ಲಿ ಹೆಣ್ಣೊಬ್ಬಳ ಅಸಹಾಯಕ ನಡೆಗಳನ್ನು ಈ ಕಾದಂಬರಿ ಅತ್ಯಂತ ಶಕ್ತವಾಗಿ ಹಿಡಿದಿಟ್ಟಿದೆ. ಟೈರ್ಸಾಮಿಯು ಸಾವಿನ ಹೊಸ್ತಿಲಲ್ಲಿರುವಾಗ ಅವನೂ ಹೇಳದ ಎಲ್ಲೆಲ್ಲೋ ಸಂಗ್ರಹಿಸಿದ ಸತೀಶ್ ಎನ್ನುವ ಕಾದಂಬರೀಕಾರ ಬರೆದ ಕಾದಂಬರಿಯ ಮೂಲಕ ಅವನ ಕಥೆಯನ್ನು ಬಿಚಿಡುವ ತಂತ್ರವನ್ನು ಫ್ಲಾಷ್ ಬ್ಯಾಕ್‍ನ ಜೊತೆ ಮಿಳಿತಗೊಳಿಸಿದೆ. ಇದು ವ್ಯಕ್ತಿಯೊಬ್ಬನ ಬಗೆಗಿನ ಸತ್ಯಾ ಸತ್ಯಗಳ ವಿವೇಚನೆಗಿಂತ ಸಂಭವನೀಯ ಅಥವಾ ಕಾಲ್ಪನಿಕ ಸತ್ಯಗಳ ಹೆಣೆಯುವಿಕೆಯಾಗುತ್ತದೆ. ಮತ್ತು ಕಾದಂಬರಿಯ ಮೀಮಾಂಸೆ ಕೂಡಾ ಜೊತೆಗೆ ನಡೆಯುತ್ತಿರುತ್ತದೆ. ಕಾದಂಬರಿ ಸುಳ್ಳನ್ನು ಹೇಳುತ್ತಿದೆಯೋ ಸತ್ಯವನ್ನೋ? ನಾವು ಹೇಳುವ ಸತ್ಯ-ಸುಳ್ಳುಗಳು ಸಾಂದರ್ಭಿಕವಾಗಿರುತ್ತವೆಯೇ ಹೊರತು ಯಾವ ಸತ್ಯ ಮತ್ತು ಸುಳ್ಳುಗಳಿಗೆ ನಿರಂತರ ಸ್ಥಿತಿ ಇರುವುದಿಲ್ಲ. ಆದರೆ ಅದು ಎಷ್ಟು ಪ್ರಾಮಾಣಿಕವಾಗಿರುತ್ತದೆ ಎನ್ನುವುದಷ್ಟೇ ಸತ್ಯ. ಈ ಸತ್ಯದ ಸಾಕ್ಷೀಪ್ರಜ್ಞೆಯಾಗಿ ನಟರಾಜನ ಪಾತ್ರ ನಿಲ್ಲುತ್ತದೆ. ಟೈರ್ಸಾಮಿಯಾಗಿ ಪರಿವರ್ತನೆ ಹೊಂದಿದ ನವೀನ ಗತ ಜೀವನದಲ್ಲಿ ಜೀವವಿಮುಖಿಯಾಗಿ ಸಾವಿನ ಆಕರ್ಷಣೆಗೆ ಬಿದ್ದು ಬೇರೆಲ್ಲದ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡಾಗ ಕ್ಯಾಥರಿನ್ ಎನ್ನುವ ಜೀವಕೇಂದ್ರಿತ ಶಕ್ತಿಗೆ ತೆರೆದುಕೊಳ್ಳುವ ದಾರಿಗಳ ಬಗ್ಗೆ ಕುತೂಹಲ ಮೂಡುತ್ತದೆ. ತಾನು ಕೆಲಸ ಮಾಡುವ ಗಾರ್ಮೆಂಟ್ ಫ್ಯಾಕ್ಟರಿ ಹಣ ಕೊಡದೆ ಹುನ್ನಾರವನ್ನು ಮಾಡಿ ಮುಚ್ಚುವ ನಾಟಕ ಆಡುವಾಗ ಅದನ್ನು ವಿರೋಧಿಸುವ ಕಾರ್ಮಿಕ ಮಾಲೀಕರ ಸಂಘರ್ಷದ ನಡುವೆ ಬದುಕಿಗೆ ಆಸರೆಯಾದ ಉದ್ಯೋಗವೂ ಹೋಗುತ್ತದೆ.

 

ಬಾಡಿಗೆ ತಾಯಿಯಾಗಿಯಾದರೂ ತನ್ನ ಜೀವನವನ್ನು ನಿಲ್ಲಿಸಿಕೊಳ್ಳಬೇಕು ಎನ್ನುವ ಹಠಕ್ಕೆ ಬಿದ್ದ ಕ್ಯಾಥರಿನ್ ಬೇರೊಂದು ದಾರಿಯಲ್ಲಿ ಸಾಗುತ್ತಾಳೆ. ಅಷ್ಟು ಹೊತ್ತಿಗೆ ಜೀವನದ ಎಲ್ಲ ಹಂಗುಗಳನ್ನೂ ತೊರೆದುಕೊಂಡು ನಿರ್ಲಿಪ್ತವಾಗುವತ್ತ ಸಾಗುತ್ತಿದ್ದ ನವೀನ ಮಗ ಗುಣನ ಸಾವಿನನಂತರ ಎಲ್ಲ ಬಂಧಗಳನ್ನೂ ಸಂಪೂರ್ಣ ಹರಿದುಕೊಂಡು ರಾತ್ರೋ ರಾತ್ರಿ ಮನೆಬಿಟ್ಟು ಹೊರಟು ಹೋಗುತ್ತಾನೆ. ಹೋಗುವಾಗ ಕ್ಯಾಥರಿನ್‍ಳಿಗೆ ಬರೆದ ಪತ್ರದಲ್ಲಿ ನಿನಗೆ ಏನೂ ಆಗದೇ ಹೋದ ಒಂದು ಪ್ರಾಣಿ ಎಂದು ತನ್ನನ್ನು ತಾನು ಕರೆದುಕೊಳ್ಳುವ ನವೀನ ಸಂಬಂಧ ಮತ್ತು ಪ್ರೀತಿಯ ಒಳಗೆ ಬಂದಾಗ ಮಾತ್ರ ಮನುಷ್ಯ ಪ್ರಾಣಿಸ್ಥಿತಿಗಿಂತ ಎತ್ತರದಲ್ಲಿ ನಿಲ್ಲುತ್ತಾನೆ. ಇಲ್ಲದಿದ್ದರೆ ಅವನೂ ಒಂದು ಪ್ರಾಣಿಯೇ ಎಂದು ಸೂಚಿತವಾಗುವ ಅರ್ಥ ಹೊಳೆದು ನಿರಾಳವಾಗುತ್ತದೆ.

ಆದರೆ ಇಲ್ಲಿ ಏಳುವ ಪ್ರಶ್ನೆ ಮಗನ ಸಾವು ಯಾವುದಕ್ಕೆ ಸಂಕೇತವಾಗುತ್ತದೆ. ಅವನ ಬಗೆಗಿನ ನವೀನನ ಸೆಳೆತವನ್ನೂ ಎಲ್ಲೂ ದಾಖಲಿಸುವುದಿಲ್ಲ. ಮಗನ ಸಾವಿಗೂ ಮುನ್ನವೇ ಅವನಲ್ಲಿ ಸಾವು ಆಕರ್ಷಣೆಯ ಕೇಂದ್ರವಾಗಿರುತ್ತದೆ. ಹಾಗಿದ್ದೂ ಈ ಸಾವು ಏನನ್ನು ಹೇಳುತ್ತದೆ ಎನ್ನುವುದು ಪ್ರಶ್ನಾರ್ಥಕವಾಗಿದೆ.      ಇಲ್ಲಿ ನನಗೆ ಕೆಲ ವಿವರಣೆಗಳು ಮತ್ತು ಕಾದಂಬರಿಯ ಕೇಂದ್ರ ಭಾಗವಾಗಬಹುದದ ಕೆಲ ಸಂಗತಿಗಳು ಬಿಟ್ಟುಹೋಗಿವೆ ಅನ್ನಿಸುತ್ತಿದೆ. ಟೈರ್ಸಾಮಿಯ ಪೂರ್ವಾಶ್ರಮದ ನವೀನನನ್ನು ಸಾವಿನ ಸಂಗತಿಗಳ ಕಡೆಗೆ ಎಳೆದ ಸಂಗತಿಗಳು ಯಾವುವು ಹಾಗೆ ಎಳೆಲಿಕ್ಕೆ ಕಾರಣವಾದ ಸಂಗತಿಗಳೇನು? ಅವನ ಆ ಹೊತ್ತಿನ ತೊಳಲಾಟ ಏನು ಇವ್ಯಾವ ವಿಷಗಳನ್ನೂ ಹೇಳುವ ಘಟನೆಗಳಾಗಲಿ ವಿವರಗಳಾಗಲೀ ಈ ಕಾದಂಬರಿಯಲ್ಲಿ ಇಲ್ಲ. ಅದು ಇರಬೇಕು ಅಂತ ಓದುಗ ಬಯಸುವುದಲ್ಲಿ ಖಂಡಿತಾ ತಪ್ಪಿಲ್ಲ.

ಕಾದಂಬರಿಯನ್ನು ವಿಸ್ತರಿಸುವಾಗ ನಿಮ್ಮ ಅರಿವಿಗೆ ಬಂದೋ ಬಾರದೆಯೋ ಜಗತ್ತಿನ ಅಪರೂಪದ ತತ್ವಶಾಸ್ತ್ರಜ್ಞ ಸಾಕ್ರಟೀಸ ನಿಮ್ಮನ್ನು ಆವರಿಸಿದ್ದಾನೆ . ಅಂದರೆ ಸಾಕ್ರಟೀಸನನ್ನೇ ನೀವಿಲ್ಲಿ ತಂದಿದ್ದೀರ ಅಂತ ಅಲ್ಲ. ಆದರೆ ಸಾಕ್ರಟೀಸ್ ಮತ್ತವನ ಹೆಂಡತಿ ಜಾಂತಿಪೆಯ ನಡುವಣ ಸಂವಾದ-ವಾಗ್ವಾದಗಳು ಈ ಕ್ಷಣ ಮತ್ತು ನಿರಂತರ ಸತ್ಯದ ನಡುವಣ ಸಂಘರ್ಷ. ಸಾಕ್ರಟೀಸ್ ಮತ್ತು ಜಾಂತಿಪೆ ಇವೆರಡಕ್ಕೆ ನೆಪವಾಗಿ ಒಂದಿಷ್ಟು ಸತ್ಯಗಳ ಹರಿಕಾರರಾಗುತ್ತಾರೆ ಎನ್ನುವುದು ನಿಜ. ಬದುಕು ಒಡ್ಡುವ ವಾಸ್ತವ ಸತ್ಯವನ್ನು ಎದುರಿಸುವ ಕ್ಯಾಥರಿನ್ ಮತ್ತು ಜಗತ್ತಿಗೆ ಬೆನ್ನುಹಾಕಿ ಶಾಶ್ವತ ಸತ್ಯದ ಬೆನ್ನು ಹತ್ತಿದ ನವೀನ ಕಾಣಬೇಕಿರುವ ಸತ್ಯದ ಹುಡುಕಾಟದಲ್ಲಿ ಮಗ್ನ. ಅವರವರ ಲೋಕ ಅವರವರಿಗೆ. ಹುಟ್ಟಾ ಸೋಷಿಯಲಿಸ್ಟ್ ಆದ ನವೀನ ಆಗಿದ್ದು ಪ್ರೇಮ ವಿವಾಹವನ್ನು ಅದೂ ಅಂತರ ಧರ್ಮದ್ದು. ಆಕಾರಣಕ್ಕಾಗಿ ಮನೆಯವರನ್ನು ತೊರೆದುಕೊಂಡವ ಕ್ಯಾಥರಿನ್ ಎನ್ನುವ ಎಲ್ಲ ಸರಿಯಿರುವ ಹೆಣ್ಣಿನ ಸಹಚರ್ಯೆಯನ್ನೇ ಬಿಟ್ಟು ಸಾವು ಎನ್ನುವ ಕಾಣದ ಕಡಲಿನ ಆತುದಿಯ ಹುಡುಕಾಟಕ್ಕಿಳಿದಿದ್ದು ವಿಪರ್ಯಾಸವೇ. ಕ್ಯಾಥರಿನ್ ಮತ್ತೆ ಮಹಾತಾಯಿಯಾಗಿ ಕುಟುಂಬವನ್ನು ತನ್ನೆದೆಗೆ ಆತುಕೊಳ್ಳುತ್ತಾಳೆ. ಆದರೆ ನನಗೆ ತುಂಬಾ ನೋವಾಗಿದ್ದು ಆಗಬಾರದಿತ್ತು ಅಂತ ಅನ್ನಿಸಿದ್ದು ಅವಳ ಮಗ ಗುಣನ ಸಾವು. ಇಲ್ಲಿ ನೀವು ಒಂದು ಪ್ಯಾಟರನ್ ಅನ್ನು ನಂಬಿ ಬರೆದಿರುವ ಸೂಚನೆ ಇಲ್ಲಿ ಸಿಗುತ್ತದೆ.

ತತ್ವಜ್ಞಾನಿಯೊಬ್ಬನಿಗೆ ತನ್ನ ಕಣ್ಣೆದುರಾಗುವ ಸಾವು ಮಾತ್ರ ಅವನ ಒಳಗಿನ ಅನ್ವೇಷಕ ಗುಣಕ್ಕೆ ಒತ್ತು ಕೊಟ್ಟು ಹೊರ ಬರುವುದು ಎಂದು ತೀವ್ರವಾಗಿ ನೀವೂ ನಂಬಿದ ಹಾಗನ್ನಿಸುತ್ತದೆ. ಆದರೆ ಅನ್ಯಾಯ ಆಗುವುದು ಮತ್ತೆ ಕ್ಯಾಥರಿನ್ನಳಿಗೆ ಹೊರತು ನವೀನನಿಗಲ್ಲ. ಕ್ಯಾಥರಿನ್ನಳ ಜೀವನದಲ್ಲಿ ಸಹಭಾಗವನ್ನು ತೆಗೆದುಕೊಂಡ ಜೋಸೆಫ್‍ನ ಮರಣ ಮಾತ್ರ ಅವಳನ್ನು ಅಲ್ಲಾಡಿಸುತ್ತದೆ. ಅಂಥಾ ಯಾವ ಅಲುಗಾಟವನ್ನೂ ನವೀನ ಅನುಭವಿಸುವುದಿಲ್ಲವಲ್ಲ ಅನ್ನಿಸುತ್ತದೆ.

ಇದೊಂದು ವಾದ ಕ್ಯಾಥರಿನ್ನಳ ಕಡೆಯಿಂದ ಕಥೆಯನ್ನು ನೋಡಬೇಕು ಅಂದ್ರೆ ಅದು ಬೇರೆಯದೇ ಕಥೆ ಎಂದು ನೀವು ವಾದಿಸಬಹುದು. ನಿಜ ಅದು ಬೇರೆಯದೇ ಕಥೆ. ಆದರೆ ಬದುಕಿಗೆ ಬೆನ್ನು ಹಾಕಿದ ವ್ಯಕ್ತಿ ಈ ಸಮಾಜಕ್ಕೆ ಏನು ಹೇಳಬಲ್ಲ? ಈ ಪ್ರಶ್ನೆ ನಮಗೆ ಕಾದಂಬರಿಯ ಉದ್ದಕ್ಕೂ ಕಾಡುತ್ತಲೇ ಹೋಗುತ್ತದೆ. ಟೈರ್‍ಸಾಮಿಯಾಗಿ ಬದಲಾದ ನಂತರವಾದರೂ ಅವನಿಗೆ ಸಾವಿನ ಸತ್ಯದರ್ಶನ ಆಯಿತೆ ಎಂದರೆ ಅದನ್ನು ಹೇಳಬೇಕಾದ ಮಾತುಗಳನ್ನೇ ಆಡದೇ ಸಾವಿನ ಸಮ್ಮುಖದಲ್ಲಿದ್ದಾನೆ.

 

ಕಾದಂಬರಿಯ ಕ್ಯಾಥರಿನ್ ಮತ್ತು ಮಠದ ರಾಜಕಾರಣ ಈ ಕಾದಂಬರಿಯ ತುಂಬಾ ಸಮಾಕಾಲೀನ ಸಂಗತಿಗಳು ಅನ್ನಿಸುವುದಕ್ಕೆ ಕಾರಣ ಕಾರ್ಮಿಕ ಜಗತ್ತನ್ನು ಪ್ರತಿಪಾದಿಸುವ ಕ್ಯಾಥರಿನ್ ಮತ್ತು ಅನುತ್ಪಾದಕ ಬುದ್ಧಿಜೀವಿ ಸ್ವಾಮಿಯಾಗಿ ಮಾರ್ಪಾಡಾಗಿ ಅನುತ್ಪಾದಕವಾದ ಮಠದ ನಿರ್ಮಾಣಕ್ಕೆ ಕಾರಣವಾಗುತ್ತಾನೆ. ಅಲ್ಲಿ ಇನ್ನೊಂದು ರಾಜಕೀಯ ಶುರುವಾಗುತ್ತದೆ. ವೆಂಕಟ್ರೆಡ್ಡಿಯ ಥರದ ಫಲಾನುಭವಿಗಳು ಹುಟ್ಟಿಕೊಂಡು ಟೈರ್ಸಾಮಿಯ ಹೆಸರಲ್ಲಿ ಮಠ ಕಟ್ಟಲಿಕ್ಕೆ ಹೊರಡುತ್ತಾರೆ. ಇಡೀ ಕಾದಂಬರಿಯಲ್ಲಿ ನನಗೆ ಎರಡು ಕಥೆಗಳು ಕಾಣುತ್ತಿವೆ ಒಂದು ನವೀನ ಎನ್ನುವ ವ್ಯಕ್ತಿ ಹೇಗೆ ಸ್ವಾಮಿಯಾದ ಎನ್ನುವ ಸಾವಿನ ಹಿಂದೆ ಬಿದ್ದವನ ಊಹಾತ್ಮಕ ಜೀವನ ಚರಿತ್ರೆ ಮತ್ತು ಅವನನ್ನು ಸ್ವಾಮಿಯನ್ನಾಗಿಸಿ ಅವನ ಸಾವನ್ನು ಕಾಯುತ್ತಿರುವ ಕಾಂಕ್ಷಿ ಜಗತ್ತು ಇನ್ನೊಂದು ಕಡೆ. ಯಾವುದಕ್ಕೂ ಪ್ರತಿಕ್ರಿಯಿಸದ ಟೈರ್ಸಾಮಿಯ ಸಾವು ಜಗದ ಲೀಲೆಯ ಎಲ್ಲಾ ಸಾವಿನ ಹಾಗೇ ನಿಗೂಢವಾಗೇ ಆಗುತ್ತದೆ. ಹುಟ್ಟಿದವರೆಲ್ಲಾ ಸಾಯಲೇ ಬೇಕು-ಬದುಕು ಮಿಥ್ಯೆ ಎನ್ನುವ ನಮ್ಮ ಆಧ್ಯಾತ್ಮ ಸಾವು ಮಿಥ್ಯೆ ಬದುಕೇ ಸತ್ಯ ಎನ್ನುವ ಬುಡಕಟ್ಟು ಜನಗಳ ನಂಬಿಕೆಯ ನಡುವೆ ಎಂಥಾ ದೊಡ್ಡ ವ್ಯತ್ಯಸ ಇದೆ ಅಲ್ಲವೇ? ಸಾಪೇಕ್ಷವಾದ ಆಸೆ, ಕಾಮ ಮತ್ತು ನಿರಪೇಕ್ಷವಾದ ಸಾವು ಎರಡೂ ಬಯಸುವುಕೆಯಲ್ಲಿ ಒಂದಾಗುವ ಹಾಗೇ ಕಾಣುತ್ತಲೇ ನಮ್ಮೆದುರು ತೆರೆದುಕೊಳ್ಳುತ್ತದೆ.

ಎಲ್ಲವೂ ಅನುಭವಿಸಿಯೂ ತಾನು ಫಲಾನುಭವಿ ಅಲ್ಲವೇ ಅಲ್ಲ ಎನ್ನುವ ವೆಂಕಟರೆಡ್ಡಿಯನ್ನೂ ನೋಡುತ್ತಲೇ ನಮ್ಮೊಳಗಿನ ಆತ್ಮಸಾಕ್ಷಿ ಚುಟುಕುಮುಳ್ಳಾಡಿದರೆ ಅದು ಸಾರ್ಥಕತೆಯೇ. ಈ ಕಾದಂಬರಿಯು ನಮ್ಮ ಮುಖಕ್ಕೆ ಕನ್ನಡಿಯ ಹಾಗೆ ಹಿಡಿವ ಒಂದಷ್ಟು ಸಂಗತಿಗಳು ನಮ್ಮನ್ನು ಕಾಡಿಸುತ್ತದೆ ಎನ್ನುವುದು ನಿಜ.  ಇನ್ನು ಹೇಳಲೇ ಬೇಕಿರುವುದು ಶೈಲಿಯ ಬಗ್ಗೆ. ವಿವರಣೆಗಳೇ ಮೈದುಂಬಿದಂತಿರುವ, ಅಪರೂಪದ ವಿಸ್ತರಣೆಗಳಿರುವ ದೇಸೀಯವಾದ ಭಾಷೆ ಇವು ಕಾದಂಬರಿಯ ಉದ್ದಕ್ಕೂ ಕಾಣಸಿಗುತ್ತವೆ.

ಸಾವಿನ ಬಗ್ಗೆ ಇರುವ ವ್ಯಾಖ್ಯಾನಗಳನ್ನು ಅಲ್ಲಗಳೆಯುತ್ತಲೇ ಅದರ ಪ್ರಾಕೃತತ್ವವನ್ನು ಎತ್ತಿ ಹಿಡಿಯುವ ಕಾದಂಬರಿ ಇನ್ನೊಂದಿಷ್ಟು ಸ್ಪಷ್ಟವಾಗುವತ್ತ ಸಾಗಿದ್ದಿದ್ದರೆ ಮುಖ್ಯ ವಾಗ್ವಾದಗಳನ್ನು ಎತ್ತುತ್ತಿತ್ತು ಎನ್ನಿಸುತ್ತದೆ. ಇದು ಖಂಡಿತಾ ವಿಮರ್ಶೆ ಅಲ್ಲ. ಅಂತಿಮ ಮಾತುಗಳೂ ಅಲ್ಲ. ಈ ಕ್ಷಣಕ್ಕೆ ನನ್ನ ಓದಿಗೆ ದಕ್ಕಿದ ಕೆಲ ಮಾತುಗಳು ಅಷ್ಟೆ.

Leave a Reply