ಮಲೆಗಳಿಂದ ಇಳಿದು ಬಂದಳು ಮದುಮಗಳು

 

 

 

 

ಧನಂಜಯ ಎನ್ ಆಚಾರ್ಯ

 

 

 

 

ಕುವೆಂಪು ಎಂಬ ಸತ್ಯಾವತಾರ

1967 ರಿಂದಲೂ ಕುವೆಂಪು ಎಂಬ ಸತ್ಯಾವತಾರ, ಓದುಗರ ಅನುಭವಸಂಸ್ಕಾರದಿಂದ ಸಂಭವಿಸಿಸುತ್ತಲೇ ಇದ್ದಾರೆ ಮಧುಮಗಳ ಕೃತಿಯಿಂದ.

ಮಧುಮಗಳ ಪುಸ್ತಕದ ಮೊದಲ ಸಾಲುಗಳನ್ನ ಬೇರೊಂದು ದೃಷ್ಟಿ ಕೋನದಲ್ಲಿ ನೋಡಿದರೆ , ಅಲ್ಲಿ ಸಿಂಭಾವಿ ಭರಮೈ ಹೆಗ್ಗಡೆಯವರ ಜೀತದಾಳು ದೊಡ್ಡ ಚೌಕಿಮನೆಯ ಹೆಬ್ಬಾಗಿಲನ್ನ ದಾಟಿ ತನ್ನ ಪ್ರಾಣಕ್ಕೆ ಪ್ರಾಣವಾಗಿದ್ದ ತಿಮ್ಮಿಯನ್ನ ಮದುವೆಯಾಗೋಕೆ ಹೊರಡುತ್ತಾನೆ. ಹಾಗೆಯೇ ಓದುಗ ಮೌಢ್ಯ ತುಂಬಿದ ಮನದ ಮನೆಯ ಹೊಸ್ತಿಲನ್ನು ಕಾದಂಬರಿ ಓದುಲು ಶುರುವಿಟ್ಟೊಡನೆಯೇ ಹೊಸತನದ ಆಸಕ್ತಿಗಳ ಪ್ರೇಮ ಪಾಶಕ್ಕೆ ತಾನೇ ಸಿಲುಕುವಂತೆ ಹೊರಡಲು ಅಣಿಯಾಗುವುದೇ ಕುವೆಂಪು ಸತ್ಯಾವತಾರ . ನಮ್ಮೆಲ್ಲರ ಎಲ್ಲ ಕಾಲಕ್ಕೂ ಹೊಸ ಚಿಗುರಿನಂತೆ ಕಾಣುವ ಕುವೆಂಪು `ಮಲೆಗಳಲ್ಲಿ ಮದುಮಗಳು ಕೃತಿಯ ಸೃಜನಶೀಲತೆ ಮೌಖಿಕ ಜಗತ್ತಿನ ಮೂಲಕ ಮರುಹುಟ್ಟು ಪಡೆದಿದೆ !  ಮೂರ್ತ ರೂಪದಿಂದಲೂ ಕೂಡಿ.

ಸಿಂಭಾವಿ , ಹೂವಳ್ಳಿ, ಕಲ್ಲೂರು, ಭರಮೈ ಹೆಗ್ಡೆ , ಗುತ್ತಿ, ಹುಲಿಯಾ, ಸೀತೂರು ತಿಮ್ಮನಾಯ್ಕ, ಕಣ್ಣಾ ಪಂಡಿತ, ಅಂತಕ್ಕ , ಕಾವೇರಿ, ಕರಿಮೀನು ಸಾಬಿ, ಪುಡಿಸಾಬಿ, ಅಜ್ಜಿಸಾಬು, ಲುಂಗಿಸಾಬು, ಇಜಾರದಸಾಬು, ಸುಬ್ಬಣ್ಣ ಹೆಗ್ಡೆ, ತಿಮ್ಮಪ್ಪ ಹೆಗ್ಡೆ, ಧರ್ಮು, ಶಂಕರ ಹೆಗ್ಡೆ, ಮುಕುಂದಯ್ಯ, ಕಿಲಸ್ತರು, ಪೊಲೀಸಿನವರು…..ಇತ್ಯಾದಿ ಎಲ್ಲರೂ ಕಾದಂಬರಿ ಓದಿದ ನಂತರ ನಮಗೇ ತಿಳಿಯದಂತೆ ಒಂದು ಪಾತ್ರಭಾಗವಾಗಿ ಕಲ್ಪನೆಗೆ ಸಿಗೋದಂತೂ ನಿಜ.

ಅಲ್ಲಿ ಅಂತಕ್ಕನ ಮಗಳು ಶೆಟ್ಟರ ಹುಡುಗಿ ಕಾವೇರಿ ಮೇಲೆ ಅತ್ಯಾಚಾರವಾಗುತ್ತೆ , ಅತ್ಯಾಚಾರವಾಗೋದು ಆ ಒಂದು ರಾತ್ರಿಯಲ್ಲೇ, ಅದೂ ಕೂಡ ಕೆಲವೇ ದಿನಗಳಿಂದ ಆಕೆ ಅತಿಯಾಗಿ ನಂಬಿ ಭರವಸೆ ಇಟ್ಟಿದ್ದ ಚೀಂಕ್ರ ಮತ್ತು ಸಂಗಡಿಗರಿಂದ.
ಇಲ್ಲಿ ಚೀಂಕ್ರ ನಿಗೆ ತನ್ನವರು ಇತರರು, ಎಂಬ ಭೇದ ಇಲ್ಲದೇ ಅಂಥದ್ದೊಂದು ದ್ರೋಹ ಸ್ವಾರ್ಥದ ನಡತೆ ಹುಟ್ಟಿದ್ದಾದರೂ ಎಲ್ಲಿಂದ ? ಬಹುಶಃ ಈ ಪ್ರಶ್ನೆ ಗೆ ಉತ್ತರ ಒಂದು ಸಂಗ್ರಹ ಮೂಲದಿಂದಲೇ ಪೂರ್ಣದೃಷ್ಟಿ ಇಂದಲೇ ನಾವು ತಿಳಿಯಬೇಕು .

ಹೆಗ್ಗಡೆಯವರು ತನ್ನ ಜೀವಮಾನದಲ್ಲೇ ಮೂಸಿಯೂ ನೋಡದ ಕಾಫಿಯನ್ನ ಅಂತಕ್ಕ ತಂದುಕೊಟ್ಟಾಗ, ಅಲೇ ಈ ಹಾಳು ಕಾಪಿ ಒಳ್ಳೆ ಔಷಧಿ ಇದ್ದ ಹಾಗಿದೆಯಲ್ಲಾ …ಇದನ್ನೆಲ್ಲಾ ಯಾರ್ ಕುಡೀತಾರೆ, ನಮ್ಮ ತೀರ್ಥಳ್ಳಿ, ಪ್ಯಾಟೆ ಜನ ಎಲ್ಲಾ ಕಡೆಯೂ ಕುಡೀಬೇಕಾದ್ರೆ ನನ್ನ ತಲೆ ಮಾರಿನಲ್ಲಿ ಇಲ್ಲದಂತಹ ಈ ಕಾಪಿ ಈಗ,ಇಲ್ಲಿಗೆ ಬಂದದ್ದಾರೂ ಎಲ್ಲಿಂದ ! ಅಂತ ಹೆಗ್ಗಡೆ ಜಾಗದಲ್ಲಿ ನಾವೇ ಕೂತು ಗಮನಿಸಬೇಕಾದದ್ದು ಕೂಡ ಒಂದು ಪೂರ್ಣದೃಷ್ಟಿ .

ದೇವಯ್ಯನಿಗೆ ತನ್ನ  ಹೆಂಡತಿ ಕಟ್ಟುವ ತಾಯ್ತ, ಹರಿಷಿನ ಮೆತ್ತಿದ ತೆಂಗಿನ ಕಾಯಿ , ಬೆಳಗುವ ಊದುಬತ್ತಿ , ಹೊರುವ ಹರಕೆಗಳೆಲ್ಲವೂ ತಪ್ಪು ಇಲ್ಲೇನೋ ತಪ್ಪಿದೆ ನಮಗಿನ್ನೇನೋ ಹೊಸತು ಬೇಕು ಎನ್ನುವ ನಿರ್ಧಾರ ತನ್ನ ತಂದೆ ಕಲ್ಲಯ್ಯ ಗೌಡರ ಸೂಕ್ಶ್ಮತೆಗೂ ಮೀರಿ ಬೆಳೆಯುವುದು ಎಲ್ಲಿಂದ , ಆ ಹೊಸತನದ ಗಾಳಿ ಬೀಸಿದ್ದು ಪಾದ್ರಿ ಆ ಪ್ರಾಂತ್ಯಕ್ಕೆ ಬಂದ ಮೇಲೋ,  ಇಲ್ಲ ಅಷ್ಟು ವರ್ಷಗಳಿಂದಲೂ ತಡೆದು ನಿಲ್ಲಿಸಿದ್ದ ಜಿಜ್ಞಾಸುವಿನಿಂದಲೋ ?

ತನ್ನನ್ನೇ ಅರಿಯದ ಗುತ್ತಿ , ಜೊತೆಯಿರುವ ನಾಯಿಯನ್ನೇ ನೆರಳು ಎಂದುಕೊಂಡ ಗುತ್ತಿ , ಜೀತ ಬಿಟ್ಟು ಮತ್ತಿನ್ನೇನನ್ನೂ ಅರಿಯದ ಗುತ್ತಿಗೆ , ಧರ್ಮಸ್ಥಳದ ಮಂಜುನಾಥನ ಆಣೆ ಇಟ್ಟೊಡನೆ ಮುಂದಿರುವ ಹಿರಿಯರು ತನ್ನನ್ನು ನಂಬಿಯೇ ತೀರುತ್ತಾರೆ ಎಂದು ಮೊದಲೇ ನಿರ್ಧರಿಸಿ ಮಾತಾಡುವ ಧೈರ್ಯ ಪ್ರಜ್ಞೆ  ಸಂಸ್ಕೃತಿ ನುಸುಳಿದ್ದಾದರೂ ಎಲ್ಲಿಂದ ??

ಇವೆಲ್ಲಕ್ಕೂ ಉತ್ತರ ಪೂರ್ಣದೃಷ್ಟಿ .

ಇಲ್ಲಿ ಯಾರೂ ಮುಖ್ಯರಲ್ಲ ,
ಯಾರೂ ಅಮುಖ್ಯರಲ್ಲ,
ಯಾವುದೂ ಯಃಕಶ್ಚಿತವಲ್ಲ!
ಇಲ್ಲಿ ಯಾವುದಕ್ಕೂ ಮೊದಲಿಲ್ಲ ,
ಯಾವುದೂ ತುದಿಯಿಲ್ಲ,
ಯಾವುದೂ ಎಲ್ಲಿಯೂ ನಿಲ್ಲುವುದು ಇಲ್ಲ,
ಕೊನೆಮುಟ್ಟುವುದೂ ಇಲ್ಲ!
ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ
ಇಲ್ಲಿ ಎಲ್ಲಕ್ಕೂ ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ
ನೀರೆಲ್ಲವೂ ತೀರ್ಥ!

ಕಾದಂಬರಿ ಶುರುವಿನಲ್ಲೇ ಈ ಮೇಲಿನ ಸಾಲುಗಳನ್ನ ಕವಿ ಬರೆದಿರುವುದು ಇದಕ್ಕೇ ಇರಬೇಕು.

ಕಲ್ಪನೆಗೆ ಸಿಕ್ಕ ಎಲ್ಲಾ ಪಾತ್ರಗಳು ಎದುರು ಸಿಕ್ಕಾಗ ಹುಟ್ಟಿದ್ದ ಅಷ್ಟೂ ಪ್ರಶ್ನೆಗಳನ್ನ ಕೇಳಬೇಕು ಅನ್ನಿಸುತ್ತೆ.

ಈ 712 ಪುಟಗಳ ಭರ್ತಿ ಕಾದಂಬರಿಯನ್ನ ಸುಮಾರು 70-75 ಕಲಾವಿದರು 9 ಘಂಟೆಗಳ ಅವಧಿಯಲ್ಲಿ ಬಿಟ್ಟು ಬಿಡದೇ ಕಣ್ಣು ಮುಂದೆ ನಿಲ್ಲಿಸುತ್ತಾರೆ ಎಂದರೆ ಸುಲಭದ ಮಾತಲ್ಲ , ಅಸಲಿಗೆ ಅದು ಕಲಾವಿದರ ಸಂಗಮವೇ ಅಲ್ಲ ಅದದೇ ಪಾತ್ರಗಳು ಅಷ್ಟೇ.

ಪುಸ್ತಕ ಓದದೇ ಇರುವ ಜನರಿಗೂ ಸಹ ಆ ಭಾವಗಳು ಅತೀ ಸಲೀಸಾಗಿ ತಲುಪಿಸುವಂಥ ಜೋಗಿಗಳ ನಿರೂಪಣೆಯಲ್ಲಿ ನಾವು ಗಮನಿಸಬೇಕಾದ ಒಂದುಅತೀ  ಪ್ರಮುಖ  ಅಂಶ , ನಾಟಕದ ಶುರುವಿನಲ್ಲೇ ಈ ಜೋಗಿಗಳು ತಮ್ಮ ಕಥೆ ಹೇಳುವ ಕಾಯಕವನ್ನು ಬಿಡುವ ನಿರ್ಧಾರ ಮಾಡುತ್ತಿರುತ್ತಾರೆ, ಅಂಥ ಸಮಯದಲ್ಲಿ ನಿಮ್ಮ ಕೆಲಸ ಇಲ್ಲಿಗೇ ಮುಗಿದಿಲ್ಲ ಎಂದು ಆ ಜನಾಂಗದ ಕಸುಬನ್ನು ಮುಂದುವರೆಸುವ ಹಾಗೆ ತೋರಿರುವ ಒಂದು ದೃಶ್ಯ ಹೊಸತಲೆಮಾರಿಗೆ ಸಂದೇಶ.

ಕಾವೇರಿಯ ಅತ್ಯಾಚಾರ ಸನ್ನಿವೇಶದಲ್ಲಿ
” ಹೋಗದಿರೇsssssssss ….ಕಾವೇರಿ ”
ಹಾಡು ಸೇರಿ ಹಂಸಲೇಖರ ಹಿನ್ನೆಲೆ ಸಂಗೀತ  ಮತ್ತು ಹಿನ್ನೆಲೆ ಕೆಲಸ ಅದ್ಬುತ .

ಒಂದು ಮಳೆಗಾಲ ಪ್ರಾರಂಭವಾಗಿ ಮುಗಿಯುವ ಹೊತ್ತಿಗೆ ಮಲೆಗಳಲ್ಲಿ ಮಧುಮಗಳು ಕಾದಂಬರಿಯ ಸನ್ನಿವೇಶಗಳನ್ನು ಅತ್ಯಂತ ನಾಜರೂಕತೆಯಿಂದ 4 ವಿಶೇಷ ರಂಗ ಸಜ್ಜಿಗೆಯೊಂದಿಗೆ ನಿರ್ದೇಶನ ಮಾಡಿರುವುದು ಬಸವಲಿಂಗಯ್ಯ.
ಕಲಾವಿದರು ಕರ್ನಾಟಕದಿಂದಷ್ಟೇ ಅಲ್ಲ , ಮಿತ್ರ ರಾಜ್ಯಗಳಿಂದಲೂ ಬಂದಿದ್ದಾರೆ ಅನ್ನುವುದು ಖುಷಿಯ ಸಂಗತಿ.
‎ನಿರ್ದೇಶಕರೇ ಹೇಳುವಂತೆ ಕರ್ನಾಟಕ ಹೊರತಾಗಿ ಭಾರತದ ಇನ್ಯಾವುದೇ ರಾಜ್ಯ ಕೂಡ ಸಾಹಿತ್ಯ ಮತ್ತು ಕಲೆಗೆ ಪ್ರೋತ್ಸಾಹ ನೀಡುವುದು ಅತೀ ಕಡಿಮೆ.
ಅದಕ್ಕೆ ಪೂರಕ ಎಂಬಂತೆ ನಮ್ಮ ಕಲಾ ಪ್ರಿಯರಲ್ಲಿ ಯುವಕರೂ ಸೇರಿದಂತೆ ವೃದ್ದರೂ ಸೇರಿದ್ದನ್ನು ನೋಡಿದರೆ , ಕಲೆಗೆ ಕನ್ನಡ ನಾಡಿನಲ್ಲಿ ಎಂಥಹ ಗೌರವ ಇದೆ ಎಂಬುದನ್ನು ನಾವು ಅರಿಯಬೇಕು.

ಒಟ್ಟಿನಲ್ಲಿ ಓದುವಾಗಲೂ ನೋಡುವಾಗಲೂ ಹೊಸ ಅರ್ಥಗಳೊಂದಿಗೆ ನಮ್ಮನ್ನು ತಲುಪುವ ಈ ದೃಶ್ಯಕಾವ್ಯ ಎಲ್ಲರೊಳಗೂ ಹೊಸ ಚಿಂತನೆಯನ್ನು ಬೆಳೆಸಲಿ ಎಂಬುದು ಎಲ್ಲರ ಆಶಯ.

ಇಲ್ಲಿ ಎಲ್ಲಕ್ಕೂ ಇದೆ ಅರ್ಥ .
ಯಾವುದೂ ಇಲ್ಲ ವ್ಯರ್ಥ.

ಪ್ರತೀ ಸೋಮವಾರ, ಬುಧವಾರ, ಶುಕ್ರವಾರ, ಮತ್ತು ಶನಿವಾರ ದಂತೆ ಜನವರಿ 31 ರ ತನಕ ರಾತ್ರಿ 8 ರಿಂದ ಮುಂಜಾನೆ 6 ರ ವರೆಗೆ ಪ್ರದರ್ಶನ ಇರುತ್ತದೆ, ಪ್ರತೀ 2 ಘಂಟೆಗೊಮ್ಮೆ 10 ನಿಮಿಷಗಳ ವಿರಾಮ.
ಎಲ್ಲರೂ ನೋಡಿ ಹೊಸ ಚಿಂತನೆಗಳೊಂದಿಗೆ ಹೊರಬನ್ನಿ.

Leave a Reply