ಗೋಕರ್ಣದ ಸ್ಟಡಿ ಸರ್ಕಲ್ಲಿಗೆ ಫ್ರೆಂಚ್ ಟಚ್

ನಿಮಗೆ ಗೋಕರ್ಣದ ದೇವಸ್ಥಾನ ಗೊತ್ತು, ಗೌರೀಶ ಕಾಯ್ಕಿಣಿ ಗೊತ್ತು. ಆದರೆ ಈ ಸ್ಟಡಿ ಸರ್ಕಲ್ ಅನ್ನೊ ಗ್ರಂಥಾಲಯ ಗೊತ್ತಾ? ಇದು ಅಂತಿಂಥ ಗ್ರಂಥಾಲಯವಲ್ಲ.

ಏನಿದರ ವಿಶೇಷ ಓದಿ ನೋಡಿ…

 

ಹೀಗೊಂದು ವಿಶೇಷ ಗ್ರಂಥಾಲಯ

ಏನಿದು ಸ್ಟಡೀ ಸರ್ಕಲ್?

ಗೋಕರ್ಣಕ್ಕಿರುವ ಸ್ಥಾಪಿತ ಹಣೆಪಟ್ಟಿ ಬದಲಿಸಿರುವ ಎರಡು ಸಂಗತಿಗಳೆಂದರೆ ಗೌರೀಶ ಕಾಯ್ಕಿಣಿ ಮತ್ತು ಸ್ಟಡೀ ಸರ್ಕಲ್. 1939ರಲ್ಲಿ ಬಾಲಸಂಘ ಹೆಸರಿನಲ್ಲಿ ಆರಂಭವಾದ ಈ ಗ್ರಂಥಾಲಯ ಮುಂದೆ ಕರ್ನಾಟಕ ಸ್ಟಡೀ ಸರ್ಕಲ್ ಅಂತ ಮರುನಾಮಕರಣ ಆಯ್ತು. ಅವತ್ತಿನಿಂದ ಇವತ್ತಿನವರೆಗೂ ಅದನ್ನೊಂದು ವೃತದ ಹಾಗೆ ನಡೆಸಿಕೊಂಡು ಬರ್ತಿರೋರು
ಈಗಲೂ ದಿನಕ್ಕೆ 12 ತಾಸು ದುಡಿಯುತ್ತಿರುವ 85ರ ಹರೆಯದ ಗಣಪತಿ ಎಂ.ವೇದೇಶ್ವರ.

ಏನೇನಿದೆ ಇಲ್ಲಿ?

ಪುರಾತನ ಶೈಲಿಯ ದೇವನಾಗರಿ ಲಿಪಿಯ 4000ಕ್ಕೂ ಹೆಚ್ಚು ಪುಸ್ತಕ, ಸಂಸ್ಕೃತ ಸಾಹಿತ್ಯದ ಪುಸ್ತಕಗಳು, ತತ್ವಜ್ಞಾನ, ಪುರಾಣ, ವೇದಗಳಿಗೆ ಸಂಬಂಧಪಟ್ಟ ಪುಸ್ತಕಗಳು, 600 ವರ್ಷಗಳ ಹಳೆಯ ನೂರಕ್ಕೂ ಹೆಚ್ಚು ತಾಳೆಗರಿ ಪುಸ್ತಕಗಳು, ಬಾಂಬೆ ಸರ್ಕಾರ ಪ್ರಕಟಿಸಿದ 175 ವರ್ಷದ ಹಿಂದಿನ ಪಠ್ಯ ಪುಸ್ತಕಗಳು, ಹಳೆಗನ್ನಡ, ಹೊಸಗನ್ನಡದ ಅನೇಕ ಮಹತ್ವದ ಪುಸ್ತಕಗಳು ಅಷ್ಟೇ ಅಲ್ಲದೇ ಮರಾಠಿ, ಹಿಂದಿ, ಇಂಗ್ಲಿಷ್, ಫ್ರೆಂಚ್, ಜರ್ಮನ್ ಸೇರಿದಂತೆ 38ಕ್ಕೂ ಹೆಚ್ಚು ಭಾಷೆಗಳ ಸಾಹಿತ್ಯ ಸಿರಿ ಇಲ್ಲಿದೆ. ಜೊತೆಗೆ,ಇಲ್ಲಿರುವ ಮತ್ತೊಂದು ಅಮೂಲ್ಯ ಗ್ರಂಥವೆಂದರೆ ಮೈಸೂರು ಮಹಾರಾಜರು ಪ್ರಕಟಿಸಿದ ಋಗ್ವೇದ ಸಾಹಿಣ ಭಾಷ್ಯದ ರಾಯಲ್ ಅಳತೆಯ 36 ಭಾಗಗಳು,ಸಂಹಿತಾ, ಬ್ರಾಹ್ಮಣ, ಅರಣ್ಯಕ, ನಿರುಕ್ತ, ಚಡಂಗ ಸಹಿತ ಗ್ರೇಟ್ ಬ್ರಿಟನ್ ಮತ್ತು ಅಮೆರಿಕದ ಎನ್‌ಸೈಕ್ಲೋಪಿಡಿಯಾ ಯುನಿವರ್ಸಲ್‌, ಕಲೆ, ಬೇಸಾಯ ಮತ್ತಿತರ ಶಾಖೆಗಳ ವಿಶೇಷ ಎನ್‌ಸೈಕ್ಲೋಪಿಡಿಯಾಗಳು ಸಹ ಇವರ ಸಂಗ್ರಹದಲ್ಲಿ ಲಭ್ಯವಿವೆ. ಬಹುಶ: ಇವರ ಗ್ರಂಥಾಲಯದಲ್ಲಿ ಇಲ್ಲದ ಪುಸ್ತಕಗಳೇ ಇಲ್ಲ ಅನಿಸುತ್ತದೆ.

ಯಾರೆಲ್ಲ ಬಂದಿದ್ದಾರೆ ಇಲ್ಲಿ?

ನಮ್ಮ ದೇಶದ ಪ್ರಥಮ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ ಅವರು ಗ್ರಂಥಾಲಯಕ್ಕೆ ಭೇಟಿಯಿತ್ತು ತಮ್ಮ ಸಹಿಯುಳ್ಳ ಪುಸ್ತಕವನ್ನು ಗ್ರಂಥಾಲಯಕ್ಕೆ ನೀಡಿದ್ದರಿಂದ ಹಿಡಿದು ಮಾಜಿ ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್, ನೊಬೆಲ್ ಪ್ರಶಸ್ತಿ ವಿಜ್ಞಾನಿ ಸಿ.ವಿ. ರಾಮನ್, ಜ್ಯೂಲಿಯಸ್‌ ಹಕ್ಸ್‌ಲೇ, ಅರ್ನಾಲ್ಡ್‌ ಟಾಯಿನ್‌ಬೀ, ಕುವೆಂಪು, ಶಿವರಾಮ ಕಾರಂತ ಅವರ ಸಹಿಯುಳ್ಳ ಪುಸ್ತಕಗಳು ಈ ಗ್ರಂಥಾಲಯದ ಸಂಗ್ರಹದಲ್ಲಿ ಇವೆ. ಅನೇಕ ಸಂಸ್ಕೃತ ವಿದ್ವಾಂಸರ ಕೃತಿಗಳು ಲಭ್ಯವಿವೆ.

ಗ್ರಂಥಾಲಯ ಹೇಗೆ ಬೆಳೀತಿದೆ ?

ಪ್ರತಿ ವರ್ಷವೂ ದೇಶ ವಿದೇಶದ ಅನೇಕ ಪ್ರಕಾಶಕರಿಂದ 600ರಿಂದ 700 ಪುಸ್ತಕಗಳು ಇವರ ಗ್ರಂಥಾಲಯಕ್ಕೆ ಬರುತ್ತ ಲಿವೆ. ಜೊತೆಗೆ ಸಮಸ್ಯೆಗಳು ಸಹ. ಇಂತಹ ವಿರಳ, ಮಹತ್ವದ ಗ್ರಂಥ, ಪುಸ್ತಕಗಳನ್ನು ಕಾಯ್ದಿಡಲು ಸ್ಥಳ, ಸಲಕರಣೆಗಳಿಲ್ಲದೆ ತುಂಬಾ ಕಷ್ಟಪಡುತ್ತಿದ್ದರು ವೇದೇಶ್ವರರು. ಪುಸ್ತಕಗಳನ್ನೆಲ್ಲಾ ರಟ್ಟಿನ ಬಾಕ್ಸ್‌ನಲ್ಲಿ ಇಟ್ಟು ಗಂಟು ಕಟ್ಟಿ ಇಡುತ್ತಿದ್ದರು. ಇದನ್ನೆಲ್ಲಾ ಹೇಗೆ ಕಾಪಾಡಿಕೊಂಡು ಹೋಗಬೇಕು ಎಂಬ ಕೊರಗು ಅವರನ್ನು ಸದಾ ಕಾಡುತ್ತಿತ್ತು. ಸಹಾಯಕ್ಕಾಗಿ ಸರಕಾರದ ಸಹಿತ ಹಲವರನ್ನು ಸಂಪರ್ಕಿಸಿದರೂ ಭರವಸೆಯ ಹೊರತು ಇನ್ನೇನೂ ಪ್ರಯೋಜನವಾಗಲಿಲ್ಲ. ಲಂಚದ ಭಾದೆಗೆ ಬೇಸತ್ತು ಸರ್ಕಾರ ನೀಡುವ ವಾರ್ಷಿಕ ಹಣ ಪಡೆಯುವುದನ್ನೂ ನಿಲ್ಲಿಸಿದ್ದಾರೆ. ವೇದೇಶ್ವರರ ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಒದಗಿ ಬಂದವರೇ ಫ್ರಾನ್ಸಿನ ಇಲಿಯಾಸ್‌. ಅವರೀಗ ಒಬ್ಬಂಟಿಗರಾಗಿದ್ದ ವೇದೇಶ್ವರರೊಂದಿಗೆ ಕೈಜೋಡಿಸಿದ್ದಾರೆ.

ಯಾರು ಈ ಇಲಿಯಾಸ್ ಟ್ಯಾಬೆಟ್? ಅವರೇನು ಮಾಡಿದ್ರು?

ಇಲಿಯಾಸ್‌ ಮೂಲತಃ ಒಬ್ಬ ನಾಟಕ ಕಲಾವಿದ ಮತ್ತು ನಿರ್ದೇಶಕ. 3 ವರ್ಷಗಳಿಂದ ಕೇರಳದಿಂದ ಕಥಕ್ಕಳಿ ಕಲಿಸು ವವರನ್ನೂ, ಉಡುಪಿಯಿಂದ ಭರತನಾಟ್ಯ ಕಲಿಸುವ ಸುಧೀರ್ ರಾವ್ ಅವರನ್ನು ಗೋಕರ್ಣಕ್ಕೆ ಕರೆಯಿಸಿ, ಫ್ರಾನ್ಸ್‌ನಿಂದ ಬಂದ ವಿದೇಶಿಯರಿಗೆ ತರಬೇತಿ ಕೊಡಿಸುತ್ತಿದ್ದಾರೆ. ಇದಕ್ಕೆಲ್ಲಾ ಅವಶ್ಯವಿರುವ ದೊಡ್ಡ ಕಟ್ಟಡವನ್ನು ಈಗಾಗಲೇ ಕಟ್ಟಿ ನಿಲ್ಲಿಸಿದ್ದಾರೆ. ಸಮುದ್ರದ ತೀರದಲ್ಲಿರುವ ಸುಂದರ ಪರಿಸರ ದಿಂದ ಕೂಡಿದ ರಾಮತೀರ್ಥದ ಮೇಲ್ಭಾಗದಲ್ಲಿ ವಿಶಾಲವಾದ 5000 ಚದರ ಅಡಿಯ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿ ಗ್ರಾನೈಟ್ ಹಾಸಿಗೆಯನ್ನು ಹಾಕಿಸಿದ್ದಾರೆ.

ಮುಂದೇನು?

ಈ ಗ್ರಂಥಾಲಯವನ್ನು ಆನ್‌ಲೈನ್‌ ಲೈಬ್ರರಿಯನ್ನಾಗಿ ಪರಿವರ್ತಿಸಿ, ಇಲ್ಲಿರುವ ಪುಸ್ತಕಗಳನ್ನೆಲ್ಲಾ ಗಣಕೀಕರಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆನ್‌ಲೈನ್‌ ಪರಿವಿಡಿ ನೋಡಿ ಪುಸ್ತಕ ಹುಡುಕಲು ಸಹಾಯವಾಗಬೇಕೆಂಬುದು ಇವರ ಇಚ್ಛೆ. ಯಾಕಿಷ್ಟು ಆಸಕ್ತಿ ನಿಮಗೆ ಅಂತ ಕೇಳಿದ್ರೆ- ‘ಇಂತಹ ಅದ್ಭುತ ಸಂಗ್ರಹ ಎಲ್ಲಿಯೂ ಸಿಗುವುದಿಲ್ಲ, ಇದನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಜವಾಬ್ದಾರಿ. ಈ ಸಂಸ್ಕೃತಿ ಯಾವಾಗಲೂ ಶಾಶ್ವತ’ ಎಂದು ಹೇಳ್ತಾರೆ.
ಇನ್ನೊಮ್ಮೆ ನೀವು ಗೋಕರ್ಣಕ್ಕೆ ಹೋದರೆ ಈ ಗ್ರಂಥಾಲಯ ನೋಡೋದು ಮರೀಬೇಡಿ.

 ಆಧಾರ: ಪ್ರಜಾವಾಣಿ

Leave a Reply