ನಿಜದ ನೆಲೆಗೆ..

 

 

 

 

ಗಿರಿಜಾಶಾಸ್ತ್ರಿ

 

 

 

ಹೊಸ ವರ್ಷದಲ್ಲಿ ಹೊಸದೇನಿದೆ? “ವರ್ತಮಾನ ಪತ್ರಿಕೆಯ ತುಂಬಾ ಭೂತದ ಸುದ್ದಿ”. ವರ್ತಮಾನ ಅರಿವಿಗೆ ಬರುವ ಮುನ್ನವೇ ಅದು ಭೂತದ ಪಾಲಾಗುತ್ತಿದೆ. ಇನ್ನು ವರ್ತಮಾನವೆಲ್ಲಿಯದು?

ಪರಸ್ಪರ ದ್ವೇಷ, ದೋಷಾರೊಪಣೆ, ಅತ್ಯಾಚಾರ, ಕೊಲೆ ಸುಲಿಗೆ ಲಂಚಾವತಾರ, ಭ್ರಷ್ಟಾಚಾರದ ಹತ್ತಾರು ಹಗರಣಗಳ ಮಬ್ಬು ಕವಿದ, ಅನಿಶ್ಚಿತ, ಅಸಂಬದ್ಧತೆಯ ಈ ಹೊತ್ತಿನಲ್ಲಿ ಹಳೆಯ ಕ್ಯಾಲೇಂಡರ್ ಕಳಚಿಟ್ಟು ಹೊಸದನ್ನು ಗೋಡೆಗೇರಿಸುವ ಈ ಕಾರ್ಯದ ಬಗ್ಗೆ ಬರೆಯುವುದಕ್ಕೇನಿದೆ? ಅದನ್ನು ಸಂಭ್ರಮದಿಂದ ಆಚರಿಸುವುದಕ್ಕೇನಿದೆ? ಆಚರಣೆಯ ಸ್ವರೂಪ ಅದರ ರಂಪಾಟಗಳು ಬೇರೆಯೇ ಆದ ಚರ್ಚೆಗೆ ಎಡೆಮಾಡಿಕೊಡುತ್ತವೆ. ಸದ್ಯ ಅದರ ಬಗ್ಗೆ ಚರ್ಚಿಸುವುದು, ಈ ಬರಹದ ಉದ್ದೇಶವಲ್ಲ.

ಪ್ರಸಿದ್ಧ ಅಂಕಣಕಾರರೂ (ಇಂಢಿಯನ್ ಎಕ್ಸ್‍ಪ್ರೆಸ್) ಅಶೋಕ ವಿಶ್ವವಿದ್ಯಾಲಯದ ಉಪಕುಲಪತಿಗಳೂ ಆದ ಪ್ರತಾಪ್ ಭಾನು ಮೆಹ್ತಾ ಅವರು, ಹೊಸ ವರುಷದ ಹೊಸ್ತಿಲಲ್ಲಿ “ಮರಳಿ ವಾಸ್ತವಿಕತೆಗೆ” ಎನ್ನುವ ಅಂಕಣ ಬರೆದಿದ್ದರು. ಅವರು ತಮ್ಮ ಲೇಖನದ ಉದ್ದಕ್ಕೂ ರವೀಂದ್ರನಾಥ ಟಾಗೋರರ ಏಕಾಂಗಿ ಪಯಣದ ಬಗ್ಗೆ ಪ್ರಸ್ತಾಪಿಸುತ್ತಾರೆ. ಈ ಏಕಾಂತದ ಪಯಣವೆನ್ನುವುದು, ಹೋಳು ಹೋಳಾಗಿರುವ ನಮ್ಮ ಇಂದಿನ ಸಾಮಾಜಿಕ ಅಸ್ವಾಸ್ಥ್ಯಕ್ಕೆ ಒಂದು ರೀತಿಯ ಉತ್ತರ, ಟಾಗೋರರ ಏಕಾಂಗಿ ಪಯಣದ ಪರಿಕಲ್ಪನೆಯಲ್ಲಿರುವುದನ್ನು ಅವರು ಗುರುತಿಸುತ್ತಾರೆ.

ಟಾಗೋರರ “ಏಕಲಾ ಚಲೋ ರೇ” ಬಹಳ ಪ್ರಸಿದ್ಧ ಪದ್ಯ. ಅದು ಕವಿತೆಯಲ್ಲ ಒಂದು ಸಂಗತಿ ಎಂದು ಹೇಳುವವರೂ ಇದ್ದಾರೆ.
ಏಕಲಾ ಚಲೋ ರೇ
ನಿನ್ನ ಕರೆಯನ್ನು ಕೇಳುವವರು ಯಾರಿಲ್ಲವೇ? ನಡೆ ಏಕಾಂಗಿಯಾಗಿ
ಅವರು ಭಯಭೀತರಾಗಿ ಸದ್ದಿಲ್ಲದೇ ಗೋಡೆಗೆ ಮುಖ ತಿರುವಿದರೇ?
ಓ. ನತದೃಷ್ಟನೇ
ನಿನ್ನ ಮನದ ಬಾಗಿಲ್ಲನ್ನು ತೆರೆ, ಮಾತನಾಡು ನಿನ್ನೊಡನೆಯೇ ನೀನು
ಅವರು ನಡುದಾರಿಯಲ್ಲಿ ದುರ್ಗಮ ಕಾಡಿನಲ್ಲಿ ಕೈಬಿಟ್ಟರೇ?
ಓ ನತದೃಷ್ಟನೇ
ನಿನ್ನ ಕಾಲಕೆಳಗಿನ ಮುಳ್ಳುಗಳನ್ನು ಹೊಸಕಿ ಹಾಕು
ರಕ್ತದ ಗೀರು ದಾರಿಯಲ್ಲಿ ಏಕಾಂಗಿಯಾಗಿ ನಡೆ
ಬಿರುಗಾಳಿಯ ಕತ್ತಲ ರಾತ್ರಿಗಳಲ್ಲಿ ಬಾಗಿಲು ಮುಚ್ಚಿದರೇ?
ದೀಪ ಎತ್ತಿಹಿಡಿಯಲು ನಿರಾಕರಿಸಿದರೇ?
ಓ ನತದೃಷ್ಟನೇ
ನಿನ್ನ ನೂರಾರು ನೋವುಗಳ ದೊಂದಿಯಿಂದ
ನಿನ್ನ ಹೃದಯವನ್ನು ಬೆಳಗು
ಬೆಳಗಲಿ ಅದು ಏಕಾಂಗಿಯಾಗಿ…..

(ಟಾಗೋರರ ಏಕಲಾ ಚಲೋ ರೇ ಕವಿತೆಯ ಒಂದು ಸ್ಥೂಲವಾದ ಅನುವಾದವಿದು).

ಇಲ್ಲಿ ಎಲ್ಲರಿಂದ ನಿರಾಕರಿಸಲ್ಪಟ್ಟ ಒಬ್ಬ ನತದೃಷ್ಟನಿದ್ದಾನೆ. ಅವನು ದಲಿತನಿರಬಹುದು, ಕಾರ್ಮಿಕನಿರಬಹುದು, ಬಡವನಿರಬಹುದು. ಸಾಮಾಕಜಿವಾಗಿ ತಿರಸ್ಕರಿಸಲ್ಪಟ್ಟ ಒಬ್ಬ ವ್ಯಕ್ತಿಯ ಬದುಕಿಗೆ ಹುಮ್ಮಸ್ಸನ್ನು ತುಂಬುವ ಕೆಲಸವನ್ನು ಇಲ್ಲಿ ಕವಿ ಮಾಡುತ್ತಿದ್ದಾರೆ.

ಏಕಾಂತ / ಏಕಾಂಗಿ ಪಯಣ ಎನ್ನುವುದು ಟಾಗೋರರ ತಾತ್ವಿಕತೆಯಾಗಿದ್ದಿತು ಎನ್ನುವುದನ್ನು ಇಲ್ಲಿ ಪ್ರತಾಪ್ ಎತ್ತಿಹಿಡಿಯುತ್ತಾರೆ. ಸಾಮುದಾಯಕತೆಯ ಎದುರಿಗೆ ಸಾಲಿಟ್ಯೂಡ್‍ನ್ನು ಎತ್ತಿಹಿಡಿಯುವ ಕವಿಗೆ ರಾಷ್ಟ್ರದ ಕಲ್ಪನೆ, ಅದನ್ನು ಕಟ್ಟುವುದು, ಸಂಘಟನೆ ಇದೆಲ್ಲವೂ ಮಾನವ ಸಮಾಜವನ್ನು ಒಡೆಯುವ ಕಲ್ಪನೆಯೇ ಆಗಿದ್ದ್ದಿತು ಎಂಬುದನ್ನು, ರಾಷ್ಟ್ರೀಯತೆಯ ಬಗ್ಗೆ ಗಾಂಧೀಜಿ ಹಾಗೂ ಟಾಗೋರರ ನಡುವೆ ಇದ್ದ ಭಿನ್ನಾಭಿಪ್ರ್ರಾಯಗಳೇ ಎತ್ತಿತೋರಿಸುತ್ತವೆ. –ಗಾಂಧೀಜಿಯವರು ಸ್ವತಃ ಟಾಗೋರರ ಈ ಕವಿತೆಯನ್ನು ಮೆಚ್ಚಿಕೊಂಡಿದ್ದರೂ ಸಹ. ರಾಷ್ಟ್ರೀಯತೆ ಎನ್ನುವ ಕಲ್ಪನೆ ಪಾಶ್ಯಾತ್ಯರು ಮನಗಾಣಿಸಿದ ಒಂದು ಫ್ಯಾನ್ಸಿಯಾಗಿ ಕಾಣುತ್ತದೆ ಟಾಗೋರರಿಗೆ.

ಏಕಾಂಗಿ ಪಯಣವೆಂದರೆ ಯಾವುದರ ಅಸ್ಮಿತೆಯನ್ನೂ ಹೊಂದದ ಒಂದು ಅಖಂಡವಾದ ಪಯಣ. ನಾವು ನಮ್ಮ ನಮ್ಮ ಅಸ್ಮಿತೆಗಳ ಗೋಡೆಗಳ ನಡುವೆ ಮೂಗುಬ್ಬಸ ಪಡುತ್ತಾ ಅವುಗಳನ್ನೇ ವೈಭವೀಕರಿಸುತ್ತಾ ವಿಜೃಂಭಿಸುತ್ತಿರುವ ಅಪಾಯ ಎಂದಿಗಿಂತ ಇಂದು ಹೆಚ್ಚಾಗಿ ತಟ್ಟುತ್ತಿದೆ. ಜಾತಿ, ಸಮುದಾಯ, ರಾಷ್ಟ್ರ ಭಾಷೆಗಳ ಅಸ್ಮಿತೆಯಲ್ಲಿ ನರಳುತ್ತಿರುವ ನಾವು ಯಾವುದನ್ನಾದರೂ ನನ್ನದು ಎಂದು ಆತುಕೊಂಡಾಗ ನನ್ನದಲ್ಲದ್ದು ಬೇರೆ ಎಂಬ ಭಾವನೆ, ಒಳಗಿನವರು ಹೊರಗಿನವರು ಎಂಬ ಭೇದ, ನನ್ನ ದೇಶ ಮತ್ತು ವಿದೇಶ ಎಂಬ ಭೌಗೋಲಿಕ ಗೆರೆಗಳು ಮಾನವ ಜನಾಂಗವನ್ನು ಛಿದ್ರಗೊಳಿಸಿಬಿಟ್ಟಿರುವುದತ್ತ ಗಮನ ಹರಿಸುತ್ತದೆ.

