ಕಬ್ಬಳಿಯ ಈ ಹುಡುಗಿ ಕವಿತೆಗಳ ವಸಂತ ಋತು..

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಈಗ ಪ್ರಕಟವಾಗಿರುವ ಭವ್ಯ ಕಬ್ಬಳಿ ಅವರ ಕವಿತೆಗಳ ಬಗ್ಗೆ ಟಿಪ್ಪಣಿ ಬರೆಯಲಿರುವವರು  ಸುನೈಫ್.

                                                                                          ಭವ್ಯ ಕಬ್ಬಳಿ

ಮೂಲತಃ ಚನ್ನರಾಯಪಟ್ಟಣದ ಕಬ್ಬಳಿ ಎನ್ನುವ ಪುಟ್ಟ ಊರಿನವರಾದ ಭವ್ಯ , ಬೆಂಗಳೂರಿನಲ್ಲೆ ಎಂಜಿನಿಯರಿಂಗ್ ಓದಿ  ಸಧ್ಯ ಜನರಲ್ ಎಲೆಕ್ಟ್ರಿಕ್ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.

‘ಬರವಣಿಗೆಗೆ “ಅವಧಿ”ಯದ್ದೆ ಮೊದಲ ಬೆಂಬಲ’ ಎಂದು ಹೇಳುವ ಭವ್ಯಾಗೆ ಓದುವ ಮತ್ತು ಸಾಹಿತ್ಯದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಹಂಬಲ. ಸಂಗೀತವೆಂದರೆ ಬಹಳ‌ ಪ್ರೀತಿ. ಜಾನಪದ ಕಲೆಗಳ ಬಗ್ಗೆ ವಿಶೇಷ ಆಸಕ್ತಿ.

‘ಬರವಣಿಗೆ, ನನ್ನನ್ನು ನಾನು ಆಗಾಗ ಕಳೆದುಕೊಂಡು ಮತ್ತೆ ಮತ್ತೆ ಹುಡುಕಿಕೊಂಡು, ನನ್ನನ್ನು ಕಂಡುಕೊಳ್ಳುವಲ್ಲಿ ಬಹು ಮುಖ್ಯ ಪಾತ್ರವಹಿಸಿದೆ’ ಎನ್ನುವ ಭವ್ಯ, ‘ಅವಿರತ’ದಂತಹ ಸಮಾಜ ಮುಖಿ ಸಂಸ್ಥೆಯ ಜೊತೆ ಕೈಜೋಡಿಸಿ ಸಾಮಾಜಿಕ  ಕಳಕಳಿಯ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

‘ನನ್ನ ಸಾಲುಗಳನ್ನು ಪದ್ಯಗಳೆಂದು ಕರೆಯಲು ಇನ್ನೂ ಹಿಂಜರಿಕೆಯಿದೆ’ ಎಂದು ಭವ್ಯ ಹೇಳಿದರೂ ನಾವದನ್ನು ನಂಬಲು ತಯಾರಿಲ್ಲ..!!

ಹಾಗೆಂದೇ ಭವ್ಯ ಈ ವಾರದ ನಮ್ಮ POET OF THE WEEK..!!

ಅದೆಷ್ಟು ಥರಹದ ಹಸಿವು

ಕೆಲವು ಸೃಷ್ಟಿಯದ್ದು
ಇನ್ನು ಕೆಲವು ಸೃಷ್ಟಿಸಿದ್ದು

ಹಸಿವಿನಿಂದ ಹುಟ್ಟಿದ
ಪದ್ಯವನ್ನು ಓದುತ್ತಿದ್ದರೆ
ಯಾವುದೋ ಹಸಿವು
ಹಿಂಗಿದಂತೆ
ಮತ್ಯಾವುದೋ ಹಸಿವು
ಹುಟ್ಟಿದಂತೆ,
ಅರ್ಥವಾಗದವರೆದುರು
ಸತ್ತಂತೆ,
ಅರ್ಥವಾದವರಿಗೆ
ಇನ್ನಷ್ಟು ಹಸಿವಂತೆ

ಖಾಲಿ ಒಡಲು
ಗೋಡೆಗೆ ಜೋತು ಬಿದ್ದಿರುವ
ಹಳೆಯದೊಂದು ನೆನಪು,
ನಡುಗುವ ಮೈ,
ಹೊದಿಕೆಯಿಲ್ಲದ ರಾತ್ರಿ,
ಎದೆಯಲ್ಲಿ‌
ಬೆಚ್ಚಗಿಡಬೇಕಾದವರು ದೂರ,
ತೊರೆದದ್ದೊಂದು ದಾರಿ
ತೆರೆದುಕೊಳ್ಳದ್ದೊಂದು ದಾರಿ,
ಅನ್ನಿಸುವಷ್ಟು ಹತ್ತಿರ
ಕಂಡಷ್ಟು ದೂರ
ಅರ್ಥವಾಗದ ಹಸಿವು

ಅಂಗೈಯ್ಯ ರೇಖೆ‌
ಅಂಗಾತ ಮಲಗಿ
ಅಣಕಿಸಿ ಕೆಣಕುವಂತೆ,
ಹಣೆಬರಹದ ಸರದಿಗೆ ಬಂದರೆ
ಏನೋ ಅಳಿಸಿದಂತೆ

ಕಾಣದಂತಿಡಬೇಕು
ಅಣಕು ಉಳುಕುಗಳನ್ನು,
ಗಂಧ ಅರಿಸಿಣ
ಕೆನ್ನೆಗೊಂದಷ್ಟು
ಸೋಕಿಸಿಕೊಂಡು
ತಾನೇ ಹಸೆಯಲ್ಲಿ ಕೂತು
ಯಾವುದೋ ದಾರಿಯತ್ತ ದೃಷ್ಟಿ,
ಇವಳ ಮುಖದಲ್ಲಿ
ಹಸಿವು ಕಾಣುವುದಿಲ್ಲ

ಮೌನ‌ ತೊಟ್ಟರೆ
ಹಸಿವು ನೀಗುವುದು
ಎಂದುಕೊಂಡವನಿಗೆ
ಅವನ ಯಾವ ನಿಟ್ಟುಸಿರೂ
ಸಮಾಧಾನಿಸಲಿಲ್ಲ

ಒಲವೆಂಬ ಮುಗಿಯಲಾರದ
ಹಸಿವ ಸೃಷ್ಟಿಗೆ,
ಅವನದು
ಹಗಲಿರುವುದಿಲ್ಲವೆಂಬ
ಭ್ರಮೆಯ ಹಸಿವು,
ಇವಳದು
ಹೆಗಲಿಲ್ಲವೆಂಬ ಹಸಿವು

ಯಾವುದೋ
ಹಸಿವಿನ ಕರೆಗೆ,
ಇಬ್ಬರೂ ಮನೆಯ
ಬಾಗಿಲು ತೆರೆಯುತ್ತಾರೆ

ಸೃಷ್ಟಿಯ ಹಸಿವನ್ನು
ನೀಗಿಸಬಲ್ಲವರು,
ತಾವೇ ಸೃಷ್ಟಿಸಿಕೊಂಡ
ಹಸಿವಿಗೆ ಕಾರಣವಿಲ್ಲದೆ
ಸೋಲುತ್ತಾರೆ

ಇಲ್ಲೊಂದು ಕ್ಷಮೆ…

ಯಾರಿಗೂ ಸಿಗದ
ಮತ್ತೆಲ್ಲೂ ಸಿಲುಕದ,
ನನ್ನೊಳಗೆ ನನ್ನನ್ನು
ಬಚ್ಚಿಟ್ಟುಬಿಡಬಹುದಾದ
ನಿನ್ನೊಳಗಿನ ನನ್ನನ್ನು
ಬಿಚ್ಚಿಡಲು ಸಾಧ್ಯವಾಗದ,
ಯಾರಿಗೂ ಅರ್ಥವಾಗದ
ಇದೊಂದು ಹಸಿದ ಪದ್ಯ,
ಸೃಷ್ಟಿಸಿದ್ದು.. ಸೃಷ್ಟಿಯದ್ದು..

