ಕಾವ್ಯ ಹೇಗಿರಬೇಕು ಅಂತ ಯಾರಾದರೂ ನನ್ನಲ್ಲೇನಾದರೂ ಅಪ್ಪಿ ತಪ್ಪಿ ಕೇಳಿದರೆ..

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ.

ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ

ಆ ಕವಿ ‘ಪೊಯೆಟ್ ಆ ದಿ ವೀಕ್’ ಕೂಡಾ

ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ ಹೋಗಿದ್ದೇವೆ.

ಅವರು ಕವಿತೆಯನ್ನು ಓದಿ ಅದರ ಸ್ಪರ್ಶಕ್ಕೆ ಮನಸೋತ ಬಗೆಯನ್ನು ಬಿಚ್ಚಿಡುತ್ತಾರೆ.

ಕಳೆದ ವಾರ ಹಾಗೆ  ‘ಪೊಯೆಟ್ ಆ ದಿ ವೀಕ್’ ಆದವರು ಡಾ ಲಕ್ಷ್ಮಣ್ ವಿ ಎ

ಅವರ ಕವಿತೆಗಳು ಇಲ್ಲಿವೆ.

ಈಗ ಅದಕ್ಕೆ ಶ್ರೀನಿವಾಸ ಜೋಕಟ್ಟೆ ಅವರು ಪ್ರತಿಕ್ರಿಯಿಸಿದ ರೀತಿಯನ್ನು ನೋಡಿ


ದಕ್ಷಿಣ ಕನ್ನಡದ ಜೋಕಟ್ಟೆಯ ಹುಡುಗ ಮುಂಬೈನ ಧಿಕ್ಕು ಹಿಡಿದಾಗ ಒಡಲಲ್ಲಿ ನೋವಿತ್ತು, ಬಗಲಲ್ಲಿ ಬಡತನವಿತ್ತು. ಆದರೆ ಈ ಹುಡುಗ ಸಾಂಸ್ಕೃತಿಕವಾಗಿ ಸಾಕಷ್ಟು ಶ್ರೀಮಂತನಿದ್ದ. ಹಾಗಾಗಿಯೇ ಈತ ಈಗ ಮುಂಬಯಿ ಕನ್ನಡ ಸಾಂಸ್ಕೃತಿಕ ಲೋಕದ ಅನಧಿಕೃತ ರಾಯಭಾರಿ

‘ಕರ್ನಾಟಕ ಮಲ್ಲ’ ಪತ್ರಿಕೆಯ ಮೂಲಕ ಎಲ್ಲರಿಗೂ ಪರಿಚಿತರಾದ ಜೋಕಟ್ಟೆ ನಂತರ ತಮ್ಮ ಸಹೃದಯತೆಯ ಕಾರಣದಿಂದಾಗಿ ದೊಡ್ಡ ಆಪ್ತ ಲೋಕ ಕಟ್ಟಿಕೊಂಡರು. ಅದೇ ಅವರಿಗೆ ಇನ್ನೊಂದು ಸಂಪತ್ತಾಯಿತು. ಸದಾ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗುವ ಇವರು ತಮ್ಮ ಜೊತೆ ಓದುಗರನ್ನೂ ಇನ್ನಿಲ್ಲದಂತೆ ತಿರುಗಿಸುತ್ತಾರೆ.

ಮುಂಬೈನ ಗಲ್ಲಿ ಗಲ್ಲಿಗಳಿಂದ ಹಿಡಿದು ಅಲ್ಲಿನ ಭೂಗತ ಲೋಕಕ್ಕೂ ಕರೆದೊಯ್ದು ನೇಪಾಳದವರೆಗೆ ನಮ್ಮನ್ನು ಸಲೀಸಾಗಿ ಸುತ್ತಿಸಬಲ್ಲರು. ಹಾಗೆ ಸುತ್ತಿದ ನೇಪಾಳ ಪ್ರವಾಸ ಕಥನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೂ ಪಾತ್ರವಾಯಿತು.

ಜೋಕಟ್ಟೆ ಈ ವರೆಗೆ ಕತೆ, ಕವಿತೆ ಲೇಖನಗಳ 29 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

—————————————————————————————————————————————————————-

ಕಾವ್ಯ ಹೇಗಿರಬೇಕು ಅಂತ ಯಾರಾದರೂ ನನ್ನಲ್ಲೇನಾದರೂ ಅಪ್ಪಿ ತಪ್ಪಿ ಕೇಳಿದರೆ ಇನ್ನು ಮುಂದೆ ನಾನು ಡಾ.ಲಕ್ಷ್ಮಣ್ ವಿ.ಎ ಅವರ ಕವನಗಳತ್ತ ಬೆರಳು ತೋರಿಸಬಹುದೇನೋ.

ನಿಜಕ್ಕೂ ನನಗೆ ಲಕ್ಷ್ಮಣ್ ಅವರ ಆತ್ಮಶೋಧನಾ ಪ್ರವ್ರತ್ತಿ, ಶಬ್ದಗಳಲ್ಲಿನ ಶಕ್ತಿಯನ್ನು ಕಂಡು ವಿಸ್ಮಯವೂ ಅವರ ಕಾವ್ಯದ ನೇಯ್ಗೆಯ ರಸವತ್ತಾದ ನಿರೂಪಣೆಗೆ ಹೆಮ್ಮೆಯೂ ಏಕಕಾಲಕ್ಕೆ ಉಂಟಾಯಿತು.