ತನ್ನ ಬಾಹ್ಯಾಕಾಶನೌಕೆಯಲ್ಲಿ ಕುಳಿತ ಕಲ್ಪನಾ ಚಾವ್ಲಾ, ಅದು ಭೂಮಿಗೆ ಅಪ್ಪಳಿಸುವ ಕೆಲವೇ ಗಂಟೆಗಳ ಮುನ್ನ ಭಾರತದ ಭೂಪಟವನ್ನು ನೋಡಲು ಪ್ರಯತ್ನಿಸುತ್ತಿದ್ದಳಂತೆ. ಆಗ ಅವಳಿಗೆ ಮೊದಲಿಗೆ ಕಂಡದ್ದು ನೀಲ ಗೋಳ. ಭಾರತದ ರಾಜ್ಯಗಳ ನಡುವಿನ ಭಾಗೋಳಿಕ, ಸಾಂಸ್ಕøತಿಕ ಗೆರೆಗಳು ಇರಲಿ, ಇಡೀ ಭೂಮಂಡಲದ ಭೌಗೋಳಿಕ ಸಾಂಸ್ಕøತಿಕ ಗೆರೆಗಳೂ ಅಳಿಸಿಹೋಗಿದ್ದವು. ಇಡೀ ಭೂಮಿಯನ್ನು ಅವಳು ಅಖಂಡವಾಗಿ ತನ್ನ ಅನುಭವಕ್ಕೆ ತಂದುಕೊಳ್ಳುತ್ತಿದ್ದಳು. ‘ವಸುಧೈವ ಕುಟುಂಬಕಂ’ ಎಂಬುದನ್ನು ಆತ್ಮಸಾತ್ ಮಾಡಿಕೊಳ್ಳಬೇಕೆಂದರೆ, ಅದನ್ನು ಅಖಂಡ ಸ್ವರೂಪದಲ್ಲಿ ನೋಡಬೇಕೆಂದರೆ ಬಾಹ್ಯಾಕಾಶದ ಎತ್ತರಕ್ಕೆ ಏರಬೇಕು.

ಎಲ್ಲ ರೀತಿಯ ಸೀಮೆ ಗಡಿಗಳನ್ನು ದಾಟಿದಾಗ, ಎಲ್ಲ ಅಸ್ಮಿತೆಗಳನ್ನು ಇಲ್ಲವಾಗಿಸಿಕೊಂಡಾಗ ಮಾತ್ರ ಇಂತಹ ಒಂದು ನೆಗೆತ ಸಾಧ್ಯ. ಈ ಊಧ್ರ್ವ ನೆಗೆತವೆಂಬುದು ಯಾವಾಗಲೂ ಏಕಾಂಗಿಯೇ ಆದುದು. ಏಕಾಂಗಿ ಪಯಣವೆಂದರೆ ಎಲ್ಲಾ ಅಸ್ಮಿತೆಯನ್ನು ಧಿಕ್ಕರಿಸಿ ದಾಟಿ ಮುಂದೆ ಹೋಗುವುದು. 1903 ರಲ್ಲಿ ಪ್ರಕಟವಾದ “ನಬ ಬರ್ಷ” ಎನ್ನುವ ಟಾಗೋರರ ಪ್ರಬಂಧದ ಕುರಿತು ಮಾತನಾಡುತ್ತಾ ಪ್ರತಾಪ್ ಭಾನು ಮೆಹ್ತಾ ಹೇಳುತ್ತಾರೆ, ಟಾಗೋರರ ಸಂದೇಶದ ಮುಖ್ಯಾಂಶವೆಂದರೆ, ಏಕಾಂಗಿ ಪಯಣಕ್ಕಾಗಿ ಹಾತೊರೆಯುವುದು.

ಟಾಗೋರರ ಈ ವಿಶಿಷ್ಟ ಗುಣ ಅವರ ಸಮಕಾಲೀನರೂ ಭಾವಿಸಿದ ಹಾಗೆ ಸ್ವಾರ್ಥದ ಪರಮಾವಧಿಯಾಗಿ ಕಾಣಬಹುದು- ಅದೂ ದೇಶವನ್ನು ಕಾಪಾಡುವ ಸಲುವಾಗಿ ಹುಟ್ಟಿಕೊಂಡ ರಾಜಕೀಯ ಸಂಘಟನೆಗಳ ಕಾವು ತೀವ್ರವಾಗಿದ್ದ ಕಾಲದಲ್ಲಿ. ಏಕಾಂಗಿ ಪಯಣವೊಂದೇ ಸಾಲದು, ಅದನ್ನು ಹೊಸ ರಾಜಕೀಯ ವ್ಯವಸ್ಥೆಯ ನಿರ್ಮಾಣಕ್ಕೆ ಜೋಡಿಸುವ ಕಲೆಗಾರಿಕೆಯೂ ಸಿದ್ಧಿಸಬೇಕು ಎನ್ನುವ ಪ್ರತಾಪ್ ಭಾನು ಮೆಹ್ತಾ, ಆದರೆ ಏಕಾಂತಕ್ಕಾಗಿ ಹಾತೊರೆದ ಟಾಗೋರರ ಉತ್ಸಾಹದ ಹಿಂದೆ ವಾಸ್ತವಿಕತೆಯ ಮೇಲೆ ಹತೋಟಿಯನ್ನು ಸಾಧಿಸುವ ಉದ್ದೇಶವೇ ಅಡಗಿದ್ದಿತು ಎಂದು ಅಭಿಪ್ರಾಯಪಡುತ್ತಾರೆ. ಟಾಗೋರರು ಒಂದು ಸತ್ಯವನ್ನಂತೂ ಆತ್ಮಸಾತ್ ಮಾಡಿಕೊಂಡಿದ್ದರು. ಅದೆಂದರೆ, ನಮ್ಮ ಸಾಮುದಾಯಕ ಅಸ್ಮಿತೆಯು ಮೂರು ಬಗೆಯಲ್ಲಿ ನಮ್ಮನ್ನು ವಾಸ್ತವದಿಂದ ದೂರ ತಳ್ಳಿಬಿಡುತ್ತದೆ.

ನಾವು, ಹಿಂದು ಮುಸ್ಲಿಂ, ಭಾರತೀಯ ಎಂಬ ಸಾಮುದಾಯಕ ಅಸ್ಮಿತೆಯ ಜೊತೆಗೆ ನಮ್ಮನ್ನು ನಾವು ಗುರುತಿಸಿಕೊಂಡಂತೆಲ್ಲಾ ಹೆಚ್ಚೆಚ್ಚು ನಾವು ಭೇದವಾದಿಗಳಾಗಿ, ಪ್ರತ್ಯೇಕತಾವಾದಿಗಳಾಗಿ ಉಳಿದುಬಿಡುತ್ತೇವೆ. ಇತರರನ್ನೂ ಹಾಗೆಯೇ ಪ್ರತ್ಯೇಕಗೊಳಿಸಿಬಿಡುತ್ತೇವೆ. ನಮ್ಮ ದುಃಖ ದುಮ್ಮಾನಗಳು, ಆಸೆ ಕನಸಗಳು, ಬಯಕೆ, ಭರವಸೆ ಆಸಕ್ತಿಗಳು ಎಲ್ಲವೂ ಈ ಬಲವಂತದ ಅಸ್ಮಿತೆಯೆಂಬ ಸರ್ವಾಧಿಕಾರ ಕಪಿಮುಷ್ಟಿಯೊಳಗೆ ಮುಲುಗಲು ಪ್ರಾರಂಭಿಸುತ್ತವೆ. ನಮ್ಮ ಸಾರ್ವಜನಿಕ ಸಂಬಂಧಗಳೊಳಗೆ ಸಮಷ್ಠಿ ಸ್ವಾಮ್ಯದ ಜಾತಿವಾಚಕ ಸಂಜ್ಞೆಗಳು, ಸರ್ವನಾಮಗಳು ಮೂಗುತೂರಿಸತೊಡಗುತ್ತವೆ. ಇಂತಹ ಕಡೆ ವೈಯಕ್ತಿಕ ಅನುಕಂಪೆ, ಕಾಳಜಿಗಳೂ ಗೈರುಹಾಜರಾಗಿಬಿಡುತ್ತವೆ. ಆದುದರಿಂದ ರಾಷ್ಟ್ರೀಯತೆ ಎನ್ನುವುದು ಯಾವಾಗಲೂ ವಾಸ್ತವಿಕತೆಯಲ್ಲ. ಕೆಲವೊಮ್ಮೆ ಅದು ಮಾನವೀಯ ವಾಸ್ತವತೆಯಿಂದ ಪಲಾಯನಗೊಳ್ಳುವ ಸತ್ಯವೂ ಆಗಿರಬಹುದು.
ನಮ್ಮ ಇಂದಿನ ಈ ಅವ್ಯವಸ್ಥೆಗೆ ಪ್ರಕೃತಿಯಲ್ಲಿ ಪರಿಹಾರವಿದೆ, ಪ್ರಕೃತಿಯ ಸಮೃದ್ಧತೆಯಲ್ಲಿ, ಅದರ ಲಯಗಾರಿಕೆಯಲ್ಲಿ ನಮ್ಮ ಎಲ್ಲ ಅನಿಷ್ಟಗಳಿಗೂ ಉತ್ತರವಿದೆ, ಎಂಬ ಟಾಗೋರರು ಮಾತನ್ನು ಮೆಹ್ತಾ ಪ್ರಸ್ತಾಪಿಸುತ್ತಾರೆ. ಆದರೆ ಇಂದು ಪ್ರಕೃತಿಯೆಂಬುದು ನಮ್ಮ ಬದುಕಿನ ಮೂಲ ಸಂಪತ್ತಾಗಿ, ನಮ್ಮನ್ನ ಕಾಯುವ ಸಾಧನವಾಗಿ ಉಳಿದಿಲ್ಲ. ಇಂದು ಗಾಳಿ, ನೀರು ಪರಿಸರವೆನ್ನುವುದು ನಮ್ಮ ಉಪಭೋಗದ ಪಾಪಗಳಿಗೆ ತುತ್ತಾಗಿ ಮನುಕುಲಕ್ಕೆ ಮಾರಕವಾಗಿದೆ. ಕಟು ವಾಸ್ತವದ ಮೇಲೆ ನಿಂತಿರುವುದಾಗಿ ಭ್ರಮಿಸಿರುವ ಇಂದಿನ ಸಮಕಾಲೀನ ಸಮಾಜಕ್ಕೆ ಇಂತಹ ಒಂದು ಮೂಲಭೂತ ಸತ್ಯದ ಅರಿವಿಲ್ಲದಾಗಿದೆ. ಇದು ವಾಸ್ತವಿಕತೆಯಿಂದ ಪಲಾಯನವಲ್ಲದೇ ಬೇರೇನೂ ಅಲ್ಲ.

ಕೆಲವಾರು ವರುಷಗಳಿಂದ ನಮ್ಮ ಸಮಾಜವು ತನ್ನ ವಾಸ್ತವಿಕತೆಯ ಮೇಲೆ ಹತೋಟಿಯನ್ನು ಕಳೆದುಕೊಳ್ಳುತ್ತಿದೆ. 2018ರ ಹೊಸ್ತಿಲಲ್ಲಿ ಹೊಸವರುಷದ ಶುಭಾಶಯವೇನಾದರೂ ಇದ್ದರೆ ಅದು ಮತ್ತೆ ತನ್ನ ನಿಜದ ನೆಲೆಗೆ, ವಾಸ್ತವಿಕತೆಗೆ ಮರಳಬೇಕು ಎನ್ನುವುದೇ ಆಗಿದೆ. ನಮ್ಮ ಇಂದಿನ ಪ್ರಯೋಗಶೀಲತೆ, ಬದಲಾವಣೆಯ ಹಂಬಲ ಮತ್ತು ಅತಿಯಾದ ವ್ಯಸ್ತ ಬದುಕಿನ ಈ ದಾಂಗುಡಿಯನ್ನು ವಿವರಿಸಲು ಈ ಮಾತುಗಳು ಒಂದು ಅಪರೂಪದ ವ್ಯಾಖ್ಯಾನವಾಗಬಹುದು. ಆದರೆ ಟಾಗೋರರ ಮಾತುಗಳು, ನಮ್ಮ ಪ್ರಯೋಗಶೀಲತೆ, ಹದ್ದುಮೀರುತ್ತಿರುವ ಕ್ರೌರ್ಯ, ದ್ವೇಷ ಸಾಧನೆ ಇವುಗಳು ಹೇಗೆ ವಾಸ್ತವವನ್ನು ಮರೆಮಾಚುತ್ತಿವೆ ಎಂಬುದನ್ನೇ ಸೂಚಿಸುತ್ತಿವೆ, ಎನ್ನುತ್ತಾರೆ ಪ್ರತಾಪ್.

ವಾಸ್ತವಿಕತೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವ ಏಕಾಂಗಿ ಪಯಣದ ಇನ್ನೊಂದು ಅಂಶವೆಂದರೆ, ಸಮುದಾಯದ ಜೊತೆಗೆ ಗುರುತಿಸಿಕೊಂಡ ಪ್ರತಿಯೊಬ್ಬ ವ್ಯಕ್ತಿಯೂ ಎಂದೂ ಸರ್ವಾಧಿಕಾರದ ನೆರಳಲ್ಲಿ, ನಿರಂತರ ಅದರ ಕಣ್ಗಾವಲಿಗೆ ಪಕ್ಕಾಗಿ, ತನ್ನ ಬದುಕನ್ನು ಎಲ್ಲ ವಿಧದಲ್ಲಿಯೂ ಇನ್ನೊಬ್ಬ ವ್ಯಕ್ತಿಯ ಮುಂದೆ ಸಮರ್ಥಿಸಿಕೊಳ್ಳಬೇಕಾಗುತ್ತದೆ ಎನ್ನುವ ಟಾಗೋರರ ಮಾತನ್ನು ಅವರು ಒಪ್ಪಿಕೊಳ್ಳುತ್ತ್ತಾ, ನಾವು ನಮ್ಮ ಬಗೆಗಿನ ವಾಸ್ತವಪ್ರಜ್ಞೆಯನ್ನು ಮೂರು ಬಗೆಯಲ್ಲಿ ಕಳೆದುಕೊಂಡಿದ್ದೇವೆ. ಏಕಾಂತ ಸ್ಥಿತಿಯ ನಿರ್ಮಾಣಕ್ಕೆ ಕಾರಣವಾಗಬಹುದಾದ ಸಾರ್ವಜನಿಕ ಮತ್ತು ಖಾಸಗಿ ಎಂಬುದರ ನಡುವಿನ ವ್ಯತ್ಯಾಸವನ್ನು ಅಳಿಸಿಹಾಕಿಬಿಟ್ಟಿದ್ದೇವೆ, ಹೀಗಾಗಿ ಬೀದಿ ನಮ್ಮ ಮನೆಯೊಳಗಿನ ಖಾಸಗೀತನದ ಮೇಲೆ ಸದಾ ಕಣ್ಣಿಟ್ಟಿರುವಂತೆ ಆಗಿಬಿಟ್ಟಿದೆ. ಅಲ್ಲದೇ, ನಮ್ಮನಮ್ಮ ಛೇಂಬರುಗಳಿಗೇ ನಾವು ಅಂಟಿಕೊಂಡು ಕುಳಿತುಬಿಟ್ಟಿರುವುದರಿಂದ ಅಲ್ಲಿ ಏಳುವ ನಮ್ಮ ಪ್ರತಿಧ್ವನಿಯ ತರಂಗಗಳೇ ನಮ್ಮನ್ನು ರೂಪಿಸುವ ಅಪಾಯವೂ ಇದೆ.

ಯಾವಾಗಲೂ ಸಾರ್ವಜನಿಕ ಬದುಕಿಗೇ ಅಂಟಿಕೊಂಡು ತನ್ನನ್ನು ತಾನು ಸಮರ್ಥಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಒಂದು ವಿಶ್ವಸನೀಯ ಸಂವಾದವು ಸಾಧ್ಯವಾಗುವುದಿಲ್ಲವೆಂಬ ಅಂಶವು ಟಾಗೋರ್ ಅವರಿಗೆ ತಿಳಿದಿತ್ತು ಎಂಬ ಅಂಶವನ್ನು ಎತ್ತಿಹಿಡಿಯುತ್ತಾರೆ. ಆದುದರಿಂದ ಏಕಾಂಗಿ ಪಯಣ ಎಂಬುದು ಅಂತಿಮವಾಗಿ ‘ಕಾಲ್ಪನಿಕ ಸತ್ಯ’ (ಪೋಸ್ಟ್ ಟ್ರೂಥ್) ಕ್ಕೆ ಒಂದು ವಿಷಹಾರಕ ಔಷಧಿಯೇ ಆಗಿದೆ. ಎಲ್ಲಿ ಅಧಿಕಾರಕ್ಕಾಗಿ ಹುಸಿ ಪ್ರಾತಿನಿಧ್ಯವನ್ನು, ನಕಲಿ ಪ್ರಾತಿನಿಧ್ಯವನ್ನು ಸೃಷ್ಟಿಸಲಾಗುತ್ತಿದೆಯೋ ಅಲ್ಲೆಲ್ಲಾ ವಾಸ್ತವತೆಯಿಂದ ಪಲಾಯನ ಮಾಡುತ್ತಾ (ಸತ್ಯ) ನಮ್ಮಿಂದಲೇ ನಮ್ಮನ್ನು ದೂರ ಎಳೆದುಕೊಂಡು ಹೋಗಿಬಿಡುತ್ತದೆ. ಏಕಾಂಗಿತನಕ್ಕೆ ಬೇಡಿಕೆ ಇಡುವುದೆಂದರೆ ವಾಸ್ತವಿಕತೆಯ ಹೆಸರಿನಲ್ಲಿ ಮೊರೆ ಇಡುವುದೇ ಆಗಿದೆ ಎಂದು ಹೇಳುತ್ತಾರೆ.

ಉಪಕರಣವಾದದ (instrumentalism) ವಿರುದ್ಧ ದನಿಯೆತ್ತ್ತಿದ ಟಾಗೋರರ ಮಾತನ್ನು ವಿವರಿಸುತ್ತಾ, ಪ್ರತಾಪ್ ಅವರು ‘ಬದುಕಿನ ನಿಜವಾದ ಕೊನೆಯೆಂದರೆ “ ಏನು ಆಗಬೇಕು” ಎನ್ನುವುದೇ ಹೊರತು “ಏನು ಮಾಡಬೇಕು” ಎನ್ನುವುದಲ್ಲ, ಎನ್ನುವ ಟಾಗೋರರ ಮಾತು ಹೆಚ್ಚು ನಿರ್ಗತಿಕರಿರುವ ನಮ್ಮ ಸಮಾಜದಲ್ಲಿ ಮೇಲುನೋಟಕ್ಕೆ ಸ್ವಾರ್ಥಪರವಾಗಿ ಕಾಣಬಹುದು. ಆದರೆ ಅತಿಯಾದ ಉಪಕರಣವಾದದಿಂದಾಗಿ ಎಲ್ಲಿ ಸಮಾಜ ಮತ್ತು ಬದುಕಿನ ಎಲ್ಲಾ ಆಯಾಮಗಳೂ ಭೌತಿಕವಾದ ಯಾವುದಾದರೂ ವೇದಿಕೆಯಮೇಲೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಬೇಕಾಗುತ್ತದೆಯೋ ಇಲ್ಲವೇ ಹತ್ತಿಕ್ಕಬೇಕಾದ ಅಗತ್ಯವಿರುತ್ತದೆಯೋ ಅಲ್ಲೆಲ್ಲ್ಲಾ ಮಾನವ ಬದುಕು ವಿನಾಶದತ್ತ ಸರಿಯುತ್ತದೆ.

ಈ ಉಪಕರಣವಾದವೇ ನಮ್ಮೊಳಗಿನ ರಾಕ್ಷಸೀಯ ಸಾಮಥ್ರ್ಯವನ್ನು ಪರಮಾವಧೀ ಎಚ್ಚರಿಸಿ, ಉದ್ದೀಪಿಸಿ ಉನ್ನತ ನಾಗರೀಕತೆಯ ಮೌಲ್ಯಗಳಾದ ‘ಸಂತೃಪ್ತಿ, ಶಾಂತಿ, ಸಂಯಮ, ಕ್ಷಮೆ” ಮುಂತಾದವುಗಳನ್ನು ಮರೆಯುವಂತೆ ಮಾಡಿವೆ, ಎಂಬ ಸತ್ಯವನ್ನು ಟಾಗೋರರು ಕಂಡುಕೊಂಡಿದ್ದರು ಎಂದು ಮೆಹ್ತಾ ಅಭಿಪ್ರಾಯಪಡುತ್ತಾರೆ.

ಸಾಮುದಾಯಕ ಆತ್ಮರತಿ, ಕ್ರೂರವಾದ ಉಪಕರಣವಾದ, ಹಾಗೂ ಪ್ರಚಾರಪ್ರಿಯತೆ ಇವು
ಪ್ರಕೃತಿಯ ಹಾಗೂ sಸ್ವಯದ ಬಗೆಗಿನ ಪರಮ ವಾಸ್ತವಿಕತೆಯತ್ತ ದೃಷ್ಟಿಹರಿಸದಂತೆ ನಮಗೆ ತಡೆಗೋಡೆಯೊಡ್ಡಿವೆ ಇದನ್ನು ನಿವಾರಿಸಿಕೊಳ್ಳುವುದೇ ಹೊಸವರುಷದ ಹಾರೈಕೆಯಾಗಲೀ ಎನ್ನುವುದೇ ಮೆಹ್ತಾ ಅವರ ಶುಭ ಆಶಯವಾಗಿದೆ.

Leave a Reply