 

ಮನೆಯಂಗಳದಲ್ಲಿ ಹೂವುಗಳಿಲ್ಲ

ಮನೆಯಂಗಳದ ತುಂಬಾ
ಹರಡಿರುವ ಹೂವುಗಳ ಕಂಡು
ಏನೋ ನೆನಪಾದಂತೆ
ಒಳಗೆ ಬಂದು ಏನನ್ನೋ ಹುಡುಕುತ್ತಿದ್ದಾಳೆ

ಪೊರೆಬಿಟ್ಟ ಕಣ್ಣುಗಳಿಗೆ
ಒಂದೊಂದೇ ಅಲ್ಲಿ-ಇಲ್ಲಿ
ನೆಲದಮೇಲೆ, ಗೋಡೆಯ ಮೇಲೆ
ಕೆಲವೊಂದು ಕಾಣದಂತೆ
ತಿಜೋರಿಯೊಳಗೆ ಮುದುಡಿ ಮಲಗಿದ್ದ
ಅರ್ಥವಾಗಬಹುದೇನೋ
ಎನ್ನುವಂತೆ ಬರೆದಿಟ್ಟ ಕಾಗದಗಳು

ಕುರುಡು ಕವಿತೆಯನು
ಕಿವುಡಾದ ಗೋಡೆಗಳು ಆಲಿಸುತ್ತಿವೆ
ಹಟವೊ? ಆಸೆಯೊ?
ತೂತು ತಪ್ಪಲೆಯಲ್ಲಿ
ಅದೆಷ್ಟು ತುಂಬಿಸಿದ ಕನಸುಗಳು!
ಜಾರುವಷ್ಟು ಹೊತ್ತೂ ಹರುಷ ಅವಳದು
ಒದ್ದೆ ಕಣ್ಣು ಒದ್ದೆ ಪಾತ್ರೆ
ಅವಳದೇ ದಾರಿ ಅವಳ ಕಣ್ಣುಗಳಿಗೆ

ಓಡಬೇಕಾದಲ್ಲಿ ವಿರಾಮ
ನಿಲ್ಲಬೇಕಾದಲ್ಲಿ ಮುಂದುವರೆದ ಓಟ
ಅಲ್ಲಲ್ಲಿ ನಿಲ್ಲಿಸಿದ್ದು ಕಾಗದದ ತುಂಡುಗಳು
ಮೋಡದ ಹಿಂದೆ ಅವಿತ
ನಕ್ಷತ್ರಗಳಂತೆ ಸಾಲುಗಳು

ಇಳಿಜಾರಿನಲ್ಲಿ ಬೆನ್ನು ತಾಕಿಸಿಕೊಂಡಂತೆ ಹರಿವ
ಒಂದೊಂದು ಕಣ್ಣೀರಿಗು
ಒಂದೊಂದು ಸಾಲಿಗು
ಒಂದೊಂದು ಹೂವನಿಡಲು
ಮತ್ತೆ ಅಂಗಳದಲ್ಲಿ ಹೂವನಾರಿಸುತ್ತಿದ್ದಾಳೆ
ಕಂಪಿಡುವಷ್ಟೂ ಹೊತ್ತು ಮುಂದುವರೆದಿವೆ ತೊದಲು ಮಾತುಗಳು

ಊರಾಚೆಗಿನ ಬಯಲಿನಲಿ
ಗಾಳಿ ಬೀಸುವ ಕಡೆ ತೂಗುವ
ಒಂಟಿ ಮರ
ಬದುಕಿದ್ದರೆ ಉಸಿರಾಡುತ್ತಾರೆ
ಸತ್ತರೆ ಬರೆಯುತ್ತಾರೆ
ಈಗಂತೂ-ಹೀಗಂತೂ ಅದಕೆ ಸಾವಿಲ್ಲ

ಪುರಾವೆ ಕಳೆದುಕೊಂಡ ಅದೆಷ್ಟೋ ಸಾಲುಗಳು
ಇನ್ನೂ ಬದುಕಿವೆ, ಮೇಲಿನಂತೆಯೇ
ಆದರೂ ಬರೆಯುತ್ತಾಳೆ
ಹೂವಗಳನಾರಿಸುತ್ತಾ
ಒಂಟಿ ಮರ ಇನ್ನೂ ಉಸಿರಾಡುತ್ತಿದೆ
ಈ ಬಾರಿ ಬರೆದದ್ದು ಕಾಗದದ‌  ಮೇಲಲ್ಲ
ಮನೆಯಂಗಳದಲ್ಲಿ ಹೂವುಗಳಿಲ್ಲ

 

 

ನೆಲದ ಮೇಲೆ ಅದೆಷ್ಟೋ ಚಿತ್ತಾರಗಳಿವೆ

ಮರಳುಗಾಡಿನಲೆಲ್ಲೋ
ಕಳೆದುಹೋಗಿದ್ದೇನೆ
ಸುಡುವ ಬಿಸಿಲು ಹಾಸಿದ
ಧಗೆಯ ಹಾಸಿಗೆ ಮೇಲೆ
ಮಲಗಿ ಕಂಡ ಕನಸದು

ಬೆಳಕಿನ ಹೊತ್ತಿನಲಿ
ಕವಿದ ‌ಕತ್ತಲು
ಕತ್ತಲೆಂದರಾದೀತೆ?! ತಂಪನೀಡುತಿರುವ ನೆರಳು
ಕಪ್ಪು ಮೋಡ ಕರಗಿ ಕಿಟಕಿಯಾಚೆಗೂ
ಬೆಳಕು ಹರಿವ ಖಾತ್ರಿಯೂ ಇತ್ತು

ಕೋಣೆಯಲೊಂದು ದೀಪ ಹಚ್ಚಿಟ್ಟು

ಕಿಟಕಿಯಿಂದ‌ ತೂರಿ ಬರುತ್ತಿರುವ
ಸಣ್ಣ ಬೆಳಕಿನ ಬಾಣಗಳಿಗೆ
ಮೊಗವ ಚಾಚಿ ಕಾಯುತ್ತಿದ್ದೇನೆ
ಹನಿಯನಿಡಿಯುವ ಹಂಬಲದಿ
ಬೊಗಸೆ‌ ಹಿಡಿದು ಕರೆಯುತ್ತಿದ್ದೇನೆ

ಮೊದಲ ಸಂದೇಶ ತಂಗಾಳಿಯದು‌

ಮುಂದುವರಿದದ್ದು..
ಹಿಡಿದಷ್ಟೂ ನುಸುಳುತ್ತಿದ್ದವು
ನೆನಪುಗಳು ಜಾರಿದಂತೆಯೇ ಹನಿಗಳು
ಒಂದಾದರು ಮುತ್ತಾಗಬಾರದೆ?
ನನಗೆಂದು ಬಯಸುತ್ತಿದ್ದೇನೆಯೆ?

ನೆಲದ ಮೇಲೆ ಅದೆಷ್ಟೋ ಚಿತ್ತಾರಗಳಿವೆ

ಒಂದೊಂದು ಹನಿಯು
ಒಂದೊಂದು ಹನಿಯ ಬೆಸೆದು

ಒಳಗೂ ಹೊರಗೂ

ಅಂದುಕೊಂಡಷ್ಟೇ
ಹಾಲಿನಂತಹಾ ಬೆಳಕು
ಮುಚ್ಚಿಟ್ಟ ಆಸೆಯೊಂದನ್ನು
ನಿರಾಸೆಯೆಂದು ತೋರಲು
ಅಷ್ಟು ಪ್ರಜ್ವಲಿಸುತ್ತಿದೆಯೇನೊ

