ಜಾಗತಿಕ ಕಲಾ ತೋಟದಲ್ಲೀಗ ‘ತಲ್ಲೂರು ಯುಗ!’

 

 

 

 

 

ಸತೀಶ್ ಚಪ್ಪರಿಕೆ

 

 

 

ಅಮೆರಿಕಾದ ನ್ಯೂಜೆರ್ಸಿಯ ಹ್ಯಾಮಿಲ್ಟನ್‍ನಲ್ಲಿ ಜಗತ್ತಿನ ಅತಿ ದೊಡ್ಡ ಕಲಾಕೃತಿಗಳ ತೋಟವೊಂದಿದೆ. ‘ಗ್ರೌಂಡ್ ಫಾರ್ ಸ್ಕಲ್ಪ್‍ಚರ್’ (ಜಿಎಫ್‍ಎಸ್) ಎಂಬ ಹೆಸರಿನ 42 ಎಕರೆ ವಿಸ್ತೀರ್ಣದ ಆ ತೋಟದಲ್ಲಿ ಜಗತ್ತಿನ ಯಾವುದಾದರೂ ಒಬ್ಬ ಕಲಾವಿದನ ‘ಸೋಲೊ’ ಕಲಾಪ್ರದರ್ಶನ ನಡೆಯುತ್ತದೆ ಎಂದರೆ, ಆತ ಕಲಾಜಗತ್ತಿನ ಎವರೆಸ್ಟ್ ತುತ್ತತುದಿಯಲ್ಲಿ ನಿಂತಿದ್ದಾನೆ ಎಂದರ್ಥ!

ಆ ಅವಕಾಶ ಸಿಗುವುದು ಬಹಳ ಅಪರೂಪ. ಜೀವನ ಶ್ರೇಷ್ಠ ಎಂದು ಜಾಗತಿಕ ಕಲಾಜಗತ್ತಿನಲ್ಲಿ ಪರಿಗಣನೆಗೆ ಒಳಗಾಗುವ ಸಾಧನೆ ಅದು. ಅಂತಹ ಮಹಾನ್ ಸಾಧನೆ ಮಾಡಲು ಕರ್ನಾಟಕದ ಕರಾವಳಿ ತೀರದ ಒಬ್ಬ ಯುವ ಕಲಾವಿದ ಈಗ ಸಿದ್ಧರಾಗಿದ್ದಾರೆ.

ಆತ… ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ಕುಂದಾಪುರ ತಾಲ್ಲೂಕು ತಲ್ಲೂರು ಮೂಲದ ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ಒಬ್ಬರ ಮಗ, 16 ವರ್ಷ ವಯಸ್ಸಿನ ಯುವಕನೊಬ್ಬ ಮುಂಬೈನಲ್ಲಿ ಜಗದ್ವಿಖ್ಯಾತ ಕಲಾವಿದರ ಪೈಕಿ ಒಬ್ಬರಾದ ಕೆ.ಕೆ.ಹೆಬ್ಬಾರ್ ಅವರ ಮುಂದೆ ಹೋಗಿ ನಿಂತಿದ್ದ. ಇನ್ನೂ ಮೀಸೆ ಚಿಗುರದ ಆ ಹುಡುಗ ಅದುವರೆಗೆ ಸುರತ್ಕಲ್‍ನಲ್ಲಿ ಓದಿ ಹತ್ತನೇ ತರಗತಿಯಲ್ಲಿ ಉತ್ತೀರ್ಣನಾಗಿದ್ದ ಅಷ್ಟೆ. ಬಾಲ್ಯದಿಂದಲೂ ತಲೆಯಲ್ಲಿ ಕಲೆಯ ಹುಳು ಬಿಟ್ಟುಕೊಂಡಿದ್ದ ಆ ಯುವಕ ಅದಾಗಲೇ ‘ನನ್ನ ಬದುಕೇನಿದ್ದರೂ ಕಲಾಲೋಕದಲ್ಲಿ’ ಎಂದು ನಿರ್ಧರಿಸಿಯಾಗಿತ್ತು.

ಬರೋಡದ ಮಹಾರಾಜ ಸಯ್ಯಾಜಿ ರಾವ್ ವಿಶ್ವವಿದ್ಯಾಲಯದಲ್ಲಿ ಅಥವಾ ಮುಂಬೈನ ಜೆ.ಜೆ.ಆಟ್ರ್ಸ್ ಸ್ಕೂಲ್‍ನಲ್ಲಿ ಕಲಾಧ್ಯಯನ ಮಾಡುವ ಉದ್ದೇಶ ಇಟ್ಟುಕೊಂಡಿದ್ದ ಆತ ಕೆ.ಕೆ.ಹೆಬ್ಬಾರ್ ಅವರ ಬಳಿ ಶಿಫಾರಸು ಕೇಳಲು ಹೋಗಿದ್ದ.
ಎರಡೂ ಕಡೆಯಲ್ಲಿ ಶೈಕ್ಷಣ ಕ ವರ್ಷ ಆರಂಭವಾಗಿ ಅದೇಷ್ಟೋ ದಿನಗಳಾಗಿದ್ದ ಕಾರಣ, ಆತನಿಗೆ ಅಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೂ, ಮುಂಬೈನಲ್ಲಿದ್ದ ಆತ ಬರೋಡಕ್ಕೆ ರೈಲಿನಲ್ಲಿ ಹೋಗಿ ಅಲ್ಲಿನ ಕಲಾಶಾಲೆಯನ್ನು ನೋಡಲು ಹೊರಟ.

ಬರೋಡಾದಿಂದ ಮರಳಿ ಮುಂಬೈಗೆ ಬರುವ ಸಂದರ್ಭದಲ್ಲಿ ಬ್ಯಾಗು, ಬ್ಯಾಗಿನೊಳಗಿದ್ದ ಎಲ್ಲ ಶೈಕ್ಷಣ ಕ ದಾಖಲೆಗಳನ್ನು ಕಳೆದುಕೊಂಡ ಆ ಯುವಕ ಅಕ್ಷರಶಃ ದಿಕ್ಕು ತೋಚದೇ ನಿಂತಿದ್ದ. ಪೆಚ್ಚುಮೋರೆ ಹಾಕಿಕೊಂಡು ಎದುರು ನಿಂತಿದ್ದ ಆ ಯುವಕನ ಕಣ್ಣುಗಳೊಳಗೆ ಕಣ ್ಣಟ್ಟು ನೋಡಿದ್ದ ಕೆ.ಕೆ.ಹೆಬ್ಬಾರ್ ಅವರಿಗೆ ಏನೇನಿಸಿತೋ ಏನೋ, ಟೇಬಲ್ ಮೇಲಿದ್ದ ಅವರ ವಿಸಿಟಿಂಗ್ ಕಾರ್ಡ್ ಕೈಗೆತ್ತಿಕೊಂಡರು.

ಅದನ್ನು ತಿರುಗಿಸಿ, ಅದರ ಹಿಂಭಾಗದಲ್ಲಿ “ಇವನನ್ನು ನಿಮ್ಮ ಕಾಲೇಜಿಗೆ ಸೇರಿಕೊಳ್ಳಿ” ಎಂದು ಬರೆದು ಸಹಿ ಹಾಕಿದರು.

ಶಿಫಾರಸು ಹೊಂದಿದ್ದ ವಿಸಿಟಿಂಗ್ ಕಾರ್ಡ್ ಯುವಕನ ಕೈಗಿತ್ತು, “ನೀನು ಕಲಾಧ್ಯಯನ ಮಾಡಬೇಕು ತಾನೇ? ಅದಕ್ಕಾಗಿ ಒಂದು ವರ್ಷ ಹಾಳು ಮಾಡುವುದು ಬೇಡ. ಮೈಸೂರಿನಲ್ಲಿರುವ ‘ಕಾವಾ’ಗೆ (ಚಾಮರಾಜೇಂದ್ರ ಅಕಾಡೆಮಿ ಆಫ್ ವಿಶ್ಯುವಲ್ ಆಟ್ರ್ಸ್) ಹೋಗಿ ಅಲ್ಲಿನ ಪ್ರಿನ್ಸಿಪಾಲರಿಗೆ ಈ ಕಾರ್ಡು ಕೋಡು” ಎಂದು ಹರಸಿ ಕಳುಹಿಸಿದರು.

ಆ ವಿಸಿಟಿಂಗ್ ಕಾರ್ಡು ಹಿಡಿದು ‘ಕಾವಾ’ ಒಳಹೊಕ್ಕ ಲಕ್ಷ್ಮೀ ನಾರಾಯಣ ತಲ್ಲೂರು ಎಂಬ ಯುವಕ, ಈವತ್ತು ಎಲ್.ಎನ್.ತಲ್ಲೂರು ಆಗಿ ಜಾಗತಿಕ ಕಲಾಜಗತ್ತಿನಲ್ಲಿ ತನ್ನದೇ ಆದ ಹೊಸ ಯುಗವೊಂದನ್ನು ಆರಂಭಿಸಿದ್ದಾರೆ. ‘ಕಾವಾ’ ಒಳಹೊಕ್ಕ ಮೇಲೂ ಎಲ್ಲರೂ ಹಿಡಿಯದ ದಾರಿಯಲ್ಲಿ ಮುಂದಡಿಯಿಡಲು ಇಚ್ಛಿಸದ ತಲ್ಲೂರು, ನಡುವೆ ಒಂದು ವರ್ಷ ಚೆನ್ನೈ ಸಮೀಪದ ಚೋಳಮಂಡಳ ಕಲಾಗ್ರಾಮದಲ್ಲಿ ಹೋಗಿ ಅಲ್ಲಿನ ಸಾಂಪ್ರದಾಯಿಕ ಕಲಾವಿದರ ಜೊತೆ ಕಾಲ ಕಳೆದು ಬಂದರು. ಪರಿಣಾಮ ಪದವಿ ಮುಗಿಯಲು ನಾಲ್ಕು ವರ್ಷ ಬೇಕಾಯಿತು.

ಮುಂದೇನು? ಮತ್ತೊಮ್ಮೆ ಬರೋಡಾ ಕಡೆ ಮುಖ ಮಾಡಿದ ತಲ್ಲೂರು ಅವರಿಗೆ ಅಲ್ಲಿನ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮಾಡಲು ಪ್ರವೇಶ ಸಿಗಲಿಲ್ಲ. ಬದಲಾಗಿ ‘ಮ್ಯೂಸಿಯಾಲಜಿ’ ವಿಭಾಗದಲ್ಲಿ ಪ್ರವೇಶ ದೊರಕಿತು. ಬರೋಡಾದ ಕನಸಿನ ಲೋಕ ಪ್ರವೇಶಿಸಿದ ತಲ್ಲೂರು, ಪದವಿಗಾಗಿ ಮ್ಯೂಸಿಯಾಲಜಿ ಓದಿದರೂ, ಅವರೆದೆಯಾಳದಲ್ಲಿದ್ದ ಕಲಾವಿದ ಸದಾ ಜಾಗೃತನಾಗಿರುವಂತೆ ನೋಡಿಕೊಂಡರು. ಸಮಕಾಲೀನ ಕಲಾ ಪ್ರಯೋಗಗಳು, ಕಲಾಕೃತಿಗಳು, ಸಾಮಾಜಿಕ-ಆರ್ಥಿಕ-ರಾಜಕೀಯ ಸನ್ನಿವೇಶಗಳು… ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ವಿಶೇಷ ಶಕ್ತಿ ಹೊಂದಿರುವ ತಲ್ಲೂರು ಅವರಿಗೆ ‘ಸ್ಪೇಸ್’ ಅಥವಾ ಎದುರಿದ್ದ ಶೂನ್ಯವನ್ನು ಉಪಯೋಗಿಸುವ ಕಲೆ ಬಾಲ್ಯದಿಂದಲೇ ಕರಗತವಾಗಿತ್ತು.

ಅದಕ್ಕೆ ಅವರ ಪ್ರಪ್ರಥಮ ಕಲಾಕೃತಿ, ‘ಮಾಡರ್ನ್ ಇಂಟರ್ಯಾಕ್ಟಿವ್ ಆರ್ಟ್ ಆಬ್ಜೆಕ್ಟ್ಸ್’ ಉದಾಹರಣೆ.
ಬರೋಡಾದಲ್ಲಿ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿಯೇ ಮುಂಬೈ ಮೂಲದ ‘ಗ್ಯಾಲರಿ ಕೆಮೊಲ್ಡ್’ ಮಾಲೀಕರಿಂದ ಆ ಕಲಾಕೃತಿ ನಿರ್ಮಾಣ ಮಾಡಲು ಬೇಕಾಗಿದ್ದ 18,000 ರೂಪಾಯಿ ಬಂಡವಾಳ ಪಡೆದ ತಲ್ಲೂರು ಕೆಲವೇ ತಿಂಗಳ ಅವಧಿಯಲ್ಲಿ ಅದನ್ನು ರಚಿಸಿದರು. ತಲ್ಲೂರು ಮೊದಲ ಬಾರಿಗೆ ‘ಮಾಡರ್ನ್ ಇಂಟರ್ಯಾಕ್ಟಿವ್ ಆರ್ಟ್ ಆಬ್ಜೆಕ್ಟ್ಸ್’ ಪ್ರದರ್ಶನಗೊಂಡಾಗ ಕಲಾಪ್ರೇಮಿಗಳು ನಿಬ್ಬೆರಗಾಗಿ ಹೋಗಿದ್ದರು.

ಕಲಾಕೃತಿ ಎಂದರೆ ಕಲಾಪ್ರೇಮಿಯೊಬ್ಬ ಕೇವಲ ನಿಂತು ನೋಡುವ, ಮನದಲ್ಲಿಯೇ ಅದರೊಂದಿಗೆ ಆಟವಾಡುವ ವಸ್ತುವಲ್ಲ. ಒಬ್ಬ ಕಲಾಪ್ರೇಮಿ ಎದುರಿರುವ ಕಲಾಕೃತಿಯೊಂದಿಗೆ ಒಡನಾಡಬೇಕು ಎನ್ನುವ ನೂತನ ಕಲ್ಪನೆಯ ಮೂಲಕವೇ ತಮ್ಮೆಲ್ಲ ಕಲಾಕೃತಿಗಳನ್ನು ರಚಿಸಬೇಕು ಎಂಬ ತೀವ್ರ ಹಂಬಲ ತಲ್ಲೂರು ಅವರಿಗೆ ಮೊದಲಿನಿಂದಲೂ ಇತ್ತು. ಗ್ಯಾಲರಿ ಕೆಮೊಲ್ಡ್‍ನಲ್ಲಿದ್ದ ‘ಮಾಡರ್ನ್ ಇಂಟರ್ಯಾಕ್ಟಿವ್ ಆರ್ಟ್ ಆಬ್ಜೆಕ್ಟ್ಸ್’ ನ್ಯೂಯಾರ್ಕ್‍ನ ಸೊಹೊದಲ್ಲಿನ ‘ಬೊಸೆ ಪಾಸಿಯ ಮಾಡರ್ನ್’ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾದಾಗ ತಲ್ಲೂರು ಸಂತಸಕ್ಕೆ ಎಣೆಯೇ ಇರಲಿಲ್ಲ.

ಆಗಿನ್ನೂ 28 ಹರೆಯದ ಯುವಕನಾಗಿದ್ದ ತಲ್ಲೂರು ಅವರ ಎದೆಯಲ್ಲಿ ಇದ್ದದ್ದು, “ಕಲೆಯೇ ನನ್ನ ಜೀವನ. ನನ್ನ ಜೀವನವೇ ಒಂದು ಕಲೆ. ಇದುವರೆಗಿನ ನನ್ನ ಬದುಕಲ್ಲಿ ಮುಂದೇನೂ ಎಂದು ನಾನು ಯಾವತ್ತೂ ಯೋಚಿಸಿಯೇ ಇಲ್ಲ. ಕಲಾಲೋಕದಲ್ಲಿ ನನಗಿಷ್ಟ ಬಂದಂತೆ, ಅಲ್ಲಿನ ಗಾಳಿಗೆ ತಲೆಯೊಡ್ಡಿ ಒಂದೊಂದೇ ಹೆಜ್ಜೆ ಮುಂದಿಡುತ್ತಾ ಸಾಗಿ ಬಂದಿದ್ದೇನೆ.” ಈಗ 46 ವರ್ಷ ವಯಸ್ಸಿನ ತಲ್ಲೂರು, ಬಾಲ್ಯದಿಂದಲೂ ‘ಸ್ಕಾಲರ್‍ಷಿಪ್’ಗಳನ್ನು ಪಡೆದೇ ತನ್ನ ಕನಸನ್ನು ನನಸಾಗಿಸಿಕೊಳ್ಳುತ್ತಿರುವುದು.
“ನ್ಯೂಯಾರ್ಕ್ ಭೇಟಿ ಮತ್ತು ಅಲ್ಲಿನ ಪ್ರದರ್ಶನ ನನ್ನ ಬದುಕನ್ನು ಇನ್ನಷ್ಟು ವಿಸ್ತಾರಗೊಳಿಸಿತು.

ನನ್ನ ಮೊದಲ ಕಲಾಕೃತಿ ಮತ್ತು ಅದರ ಯಶಸ್ಸಿನ ಹಿನ್ನೆಲೆಯಲ್ಲಿ ಹಲವಾರು ಹೊಸ ಆಫರ್‍ಗಳು ನನಗೆ ಆಗಲೇ ಬಂದವು. ಆದರೆ, ನಾನು ಮುಂದೆ ಓದಬೇಕು, ಇನ್ನೂ ಹೆಚ್ಚಿನದನ್ನು ಕಲಿಯಬೇಕು ಎಂಬ ನಿರ್ಧಾರ ಮಾಡಿದ್ದೆ. ಕಾಮನ್‍ವೆಲ್ತ್ ಸ್ಕಾಲರ್‍ಷಿಪ್ ನೆರವಿನಿಂದ ‘ಕಂಟೆಂಪರರಿ ಫೈನ್ ಆಟ್ರ್ಸ್’ ಮತ್ತೊಂದು ಸ್ನಾತಕೋತ್ತರ ಪದವಿ ಪಡೆಯಲು ಲೀಡ್ಸ್ ಮೆಟ್ರೊಪಾಲಿಟನ್ ವಿಶ್ವವಿದ್ಯಾಲಯ ಸೇರಿದೆ” ಎಂದು ತಲ್ಲೂರು ಅಪ್ಪಟ ಕುಂದಗನ್ನಡದಲ್ಲಿ ಇಂದಿಗೂ ಆದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಇಂಗ್ಲೆಂಡ್‍ನ ಲೀಡ್ಸ್‍ನಲ್ಲಿದ್ದ ಎರಡು ವರ್ಷಗಳ ಕಾಲ ಸಮಕಾಲೀನ ಕಲಾಧ್ಯಯನಕ್ಕೆ ಜೀವನ ಮುಡಿಪಿಟ್ಟ ತಲ್ಲೂರು, ಅಲ್ಲಿಂದ ಹೊರಗೆ ಹೆಜ್ಜೆಯಿಟ್ಟ ಮೇಲೆ ಜಾಗತಿಕ ಕಲಾಲೋಕದಲ್ಲಿ ಸಂತನಾಗಿ ಹಂತ-ಹಂತವಾಗಿ ಮೇಲೇರುತ್ತಾ ಬಂದರು. ಬರೋಡಾದಲ್ಲಿ ಅಧ್ಯಯನ ಮಾಡುತ್ತಿದ್ದ ವೇಳೆ ಸಹಪಾಠಿಯಾಗಿದ್ದ ಕೊರಿಯ ಮೂಲದ ಗೆಳತಿ ಲೀ ಸುನ್ ಗ್ಯಮ್ ಅವರನ್ನು ಮದುವೆಯಾದ ತಲ್ಲೂರು ಆರಂಭದ ಹಂತದಲ್ಲಿ ಬೆಂಗಳೂರು ಅಥವಾ ಮೈಸೂರಿನಲ್ಲಿ ನೆಲೆ ನಿಲ್ಲುವ ಯತ್ನ ಮಾಡಿದರು. ವೈಯಕ್ತಿಕ ಹಾಗೂ ವೃತ್ತಿ ನೆಲೆಯಲ್ಲಿ ಅವರ ಆ ಯತ್ನ ಫಲ ನೀಡಲಿಲ್ಲ. ಪರಿಣಾಮ ಭಾರತ-ಕರ್ನಾಟಕ ಕಳೆದುಕೊಂಡಿತು. ಜಗತ್ತು ಅವರನ್ನು ದಕ್ಕಿಸಿಕೊಂಡಿತು.

ತಲ್ಲೂರು ಹದಿನೈದು ವರ್ಷಗಳ ಹಿಂದೆ ಕೊರಿಯಾದ ಸಿಯೋಲ್‍ಗೆ ಹೋಗಿ ನೆಲೆನಿಂತರು. ಅಲ್ಲಿನ ಪುಸಾನ್‍ನ ಶಿಲ್ಲಾ ವಿಶ್ವವಿಶ್ವವಿದ್ಯಾಲಯದಲ್ಲಿ ಕೆಲ ಕಾಲ ಅಧ್ಯಾಪಕರಾಗಿದ್ದ 2007ರಲ್ಲಿ ಅರಾರಿಯೊ ಗ್ಯಾಲರಿಯಲ್ಲಿ ನಡೆದ ಕೊರಿಯಾದ ಕಲಾವಿದರ ಕಲಾಕೃತಿಗಳ ಪ್ರದರ್ಶನದಲ್ಲಿ ‘ಬಾನ್ ಆಪಿಟೈಟ್’ ಮೂಲಕ ಜಗತ್ತಿನ ಗಮನ ಸೆಳೆದು ಬಿಟ್ಟರು. ಕಲೆಯೇ ಬದುಕು ಎಂಬ ನಿರ್ಧಾರಕ್ಕೆ ಬಂದ ನಂತರ ಕೆಲಸ ಬಿಟ್ಟರು. ನಂತರ ಆನೆ ಇಟ್ಟದ್ದೇ ಹೆಜ್ಜೆ, ನಡೆದದ್ದೇ ದಾರಿ!
ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿ ಮುಂಬೈ, ನ್ಯೂಯಾರ್ಕ್, ಚೆನ್ನೈ, ಢಾಕಾ, ಪ್ಯಾರೀಸ್, ಲೀಡ್ಸ್, ಸಿಯೋಲ್, ಬುಸಾನ್, ನವದೆಹಲಿ, ಬ್ರೆಜಿಲ್, ಬೀಜಿಂಗ್, ಕ್ಯೂಬಾ, ಮೆಕ್ಸಿಕೊ, ಲಂಡನ್, ಟೊರಾಂಟೊ, ಫ್ಲಾರಿಡಾ, ಇಸ್ರೇಲ್, ಕೊಲಂಬಿಯ ಮುಂತಾದ ವಿವಿಧ ದೇಶ ಮತ್ತು ನಗರಗಳ ಅನೇಕ ಮ್ಯೂಸಿಯಂಗಳಲ್ಲಿ ತಲ್ಲೂರು ಅವರ ನೂರಾರು ಕಲಾಕೃತಿಗಳನ್ನು ಕಲಾಪ್ರೇಮಿಗಳು ನಿಬ್ಬೆರಗಾಗಿ ನೋಡಿ, ಅನುಭವಿಸಿದ್ದಾರೆ!

ಅನುಭವಿಸಿದ್ದಾರೆ ಏಕೆಂದರೆ, ತಲ್ಲೂರು ರಚಿಸಿರುವ ಅನೇಕ ಕಲಾಕೃತಿಗಳು ಪ್ರೇಕ್ಷಕರ ಜೊತೆ ಮಾತನಾಡುತ್ತವೆ! ಅರ್ಥಾತ್ ಅವರು ‘ಇಂಟರ್ಯಾಕ್ಟಿವ್ ಆರ್ಟ್’ನ ಅಪ್ಪಟ ಪ್ರತಿಪಾದಕರು. “ನನ್ನ ಪ್ರಕಾರ ಕಲೆ ಎನ್ನುವುದು, ಅದರಲ್ಲಂತೂ ಕಂಟೆಂಪರರಿ ಆಟ್ರ್ಸ್ ಎನ್ನುವುದು ಪ್ರೇಕ್ಷಕರ ಜೊತೆ ನೇರವಾಗಿ ಪ್ರತಿಸ್ಪಂದಿಸಬೇಕು. ಆ ಮೂಲಕ ಪ್ರೇಕ್ಷಕರೂ ಕೂಡ ಎದುರಿರುವ ಕಲಾಕೃತಿಗೆ ನೇರವಾಗಿ ಸ್ಪಂದಿಸುವಂತೆ ಆಗಬೇಕು. ಕಲಾಕೃತಿ ಮತ್ತು ಪ್ರೇಕ್ಷಕರ ನಡುವೆ ಅಂತಹ ಒಂದು ಅರ್ಥಪೂರ್ಣ ಸಂಭಾಷಣೆ ನಡೆದಲ್ಲಿ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ” ಎನ್ನುತ್ತಾರೆ ತಲ್ಲೂರು ಅವರು.

ಅವರು ರಚಿಸಿರುವ ‘ಪ್ರೀಚಿಂಗ್ ಟೇಬಲ್’, ‘ಮಶ್ರೂಮ್’, ‘ಪ್ಯಾನಿಕ್ ರೂಮ್’, ‘ಬೆಡ್’, ‘ಕ್ರೊಮ್ಯಾಟೊಫೋಬಿಯಾ’, ‘ಎಟಿಎಂ’, ‘ಕರ್ಮಯೋಗ’ ಮತ್ತು ‘ತ್ರೆಷ್ಹೋಲ್ಡ್’ನಂತಹ ಕಲಾಕೃತಿಗಳು ಎದುರು ಹೋಗಿ ಸುಮ್ಮನೇ ನಿಂತು ನೋಡಿ ಬರುವಂತಹದಲ್ಲ. ಉದಾಹರಣೆಗೆ ಗೋಣ ಚೀಲ ಮತ್ತು ಆಧುನಿಕ ತಂತ್ರಜ್ಞಾನಗಳ ಮೂಲಕ ರಚನೆಯಾಗಿರುವ ‘ಪ್ಯಾನಿಕ್‍ರೂಮ್’ ಕಲಾಕೃತಿಯ ನಡುವೆ ಒಬ್ಬ ಪ್ರೇಕ್ಷಕ ಹೋಗಿ ನಿಲ್ಲಬಹುದು. ನಿಂತು ಒಳಗಿರುವ ಒಂದು ಗುಂಡಿಯನ್ನು ಒತ್ತಿದರೆ ಆ ಚೀಲಗಳಲ್ಲಿ ಗಾಳಿ ತುಂಬಿಕೊಂಡು ಪ್ರೇಕ್ಷಕ ಅವುಗಳ ನಡುವೆ ಬಂಧಿಯಾಗುತ್ತಾನೆ.

ಆ ಹೊತ್ತಿನಲ್ಲಿ ಪ್ರೇಕ್ಷನೊಬ್ಬ ಅನುಭವಿಸುವ ತವಕ-ತಲ್ಲಣ ಬೇರೆಯದ್ದೇ ಆಗಿರುತ್ತದೆ. ಇದ್ದಕ್ಕಿದ್ದಂತೆ ಬಂಧಿಯಾಗುವ ಪ್ರೇಕ್ಷಕ ‘ಪ್ಯಾನಿಕ್‍ರೂಮ್’ನೊಳಗೆ ಹೇಗೆ ವರ್ತಿಸುತ್ತಾನೆ ಎನ್ನುವುದನ್ನು ಗಮನಿಸಲು ಸಿಸಿಟಿವಿ ಕೂಡ ಅದರಲ್ಲಿ ಅಳವಡಿಸಲಾಗಿದೆ. ಒಬ್ಬ ವ್ಯಕ್ತಿಯ ತಾಳ್ಮೆಯ ಮಟ್ಟ ಮತ್ತು ಭಯವನ್ನು ಎದುರಿಸುವ ಸಾಮಥ್ರ್ಯ ಎಷ್ಟು ಎನ್ನುವುದು ಒಮ್ಮೆ ‘ಪ್ಯಾನಿಕ್‍ರೂಮ್’ ಜೊತೆ ಒಡನಾಡಿದರೆ ಗೊತ್ತಾಗಿಬಿಡುತ್ತದೆ. ಅದೇ ರೀತಿ ‘ಕ್ರೊಮ್ಯಾಟೊಫೋಬಿಯಾ’ ಬದುಕಿನ ನಶ್ವರ ಮುಖವನ್ನು ಅನಾವರಣಗೊಳಿಸಿದರೆ, ‘ಎಟಿಎಂ’ ಕೋಪ-ತಾಪವನ್ನು ನಿಯಂತ್ರಿಸುವ ಪಾಠ ಹೇಳುತ್ತದೆ. ‘ಬೆಡ್’ ಮತ್ತೊಮ್ಮೆ ಬದುಕು-ಉಸಿರು-ತವಕ-ತಲ್ಲಣದ ಪರಿಚಯ ಮಾಡಿಸಿಕೊಡುತ್ತದೆ.

ಮೂಲತಃ ಕರ್ನಾಟಕದ ಕರಾವಳಿ ತೀರದ ಪ್ರತಿಭೆಯಾದ ತಲ್ಲೂರು ಅವರ ಬೇರು ಇನ್ನೂ ಇಲ್ಲಿಯೇ ಭದ್ರವಾಗಿದೆ ಎನ್ನುವುದನ್ನು ಅವರ ಅನೇಕ ಕಲಾಕೃತಿಗಳು ಸಾಬೀತು ಮಾಡುತ್ತವೆ. ಕರಾವಳಿಯ ದೈವಗಳ ಸ್ವರೂಪ, ಚೋಳಮಂಡಳದ ಬೃಹತ್ ಶಿಲ್ಪಗಳು, ಕರ್ನಾಟಕದ ವಾಸ್ತುಶಿಲ್ಪ… ಎಲ್ಲವೂ ಅವರ ಕಲಾಕೃತಿಗಳ ಭಾಗವೇ ಆಗಿರುತ್ತದೆ.

ಭದ್ರವಾಗಿ ಬಿಟ್ಟ ಬೇರಿನ ಮೂಲಕವೇ ತವರು ನೆಲದ ಸಾರ ಹೀರಿ, ವಾಸ್ತವಕ್ಕೆ ಮುಖ ಮಾಡಿ ನಿಂತು, ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ ಹೇಳಬೇಕಾದದ್ದನ್ನು ಮುಖಕ್ಕೆ ಹೊಡೆದಂತೆ ಹೇಳುವುದು ತಲ್ಲೂರು ಕಲಾ ಭಾಷೆ! ಅದಕ್ಕೆ ಅವರ ಇತ್ತೀಚಿಗಿನ ಕಲಾಕೃತಿಗಳಾದ ‘ಟಾಲರೆನ್ಸ್’ ಮತ್ತು ‘ಇಂಟಾಲರೆನ್ಸ್’ಗಳೇ ಸಾಕ್ಷಿ.

ನ್ಯೂಯಾರ್ಕ್‍ನ ಸ್ಕ್ಯಾಡ್ ಮ್ಯೂಸಿಯಂ, ಲಂಡನ್‍ನ ಸಾಚಿ ಮ್ಯೂಸಿಯಂ, ಮುಂಬೈನ ‘ಗ್ಯಾಲರಿ ಕೆಮೊಲ್ಡ್’… ಹೀಗೆ ಜಗತ್ತಿನ ಹಲವಾರು ಪ್ರತಿಷ್ಠಿತ ಮ್ಯೂಸಿಯಂಗಳಲ್ಲಿ ತಲ್ಲೂರು ಕಲಾಕೃತಿಗಳು ಇಂದು ಶಾಶ್ವತವಾಗಿ ನೆಲೆನಿಂತಿವೆ. ಕೆಲವೊಮ್ಮೆ ಒಂದೊಂದು ಕಲಾಕೃತಿ ಒಂದು ಕೋಟಿ ರೂಪಾಯಿಗಳ ಮೌಲ್ಯ ದಾಟಿ ಕಲಾಪ್ರೇಮಿಗಳ ಕೈಸೇರಿವೆ. ‘ಕಂಟೆಂಪರರಿ ಆರ್ಟಿಸ್ಟ್’ಗಳ ಪೈಕಿ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾದ ಜಿತಿಶ್ ಕಲ್ಲಾಟ್, ತುಕ್ರಾಲ್ ಅಂಡ್ ಟಾಗ್ರಾ, ಮನೀಶ್ ನಾಯ್, ಅರ್ಮಾನ್, ಜೇಮ್ಸ್ ಬ್ರೌನ್, ಸ್ಟೀಫನ್ ಕೋಕ್ಸ್, ರೀನಾ ಕಲ್ಲಾತ್, ಸುಬೋಧ್ ಗುಪ್ತಾ ಅವರಂತಹ ಸಮಕಾಲೀನರ ನಡುವೆ ತಲೆಯೆತ್ತಿ ನಿಂತಿರುವ ತಲ್ಲೂರು ಅವರನ್ನು ಜಾಗತಿಕ ಕಲಾಲೋಕ ಈಗ ಕೆಂಪು ಹಾಸು ಹಾಸಿ ಸ್ವಾಗತಿಸಲಾರಂಭಿಸಿದೆ. ಸುಮಾರು ಎರಡು ದಶಕಗಳ ಕಾಲ ತಲ್ಲೂರು ಅವರನ್ನೇ ಕಲಾಜಗತ್ತಿಗೆ ಅರ್ಪಿಸಿಕೊಂಡ ಫಲವಿದು.

ನಾಲ್ಕು ತಿಂಗಳು ಕುಂದಾಪುರದ ಬಳಿಯ ಕೋಟೇಶ್ವರದ ಮೂಲಮನೆಯಲ್ಲಿರುವ ಕಲಾಕೇಂದ್ರದಲ್ಲಿ ನೆಲೆನಿಂತು ಕಲಾಕೃತಿಗಳ ನಿರ್ಮಾಣ. ಆಗ ತಾಯಿ ಮತ್ತು ಅಣ್ಣನ ಕುಟುಂಬದೊಂದಿಗೆ ಜೀವನ. ನಾಲ್ಕು ತಿಂಗಳು ಸಿಯೋಲ್‍ನ ಮನೆಯ ಬಳಿ ಇರುವ ಕಲಾಕೇಂದ್ರದಲ್ಲಿ ಕಲಾಕೃತಿಗಳ ನಿರ್ಮಾಣ. ಪತ್ನಿ ಲೀ ಸುನ್ ಗ್ಯಮ್ ಮತ್ತು ಮಗಳು ಲೀ ಯುನಾ ತಲ್ಲೂರು ಜೊತೆ ಬದುಕು. ಇನ್ನುಳಿದ ನಾಲ್ಕು ತಿಂಗಳು ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುವ ಕಲಾಪ್ರದರ್ಶನಗಳಲ್ಲಿ ಕಲಾಕೃತಿಗಳ ಪ್ರದರ್ಶನಕ್ಕಾಗಿ ಅಲೆದಾಟ. ಇದು ಸದಾ ಅನಿಶ್ಚಿತ ಬದುಕಿಗೆ ತಮ್ಮನ್ನೇ ತಾವು ಗಂಟು ಹಾಕಿಕೊಂಡಿರುವ ತಲ್ಲೂರು ವರ್ಷಚರಿ.

ಈ ನಡುವಿನ ಅಚ್ಚರಿ ಎಂದರೆ, ಸುಮಾರು ಹದಿನೈದು ವರ್ಷಗಳ ಹಿಂದೆಯೇ ಪಾಶ್ಚಿಮಾತ್ಯ ಜಗತ್ತು ಮತ್ತು ಅಲ್ಲಿನ ಕಲಾಲೋಕ ತಲ್ಲೂರು ಅವರನ್ನು ಗಂಭೀರವಾಗಿ ಸ್ವೀಕರಿಸಿತ್ತು. ತನ್ನ ಸುತ್ತಮುತ್ತ ಸಿಗುವ ವಸ್ತುಗಳ ಮೂಲಕವೇ ಹೊಸದೊಂದು ಕಲಾಕೃತಿಯನ್ನು ರಚಿಸುವ ಅಭೂತಪೂರ್ವ ಸಾಮಥ್ರ್ಯವುಳ್ಳ ತಲ್ಲೂರು ಅವರನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದ ಕಲಾಲೋಕ ಕೂಡ ಅವರನ್ನು ಕ್ರಮೇಣ ಒಪ್ಪಿಕೊಳ್ಳಲು ಆರಂಭಿಸಿದ್ದು, ತವರಿನಲ್ಲಿ ಅವರಿಗೆ ಸಿಗಬೇಕಾದ ಸ್ಥಾನ-ಮಾನ ಸಿಗಲಾರಂಭಿಸಿದೆ.

ಜೈಪುರದ ನಹಾರ್‍ಗಢದ ಮಾಧವೇಂದ್ರ ಅರಮನೆಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಭಾರತದ ಮೊತ್ತ ಮೊದಲ ಕಲಾತೋಟದಲ್ಲಿ ಜಗತ್ತಿನ ಇಪ್ಪತ್ತು ಶ್ರೇಷ್ಠ ಕಲಾವಿದರ ಕಲಾಕೃತಿಗಳಿಗೆ ಪ್ರದರ್ಶನದ ಅವಕಾಶ ಕಲ್ಪಿಸಿಕೊಡಲಾಗಿದೆ. ಆ ಪೈಕಿ 15 ಭಾರತೀಯರು. 5 ಮಂದಿ ವಿದೇಶಿ ಮೂಲದವರು. ಒಂದರ್ಥದಲ್ಲಿ ಭಾರತೀಯ, ಇನ್ನೊಂದು ಅರ್ಥದಲ್ಲಿ ವಿದೇಶಿ ಎರಡೂ ಆಗಿರುವ ತಲ್ಲೂರು ರಚಿಸಿರುವ ‘ಒಬಿಚ್ಯುಯರಿ’ ಕಲಾಕೃತಿ ಆ ತೋಟದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಇತ್ತೀಚೆಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ವಾಸ್ತು ಮ್ಯೂಸಿಯಂನಲ್ಲಿ ‘ಇಂಡಿಯ ಅಂಡ್ ವಲ್ರ್ಡ್: ಅ ಹಿಸ್ಟರಿ ಇನ್ ನೈನ್ ಸ್ಟೋರಿಸ್’ ಎಂಬ ಅತ್ಯಂತ ಪ್ರತಿಷ್ಠಿತ ಹಾಗೂ ಜಾಗತಿಕ ಮಟ್ಟದ ಪ್ರದರ್ಶನವೊಂದು ನಡೆಯಿತು. ಬ್ರಿಟಿಷ್ ಮ್ಯೂಸಿಯಂ ನೆರವಿನಿಂದ ನಡೆದ ಆ ಪ್ರದರ್ಶನದಲ್ಲಿ 200 ಕೃತಿಗಳ ಮೂಲಕ ಭಾರತ ಮತ್ತು ಜಗತ್ತಿನ ನಡುವಿನ ಸಂಬಂಧದ ಐತಿಹಾಸಿಕ ಕೊಂಡಿಯನ್ನು ಒಂಬತ್ತು ಕಥೆಗಳ ಮೂಲಕ ಹೊಸೆಯುವ ಯತ್ನ ಮಾಡಲಾಗಿತ್ತು.

ತಲ್ಲೂರು ಅವರ ‘ಯೂನಿಕೋಡ್’ ಕಲಾಕೃತಿ ಆ 200 ಕೃತಿಗಳ ಪೈಕಿ ಒಂದಾಗಿತ್ತು! ಮಾತ್ರವಲ್ಲ ಆ ವಸ್ತುಪ್ರದರ್ಶನದ ಅತ್ಯಂತ ಪ್ರಮುಖ ಆಕರ್ಷಣೆಯಾಗಿತ್ತು.  ಅದಾದ ಮೇಲೆ ಮುಂಬೈನ ‘ಗ್ಯಾಲರಿ ಕೆಮೊಲ್ಡ್’ನಲ್ಲಿ ತಲ್ಲೂರು ಅವರ ಏಕವ್ಯಕ್ತಿ ಪ್ರದರ್ಶನ ಅರ್ಥಾತ್ ಸೊಲೊ ‘ಸ್ಮೋಕ್ ಔಟ್’ ನಡೆದಿತ್ತು. ಇದೆಲ್ಲವೂ ಕ್ರಮೇಣ ಭಾರತೀಯ ಕಲಾಲೋಕ ತಲ್ಲೂರು ಅವರನ್ನು ತನ್ನದಾಗಿಸಿಕೊಳ್ಳುತ್ತಿದೆ ಎನ್ನುವುದರ ಸಂಕೇತ. “ನಾನೆಂದೂ ಹಣದ ಬೆನ್ನು ಹತ್ತಿ ಹೊರಟವನಲ್ಲ.

ಬದುಕಿನ ಒಂದೊಂದು ಕ್ಷಣವೂ ಕಲಾಕೃತಿಗಳ ಬಗ್ಗೆ ಯೋಚಿಸುವ ನನಗೆ ಇದ್ದದ್ದು ಒಂದೇ ಗುರಿ. ಸದಾ ಕಲಾಲೋಕದಲ್ಲಿ ನಾನು ಮುಳುಗಿರಬೇಕು ಎನ್ನುವುದು ಮಾತ್ರ. ಯಾವತ್ತೂ ಏನನ್ನೂ ನಾನು ಯೋಜನಾಬದ್ಧನಾಗಿ ಯೋಚಿಸಿಲ್ಲ. ಸದಾ ತಿರುಗಾಟದಲ್ಲಿರುವ ನನ್ನ ಮುನದಲ್ಲಿ ಇದ್ದಕ್ಕಿದ್ದಂತೆ ಒಂದು ಕಲಾಕೃತಿ ಮೂಡಿಬಿಡುತ್ತದೆ. ರೈಲು ನಿಲ್ದಾಣ, ವಿಮಾನ ನಿಲ್ದಾಣ, ಬಸ್ಸು ನಿಲ್ದಾಣ… ಎಲ್ಲೇ ಇದ್ದರೂ ಅದನ್ನು ನೋಟ್ ಮಾಡಿಕೊಳ್ಳುತ್ತೇನೆ.

ಕೋಟೇಶ್ವರ ಅಥವಾ ಸಿಯೋಲ್ ತಲುಪಿದಾಗ ಮನದಲ್ಲಿ ಅಚ್ಚಾಗಿರುವ ಆ ಕಲಾಕೃತಿಯನ್ನು ನಿಜವಾಗಿಸುವ ಯತ್ನ ಆರಂಭವಾಗುತ್ತದೆ” ಎನ್ನುವ ತಲ್ಲೂರು ಅವರು ಸರಳ ಮನಸ್ಸಿನ ಪ್ರತೀಕ. ಜಾಗತಿಕ ಮಟ್ಟದಲ್ಲಿ ಒಬ್ಬ ಅಭೂತಪೂರ್ವ ಕಲಾವಿದನಾಗಿ ಹೊರಹೊಮ್ಮಿದ್ದರೂ ಯಾವುದೇ ಹಮ್ಮು-ಬಿಮ್ಮಿಲ್ಲದೇ ಅಪ್ಪಟ ಕುಂದಗನ್ನಡದಲ್ಲಿ ಗಂಟೆಗಟ್ಟಲೇ ಹರಟೆ ಹೊಡೆಯುವ ತಲ್ಲೂರು ಒಂದು ಕಲಾಭಂಡಾರ! ಅಂತಹ ನಮ್ಮ ತಲ್ಲೂರು! ನಮ್ಮ ಕರಾವಳಿ, ಕರ್ನಾಟಕದ, ಕನ್ನಡದ, ಭಾರತದ ಪ್ರತಿಭೆಯಾದ ತಲ್ಲೂರು ಅವರು ರಚಿಸಿದ 30 ಅಪರೂಪದ ಕಲಾಕೃತಿಗಳು 2019ರ ಮಾರ್ಚ್ 3ರಿಂದ ಹ್ಯಾಮಿಲ್ಟನ್‍ನ ‘ಗ್ರೌಂಡ್ ಫಾರ್ ಸ್ಕಲ್ಪ್‍ಚರ್’ನಲ್ಲಿ ಏಕವ್ಯಕ್ತಿ ಕಲಾಪ್ರದರ್ಶನದಲ್ಲಿ ಅನಾವರಣಗೊಳ್ಳಲಿವೆ.

ಆ ಮೂಲಕ ತಲ್ಲೂರು ಅವರ ‘ಎವರೆಸ್ಟ್’ ಆರೋಹಣವಾಗಲಿದೆ! ಅದಕ್ಕಾಗಿ ಯಾವುದೇ ಸದ್ದುಗದ್ದಲವಿಲ್ಲದೇ ಕೊಟೇಶ್ವರ ಮತ್ತು ಸಿಯೋಲ್‍ನಲ್ಲಿ ತಯಾರಿ ನಡೆಯುತ್ತಿದೆ. ವೈರುಧ್ಯವೆಂದರೆ, ಈಗಾಗಲೇ ಜಾಗತಿಕ ನೆಲೆಯಲ್ಲಿ ‘ಸ್ಕೋಡಾ’, ‘ಸಂಸ್ಕೃತಿ’, ‘ಎಮರ್ಜಿಂಗ್ ಆರ್ಟಿಸ್ಟ್’, ‘ಇನ್‍ಲಾಕ್ಸ್ ಫೈನ್ ಆರ್ಟ್ಸ್  ಪ್ರಶಸ್ತಿ ಪಡೆದಿರುವ ತಲ್ಲೂರು ಎಂಬ ಕಲಾವಿದ ಕರ್ನಾಟಕ ಸರ್ಕಾರ, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಕಣ್ಣಿಗೆ ಸ್ಪಷ್ಟವಾಗಿ ಬೀಳದೇ ಇರುವುದು!? ಹಿತ್ತಲಗಿಡ ಮದ್ದಲ್ಲ ನಿಜ! ಆದರೆ, ಕಲೆಯನ್ನೇ ಬದುಕಾಗಿಸಿಕೊಂಡಿರುವ ತಲ್ಲೂರು ಎಂಬ ‘ಹಿತ್ತಲ ಗಿಡ’ ಮಾತ್ರ ಅದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ‘ಬುದ್ಧ’ನಾಗಿ ಕಲಾಲೋಕದಲ್ಲಿ ರಾರಾಜಿಸುತ್ತಿರುವುದು.

ಚಿತ್ರಗಳು- ಎಲ್.ಎನ್.ತಲ್ಲೂರು ಸಂಗ್ರಹದಿಂದ

 

Leave a Reply