ನಮೀಬಿಯನ್ ನೀರೆಯರ ಜೊತೆ..

ಅಂದು ನನ್ನ ಪಾಡಿಗೆ ನಾನು ತಿನ್ನುವುದರಲ್ಲೇ ಮಗ್ನನಾಗಿದ್ದರೂ ಮೂರು ಜೋಡಿ ಕಣ್ಣುಗಳು ನನ್ನನ್ನೇ ಅಳೆಯುತ್ತಿರುವಂತೆ ಭಾಸವಾಗಿ ಎಂಥದ್ದೋ ಹಿಂಜರಿಕೆಯಾದಂತಾಗಿ ನಾನು ಕೂತಲ್ಲೇ ಕೊಸರಾಡುತ್ತಿದ್ದೆ.

ಅಷ್ಟಕ್ಕೂ ಆಗಿದ್ದೇನೆಂದರೆ ರೆಸ್ಟೊರೆಂಟಿನ ಒಂದು ಬದಿಯಲ್ಲಿ ಏಕಾಂಗಿಯಾಗಿ ಊಟ ಮಾಡುತ್ತಿದ್ದ ನನ್ನನ್ನು ಮೂವರು ಆಫ್ರಿಕನ್ ತರುಣಿಯರು ಸುಮ್ಮನೆ ನೋಡುತ್ತಿದ್ದರು. ನನ್ನನ್ನು ಅಗಾಗ ಕದ್ದುಮುಚ್ಚಿ ನೋಡುತ್ತಾ, ಮುಸಿಮುಸಿನಗುತ್ತಿದ್ದ ಅವರನ್ನು ಕಂಡು ನಾನು ನಗುವಂಥದ್ದೇನಾಯಿತಪ್ಪಾ ಎಂದು ಕೂಡಲೇ ಒಂದು ತ್ವರಿತ ಸ್ವಪರೀಕ್ಷೆಯನ್ನು ಮಾಡಿಕೊಂಡೆ. ಹಿಪ್ಪಿಯಂತೆ ತೆಳು ಟೀ-ಶರ್ಟು ಮತ್ತು ಬರ್ಮುಡಾವನ್ನು ಧರಿಸಿದ್ದ ನನ್ನ ದಿರಿಸು ಸರಿಯಾಗಿಯೇ ಇತ್ತು. ಎಡಗೈಯಲ್ಲಿ fork ಇದ್ದರೆ ಬಲಗೈಯಲ್ಲಿ butter knife ಇತ್ತು. ಭಾರತವನ್ನು ಬಿಟ್ಟು ಅಂಗೋಲಾಕ್ಕೆ ಬಂದಾದ ನಂತರ ಇವುಗಳನ್ನೆಲ್ಲಾ ಬಳಸುವುದನ್ನು ಬಹುಬೇಗನೇ ನಾನು ಕಲಿತುಕೊಂಡಿದ್ದೆ. ಒಟ್ಟಾರೆಯಾಗಿ fork ಮತ್ತು ಚಾಕು ಇರಬೇಕಾದ ಕೈಗಳಲ್ಲೇ ಇದ್ದವು. ಕೊನೆಗೂ ಅದೇನೆಂದು ತಿಳಿಯದೆ ಕುಳಿತಲ್ಲಿಂದಲೇ ಈ ಮೂವರು ಆಫ್ರಿಕನ್ ಸುಂದರಿಯರಿಗೆ ‘ಹಾಯ್’ ಎಂದು ಮುಗುಳ್ನಗುತ್ತಾ ಕೈಬೀಸಿದೆ. ಇವರೆಲ್ಲರೂ ನನ್ನ ಈ ಹೆಜ್ಜೆಗಾಗಿಯೇ ಕಾಯುತ್ತಿದ್ದಂತೆ ಒಬ್ಬಳು ತಕ್ಷಣ ದೊಡ್ಡ ದನಿಯಲ್ಲಿ ಮಾತನಾಡಲಾರಂಭಿಸಿದಳು.

”ಮೂವರು ಬೆಡಗಿಯರು ಕಣ್ಣೆದುರಿಗೇ ಕುಳಿತುಕೊಂಡಿರುವಾಗ ಏಕಾಂಗಿಯಾಗಿ ಕುಳಿತು ಯಾಕೆ ತಿನ್ನುತ್ತಿದ್ದೀಯಾ?”, ಎಂದು ಅರ್ಧಬಂರ್ಧ ಇಂಗ್ಲಿಷ್ ನಲ್ಲಿ ಒಬ್ಬಾಕೆ ಹೇಳಿದಳು. ಆಕೆಯ ಮಾತಿಗೆ ಜೋರಾಗಿ ನಕ್ಕ ನಾನು ಆ ಆಹ್ವಾನಕ್ಕೆ ಒಪ್ಪಿಗೆಯನ್ನು ನೀಡುತ್ತಾ ನನ್ನ ಕುರ್ಚಿಯನ್ನು ಬಿಟ್ಟು ಅವರಿದ್ದಲ್ಲಿಗೆ ಬಂದೆ. ”ಸಂಭಾಷಣೆಯನ್ನು ಆರಂಭಿಸಲು ಇದಕ್ಕಿಂತ ಸ್ವಾರಸ್ಯಕರವಾದ ವಾಕ್ಯವೊಂದನ್ನು ನಾನು ಈ ಮೊದಲು ಕೇಳಿಯೇ ಇಲ್ಲ ಗೊತ್ತಾ”, ಎಂದು ನಗುತ್ತಾ ಅವರಿಗೆ ಹೇಳಿದೆ. ಶುಭ್ರನಗುವಿನಿಂದ ವಾತಾವರಣವು ಮತ್ತಷ್ಟು ತಿಳಿಯಾಗಿ ಮುಂದಿನ ಕೆಲ ನಿಮಿಷಗಳಲ್ಲೇ ಪರಿಚಯಗಳಾದವು. ಗೊತ್ತಿದ್ದಷ್ಟು ಹರಕುಮುರುಕು ಭಾಷೆಯಲ್ಲಿ ಒಂದಿಷ್ಟು ಮಾತುಕತೆಗಳಾದವು. ಮೀನು, ಕೋಳಿ, ಅನ್ನ, ಸಲಾಡ್ ಗಳನ್ನು ಹೊಂದಿದ್ದ ಪುಷ್ಕಳ ಭೋಜನವೂ ಬಂದಿತು. ವೈನ್ ಗ್ಲಾಸುಗಳು ಸದ್ದುಮಾಡಿದವು.

ಇನ್ನು ಜಾಗತಿಕ ತಾಪಮಾನ ಏರಿಕೆಯ ಲೆವೆಲ್ಲಿನಲ್ಲಿ ಅಂದು ನಮ್ಮ ಮಧ್ಯೆ ಚರ್ಚೆಯಾಗಿದ್ದು ನನ್ನ ಹೆಸರಿನ ಬಗ್ಗೆ. ‘ಪ್ರಸಾದ್’ ಎಂಬ ಹೆಸರು ಆಫ್ರಿಕನ್ ನಾಲಗೆಗೆ ಹೊರಳದಿರುವುದು ನನಗೆ ನಿರೀಕ್ಷಿತವೇ ಆಗಿತ್ತು. ಭಾರತದಲ್ಲಿದ್ದಾಗಲೇ ನನ್ನ ಹೆಸರು ಹಲವು ಅವತಾರಗಳನ್ನೆತ್ತಿ ವಿಶಿಷ್ಟ ಅನ್ನಿಸಿಕೊಂಡಿತ್ತು. ನಾನು ಪಂಜಾಬಿನಲ್ಲಿ ‘ಪರ್ಸಾದ್’ ಆದರೆ, ಉತ್ತರಭಾರತದ ಇತರ ಭಾಗಗಳಲ್ಲಿ ‘ಪ್ರಶಾದ್’ ಆಗುತ್ತಿದ್ದೆ. ಇನ್ನು ಪಶ್ಚಿಮಬಂಗಾಳದ ಪರಿಚಿತರಿಗಂತೂ ನಾನು ‘ಪ್ರೊಷಾದ್’ ಆಗಿದ್ದೆ. ಹೀಗಿದ್ದಾಗ ಆಫ್ರಿಕಾದಲ್ಲೂ ಮರುನಾಮಕರಣಗೊಳ್ಳಲಿರುವುದು ಸಹಜವೇ ಆಗಿತ್ತು. ‘ನಾಯ್ಕ್’ ಎಂಬುದು ‘ನೈಕ್’ ಎಂಬ ಕಂಪೆನಿಯ ಹೆಸರಿನಂತೆ ಕೇಳತೊಡಗಿದಾಗ ಕೊನೆಗೆ ನಾನು ‘ನಿಕ್’ ಆಗಬೇಕಾಯಿತು. ‘ನಿಕ್’ ಎಂದಾಕ್ಷಣ ನನಗೆ ಥಟ್ಟನೆ ನೆನಪಾಗುವುದು ‘Basic Instinct’ ಚಿತ್ರದ ನಾಯಕನಟ ಮೈಕಲ್ ಡಗ್ಲಾಸ್. ನಾನು ಮೈಕಲ್ ಡಗ್ಲಾಸ್ ನ ತಕ್ಕಮಟ್ಟಿನ ಅಭಿಮಾನಿಯೂ ಆಗಿರುವುದರಿಂದ ‘ನಿಕ್’ ಎಂಬ ಸರಳ ಅಮೆರಿಕನ್ ನಾಮಧೇಯವನ್ನು ಎರವಲು ಪಡೆಯಲು ಕಷ್ಟವೇನೂ ಆಗಲಿಲ್ಲ. ಅಂದಿನಿಂದ ನಾನು ಅಂಗೋಲನ್ನರಿಗೆ ‘ನಿಕ್’ ಆಗಿಬಿಟ್ಟಿದ್ದೆ.

 

ಅಂದಹಾಗೆ ಈ ಮೂವರು ಸುಂದರಿಯರು ನಮೀಬಿಯಾ ಮೂಲದವರಾಗಿದ್ದರು. ಮಾತುಕತೆಯ ಮಧ್ಯದಲ್ಲೇ ನಾನು ಪಕ್ಕದಲ್ಲಿರುವ ಅಪಾರ್ಟ್‍ಮೆಂಟ್ ಒಂದರಲ್ಲಿ ತಂಗಿದ್ದೇನೆ ಎಂಬ ಮಾಹಿತಿಯು ಅವರಿಗೆ ನನ್ನಿಂದಲೇ ದೊರಕಿತು. ನೀವು ಬನ್ನಿ ಎನ್ನುವ ಮುನ್ನವೇ ಎಲ್ಲರೂ ತಮ್ಮನ್ನು ತಾವೇ ಆಹ್ವಾನಿಸಿಕೊಂಡು ನಡೀರಿ ಹೋಗೋಣ ಎಂದರು. ಹೀಗೆ ನಮ್ಮ ಸವಾರಿಯು ರೆಸ್ಟೊರೆಂಟಿನಿಂದ ನನ್ನ ಖಾಸಗಿ ಅಪಾರ್ಟ್‍ಮೆಂಟಿನತ್ತ ಸಾಗಿತು. ರೆಡ್ ವೈನ್ ನ ಸಖ್ಯದಲ್ಲೇ ಒಂದೆರಡು ಘಂಟೆಗಳ ಕಾಲ ಭಯಂಕರ ಹರಟೆ ಹೊಡೆದೆವು. ಇದ್ದ ಒಂದಿಷ್ಟು ಜಾಗದಲ್ಲೇ ಹಾಡು, ಸಂಗೀತ, ಸಾಲ್ಸಾಗಳಾದವು. ಕೊನೆಗೆ ಮೂವರನ್ನೂ ಬೀಳ್ಕೊಟ್ಟಾಗ ಸುಮಾರು ರಾತ್ರಿಯ ಹನ್ನೊಂದು. ತನ್ನ ವಸತಿಗೃಹದಲ್ಲಿ ಒಬ್ಬ ಭಾರತೀಯ ತರುಣನನ್ನು ಮೂವರು ನಮೀಬಿಯನ್ ಸುಂದರಿಯರ ನಡುವೆ ಪ್ರಾಯಶಃ ಇದೇ ಮೊದಲ ಬಾರಿ ಕಂಡ receptionist ನನ್ನನ್ನು ನೋಡಿ ಕಣ್ಣು ಮಿಟುಕಿಸಿದ್ದ. `ನೀನು ಹೆಚ್ಚು ಕನಸು ಕಾಣಬೇಡ ಮಾರಾಯ’, ಎಂದು ನಾನು ಕಣ್ಣಲ್ಲೇ ಅವನ ಬಾಯಿಮುಚ್ಚಿಸಿದ್ದೆ.

ನಂತರ ಇವರೆಲ್ಲರನ್ನೂ ಬೀಳ್ಕೊಟ್ಟು ಮರಳಿ ಬಂದರೆ ತಕ್ಷಣ ತಲೆಯೊಳಗೊಂದು ಹುಳ ಬಿಟ್ಟಂತಾಗಿತ್ತು. ನಾನು ಆ ವಸತಿಗೃಹದಲ್ಲಿ ಅತಿಥಿಯಾಗಿ ತಂಗಿದ್ದರಿಂದ ಆಗಂತುಕರು ಹೀಗೆ ಹೇಳದೆಕೇಳದೆ ಬರಬಹುದೇ ಎಂದು. ಕೂಡಲೇ ದುಭಾಷಿಗೊಂದು ಕರೆಕೊಟ್ಟೆ. ”ನೀವು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡಿ. ಖಾಸಗಿತನಕ್ಕೆ ತುಂಬಾ ಗೌರವವಿದೆ ಇಲ್ಲಿ. ನಿಮ್ಮ ಕೋಣೆಯಲ್ಲಿ ನೀವೇನು ಮಾಡಿದರೂ ಯಾರೂ ಏನೂ ಕೇಳುವಂತಿಲ್ಲ. ಆರಾಮಾಗಿರಿ”, ಎಂದ. ನನಗೋ ಸಮಾಧಾನವಾಯಿತು. ತಡಮಾಡದೆ ನಿರಾಳನಾಗಿಬಿಟ್ಟೆ.

ಮರುದಿನ ಮೂವರಲ್ಲೊಬ್ಬಳಾದ ಎಮಿಲಿ ಕರೆ ಮಾಡಿದಳು. ಈ ಮೂವರಲ್ಲಿ ಶುದ್ಧ ಇಂಗ್ಲಿಷ್ ನಲ್ಲಿ ಮಾತಾಡಬಲ್ಲವಳು ಎಮಿಲಿ ಒಬ್ಬಳೇ ಆಗಿದ್ದಳು. ಆರಡಿ ಎತ್ತರದ ನಿಲುವನ್ನು ಹೊಂದಿದ್ದ ಈ ಕೃಷ್ಣವರ್ಣೆಗೆ ತನ್ನ ಎತ್ತರ ಮತ್ತು ಲಾವಣ್ಯದ ಬಗ್ಗೆ ಭಾರೀ ಹೆಮ್ಮೆಯಿತ್ತು. ತನ್ನ heels ಕಿತ್ತೊಗೆದು ನನ್ನ ಆರಡಿ ಎತ್ತರಕ್ಕೆ ಸರಿಗಾಣುವಂತೆ ಭುಜಕ್ಕಂಟಿಕೊಂಡು ನಿಲ್ಲುತ್ತಾ, ”ಎತ್ತರ ಅಂದರೆ ಹೀಗಿರಬೇಕು” ಎಂದು ಉಳಿದಿಬ್ಬರಿಗೆ ಹೇಳುತ್ತಾ ಅವರ ಕಾಲೆಳೆಯುತ್ತಿದ್ದಳು ಎಮಿಲಿ. ಹಿಂದಿನ ರಾತ್ರಿ ಹೊರಡುವ ಮುನ್ನ ನನ್ನ ದೂರವಾಣಿ ಸಂಖ್ಯೆಯನ್ನು ಆಕೆ ತೆಗೆದುಕೊಂಡಿದ್ದರಿಂದ ಕರೆ ಬರುವುದು ಬಹುತೇಕ ನಿಶ್ಚಯವೇ ಆಗಿತ್ತು. ಅಂದು ಮಾತನಾಡುತ್ತಾ ”ಮಾರ್ಜಿನಲ್ ಗೆ ಹೋಗೋಣವೇ” ಎಂದಳು ಎಮಿಲಿ. ನಾನು ಹೂಂ ಎಂದು ಒಪ್ಪಿಕೊಂಡೆ.

ಮಾರ್ಜಿನಲ್ ಸ್ಟ್ರೀಟ್ ಎಂದು ಕರೆಯಲಾಗುವ ಜಾಗವು ಲುವಾಂಡಾದ ಅತ್ಯಂತ ಸುಂದರ ತಾಣಗಳಲ್ಲೊಂದು. ಇದೊಂಥರಾ ಮುಂಬೈಯಲ್ಲಿರುವ ಮರೀನ್ ಡ್ರೈವ್ ಇದ್ದ ಹಾಗೇನೇ. ಸಂಜೆಯ ತಂಗಾಳಿಯನ್ನು ರೋಮರೋಮಗಳಲ್ಲಿ ಆಸ್ವಾದಿಸುತ್ತಾ, ಸೂರ್ಯಾಸ್ತದ ಕೆಂಪನ್ನು ಕಣ್ಣಲ್ಲಿ ಇಳಿಸಿಕೊಳ್ಳುತ್ತಾ ಅಟ್ಲಾಂಟಿಕ್ ತೀರದಲ್ಲಿ ಕುಳಿತುಕೊಳ್ಳುವ ಮೋಜೇ ಬೇರೆ. ಮೇಲಾಗಿ ಲುವಾಂಡಾದ ಈ ಸಮುದ್ರತೀರವು ಒಂದೊಂದು ಭಾಗದಲ್ಲಿ ಒಂದೊಂದು ಬಗೆಯ ಚಟುವಟಿಕೆಗಳನ್ನು ಹೊಂದಿ ಸದಾಕಾಲ ಲವಲವಿಕೆಯಿಂದಿರುವಂತಹ ಪ್ರದೇಶ. ಉದಾಹರಣೆಗೆ ತೀರದ ಒಂದು ಭಾಗದಲ್ಲಿ ಚಿಕ್ಕ ಪುಟ್ಟ ಕಲಾತ್ಮಕ ಶೈಲಿಯ ಕಟ್ಟಡಗಳಂತಹ ರಚನೆಗಳಿದ್ದು ಪುಸ್ತಕ ಬಿಡುಗಡೆ, ಪ್ರದರ್ಶನದಂತಹ ಕಾರ್ಯಕ್ರಮಗಳಿಗೆ ಇವುಗಳು ಹೇಳಿ ಮಾಡಿಸಿದಂತಿವೆ.

 

ಇಲ್ಲಿ ಕುಳಿತುಕೊಳ್ಳಲು ಬೆಂಚಿನಂತಹ ಜಾಗಗಳಿರುವುದಲ್ಲದೆ ವಾಕಿಂಗ್ ಮತ್ತು ಸೈಕ್ಲಿಂಗ್ ಗಳಿಗಾಗಿ ಪ್ರತ್ಯೇಕ ಟ್ರ್ಯಾಕ್ ಗಳಿವೆ. ಅಂದರೆ ನಿಮಗೆ ಲುವಾಂಡಾದಲ್ಲಿ ಅಟ್ಲಾಂಟಿಕ್ ಸಮುದ್ರ ತೀರದುದ್ದಕ್ಕೂ ಹಾಯಾಗಿ ಸೈಕ್ಲಿಂಗ್ ಮಾಡಬೇಕಿದ್ದರೆ ಇದಕ್ಕಿಂತ ಪ್ರಶಸ್ತವಾದ ಜಾಗವು ಇನ್ನೊಂದಿಲ್ಲ. ನ್ಯಾಷನಲ್ ಬ್ಯಾಂಕ್ ಆಫ್ ಅಂಗೋಲಾದಿಂದ ಹಿಡಿದು ಹಲವು ಪ್ರಮುಖ ಸರಕಾರಿ ಮಂತ್ರಾಲಯಗಳಿಗೆ ಇದು ಹತ್ತಿರವೂ ಕೂಡ. ಮಾರ್ಜಿನಲ್ ಸ್ಟ್ರೀಟ್ ನಿಂದ ವರದಿ ಮಾಡುವ ಬಹಳಷ್ಟು ಟಿ.ವಿ ವರದಿಗಾರರು ಕ್ಯಾಮೆರಾದೆದುರು ಕಾಣಿಸಿಕೊಳ್ಳಲು ಆರಿಸುವ ಮಾರ್ಜಿನಲ್ ನ ಬಹು ಆಕರ್ಷಣೀಯ ಜಾಗವು ಇದೇ.

ಇಲ್ಲಿಂದ ಸ್ವಲ್ಪ ಮುಂದಕ್ಕೆ ಹೋದರೆ ಸಮುದ್ರತೀರದ ಕೃತಕ ವೈಭವದ ಚಿತ್ರಣವು ಕೊಂಚ ಬದಲಾಗಿ ಸ್ಥಳೀಯ ಜನಜೀವನದ ಜೀವಂತಿಕೆಯು ಮೈತಾಳಿ ಮನಸ್ಸಿಗೆ ಮತ್ತಷ್ಟು ಆಪ್ತವಾಗುತ್ತದೆ. ಇಲ್ಲಿ ಜನರು ಫುಟ್ಬಾಲ್ ಅನ್ನೋ, ಬೀಚ್ ವಾಲಿಬಾಲ್ ಅನ್ನೋ ಆಡುತ್ತಿರುತ್ತಾರೆ. ಪ್ರೇಮಿಗಳು ಕೈಕೈ ಹಿಡಿದುಕೊಂಡು, ಚಿಕ್ಕ ಮೂಲೆಯೊಂದು ಸಿಕ್ಕರೆ ಗಾಢವಾಗಿ ಚುಂಬಿಸುತ್ತಾ ಜಗತ್ತನ್ನೇ ಮರೆತವರಂತೆ ಕಾಲಕಳೆಯುತ್ತಿದ್ದಾರೆ. ಇವರ ನಡುವೆಯೇ ರನ್ನಿಂಗ್ ಶೂ ಗಳನ್ನು ಧರಿಸಿ ಜಾಗಿಂಗ್ ಮಾಡುವವರು, ಬಿಕಿನಿಯನ್ನು ಧರಿಸಿ ಸಮುದ್ರಕ್ಕಿಳಿಯುವ ಆತುರದಲ್ಲಿರುವವರು, ತಲೆಯ ಮೇಲೆ ಹುಡ್ ಅನ್ನು ಧರಿಸಿ ಹಿಪ್-ಹಾಪ್ ಶೈಲಿಯಲ್ಲಿ ತಮ್ಮದೇ ಗುಂಗಿನಲ್ಲಿ ಕುಣಿಯುತ್ತಿರುವವರು, ವಿದೇಶೀ ಗಂಡಸರನ್ನು ಕಣ್ಣಲ್ಲೇ ಅಳೆದು ಮೆತ್ತನೆ ಚುಡಾಯಿಸಿ ಮೋಜು ನೋಡುವ ಸ್ಥಳೀಯ ಹೆಣ್ಣುಮಕ್ಕಳು, ರಸ್ತೆಗೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಮೈಮರೆತು ಆಡುತ್ತಿರುವ ಮಕ್ಕಳು, ಅಂಗೋಲಾದ ಜನಪ್ರಿಯ ಬಿಯರ್ ಆದ ‘ಕೂಕಾ’ ಹೀರುತ್ತಾ ಲೋಕಾಭಿರಾಮದ ಮಾತಿನಲ್ಲಿ ಮುಳುಗಿರುವ ಮಧ್ಯವಯಸ್ಕ ಪುರುಷರು… ಹೀಗೆ ಮಾರ್ಜಿನಲ್ ಬೀದಿಯ ಮತ್ತೊಂದು ಭಾಗವು ತನ್ನದೇ ಆದ ಒಂದು ವಿಶಿಷ್ಟತೆಯಿಂದ ನಳನಳಿಸುತ್ತಿರುತ್ತದೆ.

ಇವೆಲ್ಲವನ್ನೂ ದಾಟಿ ಇನ್ನೂ ಕೊಂಚ ಮುಂದಕ್ಕೆ ಹೋಗಿಬಿಡಿ ನೀವು. ತಳ್ಳುವ ಗಾಡಿಗಳ ತಿಂಡಿತಿನಿಸುಗಳಿಂದ ಹಿಡಿದು ಒಳ್ಳೆಯ ರೆಸ್ಟೊರೆಂಟುಗಳು ನಿಮಗಿಲ್ಲಿ ಕಾಣಸಿಗುತ್ತವೆ. ಸಾಮಾನ್ಯವಾಗಿ ಸಮುದ್ರ ತೀರದ ಮರಳಿಗೆ ಹೊಂದಿಕೊಂಡಂತೆಯೇ ಇರುವ ಈ ರೆಸ್ಟೊರೆಂಟ್ ಗಳು ಒಳ್ಳೆಯ ಗುಣಮಟ್ಟದ ಆಹಾರವನ್ನು ಮತ್ತು ತಕ್ಕಮಟ್ಟಿನ ಬೆಲೆಯನ್ನು ಹೊಂದಿರುವಂಥವುಗಳು. ಇನ್ನು ಸಮುದ್ರತೀರದಿಂದ ಮುಖ್ಯ ರಸ್ತೆಯವರೆಗೆ ನಡೆದರೆ ಅಲ್ಲಿ ಡಿಸ್ಕೋಥೆಕ್, ಪಬ್, ಬಾರ್ ಗಳನ್ನು ಹೊಂದಿರುವ ದುಬಾರಿ, ವಿಲಾಸಿ ರೆಸ್ಟೊರೆಂಟುಗಳನ್ನು ಕಾಣಬಹುದು. ಇಂಥಾ ಜಾಗಗಳಿಗೆ ಒಂದೆರಡು ಬಾರಿ ಹೋಗಿ ನೋಡಬಹುದಾದರೂ ನಿರಂತರವಾಗಿ ಹೋದರೆ ಜೇಬಿಗೆ ಭಾರೀ ಹೊಡೆತ ಬೀಳುವುದು ಸಹಜ. ಏಕೆಂದರೆ ಅಟ್ಲಾಂಟಿಕ್ ಸಮುದ್ರ ತೀರದಲ್ಲಿ ಬಂದರನ್ನೂ ಕೂಡ ಹೊಂದಿರುವ ಲುವಾಂಡಾ ಮಹಾನಗರಿಯು ಜಗತ್ತಿನ ಅತ್ಯಂತ ದುಬಾರಿ ಶಹರಗಳಲ್ಲೊಂದು ಎಂಬುದು ನೆನಪಿರಲಿ.

ಹೀಗೆ ನಮ್ಮ ಜೇಬಿಗೆ ಸರಿಹೊಂದುವಂತಹ ಸಮುದ್ರತೀರದ ರೆಸ್ಟೊರೆಂಟ್ ಒಳಹೋದ ನಾವು ಮೂಲೆಯೊಂದರಲ್ಲಿ ಕೂತೆವು. ಒಂದು ಭಾಗದಲ್ಲಿ ಅಳವಡಿಸಲಾಗಿದ್ದ ಟೆಲಿವಿಷನ್ನಿನಲ್ಲಿ ಯಾವುದೋ ಫುಟ್ಬಾಲ್ ಪಂದ್ಯವೊಂದು ನಡೆಯುತ್ತಿತ್ತು. ರೆಸ್ಟೊರೆಂಟಿಗೆ ಬಂದವರಲ್ಲಿ ನನ್ನನ್ನೊಬ್ಬನನ್ನು ಬಿಟ್ಟು ಉಳಿದವರ ಗಮನವೆಲ್ಲಾ ಎದುರಿಗಿದ್ದ ತಟ್ಟೆಯನ್ನು ಬಿಟ್ಟು ಟಿ.ವಿ ಪರದೆಗೇ ಅಂಟಿಕೊಂಡಿತ್ತು. ಮಾತುಮಾತಲ್ಲೇ ನಾವು ಸ್ಟೀಕ್, ಮೀನು, ಅನ್ನ, ಸಲಾಡ್ ಮತ್ತು ಜ್ಯೂಸ್ ಗಳನ್ನು ತರಿಸಿಕೊಂಡೆವು. ಇದರ ನಂತರ ತರಿಸಿಕೊಂಡ ಆಮ್ಲೆಟ್ ಸಹಿತದ ಮತ್ಯಾವುದೋ ಸ್ಥಳೀಯ ಖಾದ್ಯವೊಂದು ಎಮಿಲಿಗೆ ಇಷ್ಟವಾಗಲಿಲ್ಲ. ”ಇವ್ರಿಗೆ ಮಾಡ್ತೀನಿ ಇರು”, ಅಂದವಳೇ ಹೋಟೇಲಿನ ಸಿಬ್ಬಂದಿಯೊಬ್ಬರನ್ನು ಕರೆದು ಇದು ಚೆನ್ನಾಗಿಲ್ಲ ಎಂದು ದೂರಿತ್ತಳು.

ಅವನೂ ಕೂಡ ಏನೋ ಒಂದಿಷ್ಟು ಅರ್ಥವಾದವನಂತೆ ತಲೆಯಾಡಿಸಿದ. ನಂತರ ಆ ಒಂದು ಖಾದ್ಯವನ್ನು ಬಿಟ್ಟು ಬೇರೆಲ್ಲವನ್ನೂ ಮುಗಿಸಿ ನಾವು ಹೊರಬಂದೆವು. ಇನ್ನೇನು ಬಿಲ್ ಪಾವತಿಸಿ ಹೊರಡಬೇಕು ಅನ್ನುವಷ್ಟರಲ್ಲಿ ”ನನಗದು ಇಷ್ಟವಾಗಲಿಲ್ಲ, ನಾನದಕ್ಕೆ ಹಣ ಕೊಡುವುದಿಲ್ಲ”, ಎಂದಳು ಎಮಿಲಿ. ಇದನ್ನು ಈಗಲಾ ಹೇಳುವುದು ಎಂದು ಹುಬ್ಬೇರಿಸುತ್ತಾ ಕಣ್ಣಲ್ಲೇ ಅವಳಿಗೆ ಕೇಳಿದೆ. ಅವಳೋ ಸುಮ್ಮನೆ ತುಟಿಯನ್ನು ಬಿಲ್ಲಿನಂತೆ ಬಾಗಿಸಿ, ಭುಜವನ್ನು ಎತ್ತರಿಸಿ ಕಿವಿಯವರೆಗೆ ತಂದಳು. ಬಾರೇ ಹೋಗೋಣ ಎಂದು ನಾನು ಹೇಳಿದರೂ ಕೇಳಲಿಲ್ಲ ಈ ಪುಣ್ಯಾತಗಿತ್ತಿ. ಇದಾದ ನಂತರ ಈ ಬಗ್ಗೆ ಹೋಟೇಲ್ ಮಾಲಕಿಯೊಂದಿಗೆ ಎಮಿಲಿಯ ಬಿರುಸಿನ ಚರ್ಚೆ ಸುಮಾರು ಹದಿನೈದು ನಿಮಿಷಗಳ ಕಾಲ ನಡೆಯಿತು. ಕೊನೆಗೂ ಗೆದ್ದಿದ್ದು ಎಮಿಲಿಯೇ. ಬಿಲ್ ನ ಮೊತ್ತವು ಏಕಾಏಕಿ ಅರ್ಧಕ್ಕಿಳಿದಿತ್ತು. ನಾನು `ಹೀಗೂ ಉಂಟೇ?’ ಎಂಬ ಅಚ್ಚರಿಯಲ್ಲಿ ಎಮಿಲಿಯತ್ತ ನೋಡುತ್ತಿದ್ದೆ.

ಅಲ್ಲಿಂದ ಹೊರಟು ತಮ್ಮ ತಮ್ಮ ಗೂಡು ಸೇರಿದ ನಾವಿಬ್ಬರೂ ಮರುದಿನ ಅಂಗೋಲಾದ ಪ್ರಥಮ ರಾಷ್ಟ್ರಪತಿಯಾಗಿದ್ದ ದಿವಂಗತ ಆಗಸ್ಟಿನೋ ನೇಟೋರ ಸ್ಮಾರಕ ಮತ್ತು ವಸ್ತುಸಂಗ್ರಹಾಲಯಕ್ಕೆ ಹೋದೆವು. ಈ ಜಾಗವು ಎಮಿಲಿಗೆ ನೀರಸವೆನಿಸಿದ ಕಾರಣ ಅಂಗೋಲನ್ ಇತಿಹಾಸದ ಬಗ್ಗೆ ಮಾಹಿತಿಯನ್ನು ಕೆದಕುವ ನನ್ನ ಪ್ರಯತ್ನಗಳಿಗೂ ಕಲ್ಲುಬಿದ್ದಿತು. ಕೊನೆಗೂ ಅಲ್ಲಿಂದ ನಾವು ಹೊರಟು ಮರಳಿ ನನ್ನ ವಸತಿಗೃಹವನ್ನು ಸೇರಿದಾಗ ಸಂಜೆಯ ಐದು. ಅಟ್ಲಾಂಟಿಕ್ ಸಮುದ್ರತೀರದಲ್ಲಿ ಕುಳಿತು ಹರಟೆ ಹೊಡೆಯುತ್ತಾ ”ನಾನು ಕೆಲವೇ ವಾರಗಳಲ್ಲಿ ನಮೀಬಿಯಾಕ್ಕೆ ಮರಳಲಿದ್ದೇನೆ. ಹಾಗೇನಾದರೂ ಹೋಗಿದ್ದೇ ಆದರೆ ನಾವಿನ್ನೆಂದೂ ಭೇಟಿಯಾಗೋದಿಲ್ಲ ಗೊತ್ತಾ?”, ಎಂದಳು ಎಮಿಲಿ. ಅವಳ ಮಾತಿಗೆ ಗೊತ್ತು ಎಂಬಂತೆ ತಲೆಯಾಡಿಸುತ್ತಾ ಮುಗುಳ್ನಕ್ಕೆ ನಾನು. ”ಆಗಂತುಕನೊಬ್ಬನನ್ನು ಅಂದೇ ಭೇಟಿಯಾಗಿ, ಅಂದೇ ಇಷ್ಟಪಟ್ಟು, ಅಂದೇ ವಿದಾಯ ಹೇಳುವ ಸಂದರ್ಭವೊಂದು ನಿನ್ನ ಜೀವನದಲ್ಲೆಂದಾದರೂ ಬಂದಿದೆಯಾ?”, ಎಂದು ಎರಡನೇ ಪ್ರಶ್ನೆಯನ್ನು ಕೇಳಿದಳು ಆಕೆ. ಇದಕ್ಕೂ ನಾನು ಹೂಂ ಎಂದೆ.

ಇವುಗಳು ಮೇಲ್ನೋಟಕ್ಕೆ ತೀರಾ ಕಾಲ್ಪನಿಕ ಅನ್ನಿಸಿದರೂ ನಿಜಕ್ಕೂ ಅಂಥಾ ಬೆರಳೆಣಿಕೆಯ ಅನುಭವಗಳು ನನಗೆ ಈ ಹಿಂದೆ ಆಗಿದ್ದವು. ”ಹೀಗಾಗಿಯೇ ಈ ಸುಂದರ ಕ್ಷಣಗಳು ನನಗೂ ನಿನಗೂ ಬಹಳ ಕಾಲ ನೆನಪಿನಲ್ಲುಳಿಯಲಿವೆ ನೋಡು”, ಎಂದು ಆಶಾವಾದಿಯಂತೆ ಹೇಳಿದೆ ನಾನು. ಸೂರ್ಯ ತನ್ನ ದಿನದ ಪಾಳಿಯನ್ನು ಮುಗಿಸಿ ಮೆಲ್ಲಗೆ ಅಸ್ತಂಗತನಾಗುತ್ತಿದ್ದ. ಹಕ್ಕಿಗಳು ತಮ್ಮ ತಮ್ಮ ಗೂಡಿಗೆ ಹಿಂತಿರುಗುತ್ತಿದ್ದವು. ಅದ್ಯಾಕೋ ಅದುವೇ ನಮ್ಮ ಕೊನೆಯ ಭೇಟಿ ಎಂದೆನಿಸಿದರೂ ನಾವಿಬ್ಬರೂ ಏನೂ ಮಾತನಾಡದೆ ಜೊತೆಯಲ್ಲೇ ಮಾರ್ಜಿನಲ್ ನಿಂದ ಹೊರಟೆವು. ಪಕ್ಕದ ಬೆಂಫಿಕಾದಲ್ಲಿ ಎಮಿಲಿಯನ್ನು ಮನೆ ತಲುಪಿಸಿದ ನಾನು ಮುಹುಬೆಂತು ಪ್ರದೇಶದಲ್ಲಿರುವ ನನ್ನ ವಸತಿಗೃಹಕ್ಕೆ ಮರಳಿದೆ.

ಆದರೆ ಸುಯೋಗವೆಂಬಂತೆ ಆ ಸಂಜೆಯು ಅಲ್ಲಿಗೇ ಮುಗಿಯಲಿಲ್ಲ. ಎಮಿಲಿ ನಮೀಬಿಯಾಕ್ಕೆ ಮರಳುವ ಮುನ್ನ ಮತ್ತೆ ಮೂರ್ನಾಲ್ಕು ಬಾರಿ ನಮ್ಮ ಭೇಟಿಗಳಾದವು. ಲುವಾಂಡಾ ಮಹಾನಗರಿಯಲ್ಲಿ ಒಂದು ಚಿಕ್ಕ ಉದ್ಯಮವನ್ನು ಶುರುಮಾಡುವ ಮಹಾತ್ವಾಕಾಂಕ್ಷೆಯಿಂದ ಬಂದಿದ್ದ ಎಮಿಲಿ ಕ್ರಮೇಣ ಲುವಾಂಡಾದ ದುಬಾರಿ ಜೀವನಶೈಲಿಯಿಂದ ನಲುಗಿಹೋಗಿದ್ದಳು. ಮೂಲಭೂತ ಸೌಲಭ್ಯಗಳನ್ನು ಸೇರಿದಂತೆ ಇತರ ದೈನಂದಿನ ಅವಶ್ಯಕತೆಗಳಿಗಾಗಿ ದಿನಗಳೆದಂತೆ ಏರುತ್ತಿದ್ದ ಖರ್ಚುಗಳು ಅವಳನ್ನು ನಿಧಾನವಾಗಿ ಉಸಿರುಗಟ್ಟಿಸತೊಡಗಿದ್ದವು. ”ಬಹುಶಃ ಲುವಾಂಡಾದ ಋಣ ಇಂದಿಗೆ ತೀರಿತು ನಿಕ್”, ಎಂದು ಕೊನೆಯ ಬಾರಿ ಕರೆ ಮಾಡಿ ನನಗೆ ಹೇಳಿದ್ದಳು ಎಮಿಲಿ. ಹೋಗಿ ಬಾ ಎಂದಿದ್ದ ನಾನು ಅವಳಿಗೆ ಶುಭಹಾರೈಸಿದ್ದೆ.

ಎಮಿಲಿ ಸದ್ಯ ನಮೀಬಿಯಾದಲ್ಲಿದ್ದಾಳೆ. ಅವಳ ಕನಸುಗಳು ಅಲ್ಲೇ ಆಕಾರವನ್ನು ಪಡೆದುಕೊಳ್ಳುತ್ತಿವೆ. ನನ್ನೊಂದಿಗಿನ ಮೊದಲ ಭೇಟಿಯಲ್ಲಿ ಅವಳೊಂದಿಗಿದ್ದ ಗ್ರೇಸ್ ಮತ್ತು ಮೂರನೇ ತರುಣಿ ಬಹುಷಃ ಲುವಾಂಡಾದಲ್ಲೇ ಇದ್ದಾರೆ. ”ಆದಷ್ಟು ಬೇಗ ನಿನ್ನ ಉದ್ಯಮವು ಶುರುವಾಗಲಿ. ರಿಬ್ಬನ್ ತುಂಡರಿಸಿ ಉದ್ಘಾಟನೆ ಮಾಡಲು ನಾನೇ ಸ್ವತಃ ನಮೀಬಿಯಾಕ್ಕೆ ಬರುತ್ತೇನೆ”, ಎಂದು ನಾನು ಅವಳ ಕಾಲೆಳೆದೆ. ನನ್ನ ಈ ಮಾತಿಗೆ ಎಮಿಲಿ ಟೆಲಿಫೋನಿನ ಅತ್ತ ಕಡೆಯಿಂದ ತನ್ನ ಎಂದಿನ ಶೈಲಿಯಲ್ಲಿ ಗಹಗಹಿಸಿ ನಕ್ಕಳು.

Leave a Reply