“ಕಚ್ಚುವುದು ಅದರ ಕರ್ಮ, ಕಾಪಾಡುವುದು ನನ್ನ ಧರ್ಮ”

 

 

 

 

ಕುಸುಮಬಾಲೆ ಅಯರಹಳ್ಳಿ

 

 

 

ಆ ಕಥೆ ಕೇಳಿದಾಗಿಂದ ನಾನು ಯೋಚಿಸುತ್ತಲೇ ಇದ್ದೆ.
ಹ್ಞಾಂ, ಆ ಪುಟಾಣಿ ಕಥೆ ನಿಮಗೂ ಹೇಳುವೆ.  ಸಂನ್ಯಾಸಿಯೊಬ್ಬರು ನದಿಯಲ್ಲಿ ಸ್ನಾನಕ್ಕಿಳಿದಿದ್ದರು. ಗಮನಿಸಿದರು. ಚೇಳೊಂದು ನೀರೊಳಗಿಂದ ದಡಕೆ ಸೇರಲು ಯತ್ನಿಸುತ್ತಿತ್ತು. ಸೋತು ನೀರಿಗೆ ಬೀಳುತ್ತಾ ಒದ್ದಾಡುತ್ತಿತ್ತು ಸಂನ್ಯಾಸಿ ಅದನೆತ್ತಿ ದಡಕೆ ಬಿಡಲು ಹೋದರು. ಎತ್ತಿಕೊಂಡ ಕೂಡಲೇ ಕಚ್ಚಿತದು. ಕೈ ಜಾಡಿಸಿದರು. ಅದು ಮತ್ತೆ ನೀರಿಗೆ ಬಿತ್ತು. ಮತ್ತೆ ಅದರ ದಡ ಸೇರುವ ಒದ್ದಾಟ ಶುರುವಾಯಿತು. ಸಂನ್ಯಾಸಿ ಮತ್ತೆ ಅದನು ಹಿಡಿದು ದಡಸೇರಿಸಲು ಹೋದರು.

ಅದು ಮತ್ತೆ ಕಚ್ಚಿ ಕೈ ಜಾಡಿಸಿದರು…ಹೀಗೇ ಅವರು ಚೇಳು ಹಿಡಿದೆತ್ತುವುದು.. ಕಚ್ಚುವುದು.. ಕೈ ಒದರಿ ಚೇಳು ಬೀಳುವುದು.. ಒದ್ದಾಡುವುದು.. ಇವರು ಮತ್ತೆ ಅದನೆತ್ತಲು ಹೋಗುವುದು.. ಅದು ಕಚ್ಚುವುದು.. ಶಿಷ್ಯ ನೋಡಿದ. ಕೇಳಿದ; ಇದೇನು ಗುರುಗಳೇ, ಆ ಚೇಳು ಕಚ್ಚುತ್ತಲೇ ಇದೆ. ನೀವು ಅದನು ಬಚಾವ್ ಕಾಪಾಡಲು ಯತ್ನಿಸುತ್ತಲೇ ಇದ್ದೀರಿ? ಗುರು ಹಸನ್ಮುಖದಿಂದ ಹೇಳಿದರು. #”ಕಚ್ಚುವುದು ಅದರ ಕರ್ಮ, ಕಾಪಾಡುವುದು ನನ್ನ ಧರ್ಮ”# .

ರವೀಂದ್ರನಾಥ ಶಾನಭಾಗರು ಯಾರದೋ ನೋವಿಗಾಗಿ ತನ್ನೆಲ್ಲವನೂ ಕೊಟ್ಟುಕೊಂಡು ಮಿಡಿಯುತ್ತಿದ್ದರೂ.. ಅಂತಹ ಕೆಲಸದಲ್ಲೂ ಉಣ್ಣಬಹುದಾದ ನೋವು, ಬೇಸರಗಳ ಬಗ್ಗೆ ಹೇಳುತ್ತಾ.. ಇದೆಲ್ಲ ನನಗ್ಯಾಕೆ ಅಂತ ಯಾಕನಿಸಿಲ್ಲ? ಎಂಬುದಕೆ ಉದಾಹರಣೆಯಾಗಿ ಈ ಕಥೆ ಹೇಳಿದರು.

ನಾನು ಈ ಕಥೆ ಬಗ್ಗೆ ಯೋಚಿಸುತ್ತಲೇ ಇದ್ದೆ. ಇದನ್ನು ಹೇಗಾದರೂ ನೂರಕ್ಕೆ ನೂರು ಅಳವಡಿಸಿಕೊಳ್ಳಲೇಬೇಕು ಅನ್ನುವ ಸಂಕಲ್ಪ ದಿನಕ್ಕೊಮ್ಮೆ ಮಾಡುತ್ತಿದ್ದೇನೆ. ಅದು ಬಿಡಿ, ಕಹ್ಞಾಂನಿ ಮೇ ಟ್ವಿಸ್ಟ್ ಅದಲ್ಲ, ದಿನ ರಾತ್ರೆ ಯಾವುದಾದರೂ ಕಥೆ ಕೇಳಿಯೇ ಮಲಗುವ ಮಗನಿಗೆ, ನಿನ್ನೆ ರಾತ್ರಿ ಈ ಕಥೆ ಹೇಳಿದೆ. ಕಥೆ ಮುಗಿದ ಮೇಲೆ ಮಾಮೂಲಿನ ಹಾಗೆ ಈ ಕಥೆಯಲಿ ನಿಂಗೇನು ಗೊತ್ತಾಯಿತು ಕೇಳಿದೆ. ಅವನು morel of the story ಹೇಳದೇ.. ಚಕ್ಕನೆ ಏನೋ ಹೊಳೆದಂತೆ ಕಣ್ಣರಳಿಸಿ..”ಅಮ್ಮಾ.. ಆ ಸಂನ್ಯಾಸಿ ಚೇಳನ್ನ ಕೈಲ್ಯಾಕೆ ಮುಟ್ಟಬೇಕಿತ್ತು? ನದೀಲೋ ದಡದಲೋ ಒಂದು ಕಡ್ಡಿ ಇದ್ದರೆ ಅದರಲಿ ಎತ್ತಿಹಾಕಿದ್ರೆ ಆಗ್ತಿತ್ತು ಅಲ್ವಾ?” ನಾನೂ ಹೌದಲ್ಲಾ? ಅಂತ ಕ್ಷಣ ಯೋಚಿಸಿದೆ.

ಕಥೆ ಬರೆದವರಿಗೆ ಇದು ಹೊಳೆಯಲಿಲ್ಲವೇ? ಅರೆ! ಕಥೆ ಸೃಷ್ಟಿಸಿರುವುದು ನೀತಿ ಹೇಳಲಿಕ್ಕಾದ್ದರಿಂದ ಕೈ ಬಳಕೆ ಅನಿವಾರ್ಯ. ಅಲ್ಲಿ ಕಡ್ಡಿ ಇರಲಿಲ್ಲ ಅದೂ ಇದೂ ಅಂತೇನೋ ಕಥೆಗೆ ಕಥೆ ಸೇರಿಸಿ ಮಲಗಿಸಿದ್ದು ಬೇರೆ. ಆದರೆ ಈಗಿನ ಮಕ್ಕಳು ಅದೆಷ್ಟು ಪ್ರಾಕ್ಟಿಕಲ್ ಅನಿಸಿತು. ಅವರಿಗೆ ಸೋಶಿಯಲ್ ಸ್ಟಡೀಸಿಗಿಂತ ಮ್ಯಾತ್ಸು ಪ್ರಿಯ ನೋಡಿ. ಇಷ್ಟು ಸಣ್ಣ ವಿಷಯ..ಅಷ್ಟೇ ತಾನೇ? ಅಂತ ಕಡ್ಡಿಮುರಿದುಬಿಡುತ್ತವೆ. ಬುದ್ದಿ- ಭಾವದ ಸಂಘರ್ಷ ಅನ್ನುವುದಕೆಲ್ಲ ಅವಕಾಶವೇ ಇಲ್ಲ. ಇಷ್ಟಾಗಿಯೂ ಈ ಕಥೆಯ ನೀತಿ ಯಾವ ಜನರೇಷನ್ನಿಗೂ ಬೇಕೇ ಬೇಕು.

ಎಲ್ಲ ಕಾಲದಲೂ ಎಲ್ಲ ರೀತಿಯ ಮನುಷ್ಯರೂ ಇರುತ್ತಾರೆ. ಹಾಗಾಗಿ #”ಕಚ್ಚುವುದು ಅದರ ಕರ್ಮ, ಕಾಪಾಡುವುದು ನನ್ನ ಧರ್ಮ”# . ಅನ್ನುವ ಈ ಕಥೆಯನು ದೊಡ್ಡವನಾದಾಗ ಮತ್ತೆ ಹೇಳುವೆ. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಬೇಕು ಮಗೂ ಅದು ಅಹಿಂಸೆ ಅಂತ ನಾನಂದರೆ.. ಅದು ಅಹಿಂಸೆಯಲ್ಲ.. ಹೇಡಿತನ ಅನ್ನುತ್ತದೆ ಅವನ ಜನರೇಷನ್. ಈಗ ಹೊಸ ಜನರೇಷನಿಗಾಗಿ ಹೊಸ ನೀತಿಕಥೆಗಳ ಬರೆಯಬೇಕಾಗಿದೆಯಾ? ಚೇಳಿಗೇ ಒಳ್ಳೆಬುದ್ದಿ ಬಂದಂತೆ.. ಹೊಡೆಯುವ ಕೈಯೇ ಹಿಂದೆ ಸರಿವಂತೆ..ಹ್ಞಾಂ.. ಹಾಗೆ ಕಥೆ ಹೇಳಬಹುದು. ಆದರೆ ನಿಜದಲ್ಲಿ ಚೇಳು ಚೇಳೇ ತಾನೇ? ಬದಲಾದರೆ ಅದು ಇನ್ನೇನೋ ಆಗುತ್ತದೆ. ಮತ್ತೆ? ಕಥೆ ಹೇಳುವುದು.

ಇವತ್ತಿನ ಕಥೆಯ ಬೀಜ ನಾಳೆ ಒಳ್ಳೆ ಫಲ ಕೊಡುವ ನಂಬಿಕೆಯಲಿ ಕಾಯುವುದು. ಸಂನ್ಯಾಸಿ ಕಡ್ಡಿಯಲಿ ಎಸೆಯಬಹುದಿತ್ತು ಅನ್ನೋ ಲಾಜಿಕ್ ಹುಡುಕಲಿ, ಬುದ್ದಿಮುಂದಾಗಿ ಯೋಚಿಸಲಿ ಎಷ್ಟು ಬೇಕಾದರೂ…ಆದರೆ ಆ ಸಂನ್ಯಾಸಿ ಆ ಚೇಳನ್ನು ಒಂದೇ ಏಟಿಗೆ ಕೊಂದುಬಿಡಬೇಕಿತ್ತು ಅನ್ನುವ ಯೋಚನೆಯೊಂದು ಬರದಿದ್ದರೆ ಸಾಕು. ಕಥೆಯ ಬೀಜದ ಫಲಕಿನ್ನೇನು ಬೇಕು?

2 comments

  1. ಕುಸುಮಾ , ಆ ಕಥೆಯ ಸನ್ಯಾಸಿಯ ಉತ್ತರ ಹೀಗಿತ್ತೆಂದು ಓದಿದ ನೆನಪಿದೆ ” ಕುಟುಕುವುದು ಚೇಳಿನ ಧರ್ಮ , ಕಾಪಾಡುವುದು ಮನುಷ್ಯನ ಧರ್ಮ. ಆ ಪ್ರಾಣಿಮಾತ್ರದ ಜೀವ ತನ್ನ ಧರ್ಮ ಬಿಡಲಾರದೆ ಪಾಲಿಸುವಾಗ ವಿವೇಕವುಳ್ಳ ಮನುಷ್ಯ ತನ್ನ ಧರ್ಮ ಬಿಡಬಹುದೇ ”

    ಯಾರು ತನ್ನನ್ನು ಮುಟ್ಟಿದರೂ ರಕ್ಷಣೆಗಾಗಿಯೆ ತನಗೆ ಪ್ರಕೃತಿ ಇತ್ತಿರುವ ಕೊಂಡಿಯೆತ್ತಿ ಕುಟುಕುವುದು ಚೇಳಿನ ಸ್ವಭಾವಧರ್ಮವೆ ಆಗಿರುತ್ತದೆ. ಅದಕ್ಕೆ ಇದು ಕಾಯುವ ಕೈ ,ಮತ್ತೊಂದು ಕೊಲ್ಲುವ ಕೈ ಎಂಬ ತಾರತಮ್ಯವಿವೇಕ ಇರುವುದಿಲ್ಲ. ಸಾರಾಸಾರ ವಿವೇಕ ಇರುವ ಮನುಷ್ಯರಿಗಾದರೊ ಆಪತ್ತಿಗೊಳಗಾದ ಯಾವ ಜೀವವನ್ನಾಗಲಿ ರಕ್ಷಿಸುವುದು ಸ್ವಭಾವ ಧರ್ಮ. ಸನ್ಯಾಸಿಗಂತೂ ಅದು ಕಡ್ಡಾಯ ಧರ್ಮ. ಹೀಗೆ ಅವರವರ ಸ್ವಭಾವಧರ್ಮಗಳ ಪಾಲನೆಯ ವಿವೇಕಕ್ಕೆ
    ಈ ಕತೆ ಒಂದು ದೃಷ್ಟಾಂತ.

    ಚೇಳೂ ಸೇರಿದಂತೆ ಪ್ರಾಣಿಮಾತ್ರದವು ಅವುಗಳ ಸ್ವಭಾವಧರ್ಮ ಪಾಲನೆಯಲ್ಲಿ ವ್ಯತ್ಯಯ ಮಾಡಿಕೊಂಡದ್ದು ನಮಗಾರಿಗೂ ಈ ವರೆಗೆ ತಿಳಿದಿಲ್ಲ. ಆದರೆ ಈ ಕಥೆಯ ಸನ್ಯಾಸಿಯ ಹಾಗೆ ಮಾನವ ಧರ್ಮ ಪಾಲಿಸುವ ಮನುಷ್ಯ ದೃಷ್ಟಾಂತಗಳು ಅಪರೂಪದಲ್ಲಿ ಅಪರೂಪ.

    ಅದಿರಲಿ , ಮನುಷ್ಯರಲ್ಲೂ ಚೇಳಿನ ಹಾಗೆ ವಿವೇಕಾವಿವೇಕ ರಹಿತರು ಇದ್ದೀವೆಂಬುದೇ ಸ್ವಾರಸ್ಯ.

Leave a Reply