ಅವಳು ‘ಮತ್ಸ್ಯಗಂಧಿ’.. ಒಡಲಲ್ಲಿ ಕಥೆಗಳ ರಾಶಿ..

ಒಂದು ಕಾಲದಲ್ಲಿ ಮೈಲಾರ ಸುತ್ತಿ ಮುಂಬೈಗೆ ಬರಬೇಕಾಗಿದ್ದ ಕರಾವಳಿಗರಿಗೆ ಕೊಂಕಣ ರೈಲು ಬಂದ ಮೇಲೆ ಆದ ಅನುಕೂಲಗಳು ಅಷ್ಟಿಷ್ಟಲ್ಲ.

ದಕ್ಷಿಣೋತ್ತರ ಕನ್ನಡ ಜಿಲ್ಲೆಯವರಿಗೆ ಮೊದಲಿಂದಲೂ ಮುಂಬೈ ಜೊತೆ ಒಡನಾಟ ಜಾಸ್ತಿ.  ಪೂರ್ತಿ ಒಂದು ಹಗಲು ಒಂದು ರಾತ್ರಿ ಬೇಕಾಗುತ್ತಿದ್ದ ಮುಂಬೈ ಪ್ರಯಾಣ ಈಗ ಅದರ ಅರ್ಧದಷ್ಟು ಸಮಯದಲ್ಲಿ ಸಾಧ್ಯವಾಗುತ್ತಿದೆ. ಕೊಂಕಣ ರೇಲ್ವೇ ಕೃಪೆಯಿಂದ “ದೂರದ ದೇಸ” ವಾಗಿದ್ದ ಮುಂಬೈ ಈಗ ನೆರೆಮನೆಯಂತಾಗಿದೆ.  ಲೋಕಲ್ಲುಗಳು ಮುಂಬೈ ಲೈಫ್‌ನ ಜೀವನಾಡಿಯಾಗಿರುವಂತೆ ಕೊಂಕಣ ರೈಲು ಕರಾವಳಿ ನಾಡಿನ ಒಡನಾಡಿಯಾಗಿದೆ.

ಕೊಂಕಣ ರೇಲ್ವೆಯಲ್ಲಿ ಹಗಲು ಹೊತ್ತಿನಲ್ಲಿ, ಅದರಲ್ಲೂ ಮಳೆಗಾಲದಲ್ಲಿ, ಪ್ರಯಾಣಿಸುವುದು ಒಂದು ಅದ್ಭುತ ಕನಸನ್ನು ಕಂಡಂತೆ! ನೂರಾರು ಸೇತುವೆಗಳು, ಹಲವಾರು ಟನೆಲ್ಲುಗಳು, ಪರ್ವತದ ಪಕ್ಕೆಯಲ್ಲಿ ಏಕಾಂತದಲ್ಲಿರುವ ಸ್ಟೇಶನ್ನುಗಳನ್ನು ದಾಟುವುದು ವಿಶಿಷ್ಟ ಅನುಭವ ನೀಡುತ್ತದೆ. ದಟ್ಟ ಹಸಿರಿನ ಪಶ್ಚಿಮಘಟ್ಟ ಶ್ರೇಣಿ, ಅಲ್ಲಲ್ಲಿ ಜಲಪಾತಗಳು, ತುಂಬಿ ಹರಿಯುವ ನದಿಗಳು, ತೊನೆದಾಡುವ ಭತ್ತದ ಗದ್ದೆಗಳು, ಅಪರೂಪಕ್ಕೆ ಪ್ರಕಟವಾಗುವ ಭೋರ್ಗೆರವ ಸಮುದ್ರ-ಇಡೀ ಪ್ರಯಾಣವು ನಿಸರ್ಗ ನಿರ್ಮಿತ ಪೇಂಟಿಂಗ್ ನಡುವೆ ಹಾದು ಹೋಗುತ್ತಿರುವಂತೆ ಅನಿಸುತ್ತದೆ!

