ಮುರಿದ ಟೊಂಗೆಯ ಚಿಗುರು..!

 

 

 

 

ಮೌನೇಶ ಕನಸುಗಾರ

 

 

 

 

ಬಾಳೊಂದು ನೌಕಾಯಾನ
ಆಳ ಹರಿವಿನ ಭಯವೇಕೆ?
ಸಾಗು ನಡೆ ಮುಂದೆ..!

ಎಂದು ಸಾಗುವ ಕವಿತೆಗಳ ಪಯಣ ಸಾಮಾಜಿಕ ಕಳಕಳಿಯ ಕನಸು ಕಂಡ ಲೇಖಕ ಉತ್ತಮ ಸಂದೇಶ ಕನಸಲ್ಲಿ ಬಿತ್ತರಿಸಿ ಎಚ್ಚರವಾಗಿಸಿದ್ದಾರೆ..!

ಯೋಧನಾಗುವ ಹಂಬಲದಲ್ಲಿ ಉಸಿರು ನಿಂತಾಗ ಎದೆಯ ಮೇಲೆ ತ್ರಿವರ್ಣವಿರಲೆಂದು ಬಯಸಿದ್ದಾನೆ ಲೇಖಕ.

ಅಭಿವೃದ್ಧಿಯತ್ತ ಮುಖ ಮಾಡಿದ ವಾಸ್ತವಿಕ ಬದುಕಿನಲ್ಲಿ ಎಲ್ಲವನ್ನು ಮಾರಾಟ ಮಾಡುತ್ತಾ ಎಲ್ಲವನ್ನು ಕಳೆದುಕೊಳ್ಳುವ ಸಮಾಜಕ್ಕೆ ಸಂದೇಶವನ್ನು ನೀಡಿದ್ದಾರೆ.

‘ಕೊರವರ ಮರಿಯಪ್ಪ’ ಶೀರ್ಷಿಕೆಯಡಿಯಲಿ ಅರಳಿದ ಕವಿತೆ ಊರ ತಳವಾರನನ್ನು ನೆನಪಿಸುವಂತಿದೆ .ಊರ ಧಣಿಗಾಗಿ ದಣಿಯುವ ಅವರನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ್ದಾರೆ.

 

ಕರ್ನಾಟಕದ ಸೊಬಗನ್ನು ಕವಿ
” ಕುವೆಂಪು ಬೇಂದ್ರೆ
ಕಾರಂತ ಅಡಿಗರಿಂದ
ನಿತ್ಯೋತ್ಸವ ನಿಸಾರರ ವರೆಗೆ
ಭಾವ ತುಂಬಿದೊಡಲಿದು”
ಎಂದು ಬಣ್ಣಿಸಿದ್ದಾರೆ.

ಅವ್ವನ ಬಗ್ಗೆ ಲೇಖಕ
“ಆಡಂಬರ ವ್ಯಾಮೋಹಗಳಿಲ್ಲದೆ ಕರಿಮಣೆಯಲ್ಲೆ ಬದುಕಿದ ಬಂಗಾರ ಆಕೆ” ಎಂದು ಭಾವುಕರಾಗಿ ಬರೆದಿದ್ದಾರೆ.

ಕವಿ ಪರಿಸರ – ಪ್ರಾಣಿ ಸಂಕುಲ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಾ ನಳಿಕೆ ಶಬ್ಧಕ್ಕೆ ನಲುಗುವ ಜೀವವನ್ನು ನೆನೆಯುತ್ತಾ ಅಪ್ಪನೆಡೆಗೆ ಹೆಜ್ಜೆ ಹಾಕುತ್ತಾರೆ.
” ಉಂಗುಷ್ಟ ಕಿತ್ತಿದ ಚಪ್ಪಲಿಗೆ ಮೊಳೆಯೊಡೆಯುತ್ತಿದ್ದರೂ
ಮಕ್ಕಳ ಕಾಲಿಗೆ ಹೊಸ ಚಪ್ಪಲಿ ತರುವನೆಂದು” ಅಪ್ಪ ಮಗನೆಡಗಿನ ನಾಜೂಕಾದ ಕಾಳಜಿ ವಿವರಿಸಿದ್ದಾರೆ.

ಸಾಹಿತ್ಯ ಚಿಗುರಿಸುವ ಕವಿ
ಮುರಿದ ಟೊಂಗೆಯ ಚಿಗುರಿನ ಟೊಂಗೆಯ ಸಾಹಿತ್ಯ ಹೀಗೆ ಸೆರೆ ಹಿಡಿಯಲೆತ್ನಿಸಿದ್ದಾರೆ.

” ಅದೇನೊ ಛಲ
ಇದೆ ಇನ್ನೂ ಆಸೆ, ನಿಲ್ಲದ ಕನಸು
ಮುರಿದು ಬಿದ್ದ ಟೊಂಗೆಯಲ್ಲಿ ಮತ್ತೆ ಉಸಿರು..!
ಹಿಡಿಯಾಗಿ ಸ್ವಾರ್ಥಕ
ಕಾಣುವ ತವಕದ ತುಡಿತ ಕವಿಯ ಆಶಯ..!

ಹಸಿವಿನ ಬಗ್ಗೆ ಕವಿಯ ಭಾವ ನಿಜಕ್ಕೂ ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ‌.
‘ ಸಂಗ್ರಹಿಸುವ ಏಕೈಕ ಪ್ರಾಣಿ ಇವನಾದರೂ
ಹಸಿವಿನಿಂದ ಸತ್ತಿದ್ದು ಇವನೊಬ್ಬನೆ..! ‘
ಎಂಬ ಸಾಲುಗಳು ಮನ ಮುಟ್ಟುವಂತವು..!

ಶಶಿ ಕಂಡವರಿಗೊಂದು ರೂಪದಲ್ಲಿರುವನು ಎಂಬುವುದಕ್ಕೆ ಸೂಗೂರೇಶ್ ಅವರ ಚಂದ್ರ ಕವಿತೆಯೆ ಪುರಾವೆ..!
‘ ಬೇಂದ್ರೆ ಅಜ್ಜನಿಗೊಮ್ಮೆ
ಹಗಲು ಮುಗಿಲಾಗ ತೇಲಿ
ಬಂದ ಹೆಣವಾದರೆ ‘

ಕುವೆಂಪು ಅವರು
‘ಪೂರ್ಣ ಚಂದ್ರ ತೇಜಸ್ವಿ ಅವರಲ್ಲಿ ಕಂಡರು’

ಹಳ್ಳಿಯ ಜೀವನದತ್ತ ವಾಲುವ ಕವಿತೆಯಲಿ ” ಹಾಲು ಮಾರುವ ಮುದುಕಿ ” ಯ ಒದ್ದಾಟ ಕಣ್ಣಿಗೆ ಕಟ್ಟುವಂತದ್ದು.

” ಕವಿತೆ ಮತ್ತು ಪ್ರೀತಿ” ಯಲಿ
” ಕವಿ ಬರೆದ ಎಷ್ಟೊ ಕವನಗಳು
ಯಾರೊಬ್ಬರು ಓದದೆ ಕೊಳೆಯುತಿವೆ ..! ” ಎಂದು ಉದ್ಗರಿಸುವ ಕವಿ..
-ಮದಿರೆಗೆ ದ್ರಾಕ್ಷಿ ಕೊಳೆತಷ್ಟೆ ರುಚಿಯುಂಟು ಓದುವಾಗ ಅಮಲೇರಿಸುವುದು ಖಚಿತವಾಗಿಸಿದ್ದಾರೆ.

ಮಳೆಯನ್ನು ಆಹ್ವಾನಿಸುವ ಕವಿಯ ಸಾಲುಗಳು ಬರಗಾಲದ ಭೀಕರತೆಗೆ ಒದ್ದಾಡಿದಂತಿದೆ.

” ಬರಿಮೈಲಿದ್ದೂ ಕೋಟಿನೊಳಗೆ ಬೆವರು
ತರಿಸಿದ್ದಕ್ಕೆ ಗಾಂಧಿ ನನಗಿಷ್ಟ”

” ಎಲುಬಿನ ಗೂಡಿನೊಳಗೂ
‘ಗುಂಡಿ’ಗೆ ಜಾಗವೊಂದಿಷ್ಟು ಕೊಟ್ಟ
ಗಾಂಧಿ ನಂಗಿಷ್ಟ ” ಎಂಬುದು ಗಾಂಧಿ ಕುರಿತ ಕಳಕಳಿಯ ಸಾಲುಗಳು.
” ನಿಸ್ವಾರ್ಥವೊಂದೆ ಆತ್ಮ
ಸಂತೋಷಕೆ
ತಿಳಿದುಬಿಡು
ತಾಯಿಯಂತೆ ಎಲ್ಲವ
ಪ್ರೀತಿಸಿ ಬಿಡು..!” ಎಂಬ ‘ ಫಕೀರ ‘ ತಲೆ ಬರಹದ ಸಾಲುಗಳು ಆಧ್ಯಾತ್ಮದತ್ತ ಕೊಂಡೊಯ್ಯುತ್ತಿರುವಂತೆ ಭಾಸ..!

ಹಂಪೆಯ ಪಾಳು ಬಿದ್ದ ಪಳಿಯುಳಿಕೆ ಹಾಗೂ ತನ್ನ ಮನ ಒಂದೆ ನಾಣ್ಯದ ಎರಡು ಮುಖಗಳು ಎಂಬಂತೆ ಬಣ್ಣಿಸಿದ್ದಾರೆ..!
ಮನಸುಗಳು ಬದಲಾಗದಿರುವಾಗ ಏನೆಂದು ಬರೆಯಲಿ ಎಂದು ನೊಂದು ನುಡಿದಿದ್ದಾರೆ.

ಚಿಗುರು

ಇದ್ದಷ್ಟು ಸಿಕ್ಕಷ್ಟು ಮತ್ತಷ್ಟು

ಒಲವಷ್ಟೆ ಬೇಡು
ಆಳಕ್ಕೆ ಮೊಗೆದಷ್ಟು ಮೇಲಕ್ಕೆ
ಹೋದಷ್ಟು
ಬರಿ ಒಲವನ್ನೆ ನೀಡು.
ಎಂಬ ಸಾಲುಗಳು ಒಲವ ವಿನಿಮಯ ಕುರಿತು ಎಷ್ಟು ಶುದ್ಧ ಮತ್ತು ಗಾಢವಾಗಿರಬೇಕೆಂದು ಬಣ್ಣಿಸಿದ್ದಾರೆ.

” ನಿಟ್ಟುಸಿರಿನಲೂ ತುಟಿಯಂಚಿನಲೊಂದು
ಮುಗುಳುನಗೆಯಿರಲಿ ” ಎಂದು ಗೆಳತಿಗೆ ನಗುವಿನ ಪಾಠ ಹೇಳಿದ್ದಾರೆ..!
ಶಿಕ್ಷಕನ ಕೈಗೆ ಮೆತ್ತಿದ ಚಾಕ್ ಪೀಸಿನ ಧೂಳು ರೈತನ ಕೈಗಂಟಿದ ಕೆಸರು ಒಂದೆ ಎಂಬುವುದು ಕವಿಯ ಭಾವವಾಗಿದೆ.

” ಅವರೇನು ಬಲ್ಲರು ” ಎಂಬ ಕವಿತೆಯಲ್ಲಿ
” ಮಡಿ ಮೈಲಿಗೆ ಎಂದರು
ಜನ್ಮಕೊಟ್ಟ ತಾಯಿಯನ್ನು
‘ ಮುಟ್ಟು ‘ ವುದಕ್ಕೆ ನಿರ್ಬಂಧಿಸಿದರು.. !
ಎಂದು ಭಾವ ಬಿಚ್ಚಿಡುತ್ತಾ ಜಾದುಗಾರನಾಗುವ ಕವಿ
” ಗಾಳಿಯೂ ಭಾವಗಳ ಹೊತ್ತು
ನಿನ್ನ ಸ್ಪರ್ಶಿಸುವಂತೆ ಮಾಡಬಲ್ಲೇ..! ” ಎನ್ನುತ್ತಾ ಸೂಗೂರೇಶ ಹಿರೇಮಠ ತಮ್ಮ ಕವನ ಸಂಕಲನಕ್ಕೆ ವಿರಾಮವಿಟ್ಟು ಮುಂದಿನ ದಿನಗಳಲಿ ಮತ್ತೊಂದು ಹೊತ್ತಿಗೆಗೆ ನಿರೀಕ್ಷೆ ಮೂಡಿಸುವ ಜಾದುಗಾರರಾಗಿ ಮನಸಲ್ಲಿ ಉಳಿದುಕೊಂಡಿದ್ದಾರೆ..!

1 Response

  1. suresh says:

    ಮುರಿದ ಟೊಂಗೆಯ ಚಿಗುರು ಪುಸ್ತಕದ ಕುರಿತು
    ಮೌನೇಶ್ ಕನಸುಗಾರರ ಪುಸ್ತಕಾವಲೋಕನ ತುಂಬಾ ಆಪ್ತವಾಗಿ ಮೂಡಿಬಂದಿದೆ

Leave a Reply

%d bloggers like this: