ಕೆಂಪು ಚಂದ್ರನ್ನ ನೋಡದಿದ್ರ ನನಗ ಗ್ರಹಣ ಹಿಡೀತೈತಿ..

 

 

 

 

ಸಿದ್ಧರಾಮ ಕೂಡ್ಲಿಗಿ

 

 

 

” ಪೂರ್ಣ ಚಂದ್ರಗ್ರಹಣವನ್ನು ಬೆಟ್ಟದ ಮೇಲೆ ಹತ್ತಿ ಕ್ಲಿಕ್ಕಿಸಬೇಕೆಂಬ ಆಸೆಯನ್ನು ಹೊತ್ತು ಸಂಜೆ ಸಿದ್ಧನಾದೆ. ನನ್ನ ಮನೆಯಾಕೆ ’ನಾನೂ ಬರುತ್ತೇನೆಂದಳು’.

’ಗ್ರಹಣ ನೋಡಬಾರ್ದಲ್ಲ’ ಎಂದು ಕಾಲೆಳೆದೆ.

‘ನೋಡದಿದ್ರ ನನಗ ಗ್ರಹಣ ಹಿಡೀತೈತಿ’ ಎಂದಳು ನಗುತ್ತ.

ಅಪರೂಪದ ಆಗಸದ ಸುಂದರ ಗ್ರಹಣವನ್ನು ನೋಡಲು ಅವಳಿಗೂ ತುಂಬಾ ಆಸೆ.

ಇಬ್ಬರೂ ಬೈಕ್ ಏರಿ ಸಿದ್ದಯ್ಯನಗುಡ್ಡಕ್ಕೆ ಹೊರಟೆವು.

ಪತ್ರಕರ್ತ ಮಿತ್ರರಾದ ಎಸ್.ಆರಾಧ್ಯ, ನಾಗರಾಜ್, ವೃಷಭೇಂದ್ರ ನಿಮ್ಮೊಂದಿಗೆ ನಾವೂ ಎಂದು ಅವರೂ ಬಂದರು.

ಎಲ್ಲರೂ ಸರಿಯಾಗಿ ೬-೩೦ಕ್ಕೆ ಬೆಟ್ಟ ಹತ್ತಿ ಕುಳಿತೆವು.

ಎಷ್ಟು ಹೊತ್ತಾದರೂ ಚಂದ್ರನ ದರ್ಶನವೇ ಇಲ್ಲ. ಇದೇನ್ರಿ ಚಂದ್ರ ಕಾಣವಲ್ನಲ ಎಂದೆ.

ಎಲ್ಲರು ಆಗಸದತ್ತಲೇ ಮುಖ ಮಾಡಿದ್ದೆವು. ಸಂಜೆ ೭-೧೫ಕ್ಕೆ ಕೆಂಪು ವರ್ಣದ ಚಂದ್ರ ಮಸುಕಾಗಿ ಗೋಚರಿಸತೊಡಗಿದ.

ನಾವಂತೂ ಉಸಿರುಬಿಗಿಹಿಡಿದು ನೋಡತೊಡಗಿದೆವು.  ರಕ್ತವರ್ಣದ ಚಂದ್ರ ಅದ್ಭುತವಾಗಿ ಕಾಣತೊಡಗಿದ್ದ.

ಪೂರ್ಣವಾಗಿ ಗ್ರಹಣ ಹಿಡಿದಾಗ ಕೆಂಪು ಚಂದ್ರನ ನೋಟವೇ ಚಂದ. ಎಲ್ಲರೂ ಕಣ್ತುಂಬ ನೋಡಿ ಖುಷಿಪಟ್ಟೆವು.

ಕೆಮರಾದಿಂದ ಕ್ಲಿಕ್ ಮಾಡತೊಡಗಿದೆವು. ಸ್ವಲ್ಪ ಹೊತ್ತಿಗೆ ಗ್ರಹಣ ಬಿಡುವುದು ಆರಂಭಗೊಂಡಿತು.

ಕೆಂಪು ವರ್ಣದ ಚಂದ್ರನ ತುದಿ ಸ್ವಲ್ಪ ಬಿಳುಪಾಗಿ ನಿಧಾನವಾಗಿ ಬಿಳಿ ಚಂದ್ರ ಕಾಣತೊಡಗಿದ.

ಕೆಂಪು ಹೋಗಿ ಬಿಳೀ ಚಂದ್ರನಾಗುವ ಪ್ರಕ್ರಿಯೆಯೂ ಸುಂದರವಾಗಿತ್ತು.

ಬೆಟ್ಟವೆಲ್ಲ ಚಂದ್ರನ ಬೆಳ್ಳನೆ ಬೆಳಕಲ್ಲಿ ತೋಯತೊಡಗಿತು.

ಚಂದ್ರ ಪೂರ್ಣವಾಗಿ ಕಾಣುವವರೆಗೂ ಕಣ್ತುಂಬ ನೋಡಿ ನಿಧಾನವಾಗಿ ಬೆಟ್ಟ ಇಳಿಯತೊಡಗಿದೆವು.

೧೫೦ ವರ್ಷದ ನಂತರ ಮತ್ತೆ ಇಲ್ಲಿ ಬಂದು ಚಂದ್ರ ಗ್ರಹಣ ನೋಡೋಣಾ’ ಎಂದೆ.

ಎಲ್ಲರೂ ನಗತೊಡಗಿದರು.

ತುಂಬ ಸುಂದರ ಅನುಭವದೊಂದಿಗೆ ಎಲ್ಲರು ಮನೆಯ ದಾರಿ ಹಿಡಿದೆವು.

ಪೂರ್ಣ ಚಂದ್ರಗ್ರಹಣಕ್ಕೆ ನಾವೂ ಹಾಗೂ ಕೆಮರ ಸಾಕ್ಷಿಯಾದೆವು.”

 

ಬೆಟ್ಟದ ಮೇಲೆ ಚಂದ್ರಗ್ರಹಣದ ಸುಂದರ ನೋಟ

Leave a Reply