 

ದೇಶದೆಲ್ಲೆಡೆ ರೈಲು ಮಾರ್ಗ ತನ್ನ ಜಾಲವನ್ನು ವಿಸ್ತರಿಸಿಕೊಂಡಿದ್ದರೂ ಕಾಲು ಶತಮಾನದ ಹಿಂದಿನವರೆಗೂ ಕೊಂಕಣ ಭಾಗದಲ್ಲಿ ಟ್ರೇನು ಚುಕುಬುಕು ರೈಲಿನ ಹಾಡುಗಳಲ್ಲಿ ಮಾತ್ರ ಹಾದುಹೋಗುತ್ತಿತ್ತು. ಇಲ್ಲಿಯ ಪಶ್ಚಿಮ ಘಟ್ಟಗಳ ದುರ್ಗಮ ಪರ್ವತ ಶ್ರೇಣಿ. ಪ್ರಪಾತದಲ್ಲಿರುವ ಕಣಿವೆಗಳು, ನೂರಾರು ಹಳ್ಳ ನದಿಗಳು, ಭೋರ್ಗೆರೆಯುವ ಮಳೆ, ಮಣ್ಣಿನ ಕುಸಿತ-ಇವೆಲ್ಲವನ್ನೂ ಮೀರಿ ಕೊಂಕಣರೈಲು ಕಾರ್ಯಸಾಧ್ಯವಾಗಿದ್ದು ಒಂದು ವಿಸ್ಮಯವೇ ಸರಿ!

ಹಲವಾರು ಪ್ರಾಕೃತಿಕ ಮತ್ತು ಸಾಮಾಜಿಕ ಅಡೆತಡೆಗಳ ನಡುವೆಯೂ ಸಾವಿರಾರು ಸೇತುವೆಗಳು ನೂರಾರು ಸುರಂಗಗಳಿರುವ ಸುಮಾರು ಎಂಟು ನೂರು ಕಿಲೋಮೀಟರ್ ಉದ್ದದ ರೇಲ್ವೇ ಲೈನ್ ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಿತಗೊಂಡಿದ್ದು ಮನುಷ್ಯನ ಮತ್ತು ರಾಜಕೀಯ ಇಚ್ಛಾಶಕ್ತಿಯ ದ್ಯೋತಕವಾಗಿ ಕಾಣುತ್ತಿದೆ.

ತಮಗಿರುವ ಸ್ವಲ್ಪ ಭೂಮಿಯನ್ನೂ ತ್ಯಾಗ ಮಾಡಿದ ಜನರು, ಯುದ್ಧೋಪಾದಿಯಲ್ಲಿ ಕಾರ್ಯವೆಸಗಿದ ಸಾವಿರಾರು ಕೆಲಸಗಾರರು- ಇಂಜಿನಿಯರುಗಳು, ಕಾರ್ಯ ಯೋಜನೆ ನೆನಗುದಿಗೆ ಬೀಳುವುದನ್ನು ತಪ್ಪಿಸಲು ಕೊಂಕಣ ರೇಲ್ವೇ ಕಾರ್ಪೊರೇಶನ್ ಲಿಮಿಟೆಡ್ ಸಂಸ್ಥೆ ಸ್ಥಾಪಿಸಲು ಕಾರಣರಾದ ಮಧು ದಂಡವತೆ ಮತ್ತು ಜಾರ್ಜ್ ಫರ್ನಾಂಡೀಸ್, ಸಂಸ್ಥೆಯ ಮುಖ್ಯಸ್ಥರಾಗಿ ಕನಸಿನ ಯೋಜನೆಯನ್ನು ಸಕಾಲದಲ್ಲಿ ಕಾರ್ಯಸಾಧ್ಯಗೊಳಿಸಿದ ಶ್ರೀಧರನ್- ಇವರೆಲ್ಲರರ ಕೊಡುಗೆಯನ್ನು ಕರಾವಳಿಗರು ಮರೆಯುವುದುಂಟೇ?

ಇಪ್ಪತೈದು ವರ್ಷಗಳ ಹಿಂದೆ ಸಹ್ಯಾದಿ ಪರ್ವತಗಳ ಮಡಿಲಲ್ಲಿ, ನೂರಾರು ಹಳ್ಳ ಕೊಳ್ಳ ನದಿಗಳ ಮೇಲೆ ಪ್ರಾರಂಭವಾದ ರೈಲು ಇಂದು ಕರಾವಳಿಗರ ಭಾವಲೋಕದ ಭಾಗವಾಗಿದೆ. ಅದರಲ್ಲೂ ಮತ್ಸ್ಯಗಂಧ ಸೂಪರ್ ಫಾಸ್ಟ್ ಅಂದರೆ ಮನೆಯಂಗಳದಲ್ಲಿ ನಿಲ್ಲಿಸಿದ ಸ್ವಂತ ವಾಹನದಷ್ಟೇ ಮಮತೆ.

ಮಂಗಳೂರಿನಿಂದ ಮುಂಬೈನ ಉಪನಗರ ಕುರ್ಲಾದಲ್ಲಿರುವ ಲೋಕಮಾನ್ಯ ತಿಲಕ್  ಟರ್ಮಿನಸ್‌ಗೆ ಮತ್ತು ಅಲ್ಲಿಂದ ಮಂಗಳೂರಿಗೆ ಸಂಚರಿಸುವ ಮತ್ಸ್ಯಗಂಧ ನಿತ್ಯವೂ ಸಾವಿರಾರು ಪ್ರಯಾಣಿಕರಿಗೆ ಸವಾರಿ ಮಾಡಿಸುತ್ತದೆ. ಮುಂಬೈ ಅಥವಾ ಮಂಗಳೂರನ್ನು ನಸುಕಿನಲ್ಲಿ ತಲುಪುವುದರಿಂದ ಕೊಂಕಣ ಭಾಗದ ಜನರಿಗೆ ಈ ಟ್ರೇನು ಹೆಚ್ಚು ಅನುಕೂಲವಾಗಿದೆ. ಹೀಗಾಗಿ ಮಳೆಗಾಲದ ಸ್ವಲ್ಪ ಸಮಯ ಬಿಟ್ಟರೆ ವರ್ಷವಿಡೀ ಫುಲ್ ಇರುತ್ತದೆ. ಊರಲ್ಲಾದ ಹಲಸಿನ ಹಣ್ಣು, ತೆಂಗಿನಕಾಯಿ, ಮಾವಿನ ಹಣ್ಣು-ಇವೆಲ್ಲವೂ ಮತ್ಸ್ಯಗಂಧ ಮೂಲಕ ಅಮ್ಚಿ ಮುಂಬೈ ತಲುಪಿದಾಗ ಅವುಗಳ ಸ್ವಾದ ಹೆಚ್ಚಾಗುತ್ತದೆ.

 

ಮತ್ಸ್ಯಗಂಧ ಪ್ರಯಾಣವು ಮಲಯಾಳಿ ತುಳು ಕನ್ನಡ ಕೊಂಕಣಿ ಮರಾಠಿ ಭಾಷೆಗಳ ಜಂಗಲ್‌ನಲ್ಲಿ ಸಫಾರಿ ಮಾಡಿದಂತೆ! ಮಂಗಳೂರಿನಲ್ಲಿ ಬ್ಯಾರಿ, ಮಲಯಾಳಂ ಮತ್ತು ತುಳು ಭಾಷೆಗಳು, ಉಡುಪಿ-ಕುಂದಾಪುರ-ಕುಮಟಾದಲ್ಲಿ ಕನ್ನಡ, ಕಾರವಾರ-ಮಡಗಾಂವನಲ್ಲಿ ಕೊಂಕಣಿ, ಸಿಂಧುದುರ್ಗ-ಕುಡಾಲ-ರತ್ನಾಗಿರಿಯಲ್ಲಿ ಮರಾಠಿ-ಹೀಗೆ ಭಾಷಾ ಭಾವೈಕ್ಯದ ಹಳಿಗಳ ಮೇಲೆ ಮತ್ಸ್ಯಗಂಧ ಚಲಿಸುತ್ತದೆ.

ಮುಂಬೈನಿಂದ ಆಗಾಗ ಊರಿಗೆ ಬರುತ್ತೇನಾದ್ದರಿಂದ ಸಹಜವಾಗಿಯೇ ಮತ್ಸ್ಯಗಂಧಿಯೇ ನನ್ನ ಸಾರಥಿಯಾಗುತ್ತಾಳೆ. ವಿಶೇಷವಾಗಿ ವಾಪಾಸಾಗುವಾಗ ಊರನ್ನು ಅಗಲುವ ಬೇಸರವಿದ್ದರೂ ಮತ್ಸ್ಯಗಂಧಿ ತನ್ನ ಮಡಿಲಲ್ಲಿ ನನ್ನನ್ನು ಸಂತೈಸುತ್ತಾ ಕರೆದೊಯ್ಯುತ್ತಾಳೆ. ಸಂಜೆಯ ಇಳಿಬಿಸಿಲಲ್ಲಿ ಮತ್ತು ಸೂರ್ಯಾಸ್ತದ ನಂತರದ ಕತ್ತಲಲ್ಲಿ ಹಾದು ಹೋಗುವ ಊರಿನ ದೃಶ್ಯಗಳು ರೈಲಿನ ಕಿಟಕಿಗಳ ಫ್ರೇಮಿನಲ್ಲಿ ತೂಗುಪಟಗಳಂತೆ ಕಾಣುತ್ತವೆ.

ಒಣಗಲು ಹಾಕಿದ ಯುನಿಫಾರ್ಮ್ ಬಟ್ಟೆಗಳನ್ನು ತೆಗೆಯುತ್ತಿರುವ ಕಿಶೋರಿ, ಬಾವಿಯಿಂದ ಸೇದು ಅಬ್ಬಲಿಗೆ ಗಿಡಗಳಿಗೆ ನೀರು ಹನಿಸುತ್ತಿರುವ ಹಾಲಕ್ಕಿ ಹೆಂಗಸರು, ಮುಸ್ಸಂಜೆ ಕತ್ತಲಲ್ಲಿ ಮನೆಯಂಗಳದ ತುಳಸಿಗೆ ದೀಪ ಹಚ್ಚುತ್ತಿರುವ  ತಾಯಿ- ಇವೆಲ್ಲ ವೇಗದಲ್ಲಿ ಹಿಂದೆ ಸರಿದು ಹೋದರೂ ಭಿತ್ತಿಯಲ್ಲಿ ಅಚ್ಚಾಗುವ ಈ ಜೀವಲೋಕವೇ ನನ್ನನ್ನು ಮುಂಬೈವರೆಗೂ ಪೊರೆಯುತ್ತದೆ.

ಹಗಲು ದೊಡ್ಡದಿರುವ ಸೀಸನ್ನಿನಲ್ಲಿ ಸೂರ್ಯಾಸ್ತದ ವೇಳೆಗೆ ಕಾಳಿ ದಾಟುವುದು ಮನಮೋಹಕವಾಗಿರುತ್ತದೆ. ಸಮುದ್ರ ಸೇರುವಲ್ಲಿ ವಿಶಾಲವಾಗಿರುವ ನದಿ, ನೀಲಿ ಆಕಾಶ, ಅಲ್ಲಲ್ಲಿ ಕಾಂಡ್ಲಾ ಗಿಡಗಳಿರುವ ಚಿಕ್ಕ ಚಿಕ್ಕ ದ್ವೀಪಗಳು, ದೂರದಲ್ಲಿ ಗೋಚರಿಸುವ ದೇವಭಾಗ, ನದಿಗೆ ಎದೆ ಉಜ್ಜುತ್ತಾ ಸಾಗುವ ಸಾಲು ಬೆಳ್ಳಕ್ಕಿಗಳು- ಇಂಥ ನಿಸರ್ಗ ಸೌಂದರ್ಯವನ್ನು ಮತ್ಸ್ಯಗಂಧ ಮೇಲಿಂದಲೇ  ಕಣ್ತುಂಬಿಕೊಳ್ಳಬಹುದು. ನಸೀಬಿದ್ದರೆ ಕಾಳಿ ದಾಟುವಾಗ ಸೂರ್ಯಾಸ್ತ ಮತ್ತು ಚಂದ್ರೋದಯಗಳನ್ನು ಏಕಕಾಲದಲ್ಲಿ ಕಾಣುವ ಅಪರೂಪದ ಪುಣ್ಯ ಸಂದರ್ಭಗಳೂ ಸಿಗುತ್ತವೆ!

ಮುಂಬೈನಿಂದ ಮಂಗಳೂರಿನತ್ತ ಬರುವಾಗ ಮತ್ಸ್ಯಗಂಧ ನಸುಕಿನಲ್ಲಿ ಎರಡು ಗಂಟೆಗೆ  ಕಾಳಿನದಿಯನ್ನು ದಾಟುತ್ತಾಳೆ. ಮುಂದಿನ ಅಂಕೋಲೆಯಲ್ಲೋ ಅಥವಾ ಕುಮಟೆಯಲ್ಲೋ ಇಳಿಯಬೇಕಾದ ನಾನು ಎಂದೂ ಅಲಾರಾಂ ಇಡುವ ಪ್ರಸಂಗ ಬರುವುದಿಲ್ಲ. ಮತ್ಸ್ಯಗಂಧಿ ಕಾಳಿನದಿ ದಾಟುವ ಸಮಯದಲ್ಲಿ ಧ್ವನಿತರಂಗದಲ್ಲಾಗುವ ಬದಲಾವಣೆಯೇ ನನ್ನನ್ನು ಮೆಲ್ಲನೆ ಎಬ್ಬಿಸುತ್ತದೆ. ಹಲವಾರು ಸುರಂಗಗಳಲ್ಲಿ, ಪರ್ವತ ಸಾಲುಗಳಲ್ಲಿಯ ಗಡಗಡ ಶಬ್ದವು ಕಾಳಿನದಿಯ ವಿಸ್ತಾರದಲ್ಲಿ ವಿಲೀನವಾಗಿ ಸಂಗೀತದ ಲಯದಲ್ಲಿ ಬದಲಾಗುತ್ತದೆ. ನದಿಯಿಂದ ಬೀಸುವ ತಂಗಾಳಿ ಟ್ರೇನಿನೊಳಗೆ ಸುಳಿದಾಡಿ ನಿಮ್ಮೂರು ಬಂತು ಏಳು ಎಂದು ಹೇಳಿದಂತಾಗುತ್ತದೆ; ತಾಯಿಯೊಬ್ಬಳು ಶಾಲೆಗೆ ಹೋಗಬೇಕಾದ ಕಂದನನ್ನು ನಸುಕಿನಲ್ಲಿ ಎಬ್ಬಿಸುವಂತೆ!

 

ಮಂಗಳೂರಿನಿಂದ ಹೊರಡುವ ಮತ್ಸ್ಯಗಂಧ ಮಡಗಾಂವ್ ಸ್ಟೇಶನ್ ತಲುಪಿದಾಗ ಮೋಟರಮನ್, ಟಿಸಿಗಳು  ಬದಲಾಗುವುದರಿಂದ ಅಲ್ಲಿ ಹತ್ತು ನಿಮಿಷ ನಿಲ್ಲುತ್ತದೆ. ಒಮ್ಮೆ ಮುಂಬೈಗೆ ಬರುವಾಗ ಎದುರಿಗಿದ್ದ ಒಬ್ಬ ಅಜೀಬ್ ವ್ಯಕ್ತಿ ಮಡಗಾಂವ ಸ್ಟೇಶನ್ನು ತಲುಪಿತೋ ಇಲ್ಲವೋ ಚಂಗನೆ ಕೆಳಗೆ ಹಾರಿ ಫ್ಲ್ಯಾಟಫಾರ್ಮಿನಲ್ಲಿ ಓಡುತ್ತಾ ಓವರ್ ಬ್ರಿಜ್ಜು ಹತ್ತಿ ಓಡತೊಡಗಿದ.

ಅವನ ಸೀಟಿನಡಿ ಅಸ್ತವ್ಯಸ್ತ ಲಗ್ಗೇಜ್ ಅಲ್ಲೇ ಇತ್ತು. ಟ್ರೇನು ಹೊರಟರೂ ಇವನ ಪತ್ತೆಯಿಲ್ಲ. ಮುಂಬೈ ಲೋಕಲ್ಲುಗಳಲ್ಲಿ “ವಾರಸುದಾರರಿಲ್ಲದ, ಸಂಶಯಾಸ್ಪದ ಲಗ್ಗೇಜುಗಳನ್ನು ಮುಟ್ಟದಿರಿ. ಅದರಲ್ಲಿ ವಿಸ್ಪೋಟಕ ವಸ್ತುಗಳಿರಬಹುದು” ಎಂದು ಬಿತ್ತರವಾಗುವ ಚಿತಾವಣಿ ಸಂದೇಶಗಳನ್ನು ಕೇಳಿಕೇಳಿ ನನಗೆ ಈ ಮಹಾಶಯ ಬಿಟ್ಟೋಡಿದ ಲಗೇಜಲ್ಲೂ ಬಾಂಬಿರಬಹುದೇ ಎಂಬ ಸಂದೇಹ!

ನಾನು ಚಡಪಡಿಸುತ್ತಿದ್ದಂತೆಯೇ ಯಾವುದೋ ಬೋಗಿ ಹತ್ತಿಕೊಂಡಿದ್ದ ಆ ಪುಣ್ಯಾತ್ಮ ತೂಗಾಡುತ್ತ ತಲುಪಿದ.  ಬ್ರಿಜ್ಜಿನ ಆ ತುದಿಯಲ್ಲಿರುವ ಬಾರ್‌ನಲ್ಲಿ ಕ್ವಾರ್ಟರ್ ಫೆನ್ನಿ ಕುಡಿದು ಬಂದಿದ್ದ. ಹೊಟ್ಟೆಯಲ್ಲಿದ್ದ  ಪರಮಾತ್ಮನ ಪ್ರತಾಪದಿಂದ ರತ್ನಾಗಿರಿ ವರೆಗೂ ಅದೆಷ್ಟು ತಲೆ ತಿಂದು ಹಾಕಿದನೆಂದರೆ, ಅವನ ಲಗ್ಗೇಜಿನಿಂದ ನಿಜವಾದ ಬಾಂಬ್ ಸ್ಪೋಟವಾಗಬಾರದೇ ಎನಿಸುವಷ್ಟು!

ಮುಂಬೈಗೆ ಹೋಗುವಾಗ ಅರವತ್ತು ಎಪ್ಪತ್ತರ ಪ್ರಾಯದ ಅಪರಿಚಿತ ದಂಪತಿಗಳು ನನಗೆ ಮೂರು ತಿಂಗಳಿಗೊಮ್ಮೆಯಾದರೂ ಸಿಗುತ್ತಿದ್ದರು. ಉಡುಪಿಯಲ್ಲೋ ಮುರುಡೇಶ್ವರದಲ್ಲೋ ಹೊನ್ನಾವರದಲ್ಲೋ ಹತ್ತಿರಬಹುದಾದ ಅವರು ನನ್ನ ಬೋಗಿಯಲ್ಲಿ ಇದ್ದಾರೆಂದರೆ ಅದೇನೋ ದಿವ್ಯಶಾಂತಿ ನೆಲೆಸಿರುವಂತೆ ಅನಿಸುತ್ತಿತ್ತು. ಮುಖದಲ್ಲಿ ಮಂದಹಾಸವನ್ನು ಬೀರುತ್ತಾ ಮಾತಿನ ಹಂಗಿಲ್ಲದೇ ಇಬ್ಬರೂ ಕೂತಿರುವುದನ್ನು ನೋಡಿದರೇ ಆನಂದವಾಗುತ್ತಿತ್ತು.

ಊಟದ ಹೊತ್ತಿನಲ್ಲಿ ಕಿತ್ತಳೆ ಮುಸಂಬಿ ಹಣ್ಣುಗಳನ್ನು ಬಿಡಿಸಿ ನಿಧಾನವಾಗಿ ಒಂದೊಂದು ಎಸಳನ್ನೂ ತೆಗೆದಿಟ್ಟು ತಿನ್ನುವಾಗ ಅನಂತ ಸಮಯವೇ ಎದುರಿಗಿದೆ ಎಂಬ ಭಾವದಲ್ಲಿರುತ್ತಿದ್ದರು. ಈಗ ಒಂದು ವರ್ಷದಿಂದ ಅವರನ್ನು ನಾನು ಮತ್ತೆ ಕಂಡಿಲ್ಲ. ಅವರಲ್ಲಿ ಏನು ಕತೆಯಿತ್ತೋ?

ಈಗಲೂ ಮತ್ಸ್ಯಗಂಧ ಹತ್ತಿದೊಡನೆ ಒಮ್ಮೆ ಎಲ್ಲಾ ಬೋಗಿಗಳನ್ನು ದಾಟುತ್ತಾ ಚಲಿಸುವ ಸಂತೆಯೊಳಗೆ ಸಂತರಂತಿದ್ದ ಅವರನ್ನು ಹುಡುಕಾಡುತ್ತೇನೆ!

1 Response

  1. No name says:

    ಯಾರಿಗೂ ತೀರಾ ಆತ್ಮೀಯವಾಗಬಲ್ಲ ಬರಹ.

Leave a Reply

%d bloggers like this: