ಕಟ್ಟಡ ವಿನ್ಯಾಸದಿಂದ ಬದುಕಿನ ವಿನ್ಯಾಸದತ್ತ ನಾಗರಾಜ ವಸ್ತಾರೆ

ಕನ್ನಡದ ಪ್ರಮುಖ ಬರಹಗಾರ ನಾಗರಾಜ ವಸ್ತಾರೆ ಅವರ ಎಂಟು ಕೃತಿಗಳು ಇಂದು ಬಿಡುಗಡೆಯಾಗುತ್ತಿವೆ.

ಸಾಂಚಿಮುದ್ರೆ ನಡೆಸುತ್ತಿರುವ ಕೃತಿ ಹಬ್ಬದಲ್ಲಿ ‘ಅರ್ಬನ್ ಪ್ಯಾಂಥರ್’ ಸಹಾ ಒಂದು.

ಈ ಕೃತಿಗೆ ಕನ್ನಡದ ಮತ್ತೊಬ್ಬ ಮಹತ್ವದ ಕಥೆಗಾರ್ತಿ ಸುನಂದಾ ಕಡಮೆ ಬರೆದ ಮುನ್ನುಡಿ ಇಲ್ಲಿದೆ

 

 

 

 

ಕಟ್ಟಡ ವಿನ್ಯಾಸದಿಂದ ಬದುಕಿನ ವಿನ್ಯಾಸದತ್ತ ‘ಅರ್ಬನ್ ಪ್ಯಾಂಥರ್’

ಸುನಂದಾ ಕಡಮೆ

 

 

 

‘ಅರ್ಬನ್ ಪ್ಯಾಂಥರ್’ ಹೊಸ ತಲೆಮಾರಿನಲ್ಲಿ ವಿಶಿಷ್ಟ ಕಥಾ ಮಾದರಿಗಳ ಕತೆಗಳನ್ನು ಬರೆಯುವ ಕತೆಗಾರ ಎಂದೇ ಹೆಸರು ಮಾಡಿರುವ ನಾಗರಾಜ ವಸ್ತಾರೆಯವರ ನೀಳ್ಗತೆಯಿದು. ಕನ್ನಡಕ್ಕೆ ಅಪರೂಪವಾದ ಹೊಸ ಶಬ್ದ ಸಂಪತ್ತುಗಳ ಆವಿಷ್ಕಾರಗೈಯುತ್ತ, ಪಾತ್ರಗಳಿಗೂ ವಿಲಕ್ಷಣ ಹೆಸರುಗಳನ್ನಿರಿಸುತ್ತ, ಮುಖಪುಟ ವಿನ್ಯಾಸದಲ್ಲೂ ಕ್ರಿಯಾಶೀಲತೆ ಮೆರೆಯುತ್ತ, ಸದಾ ಹೊಸ ಪ್ರಯೋಗಳಲ್ಲಿ ತೊಡಗಿಕೊಂಡವರು ನಾಗರಾಜ ವಸ್ತಾರೆ. ಇದೇ ಹದಿನಾಲ್ಕು ಸಂಕ್ರಮಣ ದಿನದಂದೇ ಬೆಂಗಳೂರಿನಲ್ಲಿ ಇವರ ಎಂಟು ಪುಸ್ತಕಗಳು ಒಟ್ಟಿಗೇ ಬಿಡುಗಡೆಯಾಗಲಿದ್ದು, ಅವುಗಳಲ್ಲಿ ಈ ಅರ್ಬನ್ ಪ್ಯಾಂಥರ್ ಎಂಬ ನೀಳ್ಗತೆಯೂ ಒಂದಾಗಿದೆ.

ಸೋಜಿಗದ ಕಥಾ ವಸ್ತುವನ್ನುಳ್ಳ ‘ಅರ್ಬನ್ ಪ್ಯಾಂಥರ್’ ಎಂಬ ನೂರಾ ಮೂವತ್ಮೂರು ಪುಟಗಳಲ್ಲಿ ಕಟ್ಟಿಕೊಂಡಿರುವ ಈ ಸುದೀರ್ಘ ನೀಳ್ಗತೆಯನ್ನು ವಸ್ತಾರೆ ‘ಪೂರ್ಣ ಪರಿಧಿ’ ಅಂತಲೂ ಕರೆದಿದ್ದಾರೆ. ಇಂಗ್ಲೀಷ ಭಾಷೆಯ ಪುಸ್ತಕದಂತೆ ವಿಶೇಷ ವಿನ್ಯಾಸ ಹೊಂದಿದ ಈ ಕೃತಿ ಮೊದಲ ನೋಟಕ್ಕೆ ಕುತೂಹಲ ಹುಟ್ಟಿಸುವ ಮುಖಪುಟ ಹೊಂದಿದೆ. ಪುಸ್ತಕ ಹಿಡಿದೊಡನೆ ಒಮ್ಮೆಲೇ ಎಲ್ಲಿಂದ ಓದನ್ನು ಆರಂಭಿಸಬೇಕೆಂದೇ ತಿಳಿಯದೇ ದಿಗಿಲಾಗುತ್ತದೆ. ಅಲ್ಲಲ್ಲಿ ಕೆಲವು ಟ್ಯಾಗ್ ಲೈನ್ ಗಳು, ಚಿತ್ರದೊಳಗಿನ ಅಕ್ಷರಗಳಾಗಿ, ಅಕ್ಷರದೊಳಗಿನ ತಾತ್ವಿಕ ಚಿಂತನೆಗಳಾಗಿ ಗಮನಸೆಳೆಯುತ್ತವೆ. ‘ಬುದ್ದಿವಂತರಿಗಾಗಿ ಮಾತ್ರ’ ಎಂಬ ಉಪೇಂದ್ರ ಟ್ಯಾಗ್ ಲೈನ್ ನೆನಪಾದರೆ ಅಚ್ಚರಿಯೇನಿಲ್ಲ. ಪುಸ್ತಕದ ಪ್ರೊಡಕ್ಷನ್ನೇ ಹಾಗಿದೆ. ಆದರೆ ತುಂಬ ವ್ಯವಧಾನದಿಂದ ಓದಿದಾಗ ಕತೆಯೊಳಗಿನ ಸತ್ವದಲ್ಲಿ ಇಂದಿನ ಆಧುನಿಕ ಸ್ಥಿತಿಗಳ ಕುಶಲ ಬಂಧವೊಂದು ತೆರೆದುಕೊಳ್ಳುತ್ತ ಸಾಗುತ್ತದೆ. ಆ ಬಂಧದಲ್ಲಿ ಕೌಟುಂಬಿಕತೆಯಿದೆ, ವೃತ್ತಿಯ ಕುರಿತಾದ ವೈರುಧ್ಯಗಳಿವೆ, ಆಧುನಿಕ ಜೀವನ ಶೈಲಿಯ ಸಂಘರ್ಷಗಳಿವೆ, ಕರ್ತವ್ಯ ಪ್ರಜ್ಞೆಯ ಮಮಕಾರಗಳಿವೆ, ತಾತ್ವಿಕ ಚಿಂತನೆಗಳಿವೆ, ಮನುಷ್ಯ ಸಂಬಂಧಗಳ ತಿಕ್ಕಾಟಗಳಿವೆ, ನಿಗೂಢ ನೋಟದ ಆವರಣವಿದೆ, ಸಿದ್ದ ಮಾದರಿಯನ್ನು ಮುರಿದು ಕಟ್ಟುವ ಚಿಂತನೆಗಳೂ ಕಾಣಸಿಗುತ್ತವೆ.

‘ಊಹೆಗೂ ನಿಜಕ್ಕೂ ಇರುವ ಒಂದು ಅತಿಶಿತಿಲ ಅಂತರದಲ್ಲಿ ಈ ಪರಿಧಿಯಿದ್ದು, ಅದು ಪೂರ್ಣವಾಗಿದೆ’ ಎಂಬ ಮಾತನ್ನು ವಸ್ತಾರೆ ಕಥನದ ಮೊದಲಲ್ಲೇ ಹೇಳುತ್ತಾರೆ. ಅದು ಮೊದಮೊದಲು ಏನೆಂದು ಅರ್ಥವಾಗದಿದ್ದರೂ ಓದುತ್ತ ಹೋದಂತೆ ಹೆಗಲೇರುತ್ತ ಸಾಗುತ್ತದೆ. ಇದ್, ಇಗೋ, ಸುಪರ್ ಇಗೋ ಎಂಬ ಭಾವವನ್ನು ಹಿಡಿದು ಕೊಡುವ ಪ್ರದ್ಯುತ, ವಿಪುಲ ಮತ್ತು ವಸ್ತಾರೆಯೆಂಬ ಪಾತ್ರಗಳು ಕಥನದ ಮುಖ್ಯ ಭಾಗವಾಗಿ ಅನಾವರಣಗೊಳ್ಳುತ್ತ ತಮ್ಮೊಳಗಿನ ಅವಿನಾಭಾವದ ರಹಸ್ಯವನ್ನು ಬಯಲು ಮಾಡುತ್ತ ಪಯಣಿಸುತ್ತವೆ.
ಇಲ್ಲಿಯ ವಿಪುಲ ವಿಚಿತ್ರ ತರ್ಕವನ್ನಿಟ್ಟುಕೊಂಡು ವಿಕ್ಷಿಪ್ತ ಮನಸ್ಸಿನವನಾಗಿ ಕಾಣುತ್ತಾ ಪ್ರದ್ಯುತನನ್ನು ಫೋನಿನಲ್ಲೇ ನಿಗ್ರಹಿಸುವ ಪರಿ ನಿರ್ವಂಚನೆಯದು ಅನಿಸುತ್ತದೆ. ಕೆಲವೊಮ್ಮೆ ವಿಪುಲ ಅಂದರೇನೇ ಅತಿಶಯ ಎಂದೆನಿಸಿಬಿಡುವಷ್ಟು ಅವನ ಲೋಕದೃಷ್ಟಿ ಕಟ್ಟಿಕೊಂಡಿದೆ.

ಅವನ ಹಣಕಾಸಿನ ವ್ಯವಹಾರ ನೋಡಿಕೊಳ್ಳುವ ಪತ್ನಿ ಕಾಮಿನಿ ಮಗ ವಿಸ್ತಾರನನ್ನು ಒಳಗೊಂಡಂತೆ, ತನ್ನ ಅಧೀನದಲ್ಲಿರುವ ಕುಟುಂಬವನ್ನು ಸಂಬಾಳಿಸುವ ಜೊತೆಜೊತೆಗೇ ಕಲಾತ್ಮಕ ಕಟ್ಟಡ ವಿನ್ಯಾಸದ ಅಭಿರುಚಿ ಹೊಂದಿದ ಹಾಗೂ ಆ ಕೆಲಸವನ್ನು ವೃತ್ತಿಯಾಗಿಯೂ ಸ್ವೀಕರಿಸಿದ ಪ್ರದ್ಯುತ ಎಂಬ ವಿನ್ಯಾಸಕನಿಗೆ ತನ್ನ ಭವಿಷ್ಯದ ಕನಸಿನ ಹೊಸ ಮನೆಯೊಂದರ ವಿನ್ಯಾಸ ಮಾಡಿಕೊಡುವಂತೆ ವಿಪುಲ ಎಂಬ ಶ್ರೀಮಂತ ವರ್ತಕ ದುಂಬಾಲು ಬೀಳುತ್ತಾನೆ. ಪ್ರದ್ಯುತ ಆಸ್ಥೆಯಿಂದ ಹಾಕಿದ ಎಂಟೂ ಸ್ಕೆಚ್ಚುಗಳು ವಿಪುಲನಿಗೆ ಸರಿಬರುವುದಿಲ್ಲ.
ಮಾಹಿಸ್ಥೆ ಕಂಪನಿ ಸಂಸ್ಥಾಪಕರ ದಿನಾಚರಣೆಯ ಪಾರ್ಟಿಗಾಗಿ ಅಮೀರಖಾನ್ ಮತ್ತು ಕಿರಣ್ ರಾವ್ ಆಗಮಿಸಿರುವ ಮತ್ತು ಮಗ ವಿಸ್ತಾರನೊಂದಿಗಿನ ಅವರ ಸಾಂಗತ್ಯ ವಾಸ್ತವ ಪ್ರಜ್ಞೆಯನ್ನು ಎಳೆದು ತರುತ್ತದೆ. ಪ್ರದ್ಯುತನನ್ನು ವಿಪುಲ ಜೇಡ್ ಫಾಮ್ರ್ಸನಲ್ಲಿ ನಡೆವ ಪಾರ್ಟಿಯೊಂದಕ್ಕೆ ಕರೆಸಿಕೊಳ್ಳುತ್ತಾನೆ. ಆಕಾಶದಲ್ಲಿನ ಚಂದ್ರನನ್ನು ಗಮನಿಸಲಿಕ್ಕೆ ಪಾರ್ಟಿಗೆ ಬೇಗ ಬರಬೇಕಿತ್ತು ಎನ್ನುತ್ತ ಬೇಸರಪಡುವ ವಿಪು¯ನನ್ನು ಕಂಡ ಪ್ರದ್ಯುತನಿಗೆ ಮನೆ ವಿನ್ಯಾಸಕ್ಕೂ ಆಕಾಶದ ಚಂದ್ರನಿಗೂ ತಾದಾತ್ಮ್ಯವೊಂದು ನಿಲುಕಿದಂತಾಗಿ ಅಚ್ಚರಿಯೆನಿಸುತ್ತದೆ. ಪ್ರದ್ಯುತನಿಗೂ ಒಲ್ಲೆ ಎನ್ನಲಾರದ ಬೇಡಿಕೆ ವಿಪುಲನದು, ಹಾಗಾಗಿ ವಿಧೇಯನಾಗಿ ನಡೆದುಕೊಳ್ಳುತ್ತಾನೆ. ಆದರೆ ಓದುಗನಿಗೆ ಪ್ರತಿ ಬಾರಿಯೂ ವಿಪುಲನ ವಿದ್ವತ್ತು ಮಾತಾಡಿದಂತೆನಿಸುತ್ತದೆ.

ಇಲ್ಲಿ ವಿಪುಲ ತನ್ನ ಕನಸಿನ ಮನೆಯ ವಿನ್ಯಾಸದ ಕುರಿತು ಆಡುವ ಮಾತುಗಳೆಲ್ಲ ಬಯಲು ಮನೆ ನಿರ್ಮಾಣ ಚಿತ್ರಗಳನ್ನು ಮೂಡಿಸತೊಡಗುತ್ತದೆ. ಯಾವುದೇ ಕಚ್ಚಾ ವಸ್ತುವಿನಿಂದ ಅಚ್ಚುಕಟ್ಟಾದ ಖಾದ್ಯ ತಯಾರಿಸುವ ಪ್ರದ್ಯುತನ ಪ್ರಯೋಗಗಳು ಅವನ ಕಟ್ಟಡ ವಿನ್ಯಾಸವನ್ನೂ ಸಾಂಕೇತಿಸುತ್ತವೆ.

ಮನೆ ಕ್ಲೀನಿಂಗ್‍ನಲ್ಲೂ ಆಸಕ್ತಿಯಿರುವ ಪ್ರದ್ಯುತ ಪ್ರದ್ಯುತನಾಗಿರುವುದೆಂದರೆ, ಮನೆಯಲ್ಲಿಯ ಕಮೋಡು ಕುಂಡಗಳೆಲ್ಲ ಸದಾ ಫಳಫಳ ಝಗಮಗಿಸುತ್ತಿರಬೇಕು ಎಂಬಲ್ಲಿ ಶೌಚಾಲಯ ತೊಳೆವ ಬ್ರೆಶ್ಶನ್ನು ನಾಗರಾಜ, ಖೂಳ ರಕ್ಕಸರ ಕೋರೆ ಹಲ್ಲುಗಳ ಹಾಗೆ ಆಚೀಚೆ ಬ್ರಿಸಲ್ಲಿಟ್ಟುಕೊಂಡು ಎಲ್ಲೂ ಬಾಗಬಲ್ಲ ಉದ್ದನೆ ಕೈಪಿಡಿಯ ಪ್ಲಾಸ್ಟಿಕ್ ಬ್ರೆಶ್ಶು ಎಂದು ವರ್ಣಿಸುವದು ಮತ್ತು ದಂಪತಿಯ ಮಧ್ಯದ ಹೊಂದಾಣಿಕೆಯ ವಿವರಗಳು ಓದುಗರ ಸೂಕ್ಷ್ಮ ಭಾವವನ್ನು ಜಾಗ್ರತಗೊಳಿಸುವಂತಿದೆ.

‘ಒಂದು ಪರಿಶುದ್ಧ ವಿನ್ಯಾಸಕ್ಕೆ ಗೋಡೆಗಳಿರೋದಿಲ್ಲ, ಕಿಟಕಿ ಬಾಗಿಲುಗಳಿರೋದಿಲ್ಲ, ಅದು ಸ್ವಚ್ಛಂದ ಆಕಾಶವೇ ಆಗಿರುತ್ತೆ, ಸ್ವಚ್ಛಂದ ವಾತವೇ ಅದಾಗಿರುತ್ತೆ, ಆದರೆ ನೀನು ಮಾಡ್ತಿರೋದೇನು? ನನ್ನನ್ನು ನಡುವೆ ಸಜೀವ ನಿಲ್ಲಿಸಿ ಗೋಡೆಯಿಂದ ಸುತ್ತುವರೀತಿದೀಯ, ಆದರೆ ನನಗೆ ಗೊತ್ತು, ನಿಜವಾಗಿ ಅದು ನನ್ನ ಗೋರಿ ಅಂತ, ಗೋಡೆಗಳು ಇದ್ದೂ ಇರದಂತೆ ಮನೆಯ ವಿನ್ಯಾಸ ಮಾಡೋದನ್ನ ಕಲಿ, ನನಗೆ ಹೇಳೋಕೆ ಗೊತ್ತು, ನಿನಗೆ ಕಟ್ಟೋಕೆ ಗೊತ್ತು, ನೀನು ನನಗಾಗಿ ಗೋಡೆಗಳಿರದ ಎಡೆ ಮಾಡಿಕೊಡಬಲ್ಲೆ, ಅದು ನಿನಗೊಬ್ಬನಿಗೇ ಸಾಧ್ಯ, ನಿನ್ನನ್ನು ನೀನು ಅರಿತುಕೋ, ಅದು ನಿನಗೆ ಸಾದ್ಯ’ ಎನ್ನುವ ವಿಪುಲನ ಮಾತಿನಂತೆ ನಿಜವಾದ ಕತೆಗಾರ ನಾಗರಾಜ ವಸ್ತಾರೆಯವರ ಇಡಿಯಾದ ಕಥನವೂ ಅದೇ ಸಾಧ್ಯತೆಯದು.
ಗೋಡೆ ಮತ್ತು ಕಿಟಕಿಗಳು ಬೇಡವೆಂಬ ವಿಪುಲನ ಹಂಬಲಕ್ಕೆ ಪ್ರದ್ಯುತ ಕೇಳುವ ‘ಗೋಡೆಯೇ ಇಲ್ಲದ ಮನೆ ಎಲ್ಲಾಗುತ್ತದೆಯೋ?’ ಪ್ರಶ್ನೆಯಲ್ಲಿಯೇ ಇಡೀ ಕಾದಂಬರಿಯ ಸ್ನಿಗ್ಧತೆ ಅಡಗಿದೆ. ಮನೆಯನೆಂದೂ ಕಟ್ಟದಿರು ಗುರಿಯನೆಂದೂ ಮುಟ್ಟದಿರು ಎಂಬ ಕುವೆಂಪು ವಾಣಿ ಇಲ್ಲಿ ನೆನಪಾಗದೇ ಇರಲಾರದು.

‘ನಿನ್ನೊಳಗಿನ ವಿನ್ಯಾಸದ ಹಮ್ಮನ್ನು ಬೀಗಿಕೋ, ಮೆರೆದುಕೋ, ಇತಿಮಿತಿಗಳನ್ನು ಮೀರು’ ಎನ್ನುತ್ತಾನೆ ವಿಪುಲ. ನಿರಾಕಾರವನ್ನು ಬಯಸಿದಷ್ಟೂ ನನಗೆ ನೀನು ಆಕಾರವನ್ನು ಕೊಡುತ್ತಿದ್ದೀ, ಎಂಬೆಲ್ಲ ಬರುವ ಈ ಇಬ್ಬರ ಸಂಭಾಷಣೆಯಲ್ಲೇ ಕಥನದ ಸಂಧಿಯಿದೆ.

‘ಸಕ್ಸೆಸ್ ಅನ್ನುವುದನ್ನು ದುಡ್ಡು ಮತ್ತು ಸ್ಥಾನಮಾನಗಳಿಂದ ಅಳೆಯುವ ಆಧುನಿಕ ಸಮಾಜದಲ್ಲಿನ ಮಧ್ಯಮ ವರ್ಗದ ಖಾಯಸ್ಸುಗಳಿಗೆ ಮಾಹಿಸ್ಥೆ ಸಂಸ್ಥೆಯ ಕಥನವೇ ಸ್ಪೂರ್ತಿ’ ಎನ್ನುವ ಮಾತು ಬರುತ್ತದೆ ಒಂದೆಡೆ. ಆ ನಡುವೆ ಮಾಹಿಸ್ಥೆ ಕಂಪನಿಯ ವಿವರಗಳೂ ಬರುವುದು ಕತೆಯ ಒಂದು ನಿರ್ದಿಷ್ಟ ತಿರುವು.

ಸಿದ್ಧ ಮಾದರಿಯನ್ನು ಮೀರಿ ಅಡುಗೆ ಮಾಡುವ ಪ್ರದ್ಯುತ ಏನು ಮಾಡಬೇಕೆಂದು ಮೊದಲೇ ಯೋಚಿಸದೇ ಅಡುಗೆ ಮನೆಯಲ್ಲಿ ಕೈಗೆ ಸಿಗುವ ತರಕಾರಿಗಳಿಂದ ಹೆಂಡತಿ ಮಗು ಇಬ್ಬರೂ ಅಚ್ಚರಿಪಡುವಂತೆ ಹೊಸ ರುಚಿಯನ್ನು ತಯಾರಿಸುವಂಥವ. ಅದಕ್ಕೊಂದು ಹೆಸರನ್ನೂ ತಾನೇ ಕೊಡುವಂಥವ. ಹೀಗೆ ಮಿತಿಗಳನ್ನು ಮೀರುವುದು ಪ್ರದ್ಯುತನ ಸ್ವಭಾವದಲ್ಲೇ ಅಡಕವಾಗಿದ್ದು ಕಾಣುತ್ತದೆ. ಹಾಗಾಗಿಯೇ ಪ್ರದ್ಯುತ ವಿಪುಲನ ಕಿರುಕುಳವನ್ನು ತಡೆದುಕೊಂಡು ಹೊಸದನ್ನು ಕಂಡುಕೊಳ್ಳುವ ಹುಚ್ಚಿಗೆ ಬೀಳುತ್ತಾನೆ.

ಕತೆಯ ಕೊನೆಯಲ್ಲಿ ಪ್ರದ್ಯುತ, ಮತ್ತು ವಸ್ತಾರೆ ಇಬ್ಬರೂ ಒಬ್ಬರೇ ಎನ್ನುವ ಭಾವ ಮೂಡುವ ಗಳಿಗೆಯೇ ಕತೆಯ ಅರಿವಿನ ಅತ್ಯುನ್ನತ ಕ್ಷಣ ಅಂದುಕೊಂಡಿದ್ದೇನೆ. ಈ ಸಂದರ್ಭದಲ್ಲಿ ವಿವೇಕ ಶಾನಭಾಗರ ‘ನಿರ್ವಾಣ’ ಕತೆಯೊಂದು ನೆನಪಿಗೆ ಬರುತ್ತದೆ, ಒಬ್ಬರು ಇಬ್ಬರಾಗಿ ಬದುಕನ್ನು ಅರ್ಥೈಸಿಕೊಳ್ಳುವ ಬಡಿದಾಟಗಳು ಇಬ್ಬರೂ ಒಂದಾಗಿ ತನ್ನೊಳಗನ್ನು ಬೆಳಗಿಕೊಳ್ಳುವ ಜ್ಞಾನೋದಯದ ಬಿಂದುವೂ ಆಗಿ ಕಾಣುತ್ತದೆ.

ಕೊನೆಯಲ್ಲಿ ಬಹುಶ್ರುತನಂತೆ ಬಂದು ಹೋಗುವ ವಸ್ತಾರೆ ಹಾಗೂ ಕತೆಯ ಭಾರ ಹೊತ್ತ ಪ್ರದ್ಯುತ ಎರಡೂ ಪಾತ್ರಗಳು ಪರಸ್ಪರ ಒಬ್ಬನೇ ಆಗಿದ್ದು ವಿಘಟಿತಗೊಂಡ ಎರಡು ವ್ಯಕ್ತಿತ್ವಗಳಾಗಿ ಓದುಗನಲ್ಲಿ ವಿಭ್ರಮೆ ಹುಟ್ಟಿಸುವ ರೀತಿ ಸೋಜಿಗದ್ದು. ಎರಡೂ ಪಾತ್ರಗಳೂ ವಿಯೋಗದಲ್ಲೂ ಒಂದೇ ಆಗುತ್ತವೆ ಎಂಬ ಸತ್ಯ ಮೆಚ್ಚುವಂಥದು. ಕಟ್ಟ ಕಡೆಯಲ್ಲಿ ಪ್ರದ್ಯುತನಿಗೆ ವಸ್ತಾರೆ ಭೇಟಿಯಾಗುವ ಸಂದರ್ಭದ ಬೇಹುಗಾರಿಕೆಯ ವಿವರಗಳು ಮೈನವಿರೇಳಿಸುವಂಥದು.

ಇಡೀ ಕತೆ ಪ್ರದ್ಯುತ ತಮ್ಮ ಮನೆಯ ಟಾಯ್ಲೆಟ್ ಕುಂಡದಲ್ಲಿಯ ಒಂದು ಹಟಮಾರಿ ಕಪ್ಪು ಕಲೆಯನ್ನು ತಿಕ್ಕಿ ತಿಕ್ಕಿ ಹೋಗಲಾಡಿಸುವ ಕೆಲಸದಿಂದ ಆರಂಭಗೊಂಡು ಎಲ್ಲವೂ ಉಳಿದೇ ಹೋದ ಹಟಮಾರಿ ಕಪ್ಪು ಕಲೆಯ ಪ್ರತಿಬಿಂಬದಂತೆ, ಒಂದು ಹಂತದಲ್ಲಿ ಬೆರಗೂ ಕಾಕತಾಳೀಯವೂ ಎನ್ನಿಸುವ ಪ್ರಸಂಗಗಳಲ್ಲಿ ಓದಿನ ಪಯಣ ಮುಗಿದು ಚಿಂತನೆಗೆ ಎಳೆಯುತ್ತದೆ.
ಪ್ರದ್ಯುತ ಮತ್ತು ವಿಪುಲನ ಸಂಭಾಷಣೆಗಳು ಕಟ್ಟಡ ವಿನ್ಯಾಸದ ಕುರಿತು ಹೇಳುತ್ತಿವೆಯೋ ಅಥವಾ ಇಂದಿನ ಮನುಷ್ಯ ನಿರ್ಮಿತ ಸಂದಿಗ್ದ ಬದುಕಿನ ಬಗ್ಗೆ ಹೇಳುತ್ತಿವೆಯೋ ಅಥವಾ ಮನುಷ್ಯನ ಒಳಮನಸ್ಸಿನ ಕುರಿತು ಹೊಸ ವ್ಯಾಖ್ಯಾನವನ್ನು ಸೃವಿಸುತ್ತಿವೆಯೋ ಎಂಬಂತಹ ಆವರಣದಲ್ಲಿ ಓದುಗರನ್ನೂ ಒಳಗೊಳ್ಳುತ್ತ ಕಥನ ಸಾಗುವುದು ಈ ಕೃತಿಯನ್ನು ಒಮ್ಮೆ ಓದಿಯೇ ಅನುಭವಿಸಬೇಕು. ಅರ್ಬನ್ ಪ್ಯಾಂಥರ್ ಎಂಬ ಚಿರತೆಯ ಸಂಕೇತವುಳ್ಳ ಕಟ್ಟಡವೊಂದು ಪ್ರಸ್ತುತ ಸಂದರ್ಭದ ಜಾಗತೀಕರಣವನ್ನಪ್ಪಿಕೊಂಡಿರುವ ನಾಗರಿಕತೆಯ ವೈರುಧ್ಯಗಳನ್ನು ಬಿಚ್ಚಿಡುತ್ತದೆ.

ಈ ಕೃತಿಯ ಮೊದಲ ಓದು ಓದಿ ಮುನ್ನುಡಿ ಬರೆದ ಲೇಖಕಿ ಸಂದ್ಯಾರಾಣಿಯವರು ವಸ್ತಾರೆಯವರ ಒಟ್ಟಾರೆ ನಗರ ಸಂವೇದನೆಯ ಕುರಿತು ಮಾತು ಎತ್ತುತ್ತ ‘ಕತೆಗಳಲ್ಲಿನ ಸಂವೇದನೆ ಸಹಜವಾಗಿ ಬರಬೇಕು, ಅಲ್ಲಿ ಪೊಲಿಟಿಕಲೀ ಕರೆಕ್ಟ್ ಆಗುವುದಕ್ಕಿಂತ ನಮ್ಮ ಅನುಭವಗಳಿಗೆ ಪ್ರಾಮಾಣಿಕರಾಗಿರುವುದು ಮುಖ್ಯ, ಮೊಬೈಲು ಟೀವಿ ಇಂಟರ್ನೆಟ್ ಇತ್ಯಾದಿಗಳು ಹಳ್ಳಿ ನಗರಗಳ ನಡುವೆ ವರ್ಚುವಲ್ ಹಾದಿ ನಿರ್ಮಿಸಿರುವ ಈ ಕಾಲಘಟ್ಟದಲ್ಲಿ ಯಾವ ಸಂವೇದನೆಗಳನ್ನು ತಾನೇ ಇದಮಿತ್ಥಂ ಎಂದು ವಿಂಗಡಿಸಿ ಹೇಳಲಾದೀತು’ ಎಂದಿದ್ದು ಒಟ್ಟಾರೆ ಈ ಕಾಲದ ಆಧುನಿಕ ಸಂವೇದನೆಯ ಕತೆಗಳ ಹಿನ್ನೆಲೆಯಲ್ಲಿ ಚಿಂತನೆಗೆ ಒಳಪಡಿಸುವಂಥದ್ದು.

ಕತೆ ಹೇಳುವಾಗ ಅತ್ಯಂತ ಕಷ್ಟಪಟ್ಟು ಮಾಡಿದ ತಂತ್ರಗಾರಿಕೆ ಇಲ್ಲಿ ಢಾಳಾಗಿ ಕಾಣುತ್ತದೆ. ಇದು ಒಬ್ಬ ಕಲಾತ್ಮಕ ಕತೆಗಾರನಾಗಿ ನಾಗರಾಜ ವಸ್ತಾರೆಯವರ ಪ್ರತಿಭೆಗೆ ಸಾಕ್ಷಿ. ಆರಾಮಾಗಿ ಗೋಡೆಗಳಿಲ್ಲದೇ ಬದುಕುವ ಕಲೆಯನ್ನು ಬಯಲೇ ಆಲಯವಾದ ಹಲವು ರೂಪಕವನ್ನು ಬಳಸಿದ್ದರಿಂದ ನಮ್ಮ ನಮ್ಮ ಭಾವಕ್ಕೆ ಭವಕ್ಕೆ ತಕ್ಕಂತೆ ಕತೆಯನ್ನು ಅರ್ಥೈಸಿಕೊಳ್ಳಬಹುದು. ಓದು ನಿಧಾನಕ್ಕೆ ಕಟ್ಟಡ ವಿನ್ಯಾಸದ ಹಳಿ ಬಿಟ್ಟು ಬದುಕಿನ ಅರ್ಥ ವಿನ್ಯಾಸದ ಹಳಿಗೆ ಶಿಫ್ಟ್ ಆಗುವುದು ನನಗಿಷ್ಟವಾದ ಒಂದು ಸಮ್ಮೋಹನದ ಗಳಿಗೆ. ಒಟ್ಟೂ ಮನುಷ್ಯನ ಸಾಧ್ಯತೆಗಳು ಹಾಗೂ ಇರುವ ಸಿದ್ದಮಾದರಿಯನ್ನು ಮೀರುವ ಅರಿವು ಈ ಕತೆಯಿಂದ ನಮಗೆ ಯಥೇಚ್ಚವಾಗಿ ದೊರಕುತ್ತ ಓದು ಸಾರ್ಥಕವೆನಿಸುತ್ತದೆ.

Leave a Reply