ಮುಷ್ಟಿಯೊಳಗಿದ್ದ ಚಿಟ್ಟೆಯಂಥಾ ಕನಸು ಇಣುಕಿಣುಕಿ ನೋಡುತ್ತಿದ್ದ ಕಾಲವದು..

ಡಿಸೆಂಬರ್ – ಜನವರಿ ಬಂತೆಂದರೆ ವಾರ್ಷಿಕೋತ್ಸವದ ಗುಂಗು ಹತ್ತುತ್ತಿತ್ತು!

ಯಾವ ಕ್ಲಾಸು ಅಂತು ಸರಿಯಾಗಿ ನೆನಪಿಲ್ಲ ನಂಗೆ. ಬಹುಶಃ ಯು.ಕೆ.ಜಿ ತಪ್ಪಿದರೆ ಒಂದನೇ ಕ್ಲಾಸು ಇರಬಹುದು.. ‘ದಧಿಬಾಂಡ ಮೋಕ್ಷ ‘ ಅನ್ನೋ ನಾಟಕ ಮಾಡಿಸಿದ್ರು! ಕೃಷ್ಣ ಒಬ್ಬ ಬೆಣ್ಣೆ-ಮೊಸರು ಮಾರೋ ಅಜ್ಜನಿಗೆ ಮೋಕ್ಷ ಕೊಡಿಸುವ ಕಥೆ ಅದು. ನಂಗೆ ಯಶೋದೆಯ ಪಾತ್ರ. ತರಂಗದಲ್ಲಿ ಬರುತ್ತಿದ್ದ ಕೃಷ್ಣನ ಕಥೆಯನ್ನ ಅಮ್ಮ ಓದಿ ಹೇಳುತ್ತಿದ್ದರಿಂದ ಯಶೋದೆಯ ಭಾವಗಳು ಜಾಸ್ತಿಯೇ ಅರ್ಥವಾಗುತ್ತಿದ್ದವು ನಂಗೆ..

ಸ್ಟೇಜ್ ಮೇಲೆ ಸೀರೆ ಉಟ್ಟು ನಾಟಕ ಮಾಡಿದ್ದು ಮಸುಕು ಮಸುಕು ನೆನಪ ಪರದೆಯಲ್ಲಿ.. ಆದರೆ ಸುಮಾರು ನಾಲ್ಕನೇ ಕ್ಲಾಸಿನವರೆಗೂ ಪಾಠ ನಡೆಯದ ತರಗತಿಗಳಲ್ಲಿ  ಅದನ್ನೇ ಮಾಡಿಸುತ್ತಿದ್ದುದು ಸರಿಯಾಗಿ ನೆನಪಿದೆ ನಂಗೆ! ನಾಟಕ ಮಾಡು, ಭಾಷಣ ಮಾಡು ಅಂದ್ರೆ ಯಾವ ಹೊತ್ತಲ್ಲಾದ್ರೂ ಹೂಂ ಅಂದುಬಿಡುತ್ತಿದ್ದೆ. ಏನೂ ಅರಿಯದ ವಯಸ್ಸದು.

ಖುಷಿ ಅನಿಸಿದ್ದನ್ನೆಲ್ಲಾ ಯಾವುದೇ ಅಂಜಿಕೆ, ಬಿಗುಮಾನ, ಅಹಂಕಾರ ಇಲ್ಲದೇ ಮಾಡಿಬಿಡೋ ಹುಮ್ಮಸ್ಸಿತ್ತು! ನಂತರದ ದಿನಗಳಲ್ಲಿ ರಾಮಾಯಣ ,ಮಹಾಭಾರತದ ಪೂರ್ತಿ ನಾಟಕವನ್ನು ಮಾಡಿಸುತ್ತಿದ್ದರು ನಮಗೆ.. ಸುಮ್ಮನೆ ರಾಜನ ಪಕ್ಕ ನಿಂತು ಗಾಳಿ ಬೀಸೋ ಪಾತ್ರವಾದರೂ ಸೈ ಅಥವಾ ರಾಣಿಯ ಹಿಂದೆ ಟ್ರೇ ಹಿಡಿಯೋದಾದರೂ ಸೈ. ಒಟ್ಟು ಯಾವುದಾದರೂ ಪಾತ್ರ ಬೇಕಿತ್ತಷ್ಟೆ!

ರಿಹರ್ಸಲ್ ನಲ್ಲಂತೂ ದೊಡ್ಡ ದೊಡ್ಡ ಪಾತ್ರ ಮಾಡುವವರ್ಯಾರಾದರೂ ಬಂದಿಲ್ಲವಾದರೆ ನಂಗಂತೂ ಖುಷಿಯೋ ಖುಷಿ  ಒಂದು ದಿನದ ಮಟ್ಟಿಗಾದರೂ ಅದನ್ನ ಮಾಡೋ ಸಂಭ್ರಮ.. ಹೀಗಾಗಬಹುದು ಅಂತನೇ ಮುಕ್ಕಾಲು ಭಾಗ ನಾಟಕದ ಮಾತುಗಳನ್ನ ಬಾಯಿಪಾಠ ಮಾಡಿಬಿಡುತ್ತಿದ್ದೆ.

ಪ್ರಾಪರ್ಟಿ ತಯಾರು ಮಾಡುವ ದಿನಗಳಲ್ಲಂತೂ ಕತ್ತಿ, ಗುರಾಣಿ , ಕಿರೀಟ ಎಲ್ಲದನ್ನೂ ಹಾಕಿ ನೋಡುವ ಮಾಡೆಲ್ ನಾನಾಗುತ್ತಿದ್ದೆ. ಹೈಸ್ಕೂಲ್ ನಲ್ಲಿ ಯಾವುದೋ ಒಂದೆರಡು ಪುಟ್ಟ ಪುಟ್ಟ ನಾಟಕಗಳಲ್ಲಿ ಅಭಿನಯಿಸಿದ್ದು ಬಿಟ್ಟರೆ ಛದ್ಮವೇಷಕ್ಕೋ, ಏಕಪಾತ್ರಾಭಿನಯಕ್ಕೋ ಮಾತ್ರ ನನ್ನೆಲ್ಲಾ ಬೆರಗುಗಳೂ ಸೀಮಿತವಾಗಿಬಿಟ್ಟಿದ್ದವು.

ಗಣರಾಜ್ಯೋತ್ಸವದ ಟ್ಯಾಬುಲೋಗೆ ಯಕ್ಷಗಾನ ವೇಷ ಹಾಕಿದ್ದು, ಹೈಸ್ಕೂಲ್ ಗೆ ಬಂದಮೇಲೂ ಕೊರವಂಜಿ ವೇಷಕ್ಕೆ ಮೊದಲ ಸ್ಥಾನ ಪಡೆದದ್ದು ಎಲ್ಲವೂ ಸವಿ ಸವಿ ನೆನಪು ಸಾವಿರ ನೆನಪು ಈಗ..

ಇಂಜಿನಿಯರಿಂಗ್ ಎಂಬ ಇಷ್ಟವಿಲ್ಲದ ಓದನ್ನೂ ಸಹ್ಯವಾಗುವಂತೆ ಮಾಡಿದ್ದು ಇಂಥ ಸಂಗತಿಗಳೇ! ಮೊದಲ ವರ್ಷ ಬಿಟ್ಟರೆ ಮತ್ತುಳಿದ ಮೂರೂ ವರ್ಷಗಳೂ ಯಾವ್ಯಾವುದೋ ನಾಟಕ ಹೊತ್ತು ವಿ.ಟಿ.ಯು ಫೆಸ್ಟ್ ಎಂಬ ಅದ್ಭುತ ಲೋಕಕ್ಕೆ ನಡೆದುಹೋಗಿದ್ದೆ. ಅದಕ್ಕೆ ಪಟ್ಟ ಕಷ್ಟ ಹಾಗೂ ಅದರಿಂದ ಪಡೆದ ಖುಷಿ ಬರಹಕ್ಕೆ ನಿಲುಕದ್ದು.

ಆ ತಣ್ಣಗಿನ ಊರಿನಿಂದ ಬದುಕು ಕರೆದುಕೊಂಡು ಬಂದಿದ್ದು ಬೆಂಗಳೂರೆಂಬ ಬೆಂದಕಾಳೂರಿಗೆ!

ಮುಷ್ಟಿಯೊಳಗಿದ್ದ ಚಿಟ್ಟೆಯಂಥಾ ಕನಸು ಇಣುಕಿಣುಕಿ ನೋಡುತ್ತಿದ್ದ ಕಾಲವದು.. ಕೆಲಸ ಹುಡುಕುವ ನೆಪ ಹೇಳಿ ಬೆಂಗಳೂರ ದಾರಿ ಹಿಡಿದಿದ್ದರೂ ತಲೆಯಲ್ಲಿ ಓಡುತ್ತಿದ್ದ ಯೋಚನೆಗಳೇ ಬೇರೆಯಿದ್ದವು. ಯಾವುದಾದರೂ ವಿಷಯಕ್ಕೆ ತೀರಾ ಹಪಾಹಪಿಸಿದಾಗ ಅದು ದಕ್ಕೇ ದಕ್ಕುತ್ತದೆ ಎಂಬಂತೆ ತೆರೆದುಕೊಂಡಿದ್ದು “ರಂಗಮಂಟಪ”!

ನನ್ನ ಅಭಿರುಚಿಗಳ ಅರಿವಿದ್ದ ಗೆಳತಿಯೊಬ್ಬಳು ಅಚಾನಕ್ ಆಗಿ ರಂಗಮಂಟಪ ಎಂಬ ಹವ್ಯಾಸೀ ರಂಗಭೂಮಿಯ ತಂಡಕ್ಕೆ ಪರಿಚಯಿಸಿದ್ದಳು. ‘ಮಲ್ಲಿಗೆ’ ನಾಟಕದ ತಯಾರಿ ನಡೆಯುತ್ತಿದ್ದ ಸಮಯವದು..  ರಂಗಭೂಮಿ ಹೇಗಿರಬಹುದೆಂಬ ಕಲ್ಪನೆಯೂ ಇರಲಿಲ್ಲ ನಂಗ‍ಾಗ! ರಂಗಭೂಮಿ ಇರಲಿ, ಬೆಂಗಳೂರಿನ ಜನರ ಜೀವನದ ನಡಿಗೆಯೇ ಸೋಜಿಗವೆನಿಸುತ್ತಿದ್ದ ಕ್ಷಣಗಳವು. ಅವು ಕತ್ತಿಯ ಮೇಲಿನ ನಡಿಗೆಯ ದಿನಗಳು..

ಮನೆಯಲ್ಲಿ ದಿನವೂ ಶರಂಪರ ಕಿತ್ತಾಟ! ಅಮ್ಮನಿಗೆ ಮುಗಿಯದ ಹೆದರಿಕೆಯಾದರೆ, ಅಪ್ಪನಿಗೆ ಹೆಮ್ಮೆ ಮಿಶ್ರಿತ ಭಯ. ಎಷ್ಟೆಂದರೂ ರಂಗಭೂಮಿಯ ಪ್ರೀತಿಯೂ ಅಪ್ಪನಿಂದಲೇ ಜೀನ್ಸನಲ್ಲಿ ಹರಿದು ಬಂದ ಹುಚ್ಚು.. ಕಡೆಗೂ ರಂಗಮಂಚದ ದೈದೀಪ್ಯತೆ, ಸಾವಿರ ಬಣ್ಣಗಳ ನೆರಳು ಬೆಳಕಿನಾಟ, ನನ್ನದಲ್ಲದ ಪಾತ್ರಕ್ಕೆ ಜೀವ ತುಂಬುವ ಕನವರಿಕೆ ಎಲ್ಲವೂ ಸೂಜಿಗಲ್ಲಿನಂತೆ ಸೆಳೆದುನಿಲ್ಲಿಸಿದ್ದವು  ನನ್ನ.

ಜೊತೆಯಾಗಿದ್ದು ಮಲ್ಲಿಗೆಯಿಂದಾದರೂ ಬಂಧಗಳು ಬೆಸೆದಿದ್ದು ‘ಅಕ್ಕು’ ನಾಟಕದಿಂದಲೇ. ಮಲ್ಲಿಗೆಯ ರಿಹರ್ಸಲ್ ಹೊತ್ತಲ್ಲಿ ಅಕ್ಕು ನಾಟಕದ ಪಾತ್ರಗಳ ಬಗ್ಗೆ ಕೇಳಿ ಕೇಳಿ ನನ್ನ ಕಲ್ಪನಾ ಲೋಕದಲ್ಲಿ ಅಮ್ಮಚ್ಚಿ, ಅಕ್ಕು, ಸೌದಾಮಿನಿ, ಪುಟ್ಟಮ್ಮತ್ತೆಯರೆಲ್ಲಾ ಬೇರೆಯದೇ ಸ್ಥಾನ ಪಡೆದುಬಿಟ್ಟಿದ್ದರು.

‘ಅಕ್ಕು’ ನಾಟಕವನ್ನು ಮೊದಲು ನೋಡಿದ್ದು ಹಾಗೂ ಅಭಿನಯಿಸಿದ್ದು ದೆಹಲಿಯಲ್ಲಿ ! ನಾಟಕ ಮುಗಿದ ಆ ಕ್ಷಣ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.. ಆ ಪಾತ್ರಗಳೆಲ್ಲವೂ ಮನಸಿನಾಳಕ್ಕೆ ಇಳಿದುಬಿಟ್ಟವು.  ಯಾವುದೇ ಕೆಲಸವಿದ್ದರೂ ‘ಅಕ್ಕು’ ನಾಟಕ ಎಂದಾಕ್ಷಣ ಎಲ್ಲವನ್ನೂ ಮರೆತು ಸಜ್ಜಾಗಿಬಿಡುತ್ತಿದ್ದೆ. ರಂಗಭೂಮಿಯ ಮೇಲಿನ ಪ್ರೀತಿಯನ್ನು ನೂರ್ಮಡಿಗೊಳಿಸಿದ್ದು ‘ಅಕ್ಕು’.

ಮೊದಮೊದಲು ಸೌದಾಮಿನಿಯಾಗಿ ಮಾಡುತ್ತಿದ್ದ ನಂಗೆ ನಿರ್ದೇಶಕರು ಕ್ರಮೇಣ ಅಮ್ಮಚ್ಚಿಯಾಗಿ ಭಡ್ತಿ ನೀಡಿದ್ದರು. ಅಮ್ಮಚ್ಚಿ ಪಾತ್ರ ಮಾಡಿ , ನಾಟಕ ಮುಗಿಸಿ ಮನೆಗೆ ಬಂದಮೇಲೂ ಆ ಪಾತ್ರದ ಕಾವು ಇಳಿದಿರುತ್ತಿರಲಿಲ್ಲ. ಯಾಕೋ ಅಮ್ಮಚ್ಚಿಗೆ ಇನ್ನಷ್ಟು ನ್ಯಾಯ ನೀಡಬೇಕಿತ್ತೆಂಬ ಚಡಪಡಿಕೆ ಹಾಗೆಯೇ ಉಳಿದುಹೋಗಿಬಿಟ್ಟಿದೆ ಈ ಹೊತ್ತಿಗೂ..

 

ಅಕ್ಕುವಿನ ಪಾತ್ರಕ್ಕೆ ಮನಸೋತು , ರಂಗದ ಮೇಲೆ ಅಕ್ಕುವನ್ನು ಮೂಡಿಸಬೇಕೆಂದು ಹೊರಟವರಿಗೆ ಅಕ್ಕುವಿನಷ್ಟೇ , ಬಹುಶಃ ಅಕ್ಕುವಿಗಿಂತ ಜಾಸ್ತಿ ಅಮ್ಮಚ್ಚಿ ಇಷ್ಟವಾದಳು!

ರಂಗಭೂಮಿಯ ಮುಂದುವರೆದ ಭಾಗವಾಗಿ ‘ಅಕ್ಕು’ ಈಗ ‘ಅಮ್ಮಚ್ಚಿಯೆಂಬ ನೆನಪು’ ಹೆಸರಿನಲ್ಲಿ ಚಲನಚಿತ್ರವಾಗುವತ್ತ ಸಾಗಿದೆ. ಅನಿವಾರ್ಯತೆಗಳಿಗೆ ಕಟ್ಟುಬಿದ್ದು ಅದರ ಭಾಗವಾಗದೇ ಹೋದ ನೋವು ಬದುಕಿನುದ್ದಕ್ಕೂ ಕಾಡುವಂಥಹದ್ದು. ರಂಗಭೂಮಿಯ ಮಿತ್ರರೆಲ್ಲರೂ ಸೇರಿ ಅತೀವ ಪ್ರೀತಿಯಿಂದ ಚಿತ್ರಕಾವ್ಯವೊಂದರ ಕಟ್ಟೋಣದ ಭಾಗವಾಗುತ್ತಿದ್ದಾರೆ!

ಚಿತ್ರೀಕರಣದ ಪ್ರತಿ ದೃಶ್ಯಗಳೂ ಯಾರೋ ಬಿಡಿಸಿಟ್ಟ ಕಲಾಕೃತಿಯ ರೂಪಗಳಂತೆ ಭಾಸವಾಗುತ್ತಿರುವುದಂತೂ ಸತ್ಯ. ರಂಗಭೂಮಿಯ ಇತಿ ಮಿತಿಗಳನ್ನು ದಾಟಿ ಎಲ್ಲ ಕ್ರಿಯಾಶೀಲತೆಯನ್ನೂ, ಅನುಭವಗಳನ್ನೂ ಸುರಿದು ತಯಾರಾಗುತ್ತಿರುವ ‘ಅಮ್ಮಚ್ಚಿಯೆಂಬ ನೆನಪು’ ಈಗಿನಿಂದಲೇ ನನ್ನೊಳಗಿನ ಭಾವತಂತುವನ್ನು ಮೀಟುತ್ತಿದೆ!

ಬದುಕು ರಂಗಿನೋಕುಳಿಯಾದದ್ದು, ಬಂಧ ಬಾಂಧವ್ಯಗಳು ಬೆಸೆದಿದ್ದು , ಭಾವುಕತೆಗಳು ಹೆಗಲು ತಬ್ಬಿ ನಕ್ಕಿದ್ದು ಎಲ್ಲವೂ ರಂಗಮಂಟಪದಿಂದಲೇ.. ಅದೇ ಪ್ರೀತಿ, ವಿಶ್ವಾಸ, ಕಾಳಜಿ ಎಲ್ಲವೂ ಈಗ ‘ಏಪ್ರಾನ್ ಪ್ರೊಡಕ್ಷನ್ಸ್ ‘ ಮೇಲೆ ಮುಂದುವರೆದಿದೆ. ಎಲ್ಲರೆದೆಯೊಳಗೂ ಭಾವ-ಭಾವುಕತೆಗಳು ನಲಿದಾಡುವ ಚಿತ್ರವೊಂದನ್ನು ಕಟ್ಟಿಕೊಡಿ ನಮಗೆ. ಕಾಯುತ್ತಿರುತ್ತೇವೆ ನಾವು

1 Response

  1. Hemanth says:

    very good. Keep doing well… All the best for your all projects

Leave a Reply

%d bloggers like this: