ರೀ, ಏನೂಂದ್ರೆ, ಟೀ ರೆಡಿ ಇದೆ..

 

 

 

ರೆಟ್ರೋ

ಚಿದಂಬರ ನರೇಂದ್ರ

 

 

ರೀ,
ಏನೂಂದ್ರೆ,
ಟೀ ರೆಡಿ ಇದೆ.
ಕುಡದ್ಬಿಟ್ಟು ಹೋಗ್ಬಾರ್ದೆ,

ಸರಸ್ವತಿ ಕೂಗಿದಾಗ,
ಭೂಮಿಯ ಜನರ
ಹಣೆಬರಹ ಬರೆಯುತ್ತಿದ್ದ‌ ಬ್ರಹ್ಮ,
ಪೆನ್ನು ಅಲ್ಲೇ ಬಿಟ್ಟು
ಒಳಗೆ ಓಡಿದ.

ಇದೇ ಅವಕಾಶ ಕಾದಿದ್ದ‌
ತುಂಟನೊಬ್ಬ,
ಬ್ರಹ್ಮನ‌ ಪೆನ್ನು ಎಗರಿಸಿ,
ತನ್ನ‌ ಹಣೆಬರಹ
ತಾನೇ ಬರೆದುಕೊಂಡ.

ಸಾವಿರಾರು ಜನರಿಗೆಂದು ಕಾಯ್ದಿಟ್ಟಿದ್ದ‌
ಕವಿತ್ವವನ್ನೆಲ್ಲ ತನ್ನ ಹೆಸರಿಗೆ
ತಾನೇ
ಸುರಿದುಕೊಂಡ.

ಮುಂದೇ ಅದೇ ಪೋರ
ಭೂಮಿಯ ಮೇಲೆ,
ಮಿರ್ಜಾ ಅಸದುಲ್ಲಾ ಖಾನ್ ಗಾಲಿಬ್
ಎಂಬ ಹೆಸರಿನಿಂದ
ನಮ್ಮ‌ ಎದೆಗಳನ್ನೆಲ್ಲ
ಕೊಳ್ಳೆ ಹೊಡೆದ.

1 comment

Leave a Reply