ಬೆಂಗಳೂರಿನ ಜೀವನವೆಂದರೆ ಯಾವತ್ತಿಗೂ ಸಣ್ಣ ತಿರಸ್ಕಾರ ನಂಗೆ!

ಬೆಂಗಳೂರಿನ ಜೀವನವೆಂದರೆ ಯಾವತ್ತಿಗೂ ಸಣ್ಣ ತಿರಸ್ಕಾರ ನಂಗೆ! ಯಾರಾದರೂ  ಈ ಊರನ್ನ ಹೊಗಳಿದರೂ , ತಿರುಗಿಸಿ ಹೇಳದೇ ಬಿಟ್ಟಿದ್ದೇ ಇಲ್ಲ. ಗುಡ್ಡ, ಬೆಟ್ಟ, ಪುಸ್ತಕ ಅಂತೆಲ್ಲಾ ದಿನಗಟ್ಟಲೇ ಅಲೆದರೂ ಇನಿತೂ ಬೇಜಾರಾಗದ ನಂಗೆ, ಬೆಂಗಳೂರಿನ ಜೀವನ ಯಾವತ್ತಿಗೂ ಉಸಿರುಕಟ್ಟಿಸುವಂಥದ್ದೇ.. ಹೀಗೆಲ್ಲಾ ಅನಿಸೋದು ಪೂರ್ವಾಗ್ರಹಪೀಡಿತ ಯೋಚನೆಗಳ ಫಲ ಅಂತ ಆಗಾಗ ಅನಿಸೋದುಂಟು.

ಇದ್ದಿದ್ದರಲ್ಲಿ ಇಷ್ಟವಾಗೋದು south bangalore! ಅಕ್ಕ ತೀರಾ ಬೇಗನೇ ಬೆಂಗಳೂರಿಗೆ ಬಂದು ಇಲ್ಲಿನ ಜೀವನವನ್ನ, ಜನರನ್ನ ತನ್ನದಾಗಿಸಿಕೊಂಡವಳು. ಕೆಲಸ ಸಿಕ್ಕ ಒಂದಷ್ಟು ವರ್ಷಗಳ ನಂತರ ಪಿ.ಜಿ ಊಟಕ್ಕೆ, ವಿಚಿತ್ರ ಕಟ್ಟುಪಾಡುಗಳಿಗೆ ರೋಸಿ ಹೋಗಿ, ತನ್ನದೇ ಸ್ವಂತ ಮನೆ ಮಾಡಿಕೊಂಡವಳು. ಮೂರನೇ ಮಹಡಿಯ, ಪಕ್ಕದಲ್ಲೇ ಟೆರೇಸ್ ಇದ್ದ ಅದ್ಭುತವಾದ ಮನೆಯದು. ಸಂಜೆಗೆ ಸುಮ್ಮನೇ ಕೂತರೆ ತಣ್ಣಗಿದ್ದೊಂದು ಏಕಾಂತ ಮೈ ಮನಸ್ಸನ್ನ ಆವರಿಸಿಕೊಳ್ಳುತ್ತಿತ್ತು..

ಬೆಂಗಳೂರಿನಲ್ಲಿ ಮನೆಯೆಷ್ಟು ಮುಖ್ಯವೋ ಮನೆಯೊಡೆಯರೂ ಅಷ್ಟೇ ಮುಖ್ಯ. ಆ ಓನರ್, ಮುಂದಿನ ಮನೆಯಲ್ಲಿ ತಾವಿದ್ದುಕೊಂಡು ಮನೆಯ outhouse ನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಅಕ್ಕ-ಭಾವ ಸುಮಾರು ಒಂದೂವರೆ ವರ್ಷ ಆ ಮನೆಯಲ್ಲಿದ್ದಿದ್ದರಿಂದ, ನಂಗೆ ಓನರ್ ಪರಿಚಿತರು.

೭೫ ವರ್ಷದ ಅವರನ್ನ ಅಂಕಲ್ ಎಂದು ಕರೆಯುತ್ತಿದ್ದುದು ನನ್ನ ಗಂಡನಿಗೂ ಮೊದಲೆರಡು ದಿನ ಆಶ್ಚರ್ಯಕರ ವಿಷಯವೇ ಆಗಿತ್ತಂತೆ. ಅಂಕಲ್ ಅಮ್ಮನನ್ನು ನೋಡುವ ತನಕ.. ಅವರಮ್ಮ ೯೪ ರ ಹರೆಯದ ಯುವತಿ. ಜೀವನಪ್ರೀತಿಯಲ್ಲಿ, ಉತ್ಸಾಹದಲ್ಲಿ ಅಕ್ಷರಶಃ ಆ ತಾಯಿ ಯುವತಿಯೇ.. ನಾ ಜೀವನದಲ್ಲಿ ಕಳೆದುಕೊಂಡ ಹಾಗೂ ಬೇಕಿತ್ತು ಎಂದೆನಿಸುವ ಏಕೈಕ ಪ್ರೀತಿ ಅಜ್ಜ-ಅಜ್ಜಿಯರದ್ದು. ಅದೇ ಕಾರಣವೋ ಏನೋ ಈ ಅಜ್ಜಿಯ ಮೇಲೆ ಇನ್ನಷ್ಟು ಕಕ್ಕುಲಾತಿ ಮೂಡಿದ್ದು ನಂಗೆ.

ಆಗಷ್ಟೇ ಮದುವೆಯಾದ ಹೊಸತು! ಯಾವುದೋ ಭ್ರಮಾಲೋಕದಲ್ಲಿ ತೇಲುತ್ತಿದ್ದವಳನ್ನ ಧುತ್ತೆಂದು ತಂದು ವಾಸ್ತವಕ್ಕೆ ದೂಡಿದಂತಾಗಿತ್ತು.. ಅಡಿಗೆ ಮನೆಗಂತೂ ಕಾಲಿಟ್ಟೇ ಗೊತ್ತಿಲ್ಲದ, ಬೇಳೆಗಳ ನಡುವೆ ಗೊಂದಲ ಹೋಗಲಿ; ಬೇಳೆಗಳ ಹೆಸರೇ ಗೊತ್ತಿಲ್ಲದ , ಇವತ್ತಿಗೂ ಕೆಲವೊಂದು ಸೊಪ್ಪುಗಳನ್ನು ಗುರುತಿಸಲು ಹೆಣಗಾಡುವ ಪರಿಣಿತೆ ನಾನು. ಈ ಮನೆಗೆ ಬಂದ ದಿನ ಕೇಳಿದ್ದರು ಅಜ್ಜಿ ‘ಅಡಿಗೆ ಮಾಡಕ್ ಬರುತ್ತೇನಮ್ಮಾ ನಿಂಗೆ?’ ಅಂತ. ಅಡ್ಡಡ್ಡ ಉದ್ದುದ್ದ ಗೋಣಾಡಿಸಿದ್ದೆ ನಾ. ‘ಎಲ್ರೂ ಹಂಗೇ ಕಲಿಯದು ಕಣೇ ಇವ್ಳೇ, ಮದುವೆಯಾದಾಗ ೧೫ ವರ್ಷ ನಂಗೆ. ನಿನ್ನ ಹಾಗೇ ಏನೂ ಬರ್ತಿರ್ಲಿಲ್ಲ .. ಮಾಡ್ತಿಯಾ ಹೋಗು ‘ ಅಂತ ಹುರುಪು ತುಂಬಿದ್ದು ಇವರೇ.

ಅವತ್ತಿನಿಂದ ಇವತ್ತಿನ ತನಕ ಪ್ರತಿ ದಿನವೂ ನಾ ಮಾಡೋ ಅಡಿಗೆ-ತಿಂಡಿಗಳ ಲಿಸ್ಟ್‌ ಕೇಳಿದ್ದಾರೆ ಹಾಗೂ ಶ್ರದ್ಧೆಯಿಂದ ಕೊಟ್ಟಿದ್ದೇನೆ ಎಂಬ ಹೆಮ್ಮೆ ನನ್ನ ಪಾಲಿನದ್ದು. ಅಂಕಲ್ ವಾಕಿಂಗ್ ಹೋದಾಗೆಲ್ಲಾ ‘ಇವ್ಳೇ ಒಂದಷ್ಟು ಹೊತ್ತು ಬಂದು ನಮ್ಮನೇಲ್ ಕೂತ್ಕೋ.. ನನ್ ಮಗ ಬರೋ ತನಕ’ ಅನ್ನೋ ಅಜ್ಜಿಗೆ, ೬ ಗಂಟೆಗೆ ಬರುತ್ತೇನೆಂದ ಮಗ ೬-೦೫ ಆದರೂ ಬರಲಿಲ್ಲವಾದರೆ ಗಾಬರಿ ಶುರುವಾಗಿಬಿಡುತ್ತದೆ. ೬-೧೦ಕ್ಕೆಲ್ಲ‍ಾ ‘ಒಂದ್ಚೂರು ಫೋನ್ ಮಾಡ್ತ್ಯೇನೇಮ್ಮಾ’ ಅಂತ ಕೇಳಲು ಶುರು ಮಾಡಿಬಿಡುತ್ತಾರೆ. ಮನೆಯ ವರಾಂಡಾದಲ್ಲಿ ಕೂತು ಸುಮ್ಮನೇ ರೋಡು ದಿಟ್ಟಿಸೋ ಆ ಹಿರಿಯ ಜೀವಗಳಿಗೆ ಅದೇನು ಕಾಣಿಸುತ್ತದೋ ನಂಗೊತ್ತಿಲ್ಲ..

ಅಪರೂಪಕ್ಕೊಮ್ಮೆ ಹುಷಾರಿಲ್ಲ ಎಂದಾಗ ಮಾತ್ರ ‘ಇಷ್ಟೆಲ್ಲಾ ವಯಸ್ಸಾದ್ಮೇಲೆ ಬದುಕಿರಬಾರ್ದು ಕಣೇಮ್ಮಾ.. ನಾವಿಬ್ರೇ ವಯಸ್ಸಾದೋರು ಇರೋಕೆ ಬೇಜಾರು’ ಅಂತಾರೆಯೇ ಹೊರತು ಸುತಾರಾಂ ಮೊಮ್ಮಕ್ಕಳ ಮನೆಗೆ ಹೋಗೋಕೆ ಒಪ್ಪೋಲ್ಲ. ‘ಅವರವರ ಗಂಡ – ಮಕ್ಕಳು ಸಂಸಾರ ಅಂತಿರುತ್ತೇ, ನಾವ್ ಹಾಗೆಲ್ಲಾ ಹೋಗಿ ತೊಂದ್ರೆ ಕೊಡಬಾರರ್ದು.. ಪರಾವಲಂಬನೆ ಕಷ್ಟ’ ಅನ್ನೋ ಅವರ ಮಾತುಗಳೆಲ್ಲಾ ಬದುಕ ಪಾಠ ನಂಗೆ.. ಭೂತಾನ್ ಗೆ ಹೋಗ್ತಿದೀನಿ ಬರ್ತೀರಾ ನನ್ ಜೊತೆ ಅಂದ್ರೆ, ‘ಬುದ್ಧಿಗಳ ದೇಶ ಅಲ್ವಾ ಅದು.. ಇನ್ನೊಂದು ಹತ್ತು ವರ್ಷ ಮುಂಚೆ ಕರ್ದಿದ್ರೆ ಬಂದುಬಿಡ್ತಿದ್ದೆ ಇವ್ಳೇ.. ಈಗ ತಿಂದಿದ್ದು ಜೀರ್ಣ ಆಗೋದು ಕಷ್ಟ ನೋಡು, ಅಷ್ಟು ದೂರ ಬರೋಕೆ ಹೆದ್ರಿಕೆ ‘ ಎಂಬ ಮಾತುಗಳ ಹಿಂದಿನ ಜೀವನ ಸ್ಪೂರ್ತಿ ನನ್ನ ಇಡೀ ಜನ್ಮಕ್ಕೆ ಸಾಕು.

‘ಅಜ್ಜೀ.. ನಿಮ್ಮ ಸೊಸೆ ಜೊತೆ ಜಗಳ ಆಡ್ತಿರ್ಲಿಲ್ವಾ ನೀವು?’ ಅನ್ನುವುದರಿಂದ ಹಿಡಿದು ‘ಆ ಕಾಲದಲ್ಲೇ ಫ್ಯಾಮಿಲಿ ಪ್ಲಾನಿಂಗ್ ಮಾಡಿದ್ರಾ? ಅದ್ ಹೆಂಗ್ ಒಬ್ನೇ ಮಗ ನಿಮ್ಗೆ?’ ಅನ್ನೋ ನನ್ನೆಲ್ಲಾ ಉದ್ಧಟತನದ ಪ್ರಶ್ನೆಗಳಿಗೂ ಅಷ್ಟೇ ಸಾವಧಾನದಿಂದ ಉತ್ತರಿಸುತ್ತಾರೆ. ‘ಜೀವನ ಅಂದ್ರೇ ಅಷ್ಟೇ ಕಣೇಮ್ಮಾ.. ಮೇಲ್ ಹೋಗತ್ತೆ, ಕೆಳಗ್ ಇಳಿಯತ್ತೆ! ಎಲ್ಲದನ್ನೂ ಸಹಿಸ್ಕೋಬೇಕು… ಸೊಸೆ ಜಗಳ ಆಡ್ತಿದ್ಲು, ಆಮೇಲೆ ಅವ್ಳೇ ಕಾಫಿ ಕೊಡ್ಲಾ ಅಂತ ಕೇಳ್ಕೊಂಡು ಬರ್ತಿದ್ಲು. ಹೀಗೇ ನಾನು ನೀನು ಮಾತಾಡ್ತಾ ಕೂತ ಹೊತ್ತಲ್ಲೇ ,  ನೋಡ್ತಾ ನೋಡ್ತಾನೇ ಹೋಗ್ಬಿಟ್ಳು.

ಇದ್ದಿದ್ರೆ ನನ್ನ ನೋಡ್ಕೋತಿದ್ಲು ಇವಾಗ.’ ಅದ್ಯಾವುದೋ ವಿಷಾದ ಆವರಿಸಿದರೂ ತೋರಿಸದಿರೋ ಅವರ ಗಟ್ಟಿತನ ಯಾವತ್ತಿಗೂ ಆಶ್ಚರ್ಯವೇ. ‘ಆತ್ಮಕಥೆ ಬರೀಲಾ ನಿಮ್ದೊಂದು?’ ಅಂದ್ರೆ ‘ಅಯ್ಯೋ.. ನಂದ್ ಬರ್ದು ಏನ್ ಮಾಡ್ತ್ಯಾ  ಸುಮ್ನಿರು’ ಅಂತಂದು ಮುಗುಳ್ನಗುತ್ತಾರೆ.

‘೧೯೬೫ರಲ್ಲಿ ಕಟ್ಟಿದ್ದು ನೀವಿರೋ ಮನೆ..  ಆಗ ಬಸವನಗುಡಿ ಹತ್ತಿರ ಬಾಡಿಗೆ ಮನೇಲಿದ್ವಿ ನಾವು. ಅಲ್ಲಿಂದ ನಡ್ಕೊಂಡ್ ಬರ್ತಿದ್ನೇಮಾ ಇಲ್ಲಿಗೆ. ಯಾವ್ದೋ ಹೊತ್ತಿಗೊಂದು ಬಸ್ ಇರೋದು. ಈಗಿನ ಹಾಗೆಲ್ಲಾ ಬೆಂಗ್ಳೂರು ಇರ್ಲಿಲ್ಲ ಇವ್ಳೇ.. ಪೂರ್ತಿ ಗದ್ದೆ ತರ ಇದ್ದಿದ್ ಜಾಗ ಇದು.. ಇಲ್ಲಿ ನಿಂತ್ಕೊಂಡ್ರೇ ಕೆಂಗೇರಿ ಕಾಣೋದು ಆಗ. ಈಗ ಬದ್ಲಾಗ್ಬಿಟ್ಟಿದೆ ಬಿಡು..’ ಅವರ ಬಾಯಲ್ಲಿ ಸುಮಾರು ೭೫-೮೦ ವರ್ಷ ಹಿಂದಿನ ಬೆಂಗಳೂರಿನ ವರ್ಣನೆ ಕೇಳೋದೊಂದು ಪರಮಸುಖ.

ಈಗ ಊರಿಗ್ ಹೊರಡ್ತೀನಿ ಅಂತಲೋ, ವೈಟ್ ಫೀಲ್ಡ್ ಬಳಿಯಿರುವ ಅಕ್ಕನ ಮನೆಗ್ ಹೋಗ್ತೀನಿ ಅಂತಲೋ ಅಂದರೆ ‘ಮೆಟ್ರೋದಲ್ಲಿ ಹೋಗಮ್ಮಾ.. ಸುಲಭ ಆಗತ್ತೆ. ಬಸ್ಸಲ್ಲೆಲ್ಲಾ ಹೋದ್ರೆ ಟ್ರಾಫಿಕ್ ಜಾಸ್ತಿ’ ಅಂತ ಅಡ್ವೈಸ್ ಕೊಡೋಷ್ಟು Updated ನಮ್ಮಜ್ಜಿ.

ಪ್ರತಿದಿನ ಪೇಪರ್ ಓದುವ ಅಜ್ಜಿಯ ಸಾಮಾನ್ಯ ಜ್ಞಾನದ ಮುಂದೆ ತಾರೀಖು , ದಿನಾಂಕ ನೆನಪಿರದ ನಾನು ಸೊನ್ನೆಯಷ್ಟೇ! ರಾಜಕೀಯವಾಗಲಿ, ವಿಜ್ಞಾನವಾಗಲೀ ಅಜ್ಜಿ ಯಾವಾಗಲೂ ಒಂದು ಕೈ ಮುಂದೆ. ‘ನಾ ಹೇಳ್ತಾನೇ ಇದೀನಿ ಕಣೇ ಇವ್ಳೇ.. ಒಂದು ಹೊಸಾ ಮೊಬೈಲ್ ತಗೋ ಅಂತ. ಮನಸೇ ಮಾಡ್ತಿಲ್ಲಾ ಇವ್ನು’ ಅಂತೆಲ್ಲಾ ಅಂಕಲ್ ಗೆ ಹೇಳುವಾಗ android ಬಿಟ್ಟು Nokia ಹಳೇ ಮಾಡೆಲ್ ಇಟ್ಕೋತೀನಿ ಅನ್ನೋ ನನ್ನ ಆಸೆಯನ್ನ ಕೈ ಬಿಟ್ಟಿದ್ದೇನೆ ನಾನು.

ಸಂಫು ಕ್ಲೀನ್ ಮಾಡಲು ಬಂದು ಹೇಳಿದ್ದಕ್ಕಿಂತ ಜಾಸ್ತಿ ದುಡ್ಡು ಕೇಳಿ ಮೋಸ ಮಾಡಲೆತ್ನಿಸಿದ ಮನುಷ್ಯನಿಗೆ ಮಾತಲ್ಲಿಯೇ ಚಾಟಿಯ ರುಚಿ ತೋರಿ ಕಳಿಸೋ ಅವರು ಈ ಹೊತ್ತಿಗೂ ಆದರ್ಶ. ಬಾಲ್ಯದ ಬಗ್ಗೆ ಹೇಳಿ ಅಂದ್ರೆ ಅದೇನು ಇಂಟರಸ್ಟಿಂಗ್ ಅಲ್ಲ ಅನ್ನೋ ಹಾಗೆ ಸರಿಸಿಬಿಡೋ ಅಜ್ಜಿಗೆ ಹಠವಾದೀ ಮೊಮ್ಮಗಳ ಕಥೆಗಳನ್ನ, ಮರಿಮಕ್ಕಳ ಚೇಷ್ಟೆಗಳನ್ನ ಹೇಳುವುದೆಂದರೆ ಎಲ್ಲಿಲ್ಲದ ಖುಷಿ .

ನನ್ನ ಅದೆಷ್ಟೋ ಸಂಜೆಗಳನ್ನು ನನ್ನೊಪ್ಪಿಗೆಯೇ ಇಲ್ಲದೆ ಅವರದ್ದಾಗಿಸಿಕೊಂಡಿದ್ದಾರೆ. ಎದುರಾಡುವ ಯಾವುದೇ ಉಸಿರಿಲ್ಲದೆ ಒಪ್ಪಿಕೊಂಡಿದ್ದೇನೆ ನಾನು. ಈಗೀಗಂತೂ ಅವರ ಮನೆಯ ಇತಿಹಾಸ, ವರ್ತಮಾನ ಹಾಗೂ ಅಲ್ಪಸ್ವಲ್ಪ ಭವಿಷ್ಯ , ಎಲ್ಲವೂ ನಮ್ಮನೆಯಷ್ಟೇ ಪರಿಚಿತ ನಂಗೆ. ಇಷ್ಟೆಲ್ಲಾ ಪ್ರೀತಿ, ಸಲುಗೆಯಿದ್ದರೂ ತಾರೀಖು ೫ ಆಗಿ, ನನ್ನ ಗಂಡನಿಗೆ ಅಕಸ್ಮಾತ್ ಬಾಡಿಗೆ ಕೊಡುವುದು ಮರೆತು ಹೋಗಿ ಬಿಟ್ಟಿದ್ದರೆ ಸುಮ್ಮನೇ ನನ್ನ ಕರೆದು ‘ನಿಮ್ಮೆಜಮಾನ್ರಿಗೆ ಇವತ್ತು ತಾರೀಖು ೫ ಅಂತ ನೆನಪು ಮಾಡಮ್ಮಾ.. ‘ ಎಂಬ ಖಡಕ್ ವ್ಯಕ್ತಿತ್ವದ ಬಗ್ಗೆ ಹೇಳಿದಷ್ಟೂ ಮುಗಿಯದಷ್ಟಿದೆ.

‘ಅಪ್ಪನಿಗೆ ಹುಷಾರಿಲ್ಲ , ಮನೆಗೆ ಹೋಗಿ ಬರ್ತೀನಿ ಒಂದಷ್ಟು ದಿನ.. ‘ ಅಂತ ಹೊರಟರೆ ‘ಬೇಗ ಬಂದ್ಬಿಡು ಇವ್ಳೇ.. ನಮ್ನೂ ನೋಡ್ಕೋಬೇಕಲ್ಲ ನೀನು. ಬೇಜಾರಾಗತ್ತೆ ನಮ್ಮಿಬ್ರಿಗೇ’ ಅಂತನ್ನೋ ಅಜ್ಜಿಯದ್ದು ಯಾವುದೋ ಜನ್ಮದ ಋಣ ನನ್ನ ಪಾಲಿಗೆ. ‘ಸಾಕಾಯ್ತಮ್ಮಾ ಜೀವನ.. ಕರ್ಕೊಂಡ್ ಬಿಡ್ಲಿ ಭಗವಂತ’ ಅಂತವರಂದ್ರೆ ‘ನನ್ನ ಮಕ್ಳನ್ನ ನೋಡೋದಿಲ್ವ‍ಾ ನೀವು? ಇಷ್ಟು ಬೇಗ ಹೋಗಿ ಏನ್ ಮಾಡ್ತೀರ? ಇನ್ನೊಂದಿಷ್ಟ್  ದಿನ ಇರಿ ನಮ್ ಜೊತೆನೇ..’ ಅನ್ನೋಷ್ಟು ಸಲಿಗೆ ಸಾಕು ಈ ಜೀವನಕ್ಕೆ. ಅವರ ಹುಮ್ಮಸ್ಸು , ಉತ್ಸಾಹ , ಬದುಕ ಪ್ರೀತಿಸಿ-ಪೊರೆದ ಬಗೆ ಮಾದರಿಯಾಗಲಿ ನಮಗೆ.

5 Responses

 1. Narasimha Murthy says:

  Interesting !!!!

 2. R. S. Nayak, Bhatkal says:

  ತುಂಬಾ ಚೆನ್ನಾಗಿದೆ. ಎದುರಿಗೇ ಕುಳಿತು ಮಾತನಾಡಿದಂತಹ ಬರವಣಿಗೆ.

 3. Chi na hally kirana says:

  nimma e lekhana , nanna ajjiya todemele kuntu kathe kelutidannu nenapisitu…
  ajjiya photo eddare share maadi..Dhanyavaadagalu

 4. Savitha K V says:

  ಚೆನ್ನಾಗಿದೆ

 5. Sandhya says:

  ಅಜ್ಜಿ ಕಣ್ಣ ಮುಂದೆ ಬಂದಂತ ಅನುಭವ ಆಯ್ತು…

Leave a Reply

%d bloggers like this: