ಅಪ್ಪನ ವೀಲ್ ಚೇರ್ ಮಾರಾಟಕ್ಕಿದೆ..

 

 

 

ಸದಾಶಿವ ಸೊರಟೂರು.

 

 

 

 

ಅಲ್ಲಿ ಮುಪ್ಪಾದ ಸೂರ್ಯ
ಆಕಾಶಕ್ಕೆ ಮೆತ್ತಿಕೊಂಡಂತಿತ್ತು
ಮಾಗಿದ ಸುಕ್ಕುಗಳು!
ಅವುಗಳ ಸಂಖ್ಯೆ ಅಗಣಿತ
ಒಂದೊಂದಕ್ಕೂ ಇತ್ತು
ಅನುಭವದ ಲೇಪ,
ಕತ್ತಲೆಯ ಭಯವಿತ್ತು
‘ಯಾವ ಕ್ಷಣಕ್ಕೆ ನುಗ್ಗಿತೊ ಏನೊ’!

ಉಳಿದ ಒಂದೆರಡು
ಹಲ್ಲುಗಳ ಬಾಯಿಂದ
ಉದುರುತ್ತಲೇ ಇರುತ್ತವೆ
ಮಾತುಗಳು
ಕಾಲು ಏಳಲು ಹಠವಿಡಿದಷ್ಟು
ಸೋಲುತ್ತದೆ
ಬೆಳಗಿದ ಸೂರ್ಯನಿಗೊಂದು
ಕತ್ತಲೆಯ ಮೂಲೆ
ಇಲ್ಲವೆ; ಹಣ ಕೊಟ್ಟು
ಅನ್ನ ಹಾಕಿಸುವ ಒಂದು ಮನೆ!

ದಿಢೀರನೆ ಒಂದು ದಿನ
ನುಗ್ಗಿದೆ ಕತ್ತಲು!
ಮುದುರಿಕೊಂಡ ಮುದ್ದೆಯಂತ
ದೇಹದ ವಿಲೇವಾರಿ ಮಾತುಗಳು,
ದೂರವೇ ನಿಂತವರ
ಹಣದ ಲೆಕ್ಕಾಚಾರಕ್ಕೆ
ಮುಗಿಯುತ್ತವೆ!
ಮನೆಗೆ ಬಂದು ಕೂತರೆ
ಕಾಣಿಸುತ್ತದೆ,
ಮೂಲೆಯಲಿ ನಿಂತ
ವ್ಹೀಲ್ ಛೇರ್!
ಮಗ ಕೊಡಿಸುತ್ತಾನೆ
ಹೀಗೊಂದು ಜಾಹಿರಾತು
‘ಅಪ್ಪನ ವ್ಹೀಲ್ ಛೇರ್ ಮಾರಾಟಕಿದೆ’
ಅಪ್ಪನ ಪ್ರೀತಿಯನ್ನು
ಮಾರಲು ಬರುವಂತಿದ್ದರೆ!!!?

Leave a Reply