ಮುರುಳಿ ಕಾಟಿ ಎಂಬ ತಂತು..

 

 

 

 

 

 

 

 

ಜಿ ಎನ್ ಮೋಹನ್ 

‘ನೀ ಯಾರೋ ಏನೋ ಎಂತೋ ಅಂತು ಪೋಣಿಸಿತು ಕಾಣದಾ ತಂತು..’ ಎಂಬ ಕವಿತೆಯ  ಸಾಲುಗಳನ್ನು ನಿಜ ಮಾಡಬೇಕು ಎಂದೇ ಸಿಕ್ಕರೇನೋ ಅನ್ನಿಸುವಷ್ಟು ಮುರುಳಿ ನನಗೆ ಹತ್ತಿರ.

ಆನೇಕಲ್ ಬಳಿಯ ಕಾಟಿಯವರಾದ ಮುರುಳಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಕಾಲೇಜಿನ ಗೇಟು ದಾಟುವ ವೇಳೆಗೆ ‘ಈಟಿವಿಗೆ ಬನ್ನಿ’ ಎಂದು ಕರೆದೆ. ಆದರೆ ಆತ ದೃಢ ದನಿಯಲ್ಲಿ ‘ನೋ’ ಅಂದದ್ದು ಕೇಳಿ ದಂಗಾದೆ. ಕಾರಣ ಕೇಳಿದಾಗ ಆತ ಸ್ಪಷ್ಟವಾಗಿ ಹೇಳಿದ- ‘ನನ್ನ ಕೆಲಸ ಇರುವುದು ಮಾಧ್ಯಮ ಎಟುಕಿಸಿಕೊಳ್ಳಲು ಸಾಧ್ಯವಾಗದವರ ನಡುವೆ. ಸಾರಿ ಸರ್’.

ವಯಸ್ಸಿಗೆ ಉತ್ಸಾಹ ಜೊತೆಯಾಗಿದೆ ಎಂದುಕೊಂಡು ಸುಮ್ಮನಾದೆ. ನನ್ನ ಪತ್ರಿಕೋದ್ಯಮದ ಪಯಣದಲ್ಲಿ ಮುರುಳಿ ಬಂದು ಸೇರಿಕೊಳ್ಳುವ ದಿನ ದೂರವೇನಿಲ್ಲ ಎನ್ನುವುದು ನನ್ನ ನಂಬಿಕೆಯಾಗಿತ್ತು. ಮುರುಳಿ ಮುಲಾಜಿಲ್ಲದೆ ಆ ಮಾತನ್ನು ಸುಳ್ಳಾಗಿಸಿದರು.

‘ಸಂವಾದ’ ಸಂಸ್ಥೆಯಲ್ಲಿ ಮಾಧ್ಯಮ ಕೋರ್ಸ್ ಗಳನ್ನು ಶುರು ಮಾಡಿ ‘ಬೀದಿಯಲ್ಲಿ, ಗಲ್ಲಿಯಲ್ಲಿ, ಬೇಲಿ ಮೆಳೆಯ ಮರೆಯಲ್ಲಿ..’ ಇದ್ದ ಹುಡುಗ ಹುಡುಗಿಯರನ್ನು ಆರಿಸಿ ತಂದರು. ಯಾರದೋ ಮನೆಯ ಪಾತ್ರೆ ತೊಳೆಯುತ್ತಿದ್ದ ಕೈಗಳು, ಇನ್ನಾರೋ ಮನೆಯಲ್ಲಿ ದೌರ್ಜನ್ಯಕ್ಕೀಡಾದವರು, ಗಂಡನ ಹಿಂಸೆ ತಾಳದೆ ಒಂಟಿಯಾದವರು. ಕೂಲಿ ಜೀತ ಮಾಡುತ್ತಿದ್ದವರು, ಕೊಲೆ ಸುಲಿಗೆಗಳನ್ನು ಕಣ್ಣಾರೆ ಕಂಡವರು.. ಹೀಗೆ ಎಷ್ಟೋ ಜನ ಕರ್ನಾಟಕದ ಮೂಲೆ ಮೂಲೆಯಿಂದ ಇವರ ಕೈಹಿಡಿದು ‘ಸಂವಾದ’ದ ಅಂಗಳಕ್ಕೆ ನಡೆದುಬಂದರು.

ಅವರಿಗೆ ಪತ್ರಿಕೋದ್ಯಮದ ‘ಅ ಆ ಇ ಈ’ ಹೇಳಿಕೊಡಲು ನಾನು ಅವರ ಮುಂದೆ ನಿಂತಾಗ ಅವರ ಕಣ್ಣುಗಳನ್ನು ನಿಟ್ಟಿಸಿದೆ. ಅಲ್ಲಿ ಸುಸ್ತಿತ್ತು, ಭಯ ಅಸಹಾಯಕತೆ ಇತ್ತು. ಆದರೆ ತಿಂಗಳುಗಳು ಉರುಳಿದಂತೆ ಅವರು ಮುರುಳಿ ಕಾಟಿಯವರ ಗರಡಿಯಲ್ಲಿ ನೂರೆಂಟು ಕಲಿತರು. ತಿಂಗಳುಗಳು ಮುಗಿದು ಅವರಿಗೆ ಕೋರ್ಸ್ ಸರ್ಟಿಫಿಕೇಟ್ ನೀಡುವಾಗ ಮತ್ತೆ ಅದೇ ಕಣ್ಣುಗಳನ್ನು ನಿಟ್ಟಿಸಿದೆ. ಅಲ್ಲಿ ಬೆಳಕು ಇತ್ತು. ನಿಲೆ ಹಾಕಿಕೊಂಡು ಪ್ರಶ್ನಿಸುವ ಕೆಚ್ಚು ಇತ್ತು. ಮಾಧ್ಯಮ ಸಂಸ್ಥೆಗಳ ಹಿಂದಿನ ಮನಸ್ಸುಗಳನ್ನು ಅವರು ಪಟಪಟನೆ ನನ್ನೊಂದಿಗಿನ ಚರ್ಚೆಯಲ್ಲಿ ಬಯಲಿಗಿಡುವಾಗ ನಾನು ಬೆರಗಾಗಿ ಹೋಗಿದ್ದೆ.

ಒಂದು ಪವಾಡ ನಡೆದುಹೋಯಿತು. ಒಬ್ಬ ಮುರುಳಿ ಇಂದಿನ ಮಾಧ್ಯಮದ ನ್ಯೂಸ್ ರೂಮ್ ಸೇರದೆ ಹತ್ತಾರು ಜನರನ್ನು ನ್ಯೂಸ್ ರೂಮ್  ಪ್ರವೇಶಿಸುವಂತೆ ಮಾಡಿದರು. ಇವತ್ತು ಯಾವುದೇ ಚಾನಲ್, ಪತ್ರಿಕೆ, ಡಿಜಿಟಲ್ ಮ್ಯಾಗ್ ಗಳನ್ನೇ ನೋಡಿ- ಅಲ್ಲಿ ಮುರುಳಿಯವರ ಕೂಸುಗಳಿದ್ದಾರೆ. ಜಾತಿ ಇಲ್ಲದ, ಧರ್ಮ ಇಲ್ಲದ, ಆದರೆ ತಮ್ಮ ನೋವು ಹತಾಶೆಗಳನ್ನು ಸಮಾಜಕ್ಕೆ ಬಣ್ಣಿಸಿ ಹೇಳಲು ಕಾತರವಾಗಿರುವ, ಅಂತಹದೇ ನೋವು ಉಂಡವರ ಕಥೆಗಳನ್ನು ಹೇಳಲು ಉತ್ಸಾಹಿಗಳಾಗಿರುವ ದಂಡು ನ್ಯೂಸ್ ರೂಮ್ ಪ್ರವೇಶಿಸುತ್ತಿದೆ ಎಂದರೆ ಇಷ್ಟಪಡದಿರುವುದು ಹೇಗೆ?

ಡಾ ರಾಜಕುಮಾರ್ ತೊಡೆಯೇರಿ ಕುಳಿತುಕೊಳ್ಳುವ ಭಾಗ್ಯ ಅದೆಷ್ಟು ಜನಕ್ಕಿದೆಯೋ ಗೊತ್ತಿಲ್ಲ. ಆದರೆ ಕಂಠೀರವ ಸ್ಟುಡಿಯೋದಲ್ಲಿ ಪುಟ್ಟ ಬಾಲಕ ಮುರುಳಿಯನ್ನು ನೋಡಿದವರೇ ಡಾ ರಾಜ್ ಅವರನ್ನು ತೊಡೆ ಮೇಲೆ ಕೂರಿಸಿಕೊಂಡು ಮುದ್ದು ಮಾಡಿದರು. ಮುರುಳಿ ಅವರ ತಂದೆ ಆ ಕಾಲಕ್ಕೆ ಕನ್ನಡ ಚಳವಳಿ ಹಾಗೂ ಸಾಹಿತ್ಯ ಲೋಕದಲ್ಲಿ ಇದ್ದವರು. ಪ್ರತೀ ದಿನ ಮನೆಯಲ್ಲಾಡುತ್ತಿದ್ದ ಮಗ್ಗದ ಸದ್ದೇ ಲಾಲಿಯಾಗಿ ಬೆಳೆದ ಮುರುಳಿ ಇವತ್ತು ಸಮಾಜದ ನೋವಿನ ಶ್ರುತಿ ಗುರುತಿಸಿದ್ದಾರೆ. ಹಾಗಾಗಿಯೇ ಜನರ ಜೊತೆಗಿದ್ದು, ಅವರನ್ನು ಜನಮಾನಸದ ಚಿಂತನೆಯ ಭಾಗವಾಗಿಸುವ ಕೆಲಸದಲ್ಲಿದ್ದಾರೆ.

ಜಾತಿಯನ್ನು ತನ್ನ ಹತ್ತಿರಕ್ಕೂ ಸುಳಿಯಲು ಬಿಡದ ಮುರುಳಿ ಮದುವೆ ಆಗಿದ್ದು ಮಮತಾರನ್ನು. ಇವರನ್ನಲ್ಲದೆ ಪ್ರೀತಿಸಿದ್ದು ಕ್ಯಾಮೆರಾವನ್ನು. ಕ್ಯಾಮೆರಾ ಮುರುಳಿಯವರ ಮತ್ತೊಂದು ಕಣ್ಣು. ಅದಕ್ಕೂ ಹೊಸ ಕಥೆಗಳನ್ನೇ ಹೇಳುವ ಉತ್ಸಾಹ

ಇದೆಲ್ಲಾ ಯಾಕೆ ಹೇಳಿದೆ ಎಂದರೆ ಈಗ ಮುರುಳಿ ಮತ್ತೊಂದು ಸಾಹಸಕ್ಕೆ ಸಜ್ಜಾಗಿದ್ದಾರೆ. ಇಂಟರ್ನೆಟ್ ಕೈಗೆಟುಕುವ ಎಲ್ಲರೂ ಪತ್ರಿಕೋದ್ಯಮಿಗಳಾಗಬೇಕು ಎನ್ನುವುದು ಅವರ ಕನಸು. ಈ ಕೋರ್ಸ್ ಮಾಡಿದವರೆಲ್ಲರೂ ಪತ್ರಕರ್ತರಾಗುತ್ತಾರಾ? ಗೊತ್ತಿಲ್ಲ. ಆಗದೆ ಹೋದರು ಮಾಧ್ಯಮದ ಒಳಸುಳಿ ಗೊತ್ತುಮಾಡಿಕೊಂಡ ಕಾರಣ ಅದರ ವಿಮರ್ಶಕರಾಗುತ್ತಾರಲ್ಲಾ ಅದಕ್ಕಿಂತ ಹೆಚ್ಚೇನು ಬೇಕು? ಮಾಧ್ಯಮ ಸಂಸ್ಥೆಗಳಿಗೆ ಮೂಗುದಾರ ಹಾಕಬೇಕಾದರೆ ‘ಮಾಧ್ಯಮ ಸಾಕ್ಷರತೆ’ ಹೆಚ್ಚಿಸುವುದರಿಂದ ಮಾತ್ರವೇ ಸಾಧ್ಯ.

ನಾವು ಯೋಚಿಸಲಾಗದ್ದನ್ನು, ಯೋಚಿಸಿದರೂ ಮಾಡಲಾಗದ್ದನ್ನು ಮಾಡಲು ತುದಿಗಾಲಲ್ಲಿರುವ ಮುರುಳಿ ಕಾಟಿಗೆ ‘ಆಲ್ ದಿ ಬೆಸ್ಟ್’ ಹೇಳುತ್ತಾ ನೀವೆಲ್ಲರೂ ಮುರುಳಿ ಕಾಟಿಗೆ ಜೊತೆಯಾಗಿ ಎಂದು ಕೋರುತ್ತೇನೆ.

ಮುರುಳಿ ಕಾಟಿ:  9241244340 / anekalkati@gmail.com

2 comments

Leave a Reply