ಇಲ್ಲಿರೋದು ಚ್ಯೂಯಿಂಗಮ್ ಕಾನೂನು…

”ಎಲ್ಲಿ ಹೋಗಿದ್ರಿ ನೀವು? ನಿಮ್ಮನ್ನು ಹುಡುಕಿ ಹುಡುಕಿ ಸಾಕಾಗಿಹೋಯಿತು. ಇಂದಿನಿಂದ ನೀವು ಎಲ್ಲೂ ಒಬ್ಬೊಬ್ಬರೇ ಹೋಗುವಂತಿಲ್ಲ”, ಎಂದು ಅಂದು ದೃಢವಾಗಿ ಹೇಳಿದ ನನ್ನ ದುಭಾಷಿ ಮಹಾಶಯ ಮಿಗೆಲ್ ಎಂಬೋಸೋ.

ಎಲ್ಲೂ ಒಬ್ಬೊಬ್ಬನೇ ಹೋಗುವುದಕ್ಕಿಲ್ಲ ಎಂದರೆ? ನಾನು ಗಂಭೀರವಾಗಿ ಯೋಚಿಸಿದೆ! ಕಳೆದ ಏಳು ವರ್ಷಗಳಿಂದ ನನ್ನ ಬಹುಪಾಲು ತಿರುಗಾಟಗಳು ಏಕಾಂಗಿಯಾಗಿಯೇ ಆಗಿವೆ. ಆಫ್ರಿಕಾದ ಅಂಗೋಲಾಕ್ಕೆ ಬಂದ ನಂತರವೂ ನನ್ನ ಹರಕುಮುರುಕು ಪೋರ್ಚುಗೀಸ್ ಭಾಷೆಯನ್ನು ಅವಲಂಬಿಸಿಕೊಂಡು ದುಭಾಷಿಯ ಅನುಪಸ್ಥಿತಿಯಲ್ಲೂ ಒಬ್ಬನೇ ನಾನು ಪ್ರಯಾಣಿಸಿದ್ದೇನೆ. ದಿನಕ್ಕೆ ಬರೋಬ್ಬರಿ ಏಳು ಘಂಟೆಗಳನ್ನು ರಸ್ತೆ ಮಾರ್ಗದಲ್ಲಿ ಕಳೆದರೂ ವಸತಿಗೃಹವನ್ನು ತಲುಪಿದಾಕ್ಷಣ ತಂದ ಬ್ಯಾಗುಗಳನ್ನು ಮೂಲೆಗೆಸೆದು ನಾನು ಮತ್ತೆ ‘ಊರು ಸುತ್ತಲು’ ಹೊರಟುಬಿಡುತ್ತಿದ್ದೆ. ”ಅವರಿಗೇನು? ಆರಾಮಾಗಿ ಕುಳಿತು ಪುಢಾರಿಯಂತೆ ಆದೇಶ ನೀಡುತ್ತಾರೆ. ಆದರೆ ಡ್ರೈವ್ ಮಾಡಬೇಕಾಗಿರುವುದು ನಾವಲ್ಲವೇ? ಈಯಪ್ಪನಿಂದಾಗಿ ನಮಗೂ ತಿರುಗಾಟದ ಕಾಟ ತಪ್ಪಿದ್ದಿಲ್ಲ”, ಎಂದು ಕೆಲ ಕಾರುಚಾಲಕರು ನನ್ನ ಬೆನ್ನ ಹಿಂದೆ ದೂರಿದ್ದೂ ಇದೆಯಂತೆ. ಇಂತಿಪ್ಪ ಅಲೆಮಾರಿಗೆ ಇಂದಿನಿಂದ ನೀವು ಹೀಗೆ ಒಬ್ಬೊಬ್ಬರೇ ಎದ್ದು ಹೋಗುವಂತಿಲ್ಲ ಎಂದುಬಿಟ್ಟರೆ?

ನನ್ನ ದುಭಾಷಿ ಮಹಾಶಯ ಮಿಗೆಲ್ ಎಂಬೋಸೋ ನನ್ನನ್ನು ಗೃಹಬಂಧನದಲ್ಲೇನೂ ಕೂಡಿಹಾಕಿರಲಿಲ್ಲ. ಆತನ ಕಾಳಜಿಯು ಸಹಜವಾಗಿತ್ತು. ”ಇವರ ರಕ್ಷಣೆ ನಿನ್ನ ಜವಾಬ್ದಾರಿ”, ಎಂದು ಅವನ ಮೇಲಧಿಕಾರಿಗಳು ಅವನಿಗೆ ಹೇಳಿದ್ದಿರಬಹುದು. ಹೀಗಾಗಿ ಮೈಯೆಲ್ಲಾ ಕಣ್ಣಾಗಿ ನನ್ನ ಚಲನವಲನಗಳ ಮೇಲೆ ಆತ ಒಂದು ಕಣ್ಣಿಟ್ಟಿದ್ದ. ಆದರೆ ನಾವಿಬ್ಬರೂ ಒಂದೇ ವಯಸ್ಸಿನವರಾಗಿರುವುದರಿಂದ ಕೊಂಚ ಹುಡುಗುಬುದ್ಧಿಯ ಕಪಿಚೇಷ್ಟೆಗಳೂ ಕೂಡ ಜೊತೆಜೊತೆಗೇ ನಡೆಯುತ್ತಿದ್ದವು. ಇಂಥದ್ದೇ ಒಂದು ಸಾಧಾರಣ ಸಂಜೆಯಲ್ಲಿ ನಾವಿಬ್ಬರೂ ನಮ್ಮ ವಸತಿಗೃಹದೆದುರಿಗಿದ್ದ ಶಾಪಿಂಗ್ ಮಾಲ್ ಒಂದಕ್ಕೆ ಖರೀದಿಗೆಂದು ಹೊರಟಿದ್ದೆವು. ಆಗ ಮಾರ್ಗಮಧ್ಯದಲ್ಲಿ ನಾಲ್ಕೈದು ತರುಣರ ಚಿಕ್ಕ ಗುಂಪೊಂದು ಏನೋ ಬಿಸಿಬಿಸಿ ವಾಗ್ವಾದಗಳನ್ನು ನಡೆಸುತ್ತಿರುವುದನ್ನು ನಾವು ನೋಡಿದ್ದೇವೆ.

ಆದರೆ ಸಂಶಯಾಸ್ಪದ ಸುಳಿವುಗಳೇನೂ ಇರದ ಪರಿಣಾಮವಾಗಿ ನಾವಿಬ್ಬರೂ ಅವರನ್ನು ಹಾದು ಮುಂದೆ ನಡೆದಿದ್ದೇವೆ. ಆದರೆ ಇನ್ನೇನು ನಮ್ಮ ಬೆನ್ನ ಹಿಂದೆ ಆ ಗುಂಪು ಚದುರಿಹೋಗಲಿದೆ ಎನ್ನುವ ಘಳಿಗೆಯಲ್ಲಿ ಮಿಗೆಲ್ ಏಕಾಏಕಿ ನನ್ನ ಕೈಹಿಡಿದು ಮುಂದೆ ಹೋಗದಂತೆ ತಡೆದಿದ್ದಾನೆ. ಕೂಡಲೇ ಅಲ್ಲೊಂದು ಶೂಟೌಟ್ ಆಗುತ್ತಿರುವಂತೆ ನಾವು ನಿಂತ ಆ ಜಾಗದಲ್ಲೇ ಬಗ್ಗಿ ಕೂತಿದ್ದೇವೆ.

ಆದರೆ ಹಾಗೇನೂ ಆಗಿರಲಿಲ್ಲ. ಇದಾದ ಒಂದೆರಡು ನಿಮಿಷಗಳವರೆಗೂ ನಾವು ಹೀಗ್ಯಾಕೆ ಗರಬಡಿದವರಂತೆ ನಿಂತಲ್ಲೇ ಕುಸಿದೆವು ಎಂಬುದು ನನಗೆ ಅರ್ಥವಾಗಿರಲಿಲ್ಲ. ಏಕೆಂದರೆ ನಗರವು ಎಂದಿನಂತೆ ಶಾಂತವಾಗಿತ್ತು. ವಾಹನಗಳು ಯಥಾಪ್ರಕಾರ ಲಗುಬಗೆಯಿಂದ ಓಡಾಡುತ್ತಿದ್ದವು. ಆ ತರುಣರ ಗುಂಪನ್ನಂತೂ ನಾನು ಮರೆತೇಬಿಟ್ಟಿದ್ದೆ. ”ಏನಾಯಿತು?”, ನಾನು ಮೆಲ್ಲನೆ ಅವನ ಕಿವಿಯಲ್ಲಿ ಉಸುರಿದೆ. ”ಅವರಲ್ಲೊಬ್ಬರ ಕೈಯಲ್ಲಿ ಪಿಸ್ತೂಲಿತ್ತು”, ಎಂದು ಪಿಸುಗುಟ್ಟಿದ ಮಿಗೆಲ್. ಸುತ್ತಲೂ ಇದ್ದ ಬೀದಿ ದೀಪಗಳ ಪ್ರಕಾಶಕ್ಕೆ ಅವನ ಕಪ್ಪು ಹಣೆಯಲ್ಲಿ ಪುಟ್ಟ ಮಣಿಗಳಂತೆ ಸಾಲುಗಟ್ಟಿ ನಿಂತಿದ್ದ ಬೆವರ ಹನಿಗಳು ಮಂದವಾಗಿ ಹೊಳೆಯುತ್ತಿರುವ ನಕ್ಷತ್ರಗಳಂತೆ ನನಗಂದು ಕಂಡವು. ನಾನು ಸುಮ್ಮನೆ ಬೆಪ್ಪುತಕ್ಕಡಿಯಂತೆ ಅವನನ್ನು ನೋಡುತ್ತಲೇ ಇದ್ದೆ.

ಆ ಕತ್ತಲಿನಲ್ಲಿ ಅವನು ರಿವಾಲ್ವರ್ ಒಂದನ್ನು ಯಾರ ಕೈಯಲ್ಲಿ ಅದ್ಯಾವಾಗ, ಹೇಗೆ ನೋಡಿದನೋ ನನಗಂತೂ ತಿಳಿದಿಲ್ಲ. ಆ ಗುಂಪನ್ನು ನೋಡಿದ ಮರುಘಳಿಗೆಯಲ್ಲೇ ನಾನು ಆ ದೃಶ್ಯವನ್ನು ಮರೆತುಬಿಟ್ಟಿದ್ದೆ. ಆ ಮುಖಗಳು ಜನನಿಬಿಡ ಬೀದಿಯಲ್ಲಿ ಓಡಾಡುತ್ತಿದ್ದ ನೂರಾರು ಜನರ ನಡುವೆ ಬೆರೆತು ನನ್ನ ಮಟ್ಟಿಗೆ ಕಳೆದುಹೋಗಿದ್ದವು. ಆದರೆ ಆತನ ಕಣ್ಣುಗಳಲ್ಲಿದ್ದ ಮೃತ್ಯುಭಯವು ತಾನು ಸತ್ಯವನ್ನೇ ನುಡಿಯುತ್ತಿರುವೆನೆಂಬಂತೆ ಬಾರಿ ಬಾರಿ ಹೇಳುತ್ತಿದ್ದವು. ಘಟನೆಯ ಗಾಂಭೀರ್ಯತೆಯು ನನಗೆ ಅರಿವಾದದ್ದೇ ಆಗ.

ಅಂಗೋಲಾ ಸೇರಿದಂತೆ ಬಹುಪಾಲು ಆಫ್ರಿಕನ್ ರಾಷ್ಟ್ರಗಳಲ್ಲಿ ಸುರಕ್ಷತೆಯೆಂಬುದು ಸ್ಥಳೀಯರಿಗೂ, ವಿದೇಶೀಯರಿಗೂ ಅದೆಷ್ಟು ದೊಡ್ಡ ಸಮಸ್ಯೆಯಾಗಿ ಉಲ್ಬಣಿಸಿದೆಯೆಂದರೆ ನಾವು ಕಳ್ಳರ, ಲೂಟಿಕೋರರ ನಡುವಿನಲ್ಲೇ ಬಾಳುತ್ತಿದ್ದೇವೆಯೆಂಬಂತೆ ಮೈಯೆಲ್ಲಾ ಎಚ್ಚರವಾಗಿರಬೇಕಾದ ಅನಿವಾರ್ಯತೆ ಇಲ್ಲಿದೆ. ಇದು ಅಂಗೋಲಾದಲ್ಲೂ ಸತ್ಯ. ಇಲ್ಲಿ ಮೈಮರೆಯುವುದೆಂದರೆ ಅಪಾಯಕ್ಕೆ ಆಹ್ವಾನ ನೀಡಿದಂತೆ.

ಕೆಲ ವರ್ಷಗಳ ಹಿಂದೆ ನೋಯ್ಡಾ ಮೂಲದ ನನ್ನ ಪರಿಚಿತರೊಬ್ಬರು ಸರಕಾರಿ ಪ್ರಾಜೆಕ್ಟ್ ಒಂದರ ನಿಮಿತ್ತ ಕೀನ್ಯಾದ ನೈರೋಬಿಗೆ ತೆರಳಿದ್ದರು. ಆಫ್ರಿಕಾಕ್ಕೆ ಮೊದಲ ಭೇಟಿಯಾಗಿದ್ದ ಆಕೆಗೆ ಅಲ್ಲಿಯ ಬೀದಿಗಳಲ್ಲಿರುವ ಅಪಾಯಗಳ ಬಗ್ಗೆ ಮಾಹಿತಿಯಿರಲಿಲ್ಲವೋ ಏನೋ. ತನ್ನ ಸಹೋದ್ಯೋಗಿಯೊಬ್ಬನ ಆಗಮನದ ನಿರೀಕ್ಷೆಯಲ್ಲಿ ಕಾರಿನೊಳಗೆ ಕಾದು ಕುಳಿತಿದ್ದ ಆಕೆ ವಿಪರೀತ ಶೆಖೆಯೆಂದು ಕಾರಿನ ಕಿಟಕಿಯ ಗಾಜನ್ನು ಇಳಿಸಿ ಹವೆಯನ್ನು ಆಸ್ವಾದಿಸಲು ಪ್ರಯತ್ನಿಸಿದ್ದಾರೆ.

ಇದಾದ ಕೆಲ ನಿಮಿಷಗಳಲ್ಲೇ ಯಾವನೋ ಆಗಂತುಕನೊಬ್ಬ ಬಂದು ನೇರವಾಗಿ ಆಕೆಯ ಕತ್ತಿಗೆ ಕೈಹಾಕಿ ತೆಳುವಾದ ಚಿನ್ನದ ಸರವನ್ನು ಎಗರಿಸಿದ್ದಾನೆ. ಅಷ್ಟೇ ಅಲ್ಲದೆ ಉದ್ಭವವಾದ ವೇಗದಲ್ಲೇ ಮರೆಯಾಗಿದ್ದಾನೆ ಕೂಡ. ಗೊಂದಲ ಮತ್ತು ಆಘಾತದ ಸ್ಥಿತಿಯಲ್ಲಿದ್ದ ಆಕೆ ಏನು ಮಾಡಬೇಕೆಂದು ತೋಚದೆ ಕೂತಲ್ಲೇ ಸ್ತಬ್ಧರಾಗಿಬಿಟ್ಟಿದ್ದಾರೆ. ”ಚಿನ್ನದ ಸರ ಹೋದದ್ದು ಹೋಗಲಿ, ಆತ ತಲೆಯನ್ನೇ ಕಳಚಿ ಕೊಂಡುಹೋಗಲಿಲ್ಲವಲ್ಲಾ ಅದೇ ದೊಡ್ಡದು”, ಎಂದು ನಂತರ ನನ್ನಲ್ಲಿ ನಗುತ್ತಾ ಹೇಳುತ್ತಿದ್ದರು ಆಕೆ.

ಅಂಗೋಲಾದಲ್ಲೂ ಒಮ್ಮೆ ಹೀಗಾಯ್ತು. ಮಾರುಕಟ್ಟೆಯಿಂದ ತರಕಾರಿಗಳನ್ನು ಖರೀದಿಸಿ ಕಾರಿನಲ್ಲಿ ಮನೆಯತ್ತ ಮರಳಿಬರುತ್ತಿದ್ದ ನಾನು ನಮ್ಮತ್ತಲೇ ಓಡಿಬರುತ್ತಿದ್ದ ದೊಡ್ಡ ಜನರ ಗುಂಪೊಂದನ್ನು ಕಂಡು ದಿಗಿಲಾಗಿ ಕೂಡಲೇ ವಾಹನವನ್ನು ನಿಲ್ಲಿಸು ಎಂದು ಚಾಲಕನಿಗೆ ಹೇಳಬೇಕಾಗಿ ಬಂದಿತ್ತು. ಅಷ್ಟಕ್ಕೂ ಆಗಿದ್ದೇನೆಂದರೆ ವಿಚಿತ್ರವಾಗಿ ಕಾಣುತ್ತಿದ್ದ ವ್ಯಕ್ತಿಯೊಬ್ಬ ನಮ್ಮ ಕಾರಿನ ಚಕ್ರದಡಿ ಬಿದ್ದು ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಹಾತೊರೆಯುತ್ತಿರುವವನಂತೆ ನಮ್ಮ ವಾಹನದತ್ತಲೇ ಓಡಿಬರುತ್ತಿದ್ದ. ಇನ್ನು ಆತನ ಹಿಂದೆ ಸುಮಾರು ಐವತ್ತರಿಂದ ಎಪ್ಪತ್ತು ಜನರು ಅವನನ್ನು ಅಟ್ಟಿಸಿಕೊಂಡು ಬೇರೆ ಬರುತ್ತಿದ್ದಾರೆ.

ಕೆಟ್ಟ ಕೋಪದಲ್ಲಿದ್ದ ಈ ಜನರ ಕೈಯಲ್ಲಿ ಕತಾನಾ (ಮಚ್ಚು) ಗಳಿಂದ ಹಿಡಿದು, ಕೋಲು, ಇಟ್ಟಿಗೆ, ಬೆತ್ತ ಇತ್ಯಾದಿಗಳೂ ಇದ್ದವು. ಖಾಲಿ ರಸ್ತೆಯಲ್ಲಿ ನೂರರ ವೇಗದಲ್ಲಿ ಹೋಗುತ್ತಿದ್ದ ನಮ್ಮ ವಾಹನವು ಬ್ರೇಕ್ ಹಾಕಿಕೊಂಡು ಬೇಗನೇ ನಿಂತುಬಿಟ್ಟರೂ ಆತ ಥಟ್ಟನೆ ತನ್ನ ಇರಾದೆಯನ್ನು ಬದಲಿಸಿದವನಂತೆ ಎಡಕ್ಕೆ ತಿರುಗಿ ಓಡಿಹೋಗಲು ಪ್ರಯತ್ನಿಸಿದ್ದ. ಆದರೆ ಆ ಕೋಪೋದ್ರಿಕ್ತ ಗುಂಪು ಮಾತ್ರ ಅವನನ್ನು ಹಿಡಿಯಲು ಪಣತೊಟ್ಟವರಂತೆ ಹಿಂದೆಯೇ ಓಡುತ್ತಿತ್ತು.

”ಇವನೇನಾದರೂ ಈ ತಲೆಕೆಟ್ಟ ಜನರ ಕೈಗೆ ಸಿಕ್ಕಿಬಿಟ್ಟರೆ ಸತ್ತೇ ಹೋಗುವನೋ ಏನೋ!”, ನಾನು ನನ್ನಷ್ಟಕ್ಕೇ ಗೊಣಗಿದೆ. ”ಬಹುಷಃ ಆತ ಏನನ್ನೋ ಕದ್ದು ಸಿಕ್ಕಿಬಿದ್ದಿದ್ದಾನೆ. ಅವನನ್ನು ಬಿಡೋದುಂಟಾ? ಈ ಜನರು ಮನಸ್ಸು ಮಾಡಿದರೆ ಆತನ ಮೈ ಮೇಲೆ ಪೆಟ್ರೋಲ್ ಸುರಿದು ಆತನನ್ನು ಜೀವಂತವಾಗಿ ದಹಿಸಬಲ್ಲರು”, ಎಂದ ಮಿಗೆಲ್. ಹೆಚ್ಚೆಂದರೆ ಆತನನ್ನು ಚೆನ್ನಾಗಿ ಚಚ್ಚಿ ಪೋಲೀಸರ ಕೈಗೊಪ್ಪಿಸುತ್ತಾರೆಂದು ಲೆಕ್ಕಹಾಕಿದ್ದ ನಾನು ಈ ಜೀವಂತ ದಹನದ ಮಾತನ್ನು ಕೇಳಿ ಒಳಗೊಳಗೇ ಸಣ್ಣಗೆ ನಡುಗಿಹೋದೆ. ವ್ಯಕ್ತಿಯೊಬ್ಬ ಹೊತ್ತಿ ಉರಿಯುತ್ತಿರುವ ಜ್ವಾಲೆಯನ್ನು ಮೈಯೆಲ್ಲಾ ತುಂಬಿಕೊಂಡು ಜೋರಾಗಿ ಅರಚುತ್ತಾ ದಿಕ್ಕಾಪಾಲಾಗಿ ಓಡುತ್ತಿರುವ ಸಿನಿಮೀಯ ದೃಶ್ಯವೊಂದು ನನ್ನ ಮನಸ್ಸಿನಲ್ಲಿ ಮೂಡಿ ಆತಂಕವನ್ನು ಹುಟ್ಟಿಸಿ ಮರೆಯಾಯಿತು.

”ಅಷ್ಟು ಸುಲಭವಾಗಿ ಸಾರ್ವಜನಿಕವಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಬಹುದೇ? ಕೊಲೆಗಾರನನ್ನು ವ್ಯವಸ್ಥೆಯು ಸುಮ್ಮನೆ ಬಿಡಲಿದೆಯೇ?”, ಎಂದು ಪ್ರಶ್ನಿಸಿದೆ ನಾನು. ”ಸಹಜವಾಗಿಯೇ ಇವನ್ನೆಲ್ಲಾ ನಡುಬೀದಿಯಲ್ಲಿ ಮಾಡುತ್ತಾರಾ? ಎಲ್ಲೋ ಗುಟ್ಟಾಗಿ ಮಾಡುತ್ತಾರೆ. ಬೀದಿಯಲ್ಲೇ ಮಾಡಿದರೂ ಅತ್ತಿತ್ತ ಪೋಲೀಸರು ಇಲ್ಲ ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳುತ್ತಾರೆ. ಇನ್ನು ಕೆಲಸವಾದ ನಂತರ ಎಲ್ಲರೂ ಬೇಗನೇ ಅಲ್ಲಿಂದ ಜಾಗ ಖಾಲಿಮಾಡುತ್ತಾರೆ.

ಅಷ್ಟಕ್ಕೂ ಜೈಲು ಸೇರುವುದೆಂದರೆ ಇಲ್ಲಿ ಮಹಾಸಂಗತಿಯೇನಲ್ಲ. ಒಂದು ಪಕ್ಷ ಶಂಕಿತನೊಬ್ಬ ಜೈಲು ಸೇರಿಯೇಬಿಟ್ಟ ಅಂದುಕೊಳ್ಳೋಣ. ಡಾಲರಿನ ಕೆಲ ನೋಟುಗಳನ್ನು ತೋರಿಸಿ ಆತ ಅಧಿಕಾರಿಗಳನ್ನು ಖರೀದಿಸಬಲ್ಲವನಾಗಿದ್ದರೆ ವಾರದೊಳಗೇ ಆಚೆ ಬರಬಲ್ಲ”, ಎಂದು ಇದೊಂದು ಗಂಭೀರವಾದ ವಿಷಯವೇ ಅಲ್ಲವೆಂಬ ಧಾಟಿಯಲ್ಲಿ ಹೇಳಿಬಿಟ್ಟ ದುಭಾಷಿ.ಮೇಲಿನ ಘಟನೆಯನ್ನು ಓದಿ ಅಂಗೋಲಾದಲ್ಲಿ ಅರಾಜಕತೆ ತಾಂಡವವಾಡುತ್ತಿದೆ, ಇಲ್ಲಿ ಕಾನೂನೇ ಇಲ್ಲ ಎಂದು ನೀವು ಅಂದುಕೊಂಡರೆ ತಪ್ಪಾಗಬಹುದು. ಸಂವಿಧಾನವೆಂಬುದು ಇಲ್ಲೂ ಇದೆ.

ಇಲ್ಲೂ ನಿಯಮಗಳು, ಕಾನೂನು-ಕಟ್ಟಳೆಗಳಿವೆ. ಆದರೆ ಅವುಗಳ ಅನುಷ್ಠಾನ ಮಾತ್ರ ದೇವರಿಗೇ ಪ್ರೀತಿ. ಸಮರ್ಪಕವಾಗಿ ಕಾರ್ಯರೂಪಕ್ಕೆ ಬರದ ಅದ್ಯಾವ ಕಾನೂನೇ ಆಗಲಿ ಅದು ಕಸಕ್ಕೆ ಸಮಾನ. ಇಂಥಾ ಕಾನೂನು ಇದ್ದರೇನು, ಇಲ್ಲದಿದ್ದರೇನು? ಕಾನೂನುಗಳ ವಿಚಾರಕ್ಕೆ ಬಂದರೆ ನಮ್ಮಲ್ಲೂ ಬಹಳ ಕುಂದುಕೊರತೆಗಳು ಕಾಣುತ್ತವೆ. ಅವುಗಳು ತಕ್ಕಮಟ್ಟಿಗೆ ಸಹಜ ಕೂಡ. ಹಲವು ಬಾರಿ ಇಂಥಾ ಚಿಕ್ಕಪುಟ್ಟ ಕೊರತೆಗಳನ್ನೇ ತಮ್ಮ ಲಾಭಕ್ಕೆ ಬಳಸಿಕೊಂಡು ಸಾಕ್ಷಿಗಳನ್ನು ತಿರುಚಲಾಗುತ್ತದೆ, ಸಿರಿವಂತರ ಕೈಮೇಲಾಗುತ್ತದೆ, ನ್ಯಾಯ ಮಣ್ಣುಮುಕ್ಕುತ್ತದೆ.

ಆದರೆ ಕಾನೂನೆಂಬುದು ತೀರಾ ಚ್ಯೂಯಿಂಗ್ ಗಮ್ ನಂತಾಗಿಬಿಟ್ಟರೆ ಎಲ್ಲರೂ ಅದನ್ನು ಕಚ್ಚಿ, ಎಳೆದಾಡಿ, ತಮಗೆ ಬೇಕಿರುವ ಆಕಾರದಲ್ಲಿ ಬದಲಾಯಿಸಿಕೊಂಡು ಸಿಕ್ಕಸಿಕ್ಕಲ್ಲಿ ಅಂಟಿಸಿ ಹೋಗುವುದನ್ನು ಯಾರೂ ತಪ್ಪಿಸಲಾರರು. ಈ ಹಿಂದೆ ಲೇಖನವೊಂದಕ್ಕಾಗಿ ಕೀನ್ಯಾದ ಬ್ಲಾಗ್ ಬರಹಗಾರ, ಯುವ ಸಾಮಾಜಿಕ ಕಾರ್ಯಕರ್ತನಾದ ಜೇಮ್ಸ್ ವಕೀಬಿಯಾನನ್ನು ಸಂದರ್ಶಿಸುತ್ತಿದ್ದ ನಾನು ಇದೇ ಪ್ರಶ್ನೆಯನ್ನು ಅವನ ಮುಂದಿಟ್ಟಿದ್ದೆ. ವಕೀಬಿಯಾ ಮತ್ತು ಕೆಲ ಉತ್ಸಾಹಿ ಸಂಘಟನೆಗಳ ಹಲವು ವರ್ಷಗಳ ಸತತ ಪ್ರಯತ್ನದ ನಂತರ ಕೀನ್ಯಾದಲ್ಲಿ ಪ್ಲಾಸ್ಟಿಕ್ ನಿಷೇಧದ ಗೆಝೆಟ್ ನೋಟೀಸನ್ನು ಅಧಿಕೃತವಾಗಿ ಜಾರಿಗೊಳಿಸಲಾಗಿತ್ತು.

ಈ ನಿಟ್ಟಿನಲ್ಲಿ ಕಾನೂನೊಂದನ್ನು ರೂಪಿಸಿದ್ದಲ್ಲದೆ ಅದರ ಉಲ್ಲಂಘನೆಯಾದರೆ ದೊಡ್ಡ ಮೊತ್ತದ ದಂಡ ಮತ್ತು ಎರಡರಿಂದ ನಾಲ್ಕು ವರ್ಷಗಳ ಜೈಲುಶಿಕ್ಷೆಯನ್ನೂ ಕೂಡ ಇದು ನಿಗದಿಪಡಿಸಿತ್ತು. ಕೊನೆಗೂ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹೇಳುತ್ತಿದ್ದ ವಕೀಬಿಯಾರಿಗೆ ನಾನು ಒಂದೇ ಒಂದು ಪ್ರಶ್ನೆಯನ್ನಿಟ್ಟಿದ್ದೆ: ”ಹೊಸ ಕಾನೂನನ್ನು ಪರಿಚಯಿಸಿದ್ದೇನೋ ಸರಿ. ಆದರೆ ಈ ಕಾನೂನು ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಳ್ಳಲಿದೆ ಎಂಬ ಬಗ್ಗೆ ನಿಮಗೆ ಖಾತ್ರಿಯಿದೆಯೇ?”, ಎಂದು.

ಈ ಪ್ರಶ್ನೆಯನ್ನು ನಾನು ನಿರಾಶವಾದಿಯಾಗಿಯೋ ಸಿನಿಕನಂತೆಯೋ ವಕೀಬಿಯಾರಲ್ಲಿ ಕೇಳಿರಲಿಲ್ಲ. ಅಸಲಿಗೆ ಪ್ಲಾಸ್ಟಿಕ್ ನಿಷೇಧದ ಪ್ರಯತ್ನಗಳು ಈ ಹಿಂದೆಯೂ ಕೀನ್ಯಾದಲ್ಲಿ ನಡೆದಿದ್ದವು. 2005 ಮತ್ತು 2007 ರಲ್ಲಿ ಮೊದಲ ಹಂತವಾಗಿ ಮೂವತ್ತು ಮೈಕ್ರಾನ್ ದಪ್ಪದ ಪ್ಲಾಸ್ಟಿಕ್ ನಿಷೇಧಕ್ಕೊಳಗಾದರೆ, 2009 ರಲ್ಲಿ ಅರವತ್ತು ಮೈಕ್ರಾನ್ ದಪ್ಪದ ಪ್ಲಾಸ್ಟಿಕ್ ಅನ್ನು ಕೀನ್ಯಾದಲ್ಲಿ ನಿಷೇಧಿಸಲಾಗಿತ್ತು.

ಆದರೆ ಸಿಕ್ಕ ಫಲಿತಾಂಶಗಳು ಮಾತ್ರ ನಿರಾಶಾದಾಯಕ. ಹಿಂದೆ ಜುಜುಬಿ ಐದು-ಹತ್ತು-ಇಪ್ಪತ್ತು ಶಿಲ್ಲಿಂಗ್ ಗಳ ದರದಲ್ಲಿ ಸಿಕ್ಕಸಿಕ್ಕಲ್ಲಿ ಬಿಕರಿಯಾಗುತ್ತಿದ್ದ ವಿವಿಧ ಗಾತ್ರಗಳ ಪ್ಲಾಸ್ಟಿಕ್ ಚೀಲಗಳು ನಿಷೇಧದ ಬೆನ್ನಿಗೇ ಏಕಾಏಕಿ ಭೂಗತವಾಗಿ ಚಲಾವಣೆಯಾಗತೊಡಗಿದ್ದವು. ಅಂದಹಾಗೆ ಆಫ್ರಿಕಾದಲ್ಲಿ ಪ್ಲಾಸ್ಟಿಕ್ ನಿಷೇಧವು ತಕ್ಕಮಟ್ಟಿಗೆ ಯಶಸ್ವಿಯಾದ ಏಕೈಕ ರಾಷ್ಟ್ರವೆಂದರೆ ರವಾಂಡಾ. ಇಂತಿಪ್ಪ ರವಾಂಡಾದಲ್ಲೂ ಪ್ಲಾಸ್ಟಿಕ್ ಚೀಲಗಳನ್ನು ಕೆಲ ಭೂಪರು ನೆರೆರಾಷ್ಟ್ರವಾದ ಕಾಂಗೋದಿಂದ ಅಕ್ರಮವಾಗಿ ತರಿಸಿಕೊಂಡು ಮಾರುಕಟ್ಟೆಗೆ ಬಿಡುತ್ತಾರಂತೆ.

ನಾನು ಮಿಗೆಲ್ ನ ಮಾತುಗಳಿಗೆ ಮತ್ತೂ ಕಿವಿಯಾಗುತ್ತಿದ್ದೆ. ಇದೇ ಮೊದಲ ಬಾರಿಗೆ ಅಂಗೋಲಾವು ಒಂದು ದೇಶದಂತೆ ಅನಿಸದೆ ಅರಾಜಕತೆಯ, ಗೊಂದಲದ ತಾಣದಂತೆ ಕಾಣತೊಡಗಿತ್ತು. ಅಂಗೋಲಾ ಮೇಲ್ನೋಟಕ್ಕೆ ಶಾಂತವಾಗಿದ್ದರೂ ಒಳಗೊಳಗೇ ಹೊಗೆಯಾಡುತ್ತಿದ್ದ ಸಮಸ್ಯೆಗಳನ್ನು ನಾನೀಗ ಒಂದೊಂದಾಗಿ ನೋಡುತ್ತಿದ್ದೆ. ”ನಾವು ಆಫ್ರಿಕನ್ನರು ಹೀಗೆಯೇ. ಹೇಳಿಕೊಳ್ಳಲು ನಮ್ಮಲ್ಲಿ ಎಲ್ಲವೂ ಇದೆ. ಆದರೆ ಯಾವುದೂ ಕೂಡ ಸಮರ್ಪಕವಾಗಿಲ್ಲ”, ಎನ್ನುತ್ತಿದ್ದ ಆತ.

ಅವನ ಆ ಮಾತನ್ನು ಕೇಳಿ ನನಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ.

Leave a Reply