“ಬಾ ಸುಜಾತಾ, ತಥಾಗತನ ಮೂರ್ತಿಗೆ ಮರಳಿ ಕಲ್ಲಾಗುವ ಆಸೆಯಾಗಿದೆ. ಆ ಕಲ್ಲುಕುಟಿಗನ ಬೇಗ ಕರೆ ತಾ” (ಮೋಕ್ಷವ……..)
ಎಂದು ಬುದ್ದನಾಗಲು ಹೊರಟವನನ್ನು ಮತ್ತೆ ನರಮಾನವನಾಗುವತ್ತ ಮೂಲವನ್ನು ತಿರುಗಿ ನೋಡುವ ಈ ಶೋಧನಾ ಪ್ರವ್ರತ್ತಿ ಇವರ ಕವಿತೆಗಳ ಕೇಂದ್ರ.

ಆಧುನಿಕತೆಗೆ ಸಂಕೇತವಾದ,

“ಡಾಮರು ರಸ್ತೆ ಬಳಸದೆ
ಬಳಸು ದಾರಿಯಲ್ಲಿ
ಅಡ್ಡಾದಿಡ್ಡಿಯ ಹೆಜ್ಜೆಗಳಲ್ಲಿ
ಊರ ದಾರಿಯಲ್ಲಿ ಮುನ್ನಡೆಯುವುದು”
(ಊರದಾರಿ)

“ಒಂಟಿ ನಾವೆಯ ಬಿಟ್ಟು ಎಲ್ಲೋನಡೆದು ಹೋಗಿರುವ ನಾವಿಕನ
ಪತ್ತೆಹಚ್ಚುವುದು”
(ಹೆಜ್ಜೆಯ ಕಾಲಿಗೆ….)

“ಸಮುದ್ರ ಕಾಣದ ಬಯಲು
ಸೀಮೆಯ ಅಪ್ಪನಲ್ಲಿ
ಸಮುದ್ರ ಎಲ್ಲಿರುವುದು?….ಕೇಳುವುದು”
(ಅಪ್ಪ ಮತ್ತು ಕಡಲು)

…. ಈ ಎಲ್ಲ ಸಂಗತಿಗಳ ಹುಡುಕಾಡುತ್ತಾ ಹೋದಾಗ “ಬಳಸು ದಾರಿ”ಯಲ್ಲಿ ಕೊನೆಯ ಮನೆಯ ಮುದುಕ “ಯಾರ ಮಗ, ಯಾವೂರು ನಿನ್ನದು?” ಎಂದು ಪ್ರಶ್ನಿಸುವ ಮೂಲಕ ಮರುಶೋಧನೆಗೆ ಇಳಿಸುವುದು…… ಇದನ್ನೆಲ್ಲ ಗಮನಿಸಿದರೆ ಈ ನಾಲ್ಕೈದು ಕವನಗಳಲ್ಲೇ ಎಂತಹ ಗಾಢವಾಗಿ ತಟ್ಟಿದ ವಸ್ತು, ಧ್ವನಿಪೂರ್ಣವಾದ ಪ್ರತಿಮೆಗಳು, ನೆಲದಲ್ಲೇ ನಿಂತು ಕಾಣಿಸಿದ ಜೀವನ ಪ್ರೀತಿ ಗಮನಸೆಳೆಯದೆ ಇರಲಾರದು.

ಶ್ರೀನಿವಾಸ ಜೋಕಟ್ಟೆ.
ಮುಂಬಯಿ.

2 Responses

 1. Beeru Devaramani says:

  ಚೆನ್ನಾಗಿ ವಿಮರ್ಶೆ ಮಾಡಿರುವೀರಿ ಸರ್.
  ನಿಮ್ಮ ತೌಲನಾತ್ಮಕ ಬರಹ ಕಾವ್ಯದೆಡೆಗಿನ ಹೊಸ ಹೊಸ ಸಂಗತಿಗಳನ್ನು ಸೂಚಿಸುವಂತದ್ದು.
  ಲಕ್ಷ್ಮಣ್ ವಿ ಎ ಸರ್ ರವರ ಕವಿತೆಯೆಡೆಗಿನ ಸೆಳೆತ ಮೆಚ್ಚತಕ್ಕದ್ದು. ಅದ್ಭುತವಾಗಿ ಕವಿತ್ವವನ್ನು ಕಟ್ಟಬಲ್ಲರು.
  ಇನ್ನೊಷ್ಟು ನವೀರೇಳಿಸುವಂತ ಕವಿತೆಗಳು ಅವರಿಂದ ಮೂಡಿ ಬರಲಿ .

 2. Srinivasachari says:

  ನೀವು ಚನ್ನಾಗಿ ಬರೆಯುತ್ತೆರಾ ನನಗೂ ತುಂಬಾ ಇಷ್ಟವಾಯಿತು

Leave a Reply

%d bloggers like this: