ಏನೋ ಸಿಕ್ಕಿದೆ, ಎಷ್ಟೋ ಕಳೆದುಹೋಗಿದೆ..

ಸೌರಭ ರಾವ್

ಒಂದು ಕನಸು, ಭೂತ-ವರ್ತಮಾನಗಳ ಬೆಸೆದ ಕನಸು

ನಮ್ಮ ನಮ್ಮ ಊರುಗಳಿಗೇ ಅತಿಥಿಗಳಾಗಿಬಿಟ್ಟಿದ್ದೇವೆ

ಪುಟ್ಟ ಪುಟ್ಟ ಪಾದಗಳು ಓಡಾಡಿ ಬೆಳೆದು ದೊಡ್ಡವಾಗಿ ತುಳಿದ ಅವೇ ಅವೇ ಬೀದಿಗಳಿಗೆ ಅಪರಿಚಿತರಾಗಿಬಿಟ್ಟಿದ್ದೇವೆ
ಮನೆಯ ಒಂದು ಕೋಣೆಯಂತೆಯೇ ಆಪ್ತವಾಗಿಬಿಟ್ಟಿದ್ದ ಪುಸ್ತಕದ ಮಳಿಗೆಯೊಂದು ಮುಸ್ಸಂಜೆಯಲ್ಲೇಕೋ ಕಾಣುತ್ತಿಲ್ಲ

ಸರಿ, ಹಳೆಯ ದೇವಸ್ಥಾನಕ್ಕೆ ದಾರಿ ಹಿಡಿಯುತ್ತೇವೆ
ವೆಂಕಟರಮಣ ಹಾಗೇ ನಿಂತಿದ್ದಾನೆ, ಆದರೆ ಕಿರೀಟಾದಿ ಚಿನ್ನದ ಆಭರಣಗಳು ಇತ್ತೀಚೆಗೆ ದೇವರಿಗೆ ಭಕ್ತರಿಂದ ದಾನವಾಗಿ ಸಿಕ್ಕಿದೆ –
2012ರಲ್ಲೊಂದಷ್ಟು, 2015ರಲ್ಲೊಂದಷ್ಟು – ಬಾಗಿಲ ಬದಿಯ ಬೋರ್ಡು ‘ಕೊಡುಗೆ’ ಪಟ್ಟಿ ಸಾರುತ್ತಾ ನಿಂತಿದೆ
ಟ್ಯೂಬ್ ಲೈಟ್ ಮೇಲೂ ರಾರಾಜಿಸುತ್ತಿದೆ ದಾನಿಗಳ ಹೆಸರು, ಗೋಡೆಯ ಮೇಲೆ ಬಿದ್ದು ಅಸ್ಪಷ್ಟ ನೆರಳಾಗುತ್ತಾ

ಕೊರಳಘಂಟೆಯ ನಾದ ಹೊರಡಿಸುತ್ತಾ ಬೆಳಗೂ, ಗೋಧೂಳಿ ತಾಸುಗಳಲ್ಲೂ
ಮಣ್ಣಿನ ಧೂಳಿನಲ್ಲಿ ದೇವರಂತೆ ಕಾಣಿಸುತ್ತಿದ್ದ ಗೋವುಗಳೀಗ ಜಲ್ಲಿಗಾರೆ ಮೇಲೆ ನಡೆಯುತ್ತವೆ

ಆದರೆ ಮುಗ್ಧತೆ ಮಾತ್ರ ಹಿಂದಿನದ್ದೇ… ಎಂದಿನದ್ದೇ…

ಮಾರಿಗುಡಿಯ ಹೆಂಚಿನ ತಲೆಯನ್ನೀಗ ಕಾಂಕ್ರೀಟ್ ಕಿರೀಟ ಅಲಂಕರಿಸಿದೆ

ಜನರ ಬಾಯಲ್ಲಿ ನಾ ಪುಟ್ಟವಳಿದ್ದಾಗ ನಲಿಯುತ್ತಿದ್ದ ತಪ್ಪು ತಪ್ಪು ಇಂಗ್ಲೀಶ್ ಶಬ್ದಗಳ ಸಂಖ್ಯೆ ಸ್ವಲ್ಪ (ಬಹಳ ಎಂದು ಓದಿಕೊಳ್ಳಿ) ಜಾಸ್ತಿಯಾಗಿದೆ

ಟೀವೀಗಳ ಆಶೀರ್ವಾದದಿಂದ, ಊರೊಳಗಿನ ಸುದ್ದಿಗಳು ಸ್ವಲ್ಪ ಸಪ್ಪೆಯಾಗುತ್ತಾ ಬುದ್ಧಿಯ ಹಸಿವಿಗೆ ಸಾಲುತ್ತಿಲ್ಲ
ಚಿನ್ನಿ ದಾಂಡು, ಗೋಲಿ, ಅಳಿಗುಳಿಮನೆಯ ಹುಣಸೆಪಚ್ಚಿಗೆ ಜಗಳವಾಡುತ್ತಿದ್ದ ಆನಂದ, ಸುನೀಲ, ವಿನೋದಾ
ಈಗ ಎಲೆಕ್ಷನ್ ಫಲಿತಾಂಶದ, ದೇಶದ ಭವಿಷ್ಯದ ಬಗ್ಗೆ ಸೈದ್ಧಾಂತಿಕ, ತಾತ್ವಿಕ ಚರ್ಚೆಯಲ್ಲಿ ಮುಳುಗುತ್ತಾರೆ

ಅವರ ಕಣ್ಣ ಹೊಳಪು ಮಾತ್ರ ಹಾಗೇ ಇದ್ದು ಮತ್ಯಾವುದೋ ಕಳೆದುಹೋದ ಕಾಲದ ನೆನಪ ತಂದು ಕಾಡುತ್ತದೆ
ನಾನೀಗಲೂ ಅವರನ್ನು ಆಗ ನೋಡುತ್ತಿದ್ದ ಹಾಗೆಯೇ ಮೂಕಳಾಗಿ ನೋಡುತ್ತಿದ್ದೇನೆ

ಏನೋ ಸಿಕ್ಕಿದೆ, ಎಷ್ಟೋ ಕಳೆದುಹೋಗಿದೆ
ಬದಲಾವಣೆ ಜಗದ ನಿಯಮವೆಂಬ ಸತ್ಯದ ಮುಂದೆ ಬುದ್ಧಿ ಜೋಲುಮೋರೆ ಹಾಕಿಕೊಂಡು ಕುಕ್ಕರಗಾಲಲ್ಲಿ ಕಣ್ಮಿಟುಕಿಸುತ್ತ ಕೂತಿದೆ
ಮನಸ್ಸಂತೂ ಮತ್ತೂ ಒಳಗೊಳಗೊಳಗೆ ಸರಿಯುತ್ತಿದೆ

ಸ್ವಲ್ಪ ಆತ್ಮೀಯ ಸಂಬಂಧದ ಸಾಂತ್ವನ ಸಿಗುವುದು ಊರ ಹಿಂದಿನ ತುದಿಗಿರುವ ದೊಡ್ಡ ಕೆರೆಯ ಬಳಿ
ಅದರ ಶಾಂತ ನೀರಿನಲ್ಲಿ ಪ್ರತಿಫಲಿಸುತ್ತಾ ಸ್ವಲ್ಪವೇ ನಲುಗಿ ನಗುವ ಆಕಾಶದಲ್ಲಿ
ಅದರ ಆಚೆದಡಕ್ಕೆ ಹೊಲಿಗೆ ಹಾಕಿದ ಗುಡ್ಡಗಳ ಸಾಲಿನಲ್ಲಿ
ಮಧ್ಯಾಹ್ನದ ಚುರುಕು ಬಿಳಿಬೆಳಕು ಸಂಜೆಯಾಗುತ್ತಾ ಚಿನ್ನವಾಗಿಬಿಡುವ ಬದಲಾಗದ ನಿತ್ಯಸಂಭ್ರಮದಲ್ಲಿ

ಎಲ್ಲ ಬದಲಾವಣೆಗಳಿಗೆ ಬೆನ್ನು ಹಾಕಿ ತಾಸುಗಟ್ಟಲೆ ಅಲ್ಲೇ ನಿಲ್ಲುತ್ತೇನೆ
ಇಲ್ಲದುದ್ದನ್ನು ನೋವಾದರೂ ಇದ್ದಾಗ ಇದ್ದದ್ದಕ್ಕೆ ಕೃತಜ್ಞತೆಯಿಂದ ನೆನೆಯುತ್ತ, ಇರುವುದನ್ನು ಕಣ್ತುಂಬಿಕೊಳ್ಳುತ್ತಾ
ಅಂದಿನ ನಾನು, ಇಂದಿನ ನಾನುಗಳ ನಡುವೆ ತೂಗುತ್ತ
ಎಲ್ಲೂ ಇಲ್ಲವಾಗುತ್ತಾ, ಎಲ್ಲಿದ್ದೇನೋ ಎಂಬ ಗೊಡವೆಗೆ ಸಿಲುಕದೇ
ಕೈಕಟ್ಟಿ ನನ್ನ ಬಾಲ್ಯದ ಹಳ್ಳಿಯ ಶುದ್ಧಗಾಳಿಗೆ ಮುಖವೊಡ್ಡಿ ನಿಲ್ಲುತ್ತೇನೆ

2 Responses

  1. Shruthi says:

    ನೆನಪುಗಳ ಮೀಟುವ ಬರಹ.‌.

  2. Sourabha Rao says:

    Thank you, Shruthi. 🙂

Leave a Reply

%d bloggers like this: