ನೀವೂ ಉಡಿದಾರ ಕಟ್ಕೊಳ್ಳಿ..!!

 

 

 

 

 

ಗಿರಿಧರ ಕಾರ್ಕಳ

 

 

ನಾನು ಮುಂಬಯಿನಲ್ಲಿದ್ದ ದಿನಗಳವು.

ಒಂದು ದಿನ ಇದ್ದಕ್ಕಿದ್ದಂತೇ ಕಿಬ್ಬೊಟ್ಟೆಯ ಕೆಳಭಾಗದಲ್ಲಿ ನೋವು ಕಾಣಿಸಿತು. ಫಸ್ಟ್ ಏಡ್ ಮಾತ್ರೆ, ಗ್ಯಾಸ್ಟ್ರಿಕ್ ಸಿರಪ್ ಸೇವೆಯ ನಂತರವೂ ನೋವು ಕಡಿಮೆಯಾಗಲಿಲ್ಲ.

ಭಾನುವಾರವಾದ್ದರಿಂದ ಮನೆಪಕ್ಕದ ಡಾಕ್ಟ್ರು ಜುಹೂ ಬೀಚಲ್ಲಿ ಸಂಸಾರವಂದಿಗರಾಗಿ ಪಾನೀಪೂರಿ ಭಜನೆಯಲ್ಲಿದ್ದಾರೆಂದು ತಿಳಿಯಿತು..!! ಬೇರಾವ ಕ್ಲಿನಿಕ್ಕೂ ಇರಲಿಲ್ಲ. ನಾನಿರುವ ಬೊರಿವಲಿಯಿಂದ ದಹಿಸರ್ ವರೆಗೂ ಹುಡುಕುತ್ತಾ ಹೋದಾಗ ಅಲ್ಲೊಂದು ಗೂಡಂಗಡಿಯಂತಹ ಕ್ಲಿನಿಕ್ಕೆಂಬ ಕ್ಲಿನಿಕ್ಕಿನಲ್ಲಿ ಸುಮಾರು 70 ರ ಮುದುಕಪ್ಪ ಡಾಕ್ಟರೊಬ್ಬರು ಗಿರಾಕಿಗಳೇ ಇಲ್ಲದೆ ಅದೆಷ್ಟೋ ವರ್ಷಗಳಿಂದ ನನಗಾಗೇ ಕಾಯುತ್ತಿದ್ದರೇನೋ ಎಂಬಂತೆ ಕೂತಿದ್ದರು.

ನನ್ನ ಸಮಸ್ಯೆ ಹೇಳಿದ್ದೇ ತಡ,ಅನುಮತಿಗೂ ಕಾಯದೆ ಪ್ಯಾಂಟ್ ಬಿಚ್ಚಿ ಪರೀಕ್ಷೆ ಮಾಡಿದ್ದಲ್ಲದೆ ಅವರಷ್ಟೇ ವಯಸ್ಸಿನ ದಬ್ಬಳದಂತಹ ಸೂಜಿಯಿರುವ ಇಂಜಕ್ಷನ್ ಚುಚ್ಚಿಯೇ ಬಿಟ್ಟರು..!! ಅದರ ನೋವು ಹೊಟ್ಟೆ ನೋವಿಗಿಂತಲೂ ಭೀಕರವಾಗಿತ್ತು..!! ರಾತ್ರಿಯಿಡೀ ಎರಡೂ ನೋವಿಂದ ಹೈರಾಣಾದೆ.

ಏನಾದರೂ ಆಗಲಿ,ಕಿಡ್ನೀ ಸ್ಟೋನೋ, ಹರ್ನಿಯಾವೋ ಇರಬಹುದು ಅಂದ್ಕೊಂಡು ಮಾರನೇ ದಿನ ನೆಟ್ಟಗೆ ಹೋದದ್ದು ಸ್ನೇಹಿತರಾದ ಡಾ. ರಘುವೀರ ಭಟ್ ಎಂಬ ಇಂಗ್ಲೀಷ್ ಡಾಕ್ಟರಲ್ಲಿ. ಡಾ. ಭಟ್, ಪ್ರಸಿದ್ಧ ವೈನೋದಿಕ ಚುಟುಕು ಕವಿ ದಿI ವಿ.ಜಿ.ಭಟ್ಟರ ಮಗ. ಬಹಳ ವರ್ಷಗಳಿಂದ ಮುಂಬಯಿಯಲ್ಲಿ ನೆಲೆ ನಿಂತವರು. ತಂದೆಯ ಹಾದಿಯಲ್ಲಿ ಅವರೂ ಒಂದೆರಡು ಕವಿತೆಗಳ ಸಂಕಲನ ತಂದವರು.

ಸರಿ.. ಹಾಸ್ಯ ಪ್ರವೃತ್ತಿಯ ರಘುವೀರ ಭಟ್ಟರು ನನ್ನ ಸಮಸ್ಯೆ ತಿಳಿದು, ಇದೇನು ಅಂತಹ ದೊಡ್ಡ ಸಮಸ್ಯೆಯಲ್ಲ ಅನ್ನುತ್ತ ಮೆಲ್ಲಗೆ.. “ನೀವು ಉಡಿದಾರ ಹಾಕಿದ್ದೀರಾ?” ಅಂತ ಕೇಳಿದರು!! ಎಲ್ಲರೂ ಜನಿವಾರ ಇದೆಯಾ ಕೇಳ್ತಾರೆ.. ಇದೇನಪ್ಪ ಉಡಿದಾರ ಕೇಳ್ತಿದಾರೆ. . ತಮಾಷೆ ಮಾಡ್ತಿದಾರೆ ಅಂದ್ಕೊಂಡ್ರೆ ಸೀರಿಯಸ್ಸಾಗೇ ಕೇಳ್ತಿದಾರೆ.

ಇಲ್ಲ ಅಂದೆ. ” ಹಾಗಾದ್ರೆ ಇವತ್ತೇ ಉಡಿದಾರ ಕಟ್ಕೊಳ್ಳಿ.. ಹಿಂದಿನವರು ಚಂದಕ್ಕಲ್ಲ ಉಡಿದಾರ ಕಟ್ಕೊಳ್ತಿದ್ದದ್ದು.. ಹೊಟ್ಟೆಯ ಭಾರ ಮೂತ್ರಕೋಶದ ಮೇಲೆ ಬೀಳದಂತೆ ಈ ಉಡಿದಾರ ನೋಡ್ಕೊಳ್ಳುತ್ತೆ. ಮೂತ್ರಕೋಶದ ಮೇಲೆ ಹೊಟ್ಟೆ ಭಾರ ಬಿದ್ದಷ್ಟೂ ಅಪಾಯ ಜಾಸ್ತಿ. ನೀವೂ ಕಟ್ಕೊಳ್ಳಿ..ನಿಮ್ಮ ಸಮಸ್ಯೆ ಖತಂ” ಅಂದ್ರು..!!

ಇಂಗ್ಲೀಷ್ ಡಾಕ್ಟ್ರು, ಅದೂ ಆತ್ಮೀಯತೆಯ ಸಲಿಗೆಯ ಡಾಕ್ಟ್ರು ಹೇಳಿದ ಮೇಲೆ ಪಾಲಿಸದಿರೋದು ಹೇಗೆ. ಮನೆಗೆ ಬರುವಾಗಲೇ ಕಪ್ಪು ಉಡಿದಾರ ತಂದು ಕಟ್ಟಿಕೊಂಡೇ ಬಿಟ್ಟೆ. ಆಹಾ ಏನಾಶ್ಚರ್ಯ. .!! ನಾಲ್ಕೇ ದಿನದಲ್ಲಿ ನೋವು ಹತೋಟಿಗೆ ಬಂತು. ಇನ್ನೂ ಆಶ್ಚರ್ಯದ ಮಾತೆಂದರೆ ಅದಾಗಿ 20 ವರ್ಷಗಳೇ ಕಳೆದವು. ಇದುವರೆಗೂ ಆ ಸಮಸ್ಯೆ ಕಾಡಿಲ್ಲ..!!

ಹಾಗಾಗಿ..ನಾನೂ ಹೇಳ್ತೇನೆ. ನೀವೂ ಉಡಿದಾರ ಕಟ್ಕೊಳ್ಳಿ.. ಮೂತ್ರಕೋಶದೊತ್ತಡ ಬಾಧೆಯಿಂದ ದೂರವಿರಿ..!!
ಈಗಲೂ ದಿನವೂ ಉಡಿದಾರ ನೋಡುವಾಗ ಡಾ.ಭಟ್ ನೆನಪಾಗ್ತಾರೆ.. ಭಟ್ಟರ ನೆನಪಾದರೆ ಅವರಪ್ಪ ಚುಟುಕು ಕವಿ ವಿ.ಜಿ.ಭಟ್ಟರೂ ಮುಗುಳ್ನಗುತ್ತಾರೆ..!!

2 Responses

  1. Anasuya M R says:

    ಓಳ್ಳೆಯ ಆರೋಗ್ಯಕರ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್

  2. Rjaram Tallur says:

    ನನಗೆ ಇದರ ಸಾರ್ವತ್ರಿಕ ಸಾಚಾತನದ ಬಗ್ಗೆ ಒಂದು ಸಣ್ಣ ಸಂದೇಹ ಇದೆ. ನಾವೆಲ್ಲರೂ ದಿನದ ಉದ್ದಕ್ಕೂ ಪ್ಯಾಂಟು-ಬೆಲ್ಟು, ಮುಂಡು-ವೇಸ್ಟಿ, ಶಾರ್ಟ್ಸ್, ಚೂಡಿದಾರ್, ಸ್ಕರ್ಟ್ ಅಂತ ಸೊಂಟದ ಆ ಭಾಗವನ್ನು ಬಹುತೇಕ ಬಿಗಿಯಾಗಿಯೇ ಇರಿಸಿಕೊಂಡಿರುತ್ತೇವೆ. ಹಾಗಿದ್ದೂ ಹೊಟ್ಟೆಯ (ಅಂದರೆ ವಾಸ್ತವದಲ್ಲಿ ಸಣ್ಣ ಕರುಳಿನ) ಭಾರ ಮೂತ್ರಕೋಶದ ಮೇಲೆ ಬೀಳುವುದು ಹೇಗೆ? ನನಗೆ ಅದು ವ್ಯಕ್ತಿ ನಿರ್ದಿಷ್ಟ ಸ್ನಾಯು ಸಂರಚನೆಯೇ ಹೊರತು ಸಾರ್ವತ್ರಿಕ ಅಲ್ಲ ಅನ್ನಿಸುತ್ತದೆ. ನಿಮ್ಮ ವೈದ್ಯರು ಹೇಳಿದ ಲಾಜಿಕ್ಕ್ ಕೆಲಸ ಮಾಡುವುದಿದ್ದರೆ, ಸೊಂಟ ಗಟ್ಟಿ ಮಾಡಿಕೊಂಡವರಿಗೆ ಯಾರಿಗೂ ಹರ್ನಿಯೇಟ್ ಆಗುವುದು, ಗರ್ಭಕೋಶ ಕೆಳಜಾರುವುದು ಆಗಲೇ ಬಾರದಿತ್ತು… ಯಾರಾದರೂ ವೈದ್ಯರು ಬೆಳಕು ಚೆಲ್ಲಿ ಪ್ಲೀಸ್.

Leave a Reply

%d bloggers like this: