ಬೇಕಿದ್ದಾರೆ ಪ್ರೇಕ್ಷಕರು

 

 

 

 

 

ಶಶಿಕಾಂತ ಯಡಹಳ್ಳಿ

 

 

 

 

‘ರಂಗಭೂಮಿಯವರಿಗೆ ಬದ್ದತೆ ಬೇಕು’  – ರಂಗಕರ್ಮಿ ಪ್ರಸನ್ನ

“ನಾಟಕ ಬೆಂಗಳೂರು” ನಾಟಕೋತ್ಸವಕ್ಕೆ ಈಗ ಹತ್ತನೇ ವರ್ಷದ ಸಂಭ್ರಮ. ಬೆಂಗಳೂರಿನ ಕೆಲವಾರು ನಾಟಕ ತಂಡಗಳು ಒಂದೆಡೆ ಸೇರಿ ಸಹಕಾರಿ ತತ್ವದಡಿಯಲ್ಲಿ ಪ್ರತಿ ವರ್ಷ ನಾಟಕೋತ್ಸವವನ್ನು ಹಮ್ಮಿಕೊಳ್ಳುತ್ತಾ ಬಂದಿರುವುದು ಕರ್ನಾಟಕದ ರಂಗಭೂಮಿಗೆ ಮಾದರಿಯಾಗುವಂತಹುದು.

2018ರ ಜನವರಿ 1 ರಿಂದ ಆರಂಭಗೊಂಡು ಜನವರಿ 23 ರ ವರೆಗೆ ಒಟ್ಟು 18 ನಾಟಕಗಳು ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ ಪ್ರದರ್ಶನಗೊಳ್ಳುತ್ತಿವೆ. ನಾಟಕ ಬೆಂಗಳೂರು ನಾಟಕೋತ್ಸವಕ್ಕೆ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಸಹಕಾರ ಕೊಡುತ್ತಿವೆ. ಹಲವಾರು ಯುವ ರಂಗಕರ್ಮಿ ಕಲಾವಿದರು ಅತ್ಯಂತ ಉತ್ಸಾಹದಿಂದ ಈ ಉತ್ಸವದಲ್ಲಿ ನಾಟಕಗಳನ್ನು ಮಾಡುತ್ತಿದ್ದಾರೆ. ನಾಟಕ ಬೆಂಗಳೂರಿನ ನಾಟಕೋತ್ಸವದ ರೂವಾರಿಗಳು, ನಾಟಕ ಪ್ರದರ್ಶಿಸುತ್ತಿರುವ ಎಲ್ಲಾ ರಂಗ ತಂಡಗಳೂ ಅಭಿನಂದನಾರ್ಹವಾಗಿವೆ.

ಪ್ರದರ್ಶನ ಮಾಡಲು ನಾಟಕ ತಂಡಗಳು ಉತ್ಸುಕವಾಗಿವೆ, ರಂಗ ಸಂಘಟಕರು ಸಿದ್ದತೆ ಮಾಡಿಕೊಂಡಿದ್ದಾರೆ ಆದರೆ ಪ್ರೇಕ್ಷಕರು ಕಿಕ್ಕಿರಿದು ತುಂಬಿದಾಗಲೇ ನಾಟಕ ಮಾಡಿದವರಿಗೆ ಸಾರ್ಥಕತೆ ಬರುವುದು. ಜನವರಿ 1 ರಂದು ನಡೆದ ಈ ನಾಟಕೋತ್ಸವದ ಉದ್ಘಾಟನಾ ಸಮಾರಂಭದಂದು ರಂಗಮಂದಿರ ಬಹುತೇಕ ಖಾಲಿಯಾಗಿತ್ತು. ಅರವತ್ತರಷ್ಟು ಪ್ರೆಕ್ಷಕರನ್ನು ನೋಡಿ ಹಿರಿಯ ರಂಗಕರ್ಮಿ ಪ್ರಸನ್ನರಂತವರು ತಮ್ಮ ಭಾಷಣದಲ್ಲಿ ರಂಗಭೂಮಿಯವರಿಗೆ ಬದ್ದತೆ ಬೇಕು ಎಂದು ಹೇಳಿದರು.

ಹೌದು.. ನಾಟಕ ಪ್ರದರ್ಶನವಾಗಲೀ ಇಲ್ಲವೇ ನಾಟಕೋತ್ಸವವಾಗಲೀ ಅದರ ಹಿಂದೆ ಸಿದ್ದತೆ ಇರುತ್ತದೆ.. ಅದರ ಜೊತೆಗೆ ಬದ್ದತೆಯೂ ಬೇಕಾಗುತ್ತದೆ. ಯಾರಿಗಾಗಿ ನಾಟಕ ಸಿದ್ದಗೊಂಡಿದೆಯೋ ಅವರೇ ಬರಲಿಲ್ಲವೆಂದರೆ ಹೇಗೆ? ಉದ್ಘಾಟನೆಯ ದಿನವೇ ಪುಟ್ಟ ರಂಗಮಂದಿರದಲ್ಲಿ ಪ್ರೇಕ್ಷಕರ ಕೊರತೆ ಎಂದರೆ ಹೇಗೆ? ನಿಜಕ್ಕೂ ಇದು ಬೇಸರದ ಸಂಗತಿ.

ಬೆಂಗಳೂರಿನ ರಂಗಭೂಮಿಯ ಪ್ರಸಕ್ತ ಪ್ರಮುಖ ಸಮಸ್ಯೆ ಏನೆಂದರೆ… ಒಂದು ತಂಡದ ನಾಟಕವನ್ನು ಬೇರೆ ರಂಗತಂಡದವರೆಲ್ಲಾ ಹೋಗಿ ನೋಡದಿರುವುದು. ಈಗ ಒಂದಲ್ಲಾ ಎರಡಲ್ಲಾ 18 ರಂಗ ತಂಡಗಳು ಸೇರಿ ನಾಟಕೋತ್ಸವ ಮಾಡುತ್ತಿವೆ. ನಾಟಕೋತ್ಸವದ ಉದ್ಘಾಟನೆ ದಿನವಾದ್ರೂ ಎಲ್ಲಾ ತಂಡದ ಕಲಾವಿದರು ಹಾಗೂ ನೇಪತ್ಯದವರು ಬಂದು ರಂಗಮಂದಿರ ತುಂಬಿಸಬೇಕಿತ್ತು. ಅತಿಥಿಗಳ ಮಾತಿಗೆ ಕಿವಿಯಾಗಬೇಕಿತ್ತು.

ನಾಟಕೋತ್ಸವದ ಸಂಘಟಕರು ಪ್ರೇಕ್ಷಕರನ್ನು ಕರೆತರಲಿ ಎಂದು ರಂಗ ತಂಡದವರು… ಆಯಾ ದಿನದ ರಂಗ ತಂಡಗಳೇ ಪ್ರೇಕ್ಷಕರನ್ನು ಕರೆದು ತರಲಿ ಎಂದು ಆಯೋಜಕರು ಅಂದುಕೊಂಡಿದ್ದರಿಂದ ಉದ್ಘಾಟನೆಯ ದಿನ ರಂಗಮಂದಿರದಲ್ಲಿ ಹೆಚ್ಚು ಪ್ರೇಕ್ಷಕರಿಲ್ಲದೆ ಬಣಬಣಗುಟ್ಟುತ್ತಿತ್ತು. ಈ ನಾಟಕ ಬೆಂಗಳೂರು ಉತ್ಸವದಲ್ಲಿ ಭಾಗಿಯಾದ ಪ್ರತಿಯೊಂದು ರಂಗತಂಡವೂ ರಂಗೋತ್ಸವದ ಸಂಘಟನೆಯ ಹೊಣೆಗಾರಿಕೆಯನ್ನೂ ಹೊತ್ತು ಪ್ರೇಕ್ಷಕರನ್ನು ಪ್ರತಿ ನಾಟಕಕ್ಕೂ ಬರುವಂತೆ ಮಾಡುವುದನ್ನು ರೂಢಿಸಿಕೊಂಡಾಗಲೇ ಈ ನಾಟಕೋತ್ಸವ ಸಾರ್ಥಕತೆ ಪಡೆಯುತ್ತದೆ.

ಉತ್ಸವಕ್ಕಾಗಿ ಉತ್ಸವ ಆಗದೇ… ಇಲಾಖೆಯಿಂದ ಆರ್ಥಿಕ ಸಹಕಾರ ಪಡೆಯುವುದಕ್ಕಾಗಿ ನಾಟಕೋತ್ಸವ ಮಾಡದೇ ಪ್ರೇಕ್ಷಕರಿಗಾಗಿ ನಾಟಕ ಮಾಡಿದರೆ ನಾಟಕೋತ್ಸವ ಅರ್ಥಪೂರ್ಣವಾಗುತ್ತದೆ. ನಾಟಕ ಬೆಂಗಳೂರು ರಂಗೋತ್ಸವ ಬೆಂಗಳೂರಿನ ರಂಗಾಸಕ್ತರನ್ನು ಆಕರ್ಷಿಸಲಿ… ನಾಟಕೋತ್ಸವದ ಆಶಯ ಹೆಚ್ಚು ಜನರಿಗೆ ತಲುಪಲಿ ಹಾಗೂ ಒಂದು ರಂಗತಂಡದ ನಾಟಕವನ್ನು ಮಿಕ್ಕೆಲ್ಲಾ ರಂಗತಂಡದವರು ಬಂದು ನೋಡಿ ಪ್ರೋತ್ಸಾಹಿಸುವಂತಾಗಲಿ… ದಶಮಾನೋತ್ಸವದ ಸಂಭ್ರಮದಲ್ಲಿರುವ “ನಾಟಕ ಬೆಂಗಳೂರು” ನಾಮಕಾಬಸ್ತೇ ಆಗದೇ ತನ್ನ ಉದ್ದೇಶದಲ್ಲಿ ಸಫಲವಾಗಲಿ ಎನ್ನುವುದೇ ಬೆಂಗಳೂರಿನ ರಂಗಭೂಮಿಯವರ ಬಯಕೆಯಾಗಿದೆ.

 

Leave a Reply