ಸೇತುರಾಮ್‍ ಚಂದದ ನಗೆಗಷ್ಟೇ ಅಲ್ಲ.. ಅವರ ಕಥೆಗಳಿಗೂ ಫಿದಾ..!!

ಆ ಹಳ್ಳಿಯಲ್ಲಿ ಪುಸ್ತಕ ಓದೋದು ಅವಳು ಮಾತ್ರ. ಕುಡುಮಿಯಾದ ನನಗೆ ಪುಸ್ತಕ ಒದಗಿಸುತ್ತಿದ್ದವಳು ಆಕೆಯೇ. ಹೀಗಾಗಿ ನನಗೆ ಆ ಮನೆಯ ಒಡನಾಟ ಒಂದಿಷ್ಟು ಜಾಸ್ತಿಯೇ. ಅವಳು ಭೂಮಿತಾಯಿ. ಎಲ್ಲವನ್ನೂ ಸಹಿಸಿಕೊಂಡವಳು. ತೀರಾ ಸಂಪ್ರದಾಯಸ್ಥ ಮನೆತನ. ಇಡೀ ಮನೆಯ ಉಸ್ತುವಾರಿ ಆಕೆಯದ್ದೇ.

ಆತನೂ ಮನುಷ್ಯ ಹಾಳಲ್ಲ. ಚಂದವಾಗೇ ಸಂಸಾರ ಮಾಡಿಕೊಂಡಿದ್ದವನು. ಆದರೂ ಒಮ್ಮೊಮ್ಮೆ ಗಂಡಸ್ತನ ಹೆಡೆಯೆತ್ತಿ ಬಿಡುತ್ತಿತ್ತು.

ಅದರಲ್ಲೂ ಆಗೊಮ್ಮೆ ಈಗೊಮ್ಮೆ ಕುಡಿದು ಬಂದಾಗ ಆಕೆಗೆ ಮಕ್ಕಳಿಲ್ಲದ್ದನ್ನು ಎತ್ತಿ ತೋರುವಂತೆ ಮಾತನಾಡುತ್ತಿದ್ದರು. ಅದೂ ಜನರು ಇದ್ದಷ್ಟು ಈ ಮಾತು ಪದೇ ಪದೇ ಬರುತ್ತಿತ್ತು. ಮಕ್ಕಳೆಂದರೆ ತೀರಾ ಪ್ರೀತಿ ಎಂಬಂತೆ ಮಾತನಾಡುವಾಗ ಕೇಳಿದವರಿಗೆ ಪಾಪ ಅನ್ನಿಸಿಬಿಡುತ್ತಿದ್ದುದು ಸಹಜ. ಒಂದು ದಿನ ನಾನವರ ಮನೆಯೊಳಗೇ ಇದ್ದೆ.

ಗೆಳೆಯರೊಂದಿಗೆ ಮಾತಿಗೆ ಕುಳಿತವರ ಬಾಯಲ್ಲಿ ಮತ್ತದೇ ಮಾತು. ಬಿಕ್ಕಳಿಸಿದ ಆಕೆ ಒಂದೇ ಒಂದು ಮಾತು ಹೇಳಿದರು. ಕಾಲೇಜಿಗೆ ಹೋಗುತ್ತಿದ್ದ ನನಗೆ ಆ ಮಾತಿನ ಪೂರ್ತಿ ಅರ್ಥ ಆಗದಿದ್ದರೂ ಬೆವರುಗಟ್ಟಿ ಹೋಗಿದ್ದೆ. ತನ್ನ ನೂನ್ಯತೆಯನ್ನು ಮುಚ್ಚಿಟ್ಟುಕೊಳ್ಳಲು ಸಾವಿರ ಮಾತನಾಡುತ್ತಿದ್ದ, ನಾನು ಅಂಕಲ್ ಎಂದು ಕರೆಯುತ್ತಿದ್ದ ಆ ವ್ಯಕ್ತಿಯ ಬಗ್ಗೆ ಅಲ್ಲಿಯವರೆಗೆ ಇದ್ದ ಗೌರವ ಸರಕ್ಕನೆ ಇಳಿದು ಹೋಗಿತ್ತು.

ಇಷ್ಟಾದರೂ ಆಕೆ ಆ ಮಾತನ್ನು ಯಾರೆದುರಿಗೂ ಹೇಳಿದವರಲ್ಲ. ಲೋಕನಿಂದೆಯನ್ನು ತನಗೆಂದೇ ಮೀಸಲಾಗಿಟ್ಟುಕೊಂಡವರು. ಬಂಜೆ ಎನ್ನಿಸಿಕೊಂಡೂ ಆ ಮಾತು ತನ್ನ ಗಂಡನಿಗೆ ತಟ್ಟದಂತೆ ನೆತ್ತಿ ಕಾದವರು. ಕೊನೆಯಪಕ್ಷ ಗಂಡನ ಹೆತ್ತಮ್ಮನಿಗೂ ಆಕೆಯ ಕೊನೆಯ ಉಸಿರಿನವರೆಗೂ ಅಸಮರ್ಥ ತನ್ನ ಮಗನೇ ಎಂದು ತಿಳಿಯದಂತೆ ಗುಟ್ಟನ್ನು ಕಾಪಾಡಿಕೊಂಡರು.

ತನ್ನ ಹೆಳವತನ ಗೊತ್ತಿದ್ದೂ ಲೋಕದ ಎದುರು ತನ್ನ ದೌರ್ಬಲ್ಯವನ್ನು ಮುಚ್ಚಿಟ್ಟುಕೊಳ್ಳಲು ಆ ಗಂಡಸು ವಿನಾ ಕಾರಣ ತನ್ನ ಮೇಲೆ ಮಾತಿನ ಬಾಣ ಬಿಡುತ್ತಿರುವಾಗಲೂ ಒಂದೂ ಮಾತನಾಡದೇ ಸುಮ್ಮನಿರುತ್ತಿದ್ದಾಕೆಯ ಬಗ್ಗೆ ನನಗೆ ಯಾವತ್ತೂ ಒಂದು ಅಚ್ಚರಿ ‘ಅಮ್ಮ ಆಂಟಿದೇನೂ ತಪ್ಪಿಲ್ಲ. ಅಂಕಲ್‍ಗೇ ಮಕ್ಕಳಾಗಲ್ವಂತೆ. ಆದರೂ ಆ ಅಜ್ಜಿ ಆಂಟಿಗೇ ಯಾಕೆ ಬೈಯ್ಯೋದು? ಇವರೇಕೆ ಸತ್ಯ ಹೇಳುತ್ತಿಲ್ಲ?” ಆ ದಿನ ಅದೇನೋ ದೊಡ್ಡ ವಿಷಯ ಎಂಬಂತೆ ಅಮ್ಮನಿಗೆ ಹೇಳಿದ್ದೆ.

“ಹೆಣ್ಣು ಜೀವ, ತನ್ನದು ಅಂತಾ ಪಾಲಿಗೆ ಬಂದದ್ದೆಲ್ಲದರ ಹುಳುಕನ್ನೂ ಮುಚ್ಚಿಕೊಳ್ಳಬೇಕು. ಆ ಹುಳುಕು ತನ್ನದು ಎಂಬಂತೆ ತೋರ್ಪಡಿಸಿಕೊಂಡು ಅವರ ಮಾನ ಉಳಿಸಬೇಕು.” ಅಮ್ಮನ ಮಾತು ಅರ್ಥ ಆಗದಿದ್ದರೂ ಇದೆಂತಹ ಹೆಣ್ಣು ಜನ್ಮ ಎನ್ನಿಸಿಬಿಟ್ಟಿತ್ತು. ಆ ದಿನ ನನ್ನ ಅಮ್ಮ ಹೇಳಿದ ಆ ಒಂದು ಮಾತಿನ ಮೇಲೆಯೇ ಈ ‘ನಾವಲ್ಲ’ ಎನ್ನುವ ಕಥಾ ಸಂಕಲನ ನಿಂತಿದೆಯೇ ಎಂದು ಅಚ್ಚರಿಯಾಗುವಂತಿದೆ ಎಸ್ ಎನ್ ಸೇತುರಾಮ್ ಅವರ ಬರವಣಿಗೆ.

ಆ ದಿನ ಏನಾದರೂ ‘ಮುಕ್ತ’ ದಾರಾವಾಹಿಯಲ್ಲಿ ಬರುತ್ತಿದ್ದ ಸೇತುರಾಮ್ ಸರ್ ನಮ್ಮ ಮನೆಯ ಟಿ ವಿಯಿಂದಲೇ ಈ ಮಾತನ್ನು ಕೇಳಿಸಿಕೊಂಡರೇನೋ ಎಂಬ ಅನುಮಾನ ಹುಟ್ಟಿ ನಾನು ಅಮ್ಮನ ಬಳಿ ಈ ವಿಷಯ ಮಾತನಾಡಿದ್ದು ಯಾವ ಸಮಯಕ್ಕೆ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ನೆನಪಿಸಿಕೊಂಡೆ.

ನಾನು ಆ ಮಾತನಾಡಿದ್ದು ಆಂಟಿಯ ಮಾತಿನಿಂದ ದಿಗ್ಬ್ರಾಂತಳಾಗಿ ಮನೆಗೆ ಬಂದದ್ದು ಇಳಿ ಸಂಜೆಗೆ, ಮತ್ತು ಅದು ‘ಮುಕ್ತ ಮುಕ್ತ’ ಬರುತ್ತಿದ್ದ ಒಂಬತ್ತು ಗಂಟೆಗಲ್ಲ ಎಂಬುದು ನೆನಪಾಗಿ ನನ್ನ ಮೂರ್ಖ ಆಲೋಚನೆಗೆ ಒಂದಿಷ್ಟು ನಗುವೂ ಬಂತು.

ಒಂದು ಸಂಕಲನದಲ್ಲಿ ಹದಿನೈದು ಇಪ್ಪತ್ತು ಕಥೆಗಳನ್ನು ಸೇರಿಸಿ ಓದಲಾಗದೇ ವಾಕರಿಕೆ ಹುಟ್ಟಿಬಿಡುವ ಈ ದಿನಗಳಲ್ಲಿ ಕೇವಲ ಆರೇ ಆರು ಕಥೆಗಳಿರುವ ಈ ಸಂಕಲನ ಒಂದು ರೀತಿಯ ವಿಚಿತ್ರ ಸಂವೇದನೆಗೆ ನಮ್ಮನ್ನು ಈಡುಮಾಡಿ ಬಿಡುತ್ತದೆ.

ಇದೆಲ್ಲಕ್ಕಿಂತ ಹೆಚ್ಚಾಗಿ ಕುಟುಕುವ ಚುಟುಕು ವಾಕ್ಯಗಳು ಮತ್ತೊಮ್ಮೆ ಮನಸ್ಸು ಬಾಲ್ಯಕ್ಕೆ ಜಾರುವಂತೆ ಮಾಡುತ್ತದೆ. ಒಂದು ಕಾಲದಲ್ಲಿ ಮುಕ್ತ ದಾರಾವಾಹಿಯ ಬೇಜವಾಬ್ಧಾರಿ ಅಪ್ಪನ ಪಾತ್ರ ಮಾಡಿದ್ದ ಸೇತುರಾಮ್‍ರವರು ಪಾತ್ರದಲ್ಲೂ ಹಾಗೇ; ನಗುನಗುತ್ತಲೇ ಎದುರಿಗಿರುವವರನ್ನು ಮಾತಿನ ಬಾಣಗಳಿಂದ ಬೆತ್ತಲೆ ಮಾಡಿಬಿಡುತ್ತಿದ್ದ ಚತುರ ಬಿಲ್ವಿದ್ಯಾ ಪ್ರವೀಣ.

ಆಗಷ್ಟೇ ಹೈಸ್ಕೂಲು ಮುಗಿಸಿ ಕಾಲೇಜು ಮೆಟ್ಟಿಲು ಹತ್ತುತ್ತಿದ್ದ ನಾವೆಲ್ಲ ಸೇತುರಾಮ್‍ರವರ ಚಂದದ ಪೆದ್ದುಪೆದ್ದು ನಗೆಗೆ ಫಿದಾ ಆಗಿದ್ದ ಸಮಯ ಅದಾಗಿತ್ತು. ಚುಟುಕು ಮಾತು, ತೀಕ್ಷ್ಣವಾದ ಧ್ವನಿ, ಹರಿತವಾದ ಮಾತು ಇಡೀ ಕಥಾ ಸಂಕಲನಕ್ಕೆ ಒಂದು ರೀತಿಯ ಮೆರುಗನ್ನು ತಂದುಕೊಟ್ಟಿದೆ.

ಹೀಗಾಗಿಯೇ ‘ಮೌನಿ’ ಕಥೆಯನ್ನು ಓದುವಾಗ ನನಗೆ ಆಂಟಿ ನೆನಪಾಗಿದ್ದು ಮತ್ತು ಒಂದೇ ಒಂದು ಕ್ಷಣ ಇವರೂ ಕೂಡ ಮಂದಾಕಿನಿಯಾಗಬಾರದಿತ್ತೇ ಎನ್ನಿಸಿದ್ದು. ಮಂದಾಕಿನಿಯ ಧೈರ್ಯದ ಒಂದು ಪಾಲು ಇವರಿಗೆ ಬಂದಿದ್ದರೂ ಕಣ್ಣೀರು ಹಾಕದೆ ಬದುಕಬಹುದಿತ್ತಲ್ಲ ಅನ್ನಿಸಿ ಸಂಕಟ ಕಾಡತೊಡಗಿದ್ದು.

ಅಷ್ಟಕ್ಕೇ ನಿಲ್ಲದೇ ಫೋನಾಯಿಸಿ ‘ಹೇಗಿದ್ದೀರಿ..’ ಎಂದೆ. ‘ಹಾಗೇ..’ ಒಳಗೊಳಗೇ ನಕ್ಕ ಧ್ವನಿ. ‘ಅಂಕಲ್…?’ ಪ್ರಶ್ನೆ ಪೂರ್ತಿ ಆಗುವ ಮೊದಲೇ ‘ಅವರು ಹಾಗೇ..’ ಮತ್ತದೇ ಉತ್ತರ. ಮುಂದೆ ಮಾತನಾಡಲು ಮನಸ್ಸಾಗಲಿಲ್ಲ. ‘ರಾತ್ರಿ ಮಾತಾಡ್ತೀನಿ..’ ಕಾಲ್ ಕಟ್ ಮಾಡುವ ಮೊದಲೇ ಮಾತು ತೇಲಿ ಬಂತು. ‘ಜೀವನ ಕಣೆ ಇದು ಹುಡುಗಿ. ಹೇಗೆ ಬರುತ್ತೋ ಹಾಗೆ ಎದುರಿಸಿ ಬಿಡು. ತೀರಾ ಪ್ಲಾನ್ ಹಾಕಬೇಡ…’

ಹೆಣ್ಣಿನ ತುಮುಲಗಳನ್ನು ಒಬ್ಬ ಗಂಡಸು ಇಷ್ಟು ಸಲೀಸಾಗಿ ಅರ್ಥ ಮಾಡಿಕೊಳ್ಳುವ ಹಾಗಿದ್ದರೆ ನಮ್ಮ ಹೆಣ್ಣುಲೋಕವೇಕೆ ಹೀಗಿರುತ್ತಿತ್ತು ಎಂಬ ಪ್ರಶ್ನೆ ಈ ಪುಸ್ತಕ ಓದುತ್ತಿದ್ದಷ್ಟೂ ಹೊತ್ತೂ ನನ್ನನ್ನು ಕಾಡಿದ್ದಿದೆ. ‘ನಾವಲ್ಲ’ ಸಂಕಲನದಲ್ಲಿರುವ ಆರು ಕಥೆಗಳನ್ನು ಮೂರು ಮೂರರಂತೆ ವಿಭಾಗಿಸಿಕೊಂಡು ಓದಬಹುದು.

ಮೌನಿ, ಕಾತ್ಯಾಯಿನಿ, ಸ್ಮಾರಕ ಕಥೆಗಳು ಒಂದು ಗುಂಪಿನಲ್ಲಿದ್ದರೆ, ಮೋಕ್ಷ, ಸಂಭವಾಮಿ, ನಾವಲ್ಲ ಎಂಬ ಕಥೆಗಳು ಮತ್ತೊಂದು ಗುಂಪಿನಲ್ಲಿವೆ. ಅದರಲ್ಲೂ ಸ್ತ್ರೀಪರ ನಿಲುವಿನ ಮೊದಲ ಗುಂಪಿನ ಕಥೆಗಳನ್ನು ನಾನೇ ಬರೆಯಬೇಕಿತ್ತಲ್ವಾ ಅನ್ನಿಸಿ ತೀರಾ ಕಸಿವಿಸಿ ಆಗಿದ್ದೂ ಸತ್ಯ. ಮಗು ಹೊಟ್ಟೆಯಲ್ಲಿ ತೀರಿ ಹೋದ ನಂತರ ಅಪ್ಪ-ಅಮ್ಮ ಅತ್ತೆ-ಮಾವನ ಆದಿಯಾಗಿ ಗಂಡನೂ ಸಹ ಅವಳನ್ನು ತಿರಸ್ಕರಿಸುವ ಮಾತೇ ಆಡುವಾಗ ಆಕೆ ತಿರುಗಿ ನಿಂತ ಪರಿ ಅದ್ಭುತ.

‘ವಿದ್ಯೆಯ ಸರಸ್ವತಿಗೆ ಮಕ್ಕಳಿಲ್ಲ, ಸುಖದ ಲಕ್ಷ್ಮಿಗೆ ಮಕ್ಕಳಿಲ್ಲ ಹಸಿವು ನೀಗುವ ಅನ್ನಪೂರ್ಣೇಶ್ವರಿಗೆ ಸಂತಾನವೇ ಇಲ್ಲ. ಕಾಯೋ ದೇವಿ ದುರ್ಗೆನೂ ಬಂಜೇನೆ. ಹೆರೋರು ತಾಯಿ ಆದ್ರು, ಹೆರದಿರೋರು ದೇವರಾದ್ರು.’ ಎಷ್ಟು ಸತ್ಯ ಅಲ್ವಾ ಈ ಮಾತು? ಅದಕ್ಕಿಂತ ಪವರ್‍ ಫುಲ್ ಆಗಿರುವುದು ಕಾತ್ಯಾಯಿನಿ.

ಓದಿದಾಗ ನನ್ನ ಕಣ್ಣಲ್ಲಿ ನೀರು ಯಾಕೆ ಬಂತು ಎಂದು ಕೇಳಿದರೆ ಈಗಲೂ ನನ್ನಲ್ಲಿ ಉತ್ತರವಿಲ್ಲ. ಎರಡು ಸಲ ಓದಿ ಮುಗಿಸಿ ಮೂರನೆ ಸಲ ಓದಿದಾಗ ಮಾತ್ರ ಕಣ್ಣು, ಮನಸ್ಸು ಒಂದಿಷ್ಟು ತಹಂಬದಿಗೆ ಬಂದಿದ್ದು. ಕಥೆಯಲ್ಲಿ ಕಾಣುವ ನಡು ವಯಸ್ಸಲ್ಲೂ ಸೋತು ಎದುರಿಗೆ ಬಂದು ನಿಂತ ಪ್ರೀತಿಸಿದಾಕೆಯನ್ನು ಸಂತೈಸಿ ಎತ್ತಿ ಹಿಡಿಯುವಾತನನ್ನು ನೆನೆದೇ? ಅದರಲ್ಲಿ ಖುಷಿ ಇತ್ತೇ? ಅಸೂಯೆ ಇತ್ತೆ? ದಕ್ಕದ ನೋವಿತ್ತೇ? ಕಣ್ಣೀರು ಯಾಕೆಂದು ಅರ್ಥವೇ ಆಗಲಿಲ್ಲ ಕೊನೆಗೂ.

ಈ ಫೆಬ್ರುವರಿ, ಮಾರ್ಚ ತಿಂಗಳೆಂದರೆ ನಮಗೆ ತೀರಾ ಮುಖ್ಯವಾದ ತಿಂಗಳುಗಳು. ಇಡೀ ವರ್ಷ ಏನು ಕಲಿಸಿದ್ದೇವೆ ಎಂಬುದು ಲೆಕ್ಕಕ್ಕೆ ಬರದೇ ಈ ಎರಡು ತಿಂಗಳು ಮಕ್ಕಳ ಮೇಲೆ ಎಷ್ಟು ಒತ್ತಡ ಹಾಕಿ ಉತ್ತರಗಳನ್ನು ಕಂಠಪಾಠ ಮಾಡಿಸಿದ್ದೇನೆ ಎಂಬುದಷ್ಟೇ ಮುಖ್ಯವಾಗುತ್ತಿರುವ ಸಂದರ್ಭದಲ್ಲಿ ಯಾವುದಾದರೂ ಮಗು ಒಂದೆರಡು ದಿನ ಶಾಲೆಗೆ ಬರದೇ ಇದ್ದರೆ ಇಲ್ಲಿ ನಾವು ಅಂಡು ಸುಟ್ಟ ಬೆಕ್ಕಿನಂತಾಡುವುದು ಕೆಲವೊಮ್ಮೆ ಅಸಹಜ ಅನಿಸಿದರೂ ನಮಗದು ಅನಿವಾರ್ಯ.

ಮೊನ್ನೆ ಕೂಡ ಹೀಗೇ ಆಯ್ತು. ಶಾಲೆಗೆ ಬಂದವಳು ಹೇಳದೇ ಕೇಳದೇ ನಾಪತ್ತೆಯಾಗಿ ಎರಡು ದಿನ ಬಿಟ್ಟು ಶಾಲೆಗೆ ಬಂದಿದ್ದಳು. ಯಾಕೆ ಹೋದಳು ಏನಾಯ್ತು ಎಂದು ಕೇಳುವ ಸಹನೆಯೇ ಇಲ್ಲದಂತೆ ಒಬ್ಬೊಬ್ಬರಾಗಿ, ಎಲ್ಲರೂ ಒಟ್ಟಾಗಿ ವಾಗ್ದಾಳಿ ನಡೆಸಿದ ನಂತರ ‘ಕರ್ಮ ನಂದು, ಕ್ಲಾಸ್ ಟೀಚರ್ ಆಗಿ ಎಲ್ಲದಕ್ಕೂ ನನ್ನ ತಲೆನೇ ಕೊಡಬೇಕು. ಹಾಗೆ ಹೇಳದೇ ಕೇಳದೆ ಮನೆಗೆ ಹೋದೆಯಲ್ಲ, ಏನಾಗಿತ್ತು?’ ಎಂದು ರೇಗಿ ಮುಗಿಸುವಷ್ಟರಲ್ಲಿ ಅವಳ ಕಣ್ಣಲ್ಲಿ ನೀರು.

ಬೇರೆ ಯಾರು ಏನೆಂದರೂ ಬೇಸರಿಸಿಕೊಳ್ಳದ ಈ ಹುಡುಗಿಯರು ನಾನೊಂದಿಷ್ಟು ಮುಖ ಸಿಂಡರಿಸಿದರೂ ಸಾಕು, ಕಂಗಾಲಾಗುತ್ತಾರೆ. ‘ಟೀಚರ್, ಸ್ಕರ್ಟ ಎಲ್ಲಾ ಕಲೆ ಆಗಿತ್ತು. ಹೊಟ್ಟೆನೂ ನೋಯ್ತಿತ್ತು’ ಆಕೆ ನಿಧಾನವಾಗಿ ಹೇಳುತ್ತಿದ್ದರೆ ನನ್ನಲ್ಲಿದ್ದ ಕೋಪ ಕಣ್ಣೀರಾಗಿತ್ತು.

‘ಪ್ಯಾಡ್ ಕೊಟ್ಟಿದ್ದೆವಲ್ಲ..’ ನಿಧಾನಕ್ಕೆ ಕೇಳಿದೆ. ‘ಹಿಂದಿನ ತಿಂಗಳೇ ಖರ್ಚಾಯ್ತು ಟೀಚರ್. ಬಟ್ಟೆ ಹಾಕ್ಕೊಂಡು ಬಂದಿದ್ದೆ. ಆದರೂ ಕಲೆ ಆಯ್ತು.’ ಅವಳಿಗೆ ಹೇಳಲೂ ನಾಚಿಕೆ. ‘ಸುಮಾರು ಹತ್ತು ಪ್ಯಾಕ್ ಕೊಡ್ತೀವಲ್ಲ? ಇಷ್ಟು ಬೇಗ ಹೇಗೆ ಖಾಲಿ ಆಯ್ತು?’ ನನಗೆ ಅರ್ಥವಾಗಲಿಲ್ಲ. ‘ಅಕ್ಕನಿಗೆ ಈಗ ಕಾಲೇಜ್‍ನಲ್ಲಿ ಕೊಡೋದಿಲ್ಲ ಟೀಚರ್. ಪಿಯುಸಿಯವರೆಗಷ್ಟೇ ಶುಚಿ ಕೊಡೋದು. ಅದಕ್ಕೇ ಅವಳೂ ಇದನ್ನೇ ಉಪಯೋಗಿಸ್ತಾಳೆ.’ ಏನೋ ತಪ್ಪು ಮಾಡಿದವಳಂತೆ ತಲೆತಗ್ಗಿಸಿದಳು.

ಯಾಕೋ ನನಗೆ ತಲೆತಗ್ಗಿಸಬೇಕಾದವಳು ನಾನು ಎಂಬ ಪಾಪಪ್ರಜ್ಞೆ ಕಾಡತೊಡಗಿತು. ಹೆಣ್ಣಿಗಲ್ಲ ನಾಚಿಕೆ, ಹೆಣ್ತನಕ್ಕೆ ಎಂಬ ಕಾತ್ಯಾಯಿನಿಯ ಮಾತು ನನ್ನ ಹೆಣ್ತನಕ್ಕೆ ಚುಚ್ಚುತ್ತಿದೆ. ಈ ಕಥೆಯ ಒಂದೊಂದು ಘಟನೆಯೂ ಒಂದೊಂದು ಹೊಸ ಕಥೆಯನ್ನೇ ನನ್ನೆದುರು ಅನಾವರಣ ಗೊಳಿಸುತ್ತ ಹೋದಂತೆ ನಾನು ಕಳೆದು ಹೋಗಿದ್ದೆ.

ಮೈ ಮುಚ್ಚಿಕೊಳ್ಳಲು ಪ್ರಿಯಕರ ಹೌದೋ ಅಲ್ಲವೋ ಎಂದು ನಿರ್ಧರಿಸಲಾಗದ ಸ್ನೇಹಿತನ ಬಳಿ ಬಟ್ಟೆ ಬೇಡುವುದು ಮತ್ತು ಆತ ನೀಡಿದ ಹಣಕ್ಕೆ ಪೂರ್ತಿಯಾಗಿ ಒಳ ಉಡುಪು ಮತ್ತು ನ್ಯಾಪ್‍ಕಿನ್‍ನ್ನು ಕೊಂಡುಕೊಳ್ಳುವ ಘಟನೆ ಎಷ್ಟೊಂದು ಹೃದಯಸ್ಪರ್ಶಿ ಎಂದರೆ ಯಾಕೋ ಮನಸ್ಸು ಒಂದಾದ ಮೇಲೊಂದರಂತೆ ಕಥೆಗಳ ಕಂತೆಯನ್ನೇ ಎದುರಿಗಿಟ್ಟಿದೆ. ಹೌದು, ಒಂದು ಕಾದಂಬರಿಗಾಗುವಷ್ಟು ಸರಕು ಇಲ್ಲಿದೆ. ಆದರೆ ಅದನ್ನು ಕಾದಂಬರಿಯನ್ನಾಗಿಸಿಬಿಟ್ಟರೆ ಈ ಬಿಗಿ, ಈ ಸೆಳೆತ ಇರುತ್ತಿರಲಿಲ್ಲವೇನೋ. ಹೀಗಾಗಿ ಕಥೆಯಾಗಿ ಇದು ಗೆದ್ದಿದೆ.

ಅಪ್ಪನ ಮಗಳು ನಾನು. ಚಿಕ್ಕಂದಿನಲ್ಲಿ ನಾನು ಏನೇ ಹೇಳಿದರೂ, ಏನೇ ಮಾಡಿದರೂ ಅದಕ್ಕೆ ಅಪ್ಪನ ಸಪೋರ್ಟ. ನಿಮ್ಮ ಮುದ್ದು ಜಾಸ್ತಿ ಆಗಿದೆ. ಅವಳು ಹೇಳಿದ್ದಕ್ಕೆಲ್ಲ ಕುಣಿಯಬೇಡಿ ಅನ್ನುವ ಅಮ್ಮ ಯಾಕೋ ಒಳಗೊಳಗೇ ಸಿಟ್ಟು ತರಿಸುತ್ತಿದ್ದಳು. ಓದಿಸು, ಬರೆಸು, ಹೋಂ ವರ್ಕ ಮಾಡಿಸು, ಆಟ ಆಡಿಸು, ಕೊನೆಗೆ ಶಾಲೆಯಲ್ಲಿ ಆಟ ಆಡಿ ಬಿದ್ದು ಮೈ ಕೈ ನೋವು ಮಾಡಕೊಂಡು ಬಂದರೂ ಔಷಧ ಹಾಕಿ ಕಾಲಿಗೆ ಎಣ್ಣೆ ತಿಕ್ಕಿ ಮಲಗಿಸು ಎಲ್ಲವನ್ನೂ ಅಪ್ಪನೇ ಮಾಡುತ್ತಿದ್ದುದು.

ಶಾಲೆ ಮುಗಿಸಿ ಮನೆಗೆ ಬಂದು, ಅಡುಗೆ ಮನೆಗೆಲಸ ಎಲ್ಲವನ್ನೂ ಮಾಡಿಕೊಳ್ಳುತ್ತಿದ್ದ ಅಮ್ಮನಿಗೆ ಕೆಲಸದ ಹೊರೆಯಲ್ಲಿ ನಮ್ಮನ್ನು ಓದಿಸಲೇ ಆಗುತ್ತಿರಲಿಲ್ಲ. ಹೀಗಾಗಿ ನಾನು ಅಪ್ಪನಿಗೇ ಅಂಟಿಕೊಂಡಿದ್ದೆ.

ಒಮ್ಮೆ ಮೊಬೈಲ್‍ನಲ್ಲಿದ್ದ ಯಾವುದೋ ಡೀಟೈಲ್ ಅಪ್ಪನಿಗೆ ತೋರಿಸುತ್ತಿದ್ದೆ. ಇನ್ನೇನು ಆ ವಿಷಯ ಮುಗಿತು ಎನ್ನುವಾಗ ಅಮ್ಮ ಬಂದು ‘ಏನದು’ ಎಂದರು. ಮಾಮೂಲಿಯಾಗಿ ‘ಏನಿಲ್ಲಮ್ಮ’ ಎಂದು ಸುಮ್ಮನಾಗಬೇಕು ಅನ್ನುವಾಗ ‘ಯಾವಾಗಲೂ ಹೀಗೇ ನೀನು. ಅಮ್ಮ ಎಂದರೆ ನಿರ್ಲಕ್ಷ.’ ಎಂದು ಬಿಟ್ಟರು. ಒಂದು ಕ್ಷಣ ಬೆಚ್ಚಿಬಿದ್ದಿದ್ದೆ.

‘ಹಾಗೇನಿಲ್ಲಮ್ಮ’ ಎಂದು ಮಾತು ತೊದಲಿದ್ದು ಮೊನ್ನೆ ಮಗ ‘ನಿಂಗೇನೂ ಗೊತ್ತಾಗಲ್ಲ, ಸುಮ್ಮನಿರಮ್ಮಾ’ ಎಂದಾಗ ನೆನಪಾಯಿತು. ಕೆಲವು ದಿನಗಳ ಹಿಂದೆ ಹಿರಿಯ ಲೇಖಕಿಯರೊಬ್ಬರು ಮಕ್ಕಳಿಗೆ ಯಾವಾಗಲೂ ಅಪ್ಪ ಎಂದರೆ ಒಂದು ಸಾಪ್ಟ್ ಕಾರ್ನರ್ ಅದರಲ್ಲೂ ಹೆಣ್ಣು ಮಕ್ಕಳಿಗೆ ಮತ್ತಿಷ್ಟು ಹೆಚ್ಚು. ಅದಕ್ಕಿಂತ ಹೆಚ್ಚಾಗಿ ಅಮ್ಮ ಒಂದಿಷ್ಟು ಮುಂದಿದ್ದಾಳೆ ಅಂತಾದರೆ ಮಕ್ಕಳಿಗೆ ಅಪ್ಪ ತೀರಾ ಪಾಪದವನಾಗಿಬಿಡುತ್ತಾನೆ, ಅಮ್ಮ ಖಳನಾಯಕಿಯಾಗುತ್ತಾಳೆ ಎನ್ನುತ್ತಿದ್ದರು.

ಸಾಮಾನ್ಯವಾಗಿ ಮನೆಯೊಳಗಿನದ್ದೆಲ್ಲವನ್ನೂ ನಿಭಾಯಿಸಬೇಕಾದ ಅಮ್ಮ ಒಂದಿಷ್ಟು ಬಿಗಿಯಾಗೇ ಇರಬೇಕಾಗುತ್ತದೆ ಮತ್ತು ವ್ಯವಹಾರಿಕವಾಗಿಯೂ ಆಕೆ ಸಬಲಳಾಗಿದ್ದರೆ ನಮ್ಮ ಪುರುಷ ಪಾರಮ್ಯದ ಮನಸ್ಸು ಅಪ್ಪನ ಸ್ಥಾನಮಾನ ಕಡಿಮೆಯಾಗಿಬಿಡುತ್ತದೆ ಎಂದು ಯೋಚಿಸತೊಡಗುತ್ತದೆ.

ಆದರೆ ಅಮ್ಮನೊಳಗಿನ ವಾತ್ಸಲ್ಯ ಮಾತ್ರ ಎಂದೆಂದಿಗೂ ಪ್ರಶ್ನಾತೀತ. ಮಕ್ಕಳ ಸಂಸಾರ, ಅದಕ್ಕೆ ಬೇಕಾಗುವ ಹೊಂದಿಕೆ ಎಲ್ಲವನ್ನೂ ಸರಿದೂಗಿಸುವ ಅಮ್ಮನ ಕೈ ಮಾತ್ರ ಕಾಣುವುದೇ ಇಲ್ಲ. ಯಾಕೆಂದರೆ ನಮಗೆ ಎಲ್ಲವೂ ಪಿತ್ರಾರ್ಜಿತವೇ. ಮಾತ್ರಾರ್ಜಿತ ಎಂಬುದು ಏನೂ ಇಲ್ಲ. ಹೀಗಾಗಿಯೇ ಅಪ್ಪನಿಗೆ ‘ಸ್ಮಾರಕ’ ಬೇಕು. ಅಮ್ಮ ನಿಭಾಯಿಸ್ತಾಳೆ ಬಿಡು ಎಂಬ ಧೋರಣೆಯಲ್ಲಿದ್ದುಬಿಡಬೇಕು.

ಬೆಳಗಿನ ಸ್ನಾನ ಮುಗಿಸಿದ ನಂತರ ದೇವರ ಫೋಟೋಕ್ಕೆರಡು ಹೂವು ಏರಿಸುವುದನ್ನು ಬಿಟ್ಟರೆ ಅಪ್ಪ ಎಂದಿಗೂ ಮನೆ ಪಕ್ಕದ ದೇವಸ್ಥಾನಕ್ಕೂ ಹೋದವರಲ್ಲ. ದೇವಾಲಯದ ಒಳಗೆ ಹೋಗುವ ಬದಲು ಬಾಗಿಲಲ್ಲಿ ಕುಳಿತ ಅಸಹಾಯಕರಿಗೆ ಸಹಾಯ ಮಾಡಿದರೆ ಸಾಕು ಎನ್ನುವಷ್ಟು ಅಮ್ಮ ಪ್ರಗತಿಪರ. ಹೀಗಾಗಿ ಪೂಜೆ, ವೃತಗಳು ನನಗೆ ಅಂಟಲೇ ಇಲ್ಲ. ಅದರಲ್ಲೂ ಅಪ್ಪನಿಗೆ ಈ ಮಠಗಳೆಂದರೆ ಅದೇನೋ ಇರಿಟೇಟ್.

ಚಿಕ್ಕವಳಿದ್ದಾಗ ನಮ್ಮ ಗಣಪಿಯ ಗಂಡ ನಾಗಪ್ಪ ಶಿರಸಿಯ ಹಳ್ಳಿಯ ಒಂದು ಮಠಕ್ಕೆ ವರ್ಷಕ್ಕೆ  ಹದಿನೈದು ದಿನ ಹೊರಗೆಲಸಕ್ಕೆ ಹೋಗುತ್ತಿದ್ದ. ಅಲ್ಲಿ ದಿನವಿಡಿ ಮೈಮುರಿದು ದುಡಿದರೂ ಕೂಲಿ ಇಲ್ಲ. ಎಷ್ಟೆಂದರೂ ಮಠದ ಕೆಲಸವಲ್ಲವೇ? ಇಲ್ಲಿ ಗಣಪಿ ನಾಲ್ಕು ಮಕ್ಕಳ ಹೊಟ್ಟೆ ತುಂಬಿಸಲು ಒದ್ದಾಡುತ್ತಿದ್ದಳು. ಇಷ್ಟಾದರು ಆ ಮಠದ ಕಾರ್ಯಕ್ರಮದಲ್ಲಿ ಈ ಶೂದ್ರರು ಒಳ ಹೋಗುವಂತಿರಲಿಲ್ಲ. ಅವರ ಊಟವೆಲ್ಲ ಮುಗಿದ ಮೇಲೆ ಮಠದ ಹೊರಗೆ ಒಂದು ಪಂಕ್ತಿಯಲ್ಲಿ ಇವರಿಗೆಲ್ಲ ಊಟ ಹಾಕುತ್ತಿದ್ದರು.

‘ಯಾಕೆ ಹೋಗ್ತೀರಿ? ನೀವು ಮಾಡಿದ ಕೆಲಸಕ್ಕೆ ಅಲ್ಲಿ ಮರ್ಯಾದಿನೇ ಕೊಡದೆ ಭಿಕ್ಷುಕರ ಹಾಗೆ ನೋಡುವ ಜಾಗಕ್ಕೆ?’ ಅಪ್ಪ ಪ್ರತಿ ವರ್ಷ ರೇಗುತ್ತಿದ್ದರು. ಆದರೆ ಅವರಿಗೋ ಆ ಮಠದ ಸ್ವಾಮಿಗಳು ಶಾಪಕೊಟ್ಟಾರು ಎಂಬ ಭಯ. ಈಗಿರುವ ಬಡತನ ಅಸಹಾಯಕತೆಗಿಂತ ಹೆಚ್ಚಿನದ್ದೇನು ಆದೀತು ಎಂದು ಎಷ್ಟು ಹೇಳಿದರೂ ಅರ್ಥ ಮಾಡಿಕೊಳ್ಳುತ್ತಿರಲಿಲ್ಲ.

ಅಂತಹ ಮಠದ ಒಳಸುಳಿಗಳನ್ನು ಸೇತುರಾಮ್ ಚಂದಕ್ಕೆ ಬಿಟ್ಟಿಟ್ಟಿದ್ದಾರೆ. ಎಲ್ಲರ ಹಣವನ್ನೂ, ಆಸ್ತಿಯನ್ನು ಸಂರಕ್ಷಿಸುವ ಮಠದ ಸ್ವಾಮಿ ಪ್ರಾಮಾಣಿಕರಾದರೆ ಹೇಗಿರುತ್ತದೆ ಎಂಬುದನ್ನು ‘ಮೋಕ್ಷ’ ಹೇಳುತ್ತದೆ. ಕಾತ್ಯಾಯಿನಿ, ಸ್ಮಾರಕದ ಅಮ್ಮ ಹಾಗೂ ಮೌನಿಯ ಮಂದಾಕಿನಿಯ ಮುಂದೆ ‘ಸಂಭವಾಮಿ’, ‘ನಾವಲ್ಲ’ ಕಥೆಗಳು ಮಂಕಾದರೂ ಖಾಲಿಪೀಲಿ ಸಂಕಲನದ ಅತ್ಯುತ್ತಮ ಕಥೆಗಳಿಗಿಂತ ಚೆನ್ನಾಗಿಯೇ ಇವೆ.

ಸಂಕಲನವನ್ನು ಒಂದೇ ಓದಿಗೆ ಓದಬಹುದು. ಒಂದಿಷ್ಟು ಆರ್ದೃ ಹೃದಯದವರಾದರೆ ಮತ್ತೊಮ್ಮೆ ಕೂಡ ಓದಬಹುದು. ಕಾತ್ಯಾಯಿನಿಯನ್ನು ಮೂರು ಸಲವೂ ಓದಬಹುದು.

ಅಂದಹಾಗೆ ಒಂದೇ ಒಂದು ತಕರಾರಿದೆ. ಸಂಕಲನಕ್ಕೆ ಕಾತ್ಯಾಯಿನಿ ಎಂದೇ ಹೆಸರಿಡಬಹುದಿತ್ತು. ಯಾಕೋ ಸೇತುರಾಮ್ ರವರು ತಾರತಮ್ಯ ಮಾಡಿದರೇ?

22 Responses

 1. ಬದುಕ ಪ್ರೀತಿಯ ನೆಲೆಗಟ್ಟಿನಲ್ಲಿ ಮೂಡುವ ನಿಮ್ಮ ಈ ಅಂಕಣ ಎಷ್ಟೋ ಸಲ ನನ್ನವೇ ಭಾವಗಳು ಅನ್ನಿಸಿಬಿಡುತ್ತವೆ. ಪುಸ್ತಕ ಓದುವ ತೆಕ್ಕೆಗೆ ನನ್ನನ್ನು ತಳ್ಳುತ್ತವೆ. ಮತ್ತದು ಹೇಳಲಾರದ ಕುತೂಹಲವೂ ಹೌದು. ಥ್ಯಾಂಕ್ಯೂ ಮ್ಯಾಮ್.

 2. Subrahmanya AU says:

  Baravanige innastu gaadhavoo proudhavoo aaguttide shree

 3. ತುಂಬಾ ಅದ್ಭುತವಾದ ವಿಶ್ಲೇಷಣೆ. ನೀವು ಓದುವ ಕೃತಿಯನ್ನು ನಿಮ್ಮದೇ ಜೀವನದಲ್ಲಿ ನೋಡಿದ, ಕೇಳಿದ, ಅನುಭವಿಸಿದ‌ ಸಂಗತಿಗಳ ಜೊತೆ ಜೊತೆಯಲ್ಲಿ ತಳುಕು, ಮೆಲುಕು ಹಾಕುತ್ತಾ ಮಾಡುವ ಪುಸ್ತಕ ವಿಶ್ಲೇಷಣೆ ಮನೋಜ್ಞವಾಗಿರುತ್ತದೆ. ಪುಸ್ತಕವನ್ನು ಓದುವ ಪ್ರೇರಣೆಯನ್ನು ಮೂಡಿಸುತ್ತದೆ.

  ಧನ್ಯವಾದಗಳು,

  #ಧನಪಾಲ ನೆಲವಾಗಿಲು

 4. ದೊಡ್ಡಕಲ್ಲಹಳ್ಳಿ ನಾರಾಯಣಪ್ಪ says:

  ಈ ಕೃತಿಯನ್ನು ಓದುವಂತೆ ತಮ್ಮ ಲೇಖನ ಪ್ರೇರಣೆ ನೀಡಿತು. ಒಳ್ಳೆಯ ವಿಮರ್ಶೆ. ಈ ಬಗೆಯ ಸೂಕ್ಷ್ಮ ಸ್ಪರ್ಶದ ವಿಮರ್ಶೆ ಬರಹಗಾರಿಗೆ ದೊಡ್ಡ ಬಹುಮಾನ ಇದ್ದಂತೆ . ಧನ್ಯವಾದಗಳು ಶ್ರೀ ದೇವಿ ಮೇಡಂ

  • Shreedevi keremane says:

   ಪುಸ್ತಕ ಓದಲು ಪ್ರೇರಣೆ ನೀಡಿದರೆ ಈ ಅಂಕಣ ಬರೆದ್ದಕ್ಕೂ ಸಾರ್ಥಕ

 5. ಅಕ್ಕಿಮಂಗಲ ಮಂಜುನಾಥ. says:

  ಪುಸ್ತಕ ಪ್ರೀತಿಯನ್ನು ಬೆಳೆಸುವ ಲೇಖನ

 6. ಚಂದನ ಚಾನೆಲ್ಲಿನಲ್ಲಿ ಬನ್ನಂಜೆ ಗೋವಿಂದಾಚಾರ್ಯರ ಸಂದರ್ಶನವನ್ನು ಸೇತುರಾಮ್ ಅವರು ನಡೆಸಿಕೊಟ್ಟಾಗ ಅದು ಇಷ್ಟವಾಗಿತ್ತು.ಯೂಟ್ಯೂಬಿನಲ್ಲಿ ಸೇತುರಾಮ್ ಅಂತ ಸರ್ಚ್ ಮಾಡಿದಾಗ ‘ಮಂಥನ’ ‘ದಿಬ್ಬಣ’ ‘ಅನಾವರಣ’ಗಳು ಸಿಕ್ಕವು. ಮಂಥನ ನೋಡಿ ಮತ್ತಷ್ಟು ಪ್ರಭಾವಿತವಾಗಿ ಅವರ ಕಥಾಸಂಕಲನ ‘ನಾವಲ್ಲ’ ತರಿಸಿಕೊಂಡು ಓದಿದೆ.ಅದೂ ಆಪ್ಯಾಯಮಾನವಾಯಿತು.ಒಂದು ಒಳ್ಳೆ ಪುಸ್ತಕದ ಪರಿಚಯ ಮಾಡಿದ್ದೀರಿ, ಅಭಿನಂದನೆಗಳು ನಿಮಗೆ..

 7. ಮುಖ ಪುಸ್ತಕ ಮತ್ತು ವಾಟ್ಸಪ್ ನಂತಹ ಜಾಲತಾಣಗಳಲ್ಲಿ ಹಲವು ಖ್ಯಾತನಾಮರು ತುಂಬಾ ಚೆನ್ನಾಗಿ ಬರೆಯುತ್ತಾರೆ. ಅವರ ಬರಹಗಳನ್ನು ನನ್ನಂತಹ‌ ಹಲವು ನಿರಲಂಕಾರಿಗಳು ಓದಿ ಮೆಚ್ಚುಗೆ, ಅಭಿಪ್ರಾಯಗಳನ್ನು ತಿಳಿಸುತ್ತಾರೆ. ನಾವು ಹುಚ್ಚರು!!

  ಪಾಪ! ಈ ಖ್ಯಾತನಾಮರಿಗೆ ತಾವು ಖುದ್ದಾಗಿ ಬರೆಯುವುದನ್ನು ಬಿಟ್ಟು ನಿರಲಂಕಾರಿಗಳು ಬರೆಯುವ ಒಳ್ಳೆಯ ಬರಹಗಳನ್ನು ಓದಿ, ಮೆಚ್ಚುಗೆ ಸೂಸುವ, ಅನಿಸಿಕೆಗಳು, ಸಲಹೆಗಳನ್ನು ನೀಡುವಷ್ಟು ಸಮಯವೇ ಇಲ್ಲ. ಬಹುಶಃ ಸಮಯವಿಲ್ಲ ಅನ್ನುವುದಕ್ಕಿಂತ ಅವರಿಗೆ ಮನಸ್ಸಿಲ್ಲ ಅನ್ನುವುದು ಸರಿಯೇನೋ? ಯಾಕೆಂದರೆ ಅವರ ಪ್ರಕಾರ ಬೇರೊಬ್ಬರ ಬೆನ್ನು ತಟ್ಟಿ ಪ್ರೋತ್ಸಾಹಿಸುವುದು ಮಹಾ ಪಾಪವೇನೋ. . .?!

  ನೀವು ಏನಂತಿರಾ ಸರ್/ ಮೇಡಮ್,

  # ಧನಪಾಲ ನೆಲವಾಗಿಲು

  * * * *
  *ಇದು ಗೆಳೆಯರೊಬ್ಬರ ಪ್ರತಿಕ್ರಿಯೆ*

  “ಹಿರಿಯರಾದವರು ಯಾರೂ ಓದುವುದು ಇಲ್ಲ ಸರ್ ..

  ನಮ್ಮನ್ನ ತಿದ್ದುವಂತ ಕೆಲಸ ಮಾಡುವಂತವರೆ ಏನು ಹೇಳಲಿಲ್ಲ ಅಂದಮೇಲೆ ಅಂತಹ ಹಿರಿಯರು ಏತಕ್ಕಾಗಿ ಬೇಕು ಎನ್ನುವುದೆ ಪ್ರಶ್ನೆಯಾಗುತ್ತೆ ಸರ್ ..”

  • Shreedevi keremane says:

   ಏನು ಹೇಳಲಿ ಈ ಮಾತಿಗೆ? ಇದು ನನ್ನ ಅನುಭವವೂ ಹೌದು

 8. Syed faizulla says:

  ಮೊನ್ನೆ ತಾನೇ ಓದಿದೆ ಅದ್ಭುತ ಕತೆಗಳು,ಚಿಕ್ಕ ವಾಕ್ಯಗಳ ಮಹಾಪೂರವೇ ಇದೆ.ನೂರಾರು ಚಿಂತನೆಯ ಕಥಾ ಗುಚ್ಛ

  ಸಂತೆಬೆನ್ನೂರು ಫೈಜ್ನಟ್ರಾಜ್ ಸಂತೆಬೆನ್ನೂರು

 9. Sreedhar says:

  ಪೂರಾ ಓದಿದೆ ,ಹೃದಯಕ್ಕೆ ಮನಸಿಗೆ ನಾಟುವಂತಿದೆ.

 10. Vinay says:

  ಚೆನ್ನಾಗಿದೆ. ಖುಷಿಯ‌ಾಯ್ತು.

  -Vinay Kumar M. G

 11. ಚೆಂದದ ಬರಹ ತುಂಬಾ ಇಷ್ಟವಾಯ್ತು

 12. Asha Hegde says:

  ಪೂರಾ ಪುಸ್ತಕ ಓದಿಗೆ ಸಮಯದ ಅಭಾವವಿದ್ದಾಗ ವಿಮರ್ಶೆ ಯ ಓದು ಖುಷಿ ಕೊಡುತ್ತವೆ.ಏಕೆಂದರೆ ಒಟ್ಟು ಹೂರಣವೇ ಅಲ್ಲಿರುತ್ತಲ್ಲಾ.

Leave a Reply

%d bloggers like this: