ಯಾಕೋ ಮನಸ್ಸು ತೀರಾ ಭಾರ..

-ಜಿ ಎನ್ ಮೋಹನ್ 

ಯಾಕೋ ಮನಸ್ಸು ತೀರಾ ಭಾರ

ನಿನ್ನೆ ಆರ್ ಟಿ ವಿಠ್ಠಲಮೂರ್ತಿ ಒಂದು ಲೇಖನ ಬರೆದಿದ್ದರು. ಒಂದು ಬೆಳಕಿನ ಬಗ್ಗೆ. ಎಸ್ ಎಸ್ ಕುಮಟಾ ಎನ್ನುವ ಸಮಾಜವಾದಿ ನಿಗಿ ನಿಗಿ ಕೆಂಡದಂತೆ ಉರಿದು ದನಿಯಿಲ್ಲದವರ ದನಿಯಾದವರ ಪತ್ನಿಯ ಬಗ್ಗೆ. ಅಂತಹ ಎಸ್ ಎಸ್ ಕುಮಟಾ ಅವರ ಹೆಂಡತಿ ರತ್ನಮ್ಮ ನಿನ್ನೆ ತೀರಿ ಹೋದರು. ರತ್ನಮ್ಮ ಹೇಗೆ ಕುಮಟಾ ಅವರ ಜೊತೆ ಜೊತೆಗೆ ಇದ್ದು ಅವರೊಳಗಿನ ಕಿಡಿ ನಂದಂತೆ ನೋಡಿಕೊಂಡರು. ಹೇಗೆ ಹಸಿವನ್ನು ತನ್ನ ಗಂಡನಿಗೆ ಕಾಣದಂತೆ ತಮ್ಮೊಳಗೆ ಮುಚ್ಚಿಟ್ಟುಕೊಂಡರು. ಹೇಗೆ ಅವರು ಬಡಜನರ ಕಣ್ಣಿಗೆ ಬೆಳಕು ತುಂಬಲು ಹೆಗಲಾಗಿ ನಿಂತರು ಎಂದು ಬರೆದಿದ್ದರು.

ಆದರೆ.. ಆದರೆ ನನ್ನ ಮನಸ್ಸು ಕುಸಿದು ಹೋದದ್ದು ಅದಕ್ಕಲ್ಲ. ಅವರ ಸಾವಿಗಿಂತಲೂ ತೀವ್ರವಾಗಿ ತಟ್ಟಿದ್ದು ಅವರು ತಮ್ಮ ಕೊನೆಯ ದಿನಗಳನ್ನು ವೃದ್ಧಾಶ್ರಮದಲ್ಲಿ ಕಳೆಯಬೇಕಾಯಿತು ಎನ್ನುವುದರ ಬಗ್ಗೆ. ರತ್ನಮ್ಮನವರಿಗೆ ಮಕ್ಕಳಿದ್ದಾರೆ. ಸ್ಥಿತಿವಂತರೂ ಹೌದು. ಆದರೆ ಅವರು ಮಾತ್ರ ವೃದ್ಧಾಶ್ರಮದಲ್ಲಿರಬೇಕಾಯಿತು.

ನಾನು ಆ ತಾಯಿಯನ್ನು ಕಂಡಿದ್ದೇನೆ. ಅಷ್ಟೇ ಅಲ್ಲ ಅವರ ಮಗಳು ಸುಜಾತ ಕುಮಟಾ ಅವರ ಪತಿ ಉಮರಬ್ಬ ಅಪಘಾತದಲ್ಲಿ ತೀರಿ ಹೋದಾಗ ಅವರೊಂದಿಗೆ ಮಳೆ ಗಾಳಿ ಲೆಕ್ಕಿಸದೆ ಪಶ್ಚಿಮ ಘಟ್ಟ ಇಳಿದು ಕರಾವಳಿಯ ಬಗಲಲ್ಲಿದ್ದ ಸುರತ್ಕಲ್ ವರೆಗೆ ಹೋಗಿ ಬಂದಿದ್ದೇನೆ.

ಆಕೆ ಗಟ್ಟಿಗಿತ್ತಿ. ಅವರ ಮಾತಿನೊಳಗೆ ಅವರ ಜೀವನದ ಏಟುಗಳು ಕಾಣದಂತೆ ಆದರೆ ಅವುಗಳಿಂದ ಪಾಠ ಕಲಿತು ಮುಂದೆ ಸಾಗುತ್ತಿರುವ ಕುರುಹಿತ್ತು. ಅಷ್ಟೂ ಮಕ್ಕಳಿಗೂ, ಅಂತೆಯೇ ಮೊಮ್ಮಕ್ಕಳಿಗೂ ಆಕೆ ಇನ್ನಿಲ್ಲದ ಆಧಾರವಾಗಿದ್ದರು.

ಆದರೆ ಆಕೆ ವೃದ್ಧಾಶ್ರಮದಲ್ಲಿದ್ದರು. ಅದು ಆಕೆಗೆ ಬೇಕಿರಲಿಲ್ಲ. ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಗೋಗರೆಯುತ್ತಿದ್ದರು.

ಒಂದು ಬೆಳಕಿನ ದೊಂದಿಯಾಗಿದ್ದ, ಬೆಳಕ ದೀವಿಗೆಗೆ ಹೆಗಲಾಗಿದ್ದ ರತ್ನಮ್ಮ ಹೀಗೆ ಹೊರಟುಬಿಟ್ಟರು.

ಇನ್ನೊಂದು ದಿನ ಮಂಗಳೂರಿಗೆ ಹೋಗಲು ಬಸ್ ಹತ್ತಿ ಕೂತಿದ್ದೆ.

ಹೊರಗೆ ಯಾರೋ ಭಿಕ್ಕುವ ಸದ್ದು

ಏನು ಎಂದು ಇಳಿದು ಹತ್ತಿರ ಹೋದರೆ ಒಬ್ಬ ಹೆಂಗಸು, ಎದುರುಗಡೆ ಕುಡಿದು ತೂರಾಡುತ್ತಿರುವ ಯುವಕ.

ಏನಮ್ಮ ಎಂದು ಕೇಳಿದೆ

ಅಷ್ಟೇ ಸಾಕಾಯಿತೇನೋ ಆಕೆಗೆ

ಭಿಕ್ಕಿ ಭಿಕ್ಕಿ ಅಳತೊಡಗಿದಳು

ಆಕೆಯೂ ಮಂಗಳೂರಿನ ಬಸ್ ಹತ್ತಬೇಕಿತ್ತು. ವಾರದ ಕೊನೆಯ ದಿನ. ಹಾಗಾಗಿ ಬಸ್ ನಲ್ಲಿ ಇನ್ನಿಲ್ಲದ ರಶ್ ಇರುತ್ತದೆ ಎಂದು ಮಗನನ್ನು ಕರೆದು ಆತನ ಕೈಗೆ ದುಡ್ಡು ಇಟ್ಟಿದ್ದಾಳೆ. ನಾನು ಬರುವ ವೇಳೆಗೆ ಟಿಕೆಟ್ ಮಾಡಿಸಿರು ಅಂತ

ಆದರೆ ಆತ ಕೈಗೆ ಸಿಕ್ಕ ಆ ಹಣ ಹಿಡಿದು ಸೀದಾ ಗಡಂಗಿನ ದಾರಿ ಹಿಡಿದಿದ್ದಾನೆ. ಅಮ್ಮ ಕೊಟ್ಟ ಹಣ ಮುಗಿಯುವವರೆಗೂ ಕುಡಿದಿದ್ದಾನೆ. ಕೊನೆಗೆ ತೂರಾಡಿಕೊಂಡು ಬಸ್ ನಿಲ್ದಾಣಕ್ಕೆ ಬಂದಿದ್ದಾನೆ

ಅಮ್ಮ ಬಟ್ಟೆ ಬ್ಯಾಗ್ ಹಿಡಿದುಕೊಂಡು ನಿಲ್ದಾಣಕ್ಕೆ ಬಂದರೆ ಮಗ ತೂರಾಡುತ್ತಿದ್ದಾನೆ. ಕೈನಲ್ಲಿ ಟಿಕೆಟ್ ಇಲ್ಲ.

ಅಮ್ಮನಿಗೆ ಎಲ್ಲಾ ಅರ್ಥವಾಗಿ ಭಿಕ್ಕುತ್ತಿದ್ದಾಳೆ

‘ಮನೆ ಕಸ ಮುಸುರೆ ಮಾಡುತ್ತೇನೆ ಸಾರ್ ಅದರಲ್ಲಿ ಬರುವ ಅಷ್ಟೋ ಇಷ್ಟೋ ಹಣ ಕೂಡಿಸಿ ಧರ್ಮಸ್ಥಳಕ್ಕೆ ಹೊರಟಿದ್ದೆ. ಮಗನಿಗೆ ಒಂದು ಕೆಲಸವಾದರೂ ಸಿಗಲಿ ಅಂತ ದೇವರಿಗೆ ಬೇಡಿಕೊಳ್ಳುವುದಕ್ಕೆ. ಈಗ ಕುಡಿದು ಮುಗಿಸಿದ್ದಾನೆ. ನನ್ನ ಬಳಿ ಇನ್ನು ಹಣವೂ ಇಲ್ಲ

ಹೊಟ್ಟೆಯೊಳಗೆ ಸಂಕಟ ಹೊರಳಾಡಿತು.

 

ಅದೊಂದು ವಿಡಿಯೋ

ಪ್ರೊಫೆಸರ್ ಮಗ ತಾಯಿಯನ್ನು ಹಿಡಿದುಕೊಂಡು ಕಷ್ಟದಿಂದ ಮೆಟ್ಟಿಲು ಹತ್ತಿಸುತ್ತಿದ್ದಾನೆ. ಆರೋಗ್ಯ ಕುಸಿದು ಹೋಗಿರುವ ತಾಯಿ ಏದುಸಿರುಬಿಡುತ್ತಾ ಮಗನ ಆಸರೆ ಪಡೆದು ಹರಸಾಹಸ ಮಾಡುತ್ತಿದ್ದಾರೆ

ವಿಡಿಯೋ ನೋಡುತ್ತಿದ್ದವರಿಗೆ ಪಾಪ ಮಗ ಅಮ್ಮನ ಆರೈಕೆಗೆ ಎಷ್ಟು ಒದ್ದಾಡುತ್ತಿದ್ದಾನೆ ಅನಿಸುತ್ತಿತ್ತು

ಆದರೆ ಮರುಕ್ಷಣ ಅಮ್ಮ ಆ ನಾಲ್ಕನೆಯ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ. ಸಾವು ತಕ್ಷಣ ಅವಳನ್ನು ಕಬಳಿಸಿಹಾಕಿದೆ. ಅಪಾರ್ಟ್ಮೆಂಟ್ ನಲ್ಲಿದ್ದ ಸಿ ಸಿ ಟಿ ವಿ ಸದ್ದಿಲ್ಲದೇ ಗುಟ್ಟು ಬಿಟ್ಟುಕೊಟ್ಟಿದೆ. ಮಗ ತಾಯಿಯನ್ನು ಮೆಟ್ಟಿಲು ಹತ್ತಿಸಿದವನೇ ಆಕೆಯನ್ನು ಅಲ್ಲಿಂದ ಕೆಳಕ್ಕೆ ದೂಡಿದ್ದಾನೆ. ಈತ ಮೆಟ್ಟಿಲು ಹತ್ತಿಸುತ್ತಿರುವಾಗ ಬಾಗಿಲು ಹಾಕಿದ ಮನೆಯೊಳಗಿಂದ ಇನ್ನೊಂದು ದನಿ ಹೇಗೆ ಎಲ್ಲವನ್ನೂ ಸರಿಯಾಗಿ ಮಾಡಬೇಕು ಎಂದು ನಿರ್ದೇಶನ ನೀಡುತ್ತಿದೆ.

ಅಮ್ಮ ನಿಮ್ಮ ಮನೆಗಳಲ್ಲಿ ಕಂಡಿರೇನೇ ಕಂದನಾ ಎಂದರು

ಆದರೆ ಈಗ ಕೇಳಬೇಕಿದೆ ‘ಕಂದರಿರಾ ನಿಮ್ಮ ಮನೆಗಳಲ್ಲಿ ಕಂಡಿರೇನು ಅಮ್ಮನಾ..??’

12 Responses

 1. SUDHA SHIVARAMA HEGDE says:

  ತುಂಬಾ ಕಷ್ಟವಾಯಿತು ಓದಲು. ಏನಾಗಿದೆ ನಮಗೆ?

 2. N.Ravikumar says:

  ಯಾಕೋ ಕರುಳು ವಿಲ ವಿಲ ಎನ್ನುತ್ತಿದೆ ಸರ್

 3. Laxman says:

  ನಿಜವಾಗಿಯೂ ಮನಸು ಕನಲಿ ಹೋಯಿತು !!
  ಅದರಲ್ಲೂ ಮೆಟ್ಡಿಲಿನಿಂದ ಬೀಳಿಸಿದ ಆ ಮಹಾನುಭಾವ ನ ಬಗ್ಗೆ ಓದಿದಾಗ .

 4. ಮನಸ್ಸು ಭಾರ ಭಾರ… ಇದೊಂದು ಸಾಮೂಹಿಕ ಪಾಪಪ್ರಜ್ಞೆ.. ಇಳಿಸಿಕೊಳ್ಳಲಾರದ್ದು…

 5. Vinay Kumar M. G says:

  ಏನು ಕಮೆಂಟ್ ಮಾಡೋದು?

 6. Sudha ChidanandGowd says:

  ಅಬ್ಬಾ.. ನಿಜಕ್ಕೂ ಮನಸು ಭಾರವಾಯಿತು…
  ಯಾಕೆ ಮಕ್ಕಳಿಗೆ ತಾಯಿವಾತ್ಸಲ್ಯ ಭಾರವಾಗುತ್ತದೆ.?!
  ಯಾಕೆ ಆ ಕಾಣದ ನಿರ್ದೇಶನ ಗಳ ದನಿಗೆ ತಾನೂ “ಮಗ”ನ ತಾಯಿ ಎಂಬುದು ಮರೆತುಹೋಗುತ್ತದೆ..?!
  ಪುಟ್ಟಪುಟ್ಟ ಸಂದರ್ಭಗಳ ನಿರೂಪಣೆ ಹೃದಯವಿದ್ರಾವಕ ಸಂದೇಶ ಕೊಡುತ್ತಿದೆ. ನಾಳೆಗಳ ಕುರಿತು ಚಿಂತಿಸುವಾಗ ವೃದ್ಧಾಶ್ರಮಗಳು ಸಮಾಜದ ಅವಿಭಾಜ್ಯ ಅಂಗವಾಗಿ ಗೋಚರಿಸುತ್ತಿವೆ.
  ಇದಕ್ಕಿಲ್ಲವೇ ಪರಿಹಾರ.?!

 7. Thanuja Doddamani says:

  Speech less heegoo ammana runa teerisikondra makkalu avaru mudikaraguvudillave

 8. Anasuya M R says:

  ಹೃದಯ ವಿದ್ರಾವಕ ರತ್ನಮ್ಮನ ಗೋಗೆರೆತ …. ಮನ ಮುಟ್ಟಿತು

 9. Bharathi b v says:

  ಎದೆ ನಡುಗಿತು

 10. Bhanukiran says:

  Kallu kitgamdange ayutu sir, ennu a papigalige shikshe aa gillave?

 11. kvtirumalesh says:

  ಹೃದಯವಿದ್ರಾವಕ! ಈ ಪಾಪದಲ್ಲಿ ಇಂದಿನ ಇಡೀ ಸಂಸ್ಕೃತಿಯೇ ಭಾಗಿಯಾಗಿದೆ ಎನಿಸುತ್ತದೆ.
  ಕೆ.ವಿ. ತಿರುಮಲೇಶ್

 12. Sriprakash says:

  ಮನ ಮಿಡಿವ ಕತೆಗಳು. ! ಬೆಜವಾಬ್ದಾರಿತನ..ಕುಡಿತ…ಕ್ರೌರ್ಯ…ಅಬ್ಬಾ…!

Leave a Reply

%d bloggers like this: