ಇಲ್ಲಿ ಗೌರಿಯನ್ನು ಬಿತ್ತಲಾಗಿದೆ..

 ಎನ್.ರವಿಕುಮಾರ್ / ಶಿವಮೊಗ್ಗ

ಮೊನ್ನೆ ಜ.೨೯ ಗೌರಕ್ಕನ ಜನ್ಮ ದಿನವನ್ನು ಗೌರಿದಿನವನ್ನಾಗಿ ಆಚರಿಸಲಾಯಿತು.

ಅಲ್ಲಿ ಗೌರಿಲಂಕೇಶ್ ಎಂಬ ಜೀವ ಧಾರೆಯ  ‘ಗೌರಿ ಹೂವು’ ಬದುಕು-ಬರಹ ದ ಕೃತಿ ಬಿಡುಗಡೆಗೊಂಡಿತು. ಪತ್ರಕರ್ತ ಕುಮಾರ್ ಬುರಡಿಕಟ್ಟಿ ಸಂಪಾದನೆಯ ಈ ಪುಸ್ತಕ ಕೈಗೆ ಸಿಕ್ಕಿದ್ದೆ ತಡ  ನನ್ನ ಕಚೇರಿ ಕೋಣೆಯ ಬಾಗಿಲು ಅದುಮಿಕೊಂಡು ಹಸಿದ ಕುಂತ ಬೀಡಾಡಿ ಹುಡಗನಂತೆ  ಒಂದೇ ಗುಕ್ಕಿಗೆ ಗಕ್ಕನೆ ಓದಿ ಮುಗಿಸಿದೆ.

ಮರಿ…… ಎಂಬ ದನಿಯೊಂದು  ಕೋಣೆ ತುಂಬಾ ಪ್ರತಿಧ್ವನಿಸಿದಂತಾಯಿತು..!

ಗೌರಿ  ಎಂಬ ಹೂವು ತನ್ನ ಸುತ್ತಲಿನ  ಜೀವಜಾತ ಸಂಕುಲವನ್ನು ಜತನದಿಂದ ಕಾಯ್ದ, ಕಾರುಣ್ಯದಿಂದ ನೇವರಿಸಿದ, ಪ್ರೀತಿ, ಸಹಬಾಳ್ವೆಯ ಮಂತ್ರಘೋಷ ಉಣಬಡಿಸಿದ, ಅದೇ ಕಾಲಕ್ಕೆ ಘಾತುಕ ಶಕ್ತಿಗಳನ್ನು ಸಾತ್ವಿಕ ಸಿಟ್ಟಿನಿಂದ ಪ್ರತಿರೋಧಿಸಿದ, ವೈಚಾರಿಕ ಹರಿತಗಳಿಂದ ಎದುರುಗೊಂಡ, ಅಹಿಂಸೆಯ ಅಸ್ತ್ರಗಳಿಂದ ಬಗ್ಗುಬಡಿದ ಗುರುತುಗಳು ‘ಗೌರಿ ಹೂವು’ ಪ್ರತಿಪುಟದಲ್ಲೂ  ಜೀವ ತಳೆದಿವೆ.

ಕೃತಿ ಸಂಪಾದಕ ಕುಮಾರ್ ಬುರಡೀಕಟ್ಟಿ

ಕೃತಿ ಸಂಪಾದಕ ಕುಮಾರ್ ಬುರಡೀಕಟ್ಟಿ

ಗೌರಿ ಲಂಕೇಶ್ ಅವರ ಕುರಿತು  ‘ನವಯಾನ’ ಪ್ರಕಾಶನ ಪ್ರಕಟಿಸಿದ ಚಂದನಗೌಡ ಅವರ ‘ದಿ ವೇ  ಐ ಸೀ ಇಟ್’ ನ ಅನುವಾದದ ಕೃತಿಯಾಗಿದ್ದು, ಗೌರಿ ಲಂಕೇಶ್ ಅವರನ್ನು ಹತ್ತಿರದಿಂದ ಬಲ್ಲವರು ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ.

ಅಲ್ಲದೆ, ಗೌರಿಲಂಕೇಶ್ ಅವರ ಕುರಿತಾಗಿ ಅವರ ತಾಯಿ ಇಂದಿರಾ, ರಹಮತ್ ತರೀಕರೆ, ವಿ.ಎಸ್ ಶ್ರೀಧರ್, ರಾಜದೀಪ್ ಸರ್ದೇಸಾಯಿ, ಉಮರ್ ಖಾಲಿದ್, ಫಣಿರಾಜ್, ತೀಸ್ತಾ ಸೆಟಲ್ವಾದ್, ಮಮತ ಜಿ.ಸಾಗರ ಅವರುಗಳು ಬರೆದ ಲೇಖನಗಳಿವೆ.

ಲಂಕೇಶ್ ನಿಧನದ ನಂತರ ಲಂಕೇಶ್ ಪತ್ರಿಕೆಯನ್ನುಮುನ್ನಡೆಸುವ ಹೊಣೆ ಹೊತ್ತ ಗೌರಿಲಂಕೇಶ್ ಅವರಲ್ಲಿ ಒಂದು ಸ್ಪಷ್ಟ ಧೃಢತೆ ಇತ್ತು. ಎಂ ಡಿ  ರಿತಿ ಅವರಿಗೆ ನೀಡಿದ ಸಂದರ್ಶನದಲ್ಲಿ ನಾನು ಮಹಿಳೆಯಾಗಿರುವುದೇ ನನ್ನ ಸದ್ಯದ ರಕ್ಷಣೆ ಆಗಿದೆ ಎಂದು ಹೇಳುವ ಮೂಲಕ ಈ ಸಮಾಜದವನ್ನು ಗೌರಿ ಲಂಕೇಶ್ ನಂಬಿದ್ದರು. ಇದು ಸುಳ್ಳಾಗಿ ಹೋಯಿತು. ಈ ಸಮಾಜದಲ್ಲಿ ಹೆಣ್ಣನ್ನು ಗುಂಡಿಕ್ಕಿ ಕೊಲ್ಲುವ ವಿಕೃತ ಮನೋಃಸ್ಥಿತಿಯೊಂದು  ಹೆಡೆ ಬಿಚ್ಚಿದೆ  ಎಂಬುದು ಜಗಜ್ಜಾಹೀರಾಗಿ ಹೋಯಿತು.

ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ‘ಗೌರಿ ಹೂವು’ ಗೌರಿ ಲಂಕೇಶ್ ಅವರನ್ನು ಪರಿಪೂರ್ಣ ನಿಮಗೆ ಕಟ್ಟಿಕೊಡುವ ತೋಟವೇ ಆಗಿದೆ. ನೀವು ತೋಟದಲ್ಲಿ ಸುತ್ತಾಡಿ. ಗೌರಿ ಹೂವೊಂದು ನಿಮ್ಮೊಂದಿಗೆ ಮಾತನಾಡುತ್ತದೆ. ಸಂವಾದಿಸುತ್ತದೆ. ಚರ್ಚೆಗೆಳೆದು ನಿಮ್ಮೊಳಗೆ ಕರಗುತ್ತದೆ. ಬೇರು ಬಿಟ್ಟುಕೊಂಡು ಮತ್ತೆ ಅರಳಲು ಸನ್ನದ್ಧವಾಗುತ್ತದೆ.

ಗೌರಿಯನ್ನು ಬಿತ್ತಿದ್ದೇವೆ ನೂರಾರು, ಸಾವಿರಾರು ಗೌರಿಯರನ್ನು ಬೆಳೆಯುತ್ತೇವೆ ಎನ್ನುವ ಮಾತು ನಿಜವಾಗುವಷ್ಟರ ಮಟ್ಟಿಗೆ ನಿಮ್ಮನ್ನು ಈ ಹೂವು ಪ್ರಭಾವಿಸಲಿದೆ. ಅದೇ ಈ ಹೂವಿಗಿರುವ ಚೇತನ ಶಕ್ತಿ.

1 Response

  1. ಮಹಾಂತೇಶ ದೊಡ್ಮನಿ says:

    ಓದುವ ಕಾತುರ ಮತ್ತಷ್ಟು ಹೆಚ್ಚಾಯಿತು. ಖಂಡಿತವಾಗಿ ತರಿಸಿ ಓದುವೆ.

Leave a Reply

%d bloggers like this: