ಅಂತಃಕರಣನ ‘ಕ್ರೀಡಾ ರಿಪಬ್ಲಿಕ್’

 

 

 

ಕೆ ಫಣಿರಾಜ್

 

 

ಮನಸ್ಸನ್ನು ಒತ್ತುತ್ತಿರುವ ಅನಿಸಿಕೆಗಳನ್ನು ಪ್ರಕಟಿಸುವುದೇ ’ಅಭಿವ್ಯಕ್ತಿ’. ಅಭಿವ್ಯಕ್ತಿಸುವ ಮಾಧ್ಯಮಗಳು ಭಿನ್ನವಾಗಿದ್ದರೂ, ಅಭಿವ್ಯಕ್ತಿಯ ಹಂಬಲದಲ್ಲಿ ಭಿನ್ನತೆ ಏನೂ ಇಲ್ಲ. ಫೋನಲ್ಲಿ ನಮಗೆ ಒಗ್ಗದ ಮಾತುಕತೆಯನ್ನು ದಾಕ್ಷಿಣ್ಯಕ್ಕೆ ನಡೆಸುತ್ತಿರುವಾಗ, ಎದುರಿಗಿರುವ ಪೇಪರಿನ ಮೇಲೆ ಅಸಂಗತವೆನಿಸುವ ಗೆರೆ, ಆಕಾರಗಳನ್ನು ಗೀಚುವುದೂ ಒಂದು ಅಭಿವ್ಯಕ್ತಿಯೇ ಆಗಿದೆ ಎನ್ನುವುದು ಮನಃಶಾಸ್ತ್ರದ ಪ್ರಾಥಮಿಕ ಭೋದೆ. ನಾಗರಿಕ ಸಮಾಜ ಅಧಿಕಾರದಾಟದ ನಯನಾಜೂಕು ಕಲಿಯುತ್ತಾ, ಅಭಿವ್ಯಕ್ತಿಗಳನ್ನು ಶ್ರೇಣೀಕರಿಸಿ, ಎಲ್ಲಿಂದ ಅಭಿವ್ಯಕ್ತಿ ’ಕಲೆ’ಯಾಗುತ್ತದೆ ಎಂಬ ಪೂರ್ವಾಗ್ರಹದ ಗೆರೆ ಎಳೆದ ಮೇಲೆ, ನಾವು ಮನುಷ್ಯರ ಅನಿಸಿಕೆಯ ಒತ್ತಡಗಳ ಸಹಜ ಲಾಲಿತ್ಯದ ಕಡೆ ಗಮನ ಕೊಡುವ ಸ್ವಚ್ಛಂದತೆಯನ್ನು ಮರೆವಿಗೆ ತಳ್ಳಿಬಿಟ್ಟಿರುವಂತಿದೆ.

ಒಂದು ಬರಹವನ್ನು ಓದುವಾಗ, ಒಂದು ಚಿತ್ರವನ್ನು ನೋಡುವಾಗ, ಒಂದು ಸಿನಿಮಾವನ್ನು ವೀಕ್ಷಿಸುವಾಗ, ಒಂದು ಭಾಷಣಕ್ಕೆ ಕಿವಿiಗೊಡುವಾಗ, ಒಂದು ಮಾತುಕತೆಯನ್ನು ಕೇಳುವಾಗ-ನಾವು ಅಭಿವ್ಯಕ್ತಿಯ ಶ್ರೇಣೀಕೃತ ಮಸೂರಗಳನ್ನು ಬದಿಗಿಟ್ಟು, ನಮ್ಮ ಬದುಕಿನ ಕುರಿತು ತನ್ನ ಒತ್ತುತ್ತಿರುವ ಅನಿಸಿಕೆಯನ್ನು ಮನುಷ್ಯನೊಬ್ಬ ಪ್ರಕಟಿಸುತ್ತಿರುವ ವಿಚಾರಗಳ ಕಡೆ ಮಾತ್ರ ಗಮನವಿಟ್ಟುಕೊಂಡಾಗ ಮಾತ್ರವೇ, ಪ್ರಕಟವಾಗುತ್ತಿರುವ ಅನಿಸಿಕೆಗಳ ಸಾಚಾ ಅಥವ ಸೋಗಲಾಡಿತನ ಅರ್ಥವಾಗುತ್ತದೆ. ತಮ್ಮ ಬೆಣ್ಣೆ ಸವರಿದಂಥ ಮಾತುಗಳಿಂದ, ಹಸಿ ಸುಳ್ಳುಗಳನ್ನೂ ನಿಜದ ತಲೆ ಹೋಳಾಗುವ ಹಾಗೆ ಪ್ರಕಟಿಸುವ ಕೇಡಿನ ಕಲಾವಿದರು ವಿಜೃಂಭಿಸುತ್ತಿರುವ, ಅವರ ಅಭಿವ್ಯಕ್ತಿಗೆ ಸಭ್ಯರೆನಿಸಿಕೊಂಡವರು. ’ಹೌದು!ಹೌದಲ್ಲವೇ!’ ಎಂದು ತಲೆದೂಗುತ್ತಿರುವ ಕಾಲದಲ್ಲಿ, ಯಾವ ಸೋಗಲಾಡಿತನವೂ ಇಲ್ಲದೆ, ಅಭಿವ್ಯಕ್ತಿಯ ಶ್ರೇಣೀಕರಣದ ಹಂಗು ತಟ್ಟಸಿಕೊಳ್ಳದೇ, ಮನದಲ್ಲಿ ಒತ್ತರಿಸುವುದನ್ನು ಸಾಫ್‌ಸೀದಾ ಪ್ರಕಟಿಸುವ ಒಂದು ಬರಹ, ಚಿತ್ರ, ಸಿನಿಮಾಗಳ ಮೌಲಿಕತೆ ನಮ್ಮ ಗ್ರಹಿಕೆಯ ಪಂಚೇಂದ್ರಿಯಗಳನ್ನು ಕೊಂಚವಾದರೂ ಶುದ್ಧೀಕರಿಸುತ್ತದೆ. ಪ್ರಸ್ತುತ ಪುಸ್ತಕದ ಲೇಖಕ ಅಂತಃಕರಣನ ಬರಹಗಳಲ್ಲಿ ಈ ಬಗೆಯ ಅಭಿವ್ಯಕ್ತಿಯ ತಾಜಾತನ ಇರುವುದರಿಂದಲೇ, ಈ ಬರಹಗಳ ಓದು ಚೇತೋಹಾರಿಯಾಗಿದೆ.

ಸಹಜ ಅಭಿವ್ಯಕ್ತಿಗೆ ಜಾತಿ-ಮತ-ಅಂತಸ್ತು-ಲಿಂಗಗಳ ಹಂಗು ಹೇಗೆ ಅಸಹಜವೋ, ಹಾಗೆಯೇ ವಯಸ್ಸಿನ ಹಂಗೂ ಇರುವುದಿಲ್ಲ. ಕೆಲವರು ತಮ್ಮ ಎಳವೆಯಲ್ಲೇ ಲೋಕದ ಸುಖ-ದುಃಖಗಳ ಬಗ್ಗೆ ತಮ್ಮ ಅನಿಸಿಕೆ ಪ್ರಕಟಿಸಿ ಬೆರಗುಗೊಳಿಸಬಲ್ಲರಾದರೆ, ಕೆಲವರು ತಮ್ಮ ಇಳಿ ವಯಸ್ಸಿನಲ್ಲಿ ಅಭಿವ್ಯಕ್ತಿಯ ತುರ್ತು ಕಂಡುಕೊಂಡು ತಮ್ಮ ಲೋಕಾನುಭವ ಪ್ರಕಟಿಸುವರು: ಓದುಗರಿಗೆ ಕೊನೆಗೂ ಮುಖ್ಯವಾಗುವುದು, ಪ್ರಕಟವಾದ ಲೋಕನುಭವದ ಅರಿವಿನ ಪಾಠವೇ ಹೊರತು, ಪ್ರಕಟಿಸಿದವರ ವಯೋಮಾನವಲ್ಲ.

ಈ ಪುಸ್ತಕದ ಬರಹಗಳನ್ನು ಓದುವಾಗ, ನಾವು ಮೊದಲಾಗಿ ಮರೆಯಬೇಕಾದ್ದು ಬರಹಗಾರನ ವಯಸ್ಸನ್ನು! ಇಲ್ಲಿಯ ಬರಹಗಳ ತಾಜಾತನ, ಬರಹಗಾರನ ವಯಸ್ಸಿನ ರಿಯಾಯತಿಯನ್ನು ಬೇಡುವುದಿಲ್ಲ; ಅಂತಃಕರಣನಿಗೆ ತನ್ನಲ್ಲಿ ಒತ್ತರಿಸುತ್ತಿರುವ ಅನಿಸಿಕೆಗಳನ್ನು ಪ್ರಕಟಿಸುವುದಕ್ಕೆ ಬೆಂಬಲವಾಗಿ ಒಂದು ಅರೋಗ್ಯಕರ ಸಾಮಾಜಿಕ ಸಾಮುದಾಯಿಕ ವಾತಾವರಣದ ಅಗತ್ಯವಿದೆ; ಅಂಥದ್ದೊಂದು ನಿರಾಳ ಹವೆ ಇದ್ದರೆ, ಸ್ವಚ್ಛಂದವಾದ ಅಭಿವ್ಯಕ್ತಿಗೆ ಎಂಥ ಕಳೆ ಬರುತ್ತದೆ ಎನ್ನುವುದಕ್ಕೆ ಇಲ್ಲಿನ ಬರಹಳು ಸಾಕ್ಷಿಯಾಗಿವೆ.

ಮೆಲ್ನೋಟಕ್ಕೆ ಇಲ್ಲಿನ ಬರಹಗಳು ಆಧುನಿಕ ಕ್ರೀಡೆಗಳಾದ ಪುಟ್ಬಾಲ್, ಷಟ್ಲ್ ಬ್ಯಾಡ್ಮಿಂಟನ್ ಹಾಗು ಸ್ಪರ್ಧಾ ಲೀಗ್‌ನ ಸ್ವರೂಪ ಪಡೆದ ಕಬಡ್ಡಿ ಕುರಿತಾದ ರೋಚಕ ವಿವರಗಳನ್ನು ಉಳ್ಳಂತಹವು. ಇಲ್ಲಿನ ಬರಹಗಳಲ್ಲಿ ಈ ಆಟಗಳಲ್ಲಿ ವೃತ್ತಿಪರರಾಗಿರುವ ಆಟಗಾರರ ಕೌಶಲ್ಯ ಹಾಗು ಅವರ ಸಾಧನೆಯ ದಟ್ಟ ವಿವರಗಳು ತುಂಬಿ ತುಳುಕುತ್ತವೆ. ಬರಿ ಕ್ರೀಡಾ ಬರಹಗಳಾಗಿ ಓದಿಕೊಂಡಾಗಲೂ ಈ ಬರಹಗಳಲ್ಲಿ ಬಲು ಶ್ರದ್ಧೆಯಿಂದ ಗಮನಿಸಿ, ಸಂಕಲಿಸಿದ ಅಂಕಿ-ಅಂಶಗಳ ಮೂಲಕ ಆಟದ ಗತಿ ಹಾಗು ಆಟಗಾರರ ಕೌಶಲ್ಯಗಳ ಬಗ್ಗೆ ವಿಶ್ಲೇಷಣೆ-ಅನೇಕ ಸಾರಿ ಪುನಃರಾವರ್ತನೆ ಎನಿಸಿದರೂ-ಮುಖ್ಯವಾದುವು.

ಯಾಕೆ ಅಂತ ವಿವರಿಸುವುದು ಅಗತ್ಯವಿದೆ. ಪ್ರಪಂಚದಾದ್ಯಂತ ಕ್ರೀಡಾ ಪ್ರೇಮಿಗಳ ಒಂದು ದೌರ್ಬಲ್ಯವೆಂದರೆ, ತಮ್ಮ ನೆಚ್ಚಿನ ಕ್ರೀಡೆಯಲ್ಲಿ ಒಬ್ಬ ಸೂಪರ್ ಸ್ಟಾರನ್ನು ನೆಚ್ಚುವುದು ಹಾಗು ಒಂದು ನೆಚ್ಚಿನ ತಂಡವನ್ನು ಆರಾಧಿಸುವುದು. ಈ ಆರಾಧನೆಯ ಪ್ರಚೋದನೆಯಲ್ಲಿ ಕೊಲೆ-ಸುಲಿಗೆ-ಹಿಂಸೆಗಳೇ ನಡೆದು ಹೋಗಿವೆ. ತಮ್ಮ ಆರಾಧ್ಯ ಆಟಗಾರರಿಗೆ ಸವಾಲಾದವರನ್ನು ಇರಿದು ಸ್ಪರ್ಧೆಯಿಂದ ಹೊರದೂಡಿ, ಜೈಲುವಾಸದಲ್ಲಿ ತಮ್ಮ ಆರಾಧ್ಯ ಆಟಗಾರರ ಉನ್ನತಿಯನ್ನು ಭ್ರಮಿಸುವ ಸಾಮಾನ್ಯ ಜನರೂ ಈ ಲೋಕದಲ್ಲಿದ್ದಾರೆ. ತಮ್ಮ ದೈಹಿಕ ಊನಗಳನ್ನೂ ಮೀರಿ, ಆಟದಲ್ಲಿ ಅಸಾಧಾರಣ ಫಲಿತಾಂಶ ತೋರಿದ ಸಾಮಾನ್ಯ ಮನುಷ್ಯರು, ತಮ್ಮ ಹೆಗ್ಗಳಿಕೆಯ ದಟ್ಟ ಛಾಯೆಯಲ್ಲಿ ಬೆಚ್ಚಿಬೀಳಿಸುವ ಕ್ರೌರ್ಯ ಎಸಗಿರುವ ಉದಾಹರಣೆಗಳೂ ಇವೆ. ಇಂತಾಗಿ, ಆರಾಧ್ಯ ಭಾವದಾಚೆ ಕ್ರೀಡಾ ಸಾಧನೆಗಳ ನೈಜ ಮಾಪನ ದೊರೆಯುವುದು, ಅನುರುಣಿಸುವ ಅಂಕಿ-ಅಂಶಗಳಲ್ಲಿ.

ಕ್ರಿಕೆಟ್‌ನಲ್ಲಿ ಡಾನ್ ಬ್ರಾಡ್‌ಮನ್‌ ಎಂಥ ದಂತಕತೆಯಾಗಿ ಚಾಲ್ತಿಯಲ್ಲಿದ್ದಾನೆ ಎಂದು ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತೇ ಇದೆ. ಆದರೆ, ನೈಜ ಆಟಾಂಗಣದಲ್ಲಿ ಬೆವರು ಸುರಿಸಿ, ತಮ್ಮ ತಂಡಕ್ಕೆ ಎಂಥೆಂಥ ಸನ್ನಿವೇಶಗಳಲ್ಲಿ ಹೇಗೇಗೆ ವಿಜಯ ತಂದುಕೊಟ್ಟವರ ಅಂಕಿ-ಸಂಖ್ಯೆಗಳ ವಿವರಗಳನ್ನು ಗಮನಿಸದಾಗ, ವೆಸ್ಟ್ ಇಂಡಿಸ್ಸಿನ ಗ್ಯಾರಿ ಸೋಬರ್ಸ್ ಎದಿರು ಬ್ರಾಡ್ಮನನ ಹೆಗ್ಗಳಿಕೆ ಹೇಗೆ ಸಾಧರಣಾ ಎನ್ನುವುದನ್ನು ಖ್ಯಾತ ಕ್ರಿಡಾ ಲೇಖಕ, ಸಮಾಜ ಶಾಸ್ತ್ರಜ್ಞ ಹಾಗು ಮಾನವ ಹಕ್ಕು ಹೋರಾಟಗಾರ ಸಿ.ಎಫ್.ಎಲ್.ಜೇಮ್ಸ್ ತನ್ನ ಬರಹಗಳ ಮೂಲಕ ಶೃತಪಡಿಸುತ್ತಾನೆ. ಹೌದು, ಪುನಃರಾವರ್ತಿತವಾಗುವ ಅಂಕಿ-ಅಂಶಗಳು ಬೋರು! ಆದರೆ ಅವುಗಳ ಮೂಲಕ ಮಾತ್ರವೇ ಸಾಮಾನ್ಯತೆಯಲ್ಲಿ ಘಟಿಸುವ ಅಸಾಧಾರಣತೆಯನ್ನೂ, ಆರಾಧಾನ ಪ್ರತಿಮೆಗಳ ಟೊಳ್ಳು ಪೂರ್ವಾಗ್ರಹಗಳನ್ನೂ ಒಡೆಯಲು ಸಾಧ್ಯವಾಗುವುದು.

ಅಂತಃಕರಣನಿಗೆ ಪ್ರತಿ ಕ್ರಿಡೆಯಲ್ಲೂ ತನ್ನದೇ ಆದ ನೆಚ್ಚಿನ ಆಟಗಾರರಿದ್ದಾರೆ; ಆದರೆ, ಅವರನ್ನು ವಿಜೃಂಭಿಸಿ, ಇತರೆ ಆಟಗಾರರ ಪ್ರತಿಭೆ ಕೌಶಲ್ಯಗಳನ್ನು ಅವಗಣಿಸುವುದು ಸರಿಯಲ್ಲ ಎಂಬ ಎಚ್ಚರವನ್ನು ಸ್ವತಃ ತನಗೂ ಹಾಗು ಓದುಗರಿಗೂ ಲೇಖಕ ಮನನ ಮಾಡಿಕೊಡುವುದು, ಆಟಗಾರರು ಆಡುವ ಪ್ರತಿ ಆಟದಲ್ಲಿ ಅವರು ತೋರಿದ ಕೌಶಲದ ವಿವರಗಳ ಮೂಲಕ. ಅಂತಃಕರಣನ ಕ್ರೀಡಾಲೋಕದಲ್ಲಿ, ಪ್ರತಿ ಹೊಸ ಸ್ಪರ್ಧೆಯೂ ಹೊಸ ಆರಂಭ; ಗತ ವೈಭವ ಇಲ್ಲಿ ನಗಣ್ಯ, ಇಂದಿನ ಸಾಧನೆ ಮುಂದಿಗೆ ಭರವಸೆ ಮಾತ್ರವೇ ಹೊರತು, ಇಂದಿನ ಲೋಪ ನಾಳೆ ಎಸಗುವ ಪ್ರಮಾದವೂ ಹೌದು ಎಂಬ ನಿರ್ಲಿಪ್ತೆಯಲ್ಲಿ ಲೇಖಕ ಪ್ರತಿ ಸ್ಪರ್ಧೆಯ ವಿವರಗಳನ್ನು ದಾಖಲಿಸುತ್ತಾನೆ.

ಹಾಗಾಗಿ ಇಲ್ಲಿ ಪ್ರತಿ ಆಟವೂ, ಪ್ರತಿ ಆಟಗಾರನೂ ಮನುಷ್ಯರಿಗೆ ಸಾಧ್ಯವಿರುವ ಅಗಾಧ ಚೈತನ್ಯಕ್ಕೆ ಪ್ರತೀಕ. ಅಂತಃಕರಣನ ಬರಹಗಳಲ್ಲಿ ಕ್ರೀಡೆ ಬರಿ ಕ್ರೀಡೆಯಾಗದೇ, ಸಾಧಾರಣವೆನಿಸುವ ಮನುಷ್ಯರಿಗೆ ಸಾಧ್ಯವಿರುವ ಚೈತನ್ಯ ಸೀಮೆಗಳ ಉಲ್ಲಘಂನೆಯ ಕುತೂಹಲಭರಿತ ಕಥನವೂ ಆಗುತ್ತದೆ. ಒಂದು ಉದಾಹರಣೆ ಕೊಡುವೆ: ಪ್ರಕಾಶ್ ಪಡುಕೊಣೆಯ ಕಾಲದಿಂದ ಷಟ್ಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳ ವರದಿಗಳನ್ನು ಬಿರುಬೀಸಾಗಿ ಗಮನಿಸುತ್ತಿದ್ದ ನಾನು, ಇತ್ತೀಚಿಗೆ ಪಿ.ವಿ.ಸಿಂಧು ಎಬ್ಬಿಸುತ್ತಿರುವ ಹವಾ ತಾಗಿ, ಅವಳ ಎರಡು ಮೂರು ಪದಕ ಪಂದ್ಯಗಳನ್ನು ಉಗುರು ಕಚ್ಚಿ ನೋಡಿದ ನನಗೆ, ಅವಳು ತನ್ನ ದೇಹ ಮಿತಿಯಾಚೆಯ ಚೇತನವನ್ನು ಉದ್ದೀಪಿಸುವ ಗ್ರೀಕ್ ದಂತಕತೆಯಂತೆ ಕಂಡಿದ್ದಳು.

(ನವ ಮಾಧ್ಯಮ ಯುಗದಲ್ಲಿ ದೈತ್ಯ ಪ್ರತಿಮೆಗಳು ಕಡೆದುಕೊಳ್ಳುವುದು ಹೀಗೇ ಅಲ್ಲವೇ!) ಅಂತಃಕರಣನ ಪ್ರಸ್ತುತ ಬರಹಗಳನ್ನು ಓದುತ್ತಿದ್ದಂತೆ, ಅವನು ವಸ್ತುನಿಷ್ಠವಾದ ವಿವರಗಳ ಮೂಲಕ ನನ್ನ ಮನಸ್ಸಿನಲ್ಲಿ ಉಬ್ಬುತ್ತಿದ್ದ ಸಿಂಧು ದೇವಿಯ ಬಲೂನನ್ನು ಒಡೆದುಬಿಟ್ಟ! ವಿಶಿಷ್ಠವೆಂದರೆ, ತನ್ಮಯತೆಯಿಂದ ಇಡೀ ಕ್ರೀಡಾ ಪ್ರಕಾರವನ್ನು ಗಮನಿಸುತ್ತಿರುವ ಲೇಖಕನಿಗೆ ಸಿಂಧುವಿನ ಶಕ್ತಿಯಷ್ಟೇ ಮಿತಿಗಳೂ ಸಹಜವೆಂಬಂತೆ ಗೊತ್ತು. ಸಿಂಧು ಸಾಗಬೇಕಾದ ದಾರಿ ದೂರವಿದೆ ಎನ್ನುವುದನ್ನು ಅಂತಃಕರಣ ಆಡಂಬರ, ಕಟುಕಿಗಳಿಲ್ಲದ ಸಹಜ ವಸ್ತು ವಿವರಗಳಿಂದ ತೋರಿಸಿಕೊಟ್ಟದ್ದನ್ನು ಓದುವಾಗ, ನಾನು ಆಟದ ಕುರಿತು ನನ್ನ ದೌರ್ಬಲ್ಯವೊಂದನ್ನು ಸಮಾಧಾನದಲ್ಲಿ ಬಿಟ್ಟುಕೊಟ್ಟೆ.

‘ಮೇಲ್ನೋಟಕ್ಕೆ’ ಇವು ಕ್ರೀಡಾಬರಹಗಳು ಎಂದೆ. ಇದಕ್ಕೆ ಕಾರಣವಿಷ್ಟೇ, ಕ್ರೀಡೆಗಳ ಬಗೆಗಿನ ಆಸ್ಥೆಯಿಂದ ನಾನು ಓದಿರುವ ಬಹುತೇಕ ಬರಹಗಾರರು (ಅದರಲ್ಲಿ ಕಪಿಲ್ ದೇವ್, ಸಂಗಕ್ಕಾರ ಕೂಡ ಸೇರಿದ್ದಾರೆ) ತಮ್ಮ ಆಟದ ಅಂಗಣದ ಅನುಭವಗಳ ದಟ್ಟ ವಿವರಗಳನ್ನು ನಿರೂಪಿಸುತ್ತಲೇ, ತಮ್ಮ ಸುತ್ತಲಿನ ಸಮಾಜದ ಗತಿ-ಸ್ಥಿತಿಯನ್ನೂ ವ್ಯಾಖ್ಯಾನಿಸುವುದನ್ನು ಕಂಡಿದ್ದೇನೆ. ಹಾಗಾಗಿ ಕ್ರೀಡೆಗಳ ಬಗ್ಗೆ ಮಾತನಾಡುತ್ತಲೆ, ನಿರೂಪಣೆಯ ಬಂಧದ ನಡುವೆ ಸಮಾಜದ ಕುರಿತ ತಮ್ಮ ನಿರೂಪಣೆಯನ್ನು ಹೇಳದೆಯೂ ಕಾಣಿಸುವ ಬರಹಗಳ ಶೈಲಿಗೆ ನಾನು ಮಾರು ಹೋಗಿದ್ದೇನೆ. ಅಂತಃಕರಣನ ಬರಹಗಳ ನಿರೂಪಣೆಯ ಸಹಜ ಸರಳತೆಯಲ್ಲಿ ಅಂತಹ ಕೆಲವು ಹೇಳದೆಯೂ ತಾಗುವ ಹೊಳಹುಗಳನ್ನು ನಾನು ಅನುಭವಿಸಿದ್ದೇನೆ.

ಲೇಖಕನಿಗೆ ಕ್ರೀಡೆಗಳು, ಅವುಗಳು ಸ್ಪರ್ಧೆಗಳಾಗಿ ರೂಪ ಪಡೆಯುತ್ತಿರುವ ಬಗೆ, ಅದರಲ್ಲಿ ಭಾಗಿಯಾಗುತ್ತಿರುವ ನೂರಾರು ಆಟಗಾರರ ಹುಮ್ಮಸ್ಸು ಹಾಗು ಕಲಾ ಕೌಶಲಗಳ ಕುರಿತು ತುಂಬು ಕೌತುಕವಿದೆ. ಲೇಖಕನ ಬರಹಗಳಲ್ಲಿ ಖ್ಯಾತನಾಮರೂ ಹಾಗು ಅವರ ಸಹ ಆಟಗಾರರೂ ಸಮಾನ ಸಾಧ್ಯತೆಯುಳ್ಳವರು ಎಂಬ ಅವ್ಯಕ್ತ ನಂಬಿಕೆ ಇದೆ. ಹಾಗಾಗಿ, ಮುಖ್ಯ ಆಟಗಾರರ ಸಾಧನೆಗಳನ್ನು ಮೆಚ್ಚುತ್ತಲೇ, ಅವರ ಜೊತೆ ಆಡುತ್ತಿರುವ ಹಲವು ಸಹ ಆಟಗಾರರ ಕೌಶಲ್ಯಗಳ ಝಲಕುಗಳನ್ನೂ ಎತ್ತಿ ಹೇಳುವುದೂ ಅಷ್ಟೇ ಮುಖ್ಯವೆನಿಸುತ್ತದೆ. ಫುಟ್ಬಾಲ್ ನಂತಹ ಸಮೂಹ ಹೊಂದಾಣಿಕೆಯ ಕ್ರೀಡೆಯ ಬಗ್ಗೆ ಬರೆಯುವಾಗ ಅಂತಃಕರಣ, ಆಟದ ಪ್ರತಿ ಪ್ರಮುಖ ಅಂಗಗಳ ಜವಬ್ದಾರಿ ಹೊತ್ತ ಆಟಗಾರರನ್ನೂ ತರತಮವಿಲ್ಲದೆ ಅವರ ಸೂಕ್ಷ್ಮ ಕಲೆಗಾರಿಕೆಗಳನ್ನು ಗಮನಿಸುತ್ತಾನೆ.

ಆಕ್ರಮಣ ವಲಯದ ಆಟಗಾರರು ತಾವು ಗಳಿಸುವ ಗೋಲುಗಳ ಸಂಖ್ಯೆಯಿಂದ ಖ್ಯಾತರಾದಷ್ಟು, ರಕ್ಷಣೆಯ ಆಟಗಾರರು ತಾವು ತಮ್ಮ ಕಲೆಯಿಂದ ರಕ್ಷಿಸಿದ ಗೋಲುಗಳನ್ನು ಅಳೆಯಲಾಗದು ಎನ್ನುವ ಅರಿವಿನಲ್ಲಿ, ರಕ್ಷಣೆಯ ಆಟಗಾರರ ಬಗ್ಗೆ ಪ್ರೀತಿಯಿಂದ ಬರೆಯುತ್ತಾನೆ. ತನ್ನ ತಂಡದ ಇತರ ಆಟಗಾರರು ಮಾಡಿದ ತಪ್ಪಿನಿಂದಾಗಿ ಗೋಲು ಬಿಟ್ಟ ಗೋಲ್ ಕೀಪರ್‌ಗಳ ಬಗ್ಗೆ ಅಂತಃಕರಣನ ಹೃದಯ ಸದಾ ಜಾಗೃತ; ಅವರು ರಕ್ಷಿಸಿದ ಗೋಲುಗಳು ಹಾಗು ಬಿಟ್ಟ ಗೋಲುಗಳ ಸವಿವರಗಳ ಮೂಲಕ, ಲೇಖಕ, ಸಾಧಾರಣವಾಗಿ ಅವಗಣನೆಗೆ ತುತ್ತಾದ ಆಟಗಾರರ ಬಗ್ಗೆ ವಿಶೇಷ ಆಸಕ್ತಿಯಿಂದ ಬರೆಯುವುದು ಹೃದ್ಯವಾಗಿದೆ.

ಅಂತಃಕರಣನ ಬರಹಗಳ ಬಂಧದಲ್ಲಿ, ಕ್ರೀಡೆ ಒಂದು ಗಣರಾಜ್ಯ (ರಿಪಬ್ಲಿಕ್). ಇಲ್ಲಿ ಪ್ರತಿ ಆಟಗಾರನೂ, ಪ್ರತಿ ಆಟದ ವಿಭಾಗವೂ ಸಮಾನ. ಸಿಕ್ಕ ಸೌಲಭ್ಯಗಳನ್ನು ಬಳಸಿ ಸಾಧಿಸಿದವರ ಬಗ್ಗೆ ಲೇಖಕನಿಗೆ ಮೆಚ್ಚುಗೆ ಇರುವಷ್ಟೇ, ಸಾಧಾರಣ ಸಾಧನೆ ಮಾಡುತ್ತಿರುವವರು ತೋರಿಸುವ ಕ್ರೀಡಾ ಕೌಶಲ್ಯಗಳನ್ನು ಸೂಕ್ಷ್ಮದಲ್ಲಿ ಗಮನಿಸುವ ಸಂವೇದನೆ ಇದೆ; ಪೂರಕ ವಾತಾವರಣ ಹಾಗು ಅವಶ್ಯಕ ಸಂಪನ್ಮೂಲ ಬೆಂಬಲ ದೊರತರೆ, ಎಲ್ಲಾ ಆಟಗಾರರೂ ಸಮಾನವಾಗಿ ತಮ್ಮ ಚೈತನ್ಯವನ್ನು ಹಿಗ್ಗಿಸಿಕೊಂಡು ಸಾಧನೆಯ ಸೀಮೆಗೆ ನೆಗೆಯುವ ಸಾಮರ್ಥ್ಯ ಉಳ್ಳವರು ಎಂಬ ದೃಢ ನಂಬಿಕೆ ಇದೆ.

ಅಂತಃಕರಣನಿಗೆ ಕ್ರೀಡಾಲೋಕ ಪರಸ್ಪರ ಸಹಯೋಗ ಮನೋಭಾವದಲ್ಲಿ ಮನುಷ್ಯ ಮಿತಿಗಳನ್ನು ಹಿಗ್ಗಿಸಿಕೊಳ್ಳಬಲ್ಲ ಸಹಜ ಸಮುದಾಯದಂತೆ ಕಾಣುತ್ತದೆ. ಅಂತಃಕರಣ ತನ್ನ ಬರಹಗಳ ಮೂಲಕ ತನ್ನ ಕನಸಿನ ರಿಪಬ್ಲಿಕನ್ನು ನಿರೂಪಿಸುತ್ತಿದ್ದಾನೆ. ಈ ಕಾಲದಲ್ಲಿ ಅದಕ್ಕಿಂತ ಉತ್ತಮವಾದುದನ್ನು ನಾನು ನಿರೀಕ್ಷಿಸುವುದಿಲ್ಲ.

Leave a Reply