ನಾನು ಮತ್ತು ಹಫೀಜ಼್..

ಪಾವನಾ ಭೂಮಿ 

ಪ್ರತಿ ಬಾರಿ ಬೆಳಕನ್ನೇ ಕಾದುಕೂತವಳಿಗೆ
ಕತ್ತಲೂ ಭರವಸೆಯಾಗಬಹುದೆಂದೂ ತಿಳಿದಿರಲಿಲ್ಲ ಹಫೀಜ಼್.
ನೋಡು ಹಗಲು ನಕ್ಷತ್ರ ಇರುತ್ತದಾದರೂ..
ಹೊಳೆಯುವುದು
ಹಾದಿ ಸ್ಪಷ್ಟವಾಗುವುದು ಗಾಢಕತ್ತಲಲ್ಲೇ !!!
*
ಅವರಿವರು ಪ್ರೇಮದ ಬಗ್ಗೆ
ವ್ಯಾಖ್ಯಾನಿಸುವಾಗಲೆಲ್ಲಾ
ನನಗೆ ಬಹಳ ಗೊಂದಲವೆನಿಸುತ್ತೆ
ಹಫೀಜ಼್…
ಕಡಲತೆರೆಗಳು ಕ್ಷಣಕ್ಷಣಕ್ಕೂ
ಮುತ್ತಿಕ್ಕುವುದು ದಡಕ್ಕೇ ಆದರೂ
ಗುಟ್ಟಿನ ಒಲವು ಮಾತ್ರ ಚಂದ್ರನೊಟ್ಟಿಗೆ !!!
*
ಬದುಕು ಬಯಲಿನ ಬಗಲಿಗೆ ಬಿದ್ದಾಗಲಷ್ಟೇ
ಅರಿವಾಗಿದ್ದು ಹಫೀಜ಼್
ಲೋಕದಲ್ಲಿ ಎಲ್ಲ ಅಮಲಿಗಿಂತ
ಒಳ್ಳೆತನದ ಅಮಲು ಅಪಾಯಕಾರಿಯೆಂದು !!!
*
ಬದುಕಿನ ದೋಣಿಯಲ್ಲಿ ಪ್ರಯಾಣಿಸುವಾಗ
ಪ್ರೀತಿಯೇ ದಾರಿ ನಕ್ಷತ್ರ ಎಂಬ ಭ್ರಮೆಗೆ
ಬೀಳುವುದೇ ಹೆಚ್ಚು ಹಫೀಜ಼್…
ನನಗೆ ಪ್ರೀತಿ ಹುಟ್ಟುಗೋಲಾದರೆ
ಸಾಕು !!!

Leave a Reply