ಅರಿವಿಲ್ಲದೆಯೇ ಜಾರಿದ

ಕಣ್ಣಹನಿಯೊಂದರ‌ ಕಾವಿಗೆ
ಹನಿಗಳೂ ಮಾಯವಾಗಿವೆ
ಮಾಯಾವಿ ನೆನಪೆ!
ಬೆಳಕಿನಾಸೆಗೆ ಸಿಲುಕಿಸಿ
ಮತ್ತೆ ಮತ್ತೆ ನೆನಪಾಗಿ‌ ಉಳಿವೆ

ಮರಳಿ ಸುಳಿಯದಿರು

ಎನ್ನುವಷ್ಟರಲ್ಲಿ
ಸುಳಿಯಂತೆ ಬೀಸಿ ಬಂದ
ಬಿರುಗಾಳಿ ಬಡಿದೆಬ್ಬಿಸಿದೆ

ನೆತ್ತೀಯ ಕಾವು ಎದೆಯಾ ನೋವು

ಕನಸೆಂದು ಸಾರಿಹೇಳುತಿರಲು
ಅದೆಷ್ಟು ಬೇಗ ಆವಿಯಾಗುತಿದೆಯೊ
ಮರಳ ಸೋಕಿದ ಕಣ್ಣ ಹನಿಯು

ಪ್ರಶ್ನೆಯಾಗಿದೆ

ಅರ್ಥತಿಳಿಯದಾಗಿದೆ
ಕನಸೆಂಬ ಕನಸು
ಕನಸಿನೊಳಗೊಂದು ಕನಸು

ಎದೆಯೊಳಗೆ ಮಾತ್ರ

ಇನ್ನು ಗುನುಗುತ್ತಿದೆ
ಸಣ್ಣ ಸೋನೆಯ ನಿನಾದ
ಅದೇನೊ ಹೇಳುತಿರುವಷ್ಟು ಸನಿಹ

ಅಂತರಂಗದಲ್ಲೆಲ್ಲವೂ ನಿಶಬ್ದ

ಬರೀ “ನೀ”ನೆಂಬ ಶಬ್ದ

 

 

ಉಳಿದದ್ದು- ಸಾಲುಗಳು ಮಾತ್ರ

ಅಲ್ಲೊಂದು ಸಂತೆ
ಸಾವಿರ ಬೀದಿ
ಬಂದ ಊರು ಬಂದ ದಾರಿಯ
ಅರಿವೇ ಇಲ್ಲದ ಮಂದಿ

ಸಾಲು ಸಾಲು ಮಳಿಗೆಗಳು

ಎಣಿಸಲಾಗದಷ್ಟು
ಮುಖವಾಡಗಳು
ಬಣ್ಣ ಬಣ್ಣದ್ದು
ಬೇಕು-ಬೇಡದ್ದು

 

ಅದೆಷ್ಟು ಆಯ್ಕೆಗಳ ತೊಳಲಾಟ,

ತಿಳಿಯಾಗುವುದೆಂದು?

ಮನ ತಿಳಿಯದಾಗಿತ್ತು

 

ಕೆಲವು ಹೊಸತರಂತೆ

ಕೆಲವು ಹಳೆಯವು
ಅಲ್ಲೆಲ್ಲೋ ಹಳೆಯ
ಅಂಗಡಿಯ ಮುಂದೆ
ಜೋತುಬಿದ್ದ
ಹಳೆಯ ಕನ್ನಡಿಯೊಂದು
ಅಣಕಿಸುವಂತೆ

 

ನೋವಿಗೂ ಕಾಡುತ್ತಿದ್ದ
ನಗುವಾಗುವಾ ಬಯಕೆ
ನಗುವು ತಾ ನೊಂದಿತ್ತು
ಮುಖವಾಡದಾ ಭಯಕೆ

 

ಹೊಸತೋ ಹಳೆಯದೋ
ಎಲ್ಲ ಮುಖವಾಡದಲೂ
ಒಂದಿಂಚು ಧೂಳು
ಕೊಂಚ ವಿರಾಮವೂ ಇಲ್ಲದೆ
ಉಸಿರು ಕಟ್ಟಿಸುವಂತೆ

 

ಸುಮ್ಮನೆ‌ ಅಲೆದೆನಷ್ಟೆ
ಏನನ್ನೋ ತರಲೆಂದು
ತಿಳಿಯದೆ ಏನೆಂದು
ಎಲ್ಲವನ್ನೂ ಹೊತ್ತೊಯ್ಯುವಂತೆ

 

ಹುಡುಕುವಷ್ಟರಲ್ಲಿ
ಇಳಿ ಸಂಜೆ,
ಕತ್ತಲು
ನಗುತಲಿದ್ದೆ, ಕಾರಣ
ಮುಖವಾಡಗಳು ಮರೆಯಾಗಿದ್ದವು

 

ಬೆಳಕು ತೋರುವ ಬೆತ್ತಲೆಗೆ
ಕತ್ತಲೆಯೇ ಹೊದಿಕೆಯಾಗಿತ್ತು

 

ನಿರಂತರ ಅಯ್ಕೆಯ
ತೊಳಲಾಟವು ಮುಗಿದು
ಅಂತರಾಳ ತಿಳಿಯಾಗಿ
ಎಲ್ಲ‌ ಪಾತ್ರಗಳು ಮರೆಯಾಗುತ್ತಿವೆ
ಮತ್ತದೇ ಕತ್ತಲು ತೋರಿದ ದಾರಿ

 

ಕತ್ತಲೆಯೇ ಕೈಹಿಡಿದಂತೆ
ಕತ್ತಲಯೇ ನಂಬಿಕೆಯಂತೆ

 

ಕ್ಷಮಿಸಿ ಬಿಡು!
ಏನ ತರಲೂ ಆಗಲಿಲ್ಲ
ಇದ್ದು ಇಲ್ಲದಾದವು
ಗಳಿಸಿದ್ದಷ್ಟೂ ಕಳೆದದ್ದಕ್ಕೆ ಸಮನಾದವು
ಬರುವಷ್ಟರಲ್ಲೇನೂ
ಉಳಿಯಲಿಲ್ಲ
ಉಳಿದದ್ದು- ಸಾಲುಗಳು ಮಾತ್ರ

 

ಮರಳಿದ್ದೇನೆ

ಕವಿತೆಯೊಂದಿಗೆ
ನನ್ನದೊಂದು ವಿರಾಮವಿಲ್ಲಿ
ಮುಂದುವರಿಯಲಿದೆ
ಬೀಳ್ಕೊಡುಗೆ!
ಯಾವ ಊರಿಗೆ?!
ನಿಜ‌ ಬೆಳಕು ಕಂಡದ್ದೆ ಹೀಗೆ..

 

ನಾ ಚಂದ್ರನಿಗತ್ತಿರದವಳು

ಎಳೆಯ ಕಾಲುಗಳ
ಸರ್ಕಸ್ಸಿನ‌ ಹುಡುಗಿಗೆ,
ಹಗ್ಗದ ಮೇಲೆ
ನಡೆಯುವಾಗ ಹುಷಾರು,
ಎಂದು ಹೇಳಿದವರು
ನೆಲದ ಮೇಲಿನ
ಕಲ್ಲು ಮಣ್ಣು ಮುಳ್ಳುಗಳ ಬಗ್ಗೆ
ಯೋಚಿಸಲೇ ಇಲ್ಲ
ನೆಲಕ್ಕೆ ನಾಟಿದ ಬಿದಿರುಗಳಿಗಿಲ್ಲಿ

 

ಅದೃಷ್ಟ ಪ್ರಯತ್ನಗಳೆಂಬ
ನಾಮಕರಣ,
ಆಳದ ಅರಿವಿಲ್ಲ
ಇವೆರಡಕ್ಕು ಜೋತುಬಿದ್ದ
ಹಗ್ಗದ ಸಡಿಲತೆಯ ಯೋಚನೆಯೂ ಇಲ್ಲ
ನಂಬಿಕೆಯ ಕೈಗೋಲಿನ ದಿಕ್ಕು
ಸ್ವಲ್ಪ ಬದಲಾದರೂ
ಬದುಕಿನ ದಿಕ್ಕು ತಪ್ಪೀತು

 

ಗೆದ್ದರೊಂದಷ್ಟು ಚಪ್ಪಾಳೆ
ಬಿದ್ದರೆ‌?!!
ಎಲ್ಲ ಕಲೆಗಳನ್ನು
ಮುಚ್ಚಿಟ್ಟುಕೊಳ್ಳುವಂತೆ
ಕರಗತಗೊಂಡ ಕಲೆ

 

ಅಷ್ಟೆತ್ತರದ ಭಯವಿಲ್ಲವೆ?
ಎಂದರೆ,
ನಾ ಚಂದ್ರನಿಗತ್ತಿರದವಳು
ಒಂಟಿ ಮೋಡವ ಮಾತನಾಡಿಸುವವಳೆಂದು
ಹೇಳಿಕೊಂಡು ನಗುತ್ತಾಳೆ

 

ಸಬೂಬಿನಂತೆನಿಸಿದರು
ನೇರ ಮಾತು,
ಉಸಿರಿಗಾಗಿ ಹುಡುಕಿಕೊಂಡ
ಹಗ್ಗದ ದಾರಿಯಂತೆಯೆ
ಎಲ್ಲವೂ ಅರ್ಥವಾದಂತೆ

 

ಸರ್ಕಸ್ಸು ಮುಗಿಸಿ‌ ನಡೆಯುವಾಗ
ಮತ್ತೆ ತಿರುಗಿ ಎಳೆಯ
ಕಾಲುಗಳ ಕಡೆ ನೋಡಿದೆ,
ಅವಳ ಬಲಿತ ಮನಸ್ಸು
ನಾ ಬಿದ್ದರೆ?!! ಎಂದು ಏಕೆ
ಪ್ರಶ್ನಿಸುವುದಿಲ್ಲ ಎಂದೆನಿಸಿತ್ತು

 

ಹಗ್ಗದ ಬದಲು ಹಲಗೆಯ
ಮೇಲೆ ನಡೆದರೆ ಹೊಟ್ಟೆ ತುಂಬುವುದೆ?
ಎಂದವಳ ಪ್ರಶ್ನೆಯಲ್ಲಿ
ಸಿಗದ ಉತ್ತರವಿರಲಿಲ್ಲ

 

ಹೆಗಲಿನ ಭಾರಕೆ
ನಿರ್ಲಿಪ್ತತೆಯ ಹಣೆಪಟ್ಟಿ
ಕಟ್ಟಿಕೊಂಡ ಹಗುರ ಮನಸ್ಸು
ಅಷ್ಟೇ ಹಗುರವಾದ
ಹಗ್ಗದ ಮೇಲಿನ ಹೆಜ್ಜೆಗಳು
ಉತ್ತರವಾಗುತ್ತಲೇ ನಡೆಯುತ್ತಿವೆ…
ಮತ್ತೆ ನಾ ಪ್ರಶ್ನಿಸುವಂತಿಲ್ಲ!

12 Responses

 1. nasrin says:

  Nice bhavya……

 2. Shivu says:

  Congratulations Bhavya.. very nice sentences…

 3. Sanjeev says:

  Fine

 4. krupa says:

  Arthapurna salugalu sister

 5. ಮಂಜುನಾಥಾ cr says:

  ಉಸಿರುಗಟ್ಟಿದ ಮನ
  ದಣಿವುಗಟ್ಟಿದ ಮನ
  ಅಂಬಲಿಸುತ್ತಿದೆ ನಿಮ್ಮ ಮನ
  ಸಾಹಿತ್ಯಕ್ಕಾಗಿ ಸಾಗಲಿ ನಿಮ್ಮ ಮನ

 6. Gampu says:

  Very nice

 7. kbsgowda says:

  wonderful lines sister

 8. sunilkabballibasavaraj says:

  awesome

Leave a Reply

%d bloggers like this: