ಕುವೆಂಪು @ ಹಿರೇಕೊಡಿಗೆ

ನೆಂಪೆ ದೇವರಾಜ್ 

ಕುವೆಂಪು ಭೂಮಿಗೆ ಬಂದದ್ದು ಹಿರೇಕೊಡಿಗೆಯಲ್ಲಿ.

ಈಗಲೂ ಕೊಪ್ಪ ಭಾಗದ ಕೆಲವು ನನ್ನ ಗೆಳೆಯರು ಕುವೆಂಪು ನಮ್ಮ ನೆಲದಲ್ಲಿ ಹುಟ್ಟಿದ್ದು, ಕುಪ್ಪಳಿಯಲ್ಲಲ್ಲ ಎನ್ನುತ್ತಾರೆ. ಇಲ್ಲೇ ಕುವೆಂಪು ಪ್ರತಿಷ್ಠಾನ ಆಗಬೇಕಿತ್ತು. ಕುವೆಂಪು ಮೈಸೂರಿನಲ್ಲಿ ನಿಧನರಾದಾಗ ಅವರ ಪಾರ್ಥಿವ ಶರೀರವನ್ನು ಹಿರೇಕೊಡಿಗೆಗೆ ತರಬೇಕಿತ್ತು ಎನ್ನುವವರೂ ಇದ್ದಾರೆ.

೧೯೯೧ ರಲ್ಲಿ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರನ್ನು ಹೆಲಿಕಾಪ್ಟರ್ ಮೂಲಕ ಹಿರೇಕೊಡಿಗೆಗೆ ಕರೆದುಕೊಂಡು ಬರಲಾಗಿತ್ತು. ಈ ನೆನಪಲ್ಲಿ ಸಣ್ಣದೊಂದು ಕಟ್ಟಡವನ್ನೂ ನಿರ್ಮಿಸಲಾಗಿತ್ತು. ಆ ನಂತರ ಹಿರೇಕೊಡಿಗೆಯತ್ತ ಮುಖ ಮಾಡುವವರ ಕೊರತೆ ಎದ್ದು ನಿಂತಿತು.

ಕಟ್ಟಡದ ಮೇಲೆ ಕಗ್ಗಸಿರು ತನ್ನ ಪಾರಮ್ಯ ಸಾಧಿಸುತ್ತಾ ಹೋಯಿತು. ಕುವೆಂಪು ಎಂದರೆ ಕುಪ್ಪಳಿ ಎಂಬುದು ಈ ಹತ್ತಾರು ವರುಷಗಳಲ್ಲಿ ಅಚ್ಚೊತ್ತಿತು.. ಕುವೆಂಪು ಹುಟ್ಟಿದ್ದು ಎಂದರೆ ಕುಪ್ಪಳಿ ಎಂಬುದನ್ನು ಅಲ್ಲಿಯ ನಿರ್ಮಾಣಗಳು ಮಾತ್ರ ಹೇಳಲಿಲ್ಲ. ಅಲ್ಲಿಯ ಕ್ರಿಯಾಶೀಲತೆಯೇ ಸಾರುತ್ತಾ ಹೋಯಿತು..

ಅದೇಕೋ ಏನೋ ಸಂದೇಶ ವನ ಮತ್ತು ಹಿರೇಕೊಡಿಗೆಗಳು ಕುವೆಂಪು ಜನ್ಮ ಸ್ಥಳವಾಗಿ ಅಚ್ಚೊತ್ತಲೇ ಇಲ್ಲ. ತಾಯಿ ಹೆಣ್ಣೆಂಬ ಕಾರಣಕ್ಕೋ ಏನೋ? ಆದರೆ ಮೊನ್ನೆ ಈ ಹಿರೇಕೊಡಿಗೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನದ ಸುಪರ್ದಿಗೆ ಬಂದ ಮೇಲೆ ಹೊಸ ಲೋಕದ ಸೃಷ್ಟಿಯಾಗಿ ಹೃದಯ ತಟ್ಟುತ್ತಿದೆ.

ಇಂದು ಗೆಳೆಯ ದೇವಂಗಿ ಸುಭಾಶ್ ರವರೊಂದಿಗೆ ಅಲ್ಲಿಗೆ ಕಾಲಿಟ್ಟೊಡನೆ ಕಗ್ಗಾಡ ಮಧ್ಯದ ಕೇದಿಗೆ ವನಕ್ಕೆ ಹೋದಂತಾಯಿತು. ಎಲ್ಲೆಲ್ಲೂ ಇಂಪು.

ಕಾಂಕ್ರೀಟು ಕಾಡಿನ ಡಾಂಬರಿನಿಂದ ಕಪ್ಪಗಿದ್ದ ಕಣ್ಣುಗಳಿಗೆ ಒಮ್ಮೆಲೆ ಮಿಂಚಿನ ಪ್ರವೇಶ! ಕಣಿವೆಯೊಳಗಿನ ಪುಟ್ಟ ಕಟ್ಟಡದ ಸುತ್ತ ಹಬ್ಬಿದ ಮಲೆಗಳು ಕಣ್ಣುದ್ದ ಮಾಡಿದಷ್ಟೂ ಉದ್ದವಾಗುತ್ತಲೇ ಹೋದವು. ಅಲ್ಲಿ ಬರುತ್ತಿದ್ದ ರಸ ಋಷಿಯ ಕವಿತೆಗಳು ಕಿನ್ನರ ಲೋಕದೊಳಗಿನಿಂದ ಇಣುಕುವ ಮಾಯಾ ಕನ್ನಿಕೆಯರ ತರಹ ಮಂತ್ರ ಮುಗ್ದಗೊಳಿಸಿದವು.

ಕಟ್ಟಡದ ಮೇಲೆ ಹಬ್ಬಿದ ನೂರಾರು ತರಹದ ಸಸ್ಯ ಸಂಕುಲೆಯಿಂದಾವರಿತ ಅಬೇಧ್ಯ ಮಲೆಯೂ, ಅದರ ಮೇಲೆ ನಿಂತು ನೋಡಿದಾಗ ಹಚ್ಚ ಹಸುರಿನಿಂದ ಉದ್ದುದ್ದ ಹಬ್ಬಿದ ಪರ್ವತ ರಾಶಿಗಳೂ, ಗದ್ದೆಯ ಕೋಗುಗಳೂ, ಹೊಡೆದುಂಬಿಸಿಕೊಂಡು ಬೀಗುವ ಅಡಕೆ ತೋಟಗಳೂ,ಕಾಫಿಯ ಕಾನುಗಳೂ ಕಾಲು ತೆಗೆಯದಂತೆ ಹೂತು ಹಾಕಿದವು.

ಸೂರ್ಯ ಆಗಷ್ಟೇ ತನ್ನ ಮನಮೋಹಕ ಬಣ್ಣಗಳಿಂದ ಮುಳುಗುವ ದಾವಂತದಲ್ಲಿದ್ದ, ಎಷ್ಟೊಂದು ಅದ್ಭುತ! ರಸ ಋಷಿಗೆ ಜನ್ಮ ಕೊಟ್ಟ ತಪೋವನ ಹಬ್ಬದ ಸಡಗರದೊಂದಿಗೆ ಹಬ್ಬ ಹೊರಟಿರುವ ಕಾಡಿಗೆ ಕಾಂಕ್ರೀಟು ಮತ್ತೆ ಹೆಬ್ಬಂಡೆಯಾಗುವುದು ಬೇಡ. ಸಂದೇಶ ವನದ ಸಂಪೂರ್ಣ ಉಸ್ತುವಾರಿ ಹೊತ್ತ ಕುವೆಂಪು ಪ್ರತಿಷ್ಟಾನ ಅದೆಷ್ಟು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ..

ಮೋಹಕತೆಯ ಸಾರುವ ಕುವೆಂಪು ಜನ್ಮಸ್ಥಳಕ್ಕೆ ಕಾಲಿಟ್ಟೊಡನೆ ಮುಷ್ಟಿ ಗಾತ್ರದ ಹೃದಯ ಬೆಟ್ಟದಷ್ಟು ದೊಡ್ಡದಾಗುತ್ತದೆ.. ಮನಸ್ಸು ಪ್ರಫುಲ್ಲವಾಗುತ್ತಾ.. ಝರಿ ಕಂದರ, ಅಬ್ಬರಿ- ಬೊಬ್ಸಿರಿಗಳಲ್ಲಿ ಕೂತು ಕಾಲಕಳೆವಾಸೆ. ಸುಂದರವಾಗಿ ಸಂದೇಶ ವನವನ್ನು ವಿನ್ಯಾಸಗೊಳಿಸುವಲ್ಲಿ ಟ್ರಸ್ಟಿನ ಸಮ ಕಾರ್ಯದರ್ಶಿ ಕಡಿದಾಳು ಪ್ರಕಾಶ್ ರವರ ಶ್ರಮ ಎದ್ದು ಕಾಣಿಸುತ್ತಿತ್ತು.

ಹೆಸರಿಗೆ ತಕ್ಕಂತೆ ಕುಪ್ಪಳಿಗೆ ಕುಪ್ಪಳಿಸಿಕೊಂಡು ಹೋಗುವ ಮಾತು ಇದೀಗ ದೂರ. ಆದರೆ ಹಿರೇಕೊಡಿಗೆಗೆ ದಟ್ಟೈಸಿದ ಮಲೆ ಮಧ್ಯದೊಳಗೆ ಕುಪ್ಪಳಿಸಿಕೊಂಡೇ ಹೋಗೋಣ. ಇರುವ ಒಂದೇ ಸುಂದರ, ಪುಟ್ಟ ಮತ್ತು ಅಚ್ಚು ಕಟ್ಟಾದ ಕಟ್ಟಡಕ್ಕೆ ಪ್ರತಿಸ್ಪರ್ಧಿಯಾಗಿ ಮತ್ತಾವ ಕಟ್ಟಡವೂ ಬಾರದಿರಲಿ. ಹಿರೇಕೊಡಿಗೆ ಬಗ್ಗೆ ಕುವೆಂಪು ಬರೆದದ್ದು ಹೀಗೆ

ಸುತ್ತ ಮುತ್ತ ಕಾಫಿ ಕಾನು:
ಮತ್ತೆ, ಬತ್ತದ ಗದ್ದೆ, ಅಡಕೆ ಬಾಳೆಯ ತೋಟ:
ಗುಡ್ಡ ಬೆಟ್ಟ ಕಾಡು ತೆರೆ ಬಿದ್ದು ಎದ್ದ ಚೆಲ್ವು ನೋಟ;
ನಾಗರೀಕತೆಗತಿದೂರದ ಆಜ್ಙಾತದ
ಆ ಹಿರಿಕೊಡಿಗೆಯಲ್ಲಿ
ನನ್ನಮ್ಮ, ಸೀತಮ್ಮ, ಚೊಚ್ಚಲೆನ್ನಂ ಪಡೆವ
ತಪದೊಳಿರೆ;

1 Response

  1. ಕಿಶೋರ್ ಕೆ. says:

    ಕುವೆಂಪು ಅವರ ಹುಟ್ಟುರಾದ ಹಿರೇಕೊಡಿಗೆಗೆ ತಕ್ಕ ಸ್ಥಾನಮಾನಗಳು ದೊರಕುವುದು ಸರಿ. ಆದರೆ ಕವಿಶೈಲದಲ್ಲಿರುವ ಸ್ಮಾರಕದ ಪ್ರತಿಕೃತಿಯನ್ನು ಹಿರೇಕೊಡಿಗೆಯಲ್ಲಿ ಇಟ್ಟ ಉದ್ದೇಶವಾದರೂ ಏನು?? ಕುವೆಂಪು ಅವರ ಜನ್ಮಭೂಮಿಯನ್ನು ಸ್ಮಶಾನ ಮಾಡುವುದೇ??
    ಪ್ರತಿಷ್ಠಾನದವರು ಸ್ಮಾರಕಗಳ ನಿರ್ಮಾಣಕ್ಕಾಗಿ ಸಾರ್ವಜನಿಕರ ಹಣವನ್ನು ವ್ಯಯ ಮಾಡುವುದಕ್ಕೆ ಉತ್ಸುಕರಾಗಿರುವ ಪ್ರತಿಷ್ಟಾನದವರು, ಕುವೆಂಪು ಅವರ ಕ್ರಾಂತಿಕಾರಕವಾದ ವಿಚಾರಧಾರೆಯನ್ನು ಹರಡಲು ಯಾಕೆ ಉತ್ಸುಕವಾಗಿಲ್ಲ???

Leave a Reply

%d bloggers like this: