ಏಕೆಂದರೆ ಇಲ್ಲಿ ಯಾರಿಗೂ ನೋವಾಗಬಾರದು..

ಮಂಸೋರೆ

ಮುಂದೆ ಐತಿಹಾಸಿಕ ಕತೆಗಳನ್ನು ಸಿನೆಮಾ ಮಾಡಬೇಕೆಂದಿರುವ ನಿರ್ದೇಶಕರ ಗಮನಕ್ಕೆ..

ಹಿಂದೂ ಭೂಭಾಗದೊಳ್ ರಾಜ ಮಹಾರಾಜರು, ಅಮರ ಪ್ರೇಮಿಗಳು, ಶಾಂತಿ ಅಹಿಂಸಾ ಪ್ರತಿಪಾದಕರು, ನ್ಯಾಯ ನಿಷ್ಟರು , ಧೀರರು, ಪತ್ನಿಯರನ್ನು ಅಪರಿಮಿತ ಗೌರವಿಸುವವರು ಹಾಗೂ ಹೆಣ್ಣಿಗೆ ಎಲ್ಲ ರೀತಿಯ ಹಕ್ಕುಗಳನ್ನು ನೀಡುವವರಾಗಿದ್ದರು. ಸತಿ ಪಧ್ಧತಿಯ ಕಲ್ಪನೆಯೇ ಇವರಿಗೆ ಇರಲಿಲ್ಲ.

ಭಾರತದ ಮೇಲೆ ದಂಡೆತ್ತಿ ಬಂದ ಮುಸಲ್ಮಾನ್ ದಾಳಿಕೋರರು ಸ್ನೇಹ ಗೆಳೆತನಕ್ಕೆ ಪ್ರತಿರೂಪದಂತಿದ್ದರು, ಕ್ರೌರ್ಯ ಪದದ ಅರ್ಥವೇ ತಿಳಿಯದ ಸಂತರು, ಹಿಡಿ ಪ್ರೀತಿಗಾಗಿ ಪರಿತಪಿಸಿದ ಭಗ್ನ ಪ್ರೇಮಿಗಳು, ಹೆಣ್ಣನ್ನು ಹೂವಿನಂತೆ ನೋಡಿಕೊಳ್ಳುತ್ತಿದ್ದರು, ಆರಾದಿಸುತ್ತಿದ್ದರು.

ವೇಶ್ಯಾವಾಟಿಕೆ ಸುಂದರ ಹೂದೋಟ. ಅಲ್ಲಿ ಮುಳ್ಳಾಗಲಿ, ನೋವಾಗಲಿ, ದಬ್ಬಾಳಿಕೆಯಾಗಲಿ ಇರಲೇ ಇಲ್ಲ.

ಇಲ್ಲಿ ಜಾತಿ ಪದ್ದತಿ ಎಂಬುದು ಇರಲೇ ಇಲ್ಲ. ಎಲ್ಲರೂ ಸೋದರರಂತೆ ಬಾಳಿದವರು. ತಮ್ಮ ಮಲವನ್ನು ತಾವೇ ಸ್ವಚ್ಛ ಮಾಡಿಕೊಳ್ಳುವಂತ ಶುಭ್ರ ಮನಸ್ಸಿನವರೇ ಇತಿಹಾಸದಲ್ಲಿದ್ದದ್ದು.

ಹಿಟ್ಲರ್ ಒಬ್ಬ ಜನಾನುರಾಗಿ, ಮಾನವ ಪ್ರೇಮಿ. ಸುಭಾಷರಿಗೆ ಸಹಾಯ ಮಾಡಿದ ಹಿಟ್ಲರ್ ನನ್ನು ಅಮಾಯಕ ಮುಗ್ಧನಂತೆ ಗುರುತಿಸದೇ ಇತಿಹಾಸಕಾರರು ಆ ಮಹಾತ್ಮನಿಗೆ ಮೋಸ ಮಾಡಿದ್ದಾರೆ.

ಮುಂದೆ ಐತಿಹಾಸಿಕ ಸಿನೆಮಾ ಮಾಡುವವರು ಇತಿಹಾಸವನ್ನು ಈ ರೀತಿಯಲ್ಲಿ ಚಿತ್ರಿಸಬೇಕು. ಏಕೆಂದರೆ ಇಲ್ಲಿ ಯಾರಿಗೂ ನೋವಾಗಬಾರದು.

Leave a Reply