ಸಮ್ಮೇಳನ ನಡೆಸೋದಷ್ಟೇ ಕಸಾಪ ಕೆಲ್ಸವಾ?

 

ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಶತೆಯನ್ನು ವಹಿಸುವಂತೆ ಲೇಖಕಿ ರೂಪಾ ಹಾಸನ ಅವರಿಗೆ ಆಹ್ವಾನ ನೀಡಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು ನೀಡಿದ ಈ ಆಹ್ವಾನವನ್ನು ರೂಪಾ  ತಿರಸ್ಕರಿಸಿದ್ದಾರೆ. ಅದಕ್ಕೆ ನೀಡಿದ ಕಾರಣವನ್ನು ಅವಧಿ ಪ್ರಕಟಿಸಿತ್ತು. ಅದು ಇಲ್ಲಿದೆ.

ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕಾಗಿದ್ದನ್ನು ಮರೆತು ಸಮ್ಮೇಳನವೊಂದೇ ಕಾರ್ಯ ಎನ್ನುವಂತೆ ಆಡುತ್ತಿರುವುದನ್ನು ನಮ್ಮ ನಡುವಿನ ಪ್ರಜ್ಞಾವಂತ ಲೇಖಕಿ ಲಲಿತಾ ಸಿದ್ಧಬಸವಯ್ಯ ಅವರು ಇಲ್ಲಿ ಪ್ರಶ್ನಿಸಿದ್ದಾರೆ

 

 

ಲಲಿತಾ ಸಿದ್ಧಬಸವಯ್ಯ

 

ರೂಪಾ ಹಾಸನ ನಿಲುವು ಸರಿಯಾಗಿಯೇ ಇದೆ….

ಎರಡು ವಿಶ್ವ ಕನ್ನಡ ಸಮ್ಮೇಳನಗಳು, ಒಂದಲ್ಲ ಎರಡಲ್ಲ ಎಂಭತ್ಮೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಆದುವು. ಇವಲ್ಲದೆ ಪ್ರತಿ ಜಿಲ್ಲೆ , ತಾಲೂಕು , ಹೋಬಳಿ , ನಗರದ ಒಂದೊಂದು ಬಡಾವಣೆಯಲ್ಲಿಯೂ ಒಂದೊಂದು ಸಮ್ಮೇಳನ ವರ್ಷಕ್ಕೊಂದರ ಹಾಗೆ ಆಗುತ್ತಲೇ ಇವೆ.

ಇವೆಲ್ಲ ಬೇಕು ಕನ್ನಡದ ಸಡಗರಕ್ಕೆ ನಿಜ. ಆಯಾ ಪ್ರದೇಶದಲ್ಲಿ ಈ ಸಮ್ಮೇಳನಗಳು ಹುಟ್ಟು ಹಾಕುವ ಕನ್ನಡತನದ ಸಂಭ್ರಮಕ್ಕೆ ಸಾಟಿಯಾದದ್ದು ಇನ್ನೊಂದು ಖಂಡಿತವಾಗಿಯೂ ಇಲ್ಲ.

ಆದರೆ ನಮ್ಮ ಘನತೆವೆತ್ತ ಕಸಾಪದ ಕೆಲಸ ಇಷ್ಟೇಯೆ?

ಮುಖ್ಯವಾಗಿ ಕನ್ನಡವನ್ನು ಉಳಿಸುವ ಜವಾಬ್ದಾರಿ ಅದರದಲ್ಲವೇ ? ಈಗ ಕನ್ನಡ ನಮ್ಮ ಕಿರಿಯರ ಬಾಯಲ್ಲಿ ಎಷ್ಟು ಉಳಿದಿದೆ ಎಂಬುದನ್ನೇನಾದರೂ ಕಸಾಪ ಒಂದು ಸರ್ವೆ ಮಾಡುವ ಮುಖಾಂತರ ಅಳೆದಿದೆಯೇ ?

ಮೆಟ್ರೊ ನಗರ ಬಿಡಿ , ಜಿಲ್ಲಾ ಕೇಂದ್ರ ಬಿಡಿ , ತಾಲ್ಲೂಕು ಬಿಡಿ , ಹೋಬಳಿಗಳಲ್ಲೂ ನಮ್ಮ ಕನ್ನಡ ನಮ್ಮ ಮಕ್ಕಳ ಬಾಯಲ್ಲಿ ನಲಿಯುತ್ತಿಲ್ಲ. ಅರ್ಥವಾಗದ ಭಾಷೆಯ ಹಾಡಿಗೆ ಎರಡು ವರ್ಷದ ಮಕ್ಕಳನ್ನು ಕೂಡಾ ಹೆಜ್ಜೆಹಾಕುವಂತೆ ಮಾಡುವ ಇಂಗ್ಲೀಷ್ ಮೀಡಿಯಮ್ ಶಾಲೆಗಳು ಹೋಬಳಿಗಳಲ್ಲೂ ಬಂದು ಯಾವ ರಾಯನ ಕಾಲವಾಯ್ತೊ ಎನುವಂತೆ ಅದು ಹಳೆಯ ಮಾತಾಗುತ್ತಿದೆ.

ಇಂತಹ ವಿಷಣ್ಣ ವಾತಾವರಣದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ನಮ್ಮ ಮುಂದಿನ ತಲೆಗೆ ಸಮರ್ಥವಾಗಿ ಸಾಗಿಸಲು ಬೇಕಾದದ್ದು ಅದನ್ನು ಅನ್ನದ ಭಾಷೆಯಾಗಿ ಮಾಡಲೇ ಬೇಕಾದ ಹಠ.
ಹಠ ಹಿಡಿಯದ ಹೊರತು ಇದಾಗದು

ಅಂತಹ ಹಠ ಹಿಡಿದು ನಮ್ಮ ನಾಡೊಳಗೆ ಕನ್ನಡವನ್ನು ಕೊನೆಯ ಪಕ್ಷ ಒಂದನೆ ತರಗತಿಯಿಂದ ನಾಲ್ಕನೆ ತರಗತಿಯವರೆಗೆ ಆದರೂ ಕಡ್ಡಾಯ ಕಲಿಕೆ ಮಾಧ್ಯಮವಾಗಿ ಜಾರಿಗೆ ತರಿಸುವ ಶಕ್ತಿ ಇರುವುದು ಕಸಾಪಕ್ಕೆ ಮಾತ್ರ. ಈ ಸಂಬಂಧ ಈಗಿರುವ ಕಾನೂನಾತ್ಮಕ ತೊಡಕನ್ನು ಮೀರಲು ಖಂಡಿತವಾಗಿ ಮಾರ್ಗಗಳಿವೆ.

ಆ ಮಾರ್ಗ ಹುಡುಕಿರೆಂದು ಸರ್ಕಾರದ ಮೇಲೆ ಶತಾಯ ಗತಾಯ ಒತ್ತಡ ಹೇರುವ, ಹಠ ಹಿಡಿಯುವ ಶಕ್ತಿ ಇರುವುದು ಅಪಾರ ಸದಸ್ಯ ಬಲ ಹೊಂದಿರುವ ಏಕೈಕ ರಾಜಕೀಯೇತರ ಅಚ್ಚ ಕನ್ನಡದ ಸಂಸ್ಥೆಯಾದ ಕಸಾಪ ಕ್ಕೆ ಮಾತ್ರ. ಅದರ ಸ್ಥಾಪಿತ ಉದ್ದೇಶವೇ ಅದು‌.

ಆದರೆ ವರ್ಷದಿಂದ ವರ್ಷಕ್ಕೆ ಈ ಮುಖ್ಯ ಸಂಕಲ್ಪದಿಂದ ಕಸಾಪ ದೂರವಾಗಿ, ಸಮ್ಮೇಳನಗಳ ಮೇಲೆ ಸಮ್ಮೇಳನ ನಡೆಸುವ organising agency ಆಗುತ್ತಿದೆಯೇ ಎನ್ನಿಸುತ್ತಿದೆ.

ಇಂತಹ ಸಂದರ್ಭದಲ್ಲಿ ರೂಪಾ ಅವರ ಹಾಗೆ ಸಾಹಿತಿಗಳಾದರೂ ಗಟ್ಟಿ ನಿಲುವು ತೆಗೆದುಕೊಳ್ಳದಿದ್ದರೆ ಇನ್ನಾರು ತೆಗೆದುಕೊಂಡಾರು ?

Leave a Reply