ರಾಜೀವ ನಾಯಕರ ‘ಲವ್’..

 

ಅವಧಿ ಓದುಗರಿಗೆ ತೀರಾ ಪರಿಚಿತರಾದ ರಾಜೀವ ನಾರಾಯಣ ನಾಯಕ್ ಅವರು ಈಗ ಹೊಸ ಕೃತಿಯ ಬಿಡುಗಡೆ ಸಂಭ್ರಮದಲ್ಲಿದ್ದಾರೆ.

ಜನವರಿ 13 ರಂದು ಶನಿವಾರ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ರಾಜೀವ ನಾಯಕರ ಎರಡನೇ ಕಥಾಸಂಕಲನ “ಲಾಸ್ಟ್ ಲೋಕಲ್ ಲೊಸ್ಟ್ ಲವ್” ಬಿಡುಗಡೆಯಾಗಲಿದೆ.

ಅವರ ಕಥಾ ಸಂಕಲನಕ್ಕೆ ಹಿರಿಯ ವಿಮರ್ಶಕರಾದ ಡಾ ಬಿ ಜನಾರ್ಧನ ಭಟ್ ಅವರು ಬರೆದ ಮುನ್ನುಡಿ ಇಲ್ಲಿದೆ

 

 

 

 

ಡಾ ಬಿ ಜನಾರ್ದನ ಭಟ್

 

ಪ್ರಾದೇಶಿಕ ಸೊಗಡಿನ ಸೂಕ್ಷ್ಮ ಸಂವೇದನೆಯ ಕತೆಗಳು

ಮುಂಬಯಿಯ ಕತೆಗಾರ ರಾಜೀವ ನಾರಾಯಣ ನಾಯಕರು ಕತೆಗಾರಿಕೆಯಲ್ಲಿ ತಮ್ಮದೇ ಆದ ದಾರಿಯೊಂದನ್ನು ಸ್ಥಾಪಿಸುತ್ತಾ, ಕನ್ನಡ ಸಾಹಿತ್ಯಕ್ಕೆ ಮುಂಬಯಿಯ ಮತ್ತೊಂದು ದೊಡ್ಡ ಕೊಡುಗೆಯಾಗುವಂತೆ ಬೆಳೆಯುತ್ತಿದ್ದಾರೆ.

ರಾಜೀವ ನಾಯಕರ ಕತೆಗಳನ್ನು ಓದುವಾಗ ಮೊದಲಿಗೇ ಗಮನಸೆಳೆಯುವ ಅಂಶಗಳೆಂದರೆ ಅವರ ಪ್ರಾದೇಶಿಕ ಸೊಗಡಿನ ಕುಸುರಿಯುಳ್ಳ ಸಶಕ್ತವಾದ ಭಾಷೆ ಮತ್ತು ಸಮಕಾಲೀನ ಸನ್ನಿವೇಶಗಳನ್ನು ಹೊಂದಿರುವ ಕಥಾವಸ್ತುಗಳು. ಇಂಗ್ಲಿಷಿನಲ್ಲಿ ಬರೆಯುವ ಐರಿಷ್ ಲೇಖಕರಂತೆ ಉತ್ತರ ಕನ್ನಡದ ಬರಹಗಾರರು ಕನ್ನಡ ಭಾಷೆಯನ್ನು (ಅದರಲ್ಲೂ ಅವರ ಪ್ರಾದೇಶಿಕ ಆಡುಮಾತನ್ನು) ಕಾವ್ಯಾತ್ಮಕವಾಗಿ ಬಳಕೆ ಮಾಡುವಲ್ಲಿ ತೋರುತ್ತಿರುವ ಶ್ರದ್ಧೆ ಒಂದು ಪ್ರತ್ಯೇಕ ಅಧ್ಯಯನಕ್ಕೆ ವಸ್ತುವಾಗಬಲ್ಲುದು. ರಾಜೀವ ನಾಯಕರು ಆ ಪರಂಪರೆಯ ಒಬ್ಬ ಗಟ್ಟಿ ಪ್ರತಿನಿಧಿಯಾಗಿದ್ದಾರೆ.

ಉತ್ತರ ಕನ್ನಡದ ಅಂಕೋಲೆಯವರಾದ ರಾಜೀವ ನಾಯಕರು ಮುಂಬಯಿ – ಉತ್ತರ ಕನ್ನಡ ಉಭಯವಾಸಿಗಳ ಆಶೋತ್ತರಗಳನ್ನು, ಸಂಕಟಗಳನ್ನು, ತಲ್ಲಣಗಳನ್ನು ತಮ್ಮ ಕತೆಗಳಲ್ಲಿ ದಾಖಲಿಸುತ್ತಿರುವ ಅಪರೂಪದ ಪ್ರಾದೇಶಿಕ ಕಥನಕಾರ ಕೂಡಾ ಹೌದು. ಈ ಮಾತಿಗೆ ಉದಾಹರಣೆಯಾಗಿ ಈ ಸಂಕಲನದ ಹನ್ನೆರಡು ಕತೆಗಳಿವೆ.  ಯುವ ಜನಾಂಗದ ಹೊಸಬಗೆಯ ಕಾಮನೆಗಳು – ಪ್ರೇಮಪುರಾಣಗಳು ಒಂದು ಬಗೆಯ ಕತೆಗಳಿಗೆ ವಸ್ತುವಾಗಿದ್ದರೆ, ಉತ್ತರ ಕನ್ನಡದ ಸ್ಥಳೀಯ ಜಗತ್ತು ಆಧುನಿಕತೆಯ ತಲ್ಲಣಗಳನ್ನು ಅನುಭವಿಸುವುದು ಎರಡನೆಯ ಬಗೆಯ ಕತೆಗಳ ವಸ್ತು. ಇವೆರಡನ್ನು ಸದ್ಯ ಮತ್ತು ಶಾಶ್ವತ ಎಂದು ವಿಭಾಗಿಸಬಹುದೆ ಎನ್ನುವ ಯೋಚನೆಯೂ ನನಗೆ ಬಂದದ್ದುಂಟು.

ಎಸ್ಸೆಮ್ಮೆಸ್ ಮೂಲಕ, ಫೇಸ್‍ಬುಕ್ ಮೂಲಕ ಹಂಚಿಕೊಳ್ಳುವ ಸ್ಪಂದನೆಗಳು ಐವತ್ತು ವರ್ಷದ ಹಿಂದಿನ ಓದುಗರ ಕಲ್ಪನೆಗೂ ನಿಲುಕದ ಲೋಕ ಹೇಗೋ, ಐವತ್ತು ವರ್ಷದ ಮುಂದೆ ಓದುವಾಗ ಅಷ್ಟೇ ಔಟ್‍ಡೇಟೆಡ್ ಆದೀತೋ ಎಂಬ ಸಣ್ಣ ಸಂಶಯದ ಜತೆಗೆ ಗಂಡು ಹೆಣ್ಣಿನ ನಡುವಿನ ಅನುರಾಗ ಅರಳಲು ಬಳಕೆಯಾಗುವ ಈ ಮಾಧ್ಯಮದ ಪ್ರಶ್ನೆ ದೊಡ್ಡದಾಗದೆ ಮನುಷ್ಯನ ಸಾರ್ವಕಾಲಿಕ ವಾಸನೆಯೇ ಇಂತಹ ಕತೆಗಳ ಜೀವಾಳವೂ ಆಗಿದೆಯೆನ್ನುವ ಸಮಾಧಾನವೂ ಇದೆ.  ‘ಕಲ್ಲು ಕರಗುವ ಸಮಯ’, ‘ಲಾಸ್ಟ್ ಲೋಕಲ್ ಮತ್ತು ಲೋಸ್ಟ್ ಲವ್’, ‘ಎಸ್ಸೆಮ್ಮೆಸ್’, ‘ಎಸ್ಸೆಮ್ಮೆಸ್ – 2’, ‘ಒಂದು ರೋಮ್ಯಾಂಟಿಕ್ ಕತೆ ಬರೀರಿ ಪ್ಲೀಸ್’ – ಇವು ಈ ಬಗೆಯ ಕತೆಗಳು.

ಇನ್ನು ಸ್ಥಳೀಯ ಸಮಾಜಗಳ ಸಾಮಾಜಿಕ ಪಲ್ಲಟಗಳನ್ನು ದಾಖಲಿಸುವಾಗ ಪ್ರಾದೇಶಿಕತೆಯೂ ಸಾರ್ವದೇಶಿಕತೆಯನ್ನು ಮತ್ತು ಸಾರ್ವಕಾಲಿಕತೆಯನ್ನು ಪಡೆದುಕೊಳ್ಳುವಂತೆ ಬರೆಯಲು ಉತ್ತಮ ಲೇಖಕರಿಗೆ ಸಾಧ್ಯವಾಗುತ್ತದೆ. ರಾಜೀವ ನಾಯಕರು ಇಂತಹ ಸಫಲತೆಯನ್ನು ಸಾಧಿಸಿದ್ದಾರೆ. ‘ಬಂದರು’ ಮತ್ತು ‘ಬೆಳ್ಳಂಬರ’ ಕತೆಗಳು ಈ ಬಗೆಯ ಕತೆಗಳು.

ಜತೆಗೆ ವ್ಯಕ್ತಿಗೆ ಮಾನಸಿಕ ಮತ್ತು ದೈಹಿಕ ವೈಚಿತ್ರ್ಯಗಳು ಎದುರಾದಾಗ ಬದುಕು ಕಟ್ಟಿಕೊಳ್ಳುವ ಅಥವಾ ಮುರಿದುಬೀಳುವ ವಿಸಂಗತಿಗಳನ್ನು ಕೂಡಾ ಕತೆಗಳಾಗಿ ಕಟ್ಟಿದ್ದಾರೆ.  ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನಿತ ಕತೆ ‘ಚಕ್ಕಾ ಬನಾದೇ ಇಂಡಿಯಾ’ ‘ಅನಂತ ಮುಗುಳ್ನಕ್ಕ’ ಮತ್ತು ವಿಜಯ ಕರ್ನಾಟಕ ಕಥಾ ಸ್ಪರ್ಧೆಯಲ್ಲಿ ಬಹುಮಾನಿತ ಕತೆ ‘ಆರ್ಕಿಮಿಡಿಸ್’ ಇವು ಮೂರನೆಯ ಮಾದರಿಯ ಕತೆಗಳು.

‘ಕಲ್ಲು ಕರಗುವ ಸಮಯ’ ಕತೆಯನ್ನು ಮೊದಲನೆಯ ವರ್ಗಕ್ಕೆ, ಅಂದರೆ ಗಂಡು ಹೆಣ್ಣಿನ ಸಂಬಂಧಗಳ ವರ್ಗಕ್ಕೆ ಸೇರಿಸಿದ್ದರೂ ದಾಂಪತ್ಯಕತೆಯಾಗಿರುವ ಕಾರಣ ವಿಭಿನ್ನವಾಗಿದೆ. ಇದು ಭಾವನೆಗಳನ್ನು ಕಳೆದುಕೊಂಡು ವ್ಯವಹಾರ ಪ್ರಪಂಚಕ್ಕಷ್ಟೇ ಸಂದುಹೋಗಿ ಭಾವನೆಗಳನ್ನು ‘ಕಲ್ಲು’ ಮಾಡಿಕೊಂಡ ಗಂಡನೊಬ್ಬ ಪತ್ನಿಯ ಭಾವನೆಗಳಿಗೆ ಸ್ಪಂದಿಸಿ ‘ಕರಗುವ’ ಕತೆಯಾಗಿದೆ. ಕತೆಯ ಕೊನೆಗೆ ಇಬ್ಬರ ನಡುವೆ ಮಾನವೀಯ ಸಂಬಂಧದ ಬೆಸುಗೆಯಾಗುತ್ತದೆ. ಗಂಡ ಕಾಂತ ಕಲ್ಲಿನ ವ್ಯಾಪಾರ ಮಾಡುವುದು ಅವನ ಭಾವನೆಗಳು ಕಲ್ಲಾಗಿರುವುದಕ್ಕೆ ಸಂಕೇತವಾಗಿದೆ. ಶೀರ್ಷಿಕೆಯ ‘ಕಲ್ಲು ಕರಗುವ ಸಮಯ’ ಇದೇ ಅರ್ಥದ ಮುಂದುವರಿಕೆಯಾಗಿದೆ. ತನ್ನ ವ್ಯವಹಾರದಲ್ಲಿ ತುಂಬಾ ಮುಳುಗಿಹೋಗಿರುವ ಕಾಂತನಿಗೆ ಇನ್ನೊಂದು ಚಿಂತೆಯೂ ಸದ್ಯಕ್ಕೆ ಇದೆ. ಅವನು ತೋಡಿಸುತ್ತಿರುವ ಬಾವಿಯಲ್ಲಿ ಕಲ್ಲು (ಮತ್ತೊಂದು ಕಲ್ಲು!) ಬಂದಿದೆ. ಅದಕ್ಕೆ ಡೈನಮೈಟ್ ಇಟ್ಟು ಹೊಡೆಸುವ ಹಾಗಿಲ್ಲ. ಇತ್ತ ಹೆಂಡತಿ ಮಂಗಲಿಗೆ ಬೇರೆಯೇ ಸಮಸ್ಯೆ. ಗಂಡ ತನ್ನೊಡನೆ ಭಾವನಾತ್ಮಕವಾಗಿ ಸ್ಪಂದಿಸದೆ ಇರುವುದು ಒಂದು ಕಡೆಯಾದರೆ ಅನಗತ್ಯ ಮೂಲೆಗಳಿಂದ ಪ್ರೇಮಯಾಚನೆಯ ಸಂಜ್ಞೆಗಳು ಬರುತ್ತವೆ. ಮುಖ್ಯವಾಗಿ ಅನ್‍ನೋನ್ ನಂಬರಿನಿಂದ ಪ್ರೇಮಯಾಚನೆ ಅನಿಸುವಂತಹ ಕಾವ್ಯಾತ್ಮಕ ಮೆಸೇಜುಗಳು ಬರುತ್ತಿರುತ್ತವೆ.

ಅದರ ಬಗ್ಗೆ ಗಂಡನಿಗೆ ಹೇಳಿದರೆ “ಗಂಗಾವಳಿ ನದಿ ದಾಟಿ ಬಂದಿರಬೇಕು ಆ ಮೆಸೇಜು” ಎನ್ನುತ್ತಾನೆ. “ನದಿ ದಾಟಾಡಿದ ಮನಸುಗಳು ಮಾತ್ರ ಇಂಥ ಮೆಸೇಜ ಬರೆಯಲು ಸಾಧ್ಯ. ಕಣಿಯಲ್ಲಿ ಕಲ್ಲಾದ ಮನಸಿನವರಿಂದ ಶಕ್ಯವೆ?” ಎನ್ನುತ್ತಾಳೆ. ಯೌವನದಲ್ಲಿ ಎಲ್ಲರಂತೆ ಮಂಗಲಿಗೂ ಅಡಿಗೋಣ ವಿವೇಕ ಎನ್ನುವ ಸಹಪಾಠಿಯ ಕುರಿತು ಬೆಚ್ಚನೆಯ ಭಾವನೆಯಿತ್ತು. ದೋಣಿಯಲ್ಲಿ ಗಂಗಾವಳಿ ನದಿ ದಾಟುವಾಗ ಇಬ್ಬರ ಮೌನಸಂವಾದ,ಆ ನೆನಪು ಅವಳ ಮನಸ್ಸಿನಲ್ಲಿ ಈ ಮೆಸೇಜಿನ ನೆವನದಿಂದಾಗಿ ಹಸಿರಾಗತೊಡಗಿತ್ತು.

ಹೀಗೆ ಸೂಕ್ಷ್ಮವಾಗಿ ಮನಸ್ಸಿನ ಭಾವನೆಗಳ ಲೋಕವನ್ನು ಅನಾವರಣ ಮಾಡುವ ಕತೆಯ ಕೊನೆಯಲ್ಲಿ ಕಾಂತ ತಾನು ಮಡದಿಯ ಭಾವನೆಗಳಿಗೆ ಸ್ಪಂದಿಸುತ್ತಲೇ ಇಲ್ಲ ಎನ್ನುವುದರ ಅರಿವಾಗಿ “ಅವೆಲ್ಲ (ಆ ಅನ್‍ನೋನ್ ನಂಬರಿನ ಮೆಸೇಜುಗಳು) ನಾನೇ ಬರೆಯಬಹುದಾಗಿದ್ದ ಸಾಲುಗಳು” ಎಂದು ಪಾಪನಿವೇದನೆ ಮಾಡಿ ಅವಳೊಡನೆ ಭಾವನಾತ್ಮಕವಾಗಿ ಒಂದಾಗುತ್ತಾನೆ.

ರಾಜೀವ ನಾಯಕರಿಗೆ ‘ತುಷಾರ’ ಕಥಾಸ್ಪರ್ಧೆಯಲ್ಲಿ ಬಹುಮಾನ ತಂದುಕೊಟ್ಟ ಕತೆ ‘ಲಾಸ್ಟ್ ಲೋಕಲ್ ಮತ್ತು ಲೋಸ್ಟ್ ಲವ್’ ಹಾಗೂ ‘ಒಂದು ರೋಮ್ಯಾಂಟಿಕ್ ಕತೆ ಬರೀರಿ ಪ್ಲೀಸ್’ ಕತೆಗಳು ಆಧುನಿಕ ಬದುಕಿನಲ್ಲಿ ಪ್ರೇಮವೆಂಬ ಸೂಕ್ಷ್ಮ ಭಾವದ ಅನ್ವೇಷಣೆಯನ್ನು ನಡೆಸುವ ಕತೆಗಳಾಗಿವೆ.  ‘ನಿಜವಾದ ಪ್ರೀತಿ’ ಎಂಬ ಮರೀಚಿಕೆಯ ಹುಡುಕಾಟವನ್ನು ರಾಜೀವ ನಾಯಕರು ‘ಲಾಸ್ಟ್ ಲೋಕಲ್ ಮತ್ತು ಲೋಸ್ಟ್ ಲವ್’ ಕತೆಯಲ್ಲಿ ರೂಪಕವೊಂದರ ಮೂಲಕ (ತನಗೆ ಕೈಕೊಟ್ಟ ಪ್ರೇಮಿಕೆಗಾಗಿ ಕಾದುನಿಂತಿರುವ  ಭಗ್ನ ಪ್ರೇಮಿಯೊಬ್ಬ ಬಾಹುಬಲಿಯಂತೆ ರೈಲ್ವೇ ಸ್ಟೇಷನಿನಲ್ಲಿ ಪ್ರತಿನಿತ್ಯ ಕಾಯುತ್ತಾ ನಿಂತಿರುವುದು) ಮತ್ತು ಅದರ ಸುತ್ತ ಕರ್ಷಣೆಯುಳ್ಳ ಕಥನದ ಮೂಲಕ ಈ ಅಪೂರ್ಣತೆಯನ್ನು, ನಿರಂತರ ಹುಡುಕಾಟವನ್ನು ಅಷ್ಟೇ ನಿಗೂಢವಾಗಿ ಗ್ರಂಥಿಸಿದ್ದಾರೆ. ಈ ನಿಗೂಢತೆಯಲ್ಲಿಯೇ ಕತೆಯ ಆಕರ್ಷಣೆ ಇದೆ, ಅದರ ಧ್ವನಿ ಶಕ್ತಿಯಲ್ಲಿ ಅದರ ಸಫಲತೆ ಇದೆ.

ಸಂಕಲನದಲ್ಲಿರುವ ‘ಬಂದರು’ ಕತೆ ರಾಜೀವ ನಾಯಕರ ಪ್ರಾತಿನಿಧಿಕ ಕತೆಗಳಲ್ಲಿ ಒಂದು. ನನ್ನ ಮಟ್ಟಿಗೆ ಸಂಕಲನದ ಶ್ರೇಷ್ಠ ಕತೆಯಾಗಿದೆ. ಉತ್ತರಕನ್ನಡದ ಬೇಲೆಕೇರಿ ಬಂದರಿನ ಕಾರಣದಿಂದಾಗಿ ಸುತ್ತಲಿನ ಹಳ್ಳಿಗಳ ಗದ್ದೆಗಳು ಮ್ಯಾಂಗನೀಸ್ ಅದಿರು ರಾಶಿ ಹಾಕಲು ಬೇಕಾಗಿ ಅವುಗಳಿಗೆ ಬೆಲೆ ಬಂದು, ಊರೆಲ್ಲಾ ಧೂಳುಮಯವಾಗಿ, ದಾರಿಯೆಲ್ಲ ಲಾರಿಗಳ ಪಾಲಾಗಿ ಬದುಕು ತಹತಹಿಸುವ ಯಥಾರ್ಥ ಚಿತ್ರಣವನ್ನು ಈ ಕತೆ ಕಟ್ಟಿಕೊಡುತ್ತದೆ. ‘ಬಂದರು’ ಎಂಬ ಶೀರ್ಷಿಕೆ ಇಲ್ಲಿ ಪಡೆದುಕೊಳ್ಳುವ ಧ್ವನಿಯನ್ನು ಗಮನಿಸಬೇಕು. ಈ ಕತೆ ರಾಜೀವ ನಾಯಕರ ಕತೆಗಾರಿಕೆಯ ಪ್ರಬುದ್ಧತೆಗೆ ಸಾಕ್ಷಿಯಾಗಿದೆ.

‘ಬೆಳ್ಳಂಬರ’ ಎನ್ನುವುದು ರಾಜೀವ ನಾಯಕರ ಇನ್ನೊಂದು ಮಹತ್ವಾಕಾಂಕ್ಷೆಯ ಕತೆ. ಉತ್ತರ ಕನ್ನಡದ ಬೆಳ್ಳಂಬರದ ಹೆಣ್ಣುಮಕ್ಕಳು ಮದ್ಯವ್ಯಸನಿಗಳಾದ ಗಂಡಸರಿಗೆ ಪಾಠ ಕಲಿಸಲು, ಹೆಂಗಸರ ಮಹತ್ವ ಅವರಿಗೆ ತಿಳಿಯುವಂತಾಗಲು ಸ್ತ್ರೀಸ್ವಾತಂತ್ರ್ಯ ಹೋರಾಟಗಾರ್ತಿ ಬೆಳ್ಳಿ ಹಲವಾರು ಮಂದಿ ಯುವತಿಯರನ್ನು ಮುಂಬಯಿಗೆ ಕರೆದೊಯ್ದು ಅಲ್ಲಿ ಫ್ಯಾಕ್ಟರಿ ಕೆಲಸಕ್ಕೆ ಸೇರಿಸುವ ಕತೆ ಇದರಲ್ಲಿದೆ. ಆ ಹುಡುಗಿಯರ ಪೈಕಿ ಶಾಂತಿ ಎನ್ನುವ ದಲಿತ ಹುಡುಗಿ ಹಾಡುಗಾರ್ತಿಯಾಗಬೇಕೆಂದು ಹೊಸಬದುಕು ಹುಡುಕಿಕೊಂಡು ಅವರಿಂದ ದೂರವಾಗುತ್ತಾಳೆ. ಅವಳ ನೆವನದಲ್ಲಿ ಮಂಕಾಳಿ ನರಸಿಂಹನನ್ನು ಕಟ್ಟಿಕೊಂಡು ನಡೆಸಿದ ಅನ್ವೇಷಣೆ – ಮುಖ್ಯವಾಗಿ ಊರಿನವನೇ ಆದ ಕಿಶೋರನ ಸಹಾಯ ಕೇಳಿಕೊಂಡು ಹೋದಾಗ ನಡೆಸಿದ ಜೀವನಾನ್ವೇಷಣೆ – ಕತೆಯ ಕೇಂದ್ರವಾಗಿ ನಿಲ್ಲುತ್ತದೆ. ಹಲವು ಅರ್ಥವ್ಯಾಪ್ತಿಯುಳ್ಳ ಕತೆ, ಇದು ಕೂಡ.

‘ಕೇರ್ ಟೇಕರ್’ ಕತೆ ಆಕರ್ಷಕ ಸಣ್ಣ ಕತೆಗಳ ಮಾದರಿಗೆ ಸೇರುವಂತಹದು. ಊರಿನಿಂದ ಮುಂಬಯಿಗೆ ಹೋದ ಯುವಕ ಮಾದೇವ ಅಲ್ಲಿ ಶ್ರೀಮಂತರ ದೊಡ್ಡ ಬಂಗಲೆಯ ‘ಕೇರ್ ಟೇಕರ್’ ಕೆಲಸವನ್ನು ಮಾಡುತ್ತಿರುತ್ತಾನೆ. ಮುಂಬಯಿಯಲ್ಲಿ ವಲಸೆಗಾರ ಬಡವರ ಬದುಕಿನ ನೋಟವನ್ನು ಈ ಕತೆ ಕೊಡುವುದರಿಂದ ಈ ವಿಭಾಗಕ್ಕೆ ಸೇರಿದೆ. ಈ ಕೇರ್‍ಟೇಕರ್ ಮಾದೇವ ಕಸ್ತೂರಿ ಎಂಬ ರಸ್ತೆಬದಿಯಲ್ಲಿ ಇಡ್ಲಿದೋಸೆ ಮಾಡಿಮಾರುತ್ತಿದ್ದ  ಚಾಯದುಕಾನ್‍ವಾಲಿಯ ಕುಟುಂಬದ ಕೇರ್‍ಟೇಕರ್ ಆಗಿ ಬದಲಾಗುವುದರಿಂದ ಕತೆಯ ಶೀರ್ಶಿಕೆಗೆ ದ್ವಂದ್ವಾರ್ಥ ಬಂದೊದಗುತ್ತದೆ.

‘ಅನಂತ ಮುಗುಳ್ನಕ್ಕ’ ಎಂಬ ಕತೆಗೆ ‘ತಿಂಗಳು’ ಮಾಸಪತ್ರಿಕೆ ಏರ್ಪಡಿಸಿದ್ದ ಕಥಾಸ್ಪರ್ಧೆಯಲ್ಲಿ ಬಹುಮಾನ ಬಂದಿತ್ತು. ಈ ಕತೆಯಲ್ಲಿ ಅನಂತ ಬಾಲ್ಯದಲ್ಲಿ ಪ್ರೀತಿಸುತ್ತಿದ ಕಮಲಿಯ ಜತೆಗಿನ ಸ್ನೇಹ ಬಲಿತು ಫಲಕೊಡುವ ಮುನ್ನವೇ ಅವಳಪ್ಪನ ರೌದ್ರಾವತಾರವನ್ನು ಕಂಡು ಮಾನಸಿಕ ಆಘಾತವನ್ನು ಅನುಭವಿಸುತ್ತಾನೆ. ಇದು ಅವನ ಬದುಕಿನಲ್ಲಿ ಒಂದು ವೈಕಲ್ಯವಾಗಿ, ರಕ್ತವನ್ನು – ಗಾಯವನ್ನು ಕಂಡರಾಗದ ಸಮಸ್ಯೆಯಾಗಿ ಕಾಡುತ್ತಿರುತ್ತದೆ. ಈ ಸಮಸ್ಯೆಯಿಂದ ಬಿಡುಗಡೆಹೊಂದುವ ಪ್ರಯತ್ನವಾಗಿ ಕಮಲಿಯನ್ನು ನೋಡಬೇಕೆಂದು, ಬಾಲ್ಯದಲ್ಲಿ ಆ ಘಟನೆ ನಡೆದ ಮನೆಗೆ ಹೋದರೆ ಕಮಲಿ ಅವನ ಸಹಪಾಠಿ ಶ್ರೀಕಾಂತನನ್ನು ಮದುವೆಯಾಗಿರುವುದು ಕಂಡು ಅವನಿಗೆ ಮತ್ತೊಂದು ಆಘಾತವಾಗುತ್ತದೆ. ಜತೆಗೆ ಶ್ರೀಕಾಂತ ಕಮಲಿಗೆ ಲೈಂಗಿಕವಾಗಿ ಸುಖನೀಡಲಾರದವ ಎಂಬ ಇನ್ನೊಂದು ಆಘಾತದಲ್ಲಿ ವಾಪಸು ಮುಂಬಯಿ ಟ್ರೈನ್ ಹತ್ತಲು ಹೋದರೆ ಮಗನನ್ನು ಕಳೆದುಕೊಂಡು ಮರುಳಿಯಾದ ಹಾಲಕ್ಕಿ ಹೆಂಗಸಿಗೆ ಅವಳ ಮಗನನ್ನು ಹುಡುಕುತ್ತೇನೆ ಎಂದು ನಾಯಕ ತಳೆಯುವ ನಿರ್ಧಾರದಲ್ಲಿ ಅವನ ಮಾನಸಿಕ ವ್ಯಾಧಿ ಗುಣಮುಖವಾಗುವ ಸೂಚನೆಯಿದೆ. ‘ಅನಂತ ಮುಗುಳ್ನಕ್ಕ’ ಎಂಬ ಶೀರ್ಷಿಕೆಯೂ ಇದ್ದನ್ನೇ ಸೂಚಿಸುವಂತಿದೆ.

ರಾಜೀವ ನಾಯಕರು ಕತೆಗಳಿಗೆ ಶೀರ್ಷಿಕೆ ಕೊಡುವಾಗ ದ್ವಂದ್ವಾರ್ಥ ಬಂದು ಕತೆಯ ಸತ್ವವನ್ನು ಕ್ರೋಢೀಕರಿಸುವ ರೀತಿಯ ನುಡಿಗಟ್ಟುಗಳನ್ನು ಠಂಕಿಸುತ್ತಾರೆ. ‘ಕೇರ್ ಟೇಕರ್’ ಮತ್ತು ‘ಬಂದರು’ ಕತೆಯ ಶೀರ್ಷಿಕೆಗಳಲ್ಲಿರುವ ದ್ವಂದ್ವಾರ್ಥವನ್ನು ಮೇಲೆಯೇ ಹೇಳಿದೆ. ‘ಕಲ್ಲು ಕರಗುವ ಸಮಯ’ ಶೀರ್ಷಿಕೆ, ಕಲ್ಲಿನಂತಹ ಗಂಡನ ಮನಸ್ಸು ಹೆಂಡತಿಯ ಭಾವನೆಗಳನ್ನು ಅರ್ಥಮಾಡಿಕೊಂಡು ಮೃದುವಾಗುವುದನ್ನು ಹೇಳುತ್ತದೆ. ಜತೆಗೆ, ಕಲ್ಲು ಕರಗುವ ಸಮಯ ಎಂದರೆ ಸಾಮಾನ್ಯವಾಗಿ ಕತ್ತಲಾಗಿ ಎಲ್ಲ ಭೌತಿಕ ವಸ್ತುಗಳು ಕರಗಿ ಆ ಕತ್ತಲಲ್ಲಿ ಸೇರಿಕೊಂಡು ಒಂದು ಮೊತ್ತವಾಗುವಂತೆ ಕಾಣುವ ಸಮಯ, ಕಾರ್ಗತ್ತಲು ಎಂಬ ಪ್ರಸಿದ್ಧವಾದ ಅರ್ಥವಿರುವುದು ಎಲ್ಲರಿಗೂ ಗೊತ್ತಿದೆ.  ‘ಎಸ್ಸೆಮ್ಮೆಸ್’ ಕತೆಯ ಕೊನೆಗೆ ಅದರ ವಿಸ್ತರಣೆ ‘ಸೇವ್ ಮೈ ಸೋಲ್’ ಎಂದರೆ, ‘ಎಸ್ಸೆಮ್ಮೆಸ್ 2’ ಕತೆಯ ಶೀರ್ಷಿಕೆಯನ್ನು ಕೊನೆಯಲ್ಲಿ ‘ಸೇವ್ ಮೈ ಸೋಲ್ ಟೂ’ ಎಂದು ವಿಸ್ತರಿಸಿ ಬೇರೆಯೇ ಒಂದು ಆಯಾಮವನ್ನು ಕತೆಗೆ ಕೊಡುತ್ತಾರೆ. ಹೀಗೆ ಕನ್ನಡಕ್ಕೆ ಬಹಳಷ್ಟು ಒಳ್ಳೆಯ ಕತೆಗಳನ್ನು ಕೊಟ್ಟು, ಸೂಕ್ಷ್ಮ ಗ್ರಹಿಕೆ – ಭಾಷಾಪ್ರಯೋಗಗಳಲ್ಲಿ ಹೊಸ ಮಜಲುಗಳನ್ನು ಸಾಧಿಸಿರುವ ರಾಜೀವ ನಾಯಕರಿಗೆ ಅಭಿನಂದನೆಗಳು.

 

Leave a Reply