ಕೊಲೆ ಮಾಡಿರುವ ಯುವಕರು ಬಹುಷಃ ತಮ್ಮ ಸಮೀಪದಲ್ಲಿರುವ ಕಡಲನ್ನೂ ಸರಿಯಾಗಿ ನೋಡಿಲ್ಲವೆನ್ನಿಸುತ್ತದೆ..

ಎಲ್.ಸಿ.ಸುಮಿತ್ರ

ಪಡುವಣ ಕಡಲಿನ ತೆಂಗಿನ ಮಡಿಲಿನ ನಡುವಲಿ ಹರಿವುದು ಹೊಳೆಯೊಂದು..

ನಾಲ್ಕು ದಶಕಗಳ ಹಿಂದೆ ಮುಲ್ಕಿ ವಿಜಯಾ ಕಾಲೇಜಿನ ಲೇಡೀಸ್ ಹಾಸ್ಟೆಲ್ ನಲ್ಲಿದ್ದಾಗ, ಸಮೀಪದಲ್ಲಿ ಹರಿಯುತ್ತಿದ್ದ ಶಾಂಭವಿ ನದಿ ನೋಡಿದಾಗ ಈ ಕವಿತೆ ನೆನಪಾಗುತ್ತಿತ್ತು.

ಎರಡೂ ದಡ ಮುಟ್ಟುವಂತೆ ತುಂಬಿಹರಿವ ನದಿ, ಪಾತಿ ದೋಣಿಗಳೂ ಎರಡೂ ಪಕ್ಕದ ತೆಂಗಿನ ತೋಪುಗಳು ಗದ್ದೆಗಳೂ ತುಂಬ ಸುಂದರ ಪರಿಸರ. ಹದಿನೇಳನೇ ನಂಬರಿನ ಹೆದ್ದಾರಿ ಊರ ಹೊರಗೇ ಹಾದುಹೋಗಿತ್ತು. ಊರೊಳಗಿನ ದಾರಿ ಮುಖ್ಯ ರಸ್ತೆಯನ್ನು ಸಂಧಿಸುವಲ್ಲಿ ಒಂದೆರಡು ಸಣ್ಣ ಅಂಗಡಿಗಳೂ ಬಸ್ ಸ್ಟ್ಯಾಂಡ್ ಇಷ್ಟೆ. ಈಗ ಊರು ಹೆದ್ದಾರಿಯ ಪಕ್ಕದಲ್ಲಿ ಬೆಳೆದಿದೆ. ಮಂಗಳೂರಿಗೆ ಆ ದಾರಿಯಲ್ಲಿ ಹೋಗುವಾಗ ಹಳೆಯ ಚಿತ್ರ ನೆನಪಾಗುತ್ತದೆ. ಮೊನ್ನೆ ಕಾಟಿಪಳ್ಳದ ಕೊಲೆ ನಡೆದಾಗ ಗೂಗಲ್ ಮ್ಯಾಪ್ ನಲ್ಲಿ ಅದೆಲ್ಲಿದೆ ಅಂತ ನೋಡಿದೆ. ಸುರತ್ಕಲ್ ದಾಟಿದ ಮೇಲೆ ಪಣಂಬೂರಿನ ಎಡಭಾಗದಲ್ಲಿ ದೆ.

ಸ್ವಲ್ಪವೇ ದೂರದಲ್ಲಿ ಅಗಾಧ ನೀಲಿಯ ಅರಬ್ಬೀಸಮುದ್ರವಿದೆ. ಪ್ರತಿಭೆಯ ಸಾಗರ NITK ಇದೆ. ಕಾಟಿಪಳ್ಳದ ಇನ್ನೊಂದು ಪಕ್ಕದಲ್ಲಿ ವಿಮಾನ ನಿಲ್ದಾಣವಿದೆ. ಎಷ್ಟೊಂದು ವಿದ್ಯಾಸಂಸ್ಥೆಗಳು ಮಂಗಳೂರಿನಲ್ಲಿ. ಆದರೇ ಈ ಸುಂದರ ಪ್ರಕೃತಿಯ ಮಡಿಲಿನಲ್ಲಿ ಯಾಕೆ ಈ ವಿಕೃತಿಯಿದೆ. ಇಲ್ಲಿಂದಲೇ ಎಷ್ಟೊಂದು ಸೃಜನಶೀಲ ಮನಸ್ಸುಗಳು ಬಂದಿವೆ.

ಕೊಲೆ ಮಾಡಿರುವ ಯುವಕರು ಬಹುಷಹ ತಮ್ಮ ಸಮೀಪದಲ್ಲಿರುವ ಕಡಲನ್ನೂ ಸರಿಯಾಗಿ ನೋಡಿಲ್ಲವೆನ್ನಿಸುತ್ತದೆ. ನನಗೆ ವರ್ಡ್ಸವರ್ತ್ ಕವಿಯ “ದ ವರ್ಲ್ಡ್ ಈಸ್ ಟೂ ಮಚ್ ವಿತ್ ಅಸ್ ’ ಎಂಬ ಕವಿತೆ ನೆನಪಾಗ್ತಿದೆ.

ಮನುಷ್ಯರು ಪ್ರಕೃತಿಯಿಂದ ವಿಮುಖರಾಗಿ, ವಸ್ತುವಾದಿಗಳಾದಾಗ, ಹಣ, ಅಧಿಕಾರಗಳೆ ಮುಖ್ಯವಾದಾಗ ಮನುಷ್ಯ ಮಾನವೀಯತೆಯಿಂದ ದೂರ ಸರಿಯುತ್ತಾನೆ. ವಿದ್ಯಾಸಂಸ್ಥೆಗಳ ನಡುವೆಯೇ ಇದ್ದರೂ ಈ ಕೊಲೆಗಾರರಿಗೆ ಒಳ್ಳೆಯ ವಿದ್ಯಾಭ್ಯಾಸ ಸಿಕ್ಕಿತ್ತೊ ಇಲ್ಲವೊ ಗೊತ್ತಿಲ್ಲ. ಇವರು ಹೀಗೆ ಮಾಡಲು ಇನ್ನು ಯಾರೋ ಕಾರಣ ಎಂಬ ವಾದವಿದೆ, ಆದರೆ ಇವರಿಗೆ ಸ್ವಂತ ಬುದ್ಧಿ, ವಿವೇಚನೆ ಇಲ್ಲದಿರಲು ಕಾರಣವೇನು? .

ಮನುಷ್ಯರು ಹೇಗೇ ಇರಲಿ ಪ್ರಕೃತಿ ಮಾತ್ರ ಕಾಲ ಕಾಲಕ್ಕೆ ಋತುಗಳನ್ನು ಬದಲಾಯಿಸಿ, ಮರಗಿಡಗಳು ಹೂಗಳನ್ನು ಕಾಯಿಗಳನ್ನು ತಳೆದು ನಮ್ಮ ಬದುಕು ಸಹನೀಯವಾಗುವಂತೆ ಮಾಡಿದೆ. ಬೆಳಿಗ್ಗೆ ಬಾಗಿಲು ತೆರೆದಾಗ ಸಂಪಿಗೆಯ ಪರಿಮಳದ ನೆಲಸೀತಾಳೆಯೊಂದು ಅರಳಿ ಸ್ವಾಗತಿಸಿತ್ತು.

ಇದು ಪ್ರತಿ ಚಳಿಗಾಲದಲ್ಲೂ ಎರಡು ಸಲ ಹೂ ಅರಳಿಸುತ್ತದೆ. ಕತ್ತಿಯಂತಹ ಅಗಲ ಕಿರಿದಾದ ಎಲೆಗಳೂ ಬುಡದಲ್ಲಿ  ಹುಸಿಗಡ್ಡೆಯೊ ಇರುವ ಈ ಗಿಡ ನಮ್ಮ ಆಗುಂಬೆಯ ಕಾಡಿನಲ್ಲಿ ವಿರಳವಾಗಿ ಇದೆ. ನಾನು ಮೇಗರವಳ್ಳಿ ಸಮೀಪದ ಕಾಡಿನಿಂದ ಹತ್ತು ವರ್ಷದ ಹಿಂದೆ ತಂದಿದ್ದು , ಬಿ ಜಿ ಎಲ್ ಸ್ವಾಮಿಯವರು ಎರಡು ಸಲ ಆಗುಂಬೆ ಕಾಡಿಗೆ ಬಂದರೂ ಅವರಿಗೆ ಈ ಗಿಡ ಸಿಗಲಿಲ್ಲ. ಹೂವಿಲ್ಲದಾಗ ಇದನ್ನು ಆರ್ಕಿಡ್ ಅಂತ ಗುರುತಿಸುವುದೂ ಕಷ್ಟ.

ಇಂತಹ ಹತ್ತಾರು ಸೋಜಿಗಗಳು ಪ್ರಕೃತಿಯಲ್ಲಿವೆ ಬದುಕಿನ ನೋವನ್ನೂ ವಿಕೃತಿಯನ್ನೂ ಮರೆಸುತ್ತವೆ.. ಆದರೆ ನಾವೇ ಸೄಷ್ಟಿಸಿಕೊಂಡಿರುವ ಟಿ ವಿ ಯೆಂಬ ನರಕ ಜೀವನವೆಲ್ಲ ಕೊಲೆ ಸುಲಿಗೆ ಅತ್ಯಾಚಾರಗಳಿಂದ ತುಂಬಿದೆ ಎಂದು ಬಿಂಬಿಸುತ್ತಿರುತ್ತದೆ.

4 Responses

 1. Shyamala Madhav says:

  ನಿಜ, ಸುಮಿತ್ರಾ, ಪ್ರಕೃತಿಯನ್ನು ಮರೆತು ವಿಕೃತಿಯ ದಾಸರಾಗಿರುವುದರಿಂದಲೇ ಈ ಎಲ್ಲ ಘೋರ ಉತ್ಪಾತ.

 2. Girijashastry says:

  ಎಷ್ಟು ನಿಜ ನಾವು ಪ್ರಕೃತಿಯಿಂದ ದೂರವಾಗುತ್ತಿದ್ದೇವೆ. ಅದಕ್ಕೇ ರಾಕ್ಷಸರಾಗುತ್ತಿದ್ದೇವೆ. ಪ್ರಕೃತಿಯಲ್ಲಿರುವ ವೈವಿಧ್ಯ, ಅದು ರೂಪುಗೊಳ್ಳುವ ಬಗೆ, ಅದರ ಔದಾರ್ಯ ಎಲ್ಲವನ್ನೂ ಸುಮ್ಮನೇ ನೋಡಿದರೂ ಸಾಕು ನಮ್ಮೊಳಗಿನ ಆಕಾಶ ವಿಸ್ತಾರವಾಗುತ್ತದೆ.ಚಂದದ ಬರಹ

 3. ಕೆ.ಆರ್ ಉಮಾದೇವಿ ಉರಾಳ್ says:

  ಪ್ರಕೃತಿಗಿಂತ ದೊಡ್ಡ ಗುರು, ಸದಾಶಯಗಳ ಪ್ರಚೋದಕ, ಉಪಶಮನಕಾರಿ ಬಾಮ್ ಬೇರೊಂದಿಲ್ಲ ಎಂಬ ಲೇಖನದ ಆಶಯ.ಕ್ಕಾಗಿ ಧನ್ಯವಾದಗಳು.
  ಕೆ.ಆರ್.ಉಮಾದೇವಿ ಉರಾಳ್.

 4. sumithra l c says:

  thank you , girijashastry, shyamala, umadevi..ಓದಿ ಪ್ರತಿಕ್ರಿಯಿಸಿದ್ದಕ್ಕೆ

Leave a Reply

%d bloggers like this: