ನಿನ್ನ ತೋಳುಗಳ ಮೇಲೆ ಮದರಂಗಿ..

 

 

ರಾಜಶೇಖರ ಬಂಡೆ

 

 

 

 

ಬಾಚಿ ತಬ್ಬಲು ಬರುವ ನಿನ್ನ ತೋಳುಗಳ
ಮೇಲೆ ಮದರಂಗಿ ಬರೆದ ಆ ಕಲಾವಿದನಿಗೆ
ಉಡುಗೊರೆಯಾಗಿ ಏನನ್ನು ಕೊಡಲಿ

ಏನನ್ನು ಕೊಡುತ್ತೀಯ, ನಿನ್ನ ಅರ್ಧ ಬದುಕು..?
ನಿನ್ನದರ್ಧ ದೇಹ…? ನಿನ್ನದರ್ಧ ಕವಿತ್ವ..?

ಬದುಕು ದೇಹಗಳನ್ನ ಕೊಟ್ಟುಬಿಡಬಹುದು
ಅವು ನನ್ನವೆನಿಸಿದ ಘಳಿಗೆ ನನಗೆ ನೆನಪೇ ಇಲ್ಲ,

ಆದರೆ ಈ ಕವಿತ್ವವನ್ನ ಕೊಡುವ ಕಡುಪಾಪದ
ಕೆಲಸವನ್ನ ನಾನು ಮಾಡಲಾರೆ..!

ಹಾಗಾದರೆ ಹೀಗೆ ಮಾಡು..
ನಿನ್ನ ಚಂದದ ಕ್ಷಣಗಳನ್ನ ಕೊಟ್ಟುಬಿಡು…

ಮದರಂಗಿ ಬರೆವ ಆ ಸುಂದರ ಬದುಕಿಗೆ
ಈ ಚಂದದ ಕ್ಷಣಗಳ ಆಶೆಯೇ..?

ಕೊಡುವುದಾದರೆ ನಿನ್ನ ಹೃದಯವನ್ನ ಕೊಡು,
ನಿನ್ನ ಪ್ರೀತಿಯನ್ನ ಅವನಿಗೆ ಧಾರೆಯೆರೆದು ಬಾ

ಕೊಟ್ಟುಬಿಡಬಹುದೇ ಹಾಗೆ ಸಲೀಸಾಗಿ ಬಹುಕಾಲ ನೊಂದ
ಈ ಹೃದಯವನ್ನ, ಹೀಗೆ ಸಲೀಸಾಗಿ ಎದೆಯ ಹರಿದು..?

ಕೊಟ್ಟುಬಿಡಬಹುದೇ ಈ ಪ್ರೀತಿಯನ್ನ
ಬದಕಿನ ಕೊನೆಯ ಆಶೆಯಾಗಿ ಉಳಿದುದನ್ನ …?

ಬಿಡು ನೀನು ಲಂಪಟ, ಕೊಡುವ ನಾಟಕ
ಉದಾರತೆಯ ಸೋಗನ್ನ, ಬಿಡು ಈ ತೋಳುಗಳ …..ಮಗನೇ.

Leave a Reply