ಅವಳು ಉಳಿಸಿಹೋದ ಹಾಡೇ ಪ್ರತಿಧ್ವನಿಸುತ್ತಿತ್ತು..

ಸಂದೀಪ್ ಈಶಾನ್ಯ

 

ಹೊಳೆದಂಡೆಯ ನೆನಪುಗಳು

ಇಷ್ಟು ದಿನಗಳು ಮಳೆಯಿಲ್ಲದೇ ಒಣಗಿದ್ದ ಆ ಊರಿನ ಹೊಳೆಯೊಂದು ನೀರಿನ ಪಸೆಯಂಬುದನ್ನು ಕಂಡು ದಶಕಗಳೇ ಕಳೆದಿದ್ದವು. ಅವನು ಆ ಕಡೆಗೆ ಗುಡಿಸಲು ಕಟ್ಟಿಕೊಂಡು ಮಗ್ಗುಲಲ್ಲಿ ಗುಲಾಬಿ ಗಿಡವೊಂದನ್ನು ಬೆಳೆಸಲು ಬೊಗಸೆ ನೀರಿಗಾಗಿ ಕಿಲೋ ಮೀಟರುಗಟ್ಟಲೆ ನಡೆಯುತ್ತಿದ್ದನು.

ಈ ಬದಿಗೆ ಅದೇ ಪ್ರಾಯದ ಹುಡುಗಿಯೊಬ್ಬಳು ಅಷ್ಟೇ ಸಣ್ಣ ಗುಡಿಸಲೊಂದರಲ್ಲಿ ಬೇಕೆಂದಾಗ ಹಾಡುತ್ತ ಸಾಕು ಎನಿಸಿದಾಗ ಮುಸಿಮುಸಿ ಅಳುತ್ತಾ ಕೂತಿರುತ್ತಿದ್ದಳು. ನಡುವಿನ ಹೊಳೆ ಬತ್ತಿದೆ. ಅವರಿಬ್ಬರೂ ಬೇಕಾದರೆ ಹೊಳೆಯನ್ನು ಬರಿಗಾಲಿನಲ್ಲೇ ದಾಟಿ ನಡೆದು ಒಬ್ಬರನೊಬ್ಬರು ಕಾಣಬಹುದಿತ್ತು. ಈವರೆಗೂ ಅವಳ ಹಾಡನಷ್ಟೇ ಅವನು ಕೇಳಿದ್ದು. ಬೊಗಸೆ ನೀರಿನಿಂದ ಚಿಗುರಲು ಹವಣಿಸುತ್ತಿದ್ದ ಗುಲಾಬಿಯ ಗಿಡವನ್ನಷ್ಟೇ ಇವಳೂ ಕಂಡಿದ್ದು.

 

ಪ್ರತಿದಿನವೂ ಹಾಡುವ ಅವಳನ್ನು ನೋಡಲು ನಾಳೆ ಹೋಗೋಣ ಎಂದು ಇವನು ಪ್ರತಿಸಾರಿಯೂ ಅಂದುಕೊಂಡರೆ. ಹೂ ಚಿಗುರಿಸಲು ಹೆಣಗಾಡುವ ಭೂಪ ಅವನೇ ಬರಲಿ ಎಂದು ಇವಳು ತನ್ನ ಪಾಡಿಗೆ ತಾನು ಹಾಡುತ್ತಿದ್ದಳು. ಹೀಗೆ ವರ್ಷಗಳೇ ಕಳೆದವು. ಒಂದು ಸರೀ ರಾತ್ರಿಯಲ್ಲಿ ಗುಲಾಬಿಮೊಗ್ಗು ಒಂದಿಷ್ಟು ರಂಗು ಕಂಡಿತ್ತು. ಅವಳು ಅದೇ ರಾತ್ರಿ ತಪಸ್ಸಿನಂತೆ ತನಗೆ ಈವರೆಗೂ ವರ್ಜ್ಯವಾಗದ ರಾಗವೊಂದನ್ನು ಹಾಡಲು ಶುರುವಿಟ್ಟುಕೊಂಡಳು.

ಬೆಳಿಗ್ಗೆಗಾಗಿ ಇಬ್ಬರೂ ಕಾಯುತ್ತಿದ್ದರು ಒಬ್ಬರನೊಬ್ಬರು ನೋಡಲು ಇಬ್ಬರಿಗೂ ಬಯಕೆಯಾಗಿತ್ತು. ಒಡಲೊಳಗೆ ಹಸಿವಿತ್ತು.  ಕುತೂಹಲವೂ ಇತ್ತು. ಪ್ರತಿಕ್ಷಣವೂ ಈಗ ಯುಗದಂತೆ ಇಬ್ಬರಿಗೂ. ಅದೇ ರಾತ್ರಿ ಧೋ ಎಂದು ಜೋರು ಮಳೆ. ಗುಡಿಸಲು ಸೋರಲು ಆರಂಭವಾದರೇ ಇಬ್ಬರಿಗೂ ನಡುವಿದ್ದ ಬತ್ತಿದ ಹೊಳೆ ತುಂಬಿ ಹರಿಯಲು ಶುರುವಿಟ್ಟುಕೊಂಡಿತು.

ಬೆಳಿಗ್ಗೆ. ಇಬ್ಬರೂ ನಿಧಾನವಾಗಿ ಗುಡಿಸಲಿನಿಂದ ಹೊರಗೆ ಬಂದರು. ನಡುವೆ ಹೊಳೆ ತುಂಬಿ ಹರಿಯುತ್ತಿತ್ತು. ಆ ಬದಿಯಲ್ಲಿ ಮಳೆಗೆ ಗುಲಾಬಿಮೊಗ್ಗು ನೆನೆದು ಬಾಗಿತ್ತು. ಚಳಿಗೆ ಇವಳಿಗೆ ಹಾಡಲು ಗಂಟಲು ಕಟ್ಟಿದೆ‌.

ನೀನು ಯಾಕೆ ಯಾವಾಗಲೂ ನೋವಿನ ಹಾಡನ್ನೇ ಹಾಡೋದು. ಅವನು ಆ ಬದಿಯಿಂದ ಕೇಳಿದ.

ನೀನು ಇದೇ ಗುಲಾಬಿಯನ್ನು ಬೆಳೆಸಲೇಬೇಕು ಅಂತ ಹಠಕೆ ಬಿದ್ದು ಯಾಕೆ ಈ ಬರಗಾಲದಲ್ಲೂ ಪರದಾಡುವುದು. ಅವಳು ಈ ಬದಿಯಿಂದ ಕೇಳಿದಳು.

ನನ್ನವಳು ಬಿಟ್ಟು ನಡೆಯುವಾಗ ಕೊಟ್ಟಿದ್ದು ಇದೊಂದೆ. ಅದಕ್ಕೆ ಇದನ್ನೇ ಬೆಳೆಸುತ್ತ, ಒಳಗೇ ಮಾಗುತ್ತ ಅಜ್ಞಾತನಾಗಿ ಇಲ್ಲಿದ್ದೇನೆ.

ನಾನೂ ಅಷ್ಟೇ. ಬರೀ ಮಾತುಗಾರ್ತಿ. ಅವನು ನನ್ನ ಬಿಟ್ಟು ನಡೆಯುವಾಗ ಬರೀ ಹಾಡನ್ನಷ್ಟೇ ನೀಡಿಹೋದ ಅದಕ್ಕೆ ಮಾತು ಮರೆತು ಬರೀ ಹಾಡನ್ನಷ್ಟೇ ಹಾಡುತ್ತಿದ್ದೇನೆ.‌ಇವಳು ಉತ್ತರವೆಂಬಂತೆ ಹೇಳಿದಳು. ಹೊಳೆ ಈಗ ಜೋರಾಗಿ ಸದ್ದು ಮಾಡುತ್ತ ಹರಿಯಲು ಆರಂಭವಾಯ್ತು.

ನೋಡು ಇಬ್ಬರೂ ಹುಚ್ಚರೇ. ನೋವುಗಳನ್ನೇ ಪೋಷಿಸುತ್ತ ಬದುಕುತ್ತಿದ್ದೇವೆ. ನಡುವೆ ಸೇತುವೆ ಕಟ್ಟೋಣ. ಬದುಕಿನಲ್ಲಿ ಹೊಸತು ಕಾಣಬಹುದು. ಅವಳು ಅವನಿಗೆ ಕೂಗಿ ಹೇಳಿದಳು.

 

ಅಗತ್ಯವಿಲ್ಲ. ನಾನು ಈ ಅರಳದ ಗುಲಾಬಿಯೊಂದಿಗೆ ಸುಖವಾಗಿದ್ದೇನೆ. ಇದು ಅರಳಿದ ದಿನ ನಾನು ಮತ್ತೊಂದು ಜಾಗಕ್ಕೆ ಹೊರಡುತ್ತೇನೆ. ಮತ್ತೊಂದು ಪ್ರೇಮದ ಅನಿವಾರ್ಯತೆ ನನಗಿಲ್ಲ.

ಹುಚ್ಚ. ನೋವಲ್ಲೇ ಬದುಕುವುದರಲ್ಲಿ ಏನಿದೆ. ನಟಿಸು. ಸಂತೋಷವಾಗಿದ್ದೇನೆ ಎಂದು ಜಗತ್ತಿಗೆ ನೀನು ತೋರಿಸಿಕೋ‌. ಆಗ ಒಪ್ಪಿಗೆಯಾಗುತ್ತಿಯಾ. ಹೊರಗೆ ಇಲ್ಲಿ ಎಲ್ಲರೂ ನಟರೆ. ಒಳಗೇ ದುಃಖ ಇದ್ದದ್ದೆ. ಮುಸಿಮುಸಿ ಒಬ್ಬನೇ ಅತ್ತರೇ ನೀನು ಹೇಡಿ ಜನರ ಕಣ್ಣಿಗೆ. ನಗು. ಮತ್ತೊಬ್ಬರಿಗಾದರೂ ನಗು. ನಟಿಸು. ಅವಳು ಕಿರುಚಿದಳು.

ಹೊಳೆ ಬತ್ತುವವರೆಗೆ ಸಮಯ ಕೊಡು. ಆದರೂ ನಾನು ಬರುತ್ತೇನೆಂದು ನಂಬಿ ಕಾಯದಿರು. ಗುಲಾಬಿ ಅರಳುವುದಷ್ಟೇ ಮುಖ್ಯ ನನಗೆ. ಅದು ನನ್ನವಳು ನೀಡಿದ್ದು. ಅದೇ ಮುಖ್ಯ. ಅವನು ಹೇಳಿ ಗುಡಿಸಲು ಹೊಕ್ಕಿದ. ಇವಳು ಗುಡಿಸಲಿಗೆ ಬಂದು ಅವನು ಬಿಟ್ಟು ಹೋದ ನೋವಿನ ಹಾಡುಗಳನ್ನೇ ಹಾಡಲು ಶುರುವಿಟ್ಟುಕೊಂಡಳು.

ದಿನ. ವಾರ. ತಿಂಗಳು ವರ್ಷಗಳೇ ಕಳೆದವು. ಇಬ್ಬರೂ ಹೊರಗೆ ಬರಲೇ ಇಲ್ಲ. ಒಬ್ಬರನೊಬ್ಬರು ಕಾಣಲೂ ಇಲ್ಲಾ. ಬರಗಾಲ. ಹೊಳೆ ಮತ್ತೆ ಬತ್ತಿತು.

ಅವನಿಗೆ ಗುಲಾಬಿ ಅರಳುವುದಿಲ್ಲ ಎನಿಸಿತು. ಇವಳಿಗೆ ನೋವಿನ ಹಾಡುಗಳ ಲಯ ಮರೆತು ರೇಜಿಗೆ ಎನಿಸಿದವು. ನಾಳೆಯಿಂದ ಹಾಡುವುದು ಬೇಡ ಎಂದಕೊಂಡಳು. ಕಿಲೋಮೀಟರುಗಟ್ಟಲೇ ನಡೆದೆ ಬೊಗಸೆ ನೀರು ತರುವುದು ಬೇಸರ ಎನಿಸಿತು. ನಡುವಿದ್ದ ಹೊಳೆಗೆ ಸೇತುವೆ ಕಟ್ಟಿ. ಇಬ್ಬರೂ ಜತೆಯಾಗಿಬಿಡಬೇಕು ಎಂದುಕೊಂಡರು ಇಬ್ಬರು.

ನಾಳೆಗಾಗಿ ಕಾಯುತ್ತ ಬಿಗಿಉಸಿರು ಹಿಡಿದು ಕಾದರು. ಈಗ ಬೆಳಿಗ್ಗೆ. ಅವನು ಅವಳಿಗಿಂತ ಮೊದಲೇ ಹೊರಬಂದ. ಗುಲಾಬಿ ಅರಳಿ ನಿಂತಿತ್ತು. ನೆನಪುಗಳು ಕಾಡಿದವು. ಅಗತ್ಯಕ್ಕೆ ಅನುಗುಣವಾದ ಸೇತುವೆಯ ಅಗತ್ಯವಿಲ್ಲ ಎನಿಸಿತು. ಅವನು ಸದ್ದಿಲ್ಲದೇ ಒಳಗೆ ನಡೆದುಬಿಟ್ಟ.

 

ಈಗ ಇವಳ ಸರದಿ. ಅವನನ್ನು ಕೂಗಲು ದನಿಯೆತ್ತಿದಳು. ದನಿಕಳಚಿ ಅವಳ ಇಷ್ಟದ ಹುಡುಗ ಕಲಿಸಿಕೊಟ್ಟಿದ್ದ ಹಳೆಯ ಆಲಾಪಾವೊಂದು ಹೊರ ಹಾರಿತು. ಮಾತಿನ ಅಗತ್ಯವಿಲ್ಲ ಹಾಡಿನ ಎದುರು ಎಂದು ಅವಳು ಗುಡಿಸಲಿಗೆ ಬಂದಳು.

ಇವಳಿಗೆ ಹೇಳುವುದೇ ಬೇಡ‌. ಗುಡಿಲಿನಲ್ಲಿ ಒಬ್ಬನೇ ಕೂತು ಅರಳಬೇಕಿರುವುದು ನಾನು. ಹೂವಲ್ಲ  ಎಂದು ಇವನು ಕಂಡುಕೊಂಡ. ಅದೇ ರಾತ್ರಿ ಹೊಸ ಊರಿನತ್ತ ಹಳೆ ನೆನಪುಗಳ ಹೊತ್ತು ನಡೆದ.

ಹಾಡನ್ನು ಒಬ್ಬಳೇ ಹಾಡುವುದರಲ್ಲಿ ಏನು ಪ್ರಯೋಜನ. ಅದನ್ನು ಹಂಚೋಣ. ಇವನಿಗೆ ಹೇಳುವುದು ಬೇಡ ಇವಳೂ ಎಂದುಕೊಂಡಳು. ಒಬ್ಬಳೇ ಅದೇ ರಾತ್ರಿ ಹಾಡುಗಳನ್ನಹ ಹಂಚುತ್ತ ನಡೆದುಬಿಟ್ಟಳು.

ಮತ್ತೇ ಅದೇ ರಾತ್ರಿ ಧೋ ಎಂದು ಮಳೆ.
ಹೊಳೆ ತುಂಬಿತು. ಆ ಬದಿಯಲ್ಲಿ ಗುಲಾಬಿ ಅರಳಿತು. ಇಲ್ಲಿ ಅವಳು ಉಳಿಸಿಹೋದ ಹಾಡಿನ ತುಣುಕುಗಳ ಪ್ರತಿಧ್ವನಿ ಕೇಳುತ್ತಿತ್ತು.

ಇಬ್ಬರ ಪ್ರೀತಿಯೂ ನೆನಪುಗಳಾದವು.
ಇಬ್ಬರ ನೆನಪುಗಳು ಈಗ ನಿರಾಳವಾದವು.

4 comments

Leave a Reply