‘ಸಾವಿಲ್ಲದ ಮನೆಯ ಸಾಸಿವೆ’ಗಾಗಿ ತಡಕಾಡುತ್ತಿದ್ದೇವೆ..

ಸೌಮ್ಯಾ ಕೆ ಆರ್ ಅವರ ಕವನ ಸಂಕಲನ ಬಯಲಿಗೂ ಗೋಡೆಗಳು ಕೃತಿ ಬಿಡುಗಡೆಯಾಗುತ್ತಿದೆ.

ದಿನಾಂಕ: 31-01-2018
ಸಮಯ: ಸಂಜೆ 5 ಗಂಟೆ
ಸ್ಥಳ : ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು.

ಈ ಕೃತಿಗೆ ಲೇಖಕಿ ಬರೆದ ಮಾತು ನಿಮ್ಮ ಮುಂದೆ-

ಸಮಕಾಲೀನ ಭಾರತದ ಸಾಮಾನ್ಯ ಮನುಷ್ಯನ ಬದುಕು ತಲ್ಲಣಗಳಿಂದಲೇ ಬೇಯುತ್ತಿದೆ.

ಅದರಲ್ಲೂ ರಾಜಕೀಯ ಮತ್ತು ಧಾರ್ಮಿಕ ಬಿಕ್ಕಟ್ಟುಗಳು ನಮ್ಮ ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಾತಾವರಣವನ್ನು ಹತ್ತಿಕ್ಕುತ್ತಲೇ ಇವೆ. ಬಾಳ್ವೆಯ ಬಗ್ಗೆ ಇರಬೇಕಾದ ಕೌತುಕ, ಸಹಜ ಗ್ರಹಿಕೆ, ಎಲ್ಲರನ್ನೂ ಸಹನೆಯಿಂದ ಕಾಣುವ ಒಳನೋಟ, ಸೌಹಾರ್ದ ನಡೆ, ಮಾನವೀಯ ನಂಬಿಕೆಗಳು ಈ ಎಲ್ಲವುಗಳನ್ನೂ ಶವಪೆಟ್ಟಿಗೆಯಲ್ಲಿಟ್ಟು ಮೊಳೆ ಹೊಡೆದು ತಾರ್ಕಿಕವಾಗಿ ಯಾವುದನ್ನೂ ಎದುರುಗೊಳ್ಳಲಾಗದೆ ಸಂವೇದನೆಯ ಮೌಲ್ಯಗಳ ನಾಡಿಗಳನ್ನು ನಾಶಗೊಳಿಸಿಕೊಂಡಿರುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ.

ಧರ್ಮದ ಕಾರಣಕ್ಕೊ, ರಾಜಕೀಯ ಕಾರಣಕ್ಕೊ, ಜಾತಿಯ ಕಾರಣಕ್ಕೊ ದ್ವೇಷವನ್ನು ಮತ್ತಷ್ಟು ಕೆರಳಿಸುತ್ತಿದ್ದೇವೆಯೇ ಹೊರತು ಪ್ರಜ್ಞೆಯೊಂದಿಗೆ ಜೀವಿಸುತ್ತ ಅರಳುತ್ತಿಲ್ಲ ಅನಿಸುತ್ತಿದೆ.

ಮಾಧ್ಯಮಗಳು ಕೂಡ ತಮ್ಮ ವಯಕ್ತಿಕ ಅಭಿಪ್ರಾಯಗಳ ಮೇಲೇಯೇ ನಡೆಯುತ್ತಿವೆಯೇ ಹೊರತು, ಪ್ರಜಾಪ್ರಭುತ್ವದ ಆಶಯಗಳ ಮೇಲೆ ನಂಬಿಕೆ ಇಡದೆ ತಮ್ಮಿಚ್ಚೆಯಂತೆ ವರ್ತಿಸುತ್ತಿವೆ. ನಾವೆಲ್ಲರೂ ಉಸಿರಾಡುವ ಶವಗಳಾಗಿ ‘ಸಾವಿಲ್ಲದ ಮನೆಯಲ್ಲಿ ಸಾಸಿವೆ’ಗಾಗಿ ತಡಕಾಡುತ್ತಿದ್ದೇವೆ.

ಶತ ಶತಮಾನಗಳಿಂದಲೂ ಇಲ್ಲಿನ ಕೊಳೆಯನ್ನು ಗುಡಿಸುವ ಕಾಯಕದಲ್ಲಿ ಅದೆಷ್ಟೋ ಮಂದಿ ಸೂಫಿಗಳು, ಸಂತರು, ಶರಣರು, ದಾಸರು, ಚಳುವಳಿಗಾರರು, ಕ್ರಾಂತಿಕಾರಿಗಳು ತಮ್ಮನ್ನು ತೊಡಗಿಸಿಕೊಂಡು ಗತಿಸಿಹೋದವರಿದ್ದರೂ ಅವರಾರು ನಮಗೆ ಮಾದರಿಯಾಗುತ್ತಲೇ ಇಲ್ಲ.

ಅವರೆಲ್ಲರನ್ನು ನಮ್ಮ ಮಾತುಗಳಲ್ಲಿ ಉಲ್ಲೇಖಿಸುವುದಕ್ಕೆ, ನಮ್ಮ ಜ್ಞಾನವನ್ನು ಪ್ರದರ್ಶಿಸಿಕೊಳ್ಳುವುದಕ್ಕೆ ಮಾತ್ರ ನೆನೆಯುತ್ತೇವೆ. ನಾವು ಅಕ್ಷರವಂತರಾದೆವಷ್ಟೇ; ಜ್ಞಾನವಂತರಾಗಿ ಅರಿವಿನೊಂದಿಗೆ ಇರದೆ ಅಧಿಕಾರದ ದಾಹ, ಮೋಸ ವಂಚನೆ, ಸುಳ್ಳುಗಳನ್ನು ಪೋಷಿಸಿಕೊಂಡು ನಡೆಯುತ್ತಿದ್ದೇವೇಯೇ ಹೊರತು ಸತ್ಯವನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಿಲ್ಲ.

ಮಕ್ಕಳನ್ನು, ಮಹಿಳೆಯರನ್ನು, ಬಡವರನ್ನು, ನಿರ್ಗತಿಕರನ್ನು ದುರ್ಬಲಗೊಳಿಸುತ್ತ ಪ್ರತಿ ಕ್ಷಣವು ಬದಲಾಗುತ್ತಿರುವ ಕ್ರೂರ ವ್ಯವಸ್ಥೆಯನ್ನು ಕಾಡುವುದಿದೆಯಲ್ಲ; ಅದು ನನಗೆ ನನ್ನ ಖಾಸಗಿ ಬದಕೂ ಕಾಡುವುದಿಲ್ಲ. ಹೀಗೆ ಹಲವಾರು ಸಂಗತಿಗಳು ಕಾಡಿದಾಗಲೆಲ್ಲ ನನಗೆ ನಾನು ಸಂತೈಸಿಕೊಳ್ಳಲು ಬರೆದು ಕೊಂಡಿದ್ದೇ ಈ ನನ್ನ ಎರಡನೇಯ ಕೃತಿ “ಬಯಲಿಗೂ ಗೋಡೆಗಳು”. ‘ಬೆಂಕಿಯಲ್ಲೂ ಬಾಡದ ಹೂವು’ ಎಂಬ ನನ್ನ ಮೊದಲ ಕೃತಿಯನ್ನು ನೀವೆಲ್ಲರು ಸ್ವೀಕರಿಸಿ ಪ್ರೋತ್ಸಾಹಿಸಿದ್ದರಿಂದಲೇ ಎರಡನೇ ಕೃತಿಯನ್ನು ಹೊರತರಲು ಧೈರ್ಯವಾಗಿದ್ದು.

ನಾನು ಒಂದು ವಿಷಯವನ್ನು ಸ್ಪಷ್ಟ ಪಡಿಸುತ್ತೇನೆ. ನನ್ನ ಯಾವುದೇ ಕವನ ಸಂಕಲನ ಕೃತಿಯನ್ನು ಕಾವ್ಯ ಮೀಮಾಂಸೆಯ ಚೌಕಟ್ಟಿಗೋ, ಕಾವ್ಯಗುಣದ ಪರಿಮಿತಿಗೋ ಒಳಪಡಿಸುವ ಅಗತ್ಯವಿಲ್ಲ. ಕಾವ್ಯವೆಂದರೆ ಸಮುದಾಯದ ದನಿಯಾಗಬೇಕು, ಮಾತಾಗಬೇಕು ಎಂದು ನಂಬಿಕೊಂಡಿದ್ದೇನೆ.

ಹಾಡಿಕೊಂಡರೆ ಹಾಡಾಗಬಹುದು; ಆಡಿದರೆ ಮಾತೂ ಆಗಬಹುದು ಅಲ್ಲದೆ ಈ ಕೃತಿಯಲ್ಲಿ ಕೆಲವು ಪದ್ಯಗಳು ಅಪೂರ್ಣವೆನಿಸಬಹುದು. ಉದ್ದೇಶಪೂರ್ವಕವಾಗಿಯೇ ಪೂರ್ಣಗೊಳಿಸಿಲ್ಲ, ಏಕೆಂದರೆ ಓದಿದವರಿಗೆ ಇನ್ನೂ ಮುಂದುವರೆಸಬಹುದಿತ್ತಲ್ಲವೇ ಎನಿಸಿ ತಮಗೆ ಅನಿಸಿದ್ದನ್ನು ತಾವು ಯೋಚಿಸಿಕೊಳ್ಳಲೆಂದೇ ಪೂರ್ಣಗೊಳಿಸಲಿಲ್ಲ.

Leave a Reply